ಹೋರಾಟಗಳಿಗೆ ಮಾತ್ರವಲ್ಲ ಹಾರಾಟಗಳಿಗೂ ಮಾಧ್ಯಮ ಈಗ ಧ್ವನಿಯಾಗುತ್ತಿದೆ!

ಹೋರಾಟಗಳಿಗೆ ಮಾತ್ರವಲ್ಲ ಹಾರಾಟಗಳಿಗೂ ಮಾಧ್ಯಮ ಈಗ ಧ್ವನಿಯಾಗುತ್ತಿದೆ!

ಬರಹ

A friend said to an University student, "what do you go to the master for? will he help you earn living?"
student replied- "No, but thanks to him I will know what to do with the living when I earn"

ಪದವಿ ಪಡೆದಿರುವ ಕೆಲವರಿಗೆ ಈ ಸೂಕ್ಷ್ಮತೆಗಳು ಅರ್ಥವಾಗಬೇಕಿದೆ. ಕಾರಣ ಇತ್ತೀಚೆಗೆ ಶೋಷಣೆ ಹೆಚ್ಚಾಗಿರುವುದು ಕಲಿತವರಿಂದಲೇ. ಅದೂ ಕಲಿಯದವರ ಮೇಲೆ ಎಂಬುವದು ಚಿಂತನಾರ್ಹ.

ಬ್ಯಾರಿಸ್ಟರ್ ಬಾಬಾ ಆಮ್ಟೆ (ಮುರಳಿಧರ ದೇವಿದಾಸ ಆಮ್ಟೆ). ಆ ಹೆಸರೇ ಸ್ಪೂರ್ತಿ. ಪ್ರೇರಣಾದಾಯಿ. ತಂದೆಯ ೪೬೦ ಎಕರೆಗಳ ಜಮೀನ್ದಾರಿಕೆ, ಹಾಗೆಯೇ ಸಾವಿರಾರು ರುಪಾಯಿಗಳ ವಕೀಲಿ ವೃತ್ತಿಗೆ ಕಿಂಚಿತ್ ಯೋಚಿಸದೇ ಶರಣು ಹೊಡೆದವರು. ಮಹಾರಾಷ್ಟ್ರದ ವರೋರಾ ಬಳಿ ಆನಂದವನ ಸ್ಥಾಪಿಸಿ ಕುಷ್ಠ ರೋಗಿಗಗಳ ಬವಣೆಗೆ, ಬದುಕಿಗೆ ಹಾಗು ಪುನರುತ್ಥಾನಕ್ಕಾಗಿ ಜೀವನ ತೇಯ್ದವರು. ಆದರೆ ಸಮಾಜ ಸೇವಕ ಎಂದು ಕರೆಸಿಕೊಂಡವರಲ್ಲ. ಸರ್ದಾರ ಸರೋವರ ಆಣೆಕಟ್ಟಿನ ನಿರ್ಮಾಣ ವಿರೋಧಿಸಿ, ನರ್ಮದಾ ನದಿ ಬಚಾವೋ ಆಂದೋಲನಕ್ಕೆ ಮುಂಚೂಣಿಯಲ್ಲಿ ನಿಂತರೂ ಪರಿಸರವಾದಿ ಎಂದುಕೊಂಡವರಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರೂ ಸ್ವಾತಂತ್ರ್ಯ ಹೋರಾಟಗಾರ ಎಂದು ಯಾರ ಮುಂದೂ ಬಿಂಬಿಸಿಕೊಂಡವರಲ್ಲ. ನಾನೋರ್ವ ಸಾಮಾನ್ಯ ಎಂದು ಕರೆದುಕೊಳ್ಳುತ್ತಲೇ ಜಗತ್ತು ನಿಬ್ಬೆರಗಾಗುವಂತಹ ಕ್ರಾಂತಿಕಾರಕ ಕೆಲಸ ಮಾಡಿದವರು ಬಾಬಾ.

ಆಮ್ಟೆ ಕುಟುಂಬಕ್ಕೆ ಒಟ್ಟು ೩ ರೆಮೋನ್ ಮ್ಯಾಗ್ಸೆಸ್ಸೆ. ಸ್ವಾತಂತ್ರ್ಯ ಸೇನಾನಿ ಸ್ವತ: ಬಾಬಾ ಜೊತೆಗೆ ಅವರ ಮಗ ಡಾ.ಪ್ರಕಾಶ ಹಾಗು ಸೊಸೆ ಡಾ.ಮಂದಾಕಿನಿ ಆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾಬಾ ಅವರ ಮೇಲೆ ಪ್ರಭಾವ ಬೀರಿದ ಮೂವರಲ್ಲಿ ಬಾಪು ಅತಿ ಮುಖ್ಯರು. ವಾರ್ಧಾದ ಬಾಪು ಕುಟಿ ಆಶ್ರಮದಲ್ಲಿ ಯುವಕ ಮುರಳೀಧರ ದೇವಿದಾಸ ಆಮ್ಟೆಗೆ ಗಾಂಧೀಜಿ ಅಡುಗೆಯ ಮೆನೆಯಲ್ಲಿ ಕಾಯಿಪಲ್ಲೆ ಕತ್ತರಿಸುವ ಕೆಲಸ ಕೊಟ್ಟಿದ್ದರು. ಕಾರ್ಯದ ಮಧ್ಯೆ ಅಡುಗೆ ಕೋಣೆಗೆ ಬಾಪು ಬಂದರು. ಬಾಬಾ ಆಮ್ಟೆ ಕಾಯಿಪಲ್ಲೆ ಕತ್ತರಿಸಿ, ತೊಳೆಯುವ ಕಾಯಕದಲ್ಲಿ ಮಗ್ನರಾಗಿದ್ದರು. ಬಾಪು ಸೂಕ್ಷ್ಮಗ್ರಾಹಿ. ಅಲ್ಲಲ್ಲಿ ಕಾಯಿಪಲ್ಲೆಗಳ ತುಂಡು ಬಿದ್ದದ್ದನ್ನು ಪೇರಿಸಿಕೊಂಡು, ಎತ್ತಿ ತಂದರು. ಅಲ್ಲಿಯೇ ಇದ್ದ ನೀರಿನಲ್ಲಿ ಎದ್ದಿದರು. ಬಾಬಾ ಕೈಗೆ ಇತ್ತರು. ಬಾಬಾಗೆ ಇದು ಅರ್ಥವಾಗಲಿಲ್ಲ ಎಂಬುದನ್ನು ಗ್ರಹಿಸಿದ ಬಾಪು.."ನೋಡು ಮುರಳೀಧರ ..ನಾವು ಸಾರ್ವಜನಿಕರ ಹಣದಲ್ಲಿ ಬದುಕುತ್ತಿದ್ದೇವೆ. ಆಶ್ರಮ ಅವರ ಸ್ವತ್ತು. ಹೀಗಿದ್ದಲ್ಲಿ ಒಂದು ತುಂಡು ಕೂಡ ಅಪವ್ಯಯವಾಗುವಂತಿಲ್ಲ. ನೆನಪಿಡಿ. ವೃತದಂತೆ ಪಾಲಿಸಿ." ಬಿರ್ಲಾ ಪ್ರತಿಷ್ಠಾನ ಆಗ ಆಶ್ರಮದ ಮೂಲ ಪಾಲಕ. ಸದ್ಯದ ಶಬ್ದ ಎಂದರೆ ಪ್ರಾಯೋಜಕ.

ಇಷ್ಟೆಲ್ಲ ಏಕೆ ಹೇಳಿದೆನೆಂದರೆ..ನಮ್ಮ ಭಾರತೀಯ ಸಂಸ್ಕೃತಿಯ ಠೇಕೆದಾರರಂತೆ ವರ್ತಿಸುತ್ತಿರುವ ಕೆಲ ಸಂಘಟನೆಗಳು, ಅವುಗಳ ನೇತಾರರು, ಕಾರ್ಯಕರ್ತರು ತಮ್ಮನ್ನು ಸಮಾಜ ಸೇವಕರು, ಸಂಸ್ಕೃತಿ ರಕ್ಷಕರು, ಧರ್ಮರಕ್ಷಕರು, ಕ್ರಾಂತಿಕಾರಿಗಳು, ನಮ್ಮ ನಿಡುಗಾಲದ ರಾಷ್ಟ್ರ ಭಕ್ತರು ಎಂಬುವಂತೆ ತಾವೇ ತಮ್ಮನ್ನು ಕರೆದುಕೊಳ್ಳುತ್ತಿರುವ, ಹಾಗೆಂಬಂತೆ ನಡೆದುಕೊಳ್ಳುತ್ತಿರುವ ರೀತಿ ಗಮನಿಸಿದರೆ ಇವರ ಉದ್ದೇಶಗಳು ಸದುದ್ದೇಶಗಳಲ್ಲ. ಮಾಧ್ಯಮಗಳನ್ನೇ ಢಾಲು ಮಾಡಿಕೊಂಡು ಅವರು ಸುದ್ದಿಯಾಗುತ್ತಿರುವ ಪರಿ, ಅನುಸರಿಸುವ ರೀತಿ ನೋಡಿದರೆ ಈ ಹೋರಾಟಗಾರರಿಗೆ ಮಾಧ್ಯಮ ವೀರರೇ ಸಲಹಾಕಾರರು ಎಂಬ ಶ್ರೀ ಸಾಮಾನ್ಯನ ಊಹೆ ಅಥವಾ ಸಂದೇಹ ನಿಚ್ಚಳವಾಗುತ್ತ ಹೋಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಸಂವಿಧಾನ ರೀತ್ಯಾ ಪ್ರತಿಭಟನೆ, ಹೋರಾಟ, ಮೆರವಣಿಗೆ, ಕಪ್ಪು ಬಾವುಟ ಪ್ರದರ್ಶಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ನಾಗರಿಕ ಸಮಾಜ ಒಪ್ಪುವ ರೀತಿಯಲ್ಲಿ, ಮನ್ನಣೆ ಕೊಡುವ ಅಥವಾ ಬೆಂಬಲ ಸೂಚಿಸುವ ರೀತಿಯಲ್ಲಿ ಅವುಗಳಿರಬೇಕು. ಕೊನೆಯ ಪಕ್ಷ ಸಮಾಜದ ಸಹಾನುಭೂತಿ ಗಳಿಸುವಲ್ಲಿಯಾದರೂ ಆ ಹೋರಾಟಗಳು ಯಶಸ್ವಿಯಾಗಬಹುದು. ನಂತರ ಜನಾಭಿಪ್ರಾಯ ರೂಪುಗೊಂಡು ಅದೊಂದು ಸಾಮುದಾಯಿಕ ಹೋರಾಟವಾಗಿ ಅಧಿಕಾರಸ್ಥರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಬಹುದು. ಉದಾಹರಣೆಗೆ ಧಾರವಾಡದಲ್ಲಿ ಸ್ಥಾಪನೆಯಾದ ಹೈಕೋರ್ಟ್ ಸಂಚಾರಿ ಪೀಠ. ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಔದಾರ್ಯದ ಫಲವಾಗಿ ಗುಲಬರ್ಗಾ ಕೂಡ ಸಂಚಾರಿ ಪೀಠ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ನಿರೀಕ್ಷಿತ ಮೊಕದ್ದೆಮೆಗಳು ದೊರಕದೇ ಈಗ ಮತ್ತೆ ಧಾರವಾಡಕ್ಕೆ ಅಥವಾ ಅಲ್ಲಿನ ರಾಜಕಾರಣ ಅದಕ್ಕೆ ಒಪ್ಪದಿದ್ದರೆ ಬೆಂಗಳೂರಿಗೆ ಮತ್ತೆ ಪೀಠ ಸ್ಥಳಾಂತರಗೊಳ್ಳಲು ಕ್ಷಣಗಣನೆ ಆರಂಭಿಸಿದೆ!

ಹೋರಾಟ ಮಾಡುವವರಿಗೆ, ಸಂಘಟನೆಗಳನ್ನು ಕಟ್ಟುವವರಿಗೆ ಕನಿಷ್ಟ ೧೦೦ ವರ್ಷಗಳ ದೂರದೃಷ್ಟಿ ಇರಬೇಕು. ಗಟ್ಟಿ ಸಿದ್ಧಾಂತಗಳಿರಬೇಕು. ಅವು ಮೌಲ್ಯಗಳಿಂದ ಹೆಣೆಯಲ್ಪಡಬೇಕು. ಯಾವ ಸಂದರ್ಭದಲ್ಲಿಯೂ ರಾಜಿಯಾಗದಂತಹ ಬದ್ಧತೆ ಬೇಕು. ಎಂತಹ ಪರೀಕ್ಷಾ ಸಂದರ್ಭದಲ್ಲಿಯೂ ಅನುಕೂಲಸಿಂಧುವಾಗಿ ಪರಿವರ್ತನೆಯಾಗಬಾರದು. ಸಮಾಜ ಮನ್ನಣೆ ನೀಡದೇ, ಒಪ್ಪಿಕೊಳ್ಳದೇ, ಪೋಷಿಸದೇ ಯಾವ ಸಂಘಟನೆ ಬದುಕೀತು ಹೇಳಿ. ಮುಂದಾಳುಗಳಿಗೆ ಪ್ರಸಿದ್ಧಿಯ ತಿಟೆ ಇರಬಾರದು. ಅವರು ತುಸು ಕಡಿಮೆ ಮಾತನಾಡಬೇಕು. ಅವರ ಕಾರ್ಯ ಜಗತ್ತಿಗೆ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಬೇಕು. ಅವರ ಕೆಳಗಿನವರು ತಪ್ಪು ಮಾಡಿದಾಗ ನಿರ್ದಾಕ್ಷಿಣ್ಯವಾಗಿ ನಿಗದಿತ ಶಿಕ್ಷೆ ದೊರಕುವಂತೆ ಮುತ್ಸದ್ದಿತನ ಮೆರೆಯಬೇಕು. ಯಾವತ್ತೂ ಅದನ್ನು ಸಮರ್ಥಿಸುವ ಹುಂಬತನ ಮಾಡಬಾರದು. ಜೊತೆಗೆ ಸಮಾಜದ ಹಣ ಕೂಡ ಅದನ್ನು ಪೋಷಿಸುತ್ತಿದೆ ಎಂಬ ಅರಿವು ಯಾವತ್ತಿಗೂ ಇರಬೇಕು.

ಮೇಲಾಗಿ ಹೋರಾಟದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು, ಸುವ್ಯವಸ್ಥೆ ಹದಗೆಡಿಸಿ ತಾವೇ ಶಿಕ್ಷಿಸಲು ಮುಂದಾಗುವುದು, ಹೆಣ್ಣುಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳುವುದು, ಸಾರ್ವಜನಿಕವಾಗಿ ಥಳಿಸುವುದು ಯಾವ ನಾಗರಿಕ ಸಮಾಜ ಇಂಥಹ ಕೃತ್ಯಕ್ಕೆ ಇಳಿದವರನ್ನು ಸಹಿಸುತ್ತದೆ? ನಿನ್ನೆಯ ಮಂಗಳೂರು ಘಟನೆ..‘ಭಾರತದ ತಾಲೀಬಾನಿಕರಣ’ ಎಂದು ಬಿಂಬಿಸಲಾದ ಪ್ರಕರಣದಲ್ಲಿ ೩ ಯುವತಿಯರು ಪುಂಡರ ದಾಂಧಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಪಬ್ ನಲ್ಲಿ ಹಾಗೆ ವರ್ತಿಸುತ್ತಿದ್ದುದು ಸರಿ, ದಾಳಿ ಮಾಡಿದವರದ್ದು ತಪ್ಪು ಎಂಬ ವಾದ ನನ್ನದಲ್ಲ. ಅವರಿಗೆ ಸಹಕರಿಸಿದ ಮಾಧ್ಯಮದವರು ಶಿಕ್ಷೆಗೆ ಅರ್ಹರು ಎಂದು ನಾನು ಪ್ರತಿಪಾದಿಸುತ್ತಿಲ್ಲ. ಇವರಲ್ಲಿ ಯಾರಿಗಾದರೂ ‘ಸಾರ್ವಜನಿಕ ಹಿತಾಸಕ್ತಿ’ ಎಂಬ ಪದದ ಅರ್ಥ ಗೊತ್ತೆ? ಮಾನವಾಸಕ್ತಿ ಎಂದರೇನು? ಇವರೆಲ್ಲರ ಉದ್ದೇಶಗಳೇನು? ಆರೋಗ್ಯಪೂರ್ಣ ಸಮಾಜಕ್ಕೆ ಇವರ ಕೊಡುಗೆಗಳು ಎಂತಹವು? ಯಾವತ್ತೂ ಸುದ್ದಿಯಲ್ಲಿ ಇರಬಯಸುವ ಸಂಘಟನೆಗಳು ಮಾಧ್ಯಮಗಳ ಮೂಲಕ ಸದಾ ವಿವಾದಕ್ಕೀಡಾಗಲು ಹವಣಿಸುತ್ತಿರುವಂತೆ ಈಗ ಭಾಸವಾಗುತ್ತಿದೆ. ಅದು ಯಾವ ಬೆಲೆ ತೆತ್ತಾದರೂ! ಕೊನೆಗೆ ಮಂದಿಯ ಪ್ರಾಣಕ್ಕೆ ಎರವಾದರೂ ಅಡ್ಡಿ ಇಲ್ಲ.

‘ನಮಗ್ಯಾಕ ಬೇಕ್ರಿ’- ನಮ್ಮ ಈ ಬುದ್ಧಿ, ಇಂತಹವರೆಲ್ಲ ಲಂಗುಲಗಾಮಿಲ್ಲದೇ ಮಾತನಾಡಲು, ಸಾರ್ವಜನಿಕವಾಗಿ ಮೆರೆದಾಡಲು, ಅನಾಗರಿಕವಾಗಿ ವರ್ತಿಸಲು ಅನುವು ಮಾಡಿಕೊಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಕೊನೆಗೆ ಜಾತಿ-ಜಾತಿಗಳ ಮಧ್ಯದ ಸಂಘರ್ಷಕ್ಕೆ, ಕೋಮು ಗಲಭೆಗೆ, ಅಶಾಂತಿಗೆ ಇದು ಮುನ್ನುಡಿ ಬರೆಯುತ್ತದೆ. ಮಾಧ್ಯಮಗಳ ಟಿ.ಆರ್.ಪಿ ಹೆಚ್ಚುತ್ತದೆ ಆ ಮಾತು ಬೇರೆ. ಶನಿವಾರ ಈ ಘಟನೆ ನಡೆದಿದೆ ಆದರೂ ಭಾನುವಾರ ಸಹ ರಾಷ್ಟ್ರೀಯ ಚಾನೆಲ್ ಗಳು ಗಂಟೆಗಳ ತನಕ ಇದೇ ಸುದ್ದಿ ಮತ್ತೆ ಮತ್ತೆ ಪುನರಾವರ್ತಿಯಾಗಿ ಪ್ರಸಾರ ಮಾಡಿವೆ. ಇದು ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ರಾಜಕಾರಣದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂತರ್ಜಾಲದ ಆನ್ ಲೈನ್ ಮಾಧ್ಯಮಗಳು ನಿನ್ನೆಯೇ ಈ ಘಟನೆಯ ಕುರಿತು ವಿಡಿಯೋ ಕ್ಲಿಪ್ಪಿಂಗ್ ಸಮೇತ ಸುದ್ದಿ ಪ್ರಕಟಿಸಿವೆ. ಸಂಘಟನೆಯ ನೇತಾರ ಪತ್ರಿಕಾಗೋಷ್ಠಿ ನಡೆಸಿ, ಕೊಟ್ಟ ಬಹಿರಂಗ ಹೇಳಿಕೆಯನ್ನೂ ಸಹ ದಾಖಲಿಸಿವೆ "ನಮ್ಮ ಕಾರ್ಯಕರ್ತರು ಮಾಡಿದ್ದು ಸರಿ". ಇಂದಿನ ಸುದ್ದಿ ಕೇಳಿ.."ಆ ಹೆಣ್ಣು ಮಕ್ಕಳು ನನ್ನ ಅಕ್ಕತಂಗಿಯರಿದ್ದಂತೆ..!" ಅಂದಿದ್ದಾರೆ ಅದೇ ಸಂಘಟನೆಯ ಮುಖ್ಯಸ್ಥರು. ಆ ಸುದ್ದಿಯನ್ನೂ ಸಹ ನಮ್ಮವರು ಪ್ರಕಟಿಸುವಲ್ಲಿ ಹಿಂದೆ ಬಿದ್ದಿಲ್ಲ!

ಹೊರಗಿನ ಶತ್ರುಗಳನ್ನಾದರೆ ನಿರ್ದಾಕ್ಷಿಣ್ಯವಾಗಿ ಮೆಟ್ಟೇವು. ಈ ಒಳಗಿನ ಹಿತಶತ್ರುಗಳನ್ನು ಬಗ್ಗಿಸುವುದು ಹೇಗೆ? ಇಂತಹ ಅನಾಗರಿಕ, ಅಸಂವಿಧಾನಿಕ ಹೋರಾಟಗಳಿಗೆ ವಿದ್ಯುನ್ಮಾನ ಮಾಧ್ಯಮ ತನ್ನ ಬೆಂಬಲ ಸೂಚಿಸುವುದನ್ನು ನಿಲ್ಲಿಸಲಿ. ಪ್ರಚಾರ ಗಿಟ್ಟುವುದಿಲ್ಲ ಎಂಬುವ ಪರಿಸ್ಥಿತಿ ನಿರ್ಮಾಣಗೊಂಡರೆ ಇಂತಹ ಕೃತ್ಯಗಳಿಗೆ ಕಡಿವಾಣ ತಾನಾಗಿಯೇ ಬೀಳುತ್ತದೆ. ಸಾಮಾಜಿಕ ಜವಾಬ್ದಾರಿ, ಸ್ವಯಂ ನಿಯಂತ್ರಣ ಮಾಧ್ಯಮಗಳಿಗೆ ಅವಶ್ಯ. ಹಾಗೆಯೇ ಸಮಾಜದ ಹಿತದೃಷ್ಟಿಯಿಂದ ಎಲ್ಲ ವರ್ಗದ ಸಂಘಟನೆಗಳಿಗೂ ಇದನ್ನು ಹೇರುವುದು ಕಷ್ಟವಾಗಲಿಕ್ಕಿಲ್ಲ.

ಹೋರಾಟಗಳಿಗೆ ಮಾತ್ರವಲ್ಲ ಹಾರಾಟಗಳಿಗೂ ಮಾಧ್ಯಮ ಈಗ ಧ್ವನಿಯಾಗುತ್ತಿದೆ! ತಾನೇ ಸ್ವತ: ಹಾರಾಡುವ ಮಟ್ಟಿಗೂ ಇಳಿದಿದೆ. ಭಾರತದಲ್ಲಿ ಮಾಧ್ಯಮಗಳ ಪ್ರಭುತ್ವ ಪ್ರಜಾಪ್ರಭುತ್ವಕ್ಕಿಂತ ಒಂದು ತೂಕ ಹೆಚ್ಚೇ ತೂಗುತ್ತಿದೆ. ನಾಳೆ ನಮ್ಮನ್ನು ಆಳಲೂಬಹುದು.