ಹೊಸಗನ್ನಡ ಕಾವ್ಯಶ್ರೀ (ಭಾಗ ೫೫) - ವಿ.ಸೀ.
ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ (ವಿ ಸೀ) ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೧೮೯೯ರ ಅಕ್ಟೋಬರ್ ೨ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ., ಎಂ. ಎ. ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು.
ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (೧೯೨೩) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ಇಂಟರ್ ಮೀಡಿಯೇಟ್ ಕಾಲೇಜುಗಳಲ್ಲಿ ರವರೆಗೆ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅನಂತರ ಒಂದೆರಡು ವರ್ಷ ಆಕಾಶವಾಣಿಯಲ್ಲಿ ಭಾಷಣ ವಿಭಾಗದ ಮುಖ್ಯಸ್ಥರಾಗಿ ಅನಂತರ ಹೊನ್ನಾವರದ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ೪ ವರ್ಷ ಕಾರ್ಯನಿರ್ವಹಿಸಿದರು.
ಪ್ರಬುದ್ಧ ಕರ್ನಾಟಕದ ಸಂಪಾದಕ, ಕನ್ನಡ ನುಡಿ, ೧೯೫೫-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದರು. ‘ಕವಿಕಾವ್ಯ ಪರಂಪರೆ’ ಕಾವ್ಯ ಮಾಲೆಗೆ ಸಂಪಾದಕರಾಗಿದ್ದರು. ೩೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ಇವರಿಗೆ ಪ್ರಾಪ್ತವಾಗಿತ್ತು. ಮುಂಬಯಿ ಪ್ರಾಂತ ಭಾಷಾ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ‘ಅರಲು ಬರಲು’ ಕವನ ಸಂಕಲನಕ್ಕೆ ದೊರಕಿತು. ಇವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ (೧೯೭೬) ನೀಡಿತು. ಕೃಷ್ಣಚಾರಿತ್ರ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೮೩ರ ಸೆಪ್ಟೆಂಬರ್ ೪ರಂದು ನಿಧನರಾದರು.
ಅವರ ಕೆಲವು ಕೃತಿಗಳು: ಗೀತಗಳು, ದೀಪಗಳು, ನೆಳಲು ಬೆಳಕು, ಅರಲು-ಬರಲು ಮೊದಲಾದ ಕವನಸಂಗ್ರಹಗಳನ್ನೂ, ಪಂಪಾಯಾತ್ರೆ, ಹಣ ಪ್ರಪಂಚ, ಶ್ರೀಶೈಲಶಿಖರ, ವಾಲ್ಮೀಕಿ ರಾಮಾಯಣ, ಹಿರಿಯರು ಗೆಳೆಯರು, ಸಂವಿಧಾನ ಕಾನೂನು ಮೊದಲಾದ ಗದ್ಯಕೃತಿಗಳನ್ನೂ, ಪಂಜೆ ಮಂಗೇಶರಾವ್, ತ್ಯಾಗರಾಜ, ಬಂಗಾಳಿ ಸಾಹಿತ್ಯ ಚರಿತ್ರೆ, ಪುರಂದರದಾಸ, ಪಿಗ್ಮೇಲಿಯನ್ ಮೊದಲಾದ ಕೃತಿಗಳ ಅನುವಾದಗಳನ್ನು ಮಾಡಿರುವ ವಿ.ಸೀ. ಅವರು ಡಿ.ವಿ. ಗುಂಡಪ್ಪ, ಪಂಜೆ, ಕೆ. ವೆಂಕಟಪ್ಪ ಮೊದಲಾದವರ ಕೃತಿಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು.
ವಿ ಸೀ ಅವರ ಒಂದು ಕವನ ‘ಕಸ್ಮೈ ದೇವಾಯ' ನೀವು ಈಗಾಗಲೇ ‘ಸಂಪದ' ದಲ್ಲಿ ಓದಿರುವಿರಿ. ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿರುವ ಅವರ ಮತ್ತೊಂದು ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ.
ಗಡಿದಾಟು
ನಡೆದಿವೆ ಹೆಣ್ ಗಂಡಿನ ಕಾಲುಗಳು-ನೋದದೊ, ನಿಲ್ಲದೆ, ಎಂದೆಂದೂ ಮುಂದೆ, ಮುಂದೆ !
ಕಣ್ದೆರೆದಾವುದನೋ ಹಾರೈಸುತೆ ಅರುಳುತೆ ಹಾರುತ್ತಿಹವು,
ಆಚೆಯ ಆಚೆಗೆ, ಅಲ್ಲಿಂದಾಚೆಗೆ, ಬಾನಂಚಿನ ಕೊನೆ ದಾಟುತ್ತೆ,
ಈವರೆಗೀ ಜನ ಕಾಣದ ನೋಟಕ್ಕಾವುದಕೋ ತವಕದಿ ಕೈ ಚಾಚುತ್ತೆ !
ಕಣದಿಂದ, ಕರೆಯಿಂದ -ಕಮ್ಮರರೋವರಿಯಿಂದ,
ಬಲೆ ಬೀಸುವ ಮೀಂಗಲಿಗರ ನೀರಾಟಗಳಿಂದ,
-ತೆಂಗಡೆಯ ಹಿಂಗಾರಗಳಿಂದ, ಹೊಂಬಾಳೆಯ ಹೊಂಬೀಳಲಿನಿಂದ ;
ಅಂಗಡಿಯೊಳಸಾಲೆಗಳಿಂದ, ಮಿದ್ದುಗದ್ದುಗೆ ಪೌಳಿಗಗೋಳಿಗಳಿಂದ,
ಮಣಖಂಡಿಯ ಬೇಹಾರದ ಹಣಮಣಕಿನ ಮಳಿಗೆಗಳಿಂದ;
ಪಿಸುನುಡಿಗಳ ಮಾರ್ದನಿಗಳ ಕಿರುಗೋಡೆಗಳಿಂದ,
-ಕಾಣದ ಗಡಿನಾಡುಗಳಿಂದ ದುರ್ಗಮ ದುರ್ಗಗಳಿಂದ ;
ಕಿರುನೋಹಿಯ ಕುರುಚುಪಲಗಳಿಂದ,
ಕೊಳೆನುಡಿಗಳ ಕೊಳೆಮನಗಳ ದುಷ್ಪಂಕಗಳಿಂದ ;
ಹಗಲಿರುಳೂ ಬಿಡದಾಡುವ ಚದುರಂಗದ ಮೈಮರೆತಗಳಿಂದ,
-ಎಲೆ ಪಗಡೆಗಳಾಕ್ರೋಶಗಳಿಂದ,
ದುರ್ಗಂಧವ ಬೀಸುತ್ತಿಹ ಹೊಗೆ ಬೆಂಕಿಗಳಿಂದ ;
ಬೆರಲುಗುರಿಗೆ ತುಟಿಗಳಿಗಿಡುತಿರುವಾ ಗೋರಂಟಿಗಳಿಂದ
ನುಣುಬಾಚುವ ತಲೆಗೂದಲ ತರತರ ಸಿಂಗಾರಗಳಿಂದ
ಉಡುನೆರಿಗೆಯ ಸರಿಗೆಯ ಚುಂಗುಗಳಿಂದ
ನಿರಿ ಚಿಮ್ಮುವ ಸೆರೆಗಲೆಸುವ ಒಯ್ಯಾರಗಳಿಂದ
-ನಡೆದಿವೆ ಬೀಡಿಗೆ, ಕೋಟೆಗೆ, ಪೇಟೆಗೆ, ಸಭೆಗೆ,
ನಡೆದಿದೆ ಕಾಳಗಕಾರುವ ಕಳಕೆ,
ಬಿರುಹೊಯಿಲಿನ ಬಿರುಬಿನ ಕಣಕೆ-
ನಡೆನಡೆದಿವೆ ಬೀಡಿಗೆ, ನಿರ್ಭಂಧದ ಸೆರೆಗೆ,
ಕನಲಿವೆ ಒಳದನಿಗಳ ಕರೆಗೆ, ಮೊರೆಗೆ
ಅದೊ ನಡೆದಿದೆ ಕೋವಿಗೆ ಬಡಿಗೋಲಿಗೆ ಬಾಗದೆ ತೂಗದೆ
ಒಳಹೊರಗಿನ ಹಿಂಸೆಗೆ ಹಲ್ಕಿರಿನಗೆಗೆ !
ನಡೆದಿವೆ ಬಗೆದಿರುಗದೆ, ಹಿಂದಿರುಗದೆ, ಅದಿರದೆ, ಬಿಡುಗಡೆಗೆ.
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)