ಹೋರಾಟದ ಹಾಡುಗಳು

ಹೋರಾಟದ ಹಾಡುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ವೆಂಕಟೇಶ್ ಎಚ್. ಮತ್ತು ಜ್ಯೋತಿ ಎಸ್.
ಪ್ರಕಾಶಕರು
ಗೀತಾಂಜಲಿ ಪುಸ್ತಕ ಪ್ರಕಾಶನ, ರಾಜೇಂದ್ರ ನಗರ, ಶಿವಮೊಗ್ಗ.
ಪುಸ್ತಕದ ಬೆಲೆ
ರೂ. ೨೬೦.೦೦, ಮುದ್ರಣ : ೨೦೨೨

ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹೋರಾಟದಲ್ಲಿ ತೊಡಗಲು ಮಾನಸಿಕ, ಭಾವನಾತ್ಮಕ ಪ್ರೇರಕ ಶಕ್ತಿಗಳಾಗಿ ಕ್ರಿಯಾಶೀಲವಾಗಿವೆ ಎನ್ನುತ್ತಾರೆ ಬಿ.ಎಂ. ಪುಟ್ಟಯ್ಯ . ಅವರು ಎಚ್. ವೆಂಕಟೇಶ್ ಹಾಗೂ ಜ್ಯೋತಿ .ಎಸ್‌ ಅವರ ಸಂಪಾದಿತ “ಹೋರಾಟದ ಹಾಡುಗಳು” ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ......

“ಎಚ್. ವೆಂಕಟೇಶ್ ನನ್ನ ಆತ್ಮೀಯರು. ಇವರು ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರು. ಇವರಿಗಿರುವ ಕಲಿಯುವ ಕುತೂಹಲ ಮತ್ತು ಆಸಕ್ತಿ ಇಂದಿನ ವಿದ್ಯಾರ್ಥಿ ಸಮೂಹವನ್ನು ನಾಚಿಸುವಂತಿದೆ. ಕೆಲವು ಕಮ್ಮಟಗಳಿಗೆ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು, ತಾವೂ ಕಮ್ಮಟಾರ್ಥಿಯಾಗಿ ಬರುತ್ತಾರೆ. ಈ ವಿಷಯದಲ್ಲಿ ಇವರು ಗುರು-ಶಿಷ್ಯರ ನಡುವೆ ವ್ಯತ್ಯಾಸ ಮತ್ತು ಶ್ರೇಣೀಕರಣವನ್ನು ಪಾಲಿಸುವುದಿಲ್ಲ. ಇದು ಇವರೊಳಗಿನ ಸ್ವಭಾವ. ಇದು ಇವರ ಮೇಲಿನ ನನ್ನ ಪ್ರೀತಿಯನ್ನು ಹೆಚ್ಚಿಸಿದೆ. ಇವರು ಮತ್ತು ಜ್ಯೋತಿ ಎಸ್. ಇಬ್ಬರೂ ಸೇರಿ ಹೋರಾಟದ ಹಾಡುಗಳನ್ನು ಸಂಪಾದಿಸಿದ್ದಾರೆ. ಈ ಸಂಕಲನಕ್ಕೆ ಮುನ್ನುಡಿ ಬರೆಯಲು ನನ್ನ ಮೇಲಿನ ಪ್ರೀತಿಗಾಗಿ ನನ್ನನ್ನು ಕೇಳಿದ್ದಾರೆ. ಅದಕ್ಕಾಗಿ ಕೆಲವು ಮಾತುಗಳು.

ಹೋರಾಟಗಳನ್ನು ಹೊರಗಿನಿಂದ ಮತ್ತು ಒಳಗಿನಿಂದ ನೋಡುವ ಎರಡು ತದ್ವಿರುದ್ಧ ನೆಲೆಗಳಿವೆ. ಹೊರಗಿನಿಂದ ಹೋರಾಟಗಳನ್ನು ನೋಡಿದಾಗ ನಿಜವಾಗಿಯೂ ಹೋರಾಟಗಳು ಬೇಕೆ? ಬೇಕಿದ್ದರೆ ಯಾವ ಉದ್ದೇಶಗಳಿಗೆ ಬೇಕು? ಎಂಬ ಪ್ರಶ್ನೆಗಳು ಬರುತ್ತವೆ. ಈ ಪ್ರಶ್ನೆಗಳು ಸಹಜವಾಗಿ ಪ್ರಶ್ನೆಗಳಿಂದ ಶುರುವಾಗದೆ ಹೋರಾಟಗಳ ಅವಶ್ಯಕತೆಯಿಲ್ಲ ಎಂಬ ಪೂರ್ವತೀರ್ಮಾನಗಳ ಮೂಲಕ ಹುಟ್ಟುತ್ತವೆ. ಆಗ ಹೋರಾಟಗಳು ಅಸ್ತವ್ಯಸ್ತವಾಗಿ ಕಾಣುತ್ತವೆ, ಅಪ್ರಸ್ತುತವಾಗಿ ಕಾಣುತ್ತವೆ. ಅದರ ಭಾಗವಾದ ಹೋರಾಟದ ಹಾಡುಗಳು ಅನಗತ್ಯವಾಗಿ ಕಾಣುತ್ತವೆ. ಇನ್ನು ಹೋರಾಟಗಳು ಯಾಕೆ ಬೇಕು ಎಂಬ ಪ್ರಶ್ನೆಗಳು ಬಂದರೂ ಇವಕ್ಕೆ ಒಂದೇ ಮಾದರಿಯ ವಿವರಣೆಗಳಿಲ್ಲ. ಕೆಲವು ನಿರ್ದಿಷ್ಟ ಘಟನೆಗಳನ್ನು, ಪ್ರಕರಣಗಳನ್ನು ಆಧರಿಸಿ, ಅವುಗಳಿಗೆ ಪ್ರತಿಕ್ರಿಯೆ ಮಾಡುವುದು, ವಿರೋಧಿಸುವುದು, ಪ್ರತಿಭಟಿಸುವುದು, ಬೀದಿಗಳಲ್ಲಿ ಘೋಷಣೆ ಕೂಗಿಕೊಂಡು ಮೆರವಣಿಗೆ ಮಾಡುವುದು, ಹಕ್ಕೊತ್ತಾಯ ಪತ್ರ ಕೊಡುವುದು- ಹೋರಾಟ ಎಂದರೆ ಇದಿಷ್ಟೆ ಎಂಬ ಕಲ್ಪನೆ ಇದೆ.

ಆಕಳದ ಉಚ್ಚಿಗೆ ಹೆಚ್ಚಿನ ಬೆಲೆ ಹಚ್ಚಿ

ಹಂದಿ ಅವತಾರಕ್ಕೆ ಹರಿ ಎಂದು ಜಗ ಮೆಚ್ಚಿ

ಎತ್ತು ಎಮ್ಮಿ ಕೋತಿ ನಾಯಿಗಂತಹಾ ಪ್ರೀತಿ

ನೀವು ನಮನ್ಯಾಕೆ ಮುಟ್ಟಲಿಲ್ಲ ನಿಮದೆಂತಹ ಸಣ್ಣ ಜಾತಿ

ನಾವ್ಯಾರೂ ತಮ್ಮ ನೀವ್ಯಾರೊ ।

ಈ ಹಾಡಿನಲ್ಲಿ ಬಂದಿರುವ ಉಪಮೆಗಳನ್ನು ಮತ್ತು ಮಧ್ಯಪ್ರಾಸಗಳನ್ನು ಗಮನಿಸ ಬೇಕು. ತೀರ್ಥವನ್ನು ತಯಾರಿಸಲು ಆಕಳ ಮೂತ್ರವನ್ನು ಬಳಸಲಾಗುತ್ತದೆ. ಹ ಎಂದು ಕರೆಯುತ್ತಿರುವುದು ಹಂದಿಯ ಅವತಾರಕ್ಕೆ. ಶೋಷಣೆ ಮತ್ತು ಅಪಮಾನದ ಸೂಕ್ಷ್ಮಗಳನ್ನು ಹಾಡು ಸರಳೀಕರಿಸುತ್ತಿಲ್ಲ; ವಾಚ್ಯಗೊಳಿಸುತ್ತಿಲ್ಲ.

ಆಕಾಶವ ಎತ್ತಿ ನಿಲ್ಲಿಸಿ ನೀಲಿಯಾಗಿ ನಿಂತವರೆ

ಕಪ್ಪು ನೆಲವ ಕೆಂಪು ಮಾಡಿ ಬಾಳೆಯಾಗಿ ಅರಳಿದವರೆ |

ನಾಡನಡುವಿನಿಂದ ಸಿಡಿದ ನೋವಿನ ಕೂಗೆ

ಆಕಾಶದ ಅಗಲಕ್ಕೂ ನಿಂತ ಆಲವೆ |

ಆಕಾಶ ಸಹಜವಾಗಿ ಮೇಲೆಯೇ ಇದೆ. ಮತ್ತೆ ಅದನ್ನು ಎತ್ತಿ ಹಿಡಿಯುವುದೇನು? ಅಂತಹ ಆಕಾಶವನ್ನು ಎತ್ತಬಲ್ಲರು ನೀಲಿಯಾಗಿ ನಿಂತ ಜನಗಳು! ಪ್ರಪಂಚದ ಎಲ್ಲಾ ವಸ್ತುಗಳಿಗೂ ಅಗಲವನ್ನು ಕಲ್ಪಿಸಬಹುದು. ಆದರೆ ಆಕಾಶಕ್ಕೆ ಅಗಲವನ್ನು ಕಲ್ಪಿಸಲು ಸಾಧ್ಯವೆ? ಅಂತಹ ಆಕಾಶದ ಅಗಲಕ್ಕೂ ಎಂದು ಹೇಳುವ ಮೂಲಕ ಇದನ್ನು ಇಡೀ ಬ್ರಹ್ಮಾಂಡದ ವಿಸ್ತಾರಕ್ಕೆ ವಿಸ್ತರಿಸಿರುವ ಕವಿ ಕಲ್ಪನೆ ಹಾಗೂ ಭಾವನೆ ಅಸಾಧಾರಣ ವಾದುದು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಾಡನಡುವಿನಿಂದ ಸಿಡಿದ ನೋವಿನ ಕೂಗು, ಅವರು ಆಕಾಶದ ಅಗಲಕ್ಕೂ ನಿಂತ ಆಲ.

ಶೋಷಿತ, ಅಪಮಾನಿತ ಜನರ ನಾಡಿಮಿಡಿತಗಳಲ್ಲಿ ಹಾಡುಗಳಾಗಿ, ಹಾಡಿನ ಪಾಡುಗಳಾಗಿ ಸೃಜನಶೀಲವಾಗಿದ್ದ ಹಲವು ಮಟ್ಟುಗಳನ್ನು, ಲಯಗಳನ್ನು, ನಾದ ಗಳನ್ನು, ಗೇಯತೆಯನ್ನು, ಉಪಮೆ, ರೂಪಕ ಹಾಗೂ ಪ್ರತಿಮೆಗಳನ್ನು ಹೋರಾಟದ ಹಾಡುಗಳು ಸೈದ್ಧಾಂತಿಕವಾಗಿ ಮರುಸೃಜನಶೀಲಗೊಳಿಸಿವೆ. ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹೋರಾಟದಲ್ಲಿ ತೊಡಗಲು ಮಾನಸಿಕ, ಭಾವನಾತ್ಮಕ ಪ್ರೇರಕ ಶಕ್ತಿಗಳಾಗಿ ಕ್ರಿಯಾಶೀಲವಾಗಿವೆ.

ಇದು ಹೋರಾಟವನ್ನು ಯಾಂತ್ರಿಕವಾಗಿ ಗ್ರಹಿಸುವ ವಿಧಾನ, ವಾಸ್ತವವಾಗಿ ಹೋರಾಟಗಳು ದೊಡ್ಡ ಚಳುವಳಿಯೊಂದರ ಬಿಡಿಭಾಗಗಳು, ಹೋರಾಟಗಳಿಗೆ ತನ್ನದೇ ಆದ ಸಿದ್ಧಾಂತ ಮತ್ತು ಕಾರ್ಯಾಚರಣೆಗಳು ಇರುತ್ತವೆ, ಅದರಲ್ಲಿ ನಾಯಕತ್ವ ಕಾರ್ಯಕರ್ತರು, ಜನಸಾಮಾನ್ಯರು, ಸಾಹಿತಿಗಳು, ಕಲಾವಿದರು, ಹಾಡುಗಾರರು ಇರುತ್ತಾರೆ ಮತ್ತು ಇರಬೇಕು ಎಂಬುದು ಮತ್ತೊಂದು ವಿವರಣೆ, ಹೋರಾಟಗಳಿಗೆ ಕಲೆ, ಸಾಹಿತ್ಯ ಅಗತ್ಯವಾಗಿದೆ; ಹಾಗೆಯೇ ಕಲೆ ಮತ್ತು ಸಾಹಿತ್ಯಕ್ಕೆ ಹೋರಾಟಗಳ ನಂಟು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ತೆಲುಗಿನ ಕ್ರಾಂತಿಕಾರಿ ಕವಿ ಚರಬಂಡರಾಜು 'ಹಾಡು ಆಕ್ಸಿಜನ್ ಹೋರಾಟವೇ ಡೈರೆಕ್ಸನ್' ಎಂದು ಹೇಳಿದ್ದಾರೆ.

ಈ ಸಂಕಲನವು ಎಲ್ಲಾ ಹೋರಾಟದ ಹಾಡುಗಳನ್ನು ಒಳಗೊಂಡಿಲ್ಲ. ಇದು ಸಂಪಾದಕರ ಆಯ್ಕೆಯನ್ನು ಅವಲಂಬಿಸಿದೆ, ಹಾಗಾಗಿ 'ಈ ಹಾಡನ್ನು ಯಾಕೆ ಸೇರಿಸಿಲ್ಲ? ಆ ಹಾಡನ್ನು ಯಾಕೆ ಸೇರಿಸಿಲ್ಲ? ಸೇರಿಸಬೇಕಿತ್ತು' ಎಂದು ಸಲಹೆ ಕೊಡುವುದು ಸೂಕ್ತವಲ್ಲ. ಇಲ್ಲಿ ಸಂಕಲನಗೊಂಡಿರುವ ಕೆಲವು ಹಾಡುಗಳ, ಕೆಲವು ಭಾಗಗಳು ಸರಿಯಾದ ರೂಪದಲ್ಲಿ ಇಲ್ಲ. ಜನರ ಬಾಯಲ್ಲಿ ಇರುವ ಹಾಡುಗಳು ಹೀಗಾಗಬಾರದು ಎಂದು ಯಾರಿಗಾದರೂ ಅನಿಸುತ್ತದೆ. ಈ ಸಂಕಲನವನ್ನು ರೂಪಿಸಲು ಡಾ. ವೆಂಕಟೇಶ್ ಅವರು ಈ ಮೊದಲು ಪಕಟವಾಗಿರುವ ಹಲವು ಹೋರಾಟದ ಹಾಡುಗಳ ಸಂಕಲನಗಳನ್ನು ಆಧರಿಸಿದ್ದಾರೆ. ಹಾಗಾಗಿ ಅಂತಹ ಕೆಲವು ಸಂಕಲನ ಗಳಲ್ಲಿ ಕೆಲವು ಹಾಡುಗಳು ಸರಿಯಾದ ರೂಪದಲ್ಲಿ ಮುದ್ರಣವಾಗದೇ ಇರಬಹುದು. ಆ ಸಂಕಲನಗಳ ಕೆಲವು ಮಿತಿಗಳು ಇಲ್ಲಿ ಮರುಕಳಿಸಿರಬಹುದು. ಏನೇ ಇದ್ದರೂ ಹೋರಾಟದ ಹಾಡುಗಳನ್ನು ಸಂಪಾದಿಸಿ, ಪ್ರಕಟಿಸುವುದು ರಾಜಕೀಯವಾಗಿ, ಸಾಮಾಜಿಕವಾಗಿ ಅತ್ಯಂತ ಜವಾಬ್ದಾರಿಯ ಕೆಲಸ. ಇದಕ್ಕೆ ಮೂಲತಃ ಹೋರಾಟಗಳ ಮೇಲೆ ನಂಬಿಕೆ, ಪ್ರೀತಿ ಮತ್ತು ಗೌರವ ಇರಬೇಕಾಗುತ್ತದೆ. ಜೊತೆಗೆ ಹೋರಾಟದ ಹಾಡುಗಳ ರಾಜಕೀಯ ದರ್ಶನದ ಬಗೆಗೆ ಗೌರವ ಹಾಗೂ ಬದ್ಧತೆ ಬೇಕಾಗುತ್ತದೆ. ಅಸಮಾನತೆ, ಅನ್ಯಾಯ ಹಾಗೂ ಶೋಷಣೆಗಳ ವಸ್ತುಸ್ಥಿತಿಯನ್ನು ಬದಲಾಯಿಸ ಬೇಕೆಂಬ ದರ್ಶನದ ಹಾಡುಗಳನ್ನು ಹೋರಾಟದಿಂದ ಪ್ರತ್ಯೇಕ ಮಾಡಬಾರದು. ಹೋರಾಟದಿಂದ ಅಸಮಾನತೆಯ ಬದಲಾವಣೆಯ ಆಶಯವನ್ನು ಪ್ರತ್ಯೇಕ ಮಾಡಬಾರದು. ಹೋರಾಟವನ್ನು ಅಸಮಾನತೆಯ ಸಮಾಜದ ವೈರುಧ್ಯ ಗಳಿಂದ ಪ್ರತ್ಯೇಕ ಮಾಡಬಾರದು. ವ್ಯವಸ್ಥೆಯ ವೈರುಧ್ಯಗಳಿಂದಲೇ ಹೋರಾಟ ಹುಟ್ಟುತ್ತದೆ ಎಂಬುದನ್ನು ಮರೆಯಬಾರದು. ಹೋರಾಟದ ಹಾಡುಗಳು ಸಾಮಾಜಿಕ ಅಸಮಾನತೆಯಿಂದ ಕಲಿತಿವೆ ಮತ್ತು ಅದಕ್ಕೆ ಕಲಿಸಿವೆ. ಇವು ಹೋರಾಟದಿಂದ ಪ್ರಭಾವ ಗೊಂಡಿವೆ ಮತ್ತು ಹೋರಾಟಗಳನ್ನು ಪ್ರಭಾವಿಸುವ ಹೋರಾಟಗಳಿಂದ ಹಾಡುಗಳು ಸ್ಫೂರ್ತಿ ಪಡೆಯಬೇಕು; ಹೋರಾಟದ ಹಾಡುಗಳಿಂದ ಹೋರಾಟವು ಸ್ಪೂರ್ತಿ ಪಡೆಯಬೇಕು.” 

ಕೃತಿಯು ೩೨೪ ಪುಟಗಳನ್ನು ಹೊಂದಿದೆ.

- ಬಿ.ಎಂ. ಪುಟ್ಟಯ್ಯ, ಬಳ್ಳಾರಿ