ಹೌದಲ್ವಾ...?

ಹೌದಲ್ವಾ...?

ಬೆನ್ನಿಗಿರಿಯುವವರು , 

ಕತ್ತಿ ಮಸೆಯತ್ತಿರುವವರು , 

ಚಾಡಿಕೋರ  ಪಿಸುಣರು , 

ನಾಮ ಹಾಕುವವರು , 

ಯಾವಾಗ  ಇರುವುದಿಲ್ಲ ? 

ನೀವು ಸಹಾಯ ಮಾಡಿದವರಲ್ಲೇ ಈ ಚಾಳಿ ಹೆಚ್ಚು. ಅದರಲ್ಲೂ ಏನೋ ಮಾತಿಗೆ ಬಂದು , ಹೀಗೆ ಸಹಾಯ ಮಾಡಿದ್ದೆ ಎಂದು ಅಕಸ್ಮಾತ್  ಹೇಳಿ ನೋಡಿ. 

" ಅವನ್ಯಾವ ಮಹಾ  ಸಹಾಯ ಮಾಡಿದ್ದ ? ಅಂತ ಊರೆಲ್ಲಾ ಡಂಗೂರ ಹೊಡೆದುಕೊಂಡು ತಿರುಗ್ತಿದ್ದಾನೆ ?. ಎದ್ದೋಗೋ ಮಾತು ಬಿದ್ದೋಗಲಿ ಅಂತ ಇವನಿಗೂ ಒಂದು  ಮಾತು ಹೇಳಿದ್ದೋ ಅಷ್ಟೇ. ನಿಜವಾಗಿ ಕೆಲಸ ಆಗಿದ್ದು ಎರಡು ಲಕ್ಷ ಕೊಟ್ಟ ಮ್ಯಾಲೆಯಾ! ". 

 ಆ ಕೆಲಸ ಆಗುವ ಮುನ್ನ ಈತನ ಮನೆಗೆ ಅವರು ಬಂದು ಕಾಡಿದ್ದೆಷ್ಟು ? ಇವನೂ ಮನೆ ಮಠದ ಸ್ವಂತ ಕೆಲಸ ಬಿಟ್ಟು ಅವರಿಗಾಗಿ ಓಡಾಡಿದ್ದೆಷ್ಟು ? ಎರಡು ಮೂರು ಬಾರಿ ಬೆಂಗಳೂರಿಗೆ ಹೋಗಿ ಬಂದದ್ದೆಷ್ಟು ?  ಎಲ್ಲವನ್ನೂ ಮರೆತು ಬಿಡುತ್ತಾರೆ. ಒಟ್ಟಾರೆ ಅವರ ಕೆಲಸ ಸಫಲವಾಗಲು ತನ್ನದೇ ಸ್ವಪ್ರಯತ್ನದ ಪ್ಲ್ಯಾನು , ಜಾಣ್ಮೆ  ಕಾರಣ!. ಅದರ ಸಂಪೂರ್ಣ ಕ್ರೆಡಿಟ್ ತಮ್ಮದೇ !"  ಆ ಕೆಲಸಕ್ಕಾಗಿ ಅವರ ಜೊತೆಗೆ ಓಡಾಡಿದವನದು ? 

" ಅವನೇನು ಮಹಾ ಮಾಡಿದ್ದು? ಎಲ್ಲಾ ನಮ್ಮವರೇ ಓಡಾಡಿ ಮಾಡಿದ್ದು. ಅವ್ನು ಸುವ್ವೀ ಹಾಡ್ಕಂಡು ಜೊತೇಲಿದ್ದ. ಅವನ ಊಟಾತಿಂಡಿ ಖರ್ಚನ್ನೆಲ್ಲಾ ಇವ್ರೇ ನೋಡ್ಕಂಡಿದ್ದು. ಒಂದ್ಸಲ ಕೇಳಿನೋಡಿ. ಒಂದು ಪೈಸಾ ಖರ್ಚು ಮಾಡಿದ್ದಾನಾ ಅಂತ "  ಅವನ ಹೆಂಡತಿಯ ದನಿ ! 

***

ಇನ್ನೊಬ್ಬರು ಮಗನ ಸ್ಕೂಲ್ ಅಡ್ಮಿಶನ್ ಗಾಗಿ ಪರದಾಡಿ ಸಾಕಾಗಿದ್ದರು. ಈ ಬಾರಿ ಸಿಗದಿದ್ದರೆ ವರ್ಷವೇ ಹೋಗಿಬಿಡುತ್ತೆ " ಹಲುಬಿದರು. ಪ್ರಭಾವಿಯೊಬ್ಬರ ಮನೆಗೆ ನಾನೂ ಹತ್ತಾರು ಬಾರಿ  ಎಡತಾಕಿ, ಅವರಿವರಿಂದಲೂ ಹೇಳಿಸಿದ್ದೆ. ಅವರಿವರು ಅಂದ್ರೆ ಕನ್ನಡದ ಮೇರು ಸಾಹಿತಿಗಳು. ಎಂದೂ ಯಾರಿಗೂ ವಶೀಲಿ ಬಾಜಿಗೆ ಬಂದವರಲ್ಲ, ಅವರೇ ಖುದ್ದಾಗಿ  ಡೀನ್ ಗೆ ಹೇಳಿದರು.  ಕೊನೆಗೊಂದು ದಿನ ಡೀನ್ ರ ಪಿಎ ಫೋನ್ ಮಾಡಿ ,  

" ನೀವು ಹೇಳಿದ್ದ ಹುಡುಗನಿಗೆ ಸಾಹೇಬ್ರು ಸೀಟು ಕೊಡಿಸಿದ್ದಾರೆ " ಎಂದು ಅರುಹಿದ. 

ಲಗುಬಗೆಯಿಂದ ಆ ಹುಡುಗನ ಅಪ್ಪನಿಗೆ ಕಾಲ್ ಮಾಡಿದೆ. ಆತ ಸಿಕ್ಕಲಿಲ್ಲ. 

 ನಮ್ಮ ಧಫೇದಾರರಿಗೆ,  " ಆಮೇಲೆ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸ್ರಿ. ಸೋಮವಾರ ಆ ಪ್ರಭಾವಿ ಬಾಸ್ ರನ್ನು ಕಂಡು ಥ್ಯಾಂಕ್ಸ್ ಹೇಳಿ ಬರಬೇಕು. ಆವತ್ತು ಬರೋದಿಕ್ಕೆ ಹೇಳಿ " ಎಂದು ಹೇಳಿ  ಬೇರಾವುದೋ ಕೆಲಸದ ಮೇಲೆ ಹೊರ ಹೋದೆ. 

ವಾಪಸ್ ಬಂದಾಗ ,  " ವಿಷಯ ತಿಳಿಸಿದಿರಾ?" ಕೇಳಿದೆ. 

ದಫೇದಾರರ ದನಿಯಲ್ಲಿ ದುಗುಡವಿತ್ತು.  " ಇಂಥವರಿಗೆಲ್ಲಾ ಯಾಕ್ಸಾರ್ ಟೈಮ್ ವೇಸ್ಟ್ ಮಾಡ್ತೀರಿ. ಅವನೆಂಥಾ ಧಿಮಾಕಿನ ಉತ್ತರ ಕೊಟ್ಟ ಗೊತ್ತಾ ? " 

" ಯಾಕೆ ಏನಂದಾ? "  " ಸೀಟು ಸಿಕ್ಕಿದ್ದು ನೀವೇಳಿದ್ದಕ್ಕೆ ಅಲ್ವಂತೆ. ಯಾರೋ ಅವನ ಜಾತಿ  ಮಿನಿಸ್ಟರ್ ಗೆ ಹೇಳಿಸಿದ್ನಂತೆ. ನೀವು ಹೇಳಿದವರಿಂದ ಅಲ್ಲ ಅಂದ " 

" ಹೋಗ್ಲಿ ಬಿಡ್ರೀ.  ಈಗ ನಾನಂತೂ ಹೋಗಿ ಥ್ಯಾಂಕ್ಸ್ ಹೇಳಿ ಬರಲೇ ಬೇಕಲ್ಲಾ?"  ಎಂದವನೇ  ಮೂರ್ನಾಲ್ಕು ದಿನ ಮೂಡ್ ಕಳೆದುಕೊಂಡೆ. 

****

ಮತ್ತೊಂದು ಪ್ರಕರಣ:  ಅದ್ಯಾರಿಗೋ ಯೂನಿವರ್ಸಿಟಿಯಿಂದ ಮೈಗ್ರೇಷನ್ ಸರ್ಟಿಫಿಕೇಟ್ ಬೇಕಿತ್ತು. ನಮ್ಮ ಎಸ್ಪಿ ಫೋನ್ ಮಾಡಿ ಕೊಡಿಸುವಂತೆ ಹೇಳಿದರು. ಆ ಮನುಷ್ಯನನ್ನು ನನ್ನ ಬೈಕ್ ಮೇಲೆ ಕೂರಿಸಿಕೊಂಡು ಯೂನಿವರ್ಸಿಟಿಗೆ ಹತ್ತಾರು ಬಾರಿ ಎಡತಾಕಿದೆ. ಯಾರ‌್ಯಾರನ್ನೋ ಕಂಡು ಅಂತೂ  ಕೆಲಸ ಮಾಡಿಸಿದೆ.  ಬಹಳ ದಿನಗಳ ನಂತರ ಆ ವ್ಯಕ್ತಿ ಮತ್ತಾರ ಬಳಿಯೋ ಜಂಭ ಕೊಚ್ಚಿಕೊಂಡದ್ದು ಕಿವಿಗೆ ಬಿತ್ತು. 

" ನಾನು ಹೋಗಿ ಎಸ್ಪಿ ಸಾಹೇಬ್ರಿಗೆ ಒಂದು ಮಾತು ಹೇಳಿದೆ ನೋಡಿ  . ಅವನ್ಯಾರೋ ಸಬಿನ್ಸ್ ಪೆಕ್ಟರನ್ನ ಕಳಿಸಿಕೊಟ್ರು. ಅವನು ಮನೇಗೆ ಬಂದು  ಸರ್ಟಿಫಿಕೇಟ್ ತಂದುಕೊಟ್ಟ !" 

" ಸರಿಯಾಗಿ ಹೇಳಿದ್ದಾನೆ ಬಿಡಿ. ನಾನು ಪೆಕರಾ ಅಲ್ಲದೇ ಮತ್ತೇನು?" ಎಂದು  ಪೆಚ್ಚುನಗೆ ಬೀರಿದೆ. 

ಈ ಮೈಗ್ರೇಷನ್ ನಿಂದಾಗಿ ವಿವಿ ನಿಲಯದ ನಾಲ್ಕಾರು ಅಧಿಕಾರಿಗಳು ಪರಿಚಯವಾದರು. ಅವರು ತಮ್ಮ ಕೆಲಸ ಮಾಡಿಸಿಕೊಂಡರು!. ಅದೂ ನನ್ನಿಂದಲ್ಲ. ನನ್ನ ಇತರ ಸಹೋದ್ಯೋಗಿಗಳಿಂದ. ಇವರ ಕೆಲಸ ಮಾಡಿಸುವುದಕ್ಕಾಗಿ ನಾನು ಅವರಿಗೆ  ಹಲ್ಕಿರಿದೆ. 

***

ಕೃತಜ್ಞತೆ ಎಂಬುದು ಇಬ್ಬನಿಯಂತೆ. ಸಹಾಯ ಮಾಡಿದ ಹೊಸತರಲ್ಲಿ ಫಳಫಳ ಮುತ್ತಿನಂತೆ  ಹೊಳೆಯುತ್ತಿರುತ್ತೆ. ಸೂರ್ಯನ ಬೆಳಕು ಬಿದ್ದೊಡನೆ ಹೊಳಪು ಹೋಗಿ ನೀರಾಗುತ್ತದೆ. ಹತ್ತುಗಂಟೆಗಾಗಲೇ ಒಣಗಿ ಆರಿ ಅದೃಶ್ಯವಾಗುತ್ತದೆ. ಸಹಾಯ ಮಾಡಿದ ಮೇಲೆ ಮುಗಿಯಿತು. ಅದನ್ನು ಮೊದಲು ನಾವೇ ಮರೆತು ಬಿಡ ಬೇಕು. ತಪ್ಪಿ ಕೂಡ ಆ ಬಗ್ಗೆ ಮಾತಾಡ ಕೂಡದು. ಏನು ಮಾಡೋದು? ಅವರಿಗಾಗಿ ನಮ್ಮ ಕೆಲಸ, ಸಮಯ , ಮನಶಾಂತಿಯ comforts ಬಿಟ್ಟು ಓಡಾಡಿರುತ್ತೇವೆ. ಅನುನಯದಿಂದ ಯಾವ್ಯಾವನಿಗೋ ಮಾತಾಡಿರುತ್ತೇವೆ. ಕೃತಘ್ನರನ್ನು ಕಂಡಾಗ ನಮ್ಮ ಮುಠ್ಠಾಳತನದ ಬಗ್ಗೆ ನಮಗೇ ಸಿಟ್ಟು ಬರುತ್ತೆ. ಮಂಗನಾದೆ ಅಂತ ವ್ಯಥೆಯಾಗುತ್ತೆ. ಎದುರಿಸಬೇಕು. ಅನುಭವಿಸ ಬೇಕು. ಮುನ್ನಡೆಯಲೂ ಬೇಕು.

(ಸಂಗ್ರಹ.... ಫೇಸ್ಬುಕ್ ನಿಂದ)

-ಹಾ ಮ ಸತೀಶ, ಬೆಂಗಳೂರು