ಹೋರಾಡಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ…!

ಹೋರಾಡಬೇಕಾಗಿರುವುದು ಬದುಕಲೇ ಹೊರತು ಸಾಯಲು ಅಲ್ಲ…!

ಉಗ್ರವಾದ ಅಥವಾ ಭಯೋತ್ಪಾದನೆ ಆಧುನಿಕ ಜಗತ್ತಿನ ಶಾಪ. ಒಂದು ನಿರ್ದಿಷ್ಟ ಕಾರಣವೇ ಇಲ್ಲದೇ ತಮಗೆ ಸಂಬಂಧವೇ ಇಲ್ಲದ ಅಮಾಯಕ ಜನರನ್ನು ನಿರ್ದಯವಾಗಿ ಕೊಂದು ಇನ್ಯಾರಿಗೋ ಭಯದ ಸಂದೇಶ ಕಳುಹಿಸಿ ಹಿಂಸೆಯಿಂದಲೇ ತಮ್ಮ ಕಾರ್ಯವನ್ನು ಸಾಧಿಸಲು ಉಪಯೋಗಿಸುವ ಅತ್ಯಂತ ಅಮಾನವೀಯ ಕೃತ್ಯವೇ ಈ ಭಯೋತ್ಪಾದನೆ. ಯುದ್ಧಗಳು ನೇರ ನೇರ ನಡೆಯುತ್ತವೆ. ಬಹುತೇಕ ಯೋಧರ ನಡುವೆಯೇ ಇರುತ್ತದೆ. ಆದರೆ ಈ ಭಯೋತ್ಪಾದನೆ ಗೊತ್ತು ಗುರಿಯಿಲ್ಲದ ಪರೋಕ್ಷ ರಾಕ್ಷಸೀ ಸ್ವರೂಪ. ‌ಧರ್ಮದ ಅಮಲಿಗಾಗಿಯೋ, ದುಡ್ಡಿನ ದಾಹಕ್ಕಾಗಿಯೋ, ಅಜ್ಞಾನದ ಪರಮಾವಧಿಯಿಂದಾಗಿಯೋ, ದ್ವೇಷದ ದಳ್ಳುರಿಯಿಂದಾಗಿಯೋ, ಅಸೂಯೆಯಿಂದಾಗಿಯೋ, ಒಟ್ಟಿನಲ್ಲಿ ಮನುಷ್ಯ ಜೀವಿಯೊಬ್ಬ ಮಾಡಬಹುದಾದ ಅತ್ಯಂತ ಹೇಯ ಕೃತ್ಯ ಈ ಭಯೋತ್ಪಾದನೆ.

ಬಾಂಬು ಬಂದೂಕು ವಿಷಾನಿಲ ಎಲ್ಲವನ್ನೂ ಮೀರಿ ಮನುಷ್ಯನೇ ಸಜೀವವಾಗಿ ಆತ್ಮಾಹುತಿ ಬಾಂಬುಗಳಾಗಿ ಪರಿವರ್ತನೆಯಾಗಿ ದಾಳಿ ಮಾಡುತ್ತಿರುವ ಪದಗಳಿಗೆ ನಿಲುಕದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಭಯೋತ್ಪಾದನೆಯ ವಿಷಯದಲ್ಲಿ ಮತ್ತೊಂದು ವಿಚಿತ್ರವೆಂದರೆ ಕೊಲೆಯಾಗುವವನು ಮಾತ್ರವಲ್ಲ ಬಹುತೇಕ ಕೊಲ್ಲುವವನು ಸಾಯುತ್ತಾನೆ. ಆದರೆ ಕೊಲ್ಲಿಸುವವನು ಮಾತ್ರ ಸುಖ ಭೋಗಗಳ ಜೀವನ ನಡೆಸುತ್ತಾನೆ ಇವರ ಸಮಾಧಿಗಳ ಮೇಲೆ.

ಹೇಗೆ ಅರ್ಥಮಾಡಿಸುವುದು ಇವರಿಗೆ, ಮನುಷ್ಯರ ಬದುಕೊಂದು ಸುಮಾರು 70-80 ವರ್ಷಗಳ ಅವಧಿಯ ಪ್ರಾಕೃತಿಕ ಕೊಡುಗೆ. ಗಂಡು ಹೆಣ್ಣಿನ ಮಿಲನ ಮಹೋತ್ಸವದ ಕಾಣಿಕೆ. ಮೂಳೆ ಮಾಂಸದ ತಡಿಕೆ. ಬೆಳೆಯುತ್ತಾ ಬಲಿತು ದೃಢವಾಗಿ ನಂತರ ನಶಿಸುತ್ತಾ ಸಾಗಿ ಮತ್ತೆ ನೀರು ಮಣ್ಣು ಗಾಳಿಯಲ್ಲಿ ಲೀನವಾಗುತ್ತದೆ. ಅದರೊಳಗೆ ಸಿಗಬಹುದಾದ ನೆಮ್ಮದಿ ಸಂತೋಷಗಳ ಸಮಯವೆಷ್ಟು ಎಂಬುದೇ ನಿಜವಾದ ಜೀವನ.

ಆದರೆ ಅದಕ್ಕಾಗಿ ಸೃಷ್ಟಿಸಿಕೊಂಡಿರುವ ಅವಾಂತರಗಳು ನೂರಾರು. ಈಗ ಅದರೊಳಗೆ ತಾನೇ ಬಂಧಿಯಾಗಿ ಪರಿತಪಿಸುತ್ತಿದ್ದಾನೆ. ಮನುಷ್ಯರನ್ನೇ ಪ್ರಾಣಿಗಳಂತೆ ಭೇಟೆಯಾಡಿ ಹಿಡಿದು ಗುಲಾಮಗಿರಿಗಾಗಿ ಮಾರಾಟ ಮಾಡುತ್ತಿದ್ದ ಕಾಲ ಮುಗಿದು ಹೆಚ್ಚು ಕಡಿಮೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಐಹಿಕ ಸುಖ ಭೋಗಗಳ ಈ ಆಧುನಿಕ ಕಾಲದಲ್ಲಿ ಅದನ್ನು ಅನುಭವಿಸುವುದು ಅರಿಯದೆ ಭಯೋತ್ಪಾದನೆಗೂ ಸಂಘಟನೆಗಳನ್ನು ಆರಂಭಿಸಿ ಸಮಾಜವನ್ನೇ ರಕ್ತ ಸಿಕ್ತ ಮಾಡಿರುವ ಮನುಷ್ಯ ರೂಪದ ರಾಕ್ಷಸರಿಗೆ ಜಗತ್ತೇ ಹೆದರುವಂತಾಗಿದೆ. ಬಹುತೇಕ ಇದು ವಿಶ್ವವ್ಯಾಪಿ. ‌

ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರು ಧರ್ಮ ರಕ್ಷಣೆಗಿಂತ ಮೊದಲು ಮನುಷ್ಯರನ್ನು ಈ ಭಯೋತ್ಪಾದನೆಯಿಂದ ರಕ್ಷಿಸಬೇಕಿದೆ. ಒಂದು ಶಾಂತಿಯುತ ಸಮಾಜವೇ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಧರ್ಮದ ಅವಶ್ಯಕತೆಯನ್ನೇ ಪ್ರಶ್ನಿಸಬೇಕಾಗುತ್ತದೆ. ದೇವರ ನಂಬಿಕೆಯೇ ಕುಸಿದು ಬೀಳುತ್ತದೆ.

ನಿನ್ನೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನವಾಗಿದೆ. ಆ ಸಮಯದಲ್ಲಿ ಬಂಧಿತ ವ್ಯಕ್ತಿಯ ಕುಟುಂಬದ ಎರಡು ಮಕ್ಕಳ ತಾಯಿಯನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಹಿಂಸಿಸಿದ ರೀತಿ ಮತ್ತು ಆಕೆ ಆ ಕ್ಷಣದಲ್ಲಿ ಬದುಕಿಗಾಗಿ ಅಂಗಲಾಚಿದ ಪರಿ ಕರುಳು ಕಿವುಚಿದಂತಾಯಿತು. ಸರಿ ತಪ್ಪುಗಳನ್ನು ಮೀರಿ ಮನುಷ್ಯ ಸೂಕ್ಷ್ಮವಾಗಿ ಸ್ಪಂದಿಸುವ ಗುಣವನ್ನೇ ಮರೆತು ಎಲ್ಲರೂ ಭಯೋತ್ಪಾದರೇ ಎಂಬಂತೆ ಕನಸು ಬೀಳುತ್ತಿದೆ.

ಪತ್ರಕರ್ತರು, ರಾಜಕಾರಣಿಗಳು, ವೈದ್ಯರು, ಶಿಕ್ಷಕರು, ನಟರು, ಲೆಕ್ಕಪರಿಶೋಧಕರು, ವಕೀಲರು, ಪೋಲೀಸರು, ಬರಹಗಾರರು, ಹೋರಾಟಗಾರರು, ವ್ಯಾಪಾರಿಗಳು, ಉದ್ದಿಮೆದಾರರು, ಎಲ್ಲಾ ಧರ್ಮದ ಧಾರ್ಮಿಕ ಮುಖಂಡರು ಎಲ್ಲರೂ ಭಯೋತ್ಪಾದಕರೇ ಇರಬಹುದೇ ಎಂದು ಬೆಚ್ಚಿ ಬೀಳುವಂತಾಗಿದೆ. ಕೆಲವರು ನೇರ ಭಯೋತ್ಪಾದಕರು. ಅವರು ನಮ್ಮನ್ನು ಕೊಂದೇ ಬಿಡುತ್ತಾರೆ. ಇನ್ನೂ ಕೆಲವರು ಹಣಕ್ಕಾಗಿ ಜೀವನ ಪರ್ಯಂತ ಕೊಲ್ಲುತ್ತಲೇ ಇರುತ್ತಾರೆ ಎಂಬ ಭಾವನೆ ಉಂಟಾಗಿದೆ.

ಇದಕ್ಕಾಗಿ ಏನಾದರೂ ಮಾಡಲೇ ಬೇಕಿದೆ. ಪೋಲೀಸ್, ಮಿಲಿಟರಿ, ಭಯೋತ್ಪಾದನಾ ನಿಗ್ರಹ ದಳ, ಜಾಮೀನು ರಹಿತ ಬಂಧನ, ಮರಣದಂಡನೆ ಕಾನೂನು ಮುಂತಾದವು ಸರ್ಕಾರದ ಜವಾಬ್ದಾರಿಯಾದರೆ ಸಮಾಜದ ಜವಾಬ್ದಾರಿ ಇದಕ್ಕಿಂತಲೂ ಹೆಚ್ಚಿದೆ. ಜಾತಿ ಧರ್ಮ ಹಣದ ಅಮಲಿಗಿಂತ ಮನುಷ್ಯತ್ವದ ಅಮಲನ್ನು ಯುವ ಜನರಲ್ಲಿ ಬಿತ್ತಬೇಕಿದೆ. ಬದುಕಿನ ಸವಿಯನ್ನು ಅನುಭವಿಸಲು ಕಲಿಸಬೇಕಿದೆ. ಜೀವನದ ನಶ್ವರತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ. ಇಲ್ಲದಿದ್ದರೆ ಆಧುನಿಕ ಜಗತ್ತು ಭಯೋತ್ಪಾದನೆಯಿಂದಲೇ ನಾಶವಾಗಬಹುದು.

" ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಧರ್ಮವೇ " ಎಂಬ ಪೂರ್ಣ ಚಂದ್ರ ತೇಜಸ್ವಿಯವರ ಮಾತುಗಳನ್ನು ನಾವೆಲ್ಲರೂ ನಮ್ಮ ಮನದೊಳಗೆ ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳಬೇಕಿದೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ