ಹೋಟೇಲ್ ಮಾಣಿಯೊಬ್ಬ ಸ್ಟುಡಿಯೋ ಕಟ್ಟಿದ ಕಥೆ !

ಹೋಟೇಲ್ ಮಾಣಿಯೊಬ್ಬ ಸ್ಟುಡಿಯೋ ಕಟ್ಟಿದ ಕಥೆ !

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೆಲಸಕ್ಕೆಂದು ಹೋದದ್ದು ದೂರದ ಬೊಂಬಾಯಿಗೆ (ಮುಂಬೈ), ನಂತರ ಪೂನಾ. ಅಲ್ಲೊಂದು ಹೋಟೇಲ್ ನಲ್ಲಿ ಮಾಣಿಯಾಗಿ ಕೆಲಸ. ಆದರೆ ಮನಸ್ಸಿನಲ್ಲಿ ನೂರಾರು ಕನಸು. ಆ ಕನಸುಗಳು ಕಷ್ಟಗಳನ್ನು ಮೀರಿ ಬೆಳೆದಾಗ ಸಿಕ್ಕಿದ್ದು ಅಭೂತಪೂರ್ವ ಯಶಸ್ಸು. ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ರಂಗಭೂಮಿ ಕಲಾವಿದ, ಪೋಸ್ಟರ್ ಬಾಯ್, ನಾಟಕಕಾರ ಎಂಬೆಲ್ಲಾ ಬಹುವೇಷಗಳನ್ನು ನಿರ್ವಹಿಸಿದ ಬಹುಮುಖ ಪ್ರತಿಭೆಯ ಹೆಸರು ಗಣಪತಿ ವೆಂಕಟರಮಣ ಅಯ್ಯರ್ (ಜಿ.ವಿ.ಅಯ್ಯರ್). ಅವರೇ ಈ ಹೋಟೇಲ್ ಮಾಣಿ.

ಜಿ ವಿ ಅಯ್ಯರ್ ಅವರು ಹೋಟೇಲ್ ಮಾಣಿ ಆಗಿದ್ದ ಸಮಯದಲ್ಲೇ ನಾಟಕದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬೆಳೆದರು. ನಾಟಕ, ಚಲನ ಚಿತ್ರಗಳ ಪೋಸ್ಟರ್ ಬರೆದರು. ಹೀಗೆ ಒಂದೊಂದಾಗಿ ಮೆಟ್ಟಲುಗಳನ್ನು ಏರುತ್ತಾ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಮತ್ತೊಬ್ಬ ನಟ ಬಾಲಕೃಷ್ಣ ಜೊತೆ ಸೇರಿ ‘ಬೇಡರ ಕಣ್ಣಪ್ಪ' ಮತ್ತು ‘ಅಡ್ಡ ದಾರಿ' ನಾಟಕಗಳನ್ನು ಬರೆದರು. ಇವರು ನಟಿಸಿದ ಮೊದಲ ಚಿತ್ರ ‘ರಾಧಾ ರಮಣ' ನಂತರ ೧೯೫೪ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ೧೯೫೫ರಲ್ಲಿ ತೆರೆಕಂಡ ‘ಸೋದರಿ' ಎಂಬ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಜಿ ವಿ ಅಯ್ಯರ್ ಮಾಡದ ಕೆಲಸವಿಲ್ಲ. 

ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಜೊತೆ ಸೇರಿ ‘ರಣಧೀರ ಕಂಠೀರವ' ಎಂಬ ಸಿನಿಮಾ ನಿರ್ಮಿಸಿದರು. ಇವರ ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ‘ಭೂದಾನ'. ನಿರ್ಮಿಸಿ, ನಿರ್ದೇಶಿಸಿದ ಮೊದಲ ಚಿತ್ರ ‘ತಾಯಿ ಕರುಳು'. ಅಯ್ಯರ್ ನಿರ್ಮಿಸಿದ ‘ವಂಶವೃಕ್ಷ' ಚಿತ್ರ ಕಲಾತ್ಮಕ ಚಿತ್ರವಾದರೂ ಚಿತ್ರರಂಗದಲ್ಲಿ ಹಣ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಿತು. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿತು. ಅವರು ನಿರ್ದೇಶಿಸಿದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಮೊದಲಾದ ಚಿತ್ರಗಳು ರಾಷ್ಟ ಮಟ್ಟದಲ್ಲಿ ಹೆಸರು ಮಾಡಿದವು. ರಾಷ್ಟ್ರಪತಿಗಳ ಸ್ವರ್ಣಕಮಲ ಪುರಸ್ಕಾರವೂ ಅಯ್ಯರ್ ಅವರಿಗೆ ಲಭಿಸಿದೆ. ಹಲವಾರು ಚಿತ್ರಗಳಲ್ಲಿ ಅಭಿನಯ, ಹತ್ತಾರು ಚಿತ್ರಗಳಿಗೆ ಸಂಭಾಷಣೆ-ಸಾಹಿತ್ಯ, ಹಾಡು, ಸುಮಾರು ಇಪ್ಪತ್ತೈದಕ್ಕೂ ಅಧಿಕ ಚಿತ್ರಗಳ ನಿರ್ದೇಶನ ಮಾಡಿರುವ ಜಿ ವಿ ಅಯ್ಯರ್ ಅವರಿಗೆ ರಾಜ್ಯ ಸರಕಾರ ಜೀವಿತಾವಧಿ ಸಾಧನೆಗಾಗಿ ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ನೀಡಿ ಗೌರವಿಸಿದೆ. 

ಜಿ ವಿ ಅಯ್ಯರ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ಪ್ರಾರಂಭಿಕ ಸಮಯದಲ್ಲಿ ಗಳಿಸಿದ ಹಣ ಅತ್ಯಲ್ಪ. ಅವರು ಹಣದ ಮುಖ ನೋಡಿದ್ದು ‘ಹಂಸಗೀತೆ' ಮತ್ತು ಶಂಕರಾಚಾರ್ಯ ಸಿನೆಮಾದಲ್ಲಿ. ಆದರೆ ಇವರಿಗೆ ಹಣದ ಬಡತನವಿದ್ದರೂ ಕನಸು ಶ್ರೀಮಂತವಾಗಿಯೇ ಇತ್ತು. ಕನ್ನಡ ಚಿತ್ರರಂಗಕ್ಕೆ ಏನಾದರೂ ಮಾಡಬೇಕು ಎನ್ನುವ ತುಡಿತದಿಂದಾಗಿ ಇವರು ಬೆಂಗಳೂರಿನ ದೊಡ್ಡಾಲದ ಮರದ ರಸ್ತೆಯಲ್ಲಿ ಸುಮಾರು ಒಂದೆಕರೆ ಜಾಗದಲ್ಲಿ ಸ್ಟುಡಿಯೋ ನಿರ್ಮಿಸಲು ಹೊರಟರು. ಸ್ಟುಡಿಯೋ ಕಟ್ಟುವುದು ಕನಸಿನ ಮಾತಲ್ಲ. ಆದರೂ ಪ್ರಾರಂಭದಲ್ಲಿ ತಮಗಾಗಿ ಮನೆಯನ್ನು ಕಟ್ಟಲು ಪ್ರಾರಂಭಿಸಿದ ಅಯ್ಯರ್ ನಂತರದ ದಿನಗಳಲ್ಲಿ ಅದನ್ನು ‘ಅಯ್ಯರ್ ಆಶ್ರಮ' ಎಂದು ಹೆಸರಿಸಿದರು. ಅಯ್ಯರ್ ಅವರಿಗೆ ಇದನ್ನು ನಿಧಾನವಾಗಿ ಸ್ಟುಡಿಯೋ ಮಾಡುವ ಕನಸಿತ್ತಾದರೂ ಅದು ನನಸಾಗುವ ಮೊದಲೇ ಅವರು ನಿಧನ ಹೊಂದಿದರು. ಈ ಆಶ್ರಮ ನಿಧಾನವಾಗಿ ವೃದ್ಧಾಶ್ರಮವಾಗುವ ಸುಳಿವು ಸಿಕ್ಕ ಅಯ್ಯರ್ ಅವರ ಮಗ ರಾಘವೇಂದ್ರ ಅವರು ಇದನ್ನು ‘ಅಯ್ಯರ್ ಸ್ಟುಡಿಯೋ’ ಎಂದು ನಾಮಾಂಕಿತಗೊಳಿಸಿದರು. ಇದರಿಂದ ಅಯ್ಯರ್ ಅವರ ಕನಸಿನ ಕೂಸಾದ ಸ್ಟುಡಿಯೋ ಉಳಿಯುವಂತಾಯಿತು. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ