ಹೊಸ ಸರಕಾರದ ಮುಂದಿದೆ ನೂರೆಂಟು ಸವಾಲುಗಳು !

ಹೊಸ ಸರಕಾರದ ಮುಂದಿದೆ ನೂರೆಂಟು ಸವಾಲುಗಳು !

ಹೌದು, ಕಳೆದ ಒಂದೂವರೆ ತಿಂಗಳ ಚುನಾವಣಾ ರಾಜಕೀಯ ಮುಗಿದು ಬಹುಮತದ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಆದರೆ ಸರಕಾರ ರಚನೆ ಹಿಂದೆಂದಿಗಿಂತಲೂ ಕಠಿಣವಾಗುವ ಲಕ್ಷಣ ಈಗಾಗಲೇ ಕಾಣಿಸುತ್ತಿದೆ. ಸರಕಾರದ ಚುಕ್ಕಾಣಿ ಹಿಡಿಯ ಬೇಕಾದ ವ್ಯಕ್ತಿಯನ್ನು ಅಂದರೆ ಮುಖ್ಯಮಂತ್ರಿಯನ್ನು ಆರಿಸಲು ತೀರ್ಪು ಬಂದು ಐದು ದಿನಗಳಾದರೂ ಇನ್ನೂ ಸಾಧ್ಯ ಆಗಿಲ್ಲ. ಈಗ ಹೈಕಮಾಂಡ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. 

ಈ ಹಿಂದೆ ಬಿಜೆಪಿ ಸರಕಾರ ನಡೆಸುತ್ತಿದ್ದ ಸಮಯದಲ್ಲೂ ಹೈಕಮಾಂಡ್ ಬೆಂಬಲಿತ ಸರಕಾರ ಆಡಳಿತ ನಡೆಸುತ್ತಿತ್ತು. ಈಗ ಪಕ್ಷ ಬದಲಾದರೂ ಹೈಕಮಾಂಡ್ ಆಡಳಿತದ ಸರಕಾರವೇ ಬರಲಿದೆ ಅನಿಸುತ್ತಿದೆ. ಮೊದಲಿಗೆ ಮುಖ್ಯಮಂತ್ರಿ, ನಂತರ ಮುಖ್ಯಮಂತ್ರಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಎರಡು-ಮೂರು ಮಂದಿ ಉಪ ಮುಖ್ಯಮಂತ್ರಿ. ಆ ಉಪ ಮುಖ್ಯಮಂತ್ರಿಗಳಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಶಾಸಕರಿಗೆ ಪ್ರಾಶಸ್ತ್ಯ. ನಂತರ ಮಂತ್ರಿ ಮಂಡಲ ರಚನೆ. ಕಾನೂನಿನ ಪ್ರಕಾರ ೩೨ ಮಂದಿ ಶಾಸಕರಿಗೆ ಮಾತ್ರ ಅವಕಾಶ. ಅಧಿಕಾರ ಎಲ್ಲರಿಗೂ ಬೇಕಾದ ಕಾರಣ ಮುಖ್ಯಮಂತ್ರಿಯ ಪರಮೋಚ್ಛ ಅಧಿಕಾರವಾದ ಮಂತ್ರಿ ಮಂಡಲ ರಚನೆಗೂ ಹೈಕಮಾಂಡ್ ಬೆಂಬಲ ಬೇಕು. ಬೆಂಬಲದ ಸಮಸ್ಯೆಯನ್ನು ಈ ಹಿಂದೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಬಹಳಷ್ಟು ಸಲ ಅನುಭವಿಸಿದ್ದರು. ಬೊಮ್ಮಾಯಿಯವರಿಗಂತೂ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳು ಸೂಟು ಬೂಟು ಹೊಲಿಸಿ ಕಾದದ್ದೇ ಬಂತು. ಐದು ವರ್ಷಗಳು ಮುಗಿದು ಹಲವರ ಸೂಟು ಹಳತಾಗಿ, ಶಾಸಕಗಿರಿಯನ್ನು ಕಳೆದುಕೊಂಡು ಮೂಲೆ ಸೇರಿ ಬಿಟ್ಟಿದ್ದಾರೆ.

ಇದೇ ಕಥೆ ಕಾಂಗ್ರೆಸ್ ನಲ್ಲೂ ಮರುಕಳಿಸಲಿದೆ ಎಂದು ಈಗಿನ ಸ್ಥಿತಿ ನೋಡಿದರೆ ಅರ್ಥವಾಗುತ್ತಿದೆ. ಇದಕ್ಕೆ ಕಾರಣ ಮಾಸ್ ಲೀಡರ್ ಕೊರತೆ ಮತ್ತು ಪ್ರಾದೇಶಿಕ ಪಕ್ಷಗಳ ಬಲಹೀನತೆ. ಇದೇ ಸಂಗತಿ ತಮಿಳುನಾಡು, ತೆಲಂಗಾಣ, ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿರುವ ಸರಕಾರದಲ್ಲಿ ನಡೆಯುವುದಿಲ್ಲ. ಏಕೆಂದರೆ ಪ್ರಾದೇಶಿಕ ಪಕ್ಷಗಳಿಗೆ ‘ಮಾಸ್ ಲೀಡರ್’ ಗಳಿರುತ್ತಾರೆ. ಸರಕಾರದಲ್ಲಿ ಅವರದ್ದೇ ಕೊನೇ ಮಾತು. ನೀವು ಬೇಕಾದರೆ ಸರಕಾರದಲ್ಲಿ ಇರಿ, ಬಿಟ್ಟು ಹೋಗಿ ಅವರು ನಿಮ್ಮ ಮರ್ಜಿಯನ್ನು ಕೇಳುವುದೇ ಇಲ್ಲ. ತಮಿಳುನಾಡಿನಲ್ಲಿ ಮೊದಲಾದರೆ ಜಯಲಲಿತಾ, ಕರುಣಾನಿಧಿ ಇದ್ದರು. ಈಗ ಸ್ಟಾಲಿನ್ ಬಂದಿದ್ದಾರೆ. ಹಾಗೇ ಚಂದ್ರಶೇಖರ ರಾವ್ (ತೆಲಂಗಾಣ), ಜಗನ್ಮೋಹನ ರೆಡ್ಡಿ (ಆಂಧ್ರ), ನವೀನ್ ಪಟ್ನಾಯಕ್ (ಒರಿಸ್ಸಾ), ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) ಇಲ್ಲೆಲ್ಲಾ ಇವರದ್ದೇ ಮಾತು ಅಂತಿಮ. ಹೈಕಮಾಂಡೂ ಇಲ್ಲ ಲೋ ಕಮಾಂಡೂ ಇಲ್ಲ. ಯಾರನ್ನು ಬೇಕಾದರೂ ಮಂತ್ರಿ ಮಾಡುತ್ತಾರೆ, ಯಾರಿಗೆ ಬೇಕಾದರೂ ಮಂತ್ರಿ ಮಂಡಲದಿಂದ ಗೇಟ್ ಪಾಸ್ ಕೊಡುತ್ತಾರೆ. ಇದು ಪ್ರಾದೇಶಿಕ ಪಕ್ಷಗಳ ನಾಯಕತ್ವದ ಸೊಗಸೂ ಹೌದು ಬಲಹೀನತೆಯೂ ಹೌದು. ಕೆಲವೊಮ್ಮೆ ಇದು ಹಿಟ್ಲರ್ ರಾಜಕಾರಣಕ್ಕೂ ಕಾರಣವಾಗುತ್ತದೆ. ಆದರೆ ಕರ್ನಾಟಕದಲ್ಲಿ ಜಾತ್ಯಾತೀತ ಜನತಾ ದಳ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲೇ ಇಲ್ಲ. ಅವರದ್ದು ಏನಿದ್ದರೂ ಕಿಂಗ್ ಮೇಕರ್ ಆಗುವ, ಬೇರೆಯವರ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವವರ ಜಾಯಮಾನ. ಒಂದೆರಡು ಬಾರಿ ಅದರಲ್ಲಿ ಸಫಲರೂ ಆದರು. ೪೦-೫೦ ಸೀಟು ಗೆದ್ದುಕೊಂಡು ಕುಮಾರ ಸ್ವಾಮಿ ಮುಖ್ಯಮಂತ್ರಿಯೂ ಆದರು. ಇದಕ್ಕಿಂತ ಜಾಸ್ತಿ ಬೆಳೆಯಲು ಅವರೂ ಮನಸ್ಸೂ ಮಾಡಲಿಲ್ಲ. ಈ ಸಲವೂ ಇಷ್ಟು ಸೀಟು ಬಂದು ಉಳಿದ ಪಕ್ಷಗಳಿಗೆ ಬಹುಮತ ಬಾರದೇ ಇದ್ದಿದ್ದರೆ ಕುಮಾರ ಸ್ವಾಮಿಯವರೇ ಮತ್ತೆ ಮುಖ್ಯಮಂತ್ರಿಯಾಗುತ್ತಿದ್ದರು. ಯಾಕೋ ಮತದಾರ ಮನಸ್ಸು ಮಾಡಲಿಲ್ಲ.

ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ನಂಬಿದ ಜನ ಅವರಿಗೇ ಮತ ಹಾಕಿದ್ದಾರೆ ಎಂದುಕೊಂಡರೂ, ಈ ನಂಬಿಕೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅವರಿಗೆ ಕಷ್ಟವಾದೀತು ಎನ್ನುವುದು ಪರಿಣಿತರ ವಾದ. ಏಕೆಂದರೆ ಕಾಂಗ್ರೆಸ್ ನವರು ನೀಡಿದ ಗ್ಯಾರಂಟಿ ಕಾರ್ಡ್ ನಲ್ಲಿ ಎಲ್ಲೂ ಯಾವ ನಿಬಂಧನೆಗಳು ಕಾಣಿಸುವುದಿಲ್ಲ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರಲು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇವರು. ಯಾವುದೇ ನಿಬಂಧನೆಗಳಿಲ್ಲದೇ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಸಾಧ್ಯವೇ? ಪದವೀಧರ ನಿರುದ್ಯೋಗಿಗಳಿಗೆ ಮೂರು ಸಾವಿರ, ಡಿಪ್ಲೋಮಾ ಮಾಡಿದವರಿಗೆ ಒಂದೂವರೆ ಸಾವಿರ, ಕುಟುಂಬದ ಹಿರಿಯ ಮಹಿಳೆಗೆ ಎರಡು ಸಾವಿರ ಇವನ್ನೆಲ್ಲಾ ನೀಡಲು ಸಾಧ್ಯವಿದೆಯೇ? ಇವನ್ನೆಲ್ಲಾ ಯಾವುದೇ ನಿಬಂಧನೆಗಳಿಲ್ಲದೇ ನೀಡಿದ್ದೇ ಆದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಯಾವತ್ತೂ ವಿರೋಧ ಪಕ್ಷವಾಗಲಾರದು ಅನಿಸುತ್ತೆ! 

ಏನಾದರಾಗಲಿ, ಕಾಂಗ್ರೆಸ್ ಸರಕಾರವನ್ನು ಮತದಾರ ಪ್ರಭುಗಳು ಆಡಳಿತ ನಡೆಸಲು ಮುನ್ನಲೆಗೆ ತಂದಿದ್ದಾನೆ. ಉತ್ತಮ, ಜನಪರ, ಸೌಹಾರ್ದಯುತ ಆಡಳಿತ ಮೂಡಿ ಬರಲಿ. ಮುಖ್ಯಮಂತ್ರಿ ಯಾರೇ ಆಗಲಿ, ತೆಗೆದುಕೊಳ್ಳಬೇಕಾದ ಪ್ರತಿಯೊಂದು ನಿರ್ಧಾರಕ್ಕೆ ದೆಹಲಿಯತ್ತ ಮುಖ ಮಾಡದಿರಲಿ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಲಿ. ನೀವು ನೀಡಿದ ಆಶ್ವಾಸನೆಗಳು ಕೇವಲ ಮತಗಳಿಸಲು ಮಾಡಿದ ಗಿಮಿಕ್ ಆಗದಿರಲಿ. ಎರಡು ದಿನಗಳ ಹಿಂದೆ ಡಾ. ಜಿ ಪರಮೇಶ್ವರ್ ಅವರು ಗ್ಯಾರಂಟಿಗಳು ನಿಬಂಧನೆಗಳಿಗೆ ಒಳಪಟ್ಟಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಕೆಲವೆಡೆ ವಿದ್ಯುತ್ ಬಿಲ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿಗಳು ಬರತೊಡಗಿವೆ. 

ಹಿಂದಿನ ಸರಕಾರದ ಮುಖ್ಯಮಂತ್ರಿಗಳು ಮಾಡಿದಂತೆ ಆಗಾಗ ದೆಹಲಿ ಯಾತ್ರೆ ಮಾಡದಿರಲಿ. ನಿಮ್ಮದೇ ರಾಜ್ಯ, ನೀವೇ ಗೆದ್ದ ಕ್ಷೇತ್ರ, ನಿಮ್ಮದೇ ಪರಿಚಿತ ಶಾಸಕರು. ಮತ್ತೇಕೆ ದೆಹಲಿ ಮರ್ಜಿ? ಉತ್ತಮ ಆಡಳಿತಗಾರ ಶಾಸಕರನ್ನು ಗುರುತಿಸಿ, ಅವರಿಗೆ ಅಧಿಕಾರ ನೀಡುವ ಮೂಲಕ ಜನ ಸಾಮಾನ್ಯರಿಗೆ ಕನಿಷ್ಟ ಸೌಲಭ್ಯವನ್ನಾದರೂ ನೀಡುವಂಥ ಸರಕಾರವನ್ನು ನಡೆಸಿ, ಪ್ರತೀ ಜನ ಸಾಮಾನ್ಯನ ಆಸೆ ಆಕಾಂಕ್ಷೆ ಅದೇ ಆಗಿದೆ. 

ಕೊನೇ ಹನಿ- ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಟಿವಿ ನೋಡಿ ನೋಡಿ ಕರೆಂಟ್ ಬಿಲ್ ೩೦೦ ಯೂನಿಟ್ ಆಗಿದೆ ಎನ್ನುವುದು ಈಗ ಟ್ರೆಂಡಿಂಗ್ ನಲ್ಲಿರುವ ಲೇಟೆಸ್ಟ್ ಮಾತು!

ಚಿತ್ರ ಕೃಪೆ: ಅಂತರ್ಜಾಲ ತಾಣ