ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...

ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...

ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವೈಯಕ್ತಿಕ ಮಟ್ಟದಲ್ಲಿ, ಗುಂಪು ಘರ್ಷಣೆಗಳು, ಯೋಜಿತ ಘಟನೆಗಳು, ತಕ್ಷಣದ ಕೋಪೋದ್ರಿಕ್ತ ಪ್ರತಿಕ್ರಿಯೆಗಳು ತುಂಬಾ ಹೆಚ್ಚಾಗುತ್ತಿದೆ. ಹಿಂಸೆಯ ಪ್ರಮಾಣ, ತೀವ್ರತೆ, ವಿಕೃತಿ ಸಹ ಭಯ ಮೂಡಿಸುತ್ತಿದೆ. ರಾಜಕೀಯ ಮಾತ್ರವಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲು ಹಿಂಸೆ ವ್ಯಾಪಕವಾಗಿ ಹರಡುತ್ತಿದೆ.

ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಹಾಡಿ ಹೊಗಳುವ ಮತ್ತು ಭವಿಷ್ಯದಲ್ಲಿ ವಿಶ್ವಗುರುವಾಗುವ ಕನಸುಗಳನ್ನು ಕಾಣುವವರು ಎಚ್ಚೆತ್ತುಕೊಳ್ಳುವ ಸಮಯವಿದು. ಹೊಸ ಕ್ರಿಮಿನಲ್ ಕಾನೂನುಗಳನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವ ಸಮಯದಲ್ಲಿ ದೇಶದ ಸಾಮಾನ್ಯ ಜನ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ. ದೇಶದ ಪೋಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಅಥವಾ ಭಯ ಎರಡೂ ಇಲ್ಲ. ಎಂತಹ ಗಂಭೀರ ಪ್ರಮಾಣದ ಅಪರಾಧ ಮಾಡಿದ ನಂತರವೂ ಹಣವಿದ್ದರೆ ಪ್ರಖ್ಯಾತ ವಕೀಲರನ್ನು ನೇಮಿಸಿ ಆರೋಪದಿಂದ ಮುಕ್ತವಾಗಬಹುದು ಎಂಬ ಬಲವಾದ ನಂಬಿಕೆ ಬಹುತೇಕ ಜನರಲ್ಲಿ ಬೇರೂರಿದೆ.

ಈಗ ಅದೇ ಕಾನೂನುಗಳಿಗೆ ಸ್ವಲ್ಪ ಹೊಸರೂಪ ನೀಡಲಾಗುತ್ತಿದೆಯಷ್ಟೇ ಜೊತೆಗೆ ಸ್ವಲ್ಪ ಕಠಿಣವೂ ಆಗಿದೆ. ಅದರ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕ ಚರ್ಚೆಯ ಸಂದರ್ಭದಲ್ಲಿ ಪರಿಣಿತ ವಕೀಲರಿಂದ ತಿಳಿಯಬಹುದು. ಆದರೆ ಅಪರಾಧ ಕಾನೂನುಗಳ ನಿಯಮಗಳ ಹೆಚ್ಚುಗಾರಿಕೆ ದೇಶದ ಪ್ರಗತಿಯ ಲಕ್ಷಣವಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕು. ಏಕೆಂದರೆ ಭಾರತದ ಸಾಮಾಜಿಕ ದೃಷ್ಟಿಕೋನದಿಂದ ಹೇಳುವುದಾದರೆ " ಕಾನೂನು ಹೆಚ್ಚಾದಷ್ಟು ಅಪರಾಧಗಳು ಹೆಚ್ಚಾಗುತ್ತವೆ " 

" ನ್ಯಾಯಾಲಯಗಳು ಕಾನೂನು ನೀಡುತ್ತವೆಯೇ ಹೊರತು ಸತ್ಯ ಮತ್ತು ನ್ಯಾಯವನ್ನೇ ನೀಡುತ್ತವೆ ಎಂಬ ಖಚಿತತೆ ಇಲ್ಲ "

" ನ್ಯಾಯಾಲಯದಲ್ಲಿ ಗೆದ್ದವನು ಸೋತ, ಸೋತವನ್ನು ಸತ್ತ "

" ನ್ಯಾಯಾಲಯದ ತೀರ್ಪುಗಳನ್ನು ಪರಿಶೀಲಿಸಿದಾಗ ಬಹುತೇಕ ಅಪರಾಧಿಗಳಿಗೇ ಹೆಚ್ಚು ಅನುಕೂಲಕರ ಮತ್ತು ಅವು ಶ್ರೀಮಂತರ ಪರವಾಗೇ ಇರುವುದು ಕಂಡುಬರುತ್ತದೆ "

ಹಾಗೆಯೇ ಭಾರತದ ಪೋಲೀಸ್ ವ್ಯವಸ್ಥೆ ಬಹುತೇಕ ಭ್ರಷ್ಟಾಚಾರದ ವಿಷಯದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವಷ್ಟು ಭ್ರಷ್ಟಗೊಂಡಿದೆ " ಎಂದು ಖಾಸಗಿ ಅಧ್ಯಯನವೊಂದು ವರದಿ ನೀಡಿದ ಬಗ್ಗೆ ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇವುಗಳ ಆಧಾರದ ಮೇಲೆ ಹೇಳುವುದಾದರೆ, ಭಾರತದ ಹಿಂಸಾ ಪ್ರವೃತ್ತಿ ಇಲ್ಲಿನ ನೆಲದ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ಪೂರಕವಾಗಿರದೆ ಅದಕ್ಕೆ ವಿರುದ್ಧವಾಗಿದೆ ಎಂದು ಹೇಳಬಹುದು. ಕೆಲವರು ಜನಸಂಖ್ಯೆಯ ಹೆಚ್ಚಳದ ಪರಿಣಾಮ ಅಪರಾಧಗಳ ಸಂಖ್ಯೆಯು ಹೆಚ್ಚುತ್ತಿದೆ ಮತ್ತು ಮಾಧ್ಯಮ - ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮ ಎಲ್ಲಾ ಅಪರಾಧಗಳು ಜನರಿಗೆ ಬೇಗ ತಲುಪುತ್ತಿವೆಯೇ ಹೊರತು ಅಪರಾಧಗಳ ಸರಾಸರಿ ಅಷ್ಟೇ ಇದೆ ಎಂಬ ವಾದವನ್ನು ಸಹ ಮಂಡಿಸುತ್ತಾರೆ.

ಆದರೆ ವಾಸ್ತವದಲ್ಲಿ ಆರ್ಥಿಕ ಉದಾರೀಕರಣದ ನಂತರ ಅಪರಾಧಗಳ ಸಂಖ್ಯೆ ಗಣನೀಯ ಏರಿಕೆಯಾಗಿರುವುದು ನಿಜ. ಈಗ ಆಡಳಿತ ವ್ಯವಸ್ಥೆ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳು, ಜಿಡಿಪಿ, ತಂತ್ರಜ್ಞಾನ, ಡಿಜಿಟಲ್ ವ್ಯವಹಾರ ಮುಂತಾದವು ಮಾತ್ರ ಎಂದು ಭಾವಿಸದೆ ಸಮಾಜದ ಕಾನೂನು ಸುವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸಬೇಕು.

ಭದ್ರತೆ ಇಲ್ಲದ, ರಕ್ಷಣೆ ಇಲ್ಲದ, ನೆಮ್ಮದಿ ಇಲ್ಲದ, ಸುರಕ್ಷತೆ ಇಲ್ಲದ, ಭಯದ ವಾತಾವರಣದ ಅಭಿವೃದ್ಧಿಯಿಂದ ಯಾವುದೇ ಪ್ರಯೋಜನವೂ ಇಲ್ಲ. ಒಂದು ಮದುವೆ, ಆಸ್ತಿ ಖರೀದಿ, ದೂರದ ಪ್ರಯಾಣ ಮುಂತಾದ ವ್ಯಾವಹಾರಿಕತೆಗಳಲ್ಲಿ ಅಪನಂಬಿಕೆ ಹೆಚ್ಚಾಗಿ, ವಂಚನೆಗಳ ಅನುಮಾನ ಸದಾ ಕಾಡುತ್ತಿದ್ದರೆ ಬದುಕಿನ ಗುಣಮಟ್ಟವೇ ಕುಸಿಯುತ್ತದೆ. ಅದು ಪರೋಕ್ಷವಾಗಿ ಅಪಘಾತ, ಆತ್ಮಹತ್ಯೆ, ಅನಾರೋಗ್ಯದ ಮೂಲವಾಗಿ ಪರಿವರ್ತನೆಯಾಗುತ್ತದೆ.

ಪೋಲೀಸ್ ಠಾಣೆಗಳ ಹೆಚ್ಚಳ, ನ್ಯಾಯಾಲಯಗಳ ಹೆಚ್ಚಳ, ಸಿಸಿ ಟಿವಿಗಳ ಹೆಚ್ವಳ, ಜೈಲುಗಳ ಹೆಚ್ಚಳ, ಆಸ್ಪತ್ರೆಗಳ ಹೆಚ್ಚಳ ದೇಶದ ನಾಗರಿಕ ನೀತಿ ಸಂಹಿತೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಗ್ರಂಥಾಲಯಗಳ ಹೆಚ್ಚಳ, ಕ್ರೀಡಾಂಗಣಗಳ ಹೆಚ್ಚಳ, ಸಂಶೋಧನಾ ಕೇಂದ್ರಗಳ ಹೆಚ್ಚಳ, ಶೈಕ್ಷಣಿಕ ಸಂಸ್ಥೆಗಳ ಹೆಚ್ಚಳ, ಮನೋರಂಜನಾ ಕ್ಷೇತ್ರಗಳ ಹೆಚ್ಚಳ, ಕೈಗಾರಿಕೆಗಳ ಹೆಚ್ಚಳ ಮುಂತಾದುವು ದೇಶದ ಹೆಮ್ಮೆಯ ಸಂಗತಿಗಳು.

ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ಭಾರತ ದೇಶದ ನಿಜವಾದ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುವ ನಿಜವಾದ ಸವಾಲು ಜ‌ನ ಸಾಮಾನ್ಯರ ಮುಂದಿದೆ. ನಾವುಗಳು ನಮ್ಮ ನಮ್ಮ ಮಟ್ಟದಲ್ಲಿ ದಿನನಿತ್ಯದ ಜೀವನದಲ್ಲಿ  ಅಪರಾಧಗಳನ್ನು ತಡೆಗಟ್ಟಲು ನಮ್ಮ ಮಿತಿಯಲ್ಲಿ ಸ್ವಲ್ಪ ಸ್ವಲ್ಪ ಪ್ರಯತ್ನಿಸೋಣ. ಅದು ನೈತಿಕ ನೆಲೆಯ ಒಂದು ಚಳವಳಿಯಾಗಿ ಬೆಳೆದರೆ ಭಾರತ ಆಧ್ಯಾತ್ಮದ ತವರೂರು ಎಂದು ಇತಿಹಾಸಕಾರರು ಕರೆದುದ್ದಕ್ಕೆ ಸಾರ್ಥಕತೆ ಸಿಗುತ್ತದೆ. ಇಲ್ಲದಿದ್ದರೆ ಹಿಂಸಾತ್ಮಕ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರುತ್ತದೆ. ಆಯ್ಕೆ ನಮ್ಮ ಮುಂದಿದೆ.

ಎಲ್ಲರಿಗೂ 77 ನೆಯ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಆ ಸ್ವಾತಂತ್ರ್ಯದ ಜವಾಬ್ದಾರಿ ಅರಿತು ಮುನ್ನಡೆಯೋಣ. ಓದುವುದನ್ನು ಅರ್ಥಮಾಡಿಕೊಂಡು, ಅರ್ಥಮಾಡಿಕೊಂಡಿದ್ದನ್ನು ಅಳವಡಿಸಿಕೊಂಡು, ಅಳವಡಿಸಿಕೊಂಡಿದ್ದನ್ನು ನಿರಂತರವಾಗಿ ಅನುಸರಿಸುವುದೇ ನಿಜವಾದ ಭಾರತೀಯರ ಕರ್ತವ್ಯ ಮತ್ತು ಜವಾಬ್ದಾರಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ