ಹೊಸ ರಾಜಕಾರಣದ ಹಂಬಲ: ಸತ್ಯ ಮತ್ತು ಮಿಥ್ಯಗಳು!

ಹೊಸ ರಾಜಕಾರಣದ ಹಂಬಲ: ಸತ್ಯ ಮತ್ತು ಮಿಥ್ಯಗಳು!

ಬರಹ

ಹೊಸ ರಾಜಕಾರಣದ ಹಂಬಲ: ಸತ್ಯ ಮತ್ತು ಮಿಥ್ಯಗಳು!

ಮುಂಬೈ ದಾಳಿಯ ನಂತರ ರಾಷ್ಟ್ರೀಯ ಮಾಧ್ಯಮಗಳ ಚರ್ಚೆಗಳಲ್ಲಿ ಕೇಳಿ ಬಂದ ಪ್ರಮುಖ ಬೇಡಿಕೆಯೆಂದರೆ, ನಮ್ಮ ರಾಜಕೀಯ ನಾಯಕತ್ವದ ಸ್ವರೂಪ ಬದಲಾಗಬೇಕು ಎಂಬುದು. ಈ ಸ್ವರೂಪದಲ್ಲಿ ರಾಜಕಾರಣಿಗಳ ವಯಸ್ಸು, ವರ್ಗ, ಶಿಕ್ಷಣ, ಸಿದ್ಧಾಂತ, ಕಾರ್ಯಶೈಲಿ ಎಲ್ಲ ಸೇರಿತ್ತು. ಈ ಬೇಡಿಕೆಯನ್ನಿಟ್ಟ ಜನವರ್ಗವನ್ನು - ಉದ್ಯಮಿಗಳು, ಖಾಸಗಿ ವಲಯಕ್ಕೆಸೇರಿದ ಆಡಳಿತಗಾರರು ಮತ್ತು ವೃತ್ತಿಪರರು ಇತ್ಯಾದಿ - ನೋಡಿದಾಗ, ರಾಜಕಾರಣ ಇವರ ಖಾಸಗಿ ಕಂಪನಿಗಳ ಮ್ಯಾನೇಜ್ಮೆಂಟ್ನಂತೆ ಮತ್ತು ನಮ್ಮ ರಾಜಕಾರಣಿಗಳು ಸಿ.ಇ.ಓ.ಗಳಂತೆ ಕೆಲಸ ಮಾಡಬೇಕೆಂಬುದೇ ಅವರ ನಿರೀಕ್ಷೆಯಾಗಿತ್ತು ಎಂದು ತೋರಿತು. ಒಟ್ಟಾರೆ ಇದು ಪ್ರಸಕ್ತ ಜನಪ್ರಿಯ ರಾಜಕಾರಣದ ವಿರುದ್ಧ ನಡೆದ ನಮ್ಮ ಹೊಸ ಪ್ರತಿಷ್ಠಿತ ವರ್ಗದ ದಾಳಿಯೇ ಆಗಿತ್ತು. ನಿಜ, ಮುಂಬೈ ದಾಳಿ ನಡೆದ ರೀತಿ ನೋಡಿದರೆ, ಈ ಜನಪ್ರಿಯ ರಾಜಕಾರಣ ಎಲ್ಲ ರೀತಿಯ ಭ್ರಷ್ಟತೆಯ ತುತ್ತ ತುದಿ ಮುಟ್ಟಿ, ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ಸೋತಿದೆ ಎಂಬುದು ಸ್ಪಷ್ಟವಾಗುವಂತಿತ್ತು. ಆದರೆ ಇದು ಮುಂಬೈ ದಾಳಿಯಿಂದಷ್ಟೇ ಸ್ಪಷ್ಟವಾದ ಸಂಗತಿಯೇನೂ ಆಗಿರಲಿಲ್ಲ. ಏಕೆಂದರೆ, ನಮ್ಮ ರಾಜಕಾರಣ ಎಂಬುದು ತನ್ನೆಲ್ಲ ಪ್ರಜಾಸತ್ತಾತ್ಮಕ ಗುಣಗಳನ್ನು ಕಳೆದುಕೊಂಡು ದೇಶಸೇವೆಯ ಮುತ್ಸದ್ದಿತನದ ಕೆಲಸವಾಗಿಲ್ಲದೆ; ಅದೊಂದು ದೊಡ್ಡ ಲಾಭಕೋರ ಉದ್ಯಮವಾಗಿ ಪರಿವರ್ತಿತವಾಗಿರುವುದು ಇಂದು ನಿನ್ನೆಯಷ್ಟೆ ಸ್ಪಷ್ಟವಾಗಿರುವ ಸಂಗತಿಯಲ್ಲ. ಹಾಗೇ, ಅದನ್ನು ಹೀಗೆ ಒಂದು ಲಾಭಕೋರ ಉದ್ಯಮವಾಗಿ ಪರಿವರ್ತಿಸಿರುವುದು ಜನ ಸಾಮಾನ್ಯರಲ್ಲ. ಬದಲಿಗೆ, ಇಂದು ರಾಜಕಾರಣಿಗಳನ್ನು ದೂಷಿಸುವ ಮೂಲಕ ರಾಜಕಾರಣವನ್ನು ಹೀಗೆಳೆಯುತ್ತಿರುವ ಈ ಉದ್ಯಮಿಗಳೇ, ಖಾಸಗಿ ವಲಯದ ಆಡಳಿತಗಾರರೇ, ವೃತ್ತಿಪರರೇ!

ತಮಗೆ ಬೇಕಾದ ರಿಯಾಯ್ತಿಗಳನ್ನು, ಅನುಕೂಲಗಳನ್ನು ಪಡೆಯಲು ರಾಜಕಾರಣಿಗಳನ್ನು ಖಾಸಗಿಯಾಗಿ ಭ್ರಷ್ಟಗೊಳಿಸಿ, ಆ ಭ್ರಷ್ಟತೆ ಸಾರ್ವಜನಿಕವಾಗಿ ಹೀಗೆ ಅದಕ್ಷ ವ್ಯವಸ್ಥೆಯ ರೂಪದಲ್ಲಿ ಭಯಾನಕ ಪರಿಣಾಮಗಳೊಂದಿಗೆ ಹೊರಹೊಮ್ಮ ತೊಡಗಿದಾಗ ಇವರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಮ್ಮ ರಾಜಕಾರಣ ಹೀಗೆ ಭ್ರಷ್ಟತೆಯ ಪರಾಕಾಷ್ಠೆ ಮುಟ್ಟಿ, ಒಂದು ದೊಡ್ಡ ಉದ್ಯಮವಾಗಿ ಸಾರ್ವಜನಿಕ ಮಾನ್ಯತೆ ಪಡೆಯಲಾರಂಭಿಸಿದ್ದೂ, ಈ ಉದ್ಯಮಿಗಳು ಪರಿಚಯಿಸಿದ ಹೊಸ ರೀತಿಯ ದುಡಿಮೆ ಮತ್ತು ಸಂಪಾದನೆಯ ಮಾರ್ಗಗಳಿಂದಲೇ: ಸ್ಪರ್ಧಾತ್ಮಕತೆ ಸೃಷ್ಟಿಸಿದ ಹೊಸ ಪರಿಭಾಷೆಯಲ್ಲಿ ಸಹಾಯ, ಸಲಹೆ, ಸೂಚನೆ, ಮಾರ್ಗದರ್ಶನ, ಮಾಹಿತಿ ಇತ್ಯಾದಿಗಳೆಲ್ಲ 'ಸೇವೆ', 'ಉತ್ಪನ್ನ'ಗಳೆಂಬ ವ್ಯಾಪಾರಿ ಹೆಸರುಗಳನ್ನು ಪಡೆದು, ದುಬಾರಿ ಬೆಲೆಯಲ್ಲಿ ಮಾರಾಟವಾಗತೊಡಗಿದ ಮೇಲೇ. ಇಂತಹ ವ್ಯವಸ್ಥೆಯಲ್ಲಿ ನಿಜವಾಗಿ ದುಡಿಯದವರು, ನಿಜವಾಗಿ ದುಡಿಯುವವರಿಗಿಂತ ಹತ್ತು - ನೂರು - ಸಾವಿರ ಪಟ್ಟು ಸೇವಾ ಶುಲ್ಕ, ಕಮೀಷನ್, ಲಾಭ, ಲಾಭಾಂಶ ಇತ್ಯಾದಿ ಹೆಸರುಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕಮಾಯಿಸಲಾರಂಭಿಸಿದ ಮೇಲೇ.

ಇಂತಹ ಸುಲಭ ಹಾಗೂ ಸುಳ್ಳು ದುಡಿಮೆಯ ಕಳ್ಳ ಹಣ ಸೃಷ್ಟಿ ಮಾಡಿದ ವಾತಾವರಣವೇ, ಮುಂಬೈ ದಾಳಿ ಸಾಧ್ಯವಾಗುವಷ್ಟರ ಮಟ್ಟಿಗೆ ನಮ್ಮ ಸಮಾಜವನ್ನು 'ಲೋಲುಪ'ಗೊಳಿಸಿದ್ದು ಎಂಬುದು ಇವರಿಗೆ ಸುಲಭವಾಗಿ ಅರ್ಥವಾಗಲಾರದು. ಏಕೆಂದರೆ ಇವರ ಮನಸ್ಸುಗಳು ತಮ್ಮ ಕಂಪನಿ ಮಟ್ಟ ಮಾತ್ರದ ಲಾಭೋದ್ದೇಶವುಳ್ಳ ಮ್ಯಾನೇಜ್ಮೆಂಟ್ ಪರಿಭಾಷೆಯಲ್ಲಷ್ಟೇ ಯೋಚಿಸಬಲ್ಲವು. ಹೀಗಾಗಿ ಇವು ತಮ್ಮ ಮ್ಯಾನೇಜ್ಮೆಂಟ್ ಪರಿಭಾಷೆಯ ಅರ್ಥಕ್ಕೆ ಸಿಗದ ಜೀವನದ ಮತ್ತು ದುಡಿಮೆಯ ರೀತಿ ನೀತಿಗಳನ್ನು ಸಹಾನುಭೂತಿಯಿಂದ ಅರಿಯುವ ಶಕ್ತಿಯನ್ನೇ ಕಳೆದುಕೊಂಡಿರುತ್ತವೆ. ಅಷ್ಟೇ ಅಲ್ಲ, ಅವನ್ನು ಪುರಾತನ, ಅರ್ಥಹೀನ, ಅಭಿವೃದ್ಧಿ ವಿರೋಧಿಯಾದ ಮತ್ತು 'ಸುಧಾರಣೆಗೆ ಅರ್ಹವಾದ' ಮನೋಭಾವನೆಗಳೆಂದೇ ಪರಿಗಣಿಸುತ್ತವೆ. ಹಾಗಾಗಿ ಇಂತಹ ಮ್ಯಾನೇಜ್ಮೆಂಟ್ ಮನಸ್ಸಿನವರು ಸಮಾಜವನ್ನು ಸದಾ ಎರಡು ಭಾಗಗಳಾಗಿ - ನಾವು ಮತ್ತು 'ಇತರೆ'ಯವರು - ನೋಡುವ ತಾಂತ್ರಿಕತೆಗೆ ಸಿಕ್ಕು, ಸಮಗ್ರವಾಗಿ ಯೋಚಿಸುವ ಭಾವನೆಯನ್ನೇ ಕಳೆದುಕೊಂಡಿರುತ್ತಾರೆ. ಹಾಗಾಗಿಯೇ ಅವರು ಮುಂದಿನ ಪರಿಣಾಮಗಳನ್ನು ಯೋಚಿಸದೆ, 'ಇತರೆ'ಯವರು ನಿಯಂತ್ರಿಸುವ ಜನಪ್ರಿಯ ರಾಜಕಾರಣದ ಮೇಲೆ ಸಾರಾಸಗಟಾಗಿ ದಾಳಿ ನಡೆಸುತ್ತಾರೆ.

ಆದರೆ ಇವರಿಗೆ ನಮ್ಮ ಜನ - ಈ 'ಇತರೆ'ಯವರು - ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಥಣ್ಣಗೆ ಉತ್ತರ ಕೊಟ್ಟಿದ್ದಾರೆ. ಮುಂಬೈ ದಾಳಿ ನಡೆದ ಕೆಲವೇ ದಿನಗಳ ನಂತರ ನಡೆದ ಈ ಚುನಾವಣೆಗಳಲ್ಲಿ ಜನ ಶೇ.60ಕ್ಕೂ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿ, ಮುಂಬೈ ದಾಳಿಯನ್ನು ನೆಪ ಮಾಡಿಕೊಂಡೆಂಬಂತೆ ಈ ಮ್ಯಾನೇಜ್ಮೆಂಟ್ 'ಗುರು'ಗಳು ನಮ್ಮ ಜನಪ್ರಿಯ ರಾಜಕಾರಣದ ವಿಶ್ವಾಸಾರ್ಹತೆಯ ಬಗೆಗೇ ಅಪನಂಬಿಕೆ ಹುಟ್ಟಿಸಲು ಮಾಡಿದ ಯತ್ನಗಳನ್ನು ಹಾಸ್ಯಾಸ್ಪದವೆನ್ನಿಸುವಂತೆ ಮಾಡಿದ್ದಾರೆ. ಮುಂಬೈ ದಾಳಿ ಮತ್ತು ಅದರ ಪರಿಣಾಮವಾಗಿ ಕೆಲವು ವರ್ಗಗಳು ಜನಪ್ರಿಯ ಮಾಧ್ಯಮಗಳಲ್ಲಿ ನಮ್ಮ ರಾಜಕಾರಣದ ಮೂಲ ಸ್ವರೂಪದ ಬಗೆಗೇ ಹುಟ್ಟು ಹಾಕಿದ ಚರ್ಚೆಗಳ ಹಿನ್ನೆಲೆಯಲ್ಲಿ ಈ ಚುನಾವಣೆಗಳು ರಾಷ್ಟ್ರಕ್ಕೆ ಎರಡು ಮುಖ್ಯ ಸಂದೇಶಗಳನ್ನು ನೀಡಿದಂತಿದೆ. ಒಂದು, ಸಾಮಾನ್ಯ ಜನತೆ ಪ್ರಸಕ್ತ ರಾಜಕಾರಣದ ಮೂಲ ಸ್ವರೂಪದ ಬಗೆಗೆ ನಂಬಿಕೆ ಕಳೆದುಕೊಂಡಿಲ್ಲ. ಅದಕ್ಕಿಂತ ಮುಖ್ಯವಾಗಿ ಇನ್ನೊಂದು, ರಾಜಕಾರಣದ ಜಾತೀಕರಣ ಮತ್ತು ಕೋಮುವಾದೀಕರಣಗಳಂತಹ ಭಾವನಾತ್ಮಕ ಪ್ರಚೋದನೆಗಳನ್ನು ತಿರಸ್ಕರಿಸುವ ಪ್ರಬುದ್ಧತೆಯನ್ನು ನಮ್ಮ ಮತದಾರರು ಪ್ರದರ್ಶಿಸತೊಡಗಿದ್ದಾರೆ.

ದೆಹಲಿಯಲ್ಲಿ ಶೀಲಾ ದೀಕ್ಷಿತರ ಗೆಲುವು ಕಾಂಗ್ರೆಸ್ಸಿಗರನ್ನೇ ಗಾಬರಿಗೊಳಿಸಿದ್ದರೆ ಆಶ್ಚರ್ಯವಿಲ್ಲ! ಶೀಲಾ ದೀಕ್ಷಿತ್ ಭಾರತದಲ್ಲಿ ಇನ್ನೂ ಉಳಿದಿರುವ ಜನಪ್ರಿಯ ರಾಜಕಾರಣದ ಸೇವಾ ಘನತೆ ಮತ್ತು ಅದಕ್ಕೆ ಜನತೆ ನೀಡುತ್ತಿರುವ ಮಾನ್ಯತೆಗೆ ಸಾಕ್ಷಿ ಎಂದರೆ ತಪ್ಪಾಗಲಾರದು. ಇನ್ನು ರಾಜಸ್ಥಾನದಲ್ಲಿ ಮಾಜಿ ಯುವರಾಣಿ ವಸುಂಧರಾ ರಾಜೇ ಸಿಂಧ್ಯಾ ಅವರ ಜನ ವಿರೋಧಿ 'ಪ್ರತಿಷ್ಠಿತ' ರಾಜಕಾರಣವನ್ನು ಜನತೆ ತಿರಸ್ಕರಿಸಿ, 'ಕೆಲಸಗಾರಿಕೆ'ಯ ರಾಜಕಾರಣವನ್ನು ಹಂಬಲಿಸಿದ್ದಾರೆ. ಹೋದ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು ಕಂಡಿದ್ದ 'ಕೆಲಸಗಾರ'ನಾದ ಕಾಂಗ್ರೆಸ್ ನಾಯಕ ಅಶೋಕ್ ಗೆಲ್ಹೋಟ್ಗೆ ಈಗವರು ಅವಕಾಶ ಕಲ್ಪಿಸಿದ್ದಾರೆ. ಮಿಝೋರಾಂನಲ್ಲಿ ಕಾಂಗ್ರೆಸ್ಸಿನ ವಿಜಯವಂತೂ ಅಭೂತಪೂರ್ವ ಮತ್ತು ಆಶ್ಚರ್ಯಕರ ಕೂಡ. ಹಾಗೇ, ಮಧ್ಯ ಪ್ರದೇಶ ಮತ್ತು ಛತ್ತೀಸಘಡಗಳಲ್ಲಿ ಕಾಂಗ್ರೆಸ್ ಒಡೆದ ಮನೆಗಳಾಗಿದ್ದುದು ಮತ್ತು ಅಲ್ಲಿನ ಬಿಜೆಪಿ ಮುಖ್ಯಮಂತ್ರಿಗಳು ಕೋಮುವಾದಿ ರಾಜಕಾರಣಕ್ಕಿಂತ, ಜನಪರ ಕಾರ್ಯಕ್ರಮಗಳ ಕಡೆ ಗಮನ ಹರಿಸಿದ್ದೇ ಅವರ ಸರ್ಕಾರಗಳ ಪುನರಾಯ್ಕೆಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಶಿವರಾಜ್ ಸಿಂಗ್ ಚವ್ಹಾಣ್ ಮತ್ತು ರಮಣ ಸಿಂಗ್ ಬಿಜೆಪಿಯ ಕಳಂಕ ರಹಿತ ಹೊಸ ಮುಖಗಳು. ಇಂತಹ ಹೊಸ ಮುಖಗಳೇ ಬಿಜೆಪಿಯ ಹೊಸ ಮುಖವನ್ನೂ ರೂಪಿಸುವಂತಾದರೆ, ಅದು ರಾಷ್ಟ್ರೀಯ ರಾಜಕಾರಣದ ದೊಡ್ಡ ಪಲ್ಲಟಕ್ಕೆ ಕಾರಣವಾದೀತು.

ಆದರೆ ಕರ್ನಾಟಕದ ರಾಜಕಾರಣ ಮಾತ್ರ ಇದಾವುದರ ಪರಿವೆಯೇ ಇಲ್ಲದಂತೆ, ತನ್ನ ಹಳೆಯ ಗೌಡಿಕೆ ಶೈಲಿಯಲ್ಲೇ ಮುಂದುವರೆದಿದೆ. ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ - ಈ ಮೂರೂ, ಜನರ ಮನೋಭಾವನೆಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಂತೆ, ತಮ್ಮ ಭ್ರಷ್ಟ ಮತ್ತು ಜಾತಿ ರಾಜಕಾರಣದ ಮೂಲಕವೇ ಜನತೆಯ ತೀರ್ಪನ್ನು ತಮ್ಮ ಪರವಾಗಿ ನಿಭಾಯಿಸಿಕೊಳ್ಳಬಹುದು ಎಂಬ ದೃಢ ನಂಬಿಕೆಯಿಂದ ತಮ್ಮ ರಾಜಕಾರಣವನ್ನು ಮುಂದುವರೆಸಿವೆ. ಬಿಜೆಪಿಯ 'ಆಪರೇಷನ್ ಕಮಲ'ದ ಭಂಡತನ, ಕಾಂಗ್ರೆಸ್ಸಿನ ಸದ್ಯದ ಪರಿಸ್ಥಿತಿಯಲ್ಲಿ ಅದರ ಅಧ್ಯ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಆಯ್ಕೆಯ ಹಿಂದೆ ನಡೆದ ಪಿತೂರಿ ರಾಜಕಾರಣದ ವೈಖರಿ ಮತ್ತು ಜೆಡಿಎಸ್‌ನ ಕುಟುಂಬ ರಾಜಕಾರಣ ಮುಟ್ಟಿರುವ ನಿರ್ಲಜ್ಜ ಹಂತ; ಕರ್ನಾಟಕದ ರಾಜಕಾರಣ, ರಾಜಕಾರಣಿಗಳ ಕಡೆಯಿಂದಲಂತೂ ಸದ್ಯಕ್ಕೆ ಬದಲಾಗುವಂತೆ ತೋರುತ್ತಿಲ್ಲ ಎಂಬುದನ್ನು ಸೂಚಿಸುವಂತಿವೆ. ಇದಕ್ಕೆ ಈ ಪಕ್ಷಗಳ ನಾಯಕತ್ವವಷ್ಟೇ ಕಾರಣವಲ್ಲ. ಅವುಗಳ ಕಾರ್ಯಕರ್ತರ ಗುಣಮಟ್ಟವೂ ಅವುಗಳ ಅವನತಿಗೆ ಕಾರಣವಾಗಿದೆ.

ಸದ್ಯದ ಉಪಚುನಾವಣೆಗಳ ಪ್ರಕ್ರಿಯೆಯನ್ನೇ ಗಮನಿಸಿ. ಮದ್ದೂರಿನ ಹೊರತಾಗಿ ಮಿಕ್ಕೆಲ್ಲ ಕಡೆ ನಡೆಯುತ್ತಿರುವ ಉಪಚುನಾವಣೆಗಳಿಗೆ ಬಿಜೆಪಿಯೇ ಕಾರಣವಾಗಿದೆ. ಅದು ತನ್ನ 'ಆಪರೇಷನ್ ಕಮಲ'ದ ಮೂಲಕ ಕರ್ನಾಟಕದ ರಾಜಕಾರಣದ ಕಟ್ಟ ಕಡೆಯ ಮಾನ ಸ್ಥಾನದ ಮೇಲಿನ ಬಟ್ಟೆಯನ್ನೂ ಕಿತ್ತೆಸೆದಿದೆ! ಅಷ್ಟೇ ಅಲ್ಲ, ಅದು ತನ್ನ ಅಧಿಕಾರ ಸುಭದ್ರತೆಗಾಗಿ ಇದನ್ನು ಮಾಡುವುದು ಅನಿವಾರ್ಯವೆಂದು ಹೇಳಿಕೊಳ್ಳುವ ಭಂಡ ಧೈರ್ಯ ತೋರಿದೆ. ಇದಕ್ಕೆ ಮತ್ತೆ ಕಾರಣ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಳೆದ ಚುನಾವಣೆಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ಸಾಧ್ಯವಾಗುವಂತಹ 'ಅಯೋಗ್ಯ'ರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದೇ ಆಗಿದೆ. ಆದರೆ, ಅಂತಹ ಅಯೋಗ್ಯರನ್ನು ಬಿಜೆಪಿ, ಮಂತ್ರಿಗಿರಿ ಮತ್ತಿತರ ಆಮಿಷಗಳ ಮೂಲಕ ತನ್ನೆಡೆಗೆ ಸೆಳೆದುಕೊಂಡು ಈಗ ಅವರನ್ನೇ ತನ್ನ ಅಭ್ಯರ್ಥಿಗಳನ್ನಾಗಿ ಜನರ ಮುಂದೆ ನಿಲ್ಲಿಸುವ ಮೂಲಕ ಈ ಭ್ರಷ್ಟ ಮತ್ತು ದುಷ್ಟ ರಾಜಕಾರಣದ ವೃತ್ತವನ್ನು ಪೂರ್ಣಗೊಳಿಸಿದೆ. ಜನ ಇವರಲ್ಲಿ ಯಾರನ್ನು ಶಿಕ್ಷಿಸಬೇಕೋ ಗೊತ್ತಾಗದೆ ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಗೊಂದಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪಕ್ಷಗಳು, ಈ ಜಾತಿ ಮತ್ತು ಹಣದ ದುಷ್ಟ ಮತ್ತು ಭ್ರಷ್ಟ ರಾಜಕಾರಣದ ವೃತ್ತವನ್ನು ವಿಸ್ತರಿಸಲು ಸನ್ನದ್ಧವಾಗಿವೆ.

ಸದಾ ಸಾವಿನ - ತಮ್ಮನ್ನು ಮುಗಿಸಲು ಹೊಂಚು ಹಾಕಲಾಗುತ್ತಿದೆ ಎಂಬ ಭಯದಲ್ಲೇ - ಬದುಕುತ್ತಾ, ಅದನ್ನೇ ನೆಪ ಮಾಡಿಕೊಂಡು ತನ್ನ ಸಮಯ ಸಾಧಕ ರಾಜಕಾರಣದ ಎಲ್ಲ ದುಷ್ಟತನ ಮತ್ತು ಭ್ರಷ್ಟತೆಯನ್ನು ಸಮರ್ಥಿಸಿಕೊಳ್ಳುತ್ತಾ ಬಂದಿರುವ ಜೆಡಿಎಸ್, ಈ ಚುನಾವಣೆಯಲ್ಲಿ ತನ್ನ ಕುಟುಂಬ ಲಂಪಟ ರಾಜಕಾರಣದ ಪರಾಕಾಷ್ಠತೆಯನ್ನು ಮುಟ್ಟಿದೆ. ಮಧುಗಿರಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ನೆಪವೊಡ್ಡಿ ಅನಿತಾ ಕುಮಾರಸ್ವಾಮಿಯವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಮತ್ತು ಅದನ್ನು ಕುಮಾರಸ್ವಾಮಿಯವರು, 'ನಾವು ನಮ್ಮ ಮನೆಯ ಆಳನ್ನಾದರೂ ನಿಲ್ಲಿಸುತ್ತೇವೆ. ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ' ಎಂದು ಗಳುಹುವ ಮೂಲಕ ಪ್ರಜಾಸತ್ತೆಯನ್ನು ಒಂದು ಊಳಿಗಮಾನ್ಯಶಾಹಿಯ ಆಟವನ್ನಾಗಿ ಪರಿವರ್ತಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ಪಕ್ಷವನ್ನು ಕುಟುಂಬದ ಆಸ್ತಿಯನ್ನಾಗಿ ಪರಿವರ್ತಿಸಿಕೊಂಡಿರುವ ಇವರು, ಇಂತಹ ಠೇಂಕಾರದ ಅಧಿಕಾರ ರಾಜಕಾರಣದ ಮೂಲಕ ರಾಜ್ಯವನ್ನೇ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹವಣಿಸುತ್ತಿರುವಂತಿದೆ. ಈ ಕುಟುಂಬದ ಸದಸ್ಯರೊಬ್ಬಬ್ಬರ ಘೋಷಿತ ಆಸ್ತಿ ವಿವರಗಳೇ ಈ ಹವಣಿಕೆಯನ್ನು ಸಾಬೀತು ಪಡಿಸುವಂತಿವೆ. ರಾಜಕಾರಣವೆಂಬುದು ಇವರಿಗೆ ಒಂದು ಕೌಟುಂಬಿಕ ದಂಧೆಯಾದಂತಿದೆ. ಇದಕ್ಕೆ ಯಾವ ಮಾರ್ಗವೂ ಅಪವಿತ್ರ ಅಥವಾ ಅನೀತಿಯುತವಲ್ಲ. ಹಾಗಾಗಿಯೇ ಎರಡು ವರ್ಷಗಳ ಹಿಂದೆ, ಸೆಕ್ಯುಲರಿಸಂ ಎಂದರೆ ನಿಘಂಟನ್ನೆಲ್ಲ ಹುಡುಕಿದರೂ ಅರ್ಥ ಸಿಗಲಿಲ್ಲ ಎಂದು ಸಂಘ ಪರಿವಾರದವರ ಹೃದಯಗಳಲ್ಲಿ ಪುಳಕ ಹುಟ್ಟಿಸಿ ಅಧಿಕಾರ ಹಿಡಿದ ಕುಮಾರಸ್ವಾಮಿಯವರು, ಅಂಡ ಭಂಡ ರಾಜಕಾರಣ ಮಾಡಿ ಅಧಿಕಾರ ಕಳೆದುಕೊಂಡ ನಂತರ ಈಗ ಯಾವುದೇ ಸಂಕೋಚವಿಲ್ಲದೆ ಸೆಕ್ಯುಲರಿಸಂ ತತ್ವದ ರಕ್ಷಣೆಗಾಗಿ, ಬಿಜೆಪಿ ವಿರೋಧಿ ರಾಜಕಾರಣ ಮಾಡತೊಡಗಿದ್ದಾರೆ!

ಹಾಗೆ ನೋಡಿದರೆ ಜೆಡಿಎಸ್, ರಾಜಕಾರಣವನ್ನು ಕೌಟುಂಬಿಕ ದಂಧೆ ಮಾಡಿಕೊಂಡಿರುವುದರ ಒಂದು ಅತ್ಯಂತ ಭಂಡ ಉದಾಹರಣೆಯಷ್ಟೆ. ಈ ವಿಷಯದಲ್ಲಿ ಇತರ ಪಕ್ಷಗಳೇನೂ ಹಿಂದೆ ಬಿದ್ದಿಲ್ಲ. ರಾಷ್ಟ್ರ ಮಟ್ಟದಲ್ಲಿ ಕೌಟುಂಬಿಕ ರಾಜಕಾರಣದ ಮೂಲ ಪೋಷಕನಂತಿರುವ ಕಾಂಗ್ರೆಸ್ಸಿನ ಹಲವು ನಾಯಕರು 'ಯುವ ನಾಯಕತ್ವ'ದ ಹೆಸರಿನಲ್ಲಿ ತಮ್ಮ ಮಕ್ಕಳನ್ನೇ ಈ ದಂಧೆಗೆ ಇಳಿಸಿ ಕೃತಾರ್ಥರಾಗಿದ್ದಾರೆ. ಈ ಪಕ್ಷದಲ್ಲಿನ 'ಟಿಕೆಟ್ ಮಾರಾಟ' ಹಗರಣ ಸ್ಫೋಟಗೊಂಡಿದ್ದೇ ತಮ್ಮ ಮಗನಿಗೆ ಟಿಕೆಟ್ ನೀಡಲಿಲ್ಲವೆಂಬ ಮಾರ್ಗರೆಟ್ ಆಳ್ವರ ಅಸಮಧಾನದಿಂದಲೇ ಅಲ್ಲವೇ? ಅದಿರಿಲಿ, ಈ ಪಕ್ಷದ ರಾಜ್ಯ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ರಾಜಕೀಯ ಚಾರಿತ್ರ್ಯ ಮತ್ತು ಬಹುಶಃ ಆ ಕಾರಣದಿಂದಾಗಿಯೇ ಎದ್ದು ಕಾಣುವಂತಿರುವ ಅವರ ಆಸ್ತಿಯ ಪ್ರಮಾಣದ ದಿಢೀರ್ ಏರಿಕೆಯ ಗತಿಯನ್ನು ಗಮನಿಸಿದ ಯಾರಿಗಾದರೂ, ಇವರ ನೇತೃತ್ವದಲ್ಲಿ ರಾಜ್ಯ ರಾಜಕಾರಣದ ಗುಣಮಟ್ಟವನ್ನು ಸುಧಾರಿಸಬಹದು ಎಂಬ ನಂಬಿಕೆ ಬರಲು ಸಾಧ್ಯವೇ ಇಲ್ಲ. ಇನ್ನು ಬಿಜೆಪಿ ಕೂಡ ರಾಷ್ಟ್ರ ಮತ್ತು ರಾಜ್ಯ ಮಟ್ಟಗಳೆರಡರಲ್ಲೂ ಕೌಟುಂಬಿಕ ರಾಜಕಾರಣವನ್ನು ಪೋಷಿಸುವುದರಲ್ಲಿ, ಯಾವ ಸಂಕೋಚವನ್ನೂ ಪ್ರದರ್ಶಿಸಿಲ್ಲ! ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಣ್ಣು ಮತ್ತು ಗಂಡು ಮಕ್ಕಳೆಲ್ಲರೂ ಬೆಂಗಳೂರು, ಶಿವಮೊಗ್ಗ ಮತ್ತು ಶಿಕಾರಿಪುರಗಳಲ್ಲಿ ಅಪ್ಪನ ಕೋಟ್ಯಾಂತರ ರೂಪಾಯಿಗಳ ವಿವಿಧ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಾ ವಿವಿಧ ಹಂತಗಳಲ್ಲಿ ರಾಜಕೀಯ ತರಬೇತಿ ಪಡೆಯುತ್ತಿದ್ದಾರೆ. ಒಬ್ಬ ಮಗ ಈಗಾಗಲೇ ತಂದೆಯ ಹಾದಿಯಲ್ಲೇ ನಡೆಯುತ್ತಾ, ಶಿಕಾರಿಪುರದ ಪರಸಭೆಯ ಸದಸ್ಯರಾಗಿ 'ರಾಜಕೀಯ ಸೇವೆ'ಯನ್ನೂ ಆರಂಭಿಸಿದ್ದಾರೆ.

ಹೀಗೆ ರಾಜಕಾರಣವೆಂದರೆ ಕುಟುಂಬದ 'ದಂಧೆ'ಯನ್ನು ಎಲ್ಲ ರಕ್ಷಣೆ ಮತ್ತು ಪೋಷಣೆಗಳೊಂದಿಗೆ ಮುಂದುವರೆಸಿಕೊಂಡು ಹೋಗುವ ಸುಲಭ ಮತ್ತು ಸುರಕ್ಷಿತ ಮಾರ್ಗವೆನಿಸಿಬಿಟ್ಟಿದೆ. ಈ ಉಪಚುನಾವಣೆಗಳಲ್ಲಿನ ಪ್ರಮುಖ ಪಕ್ಷಗಳ ಅಭ್ಯಥಿಗಳೆಲ್ಲರ ಆಸ್ತಿ ವಿವರಗಳು ಇದನ್ನು ಸಾಬೀತು ಪಡಿಸುವಂತಿವೆ. ಹಾಗೇ ಈ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳ ವತಿಯಿಂದ ಕುಟುಂಬ ರಾಜಕಾರಣದ ಪ್ರೋತ್ಸಾಹ ನಿರ್ಲಜ್ಜವಾಗಿ ನಡೆದಿದೆ. ಚೆನ್ನಿಗಪ್ಪನಂತಹವರಿಗೆ ಟಿಕೆಟ್ ನೀಡಿ ಬಿಜೆಪಿ ಉಳಿದಿದ್ದ ತನ್ನೆಲ್ಲ ಮಾನವನ್ನೂ ಹರಾಜು ಹಾಕಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಉಪಚುನಾವಣೆಗಳಲ್ಲಿ ಯಾರು ಸೋತರೂ, ಯಾರು ಗೆದ್ದರೂ ರಾಜ್ಯ ರಾಜಕಾರಣದ ಮೇಲೆ ಯಾವುದೇ ಗುಣಾತ್ಮಕ ಪರಿಣಾಮ ಆಗಲಾರದು. ಆದರೆ ಜನರ ನೈತಿಕ ಭಯವಿಲ್ಲದೆ, ಅವರ ವಿವೇಚನೆಗೇ ಸವಾಲೊಡ್ಡುವಂತೆ ಪ್ರಜಾಸತ್ತೆಯ ಬುಡಕ್ಕೇ ಕೊಡಲಿ ಹಾಕಲು ಯತ್ನಿಸಿರುವ ಬಿಜೆಪಿಗೆ ಬುದ್ಧಿ ಕಲಿಸಿದರೆ ಒಳ್ಳೆಯದೇ.

ಅದೇನೇ ಇರಲಿ, ಮುಂಬೈ ದಾಳಿಯ ಭಯಾನಕತೆಯ ಹಿನ್ನೆಲೆಯಲ್ಲಿ ತಮ್ಮ ಪ್ರಾಣ ಮತ್ತು ವ್ಯಾಪಾರ ವಹಿವಾಟುಗಳ ಭದ್ರತೆಯ ಬಗೆಗಿನ ಸಹಜ ಆತಂಕದ ಗೊಂದಲದಲ್ಲಿ, ರಾಜಕಾರಣದ ಬಗೆಗೇ ಜನತೆಯಲ್ಲಿ ಸಿನಿಕತೆ ಹುಟ್ಟಿಸುವ ಪ್ರಯತ್ನದಲ್ಲಿರುವ ನಮ್ಮ ಹೊಸ ಪ್ರತಿಷ್ಠಿತ ವರ್ಗ ಈ ಮೂಲಕ ಅತ್ಯಂತ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದೆ ಎಂದೇ ಹೇಳಬೇಕು. ಇವರಿಗೆ ಮತ್ತು ಇವರ ನವ ಮಧ್ಯಮ ವರ್ಗದ ಅನುಯಾಯಿಗಳಿಗೆ ಗೊತ್ತಾಗಬೇಕಾದುದೇನಂದರೆ, ರಾಜಕಾರಣ ಕುರಿತ ಇಂತಹ ಸಾರಾ ಸಗಟು ಸಿನಿಕತೆಯಿಂದ ಸೇನೆಯ ಅಥವಾ ಸಮಯಸಾಧಕ ರಾಜಕಾರಣದ ಸರ್ವಾಧಿಕಾರ ಸ್ಥಾಪನೆಗೆ ಪೂರಕವಾದ ವಾತಾವರಣವಷ್ಟೇ ಸೃಷ್ಟಿಯಾಗಬಲ್ಲುದು. ಇದು ಎಲ್ಲ ರೀತಿಗಳಲ್ಲಿ ಈಗಿರುವುದಕ್ಕಿಂತ ಹೆಚ್ಚು ಭಯಾನಕವಾದ ಪರಿಸ್ಥಿತಿಯನ್ನು ಮಾತ್ರ ನಿರ್ಮಿಸಬಲ್ಲುದು. ಆದುದರಿಂದ ಈ ವರ್ಗಕ್ಕೆ ವಿವೇಕ, ಪ್ರಬುದ್ಧತೆಗಳಿದ್ದರೆ ಮತ್ತು ನಿಜವಾದ ರಾಷ್ಟ್ರಪ್ರೇಮ, ನಾಗರಿಕ ಸಮಾಜದ ಕಳಕಳಿ ಇದ್ದರೆ, ಅದು ಇಂದಿನ ರಾಜಕಾರಣವನ್ನು ಸುಧಾರಿಸುವ, ಶುದ್ಧೀಕರಿಸುವ ಪ್ರಯತ್ನಗಳನ್ನು ಮಾಡುವುದು ಒಳಿತು. ಹಲವು ಮಟ್ಟಗಳಲ್ಲಿ ಸಮಾಜದ ಹಿರಿಯರ, ಸಭ್ಯರ, ಗಣ್ಯರ ಸಮಿತಿಗಳನ್ನು ರಚಿಸಿ, ಅವುಗಳ ಮೂಲಕ ಚುನಾವಣೆಗಳಿಗೆ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ; ಅವರನ್ನು ಗೆಲ್ಲಿಸಲು ಸಾಧ್ಯವಾಗುವಂತಹ ಪ್ರಜಾಸತ್ತಾತ್ಮಕ ಸಂಘಟನೆ ಮತ್ತು ಅಗತ್ಯ ನಿಧಿ ಸ್ಥಾಪನೆಗೆ ಇವರು ಮುಂದಾಗಬೇಕು. ಇದು ಸಣ್ಣ ಮಟ್ಟದಲ್ಲೇ ಆರಂಭವಾಗಲಿ. ಆದರೆ ಅದೊಂದು ದೊಡ್ಡ ಬದಲಾವಣೆಗೆ ನಾಂದಿಯಾದೀತು. ಇದರ ಬದಲಿಗೆ ಬರೀ ರಾಜಕಾರಣಿಗಳ ವಿರುದ್ಧ, ರಾಜಕಾರಣದ ವಿರುದ್ಧ ಗುಟುರು ಹಾಕುವುದು ನಮ್ಮ ರಾಷ್ಟ್ರೀಯ ಹೋರಾಟದ ಸಾಧನೆಗಳೆಲ್ಲವನ್ನೂ ಮಣ್ಣುಗೂಡಿಸುವ ಪ್ರಯತ್ನವಾದೀತು.