ಹೊಸವರ್ಷದ ಸವಿ ಸೌರಭ, ಎಲ್ಲೆಲ್ಲೂ ಪಸರಿಸುತ್ತಿದೆ. ಮಂಕುಕವಿದಿದ್ದ ನೆನ್ನೆಯ ಚಿಂತೆಯ ಕಾರ್ಮೋಡಗಳು, ನಮ್ಮನ್ನು ಅಧೀರರನ್ನಾಗಿ ಮಾಡದಿರಲಿ !

ಹೊಸವರ್ಷದ ಸವಿ ಸೌರಭ, ಎಲ್ಲೆಲ್ಲೂ ಪಸರಿಸುತ್ತಿದೆ. ಮಂಕುಕವಿದಿದ್ದ ನೆನ್ನೆಯ ಚಿಂತೆಯ ಕಾರ್ಮೋಡಗಳು, ನಮ್ಮನ್ನು ಅಧೀರರನ್ನಾಗಿ ಮಾಡದಿರಲಿ !

ಬರಹ

’ಇಂದು,’ ನಮ್ಮೆಲ್ಲರಿಗೆ ಅತ್ಯಂತ ಪ್ರಸ್ತುತವಾದದ್ದು. ಏಕೆಂದರೆ, ನಮ್ಮ ಅಸ್ತಿತ್ವವಿರುವುದು ಈ ದಿನವೇ ! ನಾವು ಕ್ಷಣಕ್ಷಣವೂ ಉಸಿರಾಡುತ್ತಿರುವುದು ಇಂದಿನ ತಂಗಾಳಿಯಲ್ಲಿ. ಆದ್ದರಿಂದ ಇದು ಬಲು ಪ್ರಾಶಸ್ತ್ಯವನ್ನು ಹೊಂದುತ್ತದೆ. ಆದರೆ, ಇಂದು ಎಲ್ಲಿಂದಲೋ ದಿಢೀರ್ ಎಂದು ಧುಮುಕಿ ಬಂತೇ ? ಇಲ್ಲ. ಹಿಂದೆ ನಾವು, ’ ಇಂದು”ಎಂದು ಹೆಮ್ಮೆಯಿಂದ ಬೀಗಿ, ದಾಖಲಿಸಿದ ಇಂದೇ ನೋಡುನೋಡುತ್ತಿದ್ದಂತೆಯೇ ನೆನ್ನೆಯಾಯಿತಲ್ಲವೇ ? ಅಬ್ಬಾ, ಸೃಷ್ಟಿಯ ಮಾಯೆ ಏನದ್ಭುತ ! ಹಾಗೆಯೇ, ಮತ್ತೆ ಏನನ್ನೋ ಅರಸಲು ಹೊರಟನಮಗೆ ಕಾಣಬರುವುದು, ನಾಳೆಯೇ ! ಕೊನೆಯಪಕ್ಷ ನಮ್ಮ ತಪ್ಪುಗಳನ್ನು ನಾಳೆಯಾದರೂ ಸರಿಪಡಿಸಿಕೊಳ್ಳುವ, ಎಂದು ನಮ್ಮ ಒಳಮನಸ್ಸು ಸಮಾಧಾನ ಪಟ್ಟುಕೊಳ್ಳುತ್ತದೆ. ಸ್ವಲ್ಪಯಾಮಾರಿದರೂ, ನಾಳೆ ಇಂದಾಗಿ, ಮತ್ತೆ ನೆನ್ನೆಯಾಗುವ ಅಪಾಯ ಸಾರ್ವಕಾಲಕ್ಕೂ ನಿಜ. ಆದ್ದರಿಂದ ನಮ್ಮ ಧ್ಯೇಯ ಹಾಗೂ ನಮ್ಮ ಉತ್ತಮವಾದ, ಆಚಾರ-ವಿಚಾರಗಳೆಲ್ಲವೂ ಈದಿನದ ಮೇಲೆಯೇ ಕೇಂದ್ರೀಕೃತವಾಗಬೇಕಾದದ್ದು ಅನಿವಾರ್ಯ.

ಕರ್ಮ ಸಿದ್ಧಾಂತದಮೇಲೆ ಯೋಚಿಸುವ ನಮ್ಮ ಭಾರತೀಯ ವಿಚಾರಧಾರೆಗಳು, ಮತ್ತು ಪರಂಪರಾಗತವಾದ ರೀತಿಯ ಕಾರ್ಯವಿಧಾನಗಳು, ನಮ್ಮನ್ನು ಮತ್ತೆ-ಮತ್ತೆ ಪ್ರೇರೇಪಿಸುವುದು, ಎಲೆ ಜೀವವೇ, ಏನಾದರು ಒಳ್ಳೆಯಕೆಲಸವನ್ನು ಮಾಡುವುದಿದ್ದರೆ, ಈದಿನ, ಅಥವಾ ಈಗ ಮಾಡಿದರೆ ಮಾತ್ರ, ಏನಾದರೂ ಸಿದ್ಧಿಸಲು ಸಾಧ್ಯವಾದೀತು, ಎಂದು ಸದಾ ಎಚ್ಚರಿಸುತ್ತದೆ. ’ಕಾಲಚಕ್ರ” ಒಂದೇ ಸಮನೆ ಸುತ್ತುತ್ತಿದೆ. ಅದು ನಿರಂತರವಾಗಿ ನಮ್ಮನ್ನು ಎಚ್ಚರಿಸಿ, ಈಗಾಗಲೇ ಬೆಳಗಿನ ಜಾವ ೫ ಗಂಟೆ, ಎದ್ದೇಳಿ. ಮತ್ತೆ ೧೨ ಗಂಟೆಯಾಯಿತು. ಮಧ್ಯಾನ್ಹ, ಆಗಲೇ ಕತ್ತಲಾಗುತ್ತಿದೆ. ಸೂರ್ಯ ಇನ್ನೇನು ಮುಳುಗುವನಿದ್ದಾನೆ. ೬ ಗಂಟೆಯಾಗಿದೆ. ಸಾಯಂಕಾಲ. ಏಳಿ ಎದ್ದೇಳಿ. ಏನಾದರೂ ಮಾಡುವುದಿದ್ದರೆ, ಬೇಗ ಮಾಡಿ. ರಾತ್ರಿಯಾಗುತ್ತಿದೆ. ಇಲ್ಲವಾದರೆ, ಇದೇ ಕೆಲಸವನ್ನು ಪೂರೈಸಲು, ಮತ್ತೊಂದು ದಿನವನ್ನು ನೀವು ಕಾಣಬೇಕಾಗುತ್ತದೆ. ಹೀಗೆಯೇ ನಮ್ಮ ಬದುಕು ನಿನ್ನೆ, ಇಂದು, ನಾಳೆಗಳ ತೂಗುಯ್ಯಾಲೆಯಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಯುಗಗಳು ಉರುಳಿಹೋಗುತ್ತವೆ.

ಹೊಸದಿಗಂತದಲ್ಲಿ ಹೊಸಸೂರ್ಯದೇವನು ಇನ್ನೇನು ಉದಯಿಸಲಿದ್ದಾನೆ. ಅವನನ್ನು ಸ್ವಾಗತಿಸೋಣ. ಎಲ್ಲರಿಗೂ ವರ್ಷ-೨೦೦೯ ಶಾಂತಿ, ಸಮಾಧಾನ ಹರ್ಷೋಲ್ಲಾಸಗಳನ್ನು ತಂದು ಜೀವನಕ್ಕೆ ಒಂದು ಸರಿಯಾದ ದಿಶೆಯನ್ನು ಕರುಣಿಸಿ, ಕೈಹಿಡಿದು ನಡೆಸಲಿ !!! ನಾವು ಮಾತ್ರ ಹೆದರದೆ, ಗತಿಶೀಲರಾಗಿ ಇಂದು ನಾಳೆಗಳನ್ನು ಧರ್ಯ ಹಾಗೂ ಸಮಚಿತ್ತದಿಂದ ಎದುರಿಸೋಣ. ಹೊಸನಾಳೆಗಳನ್ನು ಸ್ವಾಗತಿಸೋಣ ....