ಹೋಟೆಲುಗಳ ಆಹಾರ ತಟ್ಟೆಗೆ ಬಣ್ಣದ ಹೂಗಳ ಲಗ್ಗೆ

4.4

ಮುಂಬೈಯ “ಕ್ಯಾಂಡಿ ಆಂಡ್ ಗ್ರೀನ್” ರೆಸ್ಟೊರೆಂಟಿನ ವಿಶೇಷತೆ ಅರಳು ಹೂಗಳು ತುಂಬಿದ ಆಹಾರ. ಅದರ ಮಾಲಕಿ ೨೫ ವರುಷ ವಯಸ್ಸಿನ ಶ್ರದ್ಧಾ ಬನ್ಸಾಲ್. ಆಕೆಗೆ ಯಾವತ್ತೂ ಒಂದೇ ಯೋಚನೆ. ತಾನು ತಯಾರಿಸುವ ಸಲಾಡುಗಳು, ಕೇಕುಗಳು ಹಾಗೂ ಪಾನೀಯಗಳಲ್ಲಿ ಬೇರೆಬೇರೆ ಹೂಗಳನ್ನು ಸೇರಿಸುವುದು ಹೇಗೆ?
ಆಹಾರವಾಗಿ ಆಕೆಯ ಅಚ್ಚುಮೆಚ್ಚಿನ ಹೂಗಳು ನೀಲಿ ಶಂಖಪುಷ್ಪ (ಅಪರಾಜಿತ) ಮತ್ತು ಹೊಳಪು ಕಿತ್ತಳೆ ಬಣ್ಣದ ನಾಸ್ಟರ್-ಶಮ್. ಪೋಷಕಾಂಶಗಳು ತುಂಬಿರುವ ಈ ಹೂಗಳ ಬಣ್ಣಗಳಿಂದಾಗಿ ಪ್ಲೇಟಿನಲ್ಲಿರುವ ಆಹಾರಕ್ಕೆ ಒಂದು ಝಲಕ್. ಹಾಗಾಗಿ, ಆಹಾರಕ್ಕೆ ಕೃತಕ ಬಣ್ಣ ಅಥವಾ ಪರಿಮಳ ವಸ್ತುಗಳನ್ನು ಆಕೆ ಸೇರಿಸುವುದಿಲ್ಲ.
ಪಾಕಪರಿಣತರು ತಾವು ತಯಾರಿಸುವ ಸಲಾಡುಗಳು, ಕೇಕುಗಳು ಮತ್ತು ಪಾನೀಯಗಳಲ್ಲಿ ಹೂಗಳನ್ನು ಹೆಚ್ಚೆಚ್ಚಾಗಿ ಬಳಸುವುದು ಕಳೆದ ೨ – ೩ ವರುಷಗಳ ಹೊಸ ಟ್ರೆಂಡ್. ಅದೇನಿದ್ದರೂ, ಆಹಾರ ತಯಾರಿಯಲ್ಲಿ ಹೂಗಳ ಬಳಕೆ ನಮ್ಮ ದೇಶದ ಪರಂಪರೆ. ಅಡುಗೆಯಲ್ಲಿ ಸಾಂಬಾರ ಪದಾರ್ಥವಾಗಿ ಬಳಕೆಯಾಗುವ ಲವಂಗ ಒಣಗಿದ ಹೂಮೊಗ್ಗು ತಾನೇ? ಹಾಗೆಯೇ, ಆಹಾರವಾಗಿ ಹೂಕೋಸು ಮತ್ತು ಬಾಳೆಹೂಗಳ ಬಳಕೆ ಸರ್ವೇ ಸಾಮಾನ್ಯ. ಆಹಾರಕ್ಕೆ ಬಣ್ಣ ಮತ್ತು ಪರಿಮಳ ನೀಡಲಿಕ್ಕಾಗಿ ಗುಲಾಬಿ, ಕೇಸರಿ ಮತ್ತು ಮಲ್ಲಿಗೆ ದಳಗಳ ಬಳಕೆ ಜನಜನಿತ.
ಈಗ ಬೇರೆ ಹೂಗಳೂ ಆಹಾರದ ವರ್ಣಮಯ ಲೋಕದಲ್ಲಿ ಮುಂಚೂಣಿಗೆ ಬರುತ್ತಿವೆ. ಉದಾಹರಣೆಗೆ ಶಂಖಪುಷ್ಪ. ಹಲವಾರು ಮನೆಗಳಲ್ಲಿ ಬೆಳೆಸುವ ನೀಲಿ ಶಂಖಪುಷ್ಪದ ಬಳ್ಳಿಗಳಲ್ಲಿ ಅರಳುವ ಹೂಗಳ ಚಂದ ಹಲವರಿಗೆ ಗೊತ್ತು. ಆದರೆ, ಆಹಾರವಾಗಿ ಬಳಸಿದಾಗ ಇದರ ಮ್ಯಾಜಿಕ್ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು. ಲಿಂಬೆಹಣ್ಣಿನ ಪಾನೀಯಕ್ಕೆ ಐದಾರು ನೀಲಿ ಶಂಖಪುಷ್ಪ ಹೂಗಳ ರಸ ಸೇರಿಸಿ; ಆ ಪಾನೀಯ ನೇರಳೆ ಬಣ್ಣದಲ್ಲಿ ಝಗಮಗಿಸುವುದನ್ನು ನೋಡಿ.
ನೀಲಿ ಶಂಖಪುಷ್ಪ ಸೇರಿಸಿ, ಶ್ರದ್ಧಾ ಬನ್ಸಾಲ್ ತಯಾರಿಸುವ ಅನ್ನ ಮತ್ತು ನೇರಳೆ (ಹಸಿರು) ಟೀ – ಇವು ಮನಮೋಹಕ ಮತ್ತು ನಾಲಿಗೆಗೂ ರುಚಿಕರ. ಆಕೆ ತಯಾರಿಸುವ ಕೇಕುಗಳಿಗೆ ಚಿತ್ತಾಕರ್ಷಕ ಬಣ್ಣ ನೀಡುವುದರ ಜೊತೆಗೆ ಕಬ್ಬಿಣ ಮತ್ತು ವಿಟಮಿನ್-ಸಿ ಸೇರಿಸುವುದು ನಾಸ್ಟರ್-ಶಮ್ ಹೂಗಳು. ಆಕೆಯ ಸಲಾಡುಗಳಿಗೆ ಗಾಢ ಪರಿಮಳ ಒದಗಿಸುವುದು ತುಳಸಿ ಮತ್ತು ಒರೆಗಾನೊ ಹೂಗಳು; ಅದೇ ಸಲಾಡಿಗೆ ಆಹ್ಲಾದದಾಯಕ ಪರಿಮಳದ ಸೇರ್ಪಡೆ ಲ್ಯಾವೆಂಡರ್ ಹೂಗಳಿಂದ. ಹಾಗಾಗಿ, ಆ ಸಲಾಡುಗಳ ಘಮಘಮಕ್ಕೆ ಯಾವುದೇ ರಾಸಾಯನಿಕ ಹುಡಿ ಅಥವಾ ದ್ರಾವಣ ಬೇಕಾಗಿಲ್ಲ.
ನವದೆಹಲಿಯ ಏರೋಸಿಟಿ ಹೋಟೆಲಿನ ಪಾಕನಿರ್ದೇಶಕ ಅಜಯ್ ಆನಂದ್ ಇನ್ನೊಬ್ಬ ಹೂಪ್ರೇಮಿ. “ದಾಳಿಂಬ ಹೂಗಳು ವಿಟಮಿನ್-ಸಿ ಮತ್ತು ವಿಟಮಿನ್-ಡಿಯ ಸಮೃದ್ಧ ಖಜಾನೆಗಳು. ಲಿಂಬೆಯ ಹೂಗಳಂತೂ ವಿಟಮಿನ್-ಸಿಯ ಭಂಡಾರ” ಎನ್ನುತ್ತಾರೆ ಅವರು. “ಆದ್ದರಿಂದ, ಸಾಂಪ್ರದಾಯಿಕ ಆಹಾರ ಖಾಖ್ರಾ-ಖಾಂಡ್ವಿ ತಯಾರಿಸುವಾಗ ಒಣಗಿಸಿದ ಲಿಂಬೆಹೂಗಳ ಹುಡಿ ಬೆರೆಸುತ್ತೇವೆ” ಎಂದು ಮಾಹಿತಿ ನೀಡುತ್ತಾರೆ.
ಮತ್ತೊಬ್ಬ ಪಾಕಪರಿಣತ ರನವೀರ್ ಬ್ರಾರ್ ನೆನಪಿಸುತ್ತಾರೆ: ಭಾರತದಲ್ಲಿ ಗುಲ್ಕುಂದ್ (ಗುಲಾಬಿದಳಗಳ ಜಾಂ) ಇತಿಹಾಸ ೭೦೦ ವರುಷ ಹಳೆಯದು ಎಂಬುದನ್ನು. ಜೊತೆಗೆ, ಅವರು ತಿಳಿಸುವ ಮಾಹಿತಿ: ಆಸ್ಟ್ರೇಲಿಯಾದ ಪಾಕಪರಿಣತನೊಬ್ಬ ಮೆರಿಗೋಲ್ಡ್ ಹೂಗಳನ್ನು ಬೆರೆಸಿ ತಯಾರಿಸಿದ ಚಿನ್ನದ ಬಣ್ಣದ ವಿನೆಗರ್ ಅಲ್ಲೀಗ ಜನಪ್ರಿಯ.
ಹಲವು ಪಾಕಪರಿಣತರು ತಮ್ಮ ಹೋಟೆಲಿನ ಆವರಣದಲ್ಲಿ ಬೆಳೆಸಿದ ಗಿಡಗಳಿಂದಲೇ ತಾಜಾ ಹೂಗಳನ್ನು ಅಡುಗೆಗಾಗಿ ಕಿತ್ತು ತರುತ್ತಾರೆ. ಆದರೆ, ಅಡುಗೆಗೆ ತಾಜಾ ಹೂಗಳೇ ಬೇಕೆಂದಿಲ್ಲ. “ನಾನು ಮಲ್ಲಿಗೆಯ ದಳಗಳನ್ನು ಎಣ್ಣೆಯಲ್ಲಿ ಕಾಯಿಸುತ್ತೇನೆ. ನಂತರ, ಆ ಎಣ್ಣೆಯನ್ನು ಬಿರಿಯಾನಿ ಮತ್ತು ಪುಲಾವಿಗೆ ಪರಿಮಳ ನೀಡಲಿಕ್ಕಾಗಿ ಬೆರೆಸುತ್ತೇನೆ ಎನ್ನುತ್ತಾರೆ ಹರಾಂಗದ್ ಸಿಂಗ್. ಅವರು ಢೆಲ್ಲಿ ಹತ್ತಿರದ ಗುರುಗ್ರಾಮದ ಪ್ರಾಂಕ್-ಸ್ಟರ್ ರೆಸ್ಟೊರೆಂಟಿನ ಪಾಕಪರಿಣತ. ತಾನು ತಯಾರಿಸುವ ತಿನಿಸುಗಳ ಮೇಲೆ ಮಲ್ಲಿಗೆ, ಪಾನ್ಸಿ, ಜೆರೇನಿಯಮ್ ಅಥವಾ ಸಿಲಾಂಟ್ರೋ ಹೂಗಳ ದಳಗಳನ್ನು ಚಿಮುಕಿಸುವುದು ಅವರ ಅಭ್ಯಾಸ. ಭಾರತೀಯರು ಸರ್ವೇ ಸಾಮಾನ್ಯವಾಗಿ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಬಳಸುತ್ತಾರೆ; ಅದರ ಹೂಗಳಿಗೆ ವಿಶಿಷ್ಠ ಪರಿಮಳವಿದ್ದು ಇದನ್ನೂ ಆಹಾರಕ್ಕೆ ಸೇರಿಸಬಹುದು ಎನ್ನುತ್ತಾರೆ ಅವರು. ಜಿಲೇಬಿಯ ಪ್ಲೇಟಿಗೆ ಪಾನ್ಸಿ ಹೂದಳ ಚಿಮುಕಿಸುವ ಸಿಂಗ್, ಯಾವ ತಿನಿಸಿಗೆ ಯಾವ ಹೂದಳ ಸೂಕ್ತವೆಂಬ ಜಾಣ್ಮೆ ರೂಢಿಸಿಕೊಂಡವರು.
ಬೆಂಗಳೂರಿನ ಫಾರ್ಜಿ ಕೆಫೆಯ ಪಾಕಪರಿಣತ ಸೊಂಬಿರ್ ಚೌದರಿ, ರಸಮಲೈ ಮತ್ತು ಮಲೈ-ಜೊಹರ್-ಚಾಟಿಗೆ ಡಯಾಂತಸ್ ಹೂಗಳನ್ನು ಬೆರೆಸುವುದರಲ್ಲಿ ಸಿದ್ಧಹಸ್ತರು. ನವದೆಹಲಿಯ ಆಲಿವ್ ಬಾರ್ ಮತ್ತು ಕಿಚನಿನ ಪ್ರಧಾನ ಪಾಕಪರಿಣತ ಧ್ರುವ್ ಒಬೆರಾಯ್. ಗ್ರೀನ್-ವೆಲ್ವೆಟ್-ಕೇಕಿಗೆ ಆಕರ್ಷಕ ಬಣ್ಣ ನೀಡಲು ಇವರು ಬೆರೆಸುವುದು ನುಗ್ಗೆ ಹೂಗಳನ್ನು. ಆಹಾರಕ್ಕಾಗಿ  ಬಳಸಿದ ತರಕಾರಿಯ ಹೂಗಳನ್ನೂ ಆಹಾರಕ್ಕೆ ಬೆರೆಸಬಹುದು ಎಂಬುದವರ ಸಲಹೆ.
ಅದೇನಿದ್ದರೂ, ಆಹಾರದಲ್ಲಿ ಹೂ ಬೆರೆಸುವಾಗ, ಯಾವ ಹೂ ಬೆರೆಸಬಹುದು ಮತ್ತು ಯಾವುದನ್ನು ಬೆರೆಸಬಾರದು ಎಂಬ ಎಚ್ಚರ ಅಗತ್ಯ. ಉದಾಹರಣೆಗೆ ಲಿಲ್ಲಿ ಮತ್ತು ನೆಲನೈದಿಲೆ ಹೂಗಳನ್ನು ಆಹಾರಕ್ಕೆ ಸೇರಿಸಲೇ ಬಾರದು. ಯಾಕೆಂದರೆ ಆ ಹೂಗಳಲ್ಲಿ ವಿಷಾಂಶವಿದೆ. ಹಾಗೆಯೇ, ರಸ್ತೆ ಬದಿಯಲ್ಲಿ ಲಂಟಾನದ ಚಂದದ ಹೂಗಳನ್ನು ಕಂಡು ಅಡುಗೆಗಾಗಿ ಕಿತ್ತು ತಂದಿರೋ, ಜೋಕೆ! ಅವುಗಳಲ್ಲೂ ವಿಷಾಂಶವಿದೆ. ಯಾವುದೇ ಹೊಸ ಹೂಗಳನ್ನು ನಿಮ್ಮದೇ ತೋಟದಿಂದ ಅಥವಾ ರಸ್ತೆ ಬದಿಯಿಂದ ಆಹಾರಕ್ಕಾಗಿ ಕಿತ್ತು ತರುವ ಮುನ್ನ ಅವು ಸುರಕ್ಷಿತ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಇಂಟರ್-ನೆಟ್, ವಿಕಿಪಿಡೀಯಾ, ಆಹಾರದ ವೆಬ್-ಸೈಟುಗಳು ಅಥವಾ ಹೂಗಳ ಪುಸ್ತಕಗಳಿಂದ ನೀವು ಆಹಾರವಾಗಿ ಬಳಸಬೇಕೆಂದಿರುವ ಹೂಗಳ ವೈಜ್ನಾನಿಕ ಮಾಹಿತಿ ಪರಿಶೀಲಿಸಿ; ಅವು ವಿಷಮುಕ್ತವೆಂದು ಖಾತ್ರಿ ಮಾಡಿಕೊಳ್ಳಿ. ಮಾರುಕಟ್ಟೆಯಿಂದ ತರುವ ಹೂಗಳ ಬಗ್ಗೆಯೂ ಎಚ್ಚರ; ಅವನ್ನು ಬೆಳೆಸುವಾಗ ರೋಗ / ಕೀಟ ಬಾಧೆ ನಿಯಂತ್ರಣಕ್ಕಾಗಿ ರಾಸಾಯನಿಕ ವಿಷಗಳನ್ನು ಭರ್ಜರಿಯಾಗಿ ಸಿಂಪಡಿಸಿರಬಹುದು.
ನಮ್ಮ ದೇಶದಲ್ಲಿ, ಶತಮಾನಗಳಿಂದ ಅಜ್ಜಿಮುತ್ತಜ್ಜಿಯರು ರುಚಿರುಚಿಯಾದ ಪಾನಕ, ತಂಬುಳಿ, ಚೀನಿಕಾಯಿ ಹೂಗಳ ಬಜ್ಜಿ, ದಾಸವಾಳ ಹೂಗಳ ಸಲಾಡು ಮಾಡಿಕೊಡುತ್ತಿದ್ದರು. ಇಂತಹ ಹೂವಿನ ತಿನಿಸುಗಳು ಹಾಗೂ ಪಾನೀಯಗಳು ೨೧ನೇ ಶತಮಾನದಲ್ಲಿ ಮಹಾನಗರಗಳ ಭವ್ಯ ಹೋಟೆಲುಗಳ ಆಹಾರ ತಟ್ಟೆಗಳಲ್ಲಿ ಹೊಸಹೊಸ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):