ಹೊಸ ಬಾಹ್ಯಾಕಾಶ ತೊಡುಗೆ:ನಾಸಾ ತಯಾರಿ
ಪ್ರಳಯ ಆಗಲೇ ಇಲ್ಲ
ಡಿಸೆಂಬರ್ ಇಪ್ಪತ್ತೊಂದರಂದು ಪ್ರಳಯವಾಗಿ ಭೂಮಿಯ ಜೀವರಾಶಿ ನಾಶವಾಗಬಹುದು ಎಂದು ಕೊನೆಯ ಗಳಿಗೆಯವರೆಗೂ ನಂಬಿದವರಿದ್ದರು.ರಶ್ಯಾ,ಕೆನಡಾ,ಅಮೆರಿಕಾ ಚೀನಾದಂತಹ ದೇಶಗಳಲ್ಲಿ ಭಯಭೀತರಾಗಿ,ಪ್ರಳಯದ ನಿರೀಕ್ಷೆ,ದಿಗಿಲು,ಆತ್ಮಹತ್ಯೆಯ ಯೋಚನೆಗಳನ್ನು ಮಾಡಿದವರಿದ್ದರಂತೆ.ಇದಕ್ಕೆ ಅವರು ಪದೇ ಪದೇ ನೋಡುತ್ತಿದ್ದ ಚಲನಚಿತ್ರ 2012ದಲ್ಲಿ ತೋರಿಸುತ್ತಿದ ಪ್ರಳಯದ ದೃಶ್ಯಗಳೂ ಕಾರಣವಿರಬಹುದು.ಹಾಗೆ ನೋಡಿದರೆ,ಭಾರತದಲ್ಲೇ ಪ್ರಳಯದ ಬಗ್ಗೆ ಭೀತಿಗಿಂತ ಹೆಚ್ಚು ತಮಾಷೆಯಾಗಿಯೇ ತೆಗೆದುಕೊಂಡವರು ಹೆಚ್ಚು.ಪ್ರಳಯವೆನ್ನುವುದು ಒಂದೇ ದಿನದಲ್ಲಿ ನಡೆಯುವಂತದ್ದಲ್ಲ.ಇದು ಒಂದು ನಿಧಾನ ಪ್ರಕ್ರಿಯೆ ಎನ್ನುವುದು ಸ್ಪಷ್ಟ.ಆದರೂ ಡಿಸೆಂಬರ್ ಇಪ್ಪತ್ತೊಂದರಂದೇ ಪ್ರಳಯ ಆಗಿಬಿಡುತ್ತದೆ ಅನ್ನುವವರಿಗೇನು ಹೇಳೋಣ?ಪ್ರಳಯ ಬಿಡಿ,ಈ ದಿನದ ಸಮೀಪ ಸುನಾಮಿ,ಭೂಕಂಪ,ಚಂಡಮಾರುತ ಯಾವುದೂ ಎಲ್ಲಿಯೂ ಸಂಭವಿಸಿದ ಸುದ್ದಿ ಕೂಡಾ ಇಲ್ಲ!
-------------------------
ಟೆಲಿಕಾಂ:ಹಳೆ ಕೇಸು ಬಿಚ್ಚಿದ ಸಿಬಿಐ
ಟೆಲಿಕಾಂ ವಲಯವು ಅನಿಶ್ಚಿತತೆಯ ಗೂಡಾಗಿದೆ.ಒಂದೆಡೆ ಹಗರಣಗಳು,ಇನ್ನೊದೆಡೆ ಸ್ಪೆಕ್ಟ್ರಮ್ ಹರಾಜು ಹೀಗೆ ಟೆಲಿಕಾಂ ಕಂಪೆನಿಗಳ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ.ಈಗ ನ್ಯಾಯಾಲಯದ ಆದೇಶದನ್ವಯ,ಸಿಬಿಐ,ದಶಕದಷ್ಟು ಹಳೆಯ ಕೇಸನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.ಆಗಿನ ಟೆಲಿಕಾಂ ಮಂತ್ರಿ ಪ್ರಮೋದ್ ಮಹಾಜನ್ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ಶ್ಯಾಮಲಾಲ್ ಘೋಷ್ ಅವರು,ಭಾರ್ತಿ ಏರ್ಟೆಲ್,ವೊಡಾಫೋನ್ ಕಂಪೆನಿಗಳ ಜತೆ ಒಳಒಪ್ಪಂದ ಮಾಡಿಕೊಂಡು,ಹೆಚ್ಚಿನ ಸ್ಪೆಕ್ಟ್ರಮ್ ಅನ್ನು ಅಗ್ಗದ ಅರದಲ್ಲಿ ನೀಡಿ,ಸರಕಾರಕ್ಕೆ ಎಂಟುನೂರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎನ್ನುವ ಆರೋಪ ಹೊರಿಸಲಾಗಿದೆ.ಆರೋಪ ಸತ್ಯವೇ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲಿದೆ.ಆದರೆ ಈ ರೀತಿ ಹಳೆಯ ಕೇಸುಗಳನ್ನು ಜಡಿಯುತ್ತಾ ಸಾಗಿದರೆ,ಇದಕ್ಕೆಲ್ಲಾ ಅಂತ್ಯವೆಲ್ಲಿ?ಹಗರಣಗಳ ಬೆನ್ನು ಹಿಡಿದು,ಹಳೆಯ ಪ್ರಕರಣಗಳನ್ನು ತೆಗೆಯುತ್ತಾ ಸಾಗಿದರೆ,ಹೂಡಿಕೆದಾರರು ಬೆದರದೆ ಇರುತ್ತಾರೆಯೇ?ಈಗಾಗಲೇ ತ್ರೀಜಿ ಮತ್ತು ಫೋರ್‌ಜಿ ತಂತ್ರಜ್ಞಾನದ ಬಗ್ಗೆ ಹೆಚ್ಚು ಹೂಡಿಕೆ ಮಾಡಲು ಕಂಪೆನಿಗಳು ಉತ್ಸಾಹ ತೋರುತ್ತಿಲ್ಲ.ಹೀಗಾಗಿ,ಶರವೇಗದ ಅಂತರ್ಜಾಲದ ಲಭ್ಯತೆ ಜನತೆಗೆ ಲಭ್ಯವಾಗುತ್ತಿಲ್ಲ.ತ್ರೀಜಿಯಲ್ಲೂ ರೋಮಿಂಗ್ ಸೇವೆಗಳು ನಿಯಮಬಾಹಿರ ಎನ್ನುವ ಟೆಲಿಕಾಂ ಇಲಾಖೆಯ ವಾದ,ಟೆಲಿಕಾಂ ಕಂಪೆನಿಗಳ ದೃತಿಗೆಡಿಸಿದೆ.ಇಷ್ಟು ಸಾಲದು ಎನ್ನುವಂತೆ,ವಿದ್ಯುದಯಸ್ಕಾಂತೀಯ ತರಂಗಗಳು ಜೀವಿಗಳಿಗೆ ಅಪಾಯ,ಗೋಪುರಗಳ ಬಗ್ಗೆ ಜನರ ವಿರೋಧ,ಸಂಕೇತಗಳನ್ನು ದುರ್ಬಲಗೊಳಿಸುವ ಒತ್ತಡ ಹೀಗೆ ಟೆಲಿಕಾಂ ಕ್ಷೇತ್ರಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತಿವೆ.ಇವುಗಳ ನಡುವೆ ಏಗುವುದು ಹೇಗೆ ಎನ್ನುವುದು ಕಂಪೆನಿಗಳು ಅರಿಯದಾಗಿವೆ.
-----------------------------------------
ಗನ್ ಡೌನ್‌ಲೋಡ್ ಮಾಡಿ ಶೂಟ್ ಮಾಡಿ!
ಮೂರು ಆಯಾಮಗಳ ಮುದ್ರಕದ ಬಗ್ಗೆ ಈ ಅಂಕಣದಲ್ಲಿ ಪ್ರಕಟವಾದ ಬರಹ ನೀವು ಓದಿಯೇ ಇರುತ್ತೀರಿ.ಈಗದು ಸ್ವಲ್ಪ ಮಟ್ಟಿಗೆ ನಿಜವಾಗಿದೆ.ರಿವಾಲ್ವರ್ ಒಂದರ ಕೆಲವು ಭಾಗಗಳನ್ನು ಮುದ್ರಕದಲ್ಲಿ ಮುದ್ರಿಸಿ,ತಯಾರಿಸಿದ ಗನ್‌ನಿಂದ ಆರು ಬುಲೆಟ್‌ಗಳನ್ನು ಶೂಟ್ ಮಾಡಿದ್ದಾಗಿ ಸಂಶೋಧಕರು ಹೇಳಿಕೊಂಡಿದ್ದಾರೆ.ಈ ತಂತ್ರಜ್ಞಾನ ಪೂರ್ಣವಾಗಿ ಸಿದ್ಧವಾಗಲು ಇನ್ನೂ ಸಮಯ ಹಿಡಿದೀತಾದರೂ,ತಕ್ಕ ಮಟ್ಟಿಗೆ ನಿಜವಾಗಿ ಬಿಟ್ಟಿದೆ.ಶಾಲೆಯಲ್ಲಿ ಬೇಕಾಬಿಟ್ಟಿ ಗುಂಡೆಸೆತವಾಗಿ,ಮಕ್ಕಳು ಹತರಾದ ಸುದ್ದಿಯ ಹಿನ್ನೆಲೆಯಲ್ಲಿ ಇಂತಹ,ಒಡನೆಯೇ ಡೌನ್‌ಲೋಡ್ ಮಾಡಿ,ರಿವಾಲ್ವರ್ ಅಥವಾ ಗನ್ ತಯಾರಿಸಿ,ಕೂಡಲೇ ಬಳಸಬಲ್ಲ ತಂತ್ರಜ್ಞಾನ ಒದಗಿದರೆ ಏನಾದೀತು ಎನ್ನುವ ಯೋಚನೆ ಹಲವರನ್ನು ಕಾಡಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.ಟೆಕ್ಸಾಸ್ ವಿಶ್ವವಿದ್ಯಾಲಯದ ವಿಲ್ಸನ್ ಎನ್ನುವಾತ ಈ ಗನ್ ತಯಾರಿಸಿದ ವಿಡಿಯೋ ತುಣುಕನ್ನು ಯುಟ್ಯೂಬ್ಯ್‌ನಲ್ಲಿ ಹಾಕಿದ್ದಾನೆ.ಈಗಿನ್ನೂ ಮೂರು ಆಯಾಮದ ಮುದ್ರಕಗಳು ದುಬಾರಿ,ಸಂಪೂರ್ಣ ಗನ್ ತಯಾರಿಸಲೂ ಆಗದು.ಆದರೆ ಮುಂದೆ ಈ ತಂತ್ರಜ್ಞಾನ ಗನ್ ವಿನ್ಯಾಸವನ್ನಿಳಿಸಿಕೊಂಡು,ಅದನ್ನು ಕೂಡಲೆ ತಯಾರಿಸುವ ಮಟ್ಟಕ್ಕೆ ಬಂದಾಗ,ಬಹಳ ನಿರ್ಬಂಧಗಳು ಮತ್ತು ಜಾಗ್ರತೆಯ ಅವಶ್ಯಕತೆಯಿದೆ.
---------------------------------
ಹೊಸ ಬಾಹ್ಯಾಕಾಶ ತೊಡುಗೆ:ನಾಸಾ ತಯಾರಿ
ಮುಂದಿನ ಎರಡು ವರ್ಷಗಳಲ್ಲಿ ಹೊಸ ಬಾಹ್ಯಾಕಾಶ ವೇಷಭೂಷಣಗಳನ್ನು ತಯಾರಿಸಲು ನಾಸಾ ಪಣ ತೊಟ್ಟಿದೆ.ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬಳಕೆಯಾಗುತ್ತಿರುವ ಸ್ಪೇಸ್-ಸೂಟ್ ಮೂವತ್ತು ವರ್ಷ ಹಿಂದೆ ವಿನ್ಯಾಸ ಮಾಡಿದ್ದು ಅಂದರೆ ಅಚ್ಚರಿಯಾದೀತೇ?ಅದು ಹೆಣಭಾರದ್ದು.ತೊಟ್ಟು ಕೊಳ್ಳಲೂ,ನಿರ್ವಹಿಸಲೂ ಬಲು ಕಷ್ಟವಾದದ್ದು.ಆದರೆ ಮೂಂದಿನ ಬಾಹ್ಯಾಕಾಶ ತೊಡುಗೆ ಬಹು ಆಕರ್ಷಕವಾಗಿರಬಹುದು ಎನ್ನುವ ನಿರೀಕ್ಷೆ ತಪ್ಪಲ್ಲ.ಈಗಿನ ತೊಡುಗೆ ಎರಡು ಭಾಗವನ್ನು ಹೊಂದಿದೆಯಾದರೆ-ಮುಂದೆ ಲಭ್ಯವಾಗುವ ತೊಡುಗೆಗೆ ಹಿಂದಿನಿಂದ ಪ್ರವೇಶದ್ವಾರವನ್ನು ಹೊಂದಿರುತ್ತದೆ.ತೊಡುಗೆಯೊಳಗೆ ಪ್ರವೇಶಿಸುವುದು,ಬಾಹ್ಯಾಕಾಶಯಾನಿಗಳಿಗೆ ಸುಲಭವಾಗಲಿದೆ.ಈ ತೊಡುಗೆ ಈಗಿನ ತೊಡುಗೆಯಂತೆ,ಬಾಹ್ಯಾಕಾಶದಲ್ಲಿ ನಡೆದಾಡುವಾಗ,ಚಂದ್ರನ ಮೇಲಿನ ಧೂಳಿನಲ್ಲಿರುವ ಜ್ವಾಲಾಮುಖಿಗಳಿಂದ ಹೊರದೂಡಲ್ಪಟ್ಟ ಹರಳಿನಂತಹ ಹರಿತ ಕಣಗಳನ್ನು ಹಿಡಿದಿಡದು.ಹಾಗಾಗಿ ಅದು ಸುರಕ್ಷಿತವೂ ಆಗಲಿದೆ.ತೊಡುಗೆಯನ್ನು ಬಾಹ್ಯಾಕಾಶದ ನಡಿಗೆ ಮತ್ತು ವಾಹನದೊಳಗಡೆ ಹೀಗೆ ಎರಡೂ ಕಡೆ ಬಳಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ.ಇದರ ಭುಜವು ಹೆಚ್ಚು ಚಲನೆಗೆ ಅವಕಾಶ ನೀಡುವಂತೆ ವಿನ್ಯಾಸ ಮಾಡಲಾಗಿದೆ.
---------------------------------------
ಫೇಸ್‌ಬುಕ್ ಸಮಯರೇಖೆ ಬದಲಾಗಲಿದೆ
ಫೇಸ್‌ಬುಕ್‌ನಲ್ಲಿ ಪ್ರವೇಶ ಮಾಡಿದೊಡನೆಯೇ ಹೆಚ್ಚಿನವರು ತಮ್ಮ ಮಿತ್ರರು ತಮ್ಮ ಜತೆ ಹಂಚಿಕೊಂಡಿರುವ ವಿಷಯ,ಚಿತ್ರ ಇತ್ಯಾದಿಗಳನ್ನು ನೋಡುವುದು ವಾಡಿಕೆ.ಅದಕ್ಕೀಗ ವಿಡಿಯೋ,ಚಲನಚಿತ್ರಗಳು,ಪುಸ್ತಕಗಳು ಮುಂತಾದ ಹಲವು ಹೊಸ ಸಂಗತಿಗಳು ಸೇರ್ಪಡೆಯಾಗಲಿವೆಯಂತೆ.ಫೇಸ್‍ಬುಕ್‌ನ ಸಮಯರೇಖೆಯನು ಹೆಚ್ಚು ಜನಪ್ರಿಯಗೊಳಿಸಲಿವು ನೆರವಾಗಲಿವೆ,ಮ್ಯಾಪ್‌ಗಳೂ ಈ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಸುದ್ದಿ.
---------------------------------
ಮೇಜಿನಲ್ಲೇ ದೃಶ್ಯ
ಈಗ ಯಾವುದೇ ಕಂಪ್ಯೂಟರಿನ ತೆರೆಯನ್ನು ಪ್ರದರ್ಶಿಸುವುದು ನೋಡುಗರ ಮುಂಭಾಗ.ಹೀಗೆ ಮಾಡಿದಾಗ,ತೋರಿಸುವಾತ ಮಾತ್ರಾ ಇದನ್ನು ಬಳಸಲು ಸಾಧ್ಯ.ಉಳಿದವರು ಮೇಜಿನ ಸುತ್ತ ಕುಳಿತು,ತೆರೆಯತ್ತ ದೃಷ್ಟಿ ಹರಿಸಬೇಕು.ಅದರ ಬದಲು ಎಲ್ಲರೂ ತಮ್ಮ ಅನಿಸಿಕೆಗಳನ್ನು ತೋರಿಸಲು ಅನುಕೂಲವಾಗಬೇಕೆಂದರೆ,ದೃಶ್ಯಗಳು ಎಲ್ಲರ ನಡುವೆ ಮೂಡಬೇಕು.ಮೈಕ್ರೋಸಾಫ್ಟಿನ ಸರ್ಫೇಸ್ ತಂತ್ರಜ್ಞಾನ ಮೇಜನ್ನೇ ತೆರೆಯಾಗಿ ಪರಿವರ್ತಿಸುತ್ತದೆ.ಇದು ಸ್ಪರ್ಶ ಸಂವೇದಿ ತೆರೆಯಂತೆಯೂ ವರ್ತಿಸುವುದು ಇನ್ನೊಂದು ಅನುಕೂಲ.ಸ್ಪರ್ಶಸಂವೇದಿ ಕಂಪ್ಯೂಟರ್ ತೆರೆಯನ್ನು ಮೇಜಿಗೆ ಅಳವಡಿಸಿಯೂ ಇದೇ ರೀತಿಯ ಸವಲತ್ತು ಪಡೆಯಬಹುದು.ಮುಂದಿನ ಪಿಸಿಗಳಲ್ಲಿ ಇಂತಹ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ಕಂಪ್ಯೂಟರ್ ಪಂಡಿತರ ಭವಿಷ್ಯವಾಣಿ ಬಂದಿದೆ.
-----------------------
ಜನರ ಬದಲು ಆಲೂ ಬಳಸಿ ವೈ-ಫೈ ಪರೀಕ್ಷೆ
ಬೋಯಿಂಗ್ ವಿಮಾನದೊಳಗೆ ವೈ-ಫೈ ಸಂಕೇತಗಳನ್ನು ಒದಗಿಸಲು ಬೋಯಿಂಗ್ ತನ್ನ ವಿಮಾನದಲ್ಲಿ ಪರೀಕ್ಷೆಗಳನ್ನು ನಡೆಸಿತು.ಈ ವೇಳೆ ಸಾಧ್ಯವಾದಷ್ಟು ಪ್ರಬಲ ಸಂಕೇತಗಳನ್ನು ಒದಗಿಸಲು ಅದು ಬಯಸಿತ್ತು.ಹಾಗೆಂದು ಸಂಕೇತಗಳು ವಿಮಾನದ ವಿದ್ಯುತ್ ವ್ಯವಸ್ಥೆಗೆ ಬಾಧಕವಾಗಬಾರದು ಎನ್ನುವ ಎಚ್ಚರಿಕೆಯನ್ನೂ ಬೋಯಿಂಗ್ ವಿಮಾನದ ಇಂಜಿನಿಯರುಗಳು ತೆಗೆದುಕೊಂಡಿದ್ದರು.ಪರೀಕ್ಷಿಸುವಾಗ ಪ್ರಯಾಣಿಕರಿದ್ದರೆ,ವೈ-ಫೈ ಸಂಕೇತಗಳು ಹರಡಿ,ಕೆಲವೆಡೆ ಸಂಕೇತಗಳು ದುರ್ಬಲವಾಗಿರುತ್ತವೆ.ನಿಜವಾಗಿ ಜನರನ್ನು ಸೀಟುಗಳಲ್ಲಿ ಕುಳ್ಳಿರಿಸಿ,ಪರೀಕ್ಷೆ ಮಾಡಬೇಕಿತ್ತು.ಆದರೆ,ಹೆಚ್ಚು ಸಮಯ ಬೇಡುವ ಈ ಪರೀಕ್ಷೆಗಳು ಜನರಿಗೆ ಬೇಜಾರ ತರುವುದು ಖಂಡಿತ.ಹಾಗಾಗಿ,ಅವರ ಸಹವಾಸವೇ ಬೇಡ ಎಂದು ತೀರ್ಮಾನಿಸಿ,ಮನುಷ್ಯರ ದೇಹ ಉಂಟು ಮಾಡುವ ಪರಿಣಾಮವನ್ನೇ ಉಂಟು ಮಾಡುವ ಬಟಾಟೆ ತುಂಬಿದ ಚೀಲಗಳನ್ನು ಸೀಟುಗಳ ಮೇಲೆ ಪೇರಿಸಿಡಲಾಯಿತು.ಪರೀಕ್ಷೆಗೆ ಒಟ್ಟು ಸುಮಾರು ಒಂಭತ್ತು ಸಾವಿರ ಕೆಜಿ ಬಟಾಟೆ ಬೇಕಾಯಿತು.
---------------------------UDAYAVANI
epaper
ಇಂಟರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.com
*ಅಶೋಕ್‌ಕುಮಾರ್ ಎ