ಹೋಳಿ ಹಬ್ಬದ ಪೂರಕ ಮಾಹಿತಿಗಳು

ಹೋಳಿ ಹಬ್ಬದ ಪೂರಕ ಮಾಹಿತಿಗಳು

ಬಣ್ಣದ ಹಬ್ಬ ಹೋಳಿ ಈಗ ತಾನೇ ಮುಗಿದಿದೆ. ಕೊರೋನಾ ಕಾರಣದಿಂದ ಅಬ್ಬರ ಸ್ವಲ್ಪ ಕಮ್ಮಿ ಆಗಿದ್ದರೂ ಸಂಭ್ರಮ ಎಲ್ಲೆಡೆ ಮನೆಮಾತಾಗಿತ್ತು. ‘ಸಂಪದ’ದಲ್ಲಿ ಈಗಾಗಲೇ ಹೋಳಿ ಬಗ್ಗೆ ಒಂದು ಮಾಹಿತಿ ಹಾಗೂ ಕೆಲವು ಕವನಗಳು ಪ್ರಕಟವಾಗಿವೆ. ಹೋಳಿ ಬಗ್ಗೆ ಪ್ರಕಟವಾದ ಲೇಖನದಲ್ಲಿ ಲೇಖಕರಿಗೆ ಬಿಟ್ಟು ಹೋದ ಕೆಲವೊಂದು ಮಾಹಿತಿಗಳನ್ನು ನಿಮ್ಮ ಜೊತೆ ನಾನು ಹಂಚಿಕೊಳ್ಳಲು ಬಯಸುವೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಆದುದರಿಂದ ನಮ್ಮದು ವಿಭಿನ್ನ ಸಂಸ್ಕೃತಿಯಲ್ಲೂ ಹಬ್ಬದ ಸಂಭ್ರಮದ ಏಕತೆ…

ಹಿಂದೂ ಮಾನ್ಯತೆ ಹಾಗೂ ಪುರಾಣಗಳ ಪ್ರಕಾರ ಹೋಳಿ ಆಚರಣೆಯು ಚಾಲ್ತಿಗೆ ಬರಲು ಮೂರು ಪ್ರಮುಖ ಕಾರಣಗಳು ಇವೆ. ಒಂದು ತಾರಕಾಸುರ ವಧೆ (ಮನ್ಮಥ/ಕಾಮನ ದಹನ), ಇನ್ನೊಂದು ಹಿರಣ್ಯಕಶಿಪುವಿನ ತಂಗಿ ಹೋಲಿಕಾಳ ದಹನ, ಮತ್ತೊಂದು ಪೃಥು ಅಥವಾ ರಘು ಎಂಬ ರಾಜನ ಕಾಲದ ಘಟನಾವಳಿಗಳು. ಇವುಗಳಲ್ಲಿ ಮೊದಲ ಎರಡು ಘಟನೆಗಳು ಈಗಾಗಲೇ ತಿಳಿಸಿಯಾಗಿದೆ, ಆ ಕಾರಣದಿಂದ ನಾನು ಮೂರನೇ ಕಾರಣವನ್ನು ಸ್ವಲ್ಪ ವಿವರಿಸುವೆ.

ಪೃಥು ಅಥವಾ ರಘು ಎಂಬ ರಾಜನ ಆಳ್ವಿಕೆಯ ಸಮಯದಲ್ಲಿ ಮಾಲೀ ಎಂಬ ರಾಕ್ಷಸ ರಾಜನ ಪುತ್ರಿ ‘ಡುಂಢಾ’ ಎಂಬ ರಾಕ್ಷಸಿಯ ಉಪಟಳ ಬಹಳ ಜೋರಾಗಿತ್ತು. ಈ ರಾಕ್ಷಸಿ ಶಿವನಿಂದ ವರವನ್ನು ಪಡೆದು ಶಿಶುಹತ್ಯೆಗಳನ್ನು ಮಾಡುತ್ತಾ, ಮಕ್ಕಳಿಗೆ ಕಂಟಕಪ್ರಾಯಳಾಗಿದ್ದಳು. ಫಾಲ್ಗುಣ ಪೂರ್ಣಿಮೆಯ ದಿನದಂದು (ಹೋಳಿ ಹುಣ್ಣಿಮೆ) ರಾಜ ಪೃಥುವಿನ ಆಜ್ಞೆಯಂತೆ ರಾಜ್ಯದ ಎಲ್ಲಾ ಮಕ್ಕಳು ಆವೇಶಭರಿತರಾಗಿ ಕುಣಿಯುತ್ತಾ ಕೂಗುತ್ತಾ ಕಟ್ಟಿಗೆ, ಕಸ, ಕಡ್ಡಿ, ಸೆಗಣಿಯ ಬೆರಣಿಗಳನ್ನು ಸೇರಿಸಿ ಬೆಂಕಿ ಕೊಟ್ಟಾಗ ಅದನ್ನು ಕಂಡು ಭಯಭೀತಳಾದ ಢುಂಡಾ ರಾಕ್ಷಸಿಯು ಮನುಷ್ಯ ಲೋಕವನ್ನು ತ್ಯಜಿಸಿ ಓಡಿ ಹೋಗುತ್ತಾಳೆ. ರಾಕ್ಷಸಿ ಓಡಿ ಹೋದ ಸಂತೋಷವನ್ನು ಆಚರಿಸಲು ಅಂದಿನಿಂದ ಪ್ರತೀ ವರ್ಷ ಈ ದಿನದಂದು ಕಟ್ಟಿಗೆ, ಕಸ, ಕಡ್ಡಿಗಳನ್ನು ರಾಶಿ ಹಾಕಿ ಬೆಂಕಿ ಕೊಟ್ಟು ಸುಡುತ್ತಾರೆ. ಇದೇ ಹೋಳಿ ಹಬ್ಬದ ಆಚರಣೆ. 

ಹೋಳಿ ಹಬ್ಬದ ಆಚರಣೆಯ ಸಂದರ್ಭ ಹೆಚ್ಚಾಗಿ ಪೂಜೆ, ಉಪವಾಸದಂತಹ ವೃತಗಳು ಇರುವುದಿಲ್ಲ. ಆದರೆ ಹೋಳಿ ಹಬ್ಬದ ೪೦ ದಿನಕ್ಕೆ ಮೊದಲು ಬರುವ ವಸಂತ ಪಂಚಮಿ ಹಬ್ಬದಂದು ಕೆಲವೆಡೆ ಊರಿನ ಪ್ರಮುಖ ಸ್ಥಳದಲ್ಲಿ ದೊಡ್ಡದಾದ ಮರದ ದಿಮ್ಮಿಯನ್ನು ಇರಿಸಿ, ಅದರ ಮೇಲೆ ಹೋಲಿಕಾ ಮೂರ್ತಿಯನ್ನು ಇಡುತ್ತಾರೆ. ಅದರ ತೊಡೆಯ ಮೇಲೆ ಬಾಲಕ ಪ್ರಹ್ಲಾದನ ಮೂರ್ತಿಯನ್ನು ಇಡುತ್ತಾರೆ. ಈ ಮೂರ್ತಿಗಳಲ್ಲಿ ಹೋಲಿಕಾ ಮೂರ್ತಿಯನ್ನು ಬೇಗನೇ ಸುಟ್ಟು ಹೋಗುವ ವಸ್ತುವಿನಿಂದಲೂ, ಪ್ರಹ್ಲಾದನ ಮೂರ್ತಿಯನ್ನು ಬೇಗನೆ ಸುಡದ ವಸ್ತುವಿನಿಂದಲೂ ತಯಾರು ಮಾಡುತ್ತಾರೆ. ವಸಂತ ಪಂಚಮಿಯಂದು ಶುರುವಾದ ಈ ಕೆಲಸವು ಫಾಲ್ಗುಣ ಹುಣ್ಣಿಮೆ ಅಂದರೆ ಹೋಳಿಯ ದಿನದವರೆಗೆ ನಡೆಯುತ್ತದೆ. ಜನರು ತಮ್ಮ ಬಳಿ ಇರುವ ಅನುಪಯುಕ್ತ ದಹನಶೀಲ ವಸ್ತುಗಳನ್ನು, ಮರದ ತುಂಡುಗಳನ್ನು ಇಲ್ಲಿ ರಾಶಿ ಹಾಕುತ್ತಾರೆ. 

ಕೆಲವು ಮನೆಗಳಲ್ಲಿ ಕಾಮದೇವನ ವಿಗ್ರಹದ ಸ್ಥಾಪನೆಯನ್ನೂ ಮಾಡುತ್ತಾರೆ. ಹೋಳಿಯ ದಿನದಂದು ಬಣ್ಣದ ಹುಡಿಗಳನ್ನು, ನೀರನ್ನು ಎರಚುವ ಸಂಪ್ರದಾಯವೂ ಇದೆ. ಉತ್ತರ ಭಾರತದಲ್ಲಿ ಮದ್ಯಾಹ್ನದ ವರೆಗೆ ಮಾತ್ರ ಬಣ್ಣದ ಎರಚಾಟ ಇರುತ್ತದೆ. ನಂತರ ಸ್ನಾನ ಮಾಡಿ ಊಟ ಮಾಡುತ್ತಾರೆ. ಮದ್ಯಾಹ್ನದ ಬಳಿಕ ಬಣ್ಣ ಎರಚಾಟ ಕಮ್ಮಿ ಇರುತ್ತದೆ.

ಬಂಗಾಳದಲ್ಲಿ ಹೋಳಿ ಹಬ್ಬವನ್ನು ‘ಡೋಲಾ ಪೂರ್ಣಿಮಾ’ ಅಥವಾ ‘ಡೋಲಾ ಯಾತ್ರಾ’ (ಪಲ್ಲಕ್ಕಿ ಜಾತ್ರೆ) ಎಂದು ಆಚರಿಸುತ್ತಾರೆ. ಫಾಲ್ಗುಣ ಶುಕ್ಲ ಚತುರ್ದಶಿಯಿಂದ ಮೊದಲ್ಗೊಂಡು ಮೂರು ಅಥವಾ ಐದು ದಿನಗಳ ಕಾಲ ನಡೆಯುವ ಉತ್ಸವಾಚರಣೆಯನ್ನು ವೃಂದಾವನದಲ್ಲಿ ರಾಜಾ ಇಂದ್ರದ್ಯುಮ್ನ ಆರಂಭಿಸಿದನೆಂದು ಹೇಳುತ್ತಾರೆ. ಅಗ್ನಿದೇವನ ಬಗೆಗೆ ಗೌರವ ಹಾಗೂ ಶ್ರೀಕೃಷ್ಣನನ್ನು ಪೂಜಿಸಲು ಅವರ ಪುತ್ತಳಿಯನ್ನು ಜೋಕಾಲಿಯಲ್ಲಿ (ಡೋಲಾ) ಇರಿಸಿ ತೂಗುವುದು ಆಚರಣೆಯ ಪ್ರಮುಖ ಆಚರಣೆ. ಉತ್ಸವದ ಮೊದಲ ದಿನ ಉರಿಸಿದ ಅಗ್ನಿಯನ್ನು ಉತ್ಸವದ ಕೊನೆಯ ದಿನದ ತನಕ ಆರದಂತೆ ಕಾಪಾಡಲಾಗುತ್ತದೆ. 

ಉತ್ತರ ಪ್ರದೇಶದ ಮಥುರಾ, ವೃಂದಾವನ, ಒಡಿಶಾದ ಪುರಿ, ಬಂಗಾಳದಲ್ಲಿ ಸಂತ ಶ್ರೀಕೃಷ್ಣ ಚೈತನ್ಯ ಮಹಾಪ್ರಭುಗಳ ಜನ್ಮದಿನವಾಗಿಯೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. 

ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬದ ಆಚರಣೆ ನಡೆಯುತ್ತದೆ. ಕರಾವಳಿ ಹಾಗೂ ಮಲೆನಾಡು ಕರ್ನಾಟಕ ಪ್ರದೇಶಗಳಲ್ಲಿ ಹೋಳಿ ಆಚರಣೆ ಅಷ್ಟಾಗಿ ದೊಡ್ದ ಮಟ್ಟದಲ್ಲಿ ಪ್ರಚಲಿತದಲ್ಲಿ ಇಲ್ಲ. ವಿಜಯನಗರದ ಅರಸರು ತಮ್ಮ ರಾಜಧಾನಿಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದರೆಂದು ಆ ಸಮಯದಲ್ಲಿ ಭೇಟಿ ಇತ್ತ ವಿದೇಶೀ ಪ್ರವಾಸಿಗರು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದಾರೆ. ಕಾಮ ದಹನವಾದ ನಂತರ ಆ ಬೂದಿಯನ್ನು ರೈತರು ತಮ್ಮ ಜಮೀನಿನಲ್ಲಿ ಚಿಲ್ಲುತ್ತಾರೆ. ನಂತರ ಬೀಜವನ್ನು ಬಿತ್ತುತ್ತಾರೆ. ಈ ಕ್ರಮದಿಂದ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲವೆಡೆ ಈ ಸುಟ್ಟ ಬೂದಿಗೆ ಬಣ್ಣವನ್ನು ಮಿಶ್ರ ಮಾಡಿ ಪರಸ್ಪರ ಬಂಧು ಮಿತ್ರರಿಗೆ ಹಚ್ಚುತ್ತಾರೆ. ಹೀಗೆ ಹತ್ತು ಹಲವಾರು ವಿಧಗಳಲ್ಲಿ ಹೋಳಿಯನ್ನು ಆಚರಿಸುತ್ತಾರೆ.

ನೈಸರ್ಗಿಕ ಬಣ್ಣಗಳನ್ನು ಹಚ್ಚಿ ಹೋಳಿ ಹಬ್ಬ ಆಚರಣೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಬಟ್ಟೆಗೆ ಬಣ್ಣ ಹಾಕುವ ಡೈಗಳನ್ನು ಯಾವತ್ತೂ ಬಳಸಬಾರದು. ಅದು ಆರೋಗ್ಯಕ್ಕೆ ಹಾನಿಕರ. ಮುಂದಿನ ವರ್ಷವಾದರೂ ಕೋವಿಡ್ ನಿಯಂತ್ರಣಕ್ಕೆ ಬಂದು ಎಲ್ಲರೂ ಸಂಭ್ರಮದಿಂದ ಬಣ್ಣ ಎರಚಿಕೊಂಡು ಶುಭ ಹಾರೈಸಿ ಹಬ್ಬವನ್ನು ಆಚರಿಸುವಂತೆ ಆಗಲಿ ಎಂಬುದೇ ನಮ್ಮ ಹಾರೈಕೆ.

ಚಿತ್ರದಲ್ಲಿ ಡೋಲಾ ಪೂರ್ಣಿಮಾ ಅಥವಾ ಡೋಲಾ ಯಾತ್ರೆಯ ದೃಶ್ಯ.

ಚಿತ್ರ ಕೃಪೆ: ಅಂತರ್ಜಾಲ ತಾಣ (ಆಧಾರ ಮಾಹಿತಿ ಸಂಗ್ರಹ)