ಹೊಸ ಸಂಸತ್ ಭವನದ ಉದ್ಘಾಟನೆ...

ಹೊಸ ಸಂಸತ್ ಭವನದ ಉದ್ಘಾಟನೆ...

ಭಾರತ ಪ್ರಜಾಪ್ರಭುತ್ವ ದೇಗುಲದ ಹೊಸ ಕಟ್ಟಡ ಹೊಸ ರೂಪದಲ್ಲಿ ಮೇ 28 ರಂದು ಉದ್ಘಾಟನೆಯಾಗುತ್ತಿದೆ. ಎಂದಿನಂತೆ ಉದ್ಘಾಟನಾ ಸಮಾರಂಭದ ದಿನಾಂಕ ಮತ್ತು ಉದ್ಘಾಟನೆ ಮಾಡುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬಗ್ಗೆ ವಿರೋಧ ಪಕ್ಷಗಳಲ್ಲಿ  ಭಿನ್ನ ಮತದ ಆಕ್ಷೇಪವಿದೆ. ಪ್ರಜಾಪ್ರಭುತ್ವಲ್ಲಿ ಅದಕ್ಕೆ ಅವಕಾಶವೂ ಇದೆ. ಹಾಗೆಯೇ ಸಮಾರಂಭ ಆಯೋಜಿಸುವ ರೀತಿ ನೀತಿಗಳ ಬಗ್ಗೆ ಬಹುಮತದ ಆಡಳಿತ ಸರ್ಕಾರಕ್ಕೆ ಸ್ವಾತಂತ್ರ್ಯವೂ ಇದೆ. ಇದು ತುಂಬಾ ಗಂಭೀರವಾಗಿ ಪರಿಗಣಿಸುವ ವಿಷಯವೇ ಅಲ್ಲ. ಏಕೆಂದರೆ ನಿರ್ಜೀವ ಕಟ್ಟಡದ ಉದ್ಘಾಟನೆ ಮುಖ್ಯವಲ್ಲ. ಅದರಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳ ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಮುಖ್ಯ.

ಉದ್ಘಾಟಿಸುವ ಸ್ವಾತಂತ್ರ್ಯ ಅವರದು, ವಿರೋಧಿಸುವ ಸ್ವಾತಂತ್ರ್ಯ ಇವರದು, ವಿಮರ್ಶಿಸುವ ಸ್ವಾತಂತ್ರ್ಯ ನಮ್ಮದು, ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಭಾರತದ ಮತದಾರರದ್ದು. ಆದರೆ ನಿಜಕ್ಕೂ ಈ ಹೊಸ ಪಾರ್ಲಿಮೆಂಟ್ ಭವನವನ್ನು ಯಾರು ಉದ್ಘಾಟಿಸಿದರೆ ಹೆಚ್ಚು ಅರ್ಥಪೂರ್ಣ ಎಂದು ಕಾಲ್ಪನಿಕವಾಗಿ ಯೋಚಿಸಿದಾಗ...

ಭಾರತದ ಉತ್ತರ ಭಾಗದ ತುತ್ತತುದಿ ಕಾಶ್ಮೀರದ ಕೊನೆಯ ಗಡಿಯಂಚಿನ ಗ್ರಾಮದಲ್ಲಿ ಹಿಮಾಚ್ಛಾದಿತ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಅತ್ಯಂತ ಕೆಳ ಹಂತದ ಸೈನಿಕರೊಬ್ಬರು, ಭಾರತದ ದಕ್ಷಿಣದ ಕೊನೆಯ ಕನ್ಯಾಕುಮಾರಿ ಅಥವಾ ರಾಮೇಶ್ವರದ ಸಮುದ್ರ ತೀರದ ಅತ್ಯಂತ ಕೊನೆಯ ಗುಡಿಸಲಿನ ಬಡ ಮೀನುಗಾರರೊಬ್ಬರು, ಭಾರತದ ಪಶ್ಚಿಮದ ಗುಜರಾತಿನ ಕಚ್ ಅಥವಾ ಪೋರ್ ಬಂದರ್ ನ ಕೊನೆಯ ಹಳ್ಳಿಯ ಬೀದಿ ಬದಿಯ ಸಣ್ಣ ವ್ಯಾಪಾರಿಯೊಬ್ಬರು, ಭಾರತದ ಪೂರ್ವದ ಅರುಣಾಚಲ ಪ್ರದೇಶದ ಗಡಿಯಂಚಿನ ಕೊನೆಯ ದೊಂಗ್ ಪಟ್ಟಣದ ಚಹಾ ತೋಟದ ರೈತರೊಬ್ಬರು, ಭಾರತದ ವಾಣಿಜ್ಯ ನಗರಿ ಮುಂಬಯಿಯ ಧಾರಾವಿ ಕೊಳಚೆ ಪ್ರದೇಶದ ವಸತಿಯೂ ಇಲ್ಲದೆ ಮೋರಿಯ ಪಕ್ಕದ ಕೊಳವೆಯಲ್ಲಿ ವಾಸಿಸುವ ಹಿರಿಯ ವ್ಯಕ್ತಿಯೊಬ್ಬರು ಅಥವಾ ಕೊಲ್ಕತ್ತಾದ ದಿಕ್ಕು ದೆಸೆಯಿಲ್ಲದ ಅನಾರೋಗ್ಯ ಪೀಡಿತ ವೇಶ್ಯೆಯೊಬ್ಬರು.

ಈ ಐದು ಜನರನ್ನು ಆಯ್ಕೆ ಮಾಡಿ ಸಂಸತ್ ಭವನವನ್ನು ಉದ್ಘಾಟಿಸಿದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಈ ದೇಶದ ಸಂಸತ್ತು ನಮ್ಮನ್ನು ಕಡೆಗಣಿಸಿಲ್ಲ ಎಂದು ತುಂಬಾ ಅಭಿಮಾನ ಪಡುತ್ತಾರೆ. ಧ್ವನಿ ಇಲ್ಲದವರ ಧ್ವನಿ ನಮ್ಮ ಭಾರತ ಎಂದು ವಿಶ್ವಕ್ಕೇ ಸಾರುವ ಒಂದು ಸುವರ್ಣ ಅವಕಾಶ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳು ಈ ನಡೆಯಿಂದ ಸ್ಪೂರ್ತಿ ಪಡೆಯಬಹುದು. ಆಡಳಿತವನ್ನು ಕೊನೆಯ ಹಂತದವರೆಗೂ ವಿಸ್ತರಿಸಲು ಶ್ರಮಿಸಬಹುದು. ಪ್ರಜಾಪ್ರಭುತ್ವವೆಂಬುದು ಶಾಸಕರು ಸಂಸದರು ಮಂತ್ರಿಗಳು ಅಧಿಕಾರಿಗಳ‌ ಆಡಳಿತವಲ್ಲ. ಪ್ರಜೆಗಳ ಆಡಳಿತ. ಜನ ಪ್ರತಿನಿಧಿಗಳು ಕೇವಲ ಸೇವಕರು. ಆದರೆ ವಾಸ್ತವದಲ್ಲಿ ಅದು ಅನುಷ್ಠಾನದಲ್ಲಿ ಇಲ್ಲ. ಉದ್ಘಾಟನೆ ಮಾಡುತ್ತಿರುವವರು ಮತ್ತು ಅದನ್ನು ಬಹಿಷ್ಕರಿಸುತ್ತಿರುವವರು ನಾಯಕರೇ ಹೊರತು ಪ್ರಜೆಗಳಲ್ಲ. ಸಮ ಸಮಾಜದ ಕನಸುಗಳನ್ನು ನನಸು ಮಾಡುವುದು ಪ್ರತಿಯೊಬ್ಬ ಆಡಳಿತಗಾರರ ಕರ್ತವ್ಯ. ಮಾಧ್ಯಮಗಳ ಜವಾಬ್ದಾರಿ. ಧಾರ್ಮಿಕ ಮುಖಂಡರ ನೈತಿಕತೆ. ವಿದ್ಯಾವಂತರ ಉದ್ದೇಶ. ಉದ್ಯಮಿಗಳ ಗುರಿ ಆಗಿರಬೇಕು. 

ಒಂದು ಕಟ್ಟಡದ ಉದ್ಘಾಟನೆಯೇ ಆಡಳಿತ ಮತ್ತು ವಿರೋಧ ಪಕ್ಷಗಳ ಹಾಗು ಮಾಧ್ಯಮಗಳ ಬಹುದೊಡ್ಡ ವಾಕ್ಸಮರಕ್ಕೆ ಕಾರಣವಾಗಿ ಅದು ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಮುಖ ವಿಷಯವಾಗುವುದಾದರೆ ನಮ್ಮೆಲ್ಲರ ವಿವೇಚನೆಯ ದಿಕ್ಕನ್ನು ಮತ್ತೊಮ್ಮೆ ಆತ್ಮ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಸ್ವಾತಂತ್ರ್ಯ ಸ್ವೇಚ್ಛೆಯಾಗಿ - ಸರ್ವಾಧಿಕಾರಿಯಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ