ಹೊಸಬರಿಂದ ಹೊಸತನ - ಇದು ಟೀಂ ಇಂಡಿಯಾ ಮ್ಯಾಜಿಕ್!
ಅಡಿಲೈಡ್ ಟೆಸ್ಟ್ ನಲ್ಲಿ ಬರೀ ೩೬ ರನ್ ಗೆ ಆಲೌಟ್, ಮೊದಲ ಟೆಸ್ಟ್ ಬಳಿಕ ಬದಲಾದ ನಾಯಕತ್ವ, ನಿರಂತರ ಗಾಯಾಳುಗಳ ಸಮಸ್ಯೆ, ಜನಾಂಗೀಯ ನಿಂದನೆ, ಅನನುಭವಿ ಪಡೆ, ಬಾಡಿಲೈನ್ ಬೌಲಿಂಗ್ ಇವೆಲ್ಲಾ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಎದುರಿಸಿದ ಹಲವಾರು ಸಮಸ್ಯೆಗಳಲ್ಲಿ ಕೆಲವು. ಆದರೆ ಸಮಸ್ಯೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದ್ದು ಮಾತ್ರ ಸಣ್ಣ ಸಾಧನೆಯಲ್ಲ.
ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಸೋಲಿಸುವುದು ಸಾಧಾರಣ ಮಾತಲ್ಲ. ಒಂದೆರಡು ದಶಕಗಳ ಹಿಂದೆ ಇದು ಬಹುಷಃ ಸಾಧ್ಯವಿಲ್ಲ ಎಂದು ಹೇಳುವವರೇ ಬಹಳ ಮಂದಿ ಇದ್ದರು. ಆದರೆ ಬದಲಾದ ಆಟಗಾರರು, ಬೌಲಿಂಗ್ ಗೆ ಕಡಿಮೆ ನೆರವು ಕೊಡುವ ಪಿಚ್ ಗಳು ಈಗ ಆಸ್ಟ್ರೇಲಿಯಾದ ವಾತಾವರಣವನ್ನು ಬದಲಿಸಿದೆ. ಒಂದು ದಿನದ ಹಾಗೂ ಟಿ-ಟ್ವೆಂಟಿ ಪಂದ್ಯಗಳಂತೆ ಕೂಡಲೇ ಫಲಿತಾಂಶ ಸಿಗದೇ ಇದ್ದರೂ ಟೆಸ್ಟ್ ಪಂದ್ಯಾವಳಿಗಳಿಗೆ ಅದರದ್ದೇ ಆದ ಮಹತ್ವ ಮತ್ತು ಇತಿಹಾಸ ಇದೆ. ಐದು ದಿನಗಳ ಕಾಲ ಆಟವಾಡಿ ಕೊನೆಗೆ ಸೋಲು ಕಂಡರೆ ಯಾವುದೇ ತಂಡದ ಮನೋಬಲ ಕುಸಿಯುವುದರಲ್ಲಿ ಅನುಮಾನವೇ ಇಲ್ಲ. ಆದರೆ ಭಾರತ ತಂಡ ಈ ಬಾರಿ ಹೊಸ ರೂಪ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು.
ನಾಲ್ಕು ಪಂದ್ಯಗಳ ಈ ಬಾರ್ಡರ್ -ಗಾವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಡಿಲೈಡ್ ನಲ್ಲಿ ನಡೆದಿತ್ತು. ಈ ಪಂದ್ಯವನ್ನು ಮುನ್ನಡೆಸಿದ್ದು ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ. ಆದರೆ ಈ ಪಂದ್ಯದಲ್ಲಿ ಭಾರತ ತನ್ನ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕನಿಷ್ಟ ಮೊತ್ತವಾದ ೩೬ ರನ್ ಗಳಿಗೆ ಕುಸಿತ ಕಂಡದ್ದು ಮರೆಯಲಾಗದ ಕಹಿ ಘಟನೆ. ಆ ಪಂದ್ಯದ ನಂತರ ನಷ್ಟದಲ್ಲಿರುವ ಸಂಸ್ಥೆಯನ್ನು ಬೇರೆಯವರಿಗೆ ಮಾರಾಟ ಮಾಡಿದಂತೆ ವಿರಾಟ್ ಕೊಹ್ಲಿ ಭಾರತ ತಂಡದ ಚುಕ್ಕಾಣಿಯನ್ನು ಅಜಿಂಕ್ಯ ರಹಾನೆಯವರಿಗೆ ವಹಿಸಿಕೊಟ್ಟು ಭಾರತಕ್ಕೆ ಹಿಂದಿರುಗಿದರು. ಆ ಸಮಯ ರಹಾನೆಯ ಬ್ಯಾಟಿಂಗ್ ಸಹಾ ಕೈಕೊಡುತ್ತಿತ್ತು. ಆದರೆ ನಾಯಕತ್ವದ ಜವಾಬ್ದಾರಿಯು ಅವರನ್ನು ನೆಲಕಚ್ಚಿ ಆಡುವಂತೆ ಮಾಡಿತು. ಮೆಲ್ಬರ್ನ್ ನಲ್ಲಿ ನಡೆದ ‘ಬಾಕ್ಸಿಂಗ್ ಡೇ’ ಪಂದ್ಯಾಟದಲ್ಲಿ ರಹಾನೆ ಶತಕವನ್ನು ಸಿಡಿಸಿ ತನಗೆ ನಾಯಕತ್ವ ಹೊರೆಯಲ್ಲವೆಂದು ತೋರಿಸಿಕೊಟ್ಟರು. ಭಾರತ ಈ ಪಂದ್ಯವನ್ನು ೮ ವಿಕೆಟ್ ಗಳಿಂದ ಗೆದ್ದುಕೊಂಡಿತು.
ಸಿಡ್ನಿ ಟೆಸ್ಟ್ ನಿಜಕ್ಕೂ ಸವಾಲಿನದ್ದೇ ಆಗಿತ್ತು. ಏಕೆಂದರೆ ಇಡೀ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ. ಉತ್ತಮ ಫಾರಂನಲ್ಲಿದ್ದ ಆಟಗಾರ ರವೀಂದ್ರ ಜಡೇಜಾ ಗಾಯಾಳುವಾದರು. ಆರ್. ಅಶ್ವಿನ್, ಹನುಮ ವಿಹಾರಿ, ಬೂಮ್ರಾ, ರಿಷಭ್ ಪಂತ್ ಎಲ್ಲರೂ ಗಾಯಾಳುಗಳಾದಾಗ ಆ ಪಂದ್ಯವನ್ನು ಕನಿಷ್ಟ ಡ್ರಾ ಮಾಡುವುದೂ ಬಹಳ ಕಷ್ಟವಿತ್ತು, ಆದರೆ ಭಾರತದ ಹೊಸ ಹುಡುಗರು ಅದನ್ನೂ ಸಾಧಿಸಿದರು. ಭಾರತದ ಜಯಕ್ಕೆ ೪೦೭ ರನ್ ಅಗತ್ಯವಿತ್ತು. ಒಂದು ಸಮಯ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ಆಟವಾಡುತ್ತಿದ್ದಾಗ ಭಾರತಕ್ಕೆ ಗೆಲುವಿನ ಆಸೆ ಹುಟ್ಟಿದ್ದು ಸುಳ್ಳಲ್ಲ. ಆದರೆ ಇವರಿಬ್ಬರ ನಿರ್ಗಮನದಿಂದ ಡ್ರಾ ಮಾಡುವುದೇ ಅನಿವಾರ್ಯವಾಯಿತು. ಆಗ ಕ್ರೀಸಿನಲ್ಲಿದ್ದವರು ಹನುಮ ವಿಹಾರಿ ಮತ್ತು ಆರ್ ಅಶ್ವಿನ್. ಇಬ್ಬರೂ ತೀವ್ರವಾಗಿ ಬಳಲಿದ್ದರು ಮತ್ತುಇ ದೈಹಿಕವಾಗಿಯೂ ಫಿಟ್ ಆಗಿರಲಿಲ್ಲ. ಆದರೆ ದಿನದಾಟ ಮುಗಿಯಲು ಬಾಕಿ ಉಳಿದಿದ್ದ ೪೪ ಓವರ್ ಗಳಲ್ಲಿ ೪೩ ಓವರ್ ಗಳನ್ನು ಯಶಸ್ವಿಯಾಗಿ ಆಡಿ ಪಂದ್ಯವನ್ನು ಡ್ರಾ ಮಾಡಿದರು. ಅದರಲ್ಲಿ ವಿಹಾರಿ ಗಳಿಸಿದ ರನ್ ೨೩ ಅದೂ ೧೬೧ ಬಾಲ್ ಗಳಲ್ಲಿ. ಸರಿಯಾಗಿ ನಡೆಯಲೇ ಆಗದಿದ್ದರೂ ಪಂದ್ಯವನ್ನು ಉಳಿಸಬೇಕೆಂಬ ಕಿಚ್ಚು ಅವರಲ್ಲಿ ಇತ್ತು.
ಕೊನೆಯ ಪಂದ್ಯವು ಆಸ್ಟ್ರೇಲಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಭಾರತಕ್ಕೆ ಈ ಪಂದ್ಯವನ್ನು ಕನಿಷ್ಟ ಡ್ರಾ ಮಾಡಿಕೊಂಡರೂ ಬಾರ್ಡರ್ -ಗಾವಾಸ್ಕರ್ ಟ್ರೋಫಿ ನಮ್ಮಲ್ಲೇ ಉಳಿಯುತ್ತಿತ್ತು. ಈ ಪಂದ್ಯಕ್ಕಾಗಿ ಭಾರತ ತಂಡ ಬ್ರಿಸ್ಬೇನ್ ಗೆ ಬಂದಾಗ ಗಾಯಳುಗಳೇ ಅಧಿಕ ಸಂಖ್ಯೆಯಲ್ಲಿ ತುಂಬಿದ್ದರು. ಆ ಗಾಯಳುಗಳಿಂದಲೇ ಆಟವಾಡುವ ೧೧ ಜನರ ಆಯ್ಕೆ ನಿಜಕ್ಕೂ ಸವಾಲಿನದ್ದಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಅನುಭವಸ್ಥ ಬೌಲರ್ ಗಳೇ ಇರಲಿಲ್ಲ. ಆಸ್ಟ್ರೇಲಿಯಾ ತಂಡದ ಬೌಲರ್ ಗಳೆಲ್ಲಾ ಅತ್ಯಂತ ಅನುಭವಸ್ಥರಾಗಿದ್ದರು. ಆದರೆ ಹೊಸಬರಿಂದ ಹೊಸತನ ಮೂಡಿ ಬರುವುದೇ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ. ಇನ್ನು ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ ಎಂಬ ಭಾವನೆ ಮೂಡಿದಾಗಲೇ ನಮ್ಮ ಒಳಗಿರುವ ಪ್ರತಿಭೆಯ ಅನಾವರಣವಾಗುತ್ತದೆ ಎಂಬ ಮಾತನ್ನು ಭಾರತದ ಆಟಗಾರರು ನಿಜ ಮಾಡಿದರು. ೨-೩ ಪಂದ್ಯಗಳ ಅನುಭವವಿದ್ದ ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಸಿರಾಜ್ ಮೊಹಮದ್ ಹಾಗೂ ತನ್ನ ಚೊಚ್ಚಲ ಪಂದ್ಯವನ್ನಾಡುತ್ತಿದ್ದ ವಾಷಿಂಗ್ಟನ್ ಸುಂದರ್, ನಟರಾಜನ್ ಎಂಬ ಬೌಲರ್ ಗಳು ಅದ್ಭುತವನ್ನೇ ಮಾಡಿದರು. ಇವರಲ್ಲಿ ಬಹುತೇಕರು ಕಡು ಬಡತನದ ಹಿನ್ನಲೆಯಿಂದ ಬಂದವರು. ಹೊಸಬರ ಬೌಲಿಂಗ್ ಶೈಲಿಗಳ ಬಗ್ಗೆ ಅಧಿಕ ಮಾಹಿತಿ ಇರದಿದ್ದ ಆಸ್ಟ್ರೇಲಿಯಾದ ಆಟಗಾರರು ಅವರನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಅದೇ ಅವರ ಪತನಕ್ಕೆ ಕಾರಣವಾಯಿತು.
ಪ್ರಥಮ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ೩೬೯ ರನ್ ಗಳಿಗೆ ಜವಾಬು ನೀಡುತ್ತಿದ್ದ ಭಾರತ ತಂಡ ಒಂದು ಸಮಯ ೧೮೬ ರನ್ ಗಳಿಗೆ ೬ ವಿಕೆಟ್ ಕಳೆದುಕೊಂಡಿತ್ತು. ಆಗ ಭಾರತ್ ತಂಡವನ್ನು ಪಾರು ಮಾಡಿದ್ದು ಇದೇ ಹೊಸ ಆಟಗಾರರಾದ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್. ತಲಾ ಅರ್ಧ ಶತಕವನ್ನು ದಾಖಲಿಸಿ ಭಾರತದ ಕುಸಿತವನ್ನು ತಡೆದರಲ್ಲದೇ ಆಸ್ಟ್ರೇಲಿಯಾಗಿ ಕೇವಲ ೩೩ ರನ್ ಲೀಡ್ ಮಾತ್ರ ದೊರಕುವಂತೆ ಮಾಡಿದರು. ಮತ್ತೆ ಆಸ್ಟ್ರೇಲಿಯಾವನ್ನು ೨೯೪ ರನ್ ಗಳಿಗೆ ಕಟ್ಟಿ ಹಾಕಿದ್ದು ಮೊಹಮದ್ ಸಿರಾಜ್. ೫ ವಿಕೆಟ್ ಗಳ ಗೊಂಚಲು ಪಡೆದರು. ಭಾರತದ ಗೆಲುವಿಗೆ ೩೨೮ ರನ್ ಅಗತ್ಯವಿತ್ತು. ಇದನ್ನು ಶುಭಮನ್ ಗಿಲ್, ರಿಷಭ್ ಪಂತ್, ಪೂಜಾರಾ ಸೇರಿ ಯಶಸ್ವಿಯಾಗಿ ಪೂರೈಸಿದರು. ಕನಿಷ್ಟ ಡ್ರಾ ಆಗುವುದೂ ಕಷ್ಟ ಎಂದು ನಂಬಿದ್ದ ಪಂದ್ಯವನ್ನು ಜಯಿಸಿದ್ದು ನಂಬಲಾಗದ ಸಾಧನೆ. ಈ ಸಾಧನೆಯ ಶ್ರೇಯ ಇಡೀ ಭಾರತ ತಂಡಕ್ಕೆ ಸಿಗುತ್ತದೆ. ಎಲ್ಲರೂ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದು ನಿಜವಾದ ಟೀಂ ಸಾಧನೆ.
ಇಲ್ಲಿ ನಾವು ಗಮನಿಸಬೇಕಾದ ಸಾಧಕರೆಂದರೆ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಹಾಗೂ ನಟರಾಜನ್. ಇವರೆಲ್ಲರೂ ಅತ್ಯಂತ ಬಡ ಕುಟುಂಬದಿಂದ ಬಂದ ಪ್ರತಿಭಾವಂತರು. ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಸಹಾ ಅಷ್ಟೇನೂ ಸಿರಿವಂತ ಕುಟುಂಬದವರಲ್ಲ. ಆದರೆ ಇವರ ಸಾಧನೆ ಇವರನ್ನು ಶ್ರೀಮಂತರನ್ನಾಗಿ ಮಾಡಿದೆ. ಇವರ ಬಗ್ಗೆ ತಿಳಿದುಕೊಳ್ಳುವುದಾದರೆ,
ಟಿ. ನಟರಾಜನ್: ಇವರು ಓರ್ವ ನೇಯ್ಗೆ ಕೆಲಸ ಮಾಡುವವರ ಮಗ. ತಾಯಿಗೆ ಫಾಸ್ಟ್ ಫುಡ್ ಹೋಟೇಲ್. ಇವರಿಗೆ ಬಾಲ್ಯದಲ್ಲಿ ಕ್ರಿಕೆಟ್ ಆಟದಲ್ಲಿ ಅಪಾರ ಆಸಕ್ತಿ ಇದ್ದರೂ ಆಟವಾಡಲು ಅವಶ್ಯವಾಗಿದ್ದ ಶೂ ತೆಗೆದುಕೊಳ್ಳಲೂ ಹಣವಿರಲಿಲ್ಲ. ಹೊಸ ಶೂ ತೆಗೆದುಕೊಳ್ಳಬೇಕಾದರೆ ನೂರು ಬಾರಿ ಆಲೋಚನೆ ಮಾಡುತ್ತಿದ್ದರಂತೆ. ಮೊದಲ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಾಗ ಇವರ ತಾಯಿ ಅತ್ತೇ ಬಿಟ್ಟಿದ್ದರು. ನಟರಾಜನ್ ಅವರ ಪತ್ನಿ ಮೊದಲ ಮಗುವಿಗೆ ನವೆಂಬರ್ ತಿಂಗಳಲ್ಲಿ ಜನ್ಮ ನೀಡಿದಾಗ ಅವರು ದುಬೈನಲ್ಲಿ ಐಪಿಎಲ್ ಆಡುತ್ತಿದ್ದರು. ಅಲ್ಲಿಂದಲೇ ನೇರವಾಗಿ (ಕೋವಿಡ್ ೧೯ ಸುರಕ್ಷತಾ ಕಾರಣಗಳಿಂದ) ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದುದರಿಂದ ಅವರಿನ್ನೂ ತಮ್ಮ ಮಗಳನ್ನು ನೋಡಿಯೇ ಇಲ್ಲ.
ಮೊಹಮ್ಮದ್ ಸಿರಾಜ್: ಕಡು ಬಡ ಕುಟುಂಬದಲ್ಲಿ ಜನಿಸಿದ ಸಿರಾಜ್ ಅವರ ತಂದೆ ಆಟೋ ರಿಕ್ಷಾ ಡ್ರೈವರ್. ತಂದೆಯವರಿಗೆ ಮಗ ದೊಡ್ದ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು. ತಮ್ಮ ದುಡಿಮೆಯಲ್ಲೇ ಮಗನಿಗಾಗಿ ಹಣ ಉಳಿಸುತ್ತಿದ್ದರು. ಆದರೆ ದುರಂತವೆಂದರೆ ಮಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಆಟವಾಡುವ ಸಮಯದಲ್ಲೇ ನಿಧನರಾದರು. ಕೋವಿಡ್ ೧೯ರ ಸುರಕ್ಷಾ ಕಾರಣಗಳಿಂದ ತಂದೆಯ ಅಂತಿಮ ಸಂಸ್ಕಾರಕ್ಕೂ ಹೋಗಲಾರದ ಸ್ಥಿತಿಯಲ್ಲಿದ್ದರು ಸಿರಾಜ್. ಆಟವಾಡುವಾಗ ಪ್ರತೀ ನಿಮಿಷ ತಮ್ಮ ತಂದೆಯನ್ನು ನೆನೆಯುವ ಸಿರಾಜ್, ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ನುಡಿಸುವಾಗ ಭಾವುಕರಾಗಿ ಅತ್ತದ್ದೂ ಇದೆ.
ವಾಷಿಂಗ್ಟನ್ ಸುಂದರ್: ತಮ್ಮ ಸ್ಥಳೀಯ ಕ್ರಿಕೆಟ್ ಜೀವನಕ್ಕೆ ಸಹಾಯ ಮಾಡಿದ ಗೆಳೆಯ ವಾಷಿಂಗ್ಟನ್ ನೆನಪಿನಲ್ಲಿ ತಮ್ಮ ಪುತ್ರನಿಗೆ ವಾಷಿಂಗ್ಟನ್ ಎಂದೇ ಹೆಸರು ಇಟ್ಟವರು ಸುಂದರ್. ಅಷ್ಟೇನೂ ಸಿರಿವಂತರಲ್ಲದ ಕುಟುಂಬದಿಂದ ಬಂದ ಪ್ರತಿಭೆ ವಾಷಿಂಗ್ಟನ್. ತಮ್ಮ ಹೆಸರಿಗೆ ಕಾರಣಕರ್ತರಾದ ವಾಷಿಂಗ್ಟನ್ ಅವರ ನಿಧನದ ನಂತರ ಅವರ ಹೆಸರನ್ನು ತಮ್ಮ ಎರಡನೇ ಮಗನಿಗೆ ಇಟ್ಟಿದ್ದಾರೆ ವಾಷಿಂಗ್ಟನ್ ಸುಂದರ್.
ನವದೀಪ್ ಸೈನಿ: ಇವರ ತಂದೆ ಸರಕಾರೀ ವಾಹನ ಚಾಲಕ. ತಮ್ಮ ಮಗನಿಗಾಗಿ ಕ್ರಿಕೆಟ್ ಕೋಚಿಂಗ್ ಫೀಸ್ ಕೊಡಲಾಗದ ಸ್ಥಿತಿಯಲ್ಲಿದ್ದ ತಂದೆ. ಅವರ ಈ ಕಷ್ಟ ನೋಡಲಾಗದೇ ನವದೀಪ್ ಸೈನಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಟವಾಡಿ ಅದರಲ್ಲಿ ದೊರೆತ ಬಹುಮಾನದ ಹಣವನ್ನು ತನ್ನ ಕೋಚಿಂಗ್ ಗೆ ಬಳಸಿಕೊಳ್ಳುತ್ತಾರೆ.
ಈ ಮೇಲಿನ ಎಲ್ಲಾ ಕ್ರಿಕೆಟ್ ಆಟಗಾರರು ಹುಟ್ಟುವಾಗಲೇ ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡು ಹುಟ್ಟಿದವರಲ್ಲ. ಆದರೆ ತಮ್ಮ ಅವಿರತ ಪ್ರಯತ್ನ ಮತ್ತು ಸಾಧನೆಯಿಂದ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡು, ತಮ್ಮ ಸ್ಥಾನವನ್ನು ಖಾಯಂ ಆಗಿರಿಸುವ ಕುರಿತು ಭರವಸೆ ಮೂಡಿಸಿದ್ದಾರೆ. ಇವರೆಲ್ಲರ ಸಾಂಘಿಕ ಪ್ರಯತ್ನದಿಂದ ಭಾರತ ತಂಡ ಜಯಶಾಲಿಯಾಗಿದೆ. ಈ ಜಯದ ಅಮಲು ತಲೆಗೇರಿಸಿಕೊಳ್ಳದೇ ಮುಂದಿನ ದಿನಗಳಲ್ಲೂ ಭಾರತೀಯ ಆಟಗಾರರಿಂದ ಉತ್ತಮ ಆಟ ಮೂಡಿಬರಲಿ ಎಂಬುದೇ ಕೋಟ್ಯಾಂತರ ಅಭಿಮಾನಿಗಳ ಅಪೇಕ್ಷೆ.
ಲೇಖನ ಬರೆಯಲು ಪ್ರೋತ್ಸಾಹ ನೀಡಿ, ಕೆಲವು ಉತ್ತಮ ಮಾಹಿತಿ ಹಂಚಿಕೊಂಡ ಬರಹಗಾರ ಗೆಳೆಯ ಶ್ರೀ ವಿಠಲ್ ಶೆಣೈ, ಬೆಂಗಳೂರು ಇವರಿಗೆ ಕೃತಜ್ಞತೆಗಳು.
ಚಿತ್ರ ಕೃಪೆ : ಅಂತರ್ಜಾಲ ತಾಣ