ಹೊಸ ಅಳಿಯ
ಮೊದಲ ಬಾರಿಗೆ ಮಾವನ ಮನೆಗೆ ಹೋಗುತ್ತಿರುವ ಅಳಿಯನ ಮುಖ ಗಮನಿಸಿ. ಅದರ ಖದರ್ರೇ ಬೇರೆ. ಆತನ ಠೀವಿ ಏನು-ನೋಟ ಏನು? ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯಂತೆ, ಒಲಂಪಿಕ್ಸ್ ಪದಕ ಗೆದ್ದ ಆಟಗಾರನಂತೆ, ಫಿಲ್ಮ್‍ಫೇರ್ ಪ್ರಶಸ್ತಿ ಗೆದ್ದ ಹೀರೋನಂತೆ ಹೊಳೆಯುತ್ತಿರುತ್ತದೆ. `ಜಗದ್ವಂದ್ಯ' ಈತನೋ ಗಣೇಶನೋ (ನಟ ಅಲ್ಲ ದೇವರು!) ಅಂತ ನಾವು ದ್ವಂದ್ವದಲ್ಲಿ ಬೀಳ್ತೇವೆ. ಆತನ ಪ್ರಕಾರ, ಆತ ವಜ್ರಗಳಲ್ಲಿ ಆಯ್ದ ಕೊಹಿನೂರು! ತನ್ನ ವೈಶಿಷ್ಟ್ಯಗಳಿಂದಾಗಿ ಆ ದೀನ ಹೆಣ್ಣಿಗೆ ತನ್ನನ್ನು select ಮಾಡಿದ್ದಾರೆ, ಮಾವನ ಕಡೆಯವರು ಅಂತ ಆತನ ಅಂಬೋಣ. (ಬೇರಾವ ಮಿಕವೂ ಸಿಗದೇ ಈ ಮಾಸಿದ ತಲೆಗೆ ಆ ಹೆಣ್ಣನ್ನು ಕಟ್ತಿರೋದು ಅನ್ನೋದು ತಿಳಿದಿಲ್ಲ ಆ ಭೂಪನಿಗೆ!) ಅದಕ್ಕೇ ಪಳಗಿದ ಹಿರಿಯರು ಇಂಥವರನ್ನು ನೋಡಿಯೇ ಗುರ್ತಿಸುತ್ತಾರೆ-"ಅಳಿಯ ದೇವರು ಮೊದಲ ಸಲ ಮಾವನ ಮನೆಗೆ ಬಿಜಿಯಂಗೈಯುತ್ತಿರೋ ಹಾಗಿದೆ!?" ಅಂತ. ತಾನಲ್ಲದೇ ಬೇರಾರು ಇದಕ್ಕೆ ಅರ್ಹರು ಅನ್ನುವ ಹಮ್ಮಿನೊಡನೆ (ಅ-ಹಮ್ಮಿನೊಡನೆ ಅಂದ್ರೇನೂ ವಿರೋಧವಾಗೋಲ್ಲ!) ಇವರ ಹತ್ತಿರ `ಹ್ಞೂಂ'ಕರಿಸಿ ನಡೆದಾನು.
ಈ ಠೀವಿಗೆ ಕಾರಣವೇನೆಂದು ಕೊಂಡಿರಿ? - ಹೊಸ ಅಳಿಯನಿಗೆ ಮಾವನ ಮನೆಯಲ್ಲಿ ದೊರಕುವ ಆದರಾತಿಥ್ಯ. `ಅಳಿಯ ದೇವರು' ಅಂತ ಪೂಜಾಸಮಾನವಾದಂಥ ಆತಿಥ್ಯ. ಇದನ್ನು ನೋಡಿದ ಮಗಳಿಗೇ ಒಮ್ಮೊಮ್ಮೆ ಆಶ್ಚರ್ಯವಾಗುವುದುಂಟು - "ಇದು ನನ್ನ ಮನೆಯೋ, ಅಥವಾ `ಅವರ'ದ್ದಾ?" ಗಮನಿಸಿ, ಇದು ಮೊದಲ ಬಾರಿ ಮಾತ್ರ. ಅಳಿಯ ಹಗಲೆಲ್ಲಾ ಮಾವನ ಮನೆಗೆ ಬಂದರೆ ಅಲ್ಲ! ಹೇಳೋದು ಕೇಳಿಲ್ವೇ `ಗತಿಗೆಟ್ಟ ಗಂಡ ಗೌರಿ ಹಬ್ಬಕ್ಕೆ ಮಾವನ ಮನೆಗೆ ಬಂದ' ಅಂತ. ಆಗ `ಜಾಮಾತಾ ದಶಮ ಗ್ರಹಃ' ಅಂತ ಅಳಿಯನಿಗೆ ನವಗ್ರಹ ಪೂಜೆ ಆದೀತು! ಮನೆಯ ಗೃಹಿಣಿ ಗ್ರಹಚಾರ ಬಿಡಿಸುತ್ತಾಳೆ!
ಆದರೆ ಮೊದಲ ಸಲದ ಚಿತ್ರಣವೇ ಬೇರೆ. ಮಾವನ ಮನೆಯಲ್ಲಿ ಎಲ್ಲರೂ ಹೊಸ ಅಳಿಯನನ್ನು ಹೂಗಳಿಂದ ಅರ್ಚನೆ ಮಾಡುವುದರ ಹೊರತಾಗಿ ಮಿಕ್ಕೆಲ್ಲ ವಿಚಾರಗಳಲ್ಲಿಯೂ ದೇವರಂತೇ ನೋಡುತ್ತಾರೆ. ಹಳ್ಳಿಗಳಲ್ಲಂತೂ, ಊರಿನಲ್ಲಿರುವ ಎಲ್ಲ ಗ್ರಾಮವಾಸಿಗಳೂ ಗುಂಪು ಗುಂಪಾಗಿ ಬಂದು, ಹೀರೋವನ್ನು ದರ್ಶಿಸಿ ಪುನೀತರಾದಂತೆ, ನೋಡೋದೂ ಉಂಟು! ಇವೆಲ್ಲಾ ಒಳಗೊಳಗೇ ಖುಷಿ ಕೊಟ್ಟರೂ, ಜಾಸ್ತಿಯಾದಾಗ ಮುಜುಗರ ತಪ್ಪಿದ್ದಲ್ಲ. ಅಳೀಮಯ್ಯನ ಎಲ್ಲ ಬೇಕುಗಳೂ ಕುಳಿತಲ್ಲಿಯೇ ಪೂರೈಕೆಯಾಗುತ್ತದೆ. ಅವನ ಸೇವೆಗೆ ಮನೆಯವರು ನಾಮುಂದು ತಾಮುಂದು ಅಂತ ಪೈಪೋಟಿಗೆ ಬೀಳುತ್ತಾರೆ! ಪೇಸ್ಟು ಕೊಡಲು ಒಬ್ಬ, ಟವೆಲ್ ಕೊಡಲು ಮತ್ತೊಬ್ಬ. ಬೆನ್ನು ತಿಕ್ಕಲೂ ಜನ ತಯಾರಿರುತ್ತಾರಾದರೂ, ತಿಕ್ಕಲನಂತೆ ಹ್ಞೂ ಅನ್ನದೇ, ಬೇಡವೆನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು!
ಮನೆಯಲ್ಲಿ ದೊರಕದ ಹದವಾದ ಹಬೆ ನೀರಿನ ಸ್ನಾನ-ಸ್ವರ್ಗ ಧರೆಗಿಳಿದಂತೆ ಅಳಿಯನಿಗೆ! ಹೊಸ ಊರಾದಲ್ಲಿ, ಅಳಿಯ ದೇವರಿಗೆ ಊರು ಸುತ್ತಾಟ. `ನಮ್ಮನೆ ಅಳಿಯ'ನೆಂಬ ಹೆಮ್ಮೆಯಿಂದ ಮಾವನ ಮನೆಯವರಿಂದ ಎದೆಯುಬ್ಬಿಸಿದ ನಡೆ! ಬೇಕು ಬೇಡಾದವರೆಲ್ಲರಿಗೂ ಅಳಿಯನ ಪರಿಚಯ ಮಾಡಿಕೊಡುತ್ತಾರವರು. ತನ್ಮೂಲಕ, ತಮಗೆ ಊರಿನ ಗಣ್ಯರೆಲ್ಲ ಗೊತ್ತು ಎನ್ನುವ ಸಂದೇಶವನ್ನು ಅಳಿಯನಿಗೆ ರವಾನಿಸಬೇಕಾಗಿರುತ್ತದೆ!
ಇನ್ನು, ಊಟದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಆಗುತ್ತದೆ. ಇದ್ದಷ್ಟೂ ದಿವಸ (ತಿಂಗಳಲ್ಲ ಗಮನಿಸಿ!) ಹಬ್ಬದ ಅಡುಗೆಯೇ. ಎರಡೆರಡು ಸ್ವೀಟ್ ತಿಂದು, ಈಗಿನ ಜನರೇಶನ್ನಿನ ಅಳಿಯಂದ್ರಿಗೆ ಡಯಾಬಿಟೀಸ್ ಬರೋದು ಗ್ಯಾರಂಟಿ –ಮೊದಲೇ ಇದ್ದಿದ್ರೆ. sugar level 400 ದಾಟೋದು ಗ್ಯಾರಂಟಿ. ನೀವೆಷ್ಟು ಬೇಡಾ ಅಂದ್ರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಅವರು ಇರೋದಿಲ್ಲ. ಅವರು ಬಡಿಸಿಯೇ ಶುದ್ಧ, ನೀವು ತಿನ್ನದೇ ಏಳಲಿಕ್ಕೆ ಅವರು ಬಿಟ್ರೆ ತಾನೇ?
ಇಷ್ಟೆಲ್ಲಾ ನಿರೀಕ್ಷೆಗಳಿದ್ದಾಗ್ಗ್ಯೇ, ಯಾವ ಹೊಸ ಅಳಿಯ ತಾನೇ ಮಾವನ ಮನೆಗೆ ಮೊದಲ ಸಲ ಬರುವುದನ್ನು ತಪ್ಪಿಸಿಯಾನು? ಚಾರ್ಲ್ ಡಿಕನ್ಸ್‍ನ Great Expectations ಇದರ ಮುಂದೆ ಏನೇನೂ ಅಲ್ಲ!
ಸರಿಯಾದ ಇಸುಮುಗಳದ್ದು ಹೀಗಾದರೆ, ಮತ್ತೆ ಕೆಲವರ expectations ಬೇರೇನೇ ಇರ್ತದೆ! ಇವರು ಮಾವನ ಮನೆಗೆ ಭೇಟಿ ಕೊಡೋದೇ `ವರದಕ್ಷಿಣೆ'ಯ ಕಂತು ವಸೂಲಾತಿಗಾಗಿ! ಇವರನ್ನು ನೋಡಿಯೇ ಹೇಳಿದ್ದು- `ಅಳಿಯ ಮನೆ ತೊಳೆಯಾ' (ಅವನ್ಯಾಕೆ ಮನೆ ತೊಳೀತಾನೆ ಹೇಳಿ, ಗುಡಿಸಿ ಗುಂಡಾಂತರ ಮಾಡ್ಲೀಕ್ಕೆ ಬಂದಾಗ!). ಧನಾತ್ಮಕ ಅಂಶಗಳಿಂದ ಬಹು ದೂರ ಇರುವ ಇಂಥ ಅಳಿಯ ಸಂತತಿ `ಋಣಾ'ತ್ಮಕವಾಗಿ ಇರುತ್ತಾರೆ – ತಮ್ಮ `ಋಣ-ಧನ' ಅಂದರೆ ಸಾಲದ ಬಾಬ್ತು ಭರಿಸುವವನೇ ಮಾವ ಅನ್ನೋದು ಅವರ ಒಂದಂಶದ ಕಾರ್ಯಕ್ರಮ. ಇಂಥವರು ಮೊದಲ ಸರ್ತಿ ಮಾವನ ಮನೆಗೆ ಬಂದಾಗಲೂ, ಈ ಮೊದಲು ಹೇಳಿದಂತೆಯೇ ಆತಿಥ್ಯ ಸಿಗುವುದಾದರೂ, ಅದು ಹೃದಯದಿಂದ ಬಂದಂಥವಲ್ಲ! ಇಂಥದೇ ಆಸಾಮಿ ಒಮ್ಮೆ ಮೊದಲ ಬಾರಿ ಮಾವನ ಮನೆಗೆ ತೆರಳುವ ಮುನ್ನ ಮಡದಿಗೆ ಧಿಮಾಕಿನಿಂದ ಕೇಳಿದನಂತೆ - `ಏನು, ನಿಮ್ಮಪ್ಪ ಕಾರ್ ಕೊಡಿಸುತ್ತಾನಂತೋ?' ಹೆಂಡತಿ ತಣ್ಣಗೆ ಹೇಳ್ತಾಳೆ - `ಕಾರೇನು, ರೈಲೇ, ಕೊಡಿಸ್ತಾರೆ – ಮನೆವರೆಗೆ ಹಳಿ ಹಾಕಿಸಿಕೊಂಡ್ಬಿಡಿ!' ಅಂತ!.
ಮೊದಲ ಸಲ ಬಂದಾಗ ಅಳಿಯಂದಿರು ಮಾವನ ಮನೆಯಲ್ಲಿ ಸ್ಕೋಪ್ ತೊಗೊಳ್ಳೋದುಂಟು. ಗ್ರೂಪ್ – ಡಿ ಆಗಿದ್ರೂ, ತಾನಿಲ್ಲದೇ ಕಛೇರಿ ನಡೆಯುವುದಿಲ್ಲ ಅನ್ನುತ್ತಾರೆ. ತನ್ನಿಂದಲೇ ಕಂಪನಿ ನಷ್ಟದಲ್ಲಿದ್ದುದು ಲಾಭಕ್ಕೆ ತಿರುಗಿತು ಅನ್ನುವುದುಂಟು. ರೈಲ್ವೆ ಇಲಾಖೆಯನ್ನು ತಲೆ ಮೇಲೆ ಹೊತ್ತಿದ್ದೇನೆಂದು ರೈಲು ಬಿಡುವುದೂ ಉಂಟು. ಇವೆಲ್ಲ ಮೊದಲ ಸಲ ಮಾವನ ಮನೆಗೆ ಹೋದಾಗ ಮಾತ್ರ ಸಾಧ್ಯ. ನಂತರದ ಭೇಟಿಗಳಲ್ಲಿ ನಿಜ ಬಣ್ಣ ಬಯಲಾಗಿರ್ತದಲ್ಲಾ! ಹೀಗೇ ಸ್ಕೋಪ್ ತೊಗೊಳ್ಳಿಕ್ಕೇಂತ, ಮೊದಲ ಸರ್ತಿ ಬಂದ ಅಳಿಯ ಮಾವನ ಮುಂದೆ ತನ್ನ ಮೊಬೈಲಿನಲ್ಲಿ - `ಹ್ಞಾ, ಯಾರು, ಮೋದಿ ಅವ್ರಾ . . . ಹೇಳಿ, ಮಾಡ್ಕೊಡೋಣ . . ಆದ್ರೆ ಸ್ವಲ್ಪ ಕಾಯ್ಬೇಕಾಗ್ತದೆ . . . ಸರಿ' ಅಂತ್ಹೇಳಿ `ಮೊಬೈಲ್ ಕಟ್' ಮಾಡಿದ. ಮಾವ ತಣ್ಣಗೆ ಹೇಳಿದ್ರು - `ಏನಿಲ್ಲ, ಮಗಳು ಹೇಳಿದ್ಲು ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದೆ - ಸ್ವಲ್ಪ ಛಾರ್ಜ್ ಮಾಡಿಕೊಡೀ ಅಂತ. ಛಾರ್ಜ್ ಮಾಡಿಕೊಡಲಾ?' ಆವಾಗಿನ ಆ ಅಳಿಯನ ಮುಖ ಇಂಗು ತಿಂದ ಮಂಗನಂತಾಗಿರದಿದ್ರೆ ಕೇಳಿ!
`ಹೂವಿನಿಂದ ನಾರು ಸ್ವರ್ಗಕ್ಕೆ' ಅಂದಂತೆ, ಅಳಿಯನ ಮೊದಲ ಸಲದ ಮಾವನ ಮನೆ ಭೇಟಿಯಲ್ಲಿ, ಮಗಳೂ ಮಿಂಚುವುದುಂಟು. ಓರಗೆಯವರಲ್ಲಿ ಗಂಡನ ಬಗ್ಗೆ `ಇಲ್ಲದ/ಇರಬೇಕಿದ್ದ' ಸದ್ಗುಣಗಳನ್ನೆಲ್ಲ ಕಲ್ಪಿಸಿ ಹೇಳಿ ಬೀಗುತ್ತಾಳೆ. ತನ್ನೆಲ್ಲ ಆಸೆಗಳನ್ನೂ `ಇವರು' ಪೂರೈಸುತ್ತಾರೆ ಅಂತ ಪಲಕುತ್ತಾಳೆ. (ಕೆಲವೊಮ್ಮೆ ಗಂಡನ ನಿಜರೂಪ ತಿಳಿದ ಮಡದಿ, ತವರು ಮನೆಯವರು ತಪ್ಪು ತಿಳಿಯಬಾರದೆಂದು, ಈ ಪಾಟಿ ಸುಳ್ಳು ಹೇಳುತ್ತಾರಾದರೂ, `ಅಮ್ಮ'ನನ್ನು ಅವರು ಮೋಸಗೊಳಿಸಲಾರರು). ಮತ್ತೆ ಕೆಲವರು ತಮ್ಮ ಕಲ್ಪನಾ ವಿಹಾರದಿಂದ ಭೂಮಿಗೆ ಇಳಿದೇ ಇರೋಲ್ಲ ಇನ್ನೂ. ಹನಿಮೂನಿನಲ್ಲಿ ಕಳೆದಂತೆಯೇ ಉಳಿದ ಜೀವನವೂ ಕೂಡಾ ಅಂತ ಭ್ರಮಿಸುತ್ತಾರೆ. ಆದರೆ, ಒಂದು ವರ್ಷದ ನಂತರ ಪರಿಸ್ಥಿತಿ ಹೇಗಿರುತ್ತದೆ ಅಂತ ನಾನು ಬಿಡಿಸಿ ಹೇಳಬೇಕಾಗಿಲ್ಲ - ನಮ್ಮ ನಿಮ್ಮೆಲ್ಲರ ಕಥೆಯಂತೆಯೇ ಇದೂವೇ. ಎಲ್ಲರ ಮನೆ ದೋಸೇನೂ ತೂತೇ.
ಮೊದಲ ಸರ್ತಿ ಮಾವನ ಮನೆಗೆ ಹೋದಾಗ ಅಳಿಯನ ಪರೀಕ್ಷೆ ಪರೋಕ್ಷವಾಗಿ ನಡೆಯುವುದುಂಟು - ಮಗಳಿಗಾಗಿ ತಮ್ಮ ಆಯ್ಕೆ ಸರಿಹೋಯ್ತೋ ಇಲ್ಲವೋ ಅನ್ನುವ doubt clear ಮಾಡ್ಕೊಳ್ಳೋಕ್ಕೆ. ಎಲ್ಲರಿಂದಲೂ ಮದುವೆಗೆ ಮುಂಚೆ, detective agency ಯವರಿಂದ ಹುಡುಗನ `ಜಾತಕ' ಪರಿಶೀಲನೆ ಮಾಡಿಸ್ಲಿಕ್ಕೆ ಆಗಲ್ಲವಲ್ಲ! ಮಗಳನ್ನ ಸುಖವಾಗಿ ನೋಡ್ಕೊಳ್ಳೋ ಆರ್ಥಿಕ ಸಬಲತೆ ಅಳಿಯನಲ್ಲಿ ಮೇಳೈಸಿವೆಯೋ, ದುರ್ಗುಣಗಳೇನಾದರೂ ಇವೆಯೋ ಅಂತೆಲ್ಲಾ ಚೆಕ್ ಮಾಡಕ್ಕೆ ಪರೀಕ್ಷಿಸಬೇಕಾಗುತ್ತದೆ. ಒಂದ್ಸಲ ಹೀಗೇ, ಹೊಸ ಅಳಿಯನನ್ನ ಪರೀಕ್ಷಿಸಲಿಕ್ಕೆ ಮಾವ ಕೇಳಿದರಂತೆ - `ಡ್ರಿಂಕ್ಸ್ ಅಭ್ಯಾಸ ಇದೆಯೋ ಹೇಗೆ?' ಅಂತ. ಅದಕ್ಕೆ ಈ ಖತರ್‍ನಾಕ್ ಅಳಿಯ ಮರುಪ್ರಶ್ನಿಸಿದ - `ಮಾವ, ಇದು ಪ್ರಶ್ನೆಯೋ, ಆಹ್ವಾನವೋ?'ಅಂತ!
ಒಟ್ಟಿನಲ್ಲಿ, ಮೊದಲ ಬಾರಿ ಮಾವನ ಮನೆಗೆ ಹೋದಾಗ ಸಿಗುವ ಆತಿಥ್ಯ, ಮತ್ತೆಲ್ಲೂ ಸಿಗದು – ಅಷ್ಟೇಕೆ, ಮಾವನ ಮನೆಯಲ್ಲೇ ಮತ್ಯಾವಾಗಲೂ ಸಿಗದು!