ಹೊಸ ರಾಗವೆಂಬ ಗಝಲ್

ಹೊಸ ರಾಗವೆಂಬ ಗಝಲ್

ಕವನ

ಹಳೆಯ ವೀಣೆಯಲಿ ಹೊಸತು ರಾಗವನು

ನುಡಿಸಬೇಡ ನೀನು

ಬೆಳೆದ ಪ್ರೀತಿಯೊಳು ಮುಳಿಸು ತೋರುತಲಿ

ಸಿಡಿಯಬೇಡ ನೀನು

 

ನುಡಿಯ ಮೌನದಲಿ ನಡೆಯ ಬೆರೆಸುತ

ಒಂದಾಗಿರುವೆ ಏಕೆ

ಕೆಡುವ ಹಾಲಿಗೆ ಹುಳಿಯನು ಗೊತ್ತಿಲ್ಲದೆ

ಕೂಡಿಸಬೇಡ ನೀನು

 

ಉರಿದ ಎದೆಯಲ್ಲಿ ಚೆಲುವಿನ ನವಿಲಿನ

ತೆರದಲಿ ಕುಣಿಯಬೇಡ

ಮುರಿದ ಲೇಖನಿಯಲಿ ಒಲವಿನ ಗೀತೆಯ

ಬರೆಸಬೇಡ ನೀನು

 

ಎಡರು ತೊಡರುಗಳ ದಾಟುವ ಧೀರ

ನಾವಿಕನಾಗಿ ಹೊರಟಿದ್ದೇನೆ

ಪಡೆನುಡಿದು ನಲ್ಲನ ದಿನವು ಅವಮಾನ

ಪಡಿಸಬೇಡ ನೀನು

 

ಕದಡಿದ ಸಲಿಲವು ತಿಳಿಯಾದ ರೀತಿಯಲಿ

ಮನವು ಬಾಷ್ಪಲೋಚನ

ಮುದುಡಿದ ಅಭಿನವನ ಹೃದಯವ ಹಿಚುಕಿ

ಕೊಲ್ಲಿಸಬೇಡ ನೀನು

 

-*ಶಂಕರಾನಂದ ಹೆಬ್ಬಾಳ*

 

ಚಿತ್ರ್