ಹೌ ವಾಸ್ ಸ್ಕೂಲ್ ಟುಡೇ?

ಹೌ ವಾಸ್ ಸ್ಕೂಲ್ ಟುಡೇ?

ಬರಹ

ಹೌ ವಾಸ್ ಸ್ಕೂಲ್ ಟುಡೇ?
"ಹೌ
ವಾಸ್ ಸ್ಕೂಲ್ ಟುಡೇ" ಎನ್ನುವುದು ಒಂದು ತಂತ್ರಾಂಶದ ಹೆಸರು. ಸೆರಿಬ್ರಲ್ ಪಾಲ್ಸಿಯಂತಹ
ತೊಂದರೆಯಿದ್ದು ಸಂಭಾಷಿಸಲು ಕಷ್ಟ ಪಡುವ ಮಕ್ಕಳನ್ನು ತರಬೇತಿಗೊಳಿಸಲು ಬಳಸಬಹುದಾದ
ತಂತ್ರಾಂಶವಿದು.ಅಬರ್ದೀನ್ , ಡುನ್ದೀ ಮತ್ತು ಕೆಪೆಬಿಲಿಟ್ಯ್ ಸ್ಕಾಟ್ಲಂಡ್
ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಪಡಿಸಿದ ತಂತ್ರಾಂಶವು ವಿದ್ಯಾರ್ಥಿ ತನ್ನ
ಶಾಲೆಯಲ್ಲಿ ಸಮಯ ಕಳೆದ ಬಗೆಯನ್ನು ತಿಳಿದುಕೊಳ್ಳುತ್ತದೆ. ರೆಕಾರ್ಡಿಂಗ್ ವ್ಯವಸ್ಥೆ,
ಸಂವೇದಕಗಳು ಮತ್ತು ಸ್ವೈಪ್ ಕಾರ್ಡ್ ಮೂಲಕ ಈ ಬಗ್ಗೆ ಅದು ಮಾಹಿತಿ ಸಂಗ್ರಹಿಸುತ್ತದೆ.
ನಂತರ ಕೃತಕ ಧ್ವನಿಜನಕ ವ್ಯವಸ್ಥೆಯ ಮೂಲಕ ತಂತ್ರಾಂಶವು ಕತೆಯನ್ನು "ಹೇಳುವ" ಸಾಮರ್ಥ್ಯ
ಪಡೆದಿದೆ. ಸಮಸ್ಯೆಯಿರುವ ಮಗು, ಈ ತಂತ್ರಾಂಶ ಅಳವಡಿಸಿರುವ ಕಂಪ್ಯೂಟರ್ ಬಳಸಿ, ಕತೆಗೆ
ಕಿವಿಗೊಟ್ಟು ಕೇಳಿ, ಮಾತನ್ನಾಡಲು ತರಬೇತಿ ಪಡೆಯಬಹುದು. ತಂತ್ರಾಂಶವು ಸಂವಹನಕ್ಕೆ
ಅವಕಾಶ ನೀಡುವುದರಿಂದ ಮಗುವೂ ಸಂಭಾಷಿಸಲು,ಪ್ರಶ್ನಿಸಲು ಅವಕಾಶ ಸಿಗುತ್ತದೆ. ಮಾತನಾಡಲು
ಸಮಸ್ಯೆಯಿರುವ ಮಗುವೂ ಕಂಪ್ಯೂಟರಿನ ಈ ಆಟದ ಮೂಲಕ ಸಂಭಾಷಿಸಲು
ತೊಡಗಬಹುದು.ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಈ ತಂತ್ರಾಂಶ ಬಳಸಿದಾಗ ತೃಪ್ತಿಕರ ಫಲಿತಾಂಶ
ಸಿಕ್ಕಿದೆಯಂತೆ.
--------------------------------------
ವಾತಾವರಣವನ್ನು ಬಿಸಿ ಮಾಡುವ ಬಿಸಿಯುಸಿರು!
ದನಗಳು
ಪರಿಸರಕ್ಕೆ ಮಾರಕವೇ? ಜಾನುವಾರುಗಳಿಗಾಗಿ ಆಗುತ್ತಿರುವ ಕಾಡಿನ ನಾಶವನ್ನು
ಪರಿಗಣಿಸುವುದರ ಜತೆಗೆ ಅವುಗಳು ಹೊರಸೂಸುವ ಮಿಥೇನ್ ಅನಿಲದ ಪ್ರಮಾಣವನ್ನು
ತೆಗೆದುಕೊಂಡರೆ, ಜಾನುವಾರುಗಳು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚು ಪರಿಸರ ಹಾನಿ ಉಂಟು
ಮಾಡುತ್ತಿವೆ.ಮಿಥೇನ್ ಅನಿಲವು ಇಂಗಾಲಾಮ್ಲಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಶಾಖವನ್ನು
ಹಿಡಿದಿಡುವ ಗುಣ ಹೊಂದಿರುವ ಕಾರಣ, ಮಿಥೇನ್ ಜಾಗತಿಕ ವಾತಾವರಣದ ಶಾಖವನ್ನು ಏರಿಸುವ
ಅನಿಲಗಳಲ್ಲಿ ಅತ್ಯಂತ ಅಪಾಯಕಾರಿ ಆಗಿದೆ.ಜಾನುವಾರುಗಳ ಆಹಾರವಾಗಿ
ಸೋಯಾ,ಮೆಕ್ಕೆಜೋಳಗಳನ್ನು ಬಳಸಿದಾಗಲಂತೂ,ಜಾನುವಾರುಗಳ ಹೊಟ್ಟೆಯಲ್ಲಿ ಜರಗುವ
ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಮಿಥೇನ್ ಪ್ರಮಾಣ ಬಹಳ ಹೆಚ್ಚಾಗುತ್ತದೆ. ಹೀಗಾಗಿ
ಜಾನುವಾರುಗಳು ಹೆಚ್ಚು ಮಿಥೇನ್ ಹೊರಬಿಟ್ಟು ಪರಿಸರಕ್ಕೆ ಅಪಾಯ ತರಲಿವೆ. ವಾಹನಗಳು
ಮತ್ತು ಕೈಗಾರಿಕೆಗಳಿಗಿಂತ ಜಾಗತಿಕ ಬಿಸಿಯನ್ನು ಹೆಚ್ಚುವಲ್ಲಿ ಜಾನುವಾರುಗಳು ಹೆಚ್ಚು
ಅಪಾಯಕಾರಿಯಾಗುತ್ತಿರುವುದು ವಿಪರ್ಯಾಸ. ಇದಕ್ಕೆ ಪರಿಹಾರ ಮಾರ್ಗವೆಂದರೆ ಜಾನುವಾರುಗಳ
ಆಹಾರದಲ್ಲಿ ಬದಲಾವಣೆ ತರುವುದು. ಸೋಯಾ ಮತ್ತು ಮೆಕ್ಕೆಜೋಳದ ಬದಲು ಜೀರ್ಣವಾಗುವ
ಪ್ರಕ್ರಿಯೆಯಲ್ಲಿ ಕಡಿಮೆ ಮಿಥೇನ್ ಉತ್ಪಾದನೆಗೆ ಕಾರಣವಾಗುವ ಹುಲ್ಲಿನ ತಳಿಯನ್ನು ಅವುಗಳ
ಆಹಾರದಲ್ಲಿ ಬಳಸುವುದು.ಇನ್ನೊಂದು ಕ್ರಮವೆಂದರೆ ಜಾನುವಾರುಗಳ ತಳಿಗಳಲ್ಲಿ ಬದಲಾವಣೆ
ತರಲು ಪ್ರಯತ್ನಿಸುವುದು.ವಿದೇಶಗಳಲ್ಲಿ ದನಗಳ ಹಾಲು ಉತ್ಪತ್ತಿ ಪ್ರಮಾಣ ಹೆಚ್ಚು.
ಹೀಗಾಗಿ, ಪ್ರತಿ ಲೀಟರ್ ಹಾಲು ಉತ್ಪಾದನೆಗಾಗಿ ದನಗಳು ಉತ್ಪತ್ತಿ ಮಾಡುವ ಮಿಥೇನ್
ಪ್ರಮಾಣ ಕಡಿಮೆ. ಆದರೆ ಭಾರತದಂತಹ ದೇಶಗಳಲ್ಲಿ,ಜಾನುವಾರುಗಳ ಸಂಖ್ಯೆ ಬಹಳ ಹೆಚ್ಚು.
ಹಾಗಾಗಿ ಬಿಡುಗಡೆಯಾಗುವ ಮಿಥೇನ್ ಪ್ರಮಾಣವೂ ಅಗಾಧ.ಪ್ರತಿ ಜಾನುವಾರು ಕೂಡಾ
ವಾರ್ಷಿಕವಾಗಿ ನಾಲ್ಕುನೂರರಿಂದ ಎಂಟು ನೂರು ಕೆಜಿ ಮಿಥೇನ್ ಬಿಡುಗಡೆ
ಮಾಡುತ್ತವೆ.ಜಾನುವಾರುಗಳ ಮೇವು ಬದಲಿಸಿದರೆ, ಅವುಗಳಿಂದ ಬರುವ ಹಾಲು ಕಡಿಮೆಯಾಗುವ
ಅಪಾಯವೂ ಇದೆಯಾದ್ದರಿಂದ, ಡೈರಿ ಉದ್ಯಮದಲ್ಲಿ ತೊಡಗಿರುವವರು, ಮೇವು ಬದಲಿಸಲು ಬಯಸರು.
ಒಮಿಗಾ ಕೊಬ್ಬನ್ನು ಹೊಂದಿದ ಹುಲ್ಲಿನ ಆಹಾರ ನೀಡಿದಾಗ ಹಾಲಿನ ಉತ್ಪಾದನೆಯಲ್ಲಿ
ಏರುಪೇರಾಗದು.ಕೊಲೆರೆಡೋ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳು
ಜಾನುವಾರುಗಳು ಹುಟ್ಟಿನಿಂದಲೇ ಕಡಿಮೆ ತೇಗುವಂತೆ ಅಭಿವೃದ್ಧಿ ಪಡಿಸಿದ
ತಳಿಗಳದ್ದಾಗಲಿವೆ. ಮುಂದಿನ ದಶಕವೊಂದರಲ್ಲಿ ಜಾನುವಾರುಗಳ ಮೂಲಕ ಉತ್ಪಾದನೆಯಾಗುವ
ಮಿಥೇನ್ ಪ್ರಮಾಣ ಸದ್ಯದ ಶೇಕಡಾ ಇಪ್ಪತ್ತೈದು ಭಾಗ ಇಳಿಸ ಬೇಕೆಂಬುದು ವಿಜ್ಞಾನಿಗಳ
ಗುರಿ. ಇಲ್ಲವಾದರೆ, ಹೆಚ್ಚಿನ ಹಾಲಿನ ಉತ್ಪಾದನೆಗೆ ಬೇಕಾಗಿ, ಜಾಸ್ತಿ ಜಾನುವಾರುಗಳನ್ನು
ಸಾಕುವಾಗ, ಅವು ಹೊರಸೂಸುವ ಮಿಥೇನ್ ಪ್ರಮಾಣ ಎಷ್ಟಿರಬಹುದೆಂದರೆ,ಅವು ದೊಡ್ದ ದೊಡ್ದ
ಉದ್ದಿಮೆಗಳಿಗಿಂತ ಹೆಚ್ಚು ಅಪಾಯಕಾರಿಯಾಗಿ, ಭೂಮಿಯ ಮೇಲಿನ ಶಾಖ ಏರಲು ಕಾರಣವಾದಾವು.
----------------------------------------------------
ಎ ಟಿ ಎಂ ಯಂತ್ರದ ಮೂಲಕವೂ ಅಕ್ರಮ
ವಿದೇಶಗಳ
ಕೆಲವು ಎ ಟಿ ಎಂ ಯಂತ್ರಗಳಲ್ಲಿ ಕೆಡುಕುಂಟು ಮಾಡುವ ತಂತ್ರಾಂಶವನ್ನು ಅಕ್ರಮವಾಗಿ
ಅನುಸ್ಥಾಪಿಸಿರುವುದೀಗ ಬೆಳಕಿಗೆ ಬಂದಿದೆ. ಈ ಯಂತ್ರಗಳಲ್ಲಿ ಬಳಕೆದಾರ ತನ್ನ ಕಾರ್ಡ್
ಬಳಸಿದಾಗ, ಕಾರ್ಡಿನಲ್ಲಿರುವ ಮಾಹಿತಿಯನ್ನು ತಂತ್ರಾಂಶ ಉಳಿಸಿಕೊಳ್ಳುತ್ತದೆ.ಅಷ್ಟೇ
ಅಲ್ಲ, ಗ್ರಾಹಕ ವ್ಯವಹಾರ ಮಾಡಲು ಪಿನ್ ಸಂಖ್ಯೆಯನ್ನು ಒತ್ತಿದಾಗ, ಅದನ್ನೂ
ಉಳಿಸಿಕೊಳ್ಳುತ್ತದೆ.ಮಾಸ್ಟರ್ ಕಾರ್ಡ್ ಎನ್ನುವ ವಿಶೇಷ ಕಾರ್ಡ್ ತುರುಕಿದಾಗ,
ತಂತ್ರಾಂಶವು ಉಳಿಸಿಕೊಂಡ ಮಾಹಿತಿಯನ್ನು ರಶೀದಿ ಕಾಗದ ಸುರುಳಿಯ ಮೇಲೆ
ಮುದ್ರಿಸಿಕೊಳ್ಳಬಹುದು. ಬೇಕೆಂದರೆ, ಅಕ್ರಮ ಕಾರ್ಡ್ ತಯಾರಿಸಿಕೊಳ್ಳಲೂ ವಂಚಕ
ಮಹಾಶಯನಿಗೆ ಸಾಧ್ಯವಂತೆ! ಈ ಕೆಡುಕು ತಂತ್ರಾಂಶವನ್ನು ಹೊರಗಿನಿಂದ ಯಂತ್ರದಲ್ಲಿ
ಅನುಸ್ಥಾಪಿಸಲು ಬರುವುದಿಲ್ಲವೆಂಬುದು ಸಮಾಧಾನದ ವಿಷಯ. ಎ ಟಿ ಎಂನ ಯಾರಾದರೂ ನೌಕರರ ಜತೆ
ಸೇರಿ ಮಸಲತ್ತು ಮಾಡುವ ವಂಚಕರು ಇದನ್ನು ಯಂತ್ರದಲ್ಲಿ ಸ್ಥಾಪಿಸಲು ಸಮರ್ಥರಾದಾರು.ಈ
ಯಂತ್ರಗಳೇನಾದರೂ ಜಾಲದಲ್ಲಿದ್ದರೆ, ಆಗ ಈ ತಂತ್ರಾಂಶ ಇತರ ಯಂತ್ರಗಳಲ್ಲೂ ಅನುಸ್ಥಾಪಿಸಿ,
ಸಮಸ್ಯೆ ತೀವ್ರತರವಾಗಬಹುದು.
--------------------------------------------------------------
ತರಕಾರಿ ಬೆಳೆಯಲು ನಗರಗಳಲ್ಲಿ ಹಸಿರು ಮನೆ
ನಗರಗಳಿಗೆ
ಹಳ್ಳಿಗಳಲ್ಲಿ ಬೆಳೆದ ತರಕಾರಿಯನ್ನು ಸಾಗಾಟ ಮಾಡಿದಾಗ,ಸಾಗಾಟದ ಖರ್ಚು ಮತ್ತು ಅದನ್ನು
ಕೆಡದಂತೆ ಶೈತ್ಯಾಗಾರದಲ್ಲಿಡುವುದಕ್ಕೇ ಹೆಚ್ಚು ಖರ್ಚು ಬರುತ್ತದೆ.ಬದಲು ನಗರಗಳಲ್ಲೇ
ಗಗನಚುಂಬಿ ಹಸಿರುಮನೆಗಳನ್ನು ಸ್ಥಾಪಿಸಿ,ಅಲ್ಲಿ ಸಾವಯವ ವಿಧಾನದಲ್ಲಿ ತರಕಾರಿ,ಹಣ್ಣು
ಬೆಳೆದರೆ,ನಗರವಾಸಿಗಳಿಗೆ ತಾಜಾ ಹಣ್ಣು-ತರಕಾರಿ ಸಿಗಲಿದೆ. ಖರ್ಚೂ ಹೆಚ್ಚೇನೂ ಆಗದು
ಎನ್ನುವುದು ಸ್ವೀಡಿಶ್ ಕಂಪೆನಿ ಪ್ಲಾಂಟಾಗನ್ ಕಂಪೆನಿಯ ಲೆಕ್ಕಾಚಾರ. ಹಸಿರುಮನೆಯಲ್ಲಿ
ಗಾಳಿ,ಬೆಳಕು ಮತ್ತು ನೀರನ್ನು ನಿಯಂತ್ರಿತ ಪ್ರಮಾಣದಲ್ಲಿ ನೀಡಿ, ಸಸ್ಯಗಳನ್ನು ಬೆಳೆಯುವ
ವ್ಯವಸ್ಥೆಯಿರುತ್ತದೆ. ಹತ್ತು ಸಾವಿರ ಚದರ ಮೀಟರ್ ಸ್ಥಳಾವಕಾಶದಲ್ಲಿ ಲಕ್ಷ ಚದರ ಮೀಟರ್
ಸ್ಥಳದಲ್ಲಿ ಬೆಳೆಯುವಷ್ಟೇ ಸಸ್ಯಗಳನ್ನು ಬೆಳೆಯಲು ಅವಕಾಶವಿದೆ ಯಾಕೆಂದರೆ ಇವುಗಳ ಎತ್ತರ
ಬಹಳ ಹೆಚ್ಚು. ಪ್ರತಿ ಹಸಿರು ಮನೆಗೂ ಮೂವತ್ತು ಮಿಲಿಯನ್ ಡಾಲರ್ ಖರ್ಚು ಬರಬಹುದು.
--------------------------------------------------------------------------
ಹೊಸ ಐಫೋನ್?
ಪ್ರತಿವರ್ಷದಂತೆ
ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ಸ್ ಸಮಾವೇಶವು ಜುಲೈಯಲ್ಲಿ ನಡೆಯಲಿದೆ. ಇದರಲ್ಲಿ
ಹೊಸ ಐಫೋನ್ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ.ಹೊಸ ಐಫೋನ್ ನಾಲ್ಕು ಜಿಬಿ ಸ್ಮರಣ
ಸಾಮರ್ಥ್ಯದ್ದಾಗಿರಬಹುದು ಎನ್ನುವುದು ನಿರೀಕ್ಷೆ.ಹೊಸ ಸಂಸ್ಕಾರಕ, ಹೆಚ್ಚಿನ ಸ್ಮರಣ
ಸಾಮರ್ಥ್ಯ,ಅಟೋ ಫೋಕಸ್ ಸಾಮರ್ಥ್ಯವಿರುವ ವಿಡಿಯೋ ರೆಕಾರ್ಡಿಂಗ್ ಮಾಡಬಲ್ಲ ಕ್ಯಾಮರಾ ಹೊಸ
ಐಫೋನಿನಲ್ಲಿರಬಹುದೆನ್ನಲಾಗಿದೆ.ಜತೆಗೆ ಐಫೋನಿನ ಕಾರ್ಯನಿರ್ವಹಣಾ ತಂತ್ರಾಂಶದ ಹೊಸ
ಆವೃತ್ತಿ ಐಫೋನ್3.0 ಲಭ್ಯವಾಗಬಹುದು. ಇದರಲ್ಲಿ ವಿಡಿಯೋ ಅಥವಾ ಧ್ವನಿಗ್ರಹಣವಾದೊಡನೆ
ಇತರರಿಗೆ ಕಳುಹಿಸಲು ಅನುವು ಮಾಡುವ ಸೌಲಭ್ಯ ಸಿಗಬಹುದು ಎಂಬ ಗುಸುಗುಸು ಇದೆ.
------------------------------------
udayavani

udayavani