ಹೊಸತನದ ಕನಸುಗಳಿಗೆ ರೆಕ್ಕೆ ಹುಟ್ಟಬೇಕಾಗಿದೆ…

ಹೌದು, ಹೊಸ ವರ್ಷ ಬಂದೇ ಬಿಟ್ಟಿದೆ. ಕೆಲವರಿಗೆ ಕೇವಲ ಕ್ಯಾಲೆಂಡರ್ ಬದಲಾವಣೆಯ ಹೊಸ ವರ್ಷವಾದರೆ, ಮತ್ತೆ ಕೆಲವರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸುವ ವರ್ಷ, ಕೆಲವರಿಗೆ ನವ ದಾಂಪತ್ಯಕ್ಕೆ ಅಡಿ ಇಡುವ ದಿನವಾದರೆ, ಮತ್ತೆ ಕೆಲವರ ಬಾಳಿನಲ್ಲಿ ಹೊಸ ಜೀವವೊಂದರ ಉದಯ, ಇನ್ನೊಬ್ಬರ ಬಾಳಿನಲ್ಲಿ ಆಕಾಂಕ್ಷೆಗಳು ಹುಟ್ಟುವ ಸಮಯ. ಹೀಗೆ ಹತ್ತಾರು ವಿಷಯಗಳನ್ನು ಹೊಸ ವರ್ಷ ಹೊತ್ತು ತಂದಿದೆ. ಆದರೆ ಎಲ್ಲರಿಗೂ ಈಗ ಬೇಕಾಗಿರುವುದು ನೆಮ್ಮದಿಯ ಆರೋಗ್ಯವಂತ, ಲಾಕ್ ಡೌನ್ ಹಾಗೂ ಕೊರೋನಾ ಇಲ್ಲದ ಹೊಸ ವರ್ಷ.
ಕಳೆದೆರಡು ವರ್ಷಗಳಿಂದ ವಿಶ್ವದಾದ್ಯಂತ ಈ ಮಹಾಮಾರಿ ಜನರನ್ನು ಹೈರಾಣಾಗಿಸಿದೆ. ಹೊಸ ಹೊಸ ರೂಪಾಂತರೀ ವೈರಸ್ ಗಳು ಮಧ್ಯಮ ಹಾಗೂ ಬಡ ಜನರ ಬಾಳಿಗೆ ಕೊಳ್ಳಿ ಇರಿಸಿದೆ. ಮುಂದಾದರೂ ಹಾಗೆ ಆಗದಿರಲಿ ಎಂಬುವುದೇ ಬಹಳಷ್ಟು ಮಂದಿಯ ಆಶಯ. ಪ್ರತೀ ವರ್ಷ ಹಳೆಯ ವರ್ಷ ಕಳೆದು ಹೊಸ ವರ್ಷ ಬಂದಾಗ ಹಲವಾರು ಅಪಸ್ವರಗಳು ಬರುತ್ತವೆ. ಹಿಂದೂ ಸಂಸ್ಕೃತಿಯ ಪ್ರಕಾರ ನಮಗೆ ಯುಗಾದಿಯೇ ಹೊಸ ವರ್ಷ, ಇದು ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರ. ಇದು ನಮ್ಮ ಸಾಂಪ್ರದಾಯಿಕ ಮಾನ್ಯತೆಯ ಪ್ರಕಾರ ನಿಜವಾದ ಸಂಗತಿಯಾದರೂ ಭಾರತದ ವಿವಿಧ ಕಡೆಗಳಲ್ಲಿ ಬೇರೆ ಬೇರೆ ಸಮಯದಂದು ಬೇರೆ ಬೇರೆ ದಿನಗಳಂದು, ಬೇರೆ ಬೇರೆ ರೀತಿಗಳಲ್ಲಿ ಹೊಸ ವರ್ಷದ ಆಚರಣೆ ಪ್ರಾರಂಭವಾಗುತ್ತದೆ. ಕೆಲವರಿಗೆ ಸೌರಮಾನ ಯುಗಾದಿಯಾದರೆ, ಕೆಲವರಿಗೆ ಚಂದ್ರಮಾನ ಯುಗಾದಿ. ಕೆಲವೆಡೆ ವಿಷು ಮತ್ತೆ ಕೆಲವೆಡೆ ದೀಪಾವಳಿ, ಕೆಲವೆಡೆ ಚೈತ್ರ ನವರಾತ್ರಿ.. ಹೀಗೆ ಹತ್ತಾರು ರಾಜ್ಯ ಹತ್ತಾರು ಹೊಸ ವರ್ಷದ ಸಂಭ್ರಮದ ದಿನಗಳು.
ನಾವಿರುವುದು ‘ವಿವಿಧತೆಯಲ್ಲಿ ಏಕತೆ’ ಎಂದು ನಂಬಿರುವ ಭಾರತ ದೇಶದಲ್ಲಿ. ಇಲ್ಲಿ ಪ್ರದೇಶದಿಂದ ಪ್ರದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಆಚರಣೆಗಳು ಬದಲಾಗುತ್ತವೆ, ಹಬ್ಬಗಳು ಬದಲಾಗುತ್ತವೆ. ಆದರೆ ಎಲ್ಲಾ ಹಬ್ಬಗಳ ಮೂಲ ಉದ್ದೇಶ ಒಂದೇ. ನಮ್ಮಲ್ಲಿ ಆನಂದ, ಒಗ್ಗಟ್ಟನ್ನು ಉಂಟು ಮಾಡುವುದು. ಪರಸ್ಪರರಲ್ಲಿ ಸೌಹಾರ್ದತೆಯನ್ನು ಬೆಳೆಸುವುದು. ಪ್ರೀತಿಯನ್ನು ಹಂಚಿಕೊಳ್ಳುವುದು, ಕುಟುಂಬದವರ ಹಾಗೂ ಗೆಳೆಯರ ಸಂಗದಲ್ಲಿ ಆನಂದವನ್ನು ಅನುಭವಿಸುವುದು. ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಬೇರೆ ಬೇರೆ ಇದ್ದರೂ, ಆ ಹಬ್ಬದ ಆಶಯ ಮತ್ತು ಆನಂದವನ್ನು ಹಂಚಿಕೊಳ್ಳುವುದು ಪ್ರಮುಖ ಧ್ಯೇಯವಾಗಿರಬೇಕು.
***
ಕಳೆದ ಸುಮಾರು ೧೫ ವರ್ಷಗಳಿಂದ ‘ಸಂಪದ' ಜಾಲತಾಣ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಪದ ಪ್ರಾರಂಭವಾಗುವ ಸಮಯದಲ್ಲಿ ಯಾವುದೇ ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಂತೆ ಇಷ್ಟೊಂದು ಹರಡಿಕೊಂಡಿರಲಿಲ್ಲ. ಕನ್ನಡದಲ್ಲಿ ಬರೆಯಲು, ಮಾಹಿತಿ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿತ್ತು. ಈಗಲೂ ಸುಮಾರು ೨೦೦ ರಷ್ಟು ಮೌಲ್ಯಯುತವಾದ ಲೇಖನಗಳು, ಕವನಗಳು, ಬರಹಗಳು ಸಂಪದದ ಪುಟಗಳನ್ನು ಅಲಂಕರಿಸುತ್ತಿವೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಅನ್ನುವುದೇ ನಮ್ಮ ಆಶಯ.
೨೦೨೨ರಲ್ಲಿ ನಾವು ಇನ್ನಷ್ಟು ಬರೆಯೋಣ, ಹಂಚಿಕೊಳ್ಳೋಣ. ಬರವಣಿಗೆ ಹಾಗೂ ಓದುವ ಹವ್ಯಾಸ ತುಂಬಾ ಕಮ್ಮಿ ಆಗಿದೆ ಎಂಬ ಮಾತಿದೆ. ಆದರೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಭುಕ್, ಟ್ವಿಟರ್ ಗಳಲ್ಲಿ ಪುಟಗಟ್ಟಲೇ ಬರೆಯುವವರ ಸಂಖ್ಯೆ ಸಾಕಷ್ಟಿದೆ ಎಂಬುವುದನ್ನು ನಾವು ಗಮನಿಸಿದ್ದೇವೆ. ಈ ಹವ್ಯಾಸವನ್ನು ಜಾರಿಯಲ್ಲಿಟ್ಟು ಸಂಪದದಲ್ಲೂ ಬರೆಯಲು ಮುಂದಾಗಿ. ಈಗಾಗಲೇ ೫೦ ಸಾವಿರಕ್ಕೂ ಮಿಕ್ಕಿದ ಬರಹಗಳ ಸಂಗ್ರಹ ಸಂಪದದಲ್ಲಿದೆ. ಹಳೆಯ ಸಂಚಿಕೆಗಳನ್ನು ಯಾವಾಗ ಬೇಕಾದರೂ ಗಮನಿಸಬಹುದು. ಉತ್ತಮೋತ್ತಮ ಲೇಖನಗಳು ಇದರಲ್ಲಿ ಅಡಗಿವೆ.
ಮತ್ತೊಂದು ಪ್ರಮುಖ ವಿಷಯವೆಂದರೆ ಎಲ್ಲಾ ಓದುಗರೂ ಬರಹಗಾರರಾಗಲಾರರು. ಆದರೆ ಈ ಬರವಣಿಗೆಗಳನ್ನು ಓದಿ ನಿಮ್ಮ ಮನಸ್ಸಲ್ಲಿ ಮೂಡಿದ ಪ್ರಶ್ನೆಗಳು, ಅನಿಸಿಕೆಗಳು ಇವೆಲ್ಲವನ್ನೂ ಹಂಚಿಕೊಳ್ಳಲು ಸಂಪದದಲ್ಲಿ ಅವಕಾಶವಿದೆ. ಆರೋಗ್ಯಕರ ಚರ್ಚೆಗಳನ್ನು ನಡೆಸಲು ಒಂದು ವೇದಿಕೆಯಾಗಲೂ ಸಿದ್ಧವಿದೆ. ಯಾವುದಕ್ಕೂ ನೀವು ಮನಸ್ಸು ಮಾಡಬೇಕು. ನೀವು ಒಂದು ಲೇಖನಕ್ಕೆ ನೀಡುವ ಪ್ರತಿಕ್ರಿಯೆ ಲೇಖಕನೊಬ್ಬನ ಬೆಳವಣಿಗೆಗೆ ಪೂರಕ. ಅವನಿಗೆ ಹೊಸ ವಿಷಯ, ವಿಚಾರದ ಜ್ಞಾನ ಮೂಡುತ್ತದೆ. ಓದುಗರ ಅಭಿರುಚಿ ಏನು ಎಂಬುವುದು ಅರಿವಾಗುತ್ತದೆ. ಈ ಬಗ್ಗೆ ನಾನು ಮೊದಲೊಮ್ಮೆ ಬರೆದಿದ್ದೆ. ‘ಪ್ರತಿಕ್ರಿಯೆ ಅತ್ಯಗತ್ಯ’ ಎಂದು. ಮತ್ತೊಮ್ಮೆ ನೆನಪು ಮಾಡುತ್ತಿದ್ದೇನಷ್ಟೆ.
‘ಜ್ಞಾನ ಎಲ್ಲಿಂದಲಾದರೂ ಬರಲಿ, ಮನಸ್ಸಿನ ಕಿಟಕಿ ಬಾಗಿಲುಗಳು ತೆರೆದಿರಲಿ' ಎಂಬ ಮಾತಿನಂತೆ ನಾವು ಸದಾಕಾಲ ಜ್ಞಾನ ದಾಹಿಗಳಾಗಿರಬೇಕು. ತುಂಬಾ ಓದುವವನು ಮಾತ್ರ ಉತ್ತಮ ಬರಹಗಾರನಾಗಬಲ್ಲ. ಓದುವವರು ಕಮ್ಮಿಯಾಗಿದ್ದಾರೆ ಎಂಬ ಅಪವಾದದ ನಡುವೆಯೇ ನೂರಾರು ಪುಸ್ತಕಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರ್ಪಡೆಯಾಗುತ್ತಿವೆ. ನಾವೂ ನಮ್ಮ ಅಭಿರುಚಿಯ ಬರಹಗಳುಳ್ಳ ಪುಸ್ತಕವನ್ನು ಕೊಂಡು ಓದೋಣ. ತಿಂಗಳಿಗೊಂದು ಪುಸ್ತಕ ಖರೀದಿ ಮಾಡಿದರೆ ಯಾರ ಜೇಬಿಗೂ ಹೊರೆಯಾಗದು. ಇದರಿಂದ ಓದುವ ಹವ್ಯಾಸ ಬೆಳೆಯುವುದರ ಜೊತೆಗೆ ಬರವಣಿಗೆಯ ಆಸಕ್ತಿಯೂ ಚಿಗುರುತ್ತದೆ. ನಿಮ್ಮ ಬರವಣಿಗೆ, ಪ್ರತಿಕ್ರಿಯೆ ಸಂಪದಕ್ಕೆ ಅಗತ್ಯ. ಬರೆಯುವಿರಿ ತಾನೇ...?
ಚಿತ್ರ ಕೃಪೆ: ಅಂತರ್ಜಾಲ ತಾಣ