ಹೊಸ ವರುಷಕ್ಕಾಗಿ ಐದು ಸಂಕಲ್ಪ
ಹೊಸ ವರುಷ ಮತ್ತೆಮತ್ತೆ ಬರುತ್ತದೆ. ಅದು ಕಾಲ ನಿಯಮ. ಹೊಸ ವರುಷ ಬಂದಾಗ ಹೊಸತನದಿಂದ ಮುನ್ನಡೆಯುದಷ್ಟೇ ನಾವು ಮಾಡಬಹುದಾದ ಕೆಲಸ.
ಅದಕ್ಕಾಗಿ "ಹೊಸ ವರುಷದ ಸಂಕಲ್ಪ”ಗಳನ್ನು ಮಾಡುವ ಹುಮ್ಮಸ್ಸು ಹಲವರಿಗೆ. ಇದು ಒಳ್ಳೆಯ ಕೆಲಸ. ಆದರೆ, ಈ ಸಂಕಲ್ಪಗಳು ಮಳೆಗಾಲದ ಮಿಂಚಿನಂತಾಗಬಾರದು ಅಷ್ಟೇ. ಸಂಕಲ್ಪಗಳನ್ನು ಸಾಧಿಸುವ ಛಲ ಬೆಳೆಸಿಕೊಳ್ಳೋಣ.
ಎಲ್ಲರೂ ಸಾಧಿಸಬಹುದಾದ ಐದು ಸಂಕಲ್ಪಗಳನ್ನು ಪರಿಶೀಲಿಸೋಣ.
೧)ಮನೆಯಿಂದ ಹೋಗುವಾಗೆಲ್ಲ ಬಟ್ಟೆ ಚೀಲವೊಂದನ್ನು ಒಯ್ಯುವುದು. ಖರೀದಿಸಿದ ವಸ್ತುಗಳನ್ನೆಲ್ಲ ಮನೆಗೆ ತರಲಿಕ್ಕಾಗಿ ಅದರ ಬಳಕೆ ಮಾಡೋಣ. ಈ ವರೆಗೆ ದಿನಕ್ಕೆ ಸರಾಸರಿ ಒಂದು ಪ್ಲಾಸ್ಟಿಕ್ ಕೈಚೀಲ ತರುತ್ತಿದ್ದರೆ, ವರುಷಕ್ಕೆ ೩೬೫ ಪ್ಲಾಸ್ಟಿಕ್ ಕೈಚೀಲ ಮನೆಗೆ ಬರುತ್ತಿತ್ತು. ಇನ್ನು ಅದು ತಪ್ಪಿದರೆ ಅಷ್ಟರ ಮಟ್ಟಿಗೆ ನನ್ನಿಂದಾಗುವ ಪರಿಸರ ಹಾನಿ ತಪ್ಪಿಸಿದಂತಾಯಿತು.
೨)ತಿಂಗಳಿಗೊಂದಾದರೂ ಸದಭಿರುಚಿಯ ಪುಸ್ತಕ ಖರೀದಿಸಿ ಓದುವುದು. ನಾವು ಓದುವ ಅಭ್ಯಾಸ ಮುಂದುವರಿಸದಿದ್ದರೆ, ಮುಖ್ಯ ಕೌಶಲ್ಯವೊಂದನ್ನು ಕಳೆದುಕೊಳ್ಳುತ್ತೇವೆ. ಪ್ರೇರಣಾತ್ಮಕ ಕತೆಗಳು, ಜನಪದ ಕತೆಗಳು, ಸಕಾರಾತ್ಮಕ ಕತೆಗಳು, ಆತ್ಮಕತೆಗಳು, ಪ್ರವಾಸದ ಅನುಭವಗಳು - ಇವು ಖಂಡಿತವಾಗಿಯೂ ನಮಗೆ ಬದುಕಿನ ಬಗ್ಗೆ ಹೊಸ ಒಳನೋಟಗಳನ್ನು ನೀಡುತ್ತವೆ. ನಮ್ಮ ಅರಿವಿನ ದಿಗಂತವನ್ನು ವಿಸ್ತರಿಸುತ್ತವೆ.
೩)ಐದು ಗಿಡಗಳನ್ನು ನೆಟ್ಟು ಪೋಷಿಸುವುದು - ಕುಂಡಗಳಲ್ಲಿ ಅಥವಾ ಮನೆಯ ಸುತ್ತಮುತ್ತಲಿನ ಜಾಗದಲ್ಲಿ. ಅವು ಹೂವಿನ, ಅಲಂಕಾರಿಕ ಎಲೆಗಳ ಅಥವಾ ತರಕಾರಿ ಗಿಡಗಳಾಗಿರಬಹುದು. ಅವಕ್ಕೆ ಆಗಾಗ ನೀರೆರೆಯುತ್ತ, ಗೊಬ್ಬರ ಹಾಕುತ್ತಾ ಪ್ರಕೃತಿಯೊಂದಿಗೆ ಒಡನಾಟ ಬೆಳೆಸಿಕೊಳ್ಳೋಣ. ಅವುಗಳಲ್ಲಿ ಹೂ ಅರಳಿದಾಗ, ಹೊಸ ಚಿಗುರು ಚಿಗುರಿದಾಗ, ತರಕಾರಿ ಕೊಯ್ಲಿಗೆ ಬಂದಾಗ ಮನಸ್ಸು ಅರಳುವ ಖುಷಿ ನಮ್ಮದಾಗಲಿ.
೪)ಮೊಬೈಲ್, ಇಂಟರ್-ನೆಟ್ ಅಥವಾ ಟಿವಿಯ ಅತಿ ಬಳಕೆಯ ಚಟದಿಂದ ಪಾರಾಗುವುದು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಇದು ಅತ್ಯಗತ್ಯ. ಈ ಚಟದಿಂದ ಹಲವರು ಖಿನ್ನತೆಗೆ ಜಾರುತ್ತಾರೆಂದು ಅಧ್ಯಯನಗಳು ಖಚಿತ ಪಡಿಸಿವೆ. ಇವು ನಮ್ಮ ಬದುಕಿನಲ್ಲಿ ಹಲವು ವರುಷ ಇರಲೇ ಇಲ್ಲ! ಆಗ ನೆಮ್ಮದಿಯಿಂದ ಇದ್ದದ್ದನ್ನು ನೆನಪು ಮಾಡಿಕೊಳ್ಳೋಣ. ಪುನಃ ಆ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೋಣ.
೫)ವೃದ್ಧರಾದ ಅಪ್ಪ, ಅಮ್ಮನನ್ನು ಗೌರವದಿಂದ ನೋಡಿಕೊಳ್ಳುವುದು. ಅವರಿಂದ ತೊಂದರೆಯಾಗುತ್ತಿದೆ ಎಂದು ಅನಿಸಿದಾಗೆಲ್ಲ, ನಾವು ಮಕ್ಕಳಾಗಿದ್ದಾಗ ಅವರೆಷ್ಟು ಮಮತೆಯಿಂದ, ತಾಳ್ಮೆಯಿಂದ ನಾವು ನೀಡುತ್ತಿದ್ದ ತೊಂದರೆಗಳನ್ನು ಸಹಿಸಿದ್ದರೆಂಬುದನ್ನು ಜ್ನಾಪಿಸಿಕೊಳ್ಳೋಣ. ಹಾಗಾಗಿ, ಈಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರಿತು ಅದನ್ನು ಪಾಲಿಸೋಣ.
ಈ ಐದು "ಹೊಸ ವರುಷದ ಸಂಕಲ್ಪ”ಗಳನ್ನು ಯಾರೂ ಪಾಲಿಸಬಹುದು. ಇವುಗಳ ಸಾಧನೆಗೆ ಹಣವೆಂದೂ ಅಡ್ಡಿಯಾಗದು; ನಾವು ಮನಸ್ಸು ಮಾಡಿದರಾಯಿತು, ಅಲ್ಲವೇ?