ಹೊಸಗನ್ನಡ ಕಾವ್ಯಶ್ರೀ (ಭಾಗ ೫೩) - ಶ್ರೀನಿವಾಸ

ಹೊಸಗನ್ನಡ ಕಾವ್ಯಶ್ರೀ (ಭಾಗ ೫೩) - ಶ್ರೀನಿವಾಸ

ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ೧೮೯೧ರ ಜೂನ್ ೮ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (೧೯೧೪) ಪಡೆದರು.

ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (೧೯೧೪) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩೦) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪೦) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ರಲ್ಲಿ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ಅಖಿಲ ಭಾರತ ಪ್ರಾಚ್ಯ ಸಮ್ಮೇಳನ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು..

ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದು ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ (೧೯೬೮), ವರ್ಧಮಾನ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ (೧೯೭೭) ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩) ಕರ್ನಾಟಕ ಸರ್ಕಾರದ ಸನ್ಮಾನ ನಾಡಿನ ನಾನಾ ಸಂಸಂಸ್ಥೆಗಳಿಂದ ನೂರಾರು ಸನ್ಮಾನ ಪ್ರಶಸ್ತಿ ಗೌರವಗಳು ಮಾಸ್ತಿ ಅವರಿಗೆ ಸಂದಿವೆ. ಅವರು ೧೯೮೬ರ ಜೂನ್ ೭ರಂದು ನಿಧನರಾದರು.

ಸಣ್ಣಕಥೆಗಳು(೧0 ಭಾಗಗಳು), ನವರಾತ್ರಿ(ಕಥನ ಕವನಗಳು),  ಚಿಕವೀರರಾಜೇಂದ್ರ(ಕಾದಂಬರಿ),

ಕೃಷ್ಣಕರ್ಣಾಮೃತ (ಸಂಸ್ಕೃತ ಕಾವ್ಯಾನಂದ), ನಮ್ಮ ನುಡಿ(ಭಾಷಾಶಾಸ್ತ್ರ), ಷೇಕ್ಸ್ಪಿಯರನ ನಾಟಕಗಳು(ಗದ್ಯಾನುವಾದ),  ಜನಪದ ಸಾಹಿತ್ಯ(ಪ್ರಬಂಧ), ಪುರಂದರದಾಸ, ಕನಕಣ್ಣ(ನಾಟಕಗಳು),  ಪ್ರಸಂಗ(೪ ಭಾಗಗಳು), ಸಂಪಾದಕೀಯ(೫ ಭಾಗಗಳು),  ಶ್ರೀರಾಮಪಟ್ಟಾಭಿಷೇಕ (ಕಥನಕಾವ್ಯ),  ಸರ್ ಎಂ. ವಿಶ್ವೇಶ್ವರಯ್ಯ(ಸಂಪಾದನೆ)

‘ಶ್ರೀನಿವಾಸ' ಅವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಯಲ್ಲಿ ಪ್ರಕಟವಾಗಿದೆ. ಅವುಗಳಲ್ಲಿ ಒಂದನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಇನ್ನೊಂದು ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ.

ಗುಂಡುಸೂಜಿ

ಎಷ್ಟೊ ರೀತಿಯಲಿ ಎಷ್ಟೊ ಹಿರಿಯರೆನಿಸಿರುವ

ಗಾಂಧೀಜಿ ವಾದದಲಿ ಎಂಥ ಚತುರರು, ತಮಗೆ

ಇಷ್ಟವಲ್ಲದಿರೆ ಮಾತನು ಎಂತು ಮುಗಿಸುವರು

ಎಂದು ತೋರುವ ಒಂದು ಸಂಗತಿಯನರುಹುವೆನು.

 

ದುಂಡು ಮೇಜಿನ ಗೋಷ್ಟಿಗಾಗಿ ನಮ್ಮ ಮಹಾತ್ಮ

ಆಂಗ್ಲ ದೇಶಕೆ ಹೊರಟರಲ್ಲ ! ಅವರಿಗೆ ಅಲ್ಲಿ

ಹೋಗುವುದು ಇಷ್ಟವಿರಲಿಲ್ಲ. ಮುಖ್ಯಾಮಾತ್ಯ

ಮಾಕ್ ಡೊನಾಲ್ಡ್ ಸುಮುಖನಾಗಿಹನೆಂದು ಬಲ್ಲಜನ

ಬಹಳ ಒತ್ತಾಯ ಮಾಡಿದರು. ಗಾಂಧೀಜಿ, ‘ಸರಿ,

ಹೋಗಿ ನೋಡಿಯೇ ಬಿಡುವ' ಎಂದವರೆ ಹೊರಟರು.

ಮುಂಬಯಿಯ ರೇವಿನಲಿ ಒಂದು ಹಡಗನು ಏರಿ 

ಆಂಗ್ಲರಾಜರ ಭೂಮಿಯನು ಕುರಿತು ಸಾರಿದರು.

 

ಕಡಲ ಮಾನದಲಿ ಜೊತೆಯಲಿ ಇವರ ಹಡಗಿನಲಿ 

ಹಲಕೆಲವು ಆಂಗ್ಲಜನ ಇಹರು. ಅವರಲಿ ಮೂರು

ಮುಪ್ಪಾದ ಜನ, ಇವರು ತಮ್ಮಿಂದ ಏನನೋ

ಕಸಿದುಕೊಳ್ಳಲು ಬರುತಲಿಹರೆಂದು, ಆಂಗ್ಲ ಜನ

ಭರತವರ್ಷವ ಬಿಟ್ಟು ನಡೆಯೆ ಈ ದೇಶಕ್ಕೆ

ಬರುವ ದುರ್ಗತಿಯ ಕಾಣರು ಎಂದು ಮುಂತಾಗಿ

ನಂಬಿರುವ ಮಂದಿ. ಅವರಲಿ ಒಬ್ಬ, ತಾನೇನೊ

ಬಹಳ ತಿಳಿದವನಂತೆ, ಗಾಂಧೀಜಿಯವರ ಬಳಿ

ದಿನ ಬೆಳಗು ಚರ್ಚೆ ಮಾಡುವನು. ನಾಲ್ಕಾರು ದಿನ

ಮಾತುನಡೆದಿರೆ ಮಹಾತ್ಮರು, ‘ನಮ್ಮ ಮಾತಿನಲಿ

ಹೊಸರು ಏನು ಇಲ್ಲ. ಹೇಳಿದುದನೇ ನೀವು

ಹೇಳುತಿರುವಿರಿ, ನಾನು ಅದಕೆ ಉತ್ತರವಾಗಿ

ಹೇಳಿದುದನೆ ಹೇಳುತಿರುವೆನು. ಇದೇ ರೀತಿ

ಮರಮರಳಿ ಮಾತಾಡಿ ಫಲವಿಲ್ಲ. ನಿಮ್ಮ ಮತ 

ನನಗೆ ಒಪ್ಪಿಗೆ ಇಲ್ಲ. ನನ್ನ ಮತ ನಿಮ್ಮಂಥ 

ಜನಕೆ ಒಪ್ಪಿಗೆಯಾಗುವಂತಿಲ್ಲ. ಚರ್ಚೆಯನು

ಇನ್ನು ನಿಲ್ಲಿಸುವ' ಎಂದರು.

 

ಆಂಗ್ಲ ಇದು ತಪ್ಪು

ಆಂಗ್ಲ ಭಾರತ ಎರಡು ದೇಶಕೂ ಒಳ್ಳೆದನು

ತರುವ ದಾರಿಯ ನಾನು ತೋರುತಿರುವೆನು, ನೀವು

ಹಿಡಿದಿರುವ ದಾರಿ ಎರಡು ದೇಶವನು ಕೆಡಿಸಿ

ಹಾಳು ಮಾಡುವುದು, ನಿಮ್ಮನು ಇಂಥ ದಾರಿಯಲಿ

ನೆಡುವುದಕೆ ಬಿಟ್ಟು ನಮ್ಮಂಥವರು ಸುಮ್ಮನೆ

ಇರಲಾಗುವುದೇ? ನನ್ನ ಮಾತ ಗಮನಿಸಿ. ಮತ್ತೆ

ಯೋಚಿಸಿರಿ. ಆರ್ಗ್ಯುಮೆಂಟ್ ಸ್ಪಷ್ಟವಾಗಿರಲಿ

ಎಂದು ಅದು ಈ ನೋಟಿನಲಿ ಗುರುತು ಮಾಡಿದೆನು.

ಇದು ನೋಡಿ ನಾಳೆ ಕೊನೆಯಾಗಿ ನಿಮ್ಮಭಿಮತವ

ನನಗೆ ತಿಳಿಸಿರಿ' ಎಂದು ಹೇಳಿದನು. ಕಿಸೆಯಿಂದ

ನಾಲ್ಕು ಪುಟ ಟೈಪು ಮಾಡಿದ್ದ ಟಿಪ್ಪಣಿ ಒಂದ

ಅವರೆಡೆಗೆ ನೀಡಿದನು. ಗಾಂಧೀಜಿ ಟಿಪ್ಪಣಿಯ 

ತೆಗೆದುಕೊಂಡನು. ನಮಸ್ಕಾರ ಎಂದರು. ಆತ

ಹೊರಟುಹೋದನು.

 

ಮಾರನೆಯ ದಿವಸ ಅದೆ ಹೊತ್ತು

ಗಾಂಧೀಜಿ ತಮ್ಮ ಮೂಲೆಯಲಿ ಮೇಜಿನ ಮುಂದೆ

ಕುಳಿತಿಹರು, ಆಂಗ್ಲ ಬಂದನು ಕುಶಲವನು ಬಯಸಿ,

“ನನ್ನ ನೋಟ್ ಓದಿದಿರಾ ಗಾಂಧೀಜಿ?” ಎಂದನು.

ಗಾಂಧೀಜಿ “ಓದಿದೆನು. ಏನು? ಅದರಲಿ ನಿಮಗೆ

ಏನಾದರೂ ಬೆಲೆಯ ವಸ್ತು ಇದ್ದಿತೊ?” “ಇಕೋ

ಅದನು ತೆಗೆದಿರಿಸಿಕೊಂಡಿಹೆನು.”

ಇಂತೆಂದವರು

ಗಾಂಧೀಜಿ ಮೇಜ ಮೇಲಿನ ಪಿನಕುಶನ ಕಡೆಗೆ 

ಕೈಚಾಚಿ ಒಂದು ಹೊಸ ಗುಂಡುಸೂಜಿಯ ಸೆಳೆದು

ಅವನ ಎದುರಿಗೆ ಹಿಡಿದು ಮೆಲ್ಲನೆಯ ನಕ್ಕರು.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಸಂಗ್ರಹಿತ)