ಹೊಸ ವರ್ಷಾಚರಣೆ ಬೇಕೇ?

ಹೊಸ ವರ್ಷಾಚರಣೆ ಬೇಕೇ?

ಇದೇನಪ್ಪ ಇವನೇನು ಐಲಾ, ಹೀಗೆ ಕೇಳುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..ಪ್ರತೀ ಸಲ ಡಿಸೆಂಬರ್ ಬಂತೆಂದರೆ ಎಲ್ಲರಿಗೂ ಏನೋ ಒಂದು ರೀತಿ ಆನಂದ. ಡಿಸೆಂಬರ್ ಎರಡನೇ ವಾರದಿಂದಲೇ ಹೊಸ ವರ್ಷದ ಆಗಮನಕ್ಕೆ ಸಿದ್ಧತೆಗಳನ್ನು ನಡೆಸಿರುತ್ತಾರೆ.  ಯಾವ ಹೋಟೆಲ್ ಗೆ ಹೋಗೋದು, ಯಾವ ರೆಸಾರ್ಟ್ ಗೆ ಹೋಗೋದು, ಯಾವ ಊರಿಗೆ ಹೋಗೋದು ಹೀಗೆ ಹಲವಾರು ಸಿದ್ಧತೆಗಳು. ಆದರೆ ನನಗೆ ಅರ್ಥವಾಗದ ಒಂದು ವಿಷಯವೆಂದರೆ ನಮಗೆ ಹೊಸ ವರ್ಷ ಬರುವುದು ಉಗಾದಿಯಂದು ಅಲ್ಲವೇ, ಹಾಗಿದ್ದಲ್ಲಿ ಈ ಪಾಶ್ಚಾತ್ಯ ಸಂಸ್ಕ್ರುತಿಯನ್ನೇಕೆ ಅನುಕರಿಸುತ್ತಿದ್ದೇವೆ. ಡಿಸೆಂಬರ್ ೩೧ ಬಂತೆಂದರೆ ಅದೆಷ್ಟು ಹಣ ಖರ್ಚು, ಅದೆಷ್ಟು ಹೆಂಡದ ಹೊಳೆ ಹರೆಯುತ್ತದೋ.. ನಮ್ಮ ಹೊಸ ವರ್ಷಾಚರಣೆಗೂ (ಉಗಾದಿ) ಪಾಶ್ಚಾತ್ಯರ ಹೊಸ ವರ್ಷಾಚರಣೆಗೂ (ಜನವರಿ ೧) ಇರುವ ಕೆಲವರು ವ್ಯತ್ಯಾಸಗಳೆಂದರೆ..
 
ಜನವರಿ ೧ - ಡಿಸೆಂಬರ್ ೩೧ ರ ರಾತ್ರಿಯಿಂದಲೇ ಕುಡಿದು, ಕುಣಿದು, ದಣಿದು ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಮನೆಗೆ ಬಂದು ಮಲಗುವುದು. ಆ ಕ್ಷಣಿಕ ಕಾಲಕ್ಕೆ ಅದೆಷ್ಟು ಹಣ ವ್ಯಯಿಸುತ್ತಾರೋ ತಿಳಿಯದು. ಇತ್ತೀಚೆಗಂತೂ ಆ ಒಂದು ರಾತ್ರಿಗೆ ಸಾವಿರಾರು ರೂಪಾಯಿಗಳನ್ನು ಕೀಳುವ ಹೋಟೆಲ್ ಗಳು, ರೆಸಾರ್ಟ್ ಗಳು ಶುರು ಆಗಿವೆ. ಅಂದು ರಾತ್ರಿ ಹೆಚ್ಚುಕಮ್ಮಿ ಎಲ್ಲರೂ ಪಾನಮತ್ತರಾಗಿರುವುದರಿಂದ ಅಪಘಾತಗಳು, ಗಲಾಟೆಗಳು ನಡೆಯುವ ಸಂಭವ ಹೆಚ್ಚು. ಈ ರಾತ್ರಿಯ ಆಚರಣೆಗೆ ಕೆಲವು ಕಿಡಿಗೇಡಿಗಳು ದಾಳಿ ನಡೆಸಲು ಸನ್ನದ್ಧರಾಗಿರುತ್ತಾರೆ. ದರೋಡೆಗಳು ನಡೆಯುತ್ತವೆ. ಹೆಣ್ಣುಮಕ್ಕಳು ಅಪಾಯದ ಅರಿವಿದ್ದರೂ ಲೆಕ್ಕಿಸದೆ ಅವರೂ ಸಹ ಈ ಆಚರಣೆಯಲ್ಲಿ ಪಾಲ್ಗೊಂಡು ಅಚಾತುರ್ಯಗಳು ನಡೆಯುತ್ತವೆ. ಕೆಲವೊಮ್ಮೆ ಪೋಲೀಸರ ಅತಿಥಿಗಳಾಗುವ ಸಾಧ್ಯತೆಗಳು ಇವೆ.
 
ಉಗಾದಿ - ಆ ದಿನ ಬೆಳಿಗ್ಗೆ ಬೇಗನೆ ಎದ್ದು ತಲೆಗೆ ಎಣ್ಣೆ (ಹರಳೆಣ್ಣೆ) ಹಾಕಿಕೊಂಡು ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಿ, ಹೊಸ ಬಟ್ಟೆ ಧರಿಸಿ ಬೇವು ಬೆಲ್ಲ ತಿಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮನಗೆ ಬಂದು ಕುಟುಂಬದ ಮಂದಿಯೊಂದಿಗೆ ಹೋಳಿಗೆ ಊಟ ಮಾಡಿ ಸಂಭ್ರಮದಿಂದ ಆಚರಿಸಿಕೊಳ್ಳುವುದು.
ಈ ವ್ಯತ್ಯಾಸಗಳನ್ನು ನೋಡಿದರೆ ನಮ್ಮ ಹೊಸ ವರ್ಷ ಆಚರಣೆಯೇ ಉತ್ತಮ ಅನಿಸುವುದಿಲ್ಲವೇ??
(ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆ. ಯಾರ ಅನಿಸಿಕೆಗೂ ನೋವುಂಟು ಮಾಡುವ ಉದ್ದೇಶವಿಲ್ಲ. ಹಾಗೇನಾದರೂ ನೋವುಂಟು ಆಗಿದ್ದರೆ ದಯವಿಟ್ಟು ಕ್ಷಮಿಸಿ)

Comments