೧೦.೨೭ ಲಕ್ಷ ಕೋಟಿ ಬಂಡವಾಳ ತೊಡಕಿಲ್ಲದೆ ಹೂಡಿಕೆಯಾಗಲಿ

ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ ವೆಸ್ಟ್ ಕರ್ನಾಟಕ’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ೧೦.೨೭ ಲಕ್ಷ ಕೋಟಿ ರೂ. ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಗಳು ಆಗಿರುವುದು ರಾಜ್ಯದ ಕೈಗಾರಿಕಾ ಅಬಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಈ ಸಮಾವೇಶದಲ್ಲಿ ಕೈಗಾರಿಕೆಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು ಅನಾವರಣಗೊಂಡಿವೆ. ಹಲವು ವಿಚಾರಗಳು ಚರ್ಚೆಯಾಗಿವೆ. ಖ್ಯಾತನಾಮರು ತಮ್ಮ ಅಭಿಪ್ರಾಯ, ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇದೇ ಸಂದರ್ಭವನ್ನು ಬಳಸಿಕೊಂಡು ಕೈಗಾರಿಕಾ ನೀತಿಯನ್ನು ಕೂಡ ಅನಾವರಣ ಮಾಡಿದೆ. ಈ ಸಮಾವೇಶದಿಂದ ಅಂದಾಜು ೧೦ ಲಕ್ಷ ಕೋಟಿ ರೂ. ಬಂಡವಾಳದ ನಿರೀಕ್ಷೆಯಲಿ ಸರಕಾರ ಇತ್ತು. ಅದನ್ನೂ ಮೀರಿ ಒಪ್ಪಂದಗಳು ಏರ್ಪಟ್ಟಿವೆ. ಗಮನಾರ್ಹ ಸಂಗತಿಯೆಂದರೆ, ಈಗಾಗಲೇ ಕಿಷ್ಕಿಂದೆಯಂತಾಗಿರುವ ಬೆಂಗಳೂರಿನಿಂದ ಆಚೆಗೆ ಉದ್ಯಮಿಗಳನ್ನು ಒಯ್ಯಲು ಸರ್ಕಾರಗಳು ಹಾಕಿದ್ದ ಶ್ರಮ ಗೋಚರವಾಗುತ್ತಿದೆ.
ಈ ಬಾರಿಯ ಸಮಾವೇಶದಲ್ಲಿ ಹರಿದು ಬಂದಿರುವ ಬಂಡವಾಳದ ಪೈಕಿ ಶೇ. ೭೫ ರಷ್ಟು ಬೆಂಗಳೂರಿನಿಂದಾಚೆ ಹೂಡಿಕೆಯಾಗಲಿದೆ. ಒಟ್ಟಾರೆ ಹೂಡಿಕೆಯಿಂದ ಶೇ. ೪೫ರಷ್ಟು ಬಂಡವಾಳ ಉತ್ತರ ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ ಎಂಬುದು ಸಣ್ಣ ವಿಷಯವಲ್ಲ. ಕರ್ನಾಟಕದಲ್ಲಿ ಬೆಂಗಳೂರು ಬಿಟ್ಟರೆ ಬೇರೆ ಕಡೆ ಉದ್ಯಮಕ್ಕೆ ಅಷ್ಟೊಂದು ಅವಕಾಶವಿಲ್ಲ ಎಂಬ ಅನ್ಯರಾಜ್ಯಗ:ಅ ತಪ್ಪು ಗ್ರಹಿಕೆಯನ್ನು ಈ ಸಮಾವೇಶ ಹುಸಿ ಮಾಡಲು ಪ್ರಯತ್ನಿಸುವಂತಿದೆ. ೨೦೨೨ರಲ್ಲಿ ನಡೆದ ಸಮಾವೇಶದಲ್ಲಿ ೯.೮ ದಶ ಲಕ್ಷ ಕೋಟಿ, ೨೦೧೬ರಲ್ಲಿ ೩ ಲಕ್ಷ ಕೋಟಿ, ೨೦೧೨ರಲ್ಲಿ ೬.೬ಲಕ್ಷ ಕೋಟಿ, ೨೦೧೦ರಲ್ಲಿ ೩.೯೪ ಲಕ್ಷ ಕೋಟಿ, ೨೦೦೦ನೇ ಇಸವಿಯಲ್ಲಿ ೨೭ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಸಂಬಂಧ ಕಂಪೆನಿಗಳು ಒಡಂಬಡಿಕೆ ಮಾಡಿಕೊಂಡಿದ್ದವು. ನಾನಾ ಕಾರಣಗಳಿಂದ ಕಂಪೆನಿಗಳು ಬದ್ಧತೆ ವ್ಯಕ್ತಪಡಿಸಿದ್ದಷ್ಟು ಮೊತ್ತ ರಾಜ್ಯಕ್ಕೆ ಹರಿದು ಬಂದಿಲ್ಲ. ಒಡಂಬಡಿಕೆಗಳು ಪರಿಪೂರ್ಣವಾಗಿ ಜಾರಿಗೆ ಬರಲು ತುಸು ಸಮಸ್ಯೆಗಳಿರಬಹುದು. ಆದರೆ ಅದು ಗರಿಷ್ಟ ಪ್ರಮಾಣದಲ್ಲಿ ಅನುಷ್ಟಾನಕ್ಕೆ ಬಂದರಷ್ಟೆ ಉದ್ಯಮ ವಲಯದ ವಿಸ್ತರಣೆಗೆ ಅನುಕೂಲ. ಈ ಬಾರಿ ಸರ್ಕಾರ ಏಕ ಗವಾಕ್ಷಿ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿದೆ. ಹಿಂದೆ ಆದ ತೊಡಕುಗಳು ಈ ಬಾರಿ ನಿವಾರಣೆಯಾಗಿ ಉದ್ಯಮಿಗಳು ಘೋಷಣೆ ಮಾಡಿದಷ್ಟು ಮೊತ್ತ ರಾಜ್ಯದಲ್ಲಿ ಹೂಡಿಕೆಯಾಗಿ, ಉದ್ಯಮಗಳು ತಲೆ ಎತ್ತಿ ಉದ್ಯೋಗಾವಕಾಶಗಳು ಸಿಗಲಿ ಎಂಬ ನಿರೀಕ್ಷೆ ರಾಜ್ಯದ ಜನರದ್ದಾಗಿದೆ, ಅದು ಹುಸಿಯಾಗದಿರಲಿ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೫-೦೨-೨೦೨೫
ಚಿತ್ರ ಕೃಪೆ : ಅಂತರ್ಜಾಲ ತಾಣ