ಹೊಸ ವರ್ಷದ ಸಂಭ್ರಮಕ್ಕೆ ಕೈಚಾಚುವ ಮುನ್ನ…
ಇಂದು ಡಿಸೆಂಬರ್ ೩೧. ವರ್ಷದ ಕೊನೆಯ ದಿನ. ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಈ ವರ್ಷ ಇಲ್ಲ. ಕೋವಿಡ್ ೧೯ರ ಕಾಟ ಇದಕ್ಕೆ ಪ್ರಮುಖ ಕಾರಣ. ಕೆಲವು ಜನರಿಗೆ ಹೊಸ ವರ್ಷವನ್ನು ಸ್ವಾಗತಿಸುವುದೆಂದರೆ ಕುಡಿಯುವುದು ಮತ್ತು ಮೋಜು ಮಾಡುವುದು ಮಾತ್ರ. ಆದರೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ೨೦೨೦ ವರ್ಷದ ಪ್ರಾರಂಭದ ಮೊದಲೆರಡು ತಿಂಗಳು ಹೊರತು ಪಡಿಸಿದರೆ ಮಾರ್ಚ್ ತಿಂಗಳ ನಂತರ ನಾವು ಬಹುತೇಕ ಸಮಯವನ್ನು ಗೃಹ ಬಂಧನದಲ್ಲೇ ಕಳೆಯಬೇಕಾಯಿತು. ಸ್ವಲ್ಪ ಸಮಯ ಲಾಕ್ ಡೌನ್, ಮತ್ತೆ ಹೊರಗಡೆ ಹೋದರೆ ಕೊರೋನಾ ಹರಡುವ ಭಯ. ಹೀಗೆ ವರ್ಷವಿಡೀ ನಾವು ಭಯಭೀತಿಯಲ್ಲೇ ಕಳೆಯಬೇಕಾಯಿತು ಎನ್ನುವುದು ಸತ್ಯ. ಸಮಯ ಕಳೆದಂತೆ ಕೊರೋನಾ ಭೀತಿ ಜನರಲ್ಲಿ ಕಮ್ಮಿ ಆಗಿದೆ. ಆದರೆ ಕೊರೋನಾ ಮಾತ್ರ ಇನ್ನೂ ಹೋಗಿಲ್ಲ. ಲಸಿಕೆಗಳು ಕೆಲವು ಅಂತಿಮ ಹಂತದಲ್ಲಿವೆ ಹಾಗೂ ಕೆಲವನ್ನು ಪ್ರಾಯೋಗಿಕವಾಗಿ ಜನರಿಗೆ ನೀಡಲು ಪ್ರಾರಂಭ ಮಾಡಿದ್ದಾರೆ. ಅದರಲ್ಲೂ ಸಾಕಷ್ಟು ಗೊಂದಲಗಳು ಇವೆ. ದಿನಾಲೂ ದುಡಿದು ತಿನ್ನುವ ಶ್ರಮಿಕ ವರ್ಗಕ್ಕೆ ಈ ಕೊರೋನಾ ಕಾಲ ಬಹಳ ಸಂಕಷ್ಟಮಯವಾಗಿ ಕಾಡಿದೆ. ಹಲವಾರು ಮಂದಿ ಕೆಲಸ ಕಳೆದುಕೊಂಡರು. ಬಹಳಷ್ಟು ಕಂಪೆನಿಗಳು ಬಾಗಿಲು ಮುಚ್ಚಿದವು. ಹಣಕಾಸಿನ ವ್ಯವಹಾರ ಬಹಳಷ್ಟು ಕುಸಿಯಿತು. ಸಂಕಷ್ಟ ಕಾಲದಲ್ಲಿ ಬಹಳಷ್ಟು ಉದಾರ ಮನಸ್ಸಿನವರು ಸಹಾಯವನ್ನೂ ಮಾಡಿದ್ದಾರೆ. ಹೀಗೆ ನಾವು ೨೦೨೦ ನ್ನು ಕಳೆದು ಈಗ ಹೊಸ ವರ್ಷವನ್ನು ಸ್ವಾಗತಿಸಲು ಬಾಗಿಲಲ್ಲಿ ನಿಂತಿದ್ದೇವೆ. ಕಳೆದು ಹೋದ ಗತ ವರ್ಷವನ್ನೊಮ್ಮೆ ಅವಲೋಕನ ಮಾಡುವ ಬನ್ನಿ.
೨೦೨೦ರಲ್ಲಿ ಹಲವಾರು ಮಹನೀಯರು ನಮ್ಮನ್ನು ಅಗಲಿದ್ದಾರೆ. ಅವರಲ್ಲಿ ಪ್ರಮುಖರು ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ, ರಾಂ ವಿಲಾಸ್ ಪಾಸ್ವಾನ್, ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯ್, ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್, ರಾಜಕಾರಣಿ ಅಮರ್ ಸಿಂಗ್, ಮಾಜಿ ಸಚಿವ ಅಹಮದ್ ಪಟೇಲ್,ಗಾನ ಸಾಮ್ರಾಟ ಎಸ್.ಪಿ.ಬಾಲಸುಬ್ರಮಣ್ಯನ್, ಹಿಂದೂಸ್ತಾನಿ ಗಾಯಕ ಪಂಡಿತ್ ಜಸರಾಜ್, ಬಾಲಿವುಡ್ ನಟರಾದ ರಿಷಿ ಕಪೂರ್, ಸುಷಾಂತ್ ಸಿಂಗ್, ಜಗದೀಪ್, ಇರ್ಫಾನ್ ಖಾನ್, ಕನ್ನಡ ಚಿತ್ರರಂಗದ ನಾಯಕ ನಟ ಚಿರಂಜೀವಿ ಸರ್ಜಾ, ಸಂಗೀತ ನಿರ್ದೇಶಕ ರಾಜನ್, ಕ್ರೀಡಾ ಆಟಗಾರರಾದ ಫುಟ್ಬಾಲ್ ದಂತಕತೆ ಡೀಗೋ ಮರಡೋನಾ, ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ,ವೈಮಾನಿಕ ವಿಜ್ಞಾನಿ ರೊದ್ದಂ ನರಸಿಂಹ ಇವರು ಪ್ರಮುಖರು.
ಬಹುತೇಕರು ಹೊಸ ವರ್ಷದ ಮುನ್ನಾ ದಿನ ಹಲವಾರು ಕಠಿಣ ನಿರ್ಧಾರಗಳನ್ನು ಮಾಡುತ್ತಾರೆ. ಮುಂದಿನ ವರ್ಷದಲ್ಲಿ ನಾನು ಕುಡಿಯೋದಿಲ್ಲ, ಸಿಗರೇಟು ಸೇದೋದಿಲ್ಲ. ಪ್ರತೀ ದಿನ ವಾಕಿಂಗ್ ಹೋಗುತ್ತೇನೆ. ಹಣವನ್ನು ದುಂದು ವೆಚ್ಚ ಮಾಡದೇ ಸಂಗ್ರಹಿಸಿ ಇಡುವೆ. ಪ್ರತೀ ಶುಕ್ರವಾರ, ಸೋಮವಾರ ದೇವಾಲಯಕ್ಕೆ ಹೋಗುವೆ, ಚರ್ಚ್ ಹೋಗುವುದನ್ನು ತಪ್ಪಿಸುವುದಿಲ್ಲ ಹೀಗೆ ಹತ್ತು ಹಲವಾರು ನಿರ್ಧಾರಗಳನ್ನು ಕೆಲವರು ತೆಗೆದುಕೊಳ್ಳುತ್ತಾರೆ. ಆದರೆ ಅದರಲ್ಲಿ ೯೦ ಶೇಕಡಾ ನಿರ್ಧಾರಗಳು ನೆರವೇರುವುದಿಲ್ಲ. ಹಾಗಾದರೆ ಅವರ ಧೃಢ ನಿರ್ಧಾರಗಳು ಏನಾದವು? ಈ ವಿಚಾರವನ್ನು ನಿರ್ಧಾರ ತೆಗೆದುಕೊಳ್ಳುವವರು ಅವಲೋಕನ ಮಾಡಿಕೊಳ್ಳಲೇ ಬೇಕು. ನಮ್ಮ ನಿರ್ಧಾರಗಳೇಕೆ ಅನುಷ್ಟಾನದಲ್ಲಿ ಸೋಲುತ್ತಿವೆ ಎನ್ನುವುದನ್ನು ಅರಿತುಕೊಳ್ಳಬೇಕು. ಹಿಂದಿನ ವರ್ಷದ ಅನುಭವಗಳು ನಮ್ಮ ಬದುಕಿನ ಪಾಠವಾಗಬೇಕು. ಪ್ರತಿಯೊಂದು ಸೋಲೂ ಗೆಲುವಿನ ಮೆಟ್ಟಲಾಗುವಂತೆ ನಾವು ನೋಡಿಕೊಳ್ಳಬೇಕು. ಆಗಲೇ ಮುಂಬರುವ ವರ್ಷವನ್ನು ನಾವು ಬಹಳ ಸಂಭ್ರಮದಿಂದ ಸ್ವಾಗತಿಸಲು ಸಾಧ್ಯ.
ಕಳೆದು ಹೋದ ದಿನಗಳು ಮತ್ತೆ ಬಾರವು. ಹಳೆಯ ವರ್ಷದಲ್ಲಿ ಕಳೆದ ಸಂತಸದ ದಿನಗಳನ್ನು ಮೆಲುಕು ಹಾಕುತ್ತಾ ಹೊಸ ವರ್ಷಕ್ಕೆ ತೆರೆದುಕೊಳ್ಳೋಣ. ಮುಂದಿನ ವರ್ಷ ಕೊರೋನಾ ಕಾಟ ಮುಗಿದು ಹೋಗಿ ಜನಜೀವನ ಮೊದಲಿನ ಸ್ಥಿತಿಗೇ ಮರಳಲಿ ಎಂದು ಆಶಿಸೋಣ. ಬನ್ನಿ, ಹೊಸವರ್ಷಕ್ಕೆ ಜೈ ಎನ್ನೋಣ. ಎಲ್ಲರಿಗೂ Happy New Year 2021.
ಚಿತ್ರ: ಅಂತರ್ಜಾಲ ಕೃಪೆ