ಹೊಸ ವರ್ಷದಲ್ಲಿ ಜ್ಞಾನವನ್ನು ಹುಡುಕುತ್ತಾ...

ಹೊಸ ವರ್ಷದಲ್ಲಿ ಜ್ಞಾನವನ್ನು ಹುಡುಕುತ್ತಾ...

ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ..... ದೀಪದಿಂದ ದೀಪವ, ಹಚ್ಚಬೇಕು ಮಾನವ. ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ  24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ  ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.

ಪಾಶ್ಚಿಮಾತ್ಯರು ಜನವರಿ 1ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ. ಒಂದೊಂದು ನಾಗರಿಕತೆಯಲ್ಲಿ ಒಂದೊಂದು ದಿನವನ್ನು ಪ್ರಾರಂಭದ ದಿನವಾಗಿ ಗುರುತಿಸಲಾಗಿದೆ. ಭಾರತೀಯ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪ್ರಾರಂಭದ ದಿನವನ್ನು ಹೊಸ ವರ್ಷ ಎಂತಲೂ ಫಾಲ್ಗುಣದ ಕೊನೆಯ ದಿನವನ್ನು ಅಂತ್ಯ ಎಂತಲೂ ಕರೆಯಲಾಗುತ್ತದೆ. ಸೃಷ್ಟಿಯ ಸಹಜ ಕ್ರಿಯೆಯನ್ನು ಯಾರು ಏನೇ ಕರೆದುಕೊಳ್ಳಲ್ಲಿ ಅಂತಹ ವಿಶೇಷವೇನು ಇಲ್ಲ. ಆದರೆ ರೂಢಿಗತವಾಗಿ ಯುವ ಸಮೂಹ ಕ್ಯಾಲೆಂಡರ್ ನ ಜನವರಿ 1 ಹೊಸ ವರ್ಷದ ಸ್ವಾಗತ ಸಮಾರಂಭವಾಗಿ ಆಚರಿಸುತ್ತಾರೆ. ಸಂಭ್ರಮಕ್ಕೆ ಯಾವ ದಿನವಾದರೇನು?

ನೇಸರನ ಕಿರಣಗಳು,

ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ,

ಗಿಡಮರಬಳ್ಳಿಗಳನ್ನು ಹಾದು,

ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ,

ಇಬ್ಬನಿಯ ಜೊತೆಗೂಡಿ

ಪ್ರತಿಫಲನ ಹೊಂದಿ,

ಧೂಳಿನ ಕಣಗಳನ್ನು ಭೇದಿಸಿ,

ಕಿಟಕಿಯ ಸರಳುಗಳೊಳಗೆ ಹರಿದು,

ಕಣ್ಣ ರೆಪ್ಪೆಯ ಬಳಿ ಸರಿದಾಗ,

ಉದಯವಾಗುತ್ತದೆ,....

2024...

ಆದರೆ, ಇದೇನಿದು. ಹೊಸ ವರ್ಷದ ಆಚರಣೆಯೆಂದರೆ ದುರ್ಘಟನೆಯೇ, ಯುದ್ದವೇ, ಗಂಭೀರ ವಿಷಯವೇ? ಪೋಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ನೋಡಿದರೆ ಯಾರೋ ಅನಾಗರಿಕರೋ, ದರೋಡೆಕೋರರೋ ಹೊಸ ವರ್ಷ ಆಚರಿಸಲು ಅಲ್ಲಿ ಸೇರಿದಂತಿರುತ್ತದೆ. ಕುಡಿದು ತೂರಾಡಿ ಅಸಭ್ಯವಾಗಿ ವರ್ತಿಸಿ ಹೊಸ ವರ್ಷ ಸ್ವಾಗತಿಸುವುದಾದರೆ ನಮ್ಮ ಸಮಾಜದ ಯುವಕ ಯುವತಿಯರ ಮನೋವೈಕಲ್ಯದ ಬಗ್ಗೆ ಮರುಕ ಉಂಟಾಗುತ್ತದೆ. ಒಂದು ಸಂಭ್ರಮವನ್ನು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದೆ ಸಂಯಮದ ರೀತಿ ನೀತಿಗಳಂತೆ ಆಚರಿಸಲು ಸಾಧ್ಯವಾಗದಿದ್ದರೆ ಅದನ್ನು ಏನೆಂದು ಅರ್ಥಮಾಡಿಕೊಳ್ಳುವುದು. ಇದು ನಾಚಿಕೆಗೇಡು. ಹೊಸ ವರ್ಷದ ಸ್ವಾಗತ ಉನ್ಮಾದದಿಂದ ಆಗಬಾರದು. ಅದೊಂದು ಹೊಸ ಉತ್ಸಾಹದ ಚಿಲುಮೆಯಂತಿರಬೇಕು.

ಅದಕ್ಕಾಗಿ.... ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು. ವಿಷಯ ಯಾವುದೇ ಇರಲಿ, ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ. ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ. ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ. ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ. ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಸಭ್ಯತೆ - ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ. ಆಗ ಮೂಡುವ ಅರಿವಿನಿಂದ…

ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ. ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ. ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ ಸಾರ್ಥಕತೆಯತ್ತಾ ಸಾಗೋಣ. ಜ್ಞಾನವೆಂಬುದು ಮೂರ್ತ ಸ್ವರೂಪವೇ ಹೊರತು ಅಮೂರ್ತವಲ್ಲ. ಜ್ಞಾನ ತಿಳಿವಳಿಕೆ ಅಲ್ಲ ನಡವಳಿಕೆ, ಜ್ಞಾನ ನಂಬಿಕೆಯಲ್ಲ ವಾಸ್ತವ, ಜ್ಞಾನ ಮಾತಲ್ಲ ಕೃತಿ. ಜ್ಞಾನ ಭಾವನೆಯಲ್ಲ ಬದುಕು. ಜ್ಞಾನ ಅಕ್ಷರಗಳಲ್ಲಿ ಇಲ್ಲ ಅಂತರಂಗದಲ್ಲಿದೆ. ಜ್ಞಾನ ಹೇಳುವುದಲ್ಲ ಕೇಳುವುದಲ್ಲ ನಡೆದುಕೊಳ್ಳುವುದು. ಜ್ಞಾನ ನಿಂತ ನೀರಲ್ಲ ಹರಿಯುವ ನದಿ ಅರ್ಥಾತ್‌ ತ್ರಿಲೋಕ ಸಂಚಾರಿ. ಜ್ಞಾನ ಸರಿಯಾಗಿ ಉಪಯೋಗವಾಗದಿದ್ದರೆ ಅದು ಅಜ್ಞಾನವಾಗುತ್ತದೆ. ಜ್ಞಾನದಿಂದ ನೆಮ್ಮದಿ ಸಿಗುತ್ತದೆ. ನಮ್ಮ ಮನಸ್ಸು ಶಾಂತವಾಗಿರದಿದ್ದರೆ ನಾವಿನ್ನೂ ಜ್ಞಾನವಂತರಲ್ಲ ಎಂದೇ ಭಾವಿಸಬೇಕು. ಜ್ಞಾನ ಸ್ವತಂತ್ರ ಚಿಂತನೆಯೇ ಹೊರತು ಎರವಲು ಪಡೆಯಲುಬಾರದು. ಜ್ಞಾನ ಮೇಲ್ಮುಖವಾಗಿ ಬೆಳೆಯುತ್ತದೆಯೇ ಹೊರತು ಕೆಳಕ್ಕೆ ಇಳಿಯುವುದಿಲ್ಲ. ಜ್ಞಾನದ ಅರ್ಥ ಮತ್ತು ವ್ಯಾಪ್ತಿ ಊಹೆಗೂ ನಿಲುಕುವುದಿಲ್ಲ. ಜ್ಞಾನದಲ್ಲಿ ವಿನಯವಿರುತ್ತದೆಯೇ ಹೊರತು ಅಹಂಕಾರ ಬೆಳೆಯುವುದೇ ಇಲ್ಲ. ಜ್ಞಾನ ಸಹಜ ಸ್ವಾಭಾವಿಕವೇ ಹೊರತು ಅದನ್ನು ಮುಖವಾಡವಾಗಿಸಲು ಸಾಧ್ಯವಿಲ್ಲ. ಹಾಗಾದರೆ ಜ್ಞಾನವೆಂಬ ನಾನು‌ ಯಾರು? ಹುಡುಕಾಡುತ್ತಲೇ ಇದ್ದೇನೆ.

ನೀವು ಬನ್ನಿ ನನ್ನೊಂದಿಗೆ, ಜ್ಞಾನದ ಹುಡುಕಾಟದಲ್ಲಿ ಜೊತೆಯಾಗೋಣ.

"ಹೊಸ ವರುಷ ಎಂಬುದೇನಿಲ್ಲ ಅರಿತವಗೆ,..."

" ಕಳೆದುಕೊಳ್ಳುವುದು ಏನೂ ಇಲ್ಲ ಪಡೆದುಕೊಳ್ಳುವುದೇ ಎಲ್ಲವೂ..... "

" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ..... "

ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ.

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ