೧೨ನೇ ಶತಮಾನದ ಬಸವಣ್ಣ ಹಾಗು ೨೧ನೇ ಶತಮಾನದ ‘ಡೀಪ್ ಥ್ರೋಟ್ ’ ಡಬ್ಲೂ.ಮಾರ್ಕ್ ಫೆಲ್ಟ್ !

೧೨ನೇ ಶತಮಾನದ ಬಸವಣ್ಣ ಹಾಗು ೨೧ನೇ ಶತಮಾನದ ‘ಡೀಪ್ ಥ್ರೋಟ್ ’ ಡಬ್ಲೂ.ಮಾರ್ಕ್ ಫೆಲ್ಟ್ !

ಬರಹ

ಐತಿಹಾಸಿಕ ಘಟನೆಯೊಂದನ್ನು ಹೇಳುತ್ತೇನೆ:

ಭಕ್ತಿ ಭಾಂಡಾರಿ ಬಸವಣ್ಣನವರು ಬಿಜ್ಜಳ ಮಹಾರಾಜರ ಆಸ್ಥಾನದಲ್ಲಿ ಬೊಕ್ಕಸ ಅಧಿಕಾರಿ (ಭಾಂಡಾರಿ)ಯಾಗಿದ್ದರು. ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಎರಡು ಮಾತಿರಲಿಲ್ಲ. ಆದರೆ ಆಸ್ಥಾನದ ಮತ್ತೋರ್ವ ಮಂತ್ರಿ ಮಂಚಣ್ಣ ದೊರೆಗಳ ಕಿವಿ ಊದಿದರು. ಭಾಂಡಾರಿ ಬಸವಣ್ಣ ಬೊಕ್ಕಸದ ಹಣವನ್ನು ಅಪವ್ಯಯ ಮಾಡುತ್ತಿದ್ದು, ಕರ ರೂಪದಲ್ಲಿ ಬೊಕ್ಕಸಕ್ಕೆ ಸಂದಾಯವಾಗುವ ಪ್ರಜೆಗಳ ಹಣವನ್ನು ಸಮರ್ಪಕವಾಗಿ, ಜನೋಪಯೋಗಿಯಾಗಿ ಖರ್ಚಿಸಲ್ಪಡುತ್ತಿಲ್ಲ ಎಂದು ಆರೋಪಿಸಿದರು.

ಮಾರನೇ ದಿನವೇ ಬಿಜ್ಜಳ ದೊರೆಗಳು ಮಾರುವೇಶದಲ್ಲಿ ಭಂಡಾರಿ ಬಸವಣ್ಣನವರ ಮನೆಗೆ ರಾತ್ರಿ ಭೇಟಿ ನೀಡಿದರು. ಬಾಗಿಲಲ್ಲಿ ನಿಂತು ಕೂಗಿದರು. ಬಸವಣ್ಣನವರ ಪತ್ನಿ ನೀಲಾಂಬಿಕೆ ಹೊರಬಂದರು. ಪ್ರಜೆಯನ್ನು ಮಾತನಾಡಿಸಿ, ಯಥೋಚಿತ ಆದರಾತಿಥ್ಯ ನೀಡಿ, ಕುಳ್ಳಿರಿಸಿದರು. ಬಸವಣ್ಣನವರು ರಾಜ್ಯ ಬೊಕ್ಕಸದ ಲೆಕ್ಕ-ಪತ್ರ ನೋಡುತ್ತಿದ್ದು, ಕೆಲವೇ ನಿಮಿಷದಲ್ಲಿ ತಮ್ಮನ್ನು ಕಾಣಲಿದ್ದಾರೆ ಎಂದು ತಿಳಿಸಿದರು.

ಬಸವಣ್ಣ ಅಷ್ಟರಲ್ಲಿ ಪ್ರಜೆಯನ್ನು ಒಳಗೆ ಕರೆ ತರಲು ಹೇಳಿದರು. ಆತ ಒಳಗೆ ಬಂದು ಬೊಕ್ಕಸದ ಅಧಿಕಾರಿಗೆ ಗೌರವ ಸಲ್ಲಿಸಿದರು. ಭಾಂಡಾರಿಯ ಆಣತಿಯಂತೆ ಅವರ ಮುಂದಿದ್ದ ಲೇಖಿ ಮೇಜಿನ ಎದುರು ವಿರಾಜಮಾನರಾದರು. ೧೦ ನಿಮಿಷಗಳ ಬಳಿಕ ಬಸವಣ್ಣ ಮುಂದೆ ಇದ್ದ ಎಣ್ಣೆಯ ದೀಪವನ್ನು ತಮ್ಮ ಕೈಯಾರೆ ಆರಿಸಿದರು. ಹಾಗೆಯೇ ಪಕ್ಕದಲ್ಲಿದ್ದ ಮತ್ತೊಂದು ಎಣ್ಣೆಯ ದೀಪವನ್ನು ಕೂಡಲೇ ಹಚ್ಚಿದರು. ಎರಡೂ ದೀಪ ಒಂದೇ..ಆದರೆ ಬಸವಣ್ಣ ಹೀಗೇಕೆ ಮಾಡಿದರು? ಪ್ರಜೆ ದಿಗಿಲು ಬಿದ್ದ. ಅವರು ಕುಶಲ ವಿಚಾರಿಸುತ್ತಿದ್ದಂತೆಯೇ ಕೇಳಿಯೇ ಬಿಟ್ಟ.

"ಕ್ಷಮಿಸಬೇಕು..ಭಾಂಡಾರಿಗಳು. ತಾವು ಹೀಗೆ ಒಂದು ದೀಪವನ್ನು ಆರಿಸಿ, ಮತ್ತೊಂದು ಅಂತಹುದೇ ದೀಪ ಹೆಚ್ಚಿದ್ದು ನನಗೆ ಏಕೆ ಎಂದು ಗೊತ್ತಾಗಲಿಲ್ಲ. ಎರಡೂ ಒಂದೇ ತೆರನಾದ ದೀಪಗಳು..ಹಾಗೆಯೇ ಅವು ಬೀರುವ ಬೆಳಕು ಸಮ ಪ್ರಮಾಣದ್ದು..!" ಎಂದು ತಡವರಿಸಿದ.

ಭಂಡಾರಿ ಬಸವಣ್ಣ ನಕ್ಕರು. "ಅದು ಆಮೇಲೆ..ಮೊದಲು ತಾವು ಬಂದ ವಿಷಯ ತಿಳಿಸಿ" ಎಂದರು. ಭೇಟಿಗೆ ಬಂದ ಪ್ರಜೆ.."ಏನಿಲ್ಲ..ತಮ್ಮನ್ನು ಭೇಟಿ ಮಾಡಿ, ಕುಶಲ ವಿಚಾರಿಸಿಕೊಂಡು ಹೋಗೋಣ..ಎಂದು ಬಂದೆ ಅಷ್ಟೇ; ವಿಶೇಷವೇನಿಲ್ಲ!" ಎಂದ. ಬಸವಣ್ಣ "ಹಾಗೋ..ಕೇಳಿ ನಿಮ್ಮ ಪ್ರಶ್ನೆಗೆ ಉತ್ತರ" ಎಂದರು. "ನೋಡಿ..ನೀವು ಬಂದು ಕೂತಾಗ ನಾನು ರಾಜ್ಯ ಬೊಕ್ಕಸದ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿದ್ದೆ. ಆಗ ಹಚ್ಚಿಟ್ಟಿದ್ದ ದೀಪಕ್ಕೆ ಬೇಕಿದ್ದ ಎಣ್ಣೆ-ಬತ್ತಿಗೆ ರಾಜ್ಯ ಬೊಕ್ಕಸದಿಂದ ನನಗೆ ಹಣ ಸಂದಾಯವಾಗುತ್ತದೆ. ಹಾಗಾಗಿ ಆ ಕೆಲಸ ಮುಗಿದ ತಕ್ಷಣ ಆರಿಸಿದೆ. ನೀವು ನನ್ನ ಮನೆಗೆ ಬಂದ ನಮ್ಮ ಅಥಿತಿ. ಹಾಗಾಗಿ ನನ್ನ ದುಡಿಮೆಯಿಂದ ಬಂದ ಹಣದಲ್ಲಿ ಕೊಂಡು ತಂದ ಎಣ್ಣೆಯಲ್ಲಿ ಉರಿಯುವ ದೀಪ ಹಚ್ಚಿಟ್ಟೆ. ತಮ್ಮೊಂದಿಗೆ ಈಗ ಮಾತುಕತೆ, ಉಭಯ ಕುಶಲೋಪರಿ" ಎಂದರು.

ಮಾರುವೇಷದಲ್ಲಿದ್ದ ಬಿಜ್ಜಳ ಮಹಾರಾಜರಿಗೆ ಅಭಿಮಾನ ಉಕ್ಕಿ, ಕಣ್ಣಲ್ಲಿ ಆನಂದಭಾಷ್ಪಗಳು ಉಕ್ಕಿ ಬಂದವು. ಮಂತ್ರಿ ಮಂಚಣ್ಣನ ಮಾತು ನಂಬಿ ಈ ಕೆಲಸಕ್ಕೆ ಕೈಹಾಕಿದೆ ಎಂದು ವ್ಯಾಕುಲಗೊಂಡರು. ಕೂಡಲೇ ಎದ್ದು ನಿಂತು ಬಸವಣ್ಣನವರನ್ನು ಅಪ್ಪಿಕೊಂಡ ಮಾಹಾರಾಜ ಬಿಜ್ಜಳರು, ತಮ್ಮಂತಹ ಭಾಂಡಾರಿ ಇರುವ ತನಕ ರಾಜ್ಯ ಸುರಕ್ಷಿತವಾಗಿ ಹಾಗು ಸುಭೀಕ್ಷೆಯಲ್ಲಿ ಇರಲಿದೆ ಎಂಬ ಸಂಪೂರ್ಣ ನಂಬಿಕೆ ತಮಗಿರುವುದಾಗಿ ಹೇಳಿ, ತಮ್ಮ ನಿಜರೂಪ ತೋರಿದರು. ಅವರು ಸರಕಾರದ ಅಧಿಕಾರಿಯಾಗಿ, ತಮ್ಮ ಮನೆಯಲ್ಲಿ ಒಬ್ಬ ಸಾಮಾನ್ಯ ಪ್ರಜೆಗೂ ನೀಡಿದ ಆದರ-ಆತಿಥ್ಯ ನೆನೆದು ಅಭಿಮಾನಪಟ್ಟರು.

ವರ್ತಮಾನದ ಘಟನೆ ಕೇಳಿ:

ಅಮೇರಿಕದ ಅಧ್ಯಕ್ಷರನ್ನು ಗಾದಿಯಿಂದ ಕೆಳಗಿಳಿಸಿದ ಪ್ರಸಿದ್ಧ ‘ವಾಟರ್ ಗೇಟ್’ ಹಗರಣ ನಿಮಗೆ ಗೊತ್ತು. ಅದು ಬಯಲಿಗೆ ಬರಲು ಕಾರಣಕರ್ತ ಅನಾಮಿಕರಾಗಿದ್ದ ‘ಡೀಪ್ ಥ್ರೋಟ್’ ಹೆಸರಿನಿಂದ ಪ್ರಸಿದ್ಧನಾಗಿದ್ದ ವ್ಯಕ್ತಿ ಗೊತ್ತೆ? ‘ಫೆಡರಲ್ ಬ್ಯುರೋ ಆಫ್ ಇನವೆಸ್ಟಿಗೇಶನ್’ (ಎಫ್.ಬಿ.ಐ.) ಮಾಜಿ ಉಪ ಮುಖ್ಯಸ್ಥ ಡಬ್ಲೂ. ಮಾರ್ಕ್ ಫೆಲ್ಟ್ ಆ ವ್ಯಕ್ತಿ. ನಿನ್ನೆ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.

೧೯೭೨ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವಾಟರ್ ಗೇಟ್ ಹಗರಣದ ಸರಣಿ ವರದಿಗಳು ಅಮೇರಿಕದ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ಈಗ ಇತಿಹಾಸ. ಕೊನೆಗೆ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಬೇಕಾದ ಐತಿಹಾಸಿಕ ಪ್ರಕರಣವದು. ಇಂದಿಗೂ ಅಮೇರಿಕೆಯ ಇತಿಹಾಸದಲ್ಲಿ ದಾಖಲೆಯಾಗಿ ಉಳಿದಿದೆ. ಇದಕ್ಕೆ ಕಾರಣ ಮಾರ್ಕ್ ಫೆಲ್ಟ್ ಹೊರಗೆಡವಿದ್ದ ಸೂಕ್ಷ್ಮವಾದ ಆದರೆ ಆಘಾತಕಾರಿ ತನಿಖಾ ಮಾಹಿತಿಗಳು. ಅಮೇರಿಕಾದ ತನಿಖಾ ದಳದಲ್ಲಿ ೨ನೇ ಅತ್ಯುನ್ನತ ಹುದ್ದೆಯಲ್ಲಿದ್ದ ಮಾರ್ಕ್ ಹಗರಣದ ಪ್ರತಿ ವಿವರಗಳನ್ನು ವಾಷಿಂಗ್ಟನ್ ಪೋಸ್ಟ್ ವರದಿಗಾರರಿಗೆ ನೀಡಿದ್ದರು. ತನಿಖಾ ಪತ್ರಿಕೋದ್ಯಮದಲ್ಲಿ ಇದೊಂದು ಮೈಲುಗಲ್ಲಾದ ಉದಾಹರಣೆ. ಮಾರ್ಕ್ ಹಾಗು ಆ ಪತ್ರಕರ್ತರ ಬದ್ಧತೆ ಮತ್ತು ಸಿದ್ಧತೆ, ಪರಸ್ಪರರಲ್ಲಿ ಅಚಲವಾದ ನಂಬಿಕೆ ಎಂತಹುದು? ನೀವೇ ಊಹಿಸಿ.

ವಾಷಿಂಗ್ಟನ್ ಪೋಸ್ಟ್ ತನ್ನ ಸುದ್ದಿ ಮೂಲವನ್ನು ‘ಡೀಪ್ ಥ್ರೋಟ್’ ಎಂದು ಹೇಳಿಕೊಂಡಿತ್ತು. ಸುಮಾರು ೩೦ ವರ್ಷಗಳ ಕಾಲ ಈ ‘ಡೀಪ್ ಥ್ರೋಟ್’ ಯಾರು ಎಂಬುದು ನಿಗೂಢವಾಗಿಯೇ ಉಳಿದಿತ್ತು. ೨೦೦೫ರ ಕೊನೆಗೆ ತಾನೇ ಆ ಡೀಪ್ ಥ್ರೋಟ್ ಎಂದು ಮಾರ್ಕ್ ಫೆಲ್ಟ್ ಬಹಿರಂಗ ಪಡಿಸಿದ್ದರು. ಇಡೀ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ದೇಶದ ಹಿತಾಸಕ್ತಿ, ತನ್ನ ಜನರ ಕಲ್ಯಾಣಕ್ಕಾಗಿ ಓರ್ವ ಅಧಿಕಾರಿ ತಳೆದ ಈ ದಿಟ್ಟ ನಿಲುವಿಗೆ ಯಾವ ಪುರಸ್ಕಾರ, ಪ್ರಶಸ್ತಿ ಕೊಟ್ಟರೆ ಸರಿ ಹೋದೀತು? ಯೋಚಿಸಿ. ಆತ ಹೇಳಿದ್ದ ಮಾತು ಇಲ್ಲಿ ಉಲ್ಲೇಖಿಸುತ್ತೇನೆ..

"I am not totally useless because, I can still be used as bad example by these corrupt bureaucrats..!"

ಏಕೆ..ಈ ಮಾತುಗಳನ್ನು ಇಲ್ಲಿ ಬರೆದೆ ಎಂದರೆ..ನಿತ್ಯ ಪತ್ರಿಕೆಗಳು ನಮ್ಮ ನಿರ್ಲಜ್ಜ, ಭ್ರಷ್ಟ ಸರಕಾರಿ ಅಧಿಕಾರಿಗಳ ಕಾರ್ಯ ವೈಖರಿ, ಹಗಲು ದರೋಡೆಗಳ ಬಗ್ಗೆ, ಸರಕಾರ ಹಾಗು ಕರದಾತರ ಹಣ ಲೂಟಿ ಮಾಡುತ್ತಿರುವ ಬಗ್ಗೆ ಉಗಿದು ಬರೆಯುತ್ತಿವೆ. ಹಣದಾಹಿಗಳು, ಧನ ಪಿಶಾಚಿಗಳು, ಹೆಗ್ಗಣಗಳು, ತಿಮಿಂಗಲುಗಳು..ಎಂದು ಹಿಯಾಳಿಸಿ ಕೋಟ್ಯಾಂತರ ರುಪಾಯಿ ನುಂಗಿಕೊಂಡವರ ಬಗ್ಗೆ ಪುಟಗಟ್ಟಲೇ ಬರೆಯುತ್ತಿವೆ. ಲೋಕಾಯುಕ್ತರು ಮಾಧ್ಯಮಗಳಿಗೆ ಇವರೆಲ್ಲರ ಫೋಟೋ ತೋರಿಸಿ, ಹೆಸರು ಹೇಳಿ ಮಾನ ಕಳೆದರೂ ಭ್ರಷ್ಟರಾಗಲು ತುದಿಗಾಲ ಮೇಲೆ ನಿಂತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚೆಗೆ ಲೋಕಾಯುಕ್ತರು ಭ್ರಷ್ಟಾಚಾರದ ಆರೋಪ ಹೊರಿಸಿ, ಬಂಧಿಸಿದ ವ್ಯಕ್ತಿಗೆ ಕರ್ತವ್ಯ ದಕ್ಷತೆಗಾಗಿ ರಾಷ್ಟ್ರಪತಿಗಳ ಬಂಗಾರದ ಪದಕ ಲಭಿಸಿತ್ತು!

೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಮೂರ್ತಿಗಳನ್ನು ಎಲ್ಲ ಊರುಗಳ ಜನನಿಬಿಡ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದೇವೆ. ಅವರ ಆದರ್ಶಗಳನ್ನು ಮಾತ್ರ ಗಾಳಿಗೆ ತೂರಿದ್ದೇವೆ. ಹಾಗೆಯೇ ೨೧ನೇ ಶತಮಾನದ ಮಾರ್ಕ ಫೆಲ್ಟ್ ಕೂಡ ಇಂದಿಗೆ ಮರೀಚಿಕೆಯೇ..ಹಾಗೆಯೇ ಅವರ ಆದರ್ಶಗಳೂ..! ನಮ್ಮ ವಿ(ನಿ)ಧಾನ ಸೌಧದ ಮುಂಭಾಗದ ಬಾಗಿಲಿನ ಮೇಲೆ ಹೀಗೆ ಬರೆಯಲಾಗಿದೆ..‘ಸರಕಾರದ ಕೆಲಸ ದೇವರ ಕೆಲಸ’..! ನಮ್ಮ ಅಧಿಕಾರಿಗಳೆಲ್ಲ ಮಾಡುತ್ತಿರುವುದು ‘ದೇವರ’ ಕೆಲಸವೇ..ಇರಬೇಕು.

ಜಪಾನ್ ದೇಶದ ಟೋಕಿಯೋ ನಗರದ ಪ್ರಮುಖ ಬಸ್ ನಿಲ್ದಾಣದ ಮೇಲೆ ಹೀಗೆ ಬರೆಯಲಾಗಿದೆ..
"Only Bus stops here; not time..keep up with time, otherwise you will loose it forever!"

ನಾವು ಎಚ್ಚೆತ್ತುಕೊಳ್ಳಲು ಇದು ಸಕಾಲವಲ್ಲವೇ?