ಹೊಸ ಮಾನವತೆಯ ಆದಿಮ ಕನಸು: ಕಮ್ಯುನಿಸಮ್ (ಓಷೋ ರಜನೀಶ್ ಚಿಂತನೆಗಳು)

ಹೊಸ ಮಾನವತೆಯ ಆದಿಮ ಕನಸು: ಕಮ್ಯುನಿಸಮ್ (ಓಷೋ ರಜನೀಶ್ ಚಿಂತನೆಗಳು)

ಆಧುನಿಕೋತ್ತರ ಚಿಂತನೆಗಳು

ಸುಳ್ಳಿನ ದೀಪ, ನಿಜದ ಕತ್ತಲು

“Do not ask who I am and do not ask me to remain the same: leave it to our bureaucrats and our police to see that our papers are in order. At least spare us their morality when we write”.

-      Michel Foucault, The Archaeology of Knoweldge (1972), tr. A. M. Sheridan Smith (New York: Pantheon)

          ಕಮ್ಯುನಿಸಂ ಕುರಿತ ನನ್ನ ಕಾಳಜಿ ನಿಷ್ಪಕ್ಷಪಾತವಾದುದು, ಅದು ರಾಜಕೀಯ ಪ್ರೇರಿತವಲ್ಲ. ಕಮ್ಯುನಿಸಂ ಬಗ್ಗೆ ಚಿಕ್ಕಂದಿನಲ್ಲೇ ನನಗೆ ಆಸಕ್ತಿ ಹುಟ್ಟಿತ್ತು. ಒಮ್ಮೆ ಸೋವಿಯತ್ ಪ್ರತಿನಿಧಿಗಳು ನನ್ನ ಆಶ್ರಮಕ್ಕೆ ಭೇಟಿ ನೀಡಿದಾಗ ನನ್ನ ಲೈಬ್ರರಿಯ ಕಮ್ಯುನಿಸ್ಟ್ ಸಾಹಿತ್ಯ ಸಂಗ್ರಹವನ್ನು ಕಂಡು ಆಶ್ಚರ್ಯ ಪಟ್ಟಿದ್ದರು. ಪ್ರತಿಯೊಂದು ಪುಸ್ತಕದ ಮೇಲೂ ದಿನಾಂಕದೊಂದಿಗೆ ನಾನು ಸಹಿ ಮಾಡಿದ್ದೆ. ಎಲ್ಲ ಪುಸ್ತಕಗಳೂ ೧೯೫೦ಕ್ಕೂ ಹಿಂದಿನ ದಿನಾಂಕ ಮತ್ತು ಸಹಿಯನ್ನು ಹೊಂದಿದ್ದವು. ಆ ಕಾಲದಲ್ಲಿ ಕಮ್ಯುನಿಸಮ್ ಕುರಿತ ಪ್ರತಿಯೊಂದನ್ನೂ ತಿಳಿದುಕೊಳ್ಳಬೇಕು ಎಂಬ ಆಸಕ್ತಿ ನನಗಿತ್ತು. ೧೯೪೮, ೧೯೪೯ ಹಾಗು ೧೯೫೦ ಈ ಮೂರು ಇಸವಿಗಳು ನನ್ನ ಬದುಕಿನಲ್ಲಿ ಕಮ್ಯುನಿಸ್ಟ್ ಸಾಹಿತ್ಯದ ಅಧ್ಯಯನಕ್ಕೆ ಮೀಸಲಾಗಿದ್ದ ವರ್ಷಗಳಾಗಿದ್ದವು. ೧೯೫೦ರ ನಂತರ ನಾನು ಕಮ್ಯುನಿಸಂ ಅಧ್ಯಯನ ಮಾಡುವುದನ್ನು ನಿಲ್ಲಿಸಿದೆ. ಅನಂತರ ಕಮ್ಯುನಿಸಂ ಕುರಿತಾದ ಯಾವ ಸಾಹಿತ್ಯವನ್ನೂ - ಪರವಾಗಲಿ ಅಥವ ವಿರೋಧವಾಗಲಿ - ನಾನು ಓದಲಿಲ್ಲ. ನನ್ನದು ವಿಪರೀತ ಮರೆವಿನ ಸ್ವಭಾವ. ಸಣ್ಣ ಪುಟ್ಟ ವಿಷಯಗಳನ್ನೂ ಮರೆತುಬಿಡುತ್ತೇನೆ. ಎಣಿಸುವಾಗಲೂ ಐದಕ್ಕಿಂತ ಹೆಚ್ಚು ಸಂಖ್ಯೆಯನ್ನು ಸುಲಭವಾಗಿ ಎಣಿಸಲಾರೆ. ನಾಲ್ಕರ ನಂತರ ಐದೋ ಅಥವ ಬೇರೊಂದು ಸಂಖ್ಯೆಯೋ ಎಂದು ಹಿಂದೆ ಮುಂದೆ ನೋಡುತ್ತೇನೆ. ಆದರೆ ಈ ನಲವತ್ತು ವರ್ಷಗಳಲ್ಲಿ ಕಮ್ಯುನಿಸ್ಟ್ ಕ್ರಾಂತಿಕಾರರ ಒಂದು ಹೆಸರನ್ನೂ ನಾನು ಮರೆತಿಲ್ಲ, ಸಣ್ಣ ಸಣ್ಣ ವಿವರಗಳೂ ಸ್ಪಷ್ಟವಾಗಿ ನೆನಪಿನಲ್ಲಿವೆ. ಇದಕ್ಕೆ ಕಾರಣವಿಲ್ಲದಿಲ್ಲ. ಬೌದ್ಧಿಕ ಜಗತ್ತಿನೊಳಗೆ ನನಗೆ ಮೊದಲ ಬಾರಿಗೆ ಪ್ರವೇಶ ಸಿಕ್ಕಿದ್ದೇ ಕಮ್ಯುನಿಸಂ ಮೂಲಕ.

           ನನ್ನ ಕಾಲೇಜು ದಿನಗಳಲ್ಲಿ ಒಮ್ಮೆ ಪ್ರಸಿದ್ಧ ಮಾರ್ಕ್ಸ್‍ವಾದಿ ಚಿಂತಕ ಎಂ.ಎನ್. ರಾಯ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಆಗ ಭಾರತದಲ್ಲಿ ಎಲ್ಲರೂ ಅಪರಿಗ್ರಹದ ಮಾತುಗಳನ್ನೇ ಆಡುತ್ತಿದ್ದುದರಿಂದ ಇಲ್ಲಿ ಕಮ್ಯುನಿಸಮ್‌ನ್ನು ಸ್ಥಾಪಿಸಲು ಕಷ್ಟವೇನೂ ಆಗದು ಎಂದು ಎಂ.ಎನ್. ರಾಯ್ ಭಾವಿಸಿದರು. ಪಶ್ಚಿಮ ದೇಶಗಳಲ್ಲೇ ಬಹುಕಾಲ ನೆಲೆಸಿದ್ದ ಅವರು ಪುಸ್ತಕದ ಓದಿನಿಂದಷ್ಟೇ ಭಾರತವನ್ನು ತಿಳಿದಿದ್ದರು. ಆದರೆ ಭಾರತಕ್ಕೆ ಬಂದಾಗ ಅವರಿಗೆ ನಿಜಕ್ಕೂ ಆಘಾತವಾಯಿತು. ಇಲ್ಲಿಯ ಜನ ಅವರನ್ನಾಗಲಿ ಅವರ ಸಿದ್ಧಾಂತವನ್ನಾಗಲಿ ಹತ್ತಿರಕ್ಕೂ ಸೇರಿಸಲಿಲ್ಲ. ಹೀಗೆ ಗಾಂಧಿಗಿಂತ ಎಲ್ಲ ರೀತಿಯಿಂದಲೂ ಹೆಚ್ಚು ಮಹತ್ವದ ಚಿಂತಕನೊಬ್ಬನನ್ನು ನಮ್ಮ ಜನ ಕಡೆಗಣಿಸಿದರು. ಗಾಂಧಿಯ ಅರೆಬಟ್ಟೆ ಈ ಜನಕ್ಕೆ ಮೆಚ್ಚುಗೆಯಾಗಿತ್ತು. ಸೂಟು ಬೂಟು ಹಾಕುವ, ಸಿಗರೇಟು ಸೇದುವ ಇವನೆಂಥ ಮಹಾತ್ಮ ಎಂದು ಜನ ಅವರನ್ನು ದೂರ ಸರಿಸಿದರು. ಆ ಕಾಲದ ಯಾವ ಸಮಾಜವಾದೀ ಚಿಂತಕನೂ ಎಂ.ಎನ್. ರಾಯ್‌ರ ವಿಚಾರಗಳನ್ನು ಪರಿಗಣಿಸಲಿಲ್ಲ. ಆ ಕಾಲಕ್ಕೆ ಭಾರತದಲ್ಲಿ ಅವರ ಬಗ್ಗೆ ತುಂಬ ಆಸಕ್ತಿ ತಳೆದದ್ದು ಬಹುಶಃ ನಾನೊಬ್ಬನೇ ಇರಬೇಕು. ವಿದ್ಯಾಭ್ಯಾಸವನ್ನು ಮುಂದುವರೆಸಲು ನನ್ನ ಹಳ್ಳಿಯಿಂದ ವಿಶ್ವವಿದ್ಯಾಲಯಕ್ಕೆ ಹೋಗುತ್ತಿದ್ದೆ ಆಗ ರೈಲಿನಲ್ಲಿ ಅವರನ್ನು ತುಂಬ ಆಕಸ್ಮಿಕವಾಗಿ ಭೇಟಿಯಾದೆ. ಭಾರತದಲ್ಲಿ ಯಾವ ರೈಲೂ ಹೊತ್ತಿಗೆ ಸರಿಯಾಗಿ ಬರುವುದಿಲ್ಲವಾದ್ದರಿಂದ ಪ್ಲಾಟ್‌ಫಾರಂನಲ್ಲಿ ಅವರ ಭೇಟಿ ಸಾಧ್ಯವಾಯಿತು.

       (ಆದರೂ ಒಮ್ಮೆ ಮಾತ್ರ ಅಲಹಾಬಾದಿನಲ್ಲಿ ರೈಲು ಆರು ಗಂಟೆಗೆ ಸರಿಯಾಗಿ ಬಂದಿತು. ನಾನು ಡ್ರೈವರನನ್ನು ಅಭಿನಂದಿಸಲು ಕೂಡಲೆ ಎಂಜಿನ್ನಿನ ಹತ್ತಿರ ಹೋದೆ “ಇಂಥದೊಂದು ದಿನಕ್ಕಾಗಿ ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೆ” ಎಂದು ಹೇಳಿ ಕೈಕುಲುಕಿದೆ. ಆತ ನಾಚಿಕೆಯಿಂದ ತಲೆತಗ್ಗಿಸಿ “ಇದು ನಿನ್ನೆಯ ರೈಲು” ಎಂದು ಹೇಳಿದ. ಇಲ್ಲೇನೋ ನಡೆಯುತ್ತಿದೆ ಎಂದು ತಿಳಿದು ಸ್ಟೇಷನ್ ಮಾಸ್ಟರ್ ಕೂಡ ಅಲ್ಲಿಗೆ ಬಂದ. ನಾನು ಅವನನ್ನು “ಎಲ್ಲ ರೈಲುಗಳೂ ಹೀಗೆ ತಡವಾಗಿ ಬರುವುದಾದರೆ ಪ್ಲಾಟ್‌ಫಾರಂನಲ್ಲಿ ವೇಳಾಪಟ್ಟಿಯನ್ನು ಹಾಕುವುದಾದರೂ ಏಕೆ?” ಎಂದು ಕೇಳಿದೆ. ಆತ “ವೇಳಾ ಪಟ್ಟಿಯಂತೂ ಬೇಕೇ ಬೇಕು. ಇಲ್ಲದಿದ್ದರೆ ರೈಲು ಎಷ್ಟು ತಡವಾಗಿ ಬಂದಿತು ಎಂದು ತಿಳಿಯುವ ಬಗೆಯಾದರೂ ಹೇಗೆ?” ಎಂದ. ಅವನಿಗೆ ಏನನ್ನೂ ಉತ್ತರಿಸಲಾಗದೆ ನಾನು ಸುಮ್ಮನೆ ಅಲ್ಲಿಂದ ಕಾಲ್ತೆಗೆದೆ).

ರೈಲಿಗೆ ಕಾಯುತ್ತಾ ನಾನು ಬೆಂಚಿನ ಮೇಲೆ ಕುಳಿತಿದ್ದಾಗ ಎಂ.ಎನ್. ರಾಯ್ ಕೂಡ ಅಲ್ಲಿಗೆ ಬಂದು ನನ್ನ ಪಕ್ಕ ಕುಳಿತರು. ನಾನು ಲೆನಿನ್‌ನ ಸಮಗ್ರ ಕೃತಿಗಳ ಒಂದು ಸಂಪುಟವನ್ನು ಓದುತ್ತಿದ್ದೆ. ನನ್ನಂಥ ಕಾಲೇಜು ವಿದ್ಯಾರ್ಥಿ ಅಷ್ಟು ದೊಡ್ಡ ಗಾತ್ರದ ಗ್ರಂಥವನ್ನು ಓದುತ್ತಿದ್ದುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು. “ಈ ಕೃತಿ ನಿನಗೆಲ್ಲಿ ಸಿಕ್ಕಿತು?” ಎಂದು ಕೇಳಿದರು. “ನನ್ನ ಬಳಿ ಮಾರ್ಕ್ಸ್, ಏಂಗೆಲ್ಸ್ ಹಾಗು ಲೆನಿನ್‌ರ ಸಮಗ್ರ ಕೃತಿಗಳ ಸಂಗ್ರಹವಿದೆ” ಎಂದೆ. “ನಾನು ನಿನ್ನಂಥವನಿಗಾಗಿಯೇ ಏಳು ವರ್ಷಗಳಿಂದ ಹುಡುಕಾಡುತ್ತಿದ್ದೆ, ನೀನು ಕಮ್ಯುನಿಸ್ಟನೇ?” ಎಂದು ಕೇಳಿದರು. “ಸದ್ಯಕ್ಕಂತೂ ಅಲ್ಲ, ಮುಂದೆ ಕಮ್ಯುನಿಸ್ಟ್ ಆದರೂ ಆಗಬಹುದು. ಈಗ ನಾನು ಇದನ್ನು ಓದುತ್ತಿದ್ದೇನೆ, ಇನ್ನೂ ಸೋಶಿಯಲಿಸಂ, ಕ್ಯಾಪಿಟಲಿಸಂ, ಅನಾರ್ಕಿಸಂ ಮೊದಲಾದವುಗಳನ್ನು ಓದಬೇಕು ಬಳಿಕ ನಿರ್ಧರಿಸುತ್ತೇನೆ. ಈಗ ನಾನು ವಿದ್ಯಾರ್ಥಿ ಮಾತ್ರ” ಎಂದಿದ್ದೆ. ಹೀಗೆ ನಾವಿಬ್ಬರೂ ಗೆಳೆಯರಾದೆವು, ಅವರು ಸೋವಿಯತ್ ರಷ್ಯಾದ ತಮ್ಮ ಅನುಭವಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಆಗಾಗ ನನ್ನ ಪುಟ್ಟ ರೂಮಿಗೂ ಭೇಟಿ ನೀಡುತ್ತಿದ್ದರು. ಆಗ ನಾನು ಸಾತ್ಪುರ ಪರ್ವತಶ್ರೇಣಿಗಳ ತಪ್ಪಲಲ್ಲಿ ಮನೆ ಮಾಡಿಕೊಂಡಿದ್ದೆ. ಸುತ್ತ ಮುತ್ತ ಮೈಲಿಗಟ್ಟಲೆ ದೂರದವರೆಗೂ ಒಂದು ಮನೆಯೂ ಇರಲಿಲ್ಲ. ನಿಸರ್ಗ ಪ್ರಿಯರಾದ ಅವರು ಆ ಜಾಗವನ್ನು ತುಂಬ ಇಷ್ಟ ಪಟ್ಟಿದ್ದರು. ಅವರೂ ಸಹ ಹಿಮಾಲಯದ ತಪ್ಪಲಿನ ನೈನಿತಾಲ್ ಎಂಬಲ್ಲಿ ವಾಸಿಸುತ್ತಿದ್ದರು. ಒಮ್ಮೆ ಅವರು ಚರ್ಚಿಸುತ್ತ “ಈ ಜನಕ್ಕೆ ಕಮ್ಯುನಿಸಂ ಅರ್ಥವಾಗುವುದೇ ಇಲ್ಲವಲ್ಲ ಏನು ಮಾಡುವುದು? ನಾನು ರಷ್ಯಾದ ಕ್ರಾಂತಿಯಲ್ಲಿ ಭಾಗವಹಿಸಿದ್ದವನು, ಪಾಲಿಟ್ ಬ್ಯೂರೋ ಸದಸ್ಯನಾಗಿದ್ದವನು, ಲೆನಿನ್ ಟ್ರಾಟ್‌ಸ್ಕಿ ಮೊದಲಾದವರ ಜೊತೆ ಕೆಲಸ ಮಾಡಿರುವ ನನ್ನಂಥವನನ್ನು ಇಲ್ಲಿ ಯಾರೂ ಲೆಕ್ಕಿಸುವುದೇ ಇಲ್ಲ” ಎಂದು ವಿಷಾದದಿಂದ ಹೇಳಿಕೊಂಡರು. ಆಗ ನಾನು “ಅದಕ್ಕೊಂದು ಉಪಾಯವಿದೆ, ನೀವು ಸ್ವಲ್ಪ ಮುಖವಾಡತನವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇನ್ನು ಮುಂದೆ ನೀವು ಬಚ್ಚಲು ಮನೆಯಲ್ಲಿ ಮಾತ್ರ ಸಿಗರೇಟ್ ಸೇದಬೇಕು. ಆದರೆ ಸಾರ್ವಜನಿಕವಾಗಿ ಧೂಮಪಾನದ ವಿರುದ್ಧ ಮಾತನಾಡ ತೊಡಗಬೇಕು. ಇಷ್ಟು ಒಳ್ಳೆಯ ಗುಣಮಟ್ಟದ ಸೂಟುಗಳನ್ನು ಧರಿಸುವುದನ್ನು ಬಿಟ್ಟು ಗಾಂಧಿಯಂತೆ ಎರಡು ತುಂಡು ಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಓಡಾಡಬೇಕು. ನಿಮ್ಮ ಕೂದಲು ದಾಡಿಗಳನ್ನೆಲ್ಲ ಬೋಳಿಸಿಕೊಂಡು ಮಹಾತ್ಮನಂತೆ ಕಾಣಿಸಬೇಕು,..ಹೋಗಿ ಕ್ಷೌರಿಕನನ್ನು ಕರೆತರಲೇ?” ಎಂದು ಹಾಸ್ಯದಿಂದ ಕೇಳಿದ್ದೆ. “ಇದೆಲ್ಲ ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದರು. ಕೊನೆಗೆ ಹೆಸರಿಲ್ಲದೆ ಗುರುತಿಲ್ಲದೆ ಯಾರಿಗೂ ಗೊತ್ತಾಗದಂತೆ ತೀರಿಕೊಂಡರು.

            ಹೀಗೆ ಕಮ್ಯುನಿಸ್ಟ್ ವಿಚಾರಗಳು ಬಹು ಹಿಂದೆಯೇ ನನ್ನಲ್ಲಿ ಆಳವಾಗಿ ಬೇರುಬಿಟ್ಟಿತಾದರೂ ನಾನೆಂದೂ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯನಾಗಲು ಇಷ್ಟ ಪಡಲಿಲ್ಲ, ಕಮ್ಯುನಿಸಂನಲ್ಲಿ ಏನೋ ಒಂದು ಕೊರತೆ ಇದೆ ಎಂದು ನನಗೆ ಅನ್ನಿಸುತ್ತಿತ್ತು. ಕಮ್ಯುನಿಸಂ ಯಾವುದೇ ದೇಶದ ಅಥವ ಜನಾಂಗದ ಸಿದ್ಧಾಂತವಲ್ಲ, ಅದು ಇಡೀ ಮನುಷ್ಯಕುಲವನ್ನು ದೃಷ್ಟಿಯಲ್ಲಿರಿಸಿಕೊಂಡು ತಯಾರಿಸಲಾದ ಒಂದು ಮಹತ್ವಾಕಾಂಕ್ಷೀ ಯೋಜನೆ. ಆದರೆ ಆ ಯೋಜನೆಗೆ ಒಂದು ಕೇಂದ್ರವೇ ಇಲ್ಲ ಅನ್ನಿಸುತ್ತಿತ್ತು, ಆ ವಿಚಾರಗಳು ಆತ್ಮವೇ ಇಲ್ಲದ ಕೇವಲ ಕಳೇಬರದಂತೆ ನನ್ನ ಕಣ್ಣಿಗೆ ಕಾಣಿಸುತ್ತಿತ್ತು. ೧೯೫೦ರ ನಂತರ ಕಮ್ಯುನಿಸ್ಟ್ ವಿಚಾರಗಳಲ್ಲಿ ಯಾವ ಬೆಳವಣಿಗೆಯೂ ನನಗೆ ಕಾಣಿಸಲಿಲ್ಲವಾದ ಕಾರಣ ಆ ಕುರಿತು ಓದುವುದನ್ನು ಪೂರ್ತಿಯಾಗಿ ನಿಲ್ಲಿಸಿ ಬಿಟ್ಟೆ. ಈಗ ಗೋರ್ಬಚೀವ್‌ರ ಹೊಸ ರಾಜಕೀಯ ನಡಿಗೆಗಳು ನನ್ನಲ್ಲಿ ಮತ್ತೆ ಹಳೆಯ ಆಸಕ್ತಿ, ಕುತೂಹಲಗಳನ್ನು ಕೆರಳಿಸುತ್ತಿವೆ. ಹಾಗಾಗಿ ಈಗ ನಾನು ಮತ್ತೆ ಕಮ್ಯುನಿಸಂ ಕುರಿತು ಆಲೋಚನೆ ಮಾಡುತ್ತಿದ್ದೇನೆ.

ಕಮ್ಯುನಿಸ್ಂ ನನ್ನ ಕಣ್ಣಿಗೆ ಒಂದು ಕಳೇಬರದಂತೆ ಕಾಣಿಸಿದ್ದರಿಂದಲೇ ನಾನು ಮುಂದೆ ಅರಾಜಕವಾದದತ್ತ ಆಸಕ್ತಿ ತಳೆದದ್ದು. ಅರಾಜಕವಾದವೂ ಕೂಡ ರಷ್ಯಾದಲ್ಲಿ ಹುಟ್ಟಿದ ಪರಿಕಲ್ಪನೆಯೇ. ಪ್ರಿನ್ಸ್ ಕ್ರೊಪೋಟ್‌ಕಿನ್, ಬಕುನಿನ್ ಮತ್ತು ಲಿಯೋ ಟಾಲ್ಸ್ ಟಾಯ್ ಈ ಮೂವರೂ ಅರಾಜಕವಾದದ ಮಹಾನ್ ಪ್ರತಿಪಾದಕರಾಗಿದ್ದರು. ಪೊಲೀಸು, ಕೋರ್ಟು, ಸರಕಾರ ಎಲ್ಲವನ್ನೂ ನಿರಾಕರಿಸುವ ಅರಾಜಕವಾದವು ಒಂದುವೇಳೆ ಬಹುಪಾಲು ಅಪರಾಧಿಗಳೇ ತುಂಬಿರುವ ಈ ನಮ್ಮ ಸಮಾಜದಲ್ಲಿ ಕಾಲಿಟ್ಟರೆ ಗೊಂದಲಮಯವಾದ, ಅತಂತ್ರ ಸ್ಥಿತಿಯಷ್ಟೇ ಏರ್ಪಡುತ್ತವೆ ಎಂದು ನನಗೆ ಗೊತ್ತು. ಆದರೂ ಅವರು ಕಂಡ ಕನಸು ನನ್ನ ಮನಸ್ಸನ್ನು ಆಕರ್ಷಿಸದೇ ಇರಲಿಲ್ಲ. ನಾನು ಅಂತರಂಗದ ವಿಷಯದಲ್ಲಾಗಲಿ, ಹೊರಜಗತ್ತಿನ ವಿಷಯದಲ್ಲಾಗಲಿ ವೈಜ್ಞಾನಿಕ ವಿಧಾನದಲ್ಲಿ ಆಲೋಚನೆ ಮಾಡುವವನಲ್ಲ. ಆದರೂ ಕಮ್ಯುನಿಸಮ್ ಮನುಷ್ಯ ಸಮಾಜಕ್ಕೆ ಅಡಿಪಾಯವಾಗಲು ಯೋಗ್ಯವಾದುದು ಎಂದು ಬಲವಾಗಿ ನಂಬಿದ್ದೇನೆ. ಈ ಅಡಿಪಾಯದ ನಂತರ ಕಂಡುಬರುವ ಕೊರತೆಗಳನ್ನು ಅಧ್ಯಾತ್ಮವಾದ ತುಂಬಿಸಬಲ್ಲದು ಎಂಬ ಭರವಸೆ ನನಗಿದೆ. ನಿರಂಕುಶ ಮತಿತ್ವದೊಂದಿಗೆ ಅಸಮಾನತೆಯತ್ತ - ಅಂದರೆ ಅನನ್ಯತೆಯತ್ತ - ಹೆಜ್ಜೆ ಇಡಲು ಎಲ್ಲರಿಗೂ ಸಮಾನ ಅವಕಾಶ ಸಿಕ್ಕ ಮರುಗಳಿಗೆಯೇ ಅಧ್ಯಾತ್ಮವಾದ ನೆಲೆಯೂರುತ್ತದೆ ಹಾಗು ಅದು ಅರಾಜಕವಾದಕ್ಕೆ ದಾರಿಯಾಗುತ್ತದೆ. ಇಂಥದೊಂದು ಅರಾಜಕ ಸಮಾಜದಲ್ಲಿ ಅಪರಾಧಗಳಿಗೆ ಇಳಿಯಲು ಯಾರಿಗೂ ಆಸಕ್ತಿ ಇರದು. ಆಗ ಕೋರ್ಟು ಕಛೇರಿ ಪೊಲೀಸು ಸರಕಾರ ಈ ಯಾವುದರ ಅವಶ್ಯಕತೆಯೂ ಇರದು. ಬಕುನಿನ್, ಕ್ರೊಪೋಟ್‌ಕಿನ್, ಟಾಲ್ಸ್‌ಟಾಯ್ ಇವರೆಲ್ಲರ ಆಲೋಚನೆಗಳು ಖಂಡಿತ ಹುಸಿಯಲ್ಲ ಆದರೆ ಇಂದಿಗೆ ಅವು ಪ್ರಸ್ತುತವಲ್ಲ.

          ಇನ್ನೂ ಎಷ್ಟು ಕಾಲ ನಾವು ಪೊಲೀಸರನ್ನು ಕಾವಲಿಗೆ ನಿಲ್ಲಿಸಿರಬೇಕು? ಪ್ರತಿಯೊಂದು ದೇಶವೂ ಕೆಲಸವಿಲ್ಲದ ಕೋಟ್ಯಂತರ ಸೈನಿಕರಿಗೆ, ಮಿಲಿಟರಿ ಅಧಿಕಾರಿಗೆ ಉತ್ತಮ ದರ್ಜೆಯ ಆಹಾರ ಬಟ್ಟೆಗಳನ್ನು ಒದಗಿಸುತ್ತಿವೆ. ಆ ಸೈನಿಕರನ್ನೆಲ್ಲ ನಮ್ಮ ನಡುವೆ ಬಾಳಲು ಕರೆಸಿಕೊಳ್ಳಬಾರದೇ? ಅದು ಸಾಧ್ಯವಾಗಬೇಕೆಂದರೆ ಮೊದಲು ಕಮ್ಯುನಿಸಂ ದೃಢವಾಗಿ ನೆಲೆಯೂರಬೇಕು. ಆಗ ಮಾತ್ರ ಅಧ್ಯಾತ್ಮ ಹಾಗು ಬಂಡವಾಳಶಾಹಿಗಳ ನಡುವಿನ ಅನೈತಿಕ ಸಂಬಂಧ ಕೊನೆಯಾಗುತ್ತದೆ. ಆದರೆ ಒಮ್ಮೆ ಕಮ್ಯುನಿಸಂ ಕಣ್ಮರೆಯಾದರೆ ಈ ಯಾವ ಕನಸುಗಳೂ ಸಾಕಾರಗೊಳ್ಳವು. ನಮ್ಮೆಲ್ಲ ಪ್ರಯತ್ನಗಳ ತರುವಾಯವೂ ಅರಾಜಕವಾದವು ಒಂದು ವೇಳೆ ಫಲಿಸದಿದ್ದರೂ ಚಿಂತೆಯಿಲ್ಲ. ನಾನಂತೂ ಅರಾಜಕವಾದದ ಕನಸನ್ನು ಬಿಡುವವನಲ್ಲ. ನಾನು ದೇಶ, ಧರ್ಮ, ಗಡಿ, ಪೊಲೀಸು, ಮಿಲಿಟರಿ, ಬಂದೂಕು, ಕೊಲೆಗಡುಕ ಪ್ರಭುತ್ವ, ಇದಾವುದೂ ಇಲ್ಲದ ಸಮಾಜದ ಕನಸನ್ನು ಕಾಣುವವನು, ಆರೋಗ್ಯಕರವಾದ ಹೊಸ ಮಾನವಜಾತಿಯ ಕನಸನ್ನು ಕಾಣುವವನು, ಅದೇ ನಿಟ್ಟಿನಲ್ಲಿ ಇಲ್ಲಿಯತನಕ ಅವಿರತವಾಗಿ ಶ್ರಮಿಸುತ್ತ ಬಂದಿರುವವನು. ಇಂದು ಸೋವಿಯತ್ ಒಕ್ಕೂಟದಲ್ಲಿ ನನಗೆ ಹೊಸ ಆಶಾ ಕಿರಣ ಕಾಣಿಸುತ್ತಿದೆ. ಗೋರ್ಬಚೀವ್ ತಪ್ಪು ಹೆಜ್ಜೆ ಇಡದಿದ್ದರೆ ನನ್ನ ಕನಸುಗಳು ಸಾಕಾರಗೊಳ್ಳಲಿವೆ.

            ಒಂದೆಡೆ ರಾಜಕಾರಿಣಿಗಳ ವಿರುದ್ಧ ಮಾತನಾಡುವ ನೀವು ಇನ್ನೊಂದೆಡೆ ನಿಮ್ಮ ಒಂದು ಪುಸ್ತಕವನ್ನು ಗೋರ್ಬಚೀವ್ ಅವರಿಗೆ ಅರ್ಪಿಸಿದ್ದೀರಲ್ಲ. ಇದು ವಿರೋಧಾಭಾಸ ಅಲ್ಲವೇ?

            ಖಂಡಿತ ಅಲ್ಲ. ಏಕೆಂದರೆ ನನ್ನ ದೃಷ್ಟಿಯಲ್ಲಿ ಗೋರ್ಬಚೀವ್ ಒಬ್ಬ ಕುತಂತ್ರ ರಾಜಕಾರಿಣಿ ಅಲ್ಲ. ಗೋರ್ಬಚೀವ್ ಹಾಗು ಅಕಾಡೆಮಿಕ್ ವಿಜ್ಞಾನಿ ಸುಖರೋವ್ ಇಬ್ಬರೂ ವಿಶ್ವಶಾಂತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಮುತ್ಸದ್ದಿಗಳು ಎಂಬುದು ಇಂದು ಅವರ ಒಂದೊಂದು ನಡೆಯಿಂದಲೂ ತಿಳಿಯುತ್ತಿದೆ. ’ಶತ್ರುಗಳಿರುವ ತನಕ ಮಾತ್ರ ರಾಜಕೀಯ ಅಧಿಕಾರದಲ್ಲಿ ಇರಲು ಸಾಧ್ಯ. ಶತ್ರುಗಳಿರದಿದ್ದರೆ ನಮ್ಮ ಉಳಿವಿಗಾಗಿಯಾದರೂ ಅಂಥವರನ್ನು ಸೃಷ್ಟಿಮಾಡಿಕೊಳ್ಳಬೇಕು. ಶಾಂತಿಯ ವಾತಾವರಣವು ರಾಜಕೀಯ ಅಧಿಕಾರವನ್ನು ಮಣ್ಣುಗೂಡಿಸುತ್ತದೆ’ ಎಂದು ಅಡಾಲ್ಫ್ ಹಿಟ್ಲರ್ ಒಂದೆಡೆ ಬರೆದಿದ್ದಾನೆ. ಈ ಮಾತುಗಳಿಗೆ ನಮ್ಮ ಚರಿತ್ರೆಯೇ ಸಾಕ್ಷಿ. ಚರಿತ್ರೆಯಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳೆಲ್ಲರೂ ದೊಡ್ಡ ಕೊಲೆಗಡುಕರೇ ಆಗಿದ್ದಾರೆ. ಆದರೆ ಗೋರ್ಬಚೀವ್ ಹಾಗು ಸುಖರೋವ್ ಈ ಇಬ್ಬರೂ ವಿಶ್ವಶಾಂತಿಗಾಗಿ ಪ್ರಯತ್ನಿಸುತ್ತಿರುವ ನಿಜವಾದ ಮಾನವತಾವಾದಿಗಳು. ಅದಕ್ಕೇ ನನ್ನ ಪುಸ್ತಕವನ್ನು ಅವರಿಬ್ಬರಿಗೆ ಪ್ರೀತಿಯಿಂದ ಸಮರ್ಪಿಸಿದ್ದೇನೆ.

          ಕಮ್ಯುನಿಸಂ ಸೋವಿಯತ್ ರಷ್ಯಾದಂತಹ ದೇಶದಲ್ಲಿ ಸಂಭವಿಸಲಿದೆ ಎಂದು ಕಾರ್ಲ್‌ಮಾರ್ಕ್ಸ್ ಕನಸಿನಲ್ಲಿಯೂ ಊಹಿಸಿರಲಿಲ್ಲ. ಬಡವರ ಶೋಷಣೆ ತಾರಕಕ್ಕೆ ತಲುಪಿದ್ದ ಅಮೆರಿಕಾದಂತಹ ದೇಶದಲ್ಲಿ ಕಮ್ಯುನಿಸಂ ಹುಟ್ಟಿಕೊಳ್ಳಲಿದೆ ಎಂಬುದು ಆಗ ಅವನ ಕಲ್ಪನೆಯಾಗಿತ್ತು. ರಷ್ಯಾ ಶ್ರೀಮಂತರ ಒಂದು ಚಿಕ್ಕ ಸಮೂಹವನ್ನು ಹೊಂದಿದ್ದ ಬಡದೇಶವಾಗಿತ್ತು. ರಷ್ಯಾದ ಸಮಾಜದಲ್ಲಿ ಆಗಿನ್ನೂ ಮಾರ್ಕ್ಸ್ ಹೇಳುವ ಉಳ್ಳವರು ಇಲ್ಲದವರು ಎಂಬ ವರ್ಗವಿಭಜನೆಯೇ ಆಗಿರಲಿಲ್ಲ. ಒಂದು ಬಂಡವಾಳಶಾಹೀ ವ್ಯವಸ್ಥೆ ಮಾತ್ರ ಕಮ್ಯುನಿಸಂನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂಬುದು ಮಾರ್ಕ್ಸ್‌ನ ವಿಶ್ಲೇಷಣೆ ಆಗಿತ್ತು. ಊಳಿಗ ಮಾನ್ಯ ವ್ಯವಸ್ಥೆ ಮೊದಲು ಬಂಡವಾಳಶಾಹಿಯಾಗಬೇಕು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಧ್ಯಮವರ್ಗ ಎಂಬುದು ಸಂಪೂರ್ಣವಾಗಿ ಕಣ್ಮರೆಯಾಗಿ ಬಡವರ ಶ್ರೀಮಂತರ ನಡುವೆ ಒಂದು ಸ್ಪಷ್ಟವಾದ ಭೇದ ಏರ್ಪಡುತ್ತದೆ. ಅಂಥ ಸಂದರ್ಭದಲ್ಲಿ ಮಾತ್ರ ಕ್ರಾಂತಿ ಸಾಧ್ಯ ಎಂದು ಭವಿಷ್ಯವಾಣಿ ನುಡಿದಿದ್ದ. ಆದರೆ ರಷ್ಯಾದಲ್ಲಿ ಅಂತಹ ಪರಿಸ್ಥಿತಿ ಇನ್ನೂ ಏರ್ಪಟ್ಟಿರಲೇ ಇಲ್ಲ. ಅದು ಇನ್ನೂ ಜಾರ್ಗಳ ಆಳ್ವಿಕೆಯಲ್ಲಿ ಊಳಿಗಮಾನ್ಯ ವ್ಯವಸ್ಥೆಯಾಗಿತ್ತು.

          ಬದುಕು ಎಂದಿಗೂ ನಮ್ಮ ಎಣಿಕೆ, ತರ್ಕಗಳ ಅನುಸಾರ ನಡೆಯದು. ಮೊದಲ ಮಹಾಯುದ್ಧದಲ್ಲಿ ಜರ್ಮನಿ ಹೀನಾಯವಾಗಿ ಸೋತ ಮೇಲೆ ಜರ್ಮನಿಯ ದೊರೆ ಸಿಂಹಾಸನದಿಂದಿಳಿದು ಅಧಿಕಾರವನ್ನು ಪ್ರಜೆಗಳಿಗೆ ಒಪ್ಪಿಸಿದ್ದ. ಆಗ ಜರ್ಮನಿಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿದ್ದ ಕಾರಣ ಲೆನಿನ್ ತಾನೇ ಮುಂದಾಳಾಗಿ ನಿಂತು ಅಲ್ಲಿ ಕಮ್ಯುನಿಸಂನ್ನು ತರುವ ಪ್ರಯತ್ನದಲ್ಲಿ ನಿರತನಾಗಿದ್ದ. ಆದರೆ ಕಮ್ಯುನಿಸ್ಟ್ ಪಾರ್ಟಿ ಗೆಲ್ಲದೆ ಅಲ್ಲಿ ಅನಿರೀಕ್ಷಿತವಾಗಿ ಹಿಟ್ಲರ್ ಅಧಿಕಾರ ವಹಿಸಿಕೊಂಡ. ಇದೇ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟವು ಒಂದು ಕಮ್ಯುನಿಸ್ಟ್ ದೇಶವಾಗುವ ಸನ್ನಿವೇಶ ಇದ್ದಕ್ಕಿದ್ದಂತೆ ಉದ್ಭವವಾಯಿತು. ಯುದ್ಧದ ನಂತರ ಜಾರ್‌ಗಳು ತಮ್ಮ ಸೈನಿಕರಿಗೆ ವೇತನವಿರಲಿ, ಬೇಕಾದ ಆಹಾರ ಪದಾರ್ಥ, ಬಟ್ಟೆ, ಬೂಟ್ಸುಗಳನ್ನೂ ಸರಿಯಾಗಿ ಒದಗಿಸಲಾಗದೆ ದಿವಾಳಿಯಾದರು. ಇದರಿಂದ ರೊಚ್ಚಿಗೆದ್ದ ಸೈನಿಕರು ಅವರ ಮೇಲೆ ಎರಗಿದರು. ಸೈನಿಕ ದಂಗೆ ನಡೆದಾಗ ಜರ್ಮನಿಯಲ್ಲಿದ್ದ ಲೆನಿನ್ ಕೂಡಲೆ ರಷ್ಯಾಗೆ ಧಾವಿಸಿದ. ಇಂಥದೊಂದು ಸಂದರ್ಭವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಕಾರ್ಯತಂತ್ರವನ್ನು ರೂಪಿಸಿದ. ಅದ್ಭುತವಾದ ಸಂಘಟಕನಾದ ಲೆನಿನ್ ಜಾರ್‌ಗಳ ಸೈನ್ಯವನ್ನು ಅವರ ವಿರುದ್ಧವೇ ಎತ್ತಿಕಟ್ಟಿದ. ಸೈನಿಕರ ನಾಯಕತ್ವ ವಹಿಸಿಕೊಂಡು “ಸಿದ್ಧತೆಯೇ ಇಲ್ಲದೆ ಬಲವಂತವಾಗಿ ಯುದ್ಧಭೂಮಿಗೆ ಕಳುಹಿಸಿ ಅನಗತ್ಯವಾಗಿ ನಮ್ಮನ್ನು ಕೊಲ್ಲಲಾಗುತ್ತಿದೆ” ಎಂದು ಅವರನ್ನು ಪ್ರಚೋದಿಸಲಾರಂಭಿಸಿದ. ಸೈನಿಕರ ಕೈಯಿಂದ ಜಾರ್ ಕುಟುಂಬದ ೧೯ ಮಂದಿ - ೬ ತಿಂಗಳ ಮಗುವೂ ಸೇರಿ - ಬರ್ಬರವಾಗಿ ಹತ್ಯೆಯಾದರು. ಕಮ್ಯುನಿಸಂ ಸ್ಥಾಪನೆ ಆದ ಮೇಲೆಯೂ ಒಂದು ವೇಳೆ ಲೆನಿನ್ ಅಧಿಕಾರದಲ್ಲಿ ಮುಂದುವರೆದಿದ್ದರೆ ರಷ್ಯಾದಲ್ಲಿ ಕಮ್ಯುನಿಸಂ ಬಹುಕಾಲ ಉಳಿಯುತ್ತಿರಲಿಲ್ಲ. ಏಕೆಂದರೆ ಲೆನಿನ್ ಆಂತರ್ಯದಲ್ಲಿ ಒಬ್ಬ ಭಾವುಕ ಜೀವಿ, ತುಂಬ ಮೃದು ಹೃದಯಿ. ಅವನಲ್ಲಿದ್ದ ಅಪಾರವಾದ ಅನುಕಂಪದ ಕಾರಣದಿಂದಲೇ ಅವನು ಕಮ್ಯುನಿಸಂಗೆ ಒಲಿದದ್ದು. ಆದರೆ ಅಧಿಕಾರಕ್ಕೆ ಬಂದ ಮೇಲೆ ಹೇಗೆ ನಡೆದುಕೊಳ್ಳಬೇಕು ಎಂದು ಅವನಿಗೆ ತಿಳಿದಿರಲಿಲ್ಲ. ನೀವು ರಸ್ತೆಗಳಲ್ಲಿ ಕಾರನ್ನು ಆಟ್ಟಿಸಿಕೊಂಡು ಹೋಗುವ ನಾಯಿಗಳನ್ನು ನೋಡಿರಬಹುದು. ಕಾರು ಒಮ್ಮೆಲೆ ನಿಂತುಬಿಟ್ಟರೆ ಮುಂದೇನು ಮಾಡಬೇಕೆಂದು ತೋಚದೇ ನಾಯಿಗಳು ಮುಖಭಂಗ ಅನುಭವಿಸಿ ಅತ್ತಿತ್ತ ನೋಡುತ್ತ ನಿಲ್ಲುತ್ತವೆ. ಎಲ್ಲ ಕ್ರಾಂತಿಕಾರಿಗಳ ಕಥೆಯೂ ಇದೇ. ಕ್ರಾಂತಿಕಾರಿಗಳಿಗೆ ಕ್ರಾಂತಿ ಮಾಡುವುದಷ್ಟೇ ಗೊತ್ತು. ಸಮಾಜವನ್ನು ಮುನ್ನಡೆಸುವ ಯೋಜನೆಗಳು ಅವರ ಬಳಿ ಇರುವುದಿಲ್ಲ. ಯಾವ ಕ್ರಾಂತಿಕಾರಿಗೂ ಅರ್ಥವಿಜ್ಞಾನ, ಸಮಾಜ ವಿಜ್ಞಾನ, ಮನೋವಿಜ್ಞಾನಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದಿರುವುದಿಲ್ಲ. ಜನರನ್ನು ಉತ್ತೇಜಿಸಿ ಸಾಮ್ರಾಜ್ಯಗಳನ್ನು ನಾಶಮಾಡುವುದಷ್ಟೇ ಅವರಿಗೆ ಗೊತ್ತಿರುವುದು. ಕ್ರಾಂತಿಕಾರಿಗಳು ಅದ್ಭುತವಾಗಿ ಭಾಷಣ ಮಾಡಬಲ್ಲರು, ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಜನರನ್ನು ಸೆಳೆಯಬಲ್ಲರು ಆದರೆ ಅಧಿಕಾರ ವಹಿಸಿಕೊಳ್ಳುವ ಪರಿಸ್ಥಿತಿ ಬಂದಾಗ ರಸ್ತೆಯ ನಾಯಿಗಳಂತೆ ಮುಖಭಂಗ ಅನುಭವಿಸುವರು. ಅಧಿಕಾರ ನಿರ್ವಹಣೆ ಎಂದಿಗೂ ಅವರ ಅಳವಿಗೆ ನಿಲುಕದ್ದು.

          ಆದರೆ ರಷ್ಯಾದಲ್ಲಿ ಒಂದು ಪವಾಡ ನಡೆಯಿತು. ಲೆನಿನ್ ಅದ್ಭುತವಾದ ಕ್ರಾಂತಿಕಾರಿಯಾದರೂ ಅವನಿಗೆ ಆಕರ್ಷಕ ವ್ಯಕ್ತಿತ್ವ ಇರಲಿಲ್ಲ. ಅವನು ಎಲ್ಲ ಚಟುವಟಿಕೆಗಳನ್ನೂ ಹಿಂದೆ ನಿಂತು ಬೇರೆಯವರ ಕೈಲಿ ಮಾಡಿಸುತ್ತಿದ್ದ. ಕೆಲವು ವಿಚಿತ್ರ ಕಾರಣಗಳಿಂದಾಗಿ ಅವನು ಆಳದಲ್ಲಿ ಕೀಳರಿಮೆಯ ಭಾವನೆಯನ್ನು ಅನುಭವಿಸುತ್ತಿದ್ದ. ಅವನ ದೇಹಕ್ಕೆ ಹೋಲಿಸಿದರೆ ಕಾಲುಗಳು ತುಂಬ ಚಿಕ್ಕದಾಗಿದ್ದವು. ಕುರ್ಚಿಯ ಮೇಲೆ ಕುಳಿತರೆ ಅವನ ಕಾಲುಗಳು ನೆಲವನ್ನು ಮುಟ್ಟದೆ ನೇತಾಡುತ್ತಿದ್ದವು. ಹಾಗಾಗಿ ಬೇರೆಯವರಿಗೆ ಸಲಹೆಗಳನ್ನು ನೀಡುತ್ತಿದ್ದ ಅವನು ಹೆಚ್ಚು ಅಂತರ್ಮುಖಿಯಾಗಿದ್ದ. ಅಲ್ಲದೆ ಚಿಂತಕನೂ, ಅದ್ಭುತ ಭಾಷಣಕಾರನೂ, ಕನಸುಗಾರನೂ ಆಗಿದ್ದ ಟ್ರಾಟ್‌ಸ್ಕಿ ಅವನ ಬಲಗೈನಂತಿದ್ದ. ಆ ಕಾಲಕ್ಕೆ ಜೋಸೆಫ್ ಸ್ಟಾಲಿನ್ ಪಾರ್ಟಿಯ ಸಾಮಾನ್ಯ ಕಾರ್ಯದರ್ಶಿಯಾಗಿದ್ದ. ಪಾರ್ಟಿಯ ಕಛೇರಿಯಲ್ಲಿ ಕುಳಿತು ಕಡತಗಳನ್ನು ಪರಿಶೀಲಿಸುವುದು, ಕಾಗದ ವ್ಯವಹಾರವನ್ನು ನೋಡಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡಿಕೊಂಡಿದ್ದ. ಆಗ ಅವನಿಗೊಂದು ಸಾರ್ವಜನಿಕ ವ್ಯಕ್ತಿತ್ವವೂ ಇರಲಿಲ್ಲ. ಆದರೆ ಸ್ಟಾಲಿನ್ ಮಹಾ ವ್ಯವಹಾರಸ್ಥ. ಚಿಂತನೆ, ಆಲೋಚನೆ, ತತ್ವಜ್ಞಾನಗಳು ಅವನ ಆಸಕ್ತಿಯ ವಿಷಯವೇ ಆಗಿರಲಿಲ್ಲ. ವಾಸ್ತವವನ್ನು ನೇರವಾಗಿ ನಿರ್ದಾಕ್ಷಿಣ್ಯವಾಗಿ ಎದುರಾಗುವುದು ಅವನ ಸ್ವಭಾವವಾಗಿತ್ತು.

          ಕ್ರಾಂತಿಯ ನಂತರ ಲೆನಿನ್ ಅಧಿಕಾರವನ್ನು ವಹಿಸಿಕೊಳ್ಳಬಾರದೆಂದು ಸ್ಟಾಲಿನ್ ಅವನಿಗೆ ವಿಷಪ್ರಾಶನ ಮಾಡಿಸಿದ. ನಿಧಾನಗತಿಯಲ್ಲಿ ಕೆಲಸ ಮಾಡುವ ಆ ವಿಷ ಅವನ ದೇಹದಾದ್ಯಂತ ಹರಡಿ ವಿಷಮ ಪರಿಣಾಮವನ್ನು ಉಂಟು ಮಾಡಲು ಎರಡು ವರ್ಷ ತೆಗೆದುಕೊಂಡಿತು. ಅವನಿಗೆ ಚಿಕಿತ್ಸೆ ಮಾಡಲೂ ಸ್ಟಾಲಿನ್ ತನ್ನ ಡಾಕ್ಟರುಗಳನ್ನೇ ನೇಮಿಸಿದ್ದ. ಲೆನಿನ್‌ನ ಹೆಂಡತಿ ಕ್ರುಪ್ಸ್‌ಕಾಯ ತನ್ನ ಆತ್ಮಚರಿತ್ರೆಯಲ್ಲಿ “ನನ್ನ ಗಂಡನಿಗೆ ಖಂಡಿತ ವಿಷಪ್ರಾಶನವಾಗಿತ್ತು. ಏಕೆಂದರೆ ಎರಡು ವರ್ಷಗಳ ಕಾಲ ಒಂದೇ ಸಮನೆ ನರಳಿದ ಅವನು ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಡಾಕ್ಟರನ ಚಿಕಿತ್ಸೆಯಿಂದ ಅವನ ಸ್ಥಿತಿ ಇನ್ನೂ ಬಿಗಡಾಯಿಸುತ್ತಿತ್ತು. ಡಾಕ್ಟರನ್ನು ಬದಲಾಯಿಸಲು ಕೇಳಿದರೆ ಸ್ಟಾಲಿನ್ ಒಪ್ಪುತ್ತಿರಲಿಲ್ಲ” ಎಂದು ಬರೆದಿದ್ದಾಳೆ. ಹೀಗೆ ಲೆನಿನ್ ಮತ್ತೆ ಗುಣಮುಖನಾಗದಂತೆ ಮಾಡಿದ ಸ್ಟಾಲಿನ್ ತಾನೇ ಅಧಿಕಾರವನ್ನು ವಹಿಸಿಕೊಂಡ. ಕೋಮಾ ಸ್ಥಿತಿಯಲ್ಲಿದ್ದ ಲೆನಿನ್‌ನ ಅಪ್ಪಣೆ ಎಂದು ಹೇಳಿಕೊಂಡು ಕಮನೆವ್, ಜೆನೋವ್ಯೇವ್, ಟ್ರಾಟ್‌ಸ್ಕಿ ಮೊದಲಾದ ಎಲ್ಲ ಅಧಿಕಾರಸ್ಥ ಕ್ರಾಂತಿಕಾರಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿಸಿದ. ಕ್ರಾಂತಿಯ ನಂತರ ಟ್ರಾಟ್‌ಸ್ಕಿ ರಕ್ಷಣಾ ಸಚಿವನಾಗಿದ್ದ. ಒಂಬತ್ತು ಜನ ಕ್ರಾಂತಿಕಾರಿಗಳಲ್ಲಿ ಎಂಟು ಜನ ಪತ್ತೆಯೇ ಆಗದಂತೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ರಕ್ಷಣಾ ಸಚಿವನಾಗಿದ್ದ ಟ್ರಾಟ್‌ಸ್ಕಿ ಕೈಲಿ ಸೋವಿಯತ್ ಒಕ್ಕೂಟದ ಸಮಸ್ತ ಮಿಲಿಟರಿ ಅಧಿಕಾರವೇ ಇತ್ತಾದರೂ ಕ್ರಾಂತಿಕಾರಿಯಾಗಿದ್ದ ಅವನಿಗೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯದೆ ತಲೆಮರೆಸಿಕೊಂಡು ಓಡಿಹೋದ. ಇಂಥವರನ್ನು ಎಂದೂ ಉದಾಸೀನ ಮಾಡಬಾರದು ಎಂದು ಚೆನ್ನಾಗಿ ತಿಳಿದಿದ್ದ ಸ್ಟಾಲಿನ್ ಅವನನ್ನು ಬೆನ್ನಟ್ಟಿ ಕೊಲ್ಲಿಸಿದ. ತಲೆಮರೆಸಿಕೊಂಡಿದ್ದ ಟ್ರಾಟ್‌ಸ್ಕಿ ಜೋಸೆಫ್ ಸ್ಟಾಲಿನ್‌ನ ಪ್ರತಿಯೊಂದು ಅಪರಾಧವನ್ನೂ ಬಯಲು ಮಾಡಲೆಂದು ಮೆಕ್ಸಿಕೋದಲ್ಲಿ ಕುಳಿತು ತನ್ನ ಜೀವನ ಚರಿತ್ರೆ ಬರೆಯುತ್ತಿದ್ದನಂತೆ. ಕೊನೆಯ ಪುಟವನ್ನು ಬರೆದು ಮುಗಿಸುತ್ತಿದ್ದಾಗ ಹಿಂಬದಿಯಿಂದ ಅವನ ತಲೆಗೆ ಬಲವಾದ ಕೊಡಲಿ ಪೆಟ್ಟು ಬಿದ್ದಿತಂತೆ. ಒಂದೇ ಸಲಕ್ಕೆ ತಲೆ ಎರಡು ಹೋಳಾಗಿ ಕೊನೆಯ ಪುಟವೂ ರಕ್ತಸಿಕ್ತವಾದವು. ಹೀಗೆ ಉಳ್ಳವರ-ಇಲ್ಲದವರ ನಡುವೆ ಘರ್ಷಣೆಯೇ ನಡೆಯದೆ ಒಂದು ಚಿಕ್ಕ ಸೈನಿಕ ದಂಗೆಯ ಕಾರಣದಿಂದ ರಷ್ಯಾದಲ್ಲಿ ಆಕಸ್ಮಿಕವಾಗಿ ಕಮ್ಯುನಿಸಂ ಸ್ಥಾಪನೆಯಾಗಿಬಿಟ್ಟಿತು. ಕಾರ್ಲ್‌ಮಾರ್ಕ್ಸ್‌ನ ಆರ್ಥಿಕ ವಿಶ್ಲೇಷಣೆಗೂ, ರಷ್ಯಾದ ಈ ಬೆಳವಣಿಗೆಗಳಿಗೂ ಅರ್ಥಾರ್ಥ ಸಂಬಂಧ ಇರಲಿಲ್ಲ. ಒಟ್ಟಿನಲ್ಲಿ ಕಾರಣವೇನೇ ಇರಲಿ ರಷ್ಯಾ ಜಗತ್ತಿನ ಮೊದಲ ಕಮ್ಯುನಿಸ್ಟ್ ದೇಶವಾಯಿತು, ಜಗತ್ತಿನ ಏಕಮೇವ ಭರವಸೆಯಾಯಿತು.

          ಮೇಲ್ನೋಟಕ್ಕೆ ಸ್ಟಾಲಿನ್ ಮಹಾ ಕ್ರೂರಿಯಂತೆ ಕಾಣಿಸಬಹುದು. ಆದರೆ ದೇಶದಲ್ಲಿ ಎರಡು ಕಡೆಗಳಿಂದ ತಲೆ ಎತ್ತುತ್ತಿದ್ದ ಶತ್ರುಗಳನ್ನು ಸದೆಬಡಿಯಬೇಕಾಗಿತ್ತು. ಒಂದೆಡೆ ಖಾಸಗೀ ಆಸ್ತಿಯನ್ನು ಬಿಟ್ಟುಕೊಡಲು ಪ್ರತಿರೋಧಿಸುತ್ತಿದ್ದ, ಸಾಮಾಜಿಕ ನ್ಯಾಯಕ್ಕಾಗಿ ಎಂದೂ ರಾಜಿ ಮಾಡಿಕೊಳ್ಳದ ಚರ್ಚಿನ ಪಾದ್ರಿಗಳು, ಶ್ರೀಮಂತರು ಹಾಗು ಬುದ್ಧಿಜೀವಿಗಳಿದ್ದರು. ಅಂತಹ ೧೦ ಲಕ್ಷ ಜನರನ್ನು ಸ್ಟಾಲಿನ್ ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಿದ. ಸೋವಿಯತ್ ಒಕ್ಕೂಟದಲ್ಲಿ ಕಮ್ಯುನಿಸಂ ಕೊಲೆ, ಹಿಂಸೆ, ಹತ್ಯಾಕಾಂಡಗಳ ಮೇಲೆ ನಿಂತಿದ್ದಿತಾದರೂ ಸ್ಟಾಲಿನ್ ಇಲ್ಲದೇ ಹೋಗಿದ್ದರೆ ಅಲ್ಲಿ ಕಮ್ಯುನಿಸಂ ಸ್ಥಾಪನೆ ಆಗುತ್ತಿರಲಿಲ್ಲ. ಮೊದಲು ಈ ಆಂತರಿಕ ಶತ್ರುಗಳನ್ನು ಇಲ್ಲವಾಗಿಸಿದ ಸ್ಟಾಲಿನ್ ಬಳಿಕ ಸೋವಿಯತ್ ಒಕ್ಕೂಟದ ಸುತ್ತ ಒಂದು ಕಬ್ಬಿಣದ ಗೋಡೆಯನ್ನು ಕಟ್ಟಿದ. ಏಕೆಂದರೆ ಇಡೀ ಜಗತ್ತು ಕಮ್ಯುನಿಸಂನ್ನು ವಿರೋಧಿಸುತ್ತಿತ್ತು. ರಷ್ಯಾದಲ್ಲಿ ಕಮ್ಯುನಿಸಂ ಸ್ಥಾಪನೆಯಾದರೆ ಜಗತ್ತಿನ ಎಲ್ಲ ಮೂಲೆಗೂ ಅದು ಸುಲಭವಾಗಿ ಹರಡಬಲ್ಲದು ಎಂದು ಎಲ್ಲ ಬಂಡವಾಳ ಶಾಹಿ ದೇಶಗಳಿಗೂ ಹೆದರಿಕೆಯಾಗಿತ್ತು.

          “ತೊಂಬತ್ತೊಂಬತ್ತು ಅಪರಾಧಿಗಳು ತಪ್ಪಿಸಿಕೊಂಡರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎಂಬ ಪ್ರಸಿದ್ಧ ವಾಕ್ಯ ಎಲ್ಲ ಬಂಡವಾಳಶಾಹೀ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿವೆ. ಆದರೆ “ನೂರು ಜನ ನಿರಪರಾಧಿಗಳ ಹತ್ಯೆಯಾದರೂ ಚಿಂತೆಯಿಲ್ಲ ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳಬಾರದು” ಎಂಬುದು ಸ್ಟಾಲಿನ್ ಆಡಳಿತದ ಸೂತ್ರವಾಕ್ಯವಾಗಿತ್ತು. ಯಾವುದೇ ಕೋರ್ಟಿನ ವಿಚಾರಣೆ ನಡೆಸದೆ ಅನುಮಾನದ ಆಧಾರದ ಮೇಲೆ ಅಲ್ಲಿ ಸಾವಿರಾರು ಮಂದಿ ನಿಗೂಢವಾಗಿ ಹತ್ಯೆಯಾಗಿಹೋದರು. ಮುಂದೆ ಸ್ಟಾಲಿನ್‌ನ ಕ್ರೌರ್ಯವನ್ನು ಅವನ ನಂತರ ಅಧಿಕಾರಕ್ಕೆ ಬಂದ ಉತ್ತರಾಧಿಕಾರಿಗಳು ಟೀಕಿಸಲಾರಂಭಿಸಿದರು. ಸ್ಟಾಲಿನ್‌ನ ಪಾತಕಗಳ ನೆರವಿಲ್ಲದೆ ತಾವು ಅಧಿಕಾರ ವಹಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಅವರು ಮರೆತಿದ್ದರು. ಕ್ರೆಮ್‌ಲೀನ್‌ನ ಕೆಂಪು ಚೌಕದಲ್ಲಿ ಲೆನಿನ್ ಸಮಾಧಿಯ ಮಗ್ಗುಲಲ್ಲಿ ಅವನ ಸಮಾಧಿ ಮಾಡಿದಾಗ ಅವನ ಹಿಂಬಾಲಕರೇ ರಾತ್ರೋರಾತ್ರಿ ಅವನ ಶವವನ್ನು ಅಲ್ಲಿಂದ ಹೊರತೆಗೆದು ಅದನ್ನು ಅವನ ಹುಟ್ಟೂರಾದ ಕಾಕಸಸ್‌ನ ಕುಗ್ರಾಮಕ್ಕೆ ಸಾಗಿಸಿದರಂತೆ.

          ಸ್ಟಾಲಿನ್‌ನ ನಂತರ ಅಧಿಕಾರ ವಹಿಸಿಕೊಂಡ ಕ್ರುಶೆವ್ ತನ್ನ ಮೊದಲ ಭಾಷಣದಲ್ಲಿ “ಸ್ಟಾಲಿನ್ ಮನುಷ್ಯ ಇತಿಹಾಸ ಕಂಡಿರುವ ಅತಿ ದೊಡ್ಡ ಕೊಲೆಪಾತಕಿ” ಎಂದಿದ್ದ. ಇದರರ್ಥ ಅವನಿಗೆ ಕಮ್ಯುನಿಸಂಗಿಂತ ಸ್ಟಾಲಿನ್‌ನ ಕೊಲೆಗಳೇ ದೊಡ್ಡದಾಗಿ ಕಾಣಿಸಿತ್ತು. ಸ್ಟಾಲಿನ್ ಮನುಷ್ಯಜಾತಿಯ ಬಹುದೊಡ್ಡ ಪ್ರಯೋಗವನ್ನು ರಕ್ಷಿಸಲು ಪ್ರಯತ್ನಿಸಿದ್ದನೇ ವಿನಃ ವೈಯಕ್ತಿಕ ದ್ವೇಷದಿಂದ ಯಾವ ಕೊಲೆಗಳನ್ನೂ ಮಾಡಿರಲಿಲ್ಲ. ಅವನು ಮಾಡಿದ್ದು ತಪ್ಪು ನಿಜ. ಆದರೆ ಆ ಪ್ರಯೋಗವನ್ನು ರಕ್ಷಿಸಲು ಇಂತಹ ಕ್ರೂರ ವಿಧಾನವನ್ನು ಕೈಗೊಳ್ಳದೆ ಅವನೆದುರಿಗೆ ಬೇರೆ ದಾರಿ ಇರಲಿಲ್ಲ. ಒಂದು ವೇಳೆ ಅವನು ಹಾಗೆ ಕಠಿಣನಾಗದೆ ಹೋಗಿದ್ದರೆ ಸುತ್ತಲೂ ಹದ್ದುಗಳಂತೆ ಕಾದು ಕೂತಿದ್ದ ಬಂಡವಾಳಶಾಹಿಗಳು ಕೂಡಲೆ ಸೋವಿಯತ್ ಯೂನಿಯನ್ನಿನ ಮೇಲೆ ದಾಳಿ ಮಾಡುತ್ತಿದ್ದವು. ಆ ಸಭೆಯಲ್ಲಿ ಕ್ರುಶೆವ್ ಸ್ಟಾಲಿನ್‌ನನ್ನು ಒಂದೇ ಸಮನೆ ಟೀಕಿಸುತ್ತಿದ್ದಾಗ ಹಿಂದಿನ ಸಾಲಿನ ಒಬ್ಬ ವ್ಯಕ್ತಿ “ಜೀವಮಾನವಿಡೀ ನೀನು ಅವನ ಜೊತೆಯಲ್ಲೇ ಇದ್ದೆ. ಈ ಮಾತುಗಳನ್ನು ಮೊದಲೇ ಏಕೆ ಹೇಳಲಿಲ್ಲ?” ಎಂದು ಕೇಳಿದಾಗ ಇಡೀ ಸಭೆ ನಿಶ್ಯಬ್ದವಾಯಿತು. ಆಗ ಕ್ರುಶೆವ್ “ಕಾಮ್ರೇಡ್, ಯಾರು ಹಾಗಂದದ್ದು, ಸ್ವಲ್ಪ ಮುಂದೆ ಬನ್ನಿ” ಎಂದು ಕರೆದಾಗ ಯಾರೂ ಎದ್ದು ಮುಂದೆ ಬರಲಿಲ್ಲ. ಆಗ ಕ್ರುಶೆವ್ “ನಾನೇಕೆ ಸುಮ್ಮನಿದ್ದೆ ಎಂದು ಈಗ ನಿಮಗೆ ಅರ್ಥವಾಗಿರಬೇಕು. ನಿಮಗೆ ಹೇಗೆ ಸಾಯಲು ಇಷ್ಟವಿಲ್ಲವೋ ಹಾಗೆಯೇ ನನಗೂ ಕೊಲೆಯಾಗಿ ಹೋಗುವುದು ಇಷ್ಟವಿರಲಿಲ್ಲ. ಅವನ ಆಡಳಿತದಲ್ಲಿ ಗೋಡೆಗಳಿಗೂ ಕಿವಿಗಳಿದ್ದವು” ಎಂದಿದ್ದ.

ಹೀಗೆ ಒಂದು ಸಣ್ಣ ಫ್ಯೂಡಲ್ ಸಂಸ್ಥಾನವಾಗಿದ್ದ ಸೋವಿಯತ್ ಒಕ್ಕೂಟವನ್ನು ಸ್ಟಾಲಿನ್ ಜಗತ್ತಿನ ಅತ್ಯಂತ ಶಕ್ತಿಶಾಲಿ ಬಣವನ್ನಾಗಿ ಮಾಡಿದ. ಇಂದು ಇಷ್ಟೆಲ್ಲ ಶ್ರಮ, ತ್ಯಾಗ, ಬಲಿದಾನಗಳಿಂದ ಸ್ಥಾಪನೆಯಾದ ಕಮ್ಯುನಿಸಂ ಅಮೆರಿಕಾದ ಮಾತುಗಳನ್ನು ನಂಬಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾಶವಾಗುತ್ತಿದೆ. ಸೋವಿಯತ್ ಒಕ್ಕೂಟ ಮನುಕುಲದ ಏಕಮೇವ ಭರವಸೆಯಾಗಿದೆ. ಅದನ್ನು ನಾಶಮಾಡಿದ ಅಪಕೀರ್ತಿ ಗೋರ್ಬಚೀವ್‌ಗೆ ಬಾರದಿರಲಿ. ಸೋವಿಯತ್ ಒಕ್ಕೂಟದ ಬಾಗಿಲುಗಳನ್ನು ತೆರೆದರೆ ಬಂಡವಾಳಶಾಹೀ ದೇಶಗಳ ಪತ್ರಕರ್ತರು ಅವರನ್ನು ಹಾಡಿ ಹೊಗಳಲಿವೆ. ಅವರನ್ನು ಬಹುದೊಡ್ಡ ನಾಯಕನಂತೆ ಬಿಂಬಿಸಲಿವೆ. ರಷ್ಯಾದಲ್ಲಿ ನಡೆದದ್ದು ಅತ್ಯಂತ ವೈಜ್ಞಾನಿಕ ಪ್ರಯೋಗ. ಈ ಪ್ರಯೋಗ ಇನ್ನೂ ಅರ್ಧವಷ್ಟೇ ಮುಗಿದಿದೆ. ಇದಕ್ಕಾಗಿ ಅದೆಷ್ಟೋ ಬಲಿದಾನಗಳಾಗಿವೆ. ಸೋವಿಯತ್ ಒಕ್ಕೂಟ ಕಮ್ಯುನಿಸಂನ್ನು ಒಪ್ಪಿಕೊಡು ಎಷ್ಟು ಬಾಧೆ ಅನುಭವಿಸಿದೆ, ಎಷ್ಟೊಂದು ಅಪಾಯಕರ ಸನ್ನಿವೇಶಗಳನ್ನು ಎದುರಿಸಿದೆ ಎಂದು ನಾನು ಬಲ್ಲೆ. ತತ್ಫಲವಾಗಿ ಈಗ ಅದು ಜಗತ್ತಿನ ಶಕ್ತಿಶಾಲೀ ರಾಷ್ಟ್ರವಾಗಿ ತಲೆಯೆತ್ತಿದೆ. ಆದ್ದರಿಂದ ಈಗ ಬಾಗಿಲುಗಳನ್ನು ತೆರೆಯುವುದು ತುಂಬ ಅಪಾಯಕರ ಎಂದು ಒಬ್ಬ ಸ್ನೇಹಿತನಾಗಿ ನಾನು ಹೇಳುತ್ತೇನೆ. ಗೋರ್ಬಚೀವ್‌ರ ವಿಶ್ವಶಾಂತಿಯ ಪ್ರಯತ್ನ ಒಳ್ಳೆಯದೇ. ಇಷ್ಟರಲ್ಲೇ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿಯೂ ಸಿಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದೇನೆ. ಏಕೆಂದರೆ ನೋಬೆಲ್ ಪ್ರಶಸ್ತಿಯು ರಷ್ಯಾವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಬಂಡವಾಳಶಾಹೀ ದೇಶಗಳ ತಂತ್ರವಾಗಿದೆ. (ಈ ಭವಿಷ್ಯವಾಣಿಯೇ ನಿಜವಾಯಿತು ಎಂಬಂತೆ ಹೀಗೆ ಹೇಳಿದ ಮರುವರ್ಷವೇ (೧೯೯೦) ಅವರಿಗೆ ನೋಬೆಲ್ ಸಂದಿತು - ಅನುವಾದಕ) ಇಂದು ಗೋರ್ಬಚೀವ್‌ರನ್ನು ದೊಡ್ಡ ನಾಯಕನಂತೆ ಬಿಂಬಿಸಲು ಅಮೆರಿಕಾ ಜಗತ್ತಿನ ಎಲ್ಲ ಮಾಧ್ಯಮಗಳ ಮೇಲೆಯೂ ಒತ್ತಡ ಹೇರುತ್ತಿದೆಯಂತೆ. ಅವರನ್ನು ಹೀರೋನಂತೆ ಬಿಂಬಿಸುವ ಮೂಲಕ ಅಮೆರಿಕಾ ತನ್ನ ಹಲವು ಉದ್ದೇಶಗಳನ್ನು ನೆರವೇರಿಸಿಕೊಳ್ಳಲಿದೆ. ಸೋವಿಯತ್ ಒಕ್ಕೂಟದ ಬಜೆಟ್‌ನಲ್ಲಿ ಮಿಲಿಟರಿಗೆ ಮೀಸಲಿರಿಸಿದ್ದ ಹಣದಲ್ಲಿ ಶೇ.೪೦ ರಷ್ಟು ಹಣವನ್ನು ಈಗಾಗಲೇ ನಿಲ್ಲಿಸಲಾಗಿದೆ. ೨ ವರ್ಷಗಳಿಂದ ಅಲ್ಲಿ ಯಾವ ಅಣುಸಂಶೋಧನೆಯೂ ನಡೆಯುತ್ತಿಲ್ಲ. ಗೋರ್ಬಚೀವ್ ಸರ್ವಾಧಿಕಾರವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡಿದರೆಂದು ಪ್ರಚಾರ ಮಾಡಿ ಕಮ್ಯುನಿಸಂನ್ನು ವ್ಯವಸ್ಥಿತವಾಗಿ ನಾಶ ಮಾಡುವ ಹೊಂಚು ನಡೆದಿದೆ.

           ಇತ್ತೀಚೆಗೆ ಬಂದ ಸುದ್ದಿ: ಸೋವಿಯತ್‌ನ ಕೆಲವು ರಾಜ್ಯಗಳು ಪ್ರತ್ಯೇಕತೆಯ ದನಿ ಎತ್ತಿವೆಯಂತೆ. ಪ್ರಯೋಗಾರ್ಥವಾಗಿ ಅಲ್ಲಿ ಚುನಾವಣೆಯನ್ನೂ ನಡೆಸಲಾಗಿದ್ದು ಅಲ್ಲಿ ಪ್ರತ್ಯೇಕತೆಯ ಕೂಗನ್ನೆಬ್ಬಿಸಿದ ರಾಜಕೀಯ ಪಕ್ಷ ಬಹುಮತದಿಂದ ಗೆದ್ದು ಕಾರ್ಮಿಕ ಪಕ್ಷ ಸೋತಿದೆಯಂತೆ. ಪ್ರತ್ಯೇಕತೆಯ ಹೆಸರಿನಲ್ಲಿ ಅಲ್ಲಿ ಇನ್ನು ಮುಂದೆ ರಾಷ್ಟ್ರೀಯತೆ ತಲೆ ಎತ್ತಲಿದೆ. ಇನ್ನು ಅಲ್ಲಿನ ಮುಸ್ಲಿಮರು ತಮಗೂ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆಯನ್ನು ಮುಂದಿಡುತ್ತಾರೆ. ಒಂದು ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಇದೆಲ್ಲ ಸರಿಪಡಿಸಲಾಗದ ರೋಗಗಳು. ಈ ಎಲ್ಲ ಅಪಾಯಗಳನ್ನು ಮನಗಾಣದೇ ಗೋರ್ಬಚೀವ್ ದುಡುಕುತ್ತಿದ್ದಾರೆ. ಎಪ್ಪತ್ತು ವರ್ಷಗಳ ಒಂದು ದೊಡ್ಡ ಪ್ರಯೋಗವನ್ನು ಅವರು ಮಣ್ಣುಗೂಡಿಸಲು ಹೊರಟಿದ್ದಾರೆ. ಈಗ ಸೋವಿಯತ್ ಒಕ್ಕೂಟ ನಾಶವಾದರೆ ಜಗತ್ತಿನ ಇತರ ಸಣ್ಣ ಪುಟ್ಟ ಕಮ್ಯುನಿಸ್ಟ್ ದೇಶಗಳು ಖಂಡಿತ ಉಳಿಯಲಾರವು. ಗೋರ್ಬಚೀವ್ ಮಹಾ ದಾರ್ಶನಿಕನಂತೆ ಕಾಣಿಸಿದರೂ ಅವರು ಸ್ವಲ್ಪವೂ ವ್ಯವಹಾರಸ್ಥನಂತೆ ವರ್ತಿಸುತ್ತಿಲ್ಲ.

“ಹೇಗಿದ್ದರೂ ಜನ ಇಂದಲ್ಲ ನಾಳೆ ಸಾಯುತ್ತಾರೆ. ಕಮ್ಯುನಿಸಂನ್ನು ರಕ್ಷಿಸಲು ಸಾವಿರಾರು ಜನ ಸತ್ತರೇನಂತೆ” ಎಂಬ ನಿಮ್ಮ ಮಾತುಗಳನ್ನು ಕೇಳಿ ಆಘಾತವಾಯಿತು.

          ನಿಮಗಷ್ಟೇ ಅಲ್ಲ, ಇಲ್ಲಿ ತುಂಬ ಜನರಿಗೆ ಆ ಮಾತುಗಳಿಂದ ಆಘಾತವಾಗಿದೆ. ಕೆಲವು ಪ್ರಗತಿಪರರೆನಿಸಿಕೊಂಡ ಇಟಾಲಿಯನ್ನರಿಗೂ ಆಘಾತವಾಯಿತು. ಸ್ಟಾಲಿನ್ ಕಮ್ಯುನಿಸಂನ್ನು ಕಾಪಾಡಲು ೧೦ ಲಕ್ಷ ಜನರನ್ನು ಕೊಂದ ಎಂಬ ಮಾತು ತುಂಬ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಯಾರು ಈ ಹತ್ತುಲಕ್ಷ ಜನ? ಅವರಲ್ಲಿ ಬಹುಪಾಲು ಮಂದಿ ಚರ್ಚಿನ ಸ್ವತ್ತನ್ನು ಸಮಾಜಕ್ಕೆ ಬಿಟ್ಟುಕೊಡಲು ನಿರಾಕರಿಸಿದ ಪಾದ್ರಿಗಳು, ಬಿಷಪ್‌ಗಳು, ಕಾರ್ಡಿನಲ್‌ಗಳೇ ಆಗಿದ್ದರು. ಇವರೆಲ್ಲ ಜನರನ್ನು ಕ್ರಾಂತಿಯ ವಿರುದ್ಧ ಪ್ರಚೋದಿಸುತ್ತಿದ್ದರು. ಕ್ರಾಂತಿ ಸೋವಿಯತ್‌ನಲ್ಲಿ ಸಂಭವಿಸಿತಾದರೂ ಕಮ್ಯುನಿಸಂ ರಾಷ್ಟ್ರೀಯತೆಯ ಸೋಂಕನ್ನೇ ಹೊಂದಿರದ ಒಂದು ಅಂತರ ರಾಷ್ಟ್ರೀಯ ಪರಿಕಲ್ಪನೆಯಾಗಿದೆ. ಕೆಲವು ಸಲ ನಮಗುಂಟಾಗುವ ಕೆಲವು ಆಘಾತಗಳಿಗೆ ನಮ್ಮ ಪೂರ್ವಗ್ರಹಗಳೂ ಕಾರಣವಾಗಿರುತ್ತವೆ. ಹಿಟ್ಲರ್, ಮುಸೋಲಿನಿ, ಹಿರೋಹಿಟೋ, ನೆಪೋಲಿಯನ್, ನಾದಿರ್‌ಷಾ ಮೊದಲಾದವರು ಕೇವಲ ಮನರಂಜನೆಗಾಗಿ ಲಕ್ಷಾಂತರ ಜನರನ್ನು ಕೊಂದರು. ಸ್ಟಾಲಿನ್ ಯಾರನ್ನೂ ಆ ರೀತಿ ಕೊಂದದ್ದಲ್ಲ. ಕ್ರಾಂತಿಯ ಮಹತ್ವವನ್ನು ಮನವರಿಕೆ ಮಾಡಿಕೊಂಡವರನ್ನು ಅವನು ಕೊಲ್ಲುತ್ತಿರಲಿಲ್ಲ. ಒಳಗೂ ಹೊರಗೂ ಶತ್ರುಗಳು ಒಂದೇ ಸಮನೆ ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವನಿಗೆ ಕೊಲ್ಲದೆ ಬೇರೆ ವಿಧಿ ಇರಲಿಲ್ಲ. ಸೋವಿಯತ್ ಒಕ್ಕೂಟದ ಪ್ರಜೆಗಳಿಗೆ ತಮ್ಮ ಆಸ್ತಿ ತಮಗೆ ಹಾಗು ತಮ್ಮ ಕುಟುಂಬದ ಪೋಷಣೆಗೆ ಸಾಲದೆಂದು ಗೊತ್ತಿದ್ದೂ ಅದಕ್ಕೊಂದು ಸೂಕ್ತ ಪರಿಹಾರ ಒದಗಿಸಲು ಕಮ್ಯುನಿಸಂಗೆ ಆಸ್ಪದ ಕೊಡಲಿಲ್ಲ, ತಮ್ಮ ಆಸ್ತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ನಿರಾಕರಿಸಿ ಲೋಭ, ದುರಾಸೆಗಳಿಂದ ವರ್ತಿಸಿದರು. ದೋಷವಿದ್ದುದು ಕಮ್ಯುನಿಸಂನ ಸಿದ್ಧಾಂತಗಳಲ್ಲಲ್ಲ, ಜನರ ಲೋಭ ದುರಾಸೆಗಳು ದೋಷಪೂರ್ಣವಾಗಿದ್ದವು. ಕೆಲವು ಪ್ರಜೆಗಳಿಗೆ ಮನುಷ್ಯ ವಿಕಾಸದ ಒಂದು ಬಹುದೊಡ್ಡ ಪ್ರಯೋಗಕ್ಕಿಂತ ತಮ್ಮ ಚಿಲ್ಲರೆ ಆಸ್ತಿ ಪಾಸ್ತಿಗಳೇ ಮುಖ್ಯವಾಗಿದ್ದವು. ಭಿಕ್ಷುಕರು ಕೂಡ ತಮ್ಮ ಸ್ವತ್ತನ್ನು ಬಹುದೊಡ್ಡ ಸಂಪತ್ತು ಎಂದು ಭಾವಿಸಿರುತ್ತಾರೆ. ಸೋವಿಯತ್ ಎಂದರೆ ’ಒಂದು ದೊಡ್ಡ ಕುಟುಂಬ’ ಎಂದರ್ಥ. ಒಂದು ಹಳ್ಳಿಯ ಸಮಸ್ತ ವ್ಯವಸಾಯ ಭೂಮಿ ಒಗ್ಗೂಡಿ ಸೋವಿಯತ್ ಎನಿಸಿಕೊಳ್ಳಬಹುದು. ಒಂದು ಸೋವಿಯತ್‌ನಲ್ಲಿ ಪ್ರತಿಯೊಬ್ಬರೂ ತಮಗೆ ಅಗತ್ಯವಾದಷ್ಟನ್ನು ಪಡೆಯುವರೇ ವಿನಃ ಬಂಡವಾಳಶಾಹಿ ವ್ಯವಸ್ಥೆಯಂತೆ ಯಾರಿಗೂ ತಮ್ಮ ಶಕ್ತ್ಯನುಸಾರ ಹೊಂದಲಾಗುವುದಿಲ್ಲ. ಆದರೆ ಇಂದು ಗೋರ್ಬಚೀವ್ “ಸಾಮರ್ಥ್ಯಕ್ಕೆ ತಕ್ಕಂತೆ ಲಾಭ” ಎಂದು ಕರೆ ನೀಡುತ್ತಿದ್ದಾರೆ.

           ಒಂದು ವೇಳೆ ಇಟಲಿಯಂತಹ ದೇಶದಲ್ಲಿ ಕಮ್ಯುನಿಸಂ ಬಂದರೆ ಏನಾದೀತು? ವ್ಯಾಟಿಕನ್ ಬ್ಯಾಂಕಿಗೆ ಪ್ರತಿ ವರ್ಷ ಬಿಲಿಯನ್ ಗಟ್ಟಲೆ ಕಪ್ಪು ಹಣವನ್ನು, ಹೆರಾಯಿನ್ ಹಣವನ್ನು, ಬಿಳಿ ಹಣವನ್ನಾಗಿ ಪರಿವರ್ತಿಸಲು ಸಾಧ್ಯವಾಗುವುದೇ? ಪಾದ್ರಿಗಳು, ಬಿಷಪ್‌ಗಳು, ಆರ್ಚ್ ಬಿಷಪ್‌ಗಳು ತಮ್ಮ ತಮ್ಮ ಅಧಿಕಾರದಲ್ಲಿ ಮುಂದುವರೆಯಲಾಗುವುದೇ? ಹಾಗಾಗಲು ಆ ಪಾದ್ರಿಗಳು ಬಿಡುವರೇ? ಅಂಥವರನ್ನು ಸಮುದ್ರಕ್ಕೆ ಎಸೆಯದೇ ಬೇರೆ ಮತ್ತೇನು ಮಾಡಬೇಕು? ಪರಾವಲಂಬಿ ಹುಳುಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡಲಾಗುವುದಿಲ್ಲ. ಪರೋಪಜೀವಿಗಳನ್ನು ಧ್ವಂಸ ಮಾಡುವುದೇ ಎಲ್ಲ ಕ್ರಾಂತಿಯ ಉದ್ದೇಶ. ಇಂದು ಜಗತ್ತಿನಾದ್ಯಂತ ಆರು ನೂರು ಮಿಲಿಯನ್ ಕ್ಯಾಥೋಲಿಕ್‌ರಿದ್ದಾರೆ. ಪೋಪ್‌ನ ವಿರುದ್ಧ ಏನೇ ಕ್ರಮ ಕೈಗೊಂಡರೂ ಈ ಆರುನೂರು ಮಿಲಿಯನ್ ಜನಸಂಖ್ಯೆ ಜಗತ್ತಿನಾದ್ಯಂತ ಪ್ರತಿಯೊಂದು ಸರಕಾರದ ಮೇಲೂ ಒತ್ತಡ ತರುತ್ತದೆ. ರಷ್ಯಾದಲ್ಲೂ ಇಂಥದೇ ಪರಿಸ್ಥಿತಿ ಉಂಟಾಗಿತ್ತು. ಸ್ಟಾಲಿನ್ ಅಧಿಕಾರ ವಹಿಸಿಕೊಂಡ ಮೇಲೆ ಜಗತ್ತಿನ ಎಲ್ಲ ದೇಶಗಳೂ ಸೋವಿಯತ್ ಒಕ್ಕೂಟಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು, ತಮ್ಮ ರಾಯಭಾರಿಗಳನ್ನು ರಷ್ಯಾದಿಂದ ಹಿಂದಕ್ಕೆ ಕರೆಸಿಕೊಂಡವು. ರಷ್ಯಾಗೂ ಹೊರಜಗತ್ತಿಗೂ ಸಂಪರ್ಕವೇ ಇಲ್ಲದಂತಾಗಿ ಇಡೀ ಜಗತ್ತೇ ರಷ್ಯಾಗೆ ಬಹಿಷ್ಕಾರ ಹಾಕಿತು. ಜಗತ್ತಿಗೆ ಅಮೆರಿಕಾ ಹೇಳುವ ಕಥೆ ಮಾತ್ರ ಗೊತ್ತಿದೆ. ನಿಜವೇನೆಂದರೆ ರಷ್ಯಾವನ್ನು ಕಬ್ಬಿಣದ ಪರದೆಯಿಂದ ಮುಚ್ಚಿದುದು ಸ್ಟಾಲಿನ್ ಅಲ್ಲ. ಜಗತ್ತಿನ ಎಲ್ಲ ಕ್ಯಾಥೋಲಿಕ್ ದೇಶಗಳೂ ರಷ್ಯಾವನ್ನು ದೂರ ತಳ್ಳಿದ್ದರಿಂದ ಸ್ಟಾಲಿನ್ ತನ್ನ ದೇಶದೊಳಗೆ ಯಾವ ಪತ್ತೆದಾರಿಯೂ ನುಸುಳದಂತೆ ಎಚ್ಚರಿಕೆ ವಹಿಸಬೇಕಾಯಿತು. ರಷ್ಯಾದ ಪ್ರಜೆಗಳನ್ನು ಕಮ್ಯುನಿಸಂ ವಿರುದ್ಧ ಎತ್ತಿಕಟ್ಟಲು ಎಲ್ಲ ತರಹದ ಏಜೆಂಟರುಗಳೂ ರಷ್ಯಾದಲ್ಲಿ ಸಂಚು ಮಾಡುತ್ತಿದ್ದರು. ಜನರೂ ಇಂಥದೊಂದು ಪ್ರಚೋದನೆಗೆ ಸದಾ ಸಿದ್ಧರಿದ್ದರು. ಕ್ರಿಶ್ಚಿಯಾನಿಟಿಯ ಎಲ್ಲ ಪಂಗಡಗಳೂ, ರಷ್ಯಾದಲ್ಲಿದ್ದ ಎಲ್ಲ ಧರ್ಮಗಳೂ - ಪ್ರಧಾನವಾಗಿ ಆಫ್ಘಾನಿಸ್ಥಾನ್ ಗಡಿಭಾಗದಲ್ಲಿ ಇಸ್ಲಾಂ, ಮಂಗೋಲಿಯಾ ಆಸುಪಾಸಿನಲ್ಲಿ ಬೌದ್ಧಧರ್ಮ ಹಾಗು ವ್ಯಾಪಕವಾಗಿ ಕ್ರಿಶ್ಚಿಯಾನಿಟಿ - ಕಮ್ಯುನಿಸ್ಂನ ವಿರುದ್ಧ ಒಂದಾದವು. ರಷ್ಯಾದ ಪ್ರತಿಯೊಬ್ಬ ಪ್ರಜೆಯೂ ಈ ಮೂರರಲ್ಲಿ ಒಂದಲ್ಲ ಒಂದು ಧರ್ಮಕ್ಕೆ ಸೇರಿದವನಾಗಿದ್ದ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಕಮ್ಯುನಿಸ್ಟ್ ಪಾರ್ಟಿಯಲ್ಲಿ ಸ್ಟಾಲಿನ್ ಅಲ್ಲದೆ ಮತ್ತಾರಿಂದಲೂ ಆಗುತ್ತಿರಲಿಲ್ಲ. ಕಮ್ಯುನಿಸಂನ್ನು ಕಾಪಾಡುವ ಹೊಣೆಹೊತ್ತ ಆತ ಜಗತ್ತಿನ ಎಲ್ಲರ ಶಾಪಕ್ಕೆ ಗುರಿಯಾದ.

          ಸೈನಿಕರು ಜಾರ್ ಆಡಳಿತವನ್ನು ಧ್ವಂಸಗೊಳಿಸಿದ ಮೇಲೆ ಇಡೀ ದೇಶ ಅತಂತ್ರವಾಯಿತು. ಯಾವ ರೈಲು ಎಲ್ಲಿ ಅಪಘಾತಕ್ಕೀಡಾಗುವುದೋ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಎಲ್ಲೆಡೆ ರೈಲ್ವೇ ಹಳಿಗಳನ್ನು ನಾಶ ಮಾಡಿದ್ದರು, ಸೇತುವೆಗಳನ್ನು ಬೀಳಿಸಿದ್ದರು, ಚಲಿಸುವ ರೈಲಿಗೆ, ಜಾರ್‌ಗಳ ಅರಮನೆಗಳಿಗೆ ಬೆಂಕಿ ಇಡುತ್ತಿದ್ದರು. ಇಂಥ ಜನರಿಗಾಗಿಯೇ ಅಲ್ಲಿ ಕಮ್ಯುನಿಸಂನ್ನು ತರಲಾದದ್ದು. ಕಮ್ಯುನಿಸ್ಟ್ ಪಾರ್ಟಿ “ಜಾರ್‌ಗಳು ಸತ್ತು ಹೋದರು, ಇನ್ನು ಮುಂದೆ ಪ್ರತಿಯೊಂದು ಸ್ವತ್ತೂ ನಿಮಗೆ ಸೇರಿದ್ದು, ಸಾರ್ವಜನಿಕ ಸ್ವತ್ತನ್ನು ಹಾಳು ಮಾಡಬೇಡಿ” ಎಂದು ಕೂಗಿ ಹೇಳುತ್ತಿದ್ದರೂ, ಅವರಿಗೆ ಕೇಳಿಸುತ್ತಿರಲಿಲ್ಲ. ಜಾರ್‌ಗಳನ್ನು ಕೊಂದ ಮೇಲೆ ಅಲ್ಲಿನ ಪ್ರಜೆಗಳು ಅರಮನೆಯ ಪ್ರತಿಯೊಂದು ಪದಾರ್ಥವನ್ನೂ ಲೂಟಿ ಮಾಡಿದರಂತೆ. ಜಾರ್ ಅರಮನೆ ಜಗತ್ತಿನ ಅತ್ಯಂತ ಬೃಹತ್ತಾದ, ಪ್ರಾಚೀನವಾದ ಅರಮನೆಗಳಲ್ಲೊಂದು. ಜನ ದೊಡ್ಡ ದೊಡ್ಡ ಕಾರ್ಪೆಟ್‌ಗಳನ್ನು ಹೊರಲಾರದೆ ತಮ್ಮ ಮನೆಗಳಿಗೆ ಸಾಕಾಗುವಷ್ಟು ಅವನ್ನು ತುಂಡು ಮಾಡಿ ಹೊತ್ತುಕೊಂಡು ಹೋಗುತ್ತಿದ್ದರಂತೆ. ಅದು ನಿಮಗೇ ಸೇರಿದ್ದು ಎಂದು ಅವರಿಗೆ ಮನವರಿಕೆ ಮಾಡಿಸುವಷ್ಟು ಸಮಯ ಪಾರ್ಟಿಗೂ ಇರಲಿಲ್ಲ, ಮನವರಿಕೆ ಮಾಡಿಕೊಳ್ಳುವ ವ್ಯವಧಾನ ಪ್ರಜೆಗಳಿಗೂ ಇರಲಿಲ್ಲ. ಇಂಥ ಜನರನ್ನು ಸ್ಟಾಲಿನ್ ಅಲ್ಲದೆ ಲೆನಿನ್‌ಗಾಗಲಿ ಟ್ರಾಟ್‌ಸ್ಕಿಗಾಗಲಿ ನಿಭಾಯಿಸಲಾಗುತ್ತಿರಲಿಲ್ಲ. ದಿಕ್ಕೆಟ್ಟ ಜನರ ಗುಂಪಿಗೆ ಯಾವ ಶತ್ರುವೂ ಇರುವುದಿಲ್ಲ, ಆ ಗುಂಪಿಗೆ ಗುಂಪೇ ಶತ್ರುವಾಗಿ ಪರಿಣಮಿಸುತ್ತದೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಸ್ಟಾಲಿನ್ ಎಲ್ಲ ವಿಧ್ವಂಸಕರನ್ನೂ ಗುಂಡಿಟ್ಟುಕೊಂದ. ಒಬ್ಬ ಸತ್ತರೆ ನೂರು ಜನ ಸುಮ್ಮನಾಗುತ್ತಾರೆ. ಇಪ್ಪತ್ತು ಮಿಲಿಯನ್ ಜನಗಳ ಸದ್ದಡಗಿಸಲು ಅವನಿಗೆ ಒಂದು ಮಿಲಿಯನ್ ಜನರನ್ನು ಕೊಲ್ಲಬೇಕಾಯಿತು.

          ಇಂದು ಸೋವಿಯತ್ ಪ್ರಜೆಗಳಿಗೂ ತಮ್ಮ ಬಾಗಿಲುಗಳನ್ನು ತೆರೆಯಲು ಪೂರ್ತಿ ಮನಸ್ಸಿಲ್ಲ ಎಂದೇ ನಾನು ಅನುಮಾನಿಸುತ್ತೇನೆ. ಹಾಗಲ್ಲದೆ ಮಾಧ್ಯಮಗಳ ಮೂಲಕ ಅಮೆರಿಕಾ ಗೋರ್ಬಚೀವ್‌ರನ್ನು ಅಷ್ಟೆಲ್ಲ ಹಾಡಿ ಹೊಗಳುವ ಪ್ರಮೇಯವೇನಿದೆ? ಮೇಲ್ನೋಟಕ್ಕೆ ಗೋರ್ಬಚೀವ್‌ರ ಪ್ರಯತ್ನಗಳು ಸರಿ ಎನಿಸಿದರೂ ಇದರ ಪರಿಣಾಮ ಒಳ್ಳೆಯದಾಗುವುದಿಲ್ಲ ಎಂದು ಮುಂದೆ ತಿಳಿಯಲಿದೆ. ಸುತ್ತ ಮುತ್ತ ಎಲ್ಲೆಡೆ ಶತ್ರುಗಳೇ ನಿಂತಿದ್ದರಿಂದ ರಷ್ಯಾಗೆ ಸರ್ವಾಧಿಕಾರ ಅನಿವಾರ್ಯವಾಗಿತ್ತು. ಅಮೆರಿಕನ್ನರು ನಮ್ಮ ಕಮ್ಯೂನನ್ನು ಹೇಗೆ ಹಿಂಸಾತ್ಮಕವಾಗಿ, ಕಾನೂನು ಬಾಹಿರವಾಗಿ, ತಮ್ಮ ಕಾನೂನಿಗೇ ಅಪಚಾರವಾಗುವಂತೆ ಮಣ್ಣುಗೂಡಿಸಿದರು ಎಂದು ನೀವೆಲ್ಲ ಬಲ್ಲಿರಿ. ಅಂದು ಕ್ರಾಂತಿಯ ನಂತರದ ರಷ್ಯಾದಲ್ಲೂ ಇಂಥದೇ ಪರಿಸ್ಥಿತಿ ಏರ್ಪಟ್ಟಿತ್ತು. ಅಂದು ಪ್ರತಿಯೊಬ್ಬರೂ ಕಮ್ಯುನಿಸಂನ್ನು ನಾಶಮಾಡಲು ಹೊಂಚು ಹಾಕುತ್ತಿದ್ದರು. ಸ್ಟಾಲಿನ್‌ನ ಕಠಿಣವಾದ ನಿಯಮಗಳು ಸೋವಿಯತ್ ಒಕ್ಕೂಟವನ್ನು ರಕ್ಷಿಸಿದವು. ಸ್ಟಾಲಿನ್ ಎಲ್ಲ ಕ್ರಿಶ್ಚಿಯನ್ ಚರ್ಚುಗಳಿಗೂ ಮುಟ್ಟುಗೋಲು ಹಾಕಿ ಅವುಗಳನ್ನು ಶಾಲೆ, ಆಸ್ಪತ್ರೆ, ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸಿದ. ರಷ್ಯಾದ ಸಾಂಪ್ರದಾಯಿಕ ಕ್ರಿಶ್ಚಿಯನ್ ಚರ್ಚುಗಳಂತೂ ವ್ಯಾಟಿಕನ್ನಿಗಿಂತ ಹಳೆಯವು. “ದುಡಿಯದವನಿಗೆ ಅನ್ನವಿಲ್ಲ, ಪೂಜೆ ಪುನಸ್ಕಾರಗಳು ನಿಮ್ಮ ಖಾಸಗಿ ವ್ಯವಹಾರಗಳು” ಎಂದು ಹೇಳಿ ಪಾದ್ರಿಗಳನ್ನು ವ್ಯವಸಾಯ ಭೂಮಿಗಳಲ್ಲಿ ದುಡಿಯಲು ಹಚ್ಚಿದ. ಇದೆಲ್ಲ ಒಂದು ಸರ್ವಾಧಿಕಾರೀ ಆಡಳಿತದಲ್ಲಿ ಮಾತ್ರ ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪುರೋಹಿತರುಗಳು ನೆಲ ಉಳುವುದನ್ನು ಪ್ರಾರಂಭಿಸಿದರೆ ಬೂಟಾಟಿಕೆಯಂತೆ ಕಾಣಿಸುತ್ತದೆ. ಸ್ಟಾಲಿನ್ ಕೊನೆಯ ಪಕ್ಷ ಬೂಟಾಟಿಕೆತನ ಮಾಡಲಿಲ್ಲ. ತನ್ನ ಆಡಳಿತ ಸರ್ವಾಧಿಕಾರವೆಂದು ಮುಚ್ಚುಮರೆಯಿಲ್ಲದೆ ಹೇಳಿಕೊಂಡ. ಚರ್ಚುಗಳು ಮಾತ್ರವಲ್ಲ ಯಹೂದಿ, ಕ್ರಿಶ್ಚಿಯನ್, ಇಸ್ಲಾಂ ಎಲ್ಲ ಧಾರ್ಮಿಕ ವ್ಯವಸ್ಥೆಗಳನ್ನೂ ಬುಡಮೇಲು ಮಾಡಿದ. ತುಂಬ ಜನರಿಗೆ ಸ್ಟಾಲಿನ್ನನ ವರ್ತನೆ ಅಮಾನವೀಯ ಅನ್ನಿಸಬಹುದು. ಆದರೆ ನನಗೆ ಹಾಗೆನ್ನಿಸದು. ನಾನು ಎಂದಿಗೂ ಸರ್ವಾಧಿಕಾರದ ವಿರೋಧಿಯೇ. ಆದರೆ ಒಂದು ಸಮಾಜ ಬಂಡವಾಳಶಾಹಿಯಿಂದ ಕಮ್ಯುನಿಸಂಗೆ ಸ್ಥಿತ್ಯಂತರ ಹೊಂದುವ ಸಂದರ್ಭದಲ್ಲಿ ಸರ್ವಾಧಿಕಾರ ಒಂದು ಅನಿವಾರ್ಯ ಘಟ್ಟ ಎಂದು ನಂಬಿದ್ದೇನೆ. ಕಾರ್ಲ್‌ಮಾರ್ಕ್ಸ್ ಸಹ ಇದನ್ನೇ ನಂಬಿದ್ದ. ಒಮ್ಮೆ ಸಮಾಜ ವರ್ಗರಹಿತವಾದರೆ ಸರ್ವಾಧಿಕಾರ, ಪ್ರಜಾಪ್ರಭುತ್ವ, ಆಡಳಿತ, ಸರ್ಕಾರ, ಎಲ್ಲವೂ ಕಣ್ಮರೆಯಾಗಿ ಅರಾಜಕವಾದ ಸ್ಥಾಪನೆಯಾಗುತ್ತದೆ ಎಂಬುದು ಅವನ ಕನಸಾಗಿತ್ತು. ಆದರೆ ಒಂದು ದೇಶ ವರ್ಗರಹಿತ ಕಮ್ಯುನಿಸ್ಟ್ ಆಗಿಬಿಟ್ಟರೆ ಉಳಿದ ನೆರೆಯ ಬಂಡವಾಳಶಾಹೀ ದೇಶಗಳು ಅದನ್ನು ದಮನ ಮಾಡಲು ಹೇಗೆಲ್ಲ ಪ್ರಯತ್ನಿಸಬಹುದು ಎಂಬ ಕುರಿತು ಅವನು ಚಿಂತಿಸಲಿಲ್ಲ. ಕಾರ್ಲ್‌ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್‌ರ ವಿಚಾರಗಳ ಬಗ್ಗೆ ನನಗೆ ಸಹಮತವಿದೆ, ಜೊತೆಗೆ ನನ್ನದೇ ಆದ ತಕರಾರುಗಳೂ ಇವೆ. ಅವರಿಬ್ಬರಿಗೂ ಕ್ರಿಶ್ಚಿಯನ್ ಹಾಗು ಯಹೂದಿ ಧರ್ಮಗಳನ್ನು ಬಿಟ್ಟರೆ ಜಗತ್ತಿನ ಬೇರೆ ಮತ್ತೊಂದು ಧರ್ಮದ ಪರಿಚಯ ಇರಲಿಲ್ಲ. ಜೆನ್ ಬೌದ್ಧಧರ್ಮ ಹಾಗು ತಾವೋ ಪಥಧರ್ಮಗಳ ಪರಿಚಯವಿರಲಿಲ್ಲ. ಧರ್ಮದ ಹೆಸರಿನಲ್ಲಿ ಚರ್ಚುಗಳು ಎಷ್ಟೊಂದು ಕೊಲೆಗಳನ್ನು ಮಾಡಿದವು! ಆದರೆ ಬೌದ್ಧರು ಒಂದೇ ಒಂದು ಕೊಲೆಯನ್ನು ಮಾಡದೇ ಇಡೀ ಏಷ್ಯಾದಲ್ಲಿ ಬೌದ್ಧಧರ್ಮವನ್ನು ಹರಡಿದರಲ್ಲ! ಕಾರ್ಲ್‌ಮಾರ್ಕ್ಸ್‌ನ ಉದ್ದೇಶ ಆರ್ಥಿಕ ಸಮಾನತೆಯನ್ನು ತರುವುದಾಗಿತ್ತು. ಅದಕ್ಕಾಗಿ ಮಾರ್ಕ್ಸ್ ಮತ್ತು ಏಂಗೆಲ್ಸ್ ಭೌತಿಕವಾದವನ್ನು ಪ್ರತಿಪಾದಿಸಿದರು. ಮನುಷ್ಯ ಕೇವಲ ಒಂದು ಭೌತಿಕ ವಸ್ತು; ಪ್ರಜ್ಞೆ, ಭಾವನೆ ಇತ್ಯಾದಿಗಳಿಗೆ ಯಾವ ಅರ್ಥವೂ ಇಲ್ಲ ಎಂದು ವಾದಿಸಿದರು. ಆ ನೆಲೆಯಲ್ಲಿ ಅವರ ವಿಚಾರಗಳ ಬಗ್ಗೆ ನನ್ನ ತಕರಾರುಗಳಿವೆ.

ಹಿಂದೆ, ಒಂದು ಪ್ರವಚನದಲ್ಲಿ ನೀವು ಲೆನಿನ್ ಮದುವೆ-ಕುಟುಂಬ ವ್ಯವಸ್ಥೆಗಳನ್ನು ವಿರೋಧಿಸುತ್ತಿದ್ದ ಎಂದಿದ್ದಿರಿ. ಆದರೆ ವಾಸ್ತವದಲ್ಲಿ ಲೆನಿನ್ ಕುಟುಂಬವೇ ಮೂಲಭೂತ ವ್ಯವಸ್ಥೆ ಎಂಬ ಏಂಗೆಲ್ಸ್‌ನ ವಿಚಾರಗಳನ್ನು ನಂಬಿದ್ದ.

          ಖಾಸಗೀ ಆಸ್ತಿ ಎಂಬ ಕಲ್ಪನೆಯೊಂದಿಗೆ ಕುಟುಂಬದ ಪರಿಕಲ್ಪನೆ ಹುಟ್ಟಿಕೊಂಡಿತು ಎನ್ನುವ ಕಾರ್ಲ್‌ಮಾರ್ಕ್ಸ್ ಖಾಸಗೀ ಆಸ್ತಿ ವಿಲೀನವಾದ ಮೇಲೆ ಕುಟುಂಬದ ಪರಿಕಲ್ಪನೆಯೂ ತಿರೋಧಾನವಾಗುತ್ತದೆ ಎಂದು ತರ್ಕಿಸುತ್ತಾನೆ. ಕುಟುಂಬ ವ್ಯವಸ್ಥೆ ಬರೀ ಖಾಸಗೀ ಆಸ್ತಿಗಷ್ಟೇ ಅಲ್ಲ, ಎಲ್ಲ ಧರ್ಮಗಳಿಗೂ, ಎಲ್ಲ ಬಂಡವಾಳಶಾಹೀ ಮತ್ತು ಊಳಿಗಮಾನ್ಯ ವ್ಯವಸ್ಥೆಗೂ, ಎಲ್ಲ ಬಗೆಯ ಯುದ್ಧ, ಹಿಂಸೆ, ಶೋಷಣೆಗಳಿಗೂ ಮೂಲಬೀಜವಾಗಿದೆ. ಕುಟುಂಬ ವ್ಯವಸ್ಥೆ ನಾಶವಾಗದೇ ಯಾವ ಹೊಸ ಸಾಮಾಜಿಕ ವ್ಯವಸ್ಥೆಯನ್ನೂ ತರಲಾಗದು. ನಾನು ಲೆನಿನ್ ಮದುವೆಯ ವಿರೋಧಿ ಎಂದಿರಲಿಲ್ಲ, ಮದುವೆ ಎಂಬ ವ್ಯವಸ್ಥೆಯ ವಿಘಟನೆ ಮಾರ್ಕ್ಸ್-ಏಂಗೆಲ್ಸ್‌ರ ಸಾಮಾಜಿಕ ವಿಶ್ಲೇಷಣೆಯ ತಾರ್ಕಿಕ ಅಂತ್ಯ ಎಂದು ಹೇಳಿದ್ದೆ. ಮದುವೆಗೂ ಖಾಸಗೀ ಆಸ್ತಿಗೂ ಏನು ಸಂಬಂಧ? ಪ್ರತಿಯೊಬ್ಬನೂ ತನ್ನ ಆಸ್ತಿಯನ್ನು ತನ್ನ ಸಂತಾನವೇ ಅನುಭವಿಸಲಿ ಎಂದು ಬಯಸುತ್ತಾನೆ. ಆದ್ದರಿಂದ ಅವನು ತನ್ನ ಹೆಣ್ಣುಗಳು ಬೇರೆಯವರಿಂದ ಗರ್ಭಿಣಿಯರಾಗದಂತೆ ನಿರ್ಬಂಧ ಹೇರುತ್ತಾನೆ. ತನ್ನ ಮಗ ಬೇರೆಯವರಿಗೆ ಹುಟ್ಟಿದವನಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕುಟುಂಬ ವ್ಯವಸ್ಥೆಯನ್ನು ಹೆಂಗಸರ ಪಾಲಿಗೆ ಬಂದಿಖಾನೆಯಾಗಿ ಪರಿವರ್ತಿಸಲಾಯಿತು. ಗಂಡಸರು ಶಿಕ್ಷಣ, ಆರ್ಥಿಕತೆ, ರಾಜಕಾರಣ ಹೀಗೆ ಎಲ್ಲ ಸಾಮಾಜಿಕ ಚಟುವಟಿಕೆಗಳಿಂದಲೂ ಆಕೆಯನ್ನು ಬೇರ್ಪಡಿಸಿದರು. ಮುಸ್ಲಿಂ ದೇಶಗಳಲ್ಲಂತೂ ಹೆಣ್ಣುಮಕ್ಕಳು ಹೊರಜಗತ್ತಿಗೆ ತಮ್ಮ ಮುಖವನ್ನೂ ತೋರಿಸುವಂತಿಲ್ಲ.

          ತಾರ್ಕಿಕವಾಗಿ ನಿರ್ಣಯಿಸುವುದಾದರೆ ಆಸ್ತಿ ಯಾರ ಖಾಸಗೀ ಸ್ವತ್ತೂ ಅಲ್ಲದ ಒಂದು ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಕುಟುಂಬ ವ್ಯವಸ್ಥೆಯ ಉಪಯೋಗವೇ ಇರದು. ೧೯೧೭ರಲ್ಲಿ ರಷ್ಯಾ ಕ್ರಾಂತಿ ಘಟಿಸಿದ ಪ್ರಾರಂಭದಲ್ಲಿ ಅಲ್ಲಿ ಕುಟುಂಬ ವ್ಯವಸ್ಥೆಯನ್ನು ನಾಶಪಡಿಸಲು ಮೂರು ನಾಲ್ಕು ವರ್ಷಗಳ ಕಾಲ ಸತತ ಪ್ರಯತ್ನ ನಡೆಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಸಾವಿರಾರು ವರ್ಷಗಳ ಸಂಸ್ಕಾರವಿರುವ ನಮ್ಮ ಕುಟುಂಬ ಹಾಗು ಖಾಸಗೀ ಆಸ್ತಿಗಳ ವ್ಯಾಮೋಹವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲಾಗದು. ರಷ್ಯಾದಲ್ಲಿ ವರ್ಗರಹಿತ ಸಮಾಜವನ್ನು ಉಂಟು ಮಾಡಲು ಸ್ಟಾಲಿನ್ ೧೦ ಲಕ್ಷ ಜನರ ಹತ್ಯೆ ಮಾಡಬೇಕಾಯಿತು. ಆದರೂ ಆ ಪ್ರಯತ್ನದಲ್ಲಿ ಅವನು ಸಫಲನಾಗಲಿಲ್ಲ. ಕಮ್ಯುನಿಸಂ ನಿಧಾನವಾಗಿ ಬೇರೂರಿದ ಮೇಲೆ ಅದು ತಾನಾಗಿಯೇ ಹೊರಟುಹೋಗಲಿದೆ ಎಂದುಕೊಂಡು ಅವನು ತನ್ನ ಪ್ರಯತ್ನವನ್ನು ಅರ್ಧಕ್ಕೇ ನಿಲ್ಲಿಸಿದ. ರಷ್ಯಾದಲ್ಲಿ ಮದುವೆ ಹಾಗು ಕುಟುಂಬ ವ್ಯವಸ್ಥೆಗಳು ಭಗ್ನವಾಗದು ಎಂಬುದು ನನ್ನ ಅನಿಸಿಕೆ. ಏಕೆಂದರೆ ಮಾರ್ಕ್ಸ್ ಏಂಗೆಲ್ಸ್‌ರ ಸಾಮಾಜಿಕ ವಿಶ್ಲೇಷಣೆಯನ್ನೇ ಸರಿಯಾಗಿ ಪರಿಗಣಿಸದೆ ಅಲ್ಲಿ ಬಲವಂತವಾಗಿ ವರ್ಗರಹಿತ ವ್ಯವಸ್ಥೆಯನ್ನು ತರುವ ಪ್ರಯತ್ನ ನಡೆಸಿದ್ದರಿಂದ ಅಲ್ಲಿ ಈಗ ಬ್ಯೂರೋಕ್ರಾಟ್ಸ್ ಎಂಬ ಹೊಸದೊಂದು ವರ್ಗ ಸ್ಥಾಪನೆಯಾಗಿದೆ. ಈಗ ರಷ್ಯಾದಲ್ಲಿ ಬ್ಯೂರೋಕ್ರಾಟ್ಸ್‌ಗಳು ಬಂಡವಾಳಶಾಹಿಗಳ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.  

ಕಮ್ಯುನಿಸಂ ಪ್ರಜಾಪ್ರಭುತ್ವವನ್ನು ಬಿಟ್ಟು ಸರ್ವಾಧಿಕಾರವೇ ಏಕಮೇವ ಪರಿಹಾರವೆಂದು ಏಕೆ ಭಾವಿಸುತ್ತದೆ?

ಪ್ರಜಾಪ್ರಭುತ್ವ ಬದಲಾವಣೆಗೆ ಆಸ್ಪದ ಕೊಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಬಡವರಿಗೆ ಎಲ್ಲಾದರೂ ಅಧಿಕಾರ ಸಿಗಲು ಸಾಧ್ಯವೇ? ಬಡವರ ವೋಟುಗಳನ್ನು ಕೊಳ್ಳಲು ಹಣ ಬೇಡವೇ? ಕಾರ್ಲ್‌ಮಾರ್ಕ್ಸ್ ವ್ಯವಹಾರ ಜ್ಞಾನ ಇಲ್ಲದ ವ್ಯಕ್ತಿ. ಅವನೊಬ್ಬ ಚಿಂತಕ, ಕನಸುಗಾರ. ಜೀವಮಾನವಿಡೀ ಬ್ರಿಟಿಷ್ ಲೈಬ್ರರಿಯಲ್ಲಿ ಕಳೆದವನು. ತಾನೇ ಎಂದೂ ಬೆವರು ಸುರಿಸಿ ಸಂಪಾದನೆ ಮಾಡಿದವನಲ್ಲ. ಬಂಡವಾಳಶಾಹಿ ಬೆಳೆದಂತೆ ಸಮಾಜವು ಉಳ್ಳವರು ಮತ್ತು ಇಲ್ಲದವರು ಎಂದು ಸ್ಪಷ್ಟವಾಗಿ ವಿಂಗಡಣೆಯಾಗುತ್ತದೆ ಎಂದು ಭಾವಿಸಿದ ಅವನು ಮಧ್ಯಮವರ್ಗವನ್ನು ಮರೆತಿದ್ದ. ಮಧ್ಯಮವರ್ಗವು ಯಾವಾಗಲೂ ಎಲ್ಲ ಬಗೆಯ ಕ್ರಾಂತಿಗೂ ಒಂದು ಅಡಚಣೆಯಾಗಿದೆ. ಏಕೆಂದರೆ ಕ್ರಾಂತಿಯಾದಾಗ ನಿಜವಾಗಿಯೂ ಎಲ್ಲವನ್ನೂ ಕಳೆದುಕೊಳ್ಳುವವರು ಈ ಮಧ್ಯಮವರ್ಗದವರೇ. ಅಲ್ಲದೆ ಬಡವರಿಗೂ ಇಲ್ಲದವರಿಗೂ ನಡುವೆ ವ್ಯತ್ಯಾಸವಿದೆ. ಇದನ್ನೂ ಕಾರ್ಲ್‌ಮಾರ್ಕ್ಸ್ ಗಮನಿಸಿದಂತಿಲ್ಲ. ಅಮೆರಿಕಾದ ಬಡವನ ಬಳಿ ರೋಲ್ಸ್‌ರಾಯ್ಸ್ ಕಾರು ಇರದಿದ್ದರೂ ಶೆವರ್ಲೆಯಾದರೂ ಇರುತ್ತದೆ. ಒಬ್ಬ ಹೆಂಡತಿ, ಒಂದು ಮಗು, ಒಂದು ಮನೆ ಇರುತ್ತದೆ. ಯಾವ ಕಾರ್ಮಿಕನೂ ಇಲ್ಲದವನಾಗಲು ಸಾಧ್ಯವಿಲ್ಲ. ಕಾರ್ಮಿಕರು ಇನ್ನೂ ಹೆಚ್ಚು ಪಡೆಯಲು ಬಯಸುವರೇ ವಿನಃ ಕ್ರಾಂತಿಯನ್ನು ಬಯಸುವುದಿಲ್ಲ. ಕ್ರಾಂತಿಯಾದ ಮೇಲೆ ರಷ್ಯಾದ ಒಬ್ಬ ಪತ್ರಕರ್ತ ಒಬ್ಬ ಬಡವನನ್ನು ಕೇಳಿದನಂತೆ

’ನೀನು ಕಮ್ಯುನಿಸ್ಟನೇ?’,

 ’ಹೌದು ನಾನು ಕಮ್ಯುನಿಸ್ಟ್’

’ಹಾಗಾದರೆ ನಿನ್ನ ಬಳಿ ಎರಡು ಕಾರುಗಳಿದ್ದರೆ ಒಂದನ್ನು ನೆರೆಯವನಿಗೆ ಕೊಡಬಲ್ಲೆಯಾ?’,

’ಖಂಡಿತವಾಗಿ’,

’ನಿನ್ನ ಬಳಿ ಎರಡು ಕುದುರೆಗಳಿದ್ದರೆ ಒಂದನ್ನು ನೆರೆಯವನಿಗೆ ನೀಡುವೆಯಾ?’,

’ಖಂಡಿತ ನೀಡುತ್ತೇನೆ’,

’ಎರಡು ಹಸುಗಳಿದ್ದರೆ,..ಒಂದನ್ನು ಬೇರೆಯವನೊಂದಿಗೆ ಹಂಚಿಕೊಳ್ಳುವೆಯಾ?’,

’ಹಂಚಿಕೊಳ್ಳುತ್ತೇನೆ’,

ಕೊನೆಗೆ ಆ ಪತ್ರಕರ್ತ ’ನಿನ್ನ ಬಳಿ ಎರಡು ಕೋಳಿಗಳಿದ್ದರೆ ಒಂದನ್ನು ಪಕ್ಕದವನಿಗೆ ಕೊಡುವೆಯಾ?’, ಎಂದು ಕೇಳಿದಾಗ ಅವನು ಇಲ್ಲವೆಂದು ಹೇಳಿದನಂತೆ. ’ನಿನ್ನ ಮಾತುಗಳಿಗೆ ಅರ್ಥವೇ ಇಲ್ಲವಲ್ಲ’ ಎಂದು ಕೇಳಿದಾಗ

’ಅರ್ಥವಿಲ್ಲದ ಮಾತುಗಳನ್ನಾಡುತ್ತಿರುವವರು ನೀವು. ನಾನು ತರ್ಕಬದ್ಧವಾಗಿಯೇ ಮಾತನಾಡುತ್ತಿದ್ದೇನೆ. ನನ್ನ ಬಳಿ ಎರಡು ಕೋಳಿಗಳು ಇವೆ. ಕಾರು, ಬಂಗಲೆ, ಕುದುರೆ ಹಸು ಇತ್ಯಾದಿಗಳು ನನ್ನ ಬಳಿ ಇಲ್ಲ. ಇಲ್ಲದುದನ್ನು ಹಂಚಿಕೊಳ್ಳಲು ಯಾರಿಗೇನು ಕಷ್ಟ? ಧಾರಾಳವಾಗಿ ನೀಡುತ್ತೇನೆ. ಆದರೆ ಇರುವ ಕೋಳಿಗಳನ್ನು ಕೊಟ್ಟು ಕಳೆದುಕೊಳ್ಳಲಾರೆ’ ಎಂದನಂತೆ. ನಮ್ಮ ಬಳಿ ಏನಾದರೂ ಇದ್ದಾಗಲೇ ಎಲ್ಲ ಕಷ್ಟಗಳೂ ಬರುವುದು. ಮಾರ್ಕ್ಸ್‌ನ ವ್ಯಾಖ್ಯಾನಕ್ಕೆ ಅನುಗುಣವಾಗಿ ನೋಡುವುದಾದರೆ ಅಮೆರಿಕಾದಲ್ಲಿ ಇಂದು ಇಲ್ಲದವರು ಇಲ್ಲವೇ ಇಲ್ಲ. ಹಾಗಾಗಿ ಅಲ್ಲಿ ಕ್ರಾಂತಿ ಅಸಂಭವ.

            ಕಮ್ಯುನಿಸಂಗೂ ಸಮಾಜವಾದಕ್ಕೂ ವ್ಯತ್ಯಾಸವಿದೆಯೇ?

          ಅಪಾರವಾದ ವ್ಯತ್ಯಾಸವಿದೆ. ನನಗೂ ಕಾಮ್ರೇಡ್ ಗೋರ್ಬಚೀವ್‌ಗೂ ನಡುವೆ ಇರುವಷ್ಟೇ ವ್ಯತ್ಯಾಸವಿದೆ. ಸಮಾಜವಾದವೆಂದರೆ ಬಂಡವಾಳಶಾಹಿಯೊಡನೆ ರಾಜಿ ಮಾಡಿಕೊಳ್ಳುವುದು ಎಂದರ್ಥ.

           ಹಾಗಾದರೆ ನೀವು ಸೋವಿಯತ್ ಯೂನಿಯನ್‌ಗೆ ಕಾಲಿಟ್ಟರೆ ಏನು ಮಾಡುವಿರಿ?

          ಒಂದು ಕ್ರಾಂತಿಯನ್ನೇ ಮಾಡುತ್ತೇನೆ. ರಷ್ಯಾದಲ್ಲಿ ಕ್ರಾಂತಿ ನಡೆದು ತುಂಬ ದಿನಗಳಾದವು. ನನ್ನದು ಆಧ್ಯಾತ್ಮಿಕ ಕ್ರಾಂತಿ, ಭೌತಿಕ ಕ್ರಾಂತಿಯಲ್ಲ. ನಾವು ಕೇವಲ ದೇಹಗಳು ಎಂದುಕೊಳ್ಳುವುದೇ ನಿಜವಾದ ದಾರಿದ್ರ್ಯ. ರಷ್ಯಾ ಇನ್ನೂ ಶ್ರೀಮಂತವಾಗಬೇಕು ಎಂದು ನಾನು ಬಯಸುತ್ತೇನೆ. ಆ ನೆಲದಲ್ಲಿ ಬುದ್ಧ, ಲಾವ್‌ತ್ಸುಗಳಂತಹ ಅನುಭಾವಿಗಳು ಹುಟ್ಟಿಬರಬೇಕೆಂದು ಆಶಿಸುತ್ತೇನೆ. ಈಗಾಗಲೇ ನನ್ನ ಮುನ್ನೂರಕ್ಕೂ ಅಧಿಕ ಸನ್ಯಾಸಿಗಳು ರಷ್ಯಾದಲ್ಲಿ ಭೂಗತರಾಗಿದ್ದಾರೆ. ಏಕೆಂದರೆ ನಾನು ಅಮೆರಿಕಾದಲ್ಲಿ ಇದ್ದುದರಿಂದ ಕೆಜಿಬಿಯು ನಾನು ಅಮೆರಿಕಾದ ಏಜೆಂಟ್ ಎಂದು ಭಾವಿಸಿದೆಯಂತೆ. ಇಲ್ಲಿರುವ ಕಾಮ್ರೇಡ್‌ಗಳ ಮೂಲಕ ನಾನು ನನ್ನ ರಷ್ಯಾದ ಸನ್ಯಾಸಿಗಳಿಗೆ ನೆರವಾಗಲು ಬಯಸುತ್ತೇನೆ. ನಾನೂ ಒಬ್ಬ ಕಮ್ಯುನಿಸ್ಟ್ ಎಂದು ಅವರಿಗೆ ಹೇಳಬಯಸುತ್ತೇನೆ. ಆದರೆ ಮಾರ್ಕ್ಸ್ ಏಂಗೆಲ್ಸ್‌ರ ಕಲ್ಪನೆಯ ಕಮ್ಯುನಿಸ್ಟ್ ಅಲ್ಲ. ಅವರೆಲ್ಲ ಈಗ ಪಳೆಯುಳಿಕೆಗಳಾಗಿದ್ದಾರೆ. ಈಗ ರಷ್ಯಾಗೆ ಹೊಸದೊಂದು ಕ್ರಾಂತಿ ಬೇಕೆನಿಸಿದೆ. ಆದರೆ ಗೋರ್ಬಚೀವ್ ಕ್ರಿಶ್ಚಿಯನ್ ಪಾದ್ರಿಗಳಿಗೆ ಸೋವಿಯತ್ ಯೂನಿಯನ್ನಿನ ಬಾಗಿಲುಗಳನ್ನು ತೆರೆದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಈ ಪುರೋಹಿತಶಾಹಿಗಳು ಇನ್ನೂರು ವರ್ಷಗಳ ಹಿಂದಿನ ಊಳಿಗಮಾನ್ಯ ಯುಗಕ್ಕೆ ಸೇರಿದ ಜನ ಎಂದು ಅವರಿಗೆ ಬಹುಶಃ ಅರ್ಥವಾದಂತಿಲ್ಲ. ಈಗ ರಷ್ಯಾ ಹೊರಜಗತ್ತಿಗೆ ತನ್ನ ಬಾಗಿಲುಗಳನ್ನು ತೆರೆಯಲು ನಿರ್ಧರಿಸಿರುವುದು ಸಂತೋಷದ ವಿಷಯ. ಅವರು ಕಲೆ, ವಿಜ್ಞಾನ, ಸಂಗೀತ, ಆಧ್ಯಾತ್ಮಗಳಿಗೆ ಬಾಗಿಲುಗಳನ್ನು ತೆರೆಯಲಿ ಆದರೆ ಕ್ರಿಶ್ಚಿಯಾನಿಟಿ ಎಂಬ ರೋಗಕ್ಕೂ ಬಾಗಿಲನ್ನು ತೆರೆಯುವುದೇ!  ಪುರೋಹಿತಶಾಹಿಗಳು ಲೋಕದಲ್ಲಿ ಯಾವುದೇ ಕ್ರಾಂತಿ ನಡೆಯಲು ಆಸ್ಪದ ನೀಡುವುದಿಲ್ಲ. ಇದಕ್ಕೆ ಭಾರತವೇ ಸಾಕ್ಷಿ. ಕಳೆದ ಐದು ಸಾವಿರವರ್ಷಗಳಲ್ಲಿ ಇಲ್ಲಿ ಒಂದೇ ಒಂದು ಸಾಮಾಜಿಕ ಕ್ರಾಂತಿ ಯಶಸ್ವಿಯಾಗಿ ಸಂಭವಿಸಿದೆಯೇ? ಒಂದು ವೇಳೆ ಕ್ರಿಶ್ಚಿಯನ್ನರಿಗೆ ಬಾಗಿಲುಗಳನ್ನು ತೆರೆದರೆ “ನಿಮ್ಮ ಬಡತನಕ್ಕೆ ಬಂಡವಾಳಶಾಹಿಗಳು ಕಾರಣರಲ್ಲ, ನಿಮ್ಮ ಪೂರ್ವಜನ್ಮದ ಕರ್ಮಗಳೇ ಕಾರಣ” ಎಂದು ಬೋಧಿಸುವ ಭಾರತದ ಮಠಾಧಿಪತಿಗಳೂ ಬಾಗಿಲು ತಟ್ಟುತ್ತಾರೆ. ಆದ್ದರಿಂದ ಕ್ರಿಶ್ಚಿಯಾನಿಟಿಗೆ ಅಲ್ಲಿ ಅನುಮತಿ ನೀಡಬಾರದು ಎಂದು ನಾನು ಗೋರ್ಬಚೀವ್‌ಗೆ ಹೇಳುತ್ತೇನೆ. ಕ್ರಿಶ್ಚಿಯಾನಿಟಿಯೊಂದಿಗೆ ಸಲಿಂಗ ಕಾಮ, ವಿಷಮರತಿ, ಏಡ್ಸ್ ಇತ್ಯಾದಿಗಳೆಲ್ಲ ಒಂದೊಂದಾಗಿ ರಷ್ಯಾದ ನೆಲದಲ್ಲಿ ಪಾದಾರ್ಪಣೆ ಮಾಡಲಿವೆ. ಸಿಐಎ, ಎಫ್‌ಬಿಐ ಏಜೆಂಟ್‌ಗಳೆಲ್ಲ ಒಬ್ಬೊಬ್ಬರಾಗಿ ಒಳಗೆ ಬಂದು ಸೇರಿಕೊಳ್ಳುತ್ತಾರೆ. ಬೇಕಿದ್ದರೆ ಜೆನ್ ಬೌದ್ಧಧರ್ಮದಂತಹ ಸಂಪ್ರದಾಯಗಳಿಗೆ ಬಾಗಿಲುಗಳನ್ನು ತೆರೆಯಲಿ.

          ದೇಹವೊಂದನ್ನೇ ನಂಬುವ ಮಾರ್ಕ್ಸ್ ಪರಿಪೂರ್ಣನಲ್ಲ. ಹಾಗೆಯೇ ಬದುಕನ್ನು ದುಃಖಮಯವೆನ್ನುವ ಬುದ್ಧನೂ ನನ್ನ ದೃಷ್ಟಿಯಲ್ಲಿ ಪರಿಪೂರ್ಣನಲ್ಲ. ಅವರಿಬ್ಬರೂ ರಷ್ಯಾದಲ್ಲಿ ಜೊತೆಯಾಗಿ ಕೈಜೋಡಿಸಬೇಕು ಎಂಬುದು ನನ್ನ ಬಯಕೆ. ನನ್ನ ಸನ್ಯಾಸಿಗಳಾದರೂ ಎರಡೂ ನೆಲೆಗಳಲ್ಲಿ ಸಮಾನವಾಗಿ ಜೀವಿಸುತ್ತಿದ್ದಾರೆ. ನನ್ನ ಹತ್ತು ಸಾವಿರ ಸನ್ಯಾಸಿಗಳೊಂದಿಗೆ ನಾನು ರಷ್ಯಾವನ್ನು ಪ್ರವೇಶಿಸಲು ಬಯಸುತ್ತೇನೆ. ಇವರಲ್ಲದೇ ಜಗತ್ತಿನಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ಸನ್ಯಾಸಿಗಳಿದ್ದಾರೆ. ನಿಮಗೆ ನಿಜಕ್ಕೂ ನಿಮ್ಮ ನೆಲದಲ್ಲಿ ಧಾರ್ಮಿಕತೆ ಬೇಕು ಎನಿಸಿದ್ದರೆ ನನ್ನ ಎರಡು ಲಕ್ಷಕ್ಕೂ ಅಧಿಕ ಸನ್ಯಾಸಿಗಳೊಂದಿಗೆ ನಾನು ರಷ್ಯಾದಲ್ಲಿ ಹೊಸತೊಂದು ಕ್ರಾಂತಿಯನ್ನು ಉಂಟು ಮಾಡಬಲ್ಲೆ. ಹಾಗಾಗಿ ಕಾಮ್ರೇಡ್ ಗೋರ್ಬಚೀವ್ ನನ್ನನ್ನು ಆಹ್ವಾನಿಸುವ ಧೈರ್ಯ ಮಾಡಬೇಕು. ಏಕೆಂದರೆ ನಾನು ಮಾರ್ಕ್ಸ್‌ನನ್ನು ಪೂರ್ತಿಯಾಗಿ ಒಪ್ಪುವವನಲ್ಲ. ಅವನು ತುಂಬ ಹಳೆಯ ಕಾಲದವನಾದ. ಅದು ಅವರಿಗೂ ಗೊತ್ತು. ಎಷ್ಟು ಜನ ಕಮ್ಯುನಿಸ್ಟರು ಅವನ ದಾಸ್ ಕ್ಯಾಪಿಟಲ್ ಓದಿದ್ದಾರೆಯೋ ನನಗೆ ಗೊತ್ತಿಲ್ಲ. ಭಾರತದಲ್ಲಂತೂ ದಾಸ್ ಕ್ಯಾಪಿಟಲ್ ಓದಿದ್ದ ಒಬ್ಬ ಕಮ್ಯುನಿಸ್ಟನನ್ನೂ ನಾನು ನೋಡಲಿಲ್ಲ. ಬೈಬಲ್ಲಿನ ಹಾಗೆಯೇ ಈಗ ಅದರ ಮೇಲೆಯೂ ಒಂದಿಂಚು ಧೂಳು ಕೂತಿದೆ. ಪ್ರತಿಯೊಬ್ಬರೂ ಅವರವರ ಕಾಲಕ್ಕೆ ಮಾತ್ರ ಪ್ರಸ್ತುತರು. ಕಾಲವಾದರೂ ನಿರಂತರವಾಗಿ ಬದಲಾಗುತ್ತಿರುತ್ತದೆ. ಇಂದು ಯೇಸು, ಮಾರ್ಕ್ಸ್, ಏಂಗೆಲ್ಸ್, ಯಾರೂ ಪ್ರಸ್ತುತರಾಗಲಾರರು. ಎಪ್ಪತ್ತು ವರ್ಷಗಳ ಕಾಲ ರಷ್ಯಾ ತನ್ನ ಬಾಗಿಲುಗಳನ್ನು ಮುಚ್ಚಿತ್ತು. ಈಗ ಅದು ಬಾಗಿಲುಗಳನ್ನು ತೆರೆಯುವಷ್ಟು ಸಮರ್ಥವಾಗಿ ಬೆಳೆದಿದೆ. ಆದರೆ ಅಪಾಯಕಾರೀ ರೋಗಗಳ ಬಗ್ಗೆ ಎಚ್ಚರಿಕೆ ಇರಬೇಕಷ್ಟೇ. ಬ್ರಾಹ್ಮಣ ಪುರೋಹಿತಶಾಹಿಗಳು ಬೌದ್ಧಧರ್ಮವನ್ನು ಭಾರತದಿಂದ ಓಡಿಸಿದರು. ಬುದ್ಧನ ಕಾಲದಲ್ಲಿ ಇಡೀ ದೇಶವೇ ಬುದ್ಧನಿಗೆ ಸ್ಪಂದಿಸಿತ್ತು. ಆದರೆ ಆಮೇಲೆ ಎರಡು ಸಾವಿರ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಬೌದ್ಧಧರ್ಮದ ಬೇರುಗಳೇ ಕಾಣಿಸುವುದಿಲ್ಲವಲ್ಲ, ಕಾರಣ ಏನಿರಬಹುದು? ಬುದ್ಧ ಜಾತಿಪದ್ಧತಿಯನ್ನು, ಬ್ರಾಹ್ಮಣರ ಕಂದಾಚಾರವನ್ನು, ಪುರೋಹಿತಶಾಹೀ ಶೋಷಣೆಯನ್ನು ವಿರೋಧಿಸಿದವನು. ಹಾಗಾಗಿ ಅವನು ಸತ್ತ ಕೂಡಲೆ ಇಲ್ಲಿ ಬೌದ್ಧರನ್ನು ಒಂದೇ ಸಮನೆ ಹತ್ಯೆ ಮಾಡಲಾಯಿತು. ಬೌದ್ಧಗ್ರಂಥಗಳನ್ನು ಸುಟ್ಟುಹಾಕಲಾಯಿತು. ಪ್ರಾಣ ಉಳಿಸಿಕೊಂಡವರು ಏಷ್ಯಾದಾದ್ಯಂತ ಎಲ್ಲೆಡೆ ಚದುರಿ ಹೋದರು. ಟಿಬೆಟ್, ಲಡಾಖ್, ನೇಪಾಳ, ಥಾಯ್‌ಲ್ಯಾಂಡ್, ಚೀನಾ, ಕೊರಿಯಾ, ತೈವಾನ್, ಜಪಾನ್, ಶ್ರೀಲಂಕಾ ಹೀಗೆ ಏಷ್ಯಾದ ಎಲ್ಲ ದೇಶಗಳಲ್ಲೂ ಬೌದ್ಧಧರ್ಮ ವ್ಯಾಪಿಸಿದೆ. ಆದರೆ ಭಾರತದಲ್ಲಿ ಮಾತ್ರ ಅದರ ಸುಳಿವೇ ಇಲ್ಲ! ಆದ್ದರಿಂದ ಪುರೋಹಿತರ ಬಗ್ಗೆ ಎಚ್ಚರಿಕೆ ಇರಬೇಕಷ್ಟೇ.

          ಒಂದು ಕುತೂಹಲಕರ ವಿಷಯವೆಂದರೆ, ಕ್ರಾಂತಿಗೆ ಮುನ್ನ ಸೋವಿಯತ್ ಒಕ್ಕೂಟವು ಟಾಲ್ಸ್‌ಟಾಯ್, ಗಾರ್ಕಿ, ಚೆಕಾಫ್, ದಸ್ತಯೇವ್‌ಸ್ಕಿಯಂತಹ ಪ್ರತಿಭೆಗಳಿಗೆ ಜನ್ಮ ನೀಡಿತ್ತು. ಹಾಗೆ ನೋಡಿದರೆ ಜಗತ್ತಿನ ಎಲ್ಲ ದೈತ್ಯ ಪ್ರತಿಭೆಗಳನ್ನೂ ಮೆಟ್ಟಿನಿಲ್ಲಲು ಒಬ್ಬ ದಸ್ತಯೇವ್‌ಸ್ಕಿ ಸಾಕು. ಆದರೆ ಕ್ರಾಂತಿಯಾದ ಮೇಲೆ ಈ ಎಪ್ಪತ್ತು ವರ್ಷಗಳಲ್ಲಿ ಅಲ್ಲಿ ಅಂತಹ ಒಬ್ಬನೂ ಹುಟ್ಟಲಿಲ್ಲವಲ್ಲ ಏಕೆ? ಈ ಅವಧಿಯಲ್ಲಿ ರಷ್ಯಾದ ಆತ್ಮವೇ ಕಳೆದುಹೋಗಿದೆ. ಇದು ಆತ್ಮ ದೇಹದ ಉಪ ಉತ್ಪನ್ನ ಎನ್ನುತ್ತಿದ್ದ ಮಾರ್ಕ್ಸ್‌ನನ್ನು ಕುರುಡಾಗಿ ಅನುಸರಿಸಿದ್ದರ ಫಲ. ಸೋವಿಯತ್ ಒಕ್ಕೂಟದ ಈ ಬಂಜೆತನ “ಒಳಗಿನ ತೃಪ್ತಿ ಇಲ್ಲದೆ ಯಾವ ಕಲೆಯೂ ಹುಟ್ಟದು” ಎಂಬ ಒಂದು ಮಹತ್ವದ ಒಳನೋಟವನ್ನು ನೀಡುತ್ತದೆ. ಇಂದು ರಷ್ಯಾ ಮುಂದುವರೆದ ದೇಶವಾಗಿದ್ದರೂ ಅಂತರಂಗದ ಸಂಪತ್ತಿನ ವಿಷಯದಲ್ಲಿ ಅದು ದರಿದ್ರ ದೇಶವಾಗಿದೆ. ಆದರೂ ಮಾರ್ಕ್ಸ್‌ವಾದ ರಷ್ಯಾಗೆ ಒಂದು ಒಳ್ಳೆಯ ತಳಪಾಯವನ್ನು ಹಾಕಿಕೊಟ್ಟಿದೆ ಎಂಬುದನ್ನು ಮರೆಯಬಾರದು. ಪೂರ್ವದೇಶಗಳು ಇಂಥದೊಂದು ತಳಪಾಯವನ್ನು ಹೊಂದಿಲ್ಲ. ಇದುವೆ ಮನುಷ್ಯಜಾತಿಯ ದುರಂತ. ಪೂರ್ವದೇಶಗಳು ದೇಹನಿಂದಕ ಧೋರಣೆಯವಾದರೆ ಪಶ್ಚಿಮ ದೇಶಗಳು ಅನಾತ್ಮವಾದಿಗಳಾಗಿವೆ.

          ಖಾಸಗೀ ಸ್ವತ್ತಿನಿಂದ ಸಮಾಜದಲ್ಲಿ ವರ್ಗಗಳು ಅನಿವಾರ್ಯವಾಗಿ ಸೃಷ್ಟಿಯಾಗುತ್ತದೆ. ತನ್ನ ಸುತ್ತಣ ಜನ ಸಂಪತ್ತಿನಿಂದ ಮೆರೆಯುತ್ತಿರುವುದನ್ನು ನೋಡುವ ಬಡವನ ಆತ್ಮಾಭಿಮಾನಕ್ಕೆ ಧಕ್ಕೆಯಾಗುತ್ತದೆ. ತಾನು ಎರಡನೆಯ ದರ್ಜೆಯ ಪ್ರಜೆ ಎಂಬ ಕೀಳರಿಮೆಯನ್ನು ಅನುಭವಿಸುತ್ತಾನೆ. ಕೆಲವು ಶ್ರೀಮಂತರಿಗಾಗಿ ಕೋಟ್ಯಂತರ ಮನಸ್ಸುಗಳಲ್ಲಿ ಕೀಳರಿಮೆ ಉಂಟು ಮಾಡುವುದು ನಿಜಕ್ಕೂ ಅಮಾನವೀಯ. ಕಮ್ಯುನಿಸಂ ಆದರೂ ವ್ಯಕ್ತಿಯಲ್ಲಿ ಆತ್ಮಗೌರವವನ್ನು ತುಂಬುತ್ತದೆ. ಶ್ರೀಮಂತಿಕೆಯನ್ನು ವ್ಯವಸ್ಥಿತವಾಗಿ ಪೋಷಿಸುವ ಜಗತ್ತಿನ ಎಲ್ಲ ಧರ್ಮಗಳಿಗೂ ಅದು ಬಹಿಷ್ಕಾರ ಹಾಕುತ್ತದೆ. ಧರ್ಮಗಳಿಂದ ಬಿಡುಗಡೆಯಾಗುವ ವ್ಯಕ್ತಿಯು ಎಲ್ಲ ಬಗೆಯ ಕೀಳರಿಮೆಗಳಿಂದಲೂ ಬಿಡುಗಡೆ ಹೊಂದುತ್ತಾನೆ. ಕೀಳರಿಮೆಯಿಂದ ಬಿಡುಗಡೆಯಾದ ಸಮಾಜದಲ್ಲಿ ಪುರೋಹಿತಶಾಹಿಗಳು ನಿರುದ್ಯೋಗಿಗಳಾಗುತ್ತಾರೆ. ಆದರೆ ಧರ್ಮಗಳಿಲ್ಲದ, ಪುರೋಹಿತಶಾಹಿ ಇಲ್ಲದ ಸಮಾಜ ತನ್ನೊಳಗೆ ಒಂದು ಬಗೆಯ ಖಾಲಿತನವನ್ನು ಅನುಭವಿಸುತ್ತದೆ. ಆದರೆ ನನ್ನ ದೃಷ್ಟಿಯಲ್ಲಿ ಕಮ್ಯುನಿಸಂ ಒಂದು ಮಹತ್ವದ ಪ್ರಯೋಗದ ಮೊದಲ ಹಂತ ಮಾತ್ರ. ಅದೇ ಮನುಷ್ಯ ಸಮಾಜದ ಅಂತಿಮ ಸ್ವರೂಪವಲ್ಲ. ಕಮ್ಯುನಿಸಂ ಮನುಷ್ಯನೊಳಗೆ ಅತ್ಯಂತ ಯಶಸ್ವಿಯಾಗಿ ’ಖಾಲಿತನ’ವನ್ನು ಉಂಟು ಮಾಡಬಲ್ಲದು ಎಂಬ ಕಾರಣದಿಂದಲೇ ನಾನು ಕಮ್ಯುನಿಸಂನ್ನು ಇಷ್ಟಪಡುವುದು. ನನ್ನದು ಕಾರ್ಲ್‌ಮಾರ್ಕ್ಸ್‌ನ ಮುಂದುವರೆದ ಚಿಂತನೆಯಾಗಿದೆ. ’ಅರಾಜಕವಾದ’ವು ಕಮ್ಯುನಿಸಂನ ಮುಂದಿನ ಸ್ವರೂಪವಾಗಿದೆ. ವಿವೇಚನೆ ಇಲ್ಲದ ಜನಸಮೂಹವು ಅರಾಜಕ ವ್ಯವಸ್ಥೆಯನ್ನು ಸೃಷ್ಟಿಸಲಾರದು. ಅಂತಹ ಅರಾಜಕವಾದವು ಅರಳಲು ಕಮ್ಯುನಿಸಂ ಒಂದು ಬೇರಿನ ರೂಪದಲ್ಲಿ ಕೆಲಸ ಮಾಡುತ್ತದೆ.

          ಆದರೆ ಸಮಸ್ಯೆಗಳನ್ನು ಪರಿಹರಿಸಲು ಯಾವಾಗಲೂ ಎರಡನೆಯ ದರ್ಜೆಯ ಜನ ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಬುದ್ಧನಂತಹವರು ಕರೆಯದೇ ಎಲ್ಲಿಯೂ ಬರುವವರಲ್ಲ. ಈಗ ರಷ್ಯಾ ಬಾಗಿಲುಗಳನ್ನು ತೆರೆದಿದೆ. ಆದರೆ ಬುದ್ಧನಂತಹ ಜ್ಞಾನಿಗಳು ಅಲ್ಲಿ ಹೋಗುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವ ಮಂದಿ ರಷ್ಯಾದೊಳಗೆ ಧಾವಿಸುತ್ತಿದ್ದಾರೆ. ಗೋರ್ಬಚೀವ್ ಅವರು ಕಮ್ಯುನಿಸಂನ್ನು ಬಲಿದಾನ ಮಾಡಿ ವಿಶ್ವಶಾಂತಿಯನ್ನು ತರುವುದಾದರೆ ಆ ವಿಶ್ವಶಾಂತಿಗೆ ಮೂರುಕಾಸಿನ ಬೆಲೆಯೂ ಇರದು. ಈ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಅಲ್ಲಿ ಸೂಕ್ತ ತಳಹದಿ ನಿರ್ಮಾಣವಾಗಿದೆ. ಆದರೆ ಇನ್ನೂ ಆಧಾರ ಕಂಬಗಳು ನಿರ್ಮಾಣವಾಗಿಲ್ಲ. ಛಾವಣಿಯನ್ನು ಇನ್ನೂ ನಿರ್ಮಿಸಿಲ್ಲ. ಆ ಕೆಲಸವನ್ನು ಬುದ್ಧನಂತಹವರು ಮಾತ್ರ ಮಾಡಲು ಸಾಧ್ಯ. ಇಲ್ಲಿ ಬುದ್ಧನೆಂದರೆ ಬೌದ್ಧಧರ್ಮದ ಜನ ಎಂದರ್ಥವಲ್ಲ. ಅಂತಹ ಜನರನ್ನು ಅವರು ಕರೆಸಿಕೊಳ್ಳಬೇಕು. ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅವರಿಂದ ಧ್ಯಾನಪದ್ಧತಿಯನ್ನು ಕಲಿಸಬೇಕು. ಧ್ಯಾನಪದ್ಧತಿಯು ಕಮ್ಯುನಿಸಂಗೆ ಎಂದಿಗೂ ಬಾಧಕವಾಗದು. ಯಾರಿಗೇ ಆದರೂ ದುಡಿಮೆ, ಸಾವು ಇವೆರಡೇ ಸಾಕಾಗದು. ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಾಭಿಮಾನ ಬೇಕು, ತನ್ನ ತನ ಬೇಕು, ಅತೀತದ ಕಡೆಗೆ ದೃಷ್ಟಿ ಇರಬೇಕು. ಇದುವೆ ಈಗ ರಷ್ಯಾ ಅನುಭವಿಸುತ್ತಿರುವ ಕೊರತೆ. ಈ ಕೊರತೆಯನ್ನು ತುಂಬಲು ಕೆಲವು ಅಯೋಗ್ಯರು ಸದಾ ಸಿದ್ಧರಾಗಿರುತ್ತಾರೆ ಎಂಬುದನ್ನು ರಷ್ಯಾ ತಿಳಿದಿರಬೇಕು. ವಿಶ್ವಶಾಂತಿಯ ಹೆಸರಿನಲ್ಲಿ ಗೋರ್ಬಚೀವ್ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಾರೆ. ನಾನು ಮೂರನೆಯ ಮಹಾಯುದ್ಧವನ್ನಾದರೂ ಒಪ್ಪುತ್ತೇನೆ ಆದರೆ ಕಮ್ಯುನಿಸಂ ಹೀಗೆ ಭಗ್ನವಾಗುವುದನ್ನು ನೋಡಲಾರೆ. ಕಮ್ಯುನಿಸಂನ ಸಾವು ಮಾನವ ವಿಕಾಸದ ಸಾವು. ವರ್ಗಭೇದವಿಲ್ಲದ ಸಮಾಜವನ್ನು ಸೃಷ್ಟಿಸುವ ಒಂದು ಸಾಧ್ಯತೆಯ ಸಾವು, ದೇಶ ದೇಶಗಳ ಗಡಿಗಳನ್ನು ಅಳಿಸಿ ಹಾಕಿ ಹೊಸ ಜಗತ್ತನ್ನು ನಿರ್ಮಿಸಬೇಕೆಂಬ ಆದಿಮ ಕನಸಿನ ಸಾವು.

Comments