ಹೋಮಿಯೋಪಥಿ ಚಿಕಿತ್ಸೆಯ ಹೆಜ್ಜೆ ಗುರುತುಗಳು

ಹೋಮಿಯೋಪಥಿ ಚಿಕಿತ್ಸೆಯ ಹೆಜ್ಜೆ ಗುರುತುಗಳು

ಕಳೆದ ಎಪ್ರಿಲ್ ೧೦ರಂದು ವಿಶ್ವ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಯಿತು. ವೈದ್ಯಕೀಯ ರಂಗದಲ್ಲಿರುವ ವಿವಿಧ ಚಿಕಿತ್ಸಾ ಪದ್ಧತಿಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯೂ ಒಂದು. ಜರ್ಮನಿ ದೇಶದ ವೈದ್ಯರಾದ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸ್ಯಾಮ್ಯುಯಲ್ ಹಾನಿಮನ್ ಎಂಬಾತನೇ ಹೋಮಿಯೋಪಥಿ ವೈದ್ಯ ಪದ್ಧತಿಯ ಜನಕ. ಇವರ ಜನ್ಮ ದಿನವಾದ ಎಪ್ರಿಲ್ ೧೦ (೧೭೫೫) ನ್ನು ವಿಶ್ವ ಹೋಮಿಯೋಪಥಿ ದಿನವಾಗಿ ಆಚರಿಸಲಾಗುತ್ತದೆ. ಜನರಲ್ಲಿ ಹೋಮಿಯೋಪಥಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಎಪ್ರಿಲ್ ೧೦ರಂದು ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಗುತ್ತಿದೆ.

೧೭೯೬ರಲ್ಲಿ ಹಾನಿಮನ್ ಇವರು ಪ್ರಪ್ರಥಮವಾಗಿ ಹೋಮಿಯೋಪಥಿ ವೈದ್ಯ ಪದ್ಧತಿಯನ್ನು ಜಗತ್ತಿಗೆ ಪರಿಚಯಿಸಿದರು. ಇವರು ಮೂಲತಃ ಆಲೋಪಥಿ ವೈದ್ಯರಾಗಿದ್ದರೂ, ಆ ಕಾಲದ ಅಲೋಪಥಿ ಚಿಕಿತ್ಸಾ ಕ್ರಮಗಳ ಬಗ್ಗೆ ಜನರಿಗೆ ಇದ್ದ ಅಸಮಧಾನವನ್ನು ಹೋಗಲಾಡಿಸುವ ದೃಷ್ಟಿಯಿಂದ ಈ ಹೊಸ ಪದ್ಧತಿಯನ್ನು ಅನ್ವೇಷಣೆ ಮಾಡಿದರು. ಕಾಲ ಕ್ರಮೇಣ ಈ ಪದ್ಧತಿಯು ಜನಪ್ರಿಯವಾಯಿತು.

ಈ ವೈದ್ಯಕೀಯ ಪದ್ಧತಿಯಲ್ಲಿ ಔಷಧಿಯು ಸೂಕ್ಷ್ಮವಾಗಿ ದೇಹದ ಒಳಗೆ ಸೇರಿ ರೋಗಿಯ ಸ್ವಂತ ರೋಗನಿರೋಧಕ ಶಕ್ತಿಯನ್ನು ಬಲಿಷ್ಟಗೊಳಿಸಿ ಆರೋಗ್ಯವನ್ನು ಸುಧಾರಿಸುತ್ತದೆ. ಹೋಮಿಯೋಪಥಿ ಔಷಧಿಗಳಲ್ಲಿ ಅಡ್ಡ ಪರಿಣಾಮಗಳು ಅತೀ ಕಡಿಮೆ ಇರುವುದರಿಂದ ದೇಹಕ್ಕೆ ಯಾವುದೇ ತೊಂದರೆಗಳು ಆಗುವುದಿಲ್ಲ. ಈ ಕಾರಣದಿಂದಾಗಿ ಗರ್ಭಿಣಿಯರು, ಮಕ್ಕಳು, ವೃದ್ಧರು ಹಾಗೂ ಇತರ ಸೂಕ್ಷ್ಮ ರೋಗಿಗಳು ಈ ಪದ್ಧತಿಯನ್ನು ಭಯಭೀತಿಯಿಲ್ಲದೇ ಬಳಸಬಹುದಾಗಿದೆ. (ತಜ್ಞ ವೈದ್ಯರ ಸಲಹೆಯ ಮೇರೆಗೆ) 

ಹೋಮಿಯೋಪಥಿ ಔಷಧಿಗಳನ್ನು ಗಮನಿಸಿದರೆ ಪುಟ್ಟ ಪುಟ್ಟ ಗುಂಡಿನ ಆಕೃತಿಯ ಬಿಳಿ ಬಣ್ಣದ ಗುಳಿಗೆಗಳ ರೂಪದಲ್ಲಿರುತ್ತದೆ. ಅಧಿಕಾಂಶ ಎಲ್ಲಾ ಹೋಮಿಯೋಪಥಿ ಔಷಧಿಗಳು ಬಿಳಿಯ ಬಣ್ಣದ ಪುಟ್ಟ ಪುಟ್ಟ ಗುಳಿಗೆಗಳಾಗಿರುತ್ತದೆ. ಸಕ್ಕರೆ ಗುಳಿಗೆಗಳೆಂದೇ ಹಲವರು ಇವುಗಳನ್ನು ಕರೆಯುತ್ತಾರೆ. ಇವುಗಳು ಮಾತ್ರವಲ್ಲದೇ ಹುಡಿಯ ರೂಪದ, ಚಪ್ಪಟೆಯಾಕೃತಿಯ ಮಾತ್ರೆಗಳು, ದ್ರವ ರೂಪದಲ್ಲೂ ಹೋಮಿಯೋಪಥಿ ಔಷಧಿಗಳು ಲಭ್ಯವಿದೆ. ಹೋಮಿಯೋಪಥಿ ಔಷಧವು ಕ್ಯಾಪ್ಸೂಲ್ ರೂಪದಲ್ಲೂ ಸಿಗುತ್ತವೆ. ಹಾಗಾದರೆ ಒಂದೇ ರೀತಿ ಕಾಣುವ ಬಿಳಿ ಗುಳಿಗೆಗಳ ಒಳಗೆ ಏನಿದೆ? ಎಲ್ಲಾ ಕಾಯಿಲೆಗಳಿಗೆ ಒಂದೇ ಮದ್ದಾ? ಎಂಬೆಲ್ಲಾ ಸಂಶಯ ನಿಮಗೆ ಕಾಡುತ್ತಿರಬಹುದಲ್ಲವೇ?

ನಾವು ಹೊರನೋಟದಿಂದ ನೋಡುವಾಗ ಎಲ್ಲಾ ಬಿಳಿ ಗುಳಿಗೆಗಳು ಒಂದೇ ರೀತಿಯಾಗಿ ಕಂಡರೂ ಅವುಗಳು ಮೂಲ ಔಷಧಗಳಲ್ಲ. ಇವುಗಳನ್ನು ಆಡಿನ ಹಾಲಿನ ಹುಡಿ ಮತ್ತು ಕಬ್ಬಿನ ಹಾಲಿನ ಹುಡಿಯಿಂದ ತಯಾರಿಸಲಾಗುತ್ತದೆ. ಈ ಗುಳಿಗೆಗಳಿಗೆ ಹೋಮಿಯೋಪಥಿಯ ಮೂಲದ್ರವ್ಯ ಔಷಧವನ್ನು ರೋಗಿಯ ಪ್ರಾಯ, ಕಾಯಿಲೆಯ ತೀವ್ರತೆಗೆ ಅನುಸಾರವಾಗಿ ಹಾಕಿಕೊಡಲಾಗುತ್ತದೆ. ಮೂಲದ್ರವ್ಯ ಔಷಧಿ ಹಾಕಿದ ಬಳಿಕವಷ್ಟೇ ಆ ಬಿಳಿ ಗುಳಿಗೆಗಳು ಔಷಧಯುಕ್ತ (ಮೆಡಿಕೇಟೆಡ್) ಗುಳಿಗೆಗಳು ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಗುಳಿಗೆಗಳು ನೋಡಲು ಒಂದೇ ರೀತಿಯಾಗಿದ್ದರೂ ಅದರಲ್ಲಿರುವ ಔಷಧಗಳು ಬೇರೆ ಬೇರೆಯಾಗಿರುತ್ತವೆ. 

ಹೋಮಿಯೋಪಥಿಯಲ್ಲಿ ಬಳಸುವ ಚಪ್ಪಟೆಯಾಕಾರದ ಮಾತ್ರೆಗಳನ್ನು ತಯಾರಿಸುವ ಸಂದರ್ಭದಲ್ಲೇ ಔಷಧಿಯನ್ನು ಸೇರಿಸಿರುವುದರಿಂದ ಮತ್ತೆ ಅದಕ್ಕೆ ಔಷಧಿಯನ್ನು ಸೇರಿಸುವ ಅಗತ್ಯತೆ ಇರುವುದಿಲ್ಲ. ಹೋಮಿಯೋಪಥಿ ಔಷಧಿಯನ್ನು ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಪದಾರ್ಥಗಳಿಂದ ತಯಾರಿಸುತ್ತಾರೆ. ಶೇಕಡಾ ೯೦ರಷ್ಟು ಔಷಧಿಗಳು ಸಸ್ಯದಿಂದಲೇ ತಯಾರಾಗುತ್ತದೆ. ಸುಮಾರು ೩೫೦೦ರಷ್ಟು ವಿಧದ ಹೋಮಿಯೋಪಥಿ ಔಷಧಿಗಳು ಲಭ್ಯವಿದೆ. ಸಸ್ಯಗಳ ಬೇರು, ಹೂವು, ಎಲೆಗಳು ಹಾಗೂ ಕೆಲವು ಬಾರಿ ಇಡೀ ಸಸ್ಯವನ್ನೇ ಔಷಧಿ ತಯಾರಿಕೆಗೆ ಬಳಸಿಕೊಳ್ಳಲಾಗುತ್ತದೆ. ಸಸ್ಯಗಳನ್ನು ಪೆರ್ಕೋಲೇಟರ್ ಎಂಬ ವಿಶೇಷ ಸಾಧನದ ಮೂಲಕ ಸೋಸಿ, ಸಂಸ್ಕರಿಸಿ ಮೂಲ ದ್ರವ್ಯ ಔಷಧಿಯನ್ನು ತಯಾರಿಸಲಾಗುತ್ತದೆ. 

ಭಾರತದಲ್ಲಿ ೧೯ನೇ ಶತಮಾನದಲ್ಲಿ ಹೋಮಿಯೋಪಥಿ ಔಷಧಿ ಪದ್ಧತಿಯು ಬಳಕೆಗೆ ಬಂತು ಎಂದು ತಿಳಿದು ಬರುತ್ತದೆ. ಬಂಗಾಳದಲ್ಲಿ ಮೊದಲು ಬಳಕೆಯಾಗಿ ನಂತರ ಕ್ರಮೇಣ ದೇಶದ ಇತರ ಭಾಗಗಳಲ್ಲೂ ವ್ಯಾಪಿಸಿತು. ಮೊದಮೊದಲಿಗೆ ಈ ಪದ್ಧತಿಯನ್ನು ಮಿಲಿಟರಿ ಸೇವೆಗಳಲ್ಲಿ ಮಾತ್ರ ಬಳಸಲಾಗುತ್ತಿತ್ತು. ಡಾ. ಮಹೇಂದ್ರಲಾಲ್ ಸರ್ಕಾರ್ ಭಾರತದ ಮೊದಲ ಹೋಮಿಯೋಪಥಿ ವೈದ್ಯ. ಇವರಿಂದ ಪ್ರೇರಣೆಗೊಂಡು ಹಲವಾರು ಮಂದಿ ಅಲೋಪತಿ ವೈದ್ಯರು ಹೋಮಿಯೋಪಥಿ ಪದ್ಧತಿಯತ್ತ ವಾಲಿದರು. ೧೮೮೧ರಲ್ಲಿ ಭಾರತದ ಕಲ್ಕತ್ತಾದಲ್ಲಿ ಮೊದಲ ಹೋಮಿಯೋಪಥಿ ಮೆಡಿಕಲ್ ಕಾಲೇಜು ಪ್ರಾರಂಭವಾಯಿತು. ಇದರಿಂದಾಗಿ ದೇಶದಲ್ಲಿ ಹೋಮಿಯೋಪಥಿ ಜನಪ್ರಿಯವಾಗುತ್ತಾ ಹೋಯಿತು. ೧೯೭೩ರಲ್ಲಿ ಭಾರತ ಸರಕಾರ ಹೋಮಿಯೋಪಥಿ ವೈದ್ಯ ಪದ್ಧತಿಗೆ ರಾಷ್ಟ್ರೀಯ ಔಷಧ ಪದ್ಧತಿಯ ಮಾನ್ಯತೆಯನ್ನು ನೀಡಿ, ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪಥಿಯನ್ನು ಸ್ಥಾಪಿಸಿತು. ಹೀಗೆ ಅಲೋಪಥಿ, ಆಯುರ್ವೇದ ಪದ್ಧತಿಗಳ ಬಳಿಕ ಹೋಮಿಯೋಪಥಿ ಪದ್ಧತಿಯೂ ಜನಪ್ರಿಯವಾಗತೊಡಗಿತು. ಭಾರತ ದೇಶದಾದ್ಯಂತ ಸುಮಾರು ೨ ಲಕ್ಷದಷ್ಟು ನೋಂದಾಯಿತ ಹೋಮಿಯೋಪಥಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತೀ ವರ್ಷ ೧೨ ಸಾವಿರದಷ್ಟು ಹೋಮಿಯೋಪಥಿ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ. 

ಹೋಮಿಯೋಪಥಿ ಎಂದರೇನು? ಹೋಮಿಯೋಪಥಿ ಹೆಸರು ಎರಡು ಗ್ರೀಕ್ ಪದಗಳ ಜೋಡನೆಯಿಂದ ಆಗಿದೆ. ಹೋಮಿಯೋಸ್ (homoios) ಅದೇ ತರಹದ (ಸಿಮಿಲರ್) ಮತ್ತು ಪತೋಸ್ (pathos) ಅಂದರೆ ನರಳುವುದು (ಸಫರಿಂಗ್) ಎಂಬ ಅರ್ಥ. ಈ ವೈದ್ಯಕೀಯ ಚಿಕಿತ್ಸೆಯ ಸಿದ್ಧಾಂತ ‘ಸಿಮಿಲಿಯ ಸಿಮಿಲಿಬಸ್ ಕ್ಯುರೆಂಟರ್’ ಅಂದರೆ ಸರಳ ಭಾಷೆಯಲ್ಲಿ ಹೇಳುವುದಾದರೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು. ಈ ಪದ್ಧತಿಯನ್ನು ಅನುಸರಿಸುವುದರಿಂದ ನಮ್ಮ ಶರೀರವು ರೋಗವನ್ನು ತನ್ನಿಂದ ತಾನೇ ಗುಣಪಡಿಸಿಕೊಳ್ಳಬಲ್ಲುದು. 

ಹೋಮಿಯೋಪಥಿ ಔಷಧಿಯ ಸೇವನೆಯು ಒಂದು ಚಟವಾಗಿ ಮಾರ್ಪಾಡು ಆಗುವುದಿಲ್ಲ ಎಂಬುವುದು ಈ ಪದ್ಧತಿಯ ಪ್ಲಸ್ ಪಾಯಿಂಟ್. ಅಡ್ಡಪರಿಣಾಮಗಳೂ ಬಹಳವೇ ಕಮ್ಮಿ ಇರುವುದು ಇದರ ಇನ್ನೊಂದು ಪ್ರಮುಖ ಅಂಶ. ಈ ಪದ್ಧತಿಯಲ್ಲಿ ಶಸ್ತ್ರ ಚಿಕಿತ್ಸೆಯ ಕ್ರಮವನ್ನು ಅನುಸರಿಸುವುದಿಲ್ಲ. ಮೂಲ ದ್ರವ್ಯಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ನೈಸರ್ಗಿಕವಾಗಿಯೇ ತಯಾರಿಸುವುದರಿಂದ ಮದ್ದಿನಲ್ಲಿ ಯಾವುದೇ ರಾಸಾಯನಿಕ ಅಂಶಗಳು ಕಮ್ಮಿ ಇರುತ್ತದೆ.

ಹೋಮಿಯೋಪಥಿ ಔಷಧಿಯ ಸೇವನೆ ಮಾಡುವುದು ಹೇಗೆ? ಎಲ್ಲಾ ಹೋಮಿಯೋಪಥಿ ಔಷಧಿಗಳನ್ನು ಆಹಾರ ಸೇವನೆಯ ಒಂದು ಗಂಟೆ ಮೊದಲು ಅಥವಾ ನಂತರ ಉಪಯೋಗಿಸಬೇಕು. ಮಾತ್ರೆಗಳನ್ನು ಚೀಪಿ ನುಂಗಬೇಕು. ಬಹುತೇಕ ಮಾತ್ರೆಗಳು ಸಿಹಿ ಇರುತ್ತವೆ. ಸಿಹಿಯಾಗಿಲ್ಲದ ಮಾತ್ರೆಗಳನ್ನೂ ಚೀಪಿಯೇ ಸೇವನೆ ಮಾಡಬೇಕು. ಯಾವುದೇ ಕಾರಣಕ್ಕೂ ಗುಳಿಗೆಗಳನ್ನು ಬರಿಯ ಕೈಯಲ್ಲಿ ಮುಟ್ಟಬಾರದು. ಗುಳಿಗೆಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಬಾಟಲಿಯಿಂದ ಎರಡು-ಮೂರು ಗುಳಿಗೆಗಳನ್ನು ಬಾಟಲಿಯ ಮುಚ್ಚಳಕ್ಕೆ ಹಾಕಿಕೊಂಡು ನೇರವಾಗಿ ಬಾಯಿಗೆ ಹಾಕಬೇಕು. ಗುಳಿಗೆಗಳನ್ನು ಸೇವನೆ ಮಾಡುವ ಸಂದರ್ಭದಲ್ಲಿ ಬಾಯಿಯಲ್ಲಿ ಯಾವುದೇ ಘಾಟು ಇರುವ (ಗುಟ್ಕಾ, ತಂಬಾಕು ಇತ್ಯಾದಿ) ಪದಾರ್ಥ ಇಲ್ಲದಂತೆ ನೋಡಿಕೊಳ್ಳಬೇಕು. ಟೀ-ಕಾಫಿ ಸೇವನೆ, ಚೂಯಿಂಗ್ ಗಮ್, ಧೂಮಪಾನ ಮಾಡಿದ ತಕ್ಷಣ ಮಾತ್ರೆ ಸೇವಿಸಬೇಡಿ. ಸ್ವಲ್ಪ ಸಮಯ ಕಳೆದ ಬಳಿಕ ಬಾಯಿಯನ್ನು ನೀರಿನಲ್ಲಿ ಮುಕ್ಕಳಿಸಿ ಮಾತ್ರೆಗಳನ್ನು ಸೇವಿಸಿ. 

ಗಮನಿಸಬೇಕಾದ ಸಂಗತಿ ಎಂದರೆ ಈ ಮಾತ್ರೆಗಳು ಪುಟ್ಟ ಪುಟ್ಟದಾಗಿದ್ದು ಬಹುತೇಕ ಸಿಹಿಯಾಗಿರುವುದರಿಂದ ಮಕ್ಕಳು ಆಕರ್ಷಿತರಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಮಕ್ಕಳಿಂದ ಮಾತ್ರೆಯ ಶೀಶೆಗಳನ್ನು ದೂರವಿಡಿ. ಹೋಮಿಯೋಪಥಿ ಔಷಧಿ ಹುಡಿಗಳನ್ನು ನೇರವಾಗಿಯೇ ಸೇವಿಸಬೇಕು. ಮಕ್ಕಳಿಗೆ ಹಾಗೆ ಸೇವಿಸುವುದು ಕಷ್ಟವಾಗುವುದಾದರೆ ಸ್ವಲ್ಪ ನೀರು ಸೇರಿಸಿ ಸೇವನೆ ಮಾಡಿಸಿ. ಯಾವುದೇ ಹೋಮಿಯೋಪಥಿ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ತಜ್ಞ ವೈದ್ಯರಿಂದ ಅನುಮತಿ ಪಡೆದುಕೊಳ್ಳಿರಿ.

ಚಿತ್ರದಲ್ಲಿ : ಬಾಟಲಿಯಲ್ಲಿರುವ ಹೋಮಿಯೋಪಥಿ ಗುಳಿಗೆಗಳು

ಹೋಮಿಯೋಪಥಿ ವೈದ್ಯ ಪದ್ಧತಿಯ ಜನಕ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸ್ಯಾಮ್ಯುಯಲ್ ಹಾನಿಮನ್

(ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ)