" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ !

" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ !

ಬರಹ

ಈ ನಾಟಕೋತ್ಸವ, ಮಾಹಿಮ್ ನ ಕರ್ನಾಟಕಸಂಘದವರು, ಹಾಗೂ ಕರ್ನಾಟಕಸರ್ಕಾರದೊಡಗೂಡಿ ನಡೆಸಲ್ಪಟ್ಟಿತು. ನಾಟಕೋತ್ಸದ ಉದ್ಘಾಟನೆಯನ್ನು ಮುಂಬೈನ ಹಿರಿಯ ರಂಗಭೂಮಿಯ ನಟ, ನಿರ್ದೇಶಕ, ನಾಟಕರಚನಾಕಾರ, ಡಾ. ಮಂಜುನಾಥ್ ಮಾಡಿದರು. ವೃತ್ತಿಯಲ್ಲಿ ವಿಜ್ಞಾನಿಯಾದರೂ ನಾಟಕ, ಸಂಗೀತ, ಸಾಹಿತ್ಯ- ಕಲಾಸಕ್ತರು ಡಾ. ಮಂಜುನಾಥ್ ! ಯಾವುದೇ ಉತ್ತಮನಾಟದ ಪ್ರದರ್ಶನವನ್ನು ಕಲಾವಿದರು, ತಮ್ಮ ಹೃದಯಾಂತರಂಗದಿಂದ ತೋರಿಸದಿದ್ದರೆ ಅದು ಉತ್ತಮ ನಾಟಕ ಆಗುವುದಿಲ್ಲವೆನ್ನುವುದು, ಡಾ. ಮಂಜುನಾಥರ ಅಭಿಪ್ರಾಯ ! ನಾಟಕವೊಂದು ಕಲೆ. ಆಕ್ಷೇತ್ರದಲ್ಲಿ ಸಮರ್ಥವಾಗಿ ಮುಂದುವರಿಯಬೇಕಾದರೆ, ನಟಾನಾಸಾಮರ್ಥ್ಯದ ಜೊತೆ-ಜೊತೆಗೆ, ಹಾಡಲು, ಕುಣಿಯಲು, ನಗಿಸಲು, ಹೃದಯಸ್ಪರ್ಶೀ ನಿರರ್ಗಳ-ಮಾತಾಡುವ ಕಲೆ ಕರಗತವಾಗಬೇಕಾದದ್ದು ಅತ್ಯವಶ್ಯಕ. ಡಾ. ಮಂಜುನಾಥ್, ದಶಕಗಳಿಂದ ಹಲವಾರು ಅತ್ಯುತ್ತಮ ನಾಟಕಗಳನ್ನು 'ಮುಂಬೈನ ರಂಗಮಂಚ' ಕ್ಕೆ ನೀಡಿದ್ದಾರೆ. 'ಮೈಸೂರ್ ಅಸೋಸಿಯೇಷನ್ 'ಸಭಾಂಗಣದಲ್ಲಿ ನಾಟಕಗಳನ್ನು ರಚಿಸಿ, ದಿಗ್ದರ್ಶಿಸಿ, ಪ್ರದರ್ಶಿಸಿದ್ದಾರೆ. 'ನನ್ನಗೋಪಾಲ' ಎಂಬ ಕುವೆಂಪುರವರ ನಾಟಕದಿಂದ ರಂಗಮಂಚಕ್ಕೆ ಪಾದಾರ್ಪಣೆಮಾಡಿದ ಮಂಜುನಾಥ್, ಈಗ ಮುಂಬೈನಗರದ, 'ವಿಶ್ವೇಶ್ವರಯ್ಯ ಸಭಾಗೃಹ' ದಲ್ಲಿ, 'ಕುವೆಂಪು ಸ್ಮಾರಕ ನಾಟಕ ಸ್ಪರ್ಧೋತ್ಸವ,' ವನ್ನು ಉಧ್ಹಾಟಿಸುವ ಮೂಲಕ ತಮ್ಮ ಕಾರ್ಯಕ್ಷೇತ್ರದಲ್ಲಿ ಸಫಲತೆಯನ್ನು ಹಾಸಲುಮಾಡಿದ್ದಾರೆ. ಈ ಉದ್ಘಾಟನಾ ಕ್ರಿಯೆ, ಅವರಿಗೆ ತಂದ ಸಂಭ್ರಮದ ಕ್ಷಣಗಳಲ್ಲೊಂದು !

'ಮನೋಹರ ಎಂ. ಕೋರಿ,' ಯವರು, ಸಂಘದ 'ಅಮೃತಮಹೋತ್ಸವ' ದ ಸುಸಂಧಿಯಲ್ಲಿ ನಾಟಕಸ್ಪರ್ಧೆಯಬಗ್ಗೆ ಕುಣ್ಣುಹಾಯಿಸುತ್ತಾ, ರಂಗಭೂಮಿಯ ಕಲಾಕಾರರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹಕೊಡುವುದು 'ಕರ್ನಾಟಕ ಸಂಘ' ದ ಬಹುಮುಖ್ಯ ಉದ್ದೇಶ್ಯಗಳಲ್ಲೊಂದು, ಎಂದು ನುಡಿದರು. 'ಕರ್ನಾಟಸಂಘ,' ದ ಉಪಾಧ್ಯಕ್ಷರಾದ, 'ಭರತ್ ಕುಮಾರ್ ಪೊಲಿಪು', ಅತಿಧಿಗಳ ಪರಿಚಯ ಪ್ರಸ್ತಾವನೆಯನ್ನು ಮಾಡಿದರು. ಸ್ಪರ್ಧೆಯಲ್ಲಿ ಆರಿಸಿರುವ ೯ ನಾಟಕಗಳು, 'ಸಮಾಜದ ಕೋಮುವಾರು ಸೌಹಾರ್ದತೆ,' ಗೆ ಆಯ್ಕೆ ಮಾಡಲಾಗಿದೆ. 'ಸುಶೀಲಾ ದೇವಾಡಿಗ', ತಂಡದ ಸುಶ್ರಾವ್ಯ ಪ್ರಾರ್ಥನೆಯ ನಂತರ, ಕಾರ್ಯಕ್ರಮ ಶುರುವಾಯಿತು. ಕಾರ್ಯದರ್ಶಿ, 'ಓಂದಾಸ ಕಣ್ಣಂಗಾರ್', ಕಾರ್ಯಕ್ರಮ ನಿರೂಪಣೆ, ಸ್ವಾಗತ, ವಂದನಾರ್ಪಣೆಯನ್ನು ಸಲ್ಲಿಸಿದರು. ಇದರೊಂದಿಗೆ ನಾಟಕ ಸ್ಪರ್ಧೆ ಆರಂಭವಾಯಿತು.

ನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಮುಖ್ಯಾತಿಧಿ, ಪ್ರಖ್ಯಾತ ರಂಗನಿರ್ದೇಶಕ, ಪ್ರಸ್ತುತದಲ್ಲಿ ' ಈಟೀವಿ ಕನ್ನಡವಾಹಿನಿ' ಯ ಮುಖ್ಯಸ್ಥರಾದ 'ಸುರೇಂದ್ರನಾಥ್', ತೀರ್ಪುಗಾರರ ಪರವಾಗಿಮಾತಾಡಿದರು. 'ಶ್ರೀಪಾದಭಟ್', ಸಾಮಾಜಿಕ ಜವಾಬ್ದಾರಿಯಬಗ್ಗೆ ಒತ್ತುನೀಡಿಮಾತಾಡಿದರು. ರಂಗಕಲಾವಿದರು, ನಿರ್ದೇಶಕವೃಂದ ತಮ್ಮ ಆಶಯ-ಆಕೃತಿಗಳ ಸಮನ್ವಯಕ್ಕೂ ಗಮನಕೊಡಬೇಕೆಂದು ನುಡಿದರು. ನಾಟಕಪ್ರದರ್ಶವದ ಬಳಿಕ, ರಂಗಭೂಮಿಯ ಪ್ರೇಕ್ಷಕರಿಗೆ 'ರಸಾನುಭವ,' ವಾದರೆ ಮಾತ್ರ, ಅದು ಷ್ರೇಷ್ಠ ನಾಟಕವಾಗಲು ಸಾಧ್ಯ. ಕತೆಗಾರ 'ಪಿ. ಬಿ. ಪ್ರಸನ್ನ', ಮತ್ತು ರಂಗಕರ್ಮಿ, 'ಶಿವಕುಮಾರ್' ಈ ಸಮಯದಲ್ಲಿ ಸಹಕರಿಸಿದರು.

ಸಮಾರೋಪ ಸಮಾರಂಭದ ಮೊದಲಿಗೆ, 'ಮೈಮ್ ರಮೇಶ್,' ನಿರ್ದೇಶಿಸಿದ, ''GPIER' ಬಳಗದವರಿಂದ "ಸೇತುಮಾಧವನ ಸರಸಸಲ್ಲಾಪ ಪ್ರಹಸನ,' ಎಲ್ಲರ ಮನತಣಿಸಿತು.

" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ" ಯ ಫಲಿತಾಂಷಗಳು ಕೆಳಗೆ ಕಂಡಂತಿವೆ :

'ಕರ್ನಾಟಕ ಸಂಘ, ಮುಂಬೈ', ಫೆ. ೨೧, ಮತ್ತು ಫೆ. ೨೨ ರಂದು ಡಾ. ವಿಶ್ವೇಶ್ವರಯ್ಯ ಸಭಾಗೃಹ' ದಲ್ಲಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಜಿ. ಪಿ. ಐ. ಇ. ಆರ್. ರಂಗ ತಂಡ ಮೈಸೂರ್ ರವರ, 'ಇಪ್ಪಾಲದವರು,' ಅತ್ಯುತ್ತಮ ನಾಟಕವೆಂದು ತೀರ್ಪುಗಾರರಿಂದ ಪರಿಗಣಿಸಲ್ಪಟ್ಟು ಪ್ರಥಮ ಸ್ಥಾನವನ್ನು ಪಡೆದಿದೆ. 'ಮೈಮ್ ರಮೇಶ್' ಉತ್ತಮ ನಿರ್ದೇಶಕ, ಪ್ರಥಮ ಬಹುಮಾನ ಗಿಟ್ಟಿಸಿದ್ದಾರೆ.

ಸ್ಪರ್ಧೆಯ ವಿವಿಧ ವಿಭಾಗಗಳ ಫಲಿತಾಂಷಗಳು ಹೀಗಿವೆ :

'ಧನಂಜಯ ಕುಲಕರ್ಣಿ', ಜತೆಗಿರುವನು ಚಂದಿರ,' ಕನ್ನಡ ಕಲಾಸಂಘ, ಟಿ. ಬಿ. ಡ್ಯಾಂ ದ್ವಿತೀಯ ಪುರಸ್ಕಾರ.

'ಸುಕುಮಾರ ಮೋಹನ್', 'ಒಂದು ಚೂರಿಯ ಕಥೆ,' 'ನಮ ತುಳುವೆರ್ ಕಲಾ ಸಂಘಟನೆ [ರಿ] ಮುದ್ರಾಡಿ'- ತೃತೀಯ ಬಹುಮಾನ.

ಅತ್ಯುತ್ತಮ ನಾಟಕಗಳೆಂದು ಪರಿಗಣಿಸಲ್ಪಟ್ಟು ಪ್ರಶಸ್ತಿಗೆ ಪಾತ್ರವಾದ ನಾಟಕಗಳು :-

** ಜಿ. ಪಿ. ಐ. ಇ. ಆರ್, ರಂಗತಂಡ ಮೈಸೂರ್ ರವರ, 'ಇಪ್ಪಾಲದವರು,' ಅತ್ಯುತ್ತಮ ನಾಟಕವೆಂದು ತೀರ್ಪುಗಾರರಿಂದ ಪರಿಗಣಿಸಲ್ಪಟ್ಟು, ಪ್ರಥಮ ಸ್ಥಾನವನ್ನು ಪಡೆದಿದೆ.

** 'ಕನ್ನಡ ಕಲಾಸಂಘ, ಟಿ. ಬಿ. ಡ್ಯಾಂ'-'ಜತೆಗಿರುವನು ಚಂದಿರ'-ದ್ವಿತೀಯ.

** ' ನಮ ತುಳುವೆರ್ ಕಲಾ ಸಂಘಟನೆ [ರಿ] ಮುದ್ರಾಡಿ- 'ಒಂದು ಚೂರಿಯ ಕಥೆ', [ತೃತೀಯ]

೧. ಅತ್ಯುತ್ತಮ ಪೋಷಕ ನಟಿ :

ಅಮಿತಾ ಹೆಗ್ಡೆ-ಫಾತುಮ್ಮ, ಪಾತ್ರ. ' ನಮ ತುಳುವೆರ್ ಕಲಾ ಸಂಘಟನೆ [ರಿ] ಮುದ್ರಾಡಿ'- ಒಂದು ಚೂರಿಯ ಕಥೆ,

೨. ಅತ್ಯುತ್ತಮ ಪೋಷಕನಟ :
ನಾಗಭೂಷಣ್ ಎನ್. ಎಸ್- ರವಿ/ದೇವರು/ಫಜಲುದ್ದೀನನ ಪಾತ್ರ. 'ಜಿ. ಪಿ. ಐ. ಇ. ಆರ್. ರಂಗತಂಡ ಮೈಸೂರು',-ಇಪ್ಪಾಲದವರು.

೩. * ಅತ್ಯುತ್ತಮ ಬಾಲನಟಿ/ನಟ :
ಎ. ರಾಹುಲ್ ರಾಜ್-'ಸತ್ಯ ಪಾತ್ರ ಸೃಷ್ಟಿ, ಚೆನ್ನರಾಯಪಟ್ಟಣ-ಅಂತರಂಗ'.

೪. * ಅತ್ಯುತ್ತಮ ನಟಿ :
ಡಿ. ಹನುಮಕ್ಕ, [ಮುನೀರ್ ಜಾನ್ ಪಾತ್ರ]ಕನ್ನಡ ಕಲಾಸಂಘ, ಟೀ. ಬಿ ಡ್ಯಾಮ್, 'ಜತೆಗಿರುವನು ಚಂದಿರ,' [ಪ್ರಥಮ]
ಸುಗಂಧಿ ಉಮೇಶ್, [ಪಾರ್ವತಿಪಾತ್ರ]' 'ನಮ ತುಳುವೆರ್ ಕಲಾ ಸಂಘಟನೆ [ರಿ]ಮುದ್ರಾಡಿ'- ಒಂದು ಚೂರಿಯ ಕಥೆ, ದ್ವಿತೀಯ
ಟಿ. ಎಸ್. ರಷ್ಮಿ, ಅರ್ಷಿಯಾ ಪಾತ್ರ] ಕನ್ನಡ ಕಲಾಸಂಘ, ಡಿ. ಬಿ. ಡ್ಯಾಮ್, 'ಜತೆಗಿರುವನು ಚಂದಿರ', ತೃತಿಯ]

೫. * ಅತ್ಯುತ್ತಮ ನಟ :
ಸುಧೀಂದ್ರ ಮೋಹನ್, ನಾರ್ಣಪ್ಪನ ಪಾತ್ರ, 'ನಮ ತುಳುವೆರ್' 'ಒಂದು ಚೂರಿಯ ಕಥೆ', ಪ್ರಥಮ,
ಜಯದೇವ ಯುವಕ ಪಾತ್ರ, 'ವಟೀ ಕುಟೀರ- ಬೆಂಗಳೂರು', 'ಆ ಮುಖ ಈ ಮುಖ ದ್ವಿತೀಯ
ಪ್ರವೀಣ್ ಚಂದ್ರ ತೊನ್ಸೆ, [ಆಲೀಂಪಾತ್ರ]-ಸುಮನಸಾ-'ರಾವಿನದಿದಂಡೆಯಲ್ಲಿ' [ತೃತೀಯ]

೬. * ಅತ್ಯುತ್ತಮ ವೇಷ-ಭೂಷಣ : 'ಕನ್ನಡ ಕಲಾಸಂಘ, ಟೀ. ಬಿ. ಡ್ಯಾಂ'-'ಜತೆಗಿರುವನು ಚಂದಿರ' 'ಪ್ರಥಮ
ಸುಮನಸಾ [ರಿ] 'ಕೊಡವೂರು-'ರಾವಿನದಿ ದಂಡೆಯಲ್ಲಿ'-ದ್ವಿತೀಯ.'
ನಮ ತುಳುವೆರ್ ಕಲಾ ಸಂಘಟನೆ [ರಿ] ಮುದ್ರಾಡಿ- ಒಂದು ಚೂರಿಯ ಕಥೆ, [ತೃತೀಯ]

೭. * ಅತ್ಯುತ್ತಮ ಸಂಗೀತ :ಕನ್ನಡ ಕಲಾಸಂಘ', 'ಟೀ. ಬಿ. ಡ್ಯಾಂ-ಜತೆಗಿರುವನು ಚಂದಿರ' ಪ್ರಥಮ.
ಎಮ್. ಪಿ. ಎಮ್. ಲಲಿತ ಕಲಾಸಂಘ, ಭದ್ರಾವತಿ, ಒಬ್ಬನೆ ಚಂದಿರ,ದ್ವಿತೀಯ
ಸುಮನಸಾ ಕೊಡವೂರು, -'ರಾವಿನದಿದಂಡೆಯಲ್ಲಿ' [ತೃತೀಯ]

೮. * ಅತ್ಯುತ್ತಮ ರಂಗವಿನ್ಯಾಸ :
-' ನಮ ತುಳುವೆರ್ ಕಲಾ ಸಂಘಟನೆ [ರಿ]ಮುದ್ರಾಡಿ- 'ಒಂದು ಚೂರಿಯ ಕಥೆ,[ಪ್ರಥಮ]

'GPIER' ರಂಗ ತಂಡ ಮೈಸೂರು,-'ಇಪ್ಪಾಲದವರು'-ದ್ವಿತೀಯ.

'ಕನ್ನಡ ಕಲಾಸಂಘ, ಟೀ. ಬಿ. ಡ್ಯಾಂ'-'ಜತೆಗಿರುವನು ಚಂದಿರ'[ತೃತೀಯ]

೯. * ಅತ್ಯುತ್ತಮ ಬೆಳಕು :

ಜಿ. ಪಿ. ಐ. ಇ. ಆರ್. ರಂಗತಂಡ ಮೈಸೂರು,-'ಇಪ್ಪಾಲದವರು' [ಪ್ರಥಮ]

'ಕನ್ನಡ ಕಲಾಸಂಘ, ಟೀ. ಬಿ. ಡ್ಯಾಂ'-'ಜತೆಗಿರುವನು ಚಂದಿರ' [ದ್ವಿತೀಯ]

ಸುಮನಸಾ[ರಿ] ಕೊಡವೂರು, -'ರಾವಿನದಿದಂಡೆಯಲ್ಲಿ' [ತೃತೀಯ]

'ಇಪ್ಪಲಾದವರು'

(" ೧೩ ನೇ ಅಖಿಲಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ "-೨೦೦೯ , ಮುಂಬೈ, ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಪಡೆದ ನಾಟಕ).

ತಂಡ : ಜಿ.ಪಿ.ಐ. ಇ. ಆರ್.

ಕಥೆ : ಸಾದತ್ ಹಸನ್ ಮಂಟೋ,

ನಾಟಕರಚನೆ : ಎಸ್. ಆರ್. ರಮೇಶ್,

ಬೆಳಕು : ಮಹೇಶ್,

ಸಂಗೀತ : ಶ್ರೀಕಂಠಸ್ವಾಮಿ,

ವಸ್ತ್ರಾಲಂಕಾರ, ರಂಗವಿನಾಸ, ಮತ್ತು, ನಿರ್ದೇಶನ : ಮೈಮ್ ರಮೇಶ್.

ನಾಟಕದ ಕಥೆ :

ಭಾರತದೇಶದ ವಿಭಜನೆಯಾದ ಸಮಯದಲ್ಲಿ ಒಂದೆರಡು ವರ್ಷಗಳ ತರುವಾಯ, ಭಾರತ ಮತ್ತು ಪಾಕಿಸ್ಥಾನದ ಸರ್ಕಾರಗಳಿಗೆ ಒಂದು ವಿಚಾರ ಹೊಳೆಯಿತು. ಜೈಲುಗಳಲ್ಲಿರುವ ಕೈದಿಗಳಂತೆ ಹುಚ್ಚಾಸ್ಪತ್ರೆಯಲ್ಲಿರುವ ಹುಚ್ಚರನ್ನೂ ಪರಸ್ಪರ ವಿನಿಮಯಮಾಡಿಕೊಳ್ಳಬೇಕೆಂದು ಅವರು ತೀರ್ಮಾನಿಸಿದರು. ಭಾರತದ ಹುಚ್ಚಾಸ್ಪತ್ರೆಗಳಲ್ಲಿರುವ ಮುಸ್ಲಿಮ್ ಹುಚ್ಚರನ್ನು ಪಾಕಿಸ್ಥಾನಕ್ಕೆ, ಮತ್ತು ಪಾಕಿಸ್ಥಾನದಲ್ಲಿರುವ ಸಿಖ್ ಮತ್ತು ಹಿಂದೂ ಹುಚ್ಚರನ್ನು ಭಾರತಕ್ಕೆ ವರ್ಗಾಯಿಸಬಹುದೆಂದು ಯೋಚನೆಮಾಡಲಾಯಿತು.

ಆದರೆ, ಹುಚ್ಚಾಸ್ಪತ್ರೆಯಲ್ಲಿದ್ದ ಎಲ್ಲರೂ ಹುಚ್ಚರಾಗಿರಲಿಲ್ಲ. ಕೆಲವು ಕೊಲೆಗಾರರೂ ಹುಚ್ಚರೆಂಬ ಅಧಿಕೃತ ಪರವಾನಗಿ ಪಡೆದು, ಹುಚ್ಚಾಸ್ಪತ್ರೆಗೆ ದಾಖಲಾತಿಪಡೆದಿದ್ದರು.
ಪಾಕಿಸ್ಥಾನವೆಲ್ಲಿದೆ, ಎಂಬುದಂತೂ ಹುಚ್ಚಾಸ್ಪತ್ರೆಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಅರೆಹುಚ್ಚರು ಮತ್ತು ಪೂರ್ಣಹುಚ್ಚರಿಬ್ಬರೂ ಈ ಮಟ್ಟಿಗೆ ಸಮಾನರಾಗಿದ್ದರು. ಅವರು ಭಾರತದಲ್ಲಿರುವುದಾದರೆ, ಪಾಕಿಸ್ಥಾನವೆಂಬುದು ಭೂಮಿಯ ಯಾವಭಾಗದಲ್ಲಿದೆ ? ಅವರು ಪಾಕೀಸ್ತಾನದಲ್ಲಿರುವುದಾದರೆ, ಮೊನ್ನೆಮೊನ್ನೆ ಯವರೆಗೂ ಅದನ್ನು ಭಾರವೆಂದು ಏಕೆ ಕರೆಯುತ್ತಿದ್ದರು. ಹೀಗೆ ಹುಚ್ಚರ ಮಾನಸಿಕ ಗೊಂದಲಗಳ ನಡುವೆ ನಡೆಯುವ ನಾಟಕವೇ " ಇಪ್ಪಾಲದವರು " !

ಕತೆಗಾರ :

ಸಾದತ್ ಹಸನ್ ಮಂಟೋ [೧೯೧೨-೧೯೫೫]

ಖ್ಯಾತ ಉರ್ದು ಸಣ್ಣ ಕತೆಗಾರರು. ಭೂ ಖೆಲ್, ತಂಡಾ ಗೋಷ್ತ್, ತೋಬಾತೇಕ್ ಸಿಂಗ್, ಮುಂತಾದ ಸಣ್ಣ- ಕಥೆಗಳನ್ನು ರಚಿಸಿದ್ದಾರೆ. ರೇಡಿಯೋ ಹಾಗೂ ಚಲನಚಿತ್ರಗಳಿಗೂ ಕಥೆಗಾರರಾಗಿ ಕೆಲಸಮಾಡಿದ್ದರು. ಪತ್ರಿಕಾಕರ್ತರಾಗಿಯೂ, ಇವರ ಸುಮಾರು, ೨೨ ಸಣ್ಣಕಥೆಗಳು, ೧ ಕಾದಂಬರಿ, ೫ ರೇಡಿಯೊ ನಾಟಕಗಳು, ೩ ಪ್ರಬಂಧಗಳೂ ಪ್ರಕಟವಾಗಿವೆ.

'ನಾಟಕಕಾರ ರಮೇಶ್' :

ಬೆಂಗಳೂರಿನ ಪ್ರೊ. ಎಸ್. ಆರ್. ರಮೇಶ್, ಖ್ಯಾತ ರಂಗಕರ್ಮಿಗಳಲ್ಲೊಬ್ಬರು. ೫೦ ಕ್ಕೂ ಹೆಚ್ಚು ನಾಟಕ ನಿರ್ದೇಶನದ ಅನುಭವ ಹೊಂದಿದ್ದಾರೆ. ಅವರು ನಿರ್ದೇಶಿಸಿದ ’ಕಿಂಗ್ ಲಿಯರ್, ”ಕೆಕೆಷಿಯನ್ ಚಾಕ್ ಸರ್ಕಲ್,’ ’ಮಿಶನ್ ಇನ್ ಮ್ಯಾನ್, ” ’ಹಯವದನ,” ’ಹುಲಿಯ ನೆರಳು,” ’ಶೋಕ ಚಕ್ರ,” ಪ್ರಮುಖವಾದವುಗಳು. ’ದ್ವೀಪ,’ ”ರೋಡ್, ಟು ಮೆಕ್ಕ,”ಮುಂತಾದ ಕೃತಿರಚನೆ, ಪ್ರಕಟನೆಮಾಡಿದ್ದಾರೆ. ೧೯೯೬ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ, ಪ್ರಶಸ್ತಿ ಪುರಸ್ಕೃತರು. ಪ್ರಸ್ತುತದಲ್ಲಿ, ಮೈಸೂರಿನ ’ವಾಸುದೇವ ಸೋಮಾನಿ ಕಾಲೇಜ್ ” ನಲ್ಲಿ ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ.

ನಿರ್ದೇಶಕ :

ರಮೇಶ್ , ದಕ್ಷಿಣ ಕರಾಟಕ ಜಿಲ್ಲೆಯ ಮಂಗಳೂರಿನ ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮ ಪಡೆದು, ೩೬ ವರ್ಷಗಳಿಂದ ಕನ್ನಡರಂಗಭೂಮಿಯಲ್ಲಿ ನಟನೆ, ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ಭಾರತದ ಶ್ರೇಷ್ಠ ನಿರ್ದೇಶಕರೊಡನೆ ಕೆಲಸಮಾಡಿದ ಅನುಭವಿ. ಪಶ್ಚಿಮಬಂಗಾಳದ ಬಾದಲ್ ಸರ್ಕಾರ್ ರವರೂಡನೆ ಮೂರನೇ ರಂಗಭೂಮಿ ಯಲ್ಲಿ ದುಡಿದ ಅನುಭವ. ’ ಆಂಟನ್ ಚೆಕಾವ್ ” ನ ’ಚೆರ್ರಿ ತೋಟ,” ಶೇಕ್ಸ್ ಪಿಯರ್ ನ, ’ ಕಿಂಗ್ ಲಿಯರ್,” ಗಿರೀಶ್ ಕಾರ್ನಾಡರ ’ನಾಗಮಂಡಲ,’ ಇವುಗಳನ್ನು ತುಳು ಭಾಷೆಗೆ ಅನುವಾದ ಮಾಡಿದ್ದಾರೆ. ಯುವ ಪೀಳಿಗೆಯ ಬಗ್ಗೆ ಹೆಚ್ಚಿನ ಒಲವಿರುವ ರಮೇಶ್, ತಾವು ಹೋದ ಕಡೆಯಲ್ಲೆಲ್ಲಾ ನಾಟಕ ತಂಡಗಳನ್ನು ಕಟ್ಟಿ ಅನೇಕ ನಟ-ನಟಿಯರನ್ನು ರಂಗಭೂಮಿಗೆ ಪರಿಚಯಿಸುವ ಮೂಲಕ, ಸಕ್ರಿಯ ರಂಗಚಟುವಿಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೧೯೮೯ ರಲ್ಲಿ ಬಿ. ವಿ.ಕಾರಂತರ ನೇತೃತ್ವದ ’ರಂಗಾಯಣ ’ ಕ್ಕೆ, ಕಲಾವಿದರಾಗಿ ಸೇರ್ಪಡೆಯಾದರು. ಮೂಕಾಭಿನಯದಲ್ಲಿ ಹೊಸ-ಹೊಸ ಪ್ರಯೋಗಗಳನ್ನು ಮಾಡಿ, ’ ಭಾರತದ ಶ್ರೇಷ್ಠ ಮೂಕಾಭಿನಯಪಟು,’ ಎಂದೆನಿಸಿಕೊಂಡ ಇವರು, ರಂಗಾಯಣ ತಂಡದೊಂದಿಗೆ ಅಮೆರಿಕ, ಜರ್ಮನ್, ಆಸ್ಟ್ರಿಯ ಪ್ರವಾಸವನ್ನು ಮಾಡಿದ್ದಾರೆ. ಮಕ್ಕಳ ರಂಗಭೂಮಿಯ ಬಗ್ಗೆ ಕಳೆದ ೩೮ ವರ್ಷಗಳಿಂದ ದುಡಿಯುತ್ತಾ ಬಂದಿದ್ದಾರೆ. ರಮೇಶ್ ಇತ್ತೀಚೆಗೆ ರಂಗಾಯಣದ ಮಕ್ಕಳ ರಂಗಭೂಮಿ ಯೋಜನೆಯಡಿಯಲ್ಲಿ ಸ್ವೀಡನ್ ದೇಶದಲ್ಲಿ ನಡೆದ ಮಕ್ಕಳ ರಂಗಭೂಮಿಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇವರ ರಂಗಕಾರ್ಯದ ವೈಖರಿಯನ್ನು ಗುರುತಿಸಿ, ’ಕಾಸರಗೋಡಿನ ಗ್ಡಿನ್ಡ್ ಕಲಾವಿದರು ,” ಶಿವರಾಮ ಕಾರಂತರಿಂದ ’ರಂಗಕರ್ಮಿ,’ ಎಂಬ ಬಿರುದನ್ನು ಹಾಗೂ ದಕ್ಷಿಣ ಭರತದ ಚಲನ ಚಿತ್ರ ಕಲಾವಿದರು, ಚೆನ್ನೈ ನಿಂದ ’ಕಲೈ ಸೆಲ್ವಮ್,’ ಎಂಬ ಬಿರುದು ಪಡೆದ ಏಕೈಕ ಕನ್ನಡಿಗ, ನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ರಂಗಾಯಣದಲ್ಲಿ ೨೦೦೧ ರಿಂದ ಪ್ರಾರಂಭಗೊಂಡ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಎರಡು ವರ್ಷಗಳಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಚಿಕ್ಕಂದಿನಿಂದಲೇ ಯಕ್ಷಗಾನ ಕಲಿತ ಇವರು, ಶಾಸ್ತ್ರೀಯ ನೃತ್ಯದಲ್ಲೂ ಭಾರತದ ಹಲವು ಜಾನಪದ ನೃತ್ಯಪ್ರಕಾರಗಳಲ್ಲಿಯೂ ಪರಿಣಿತಿ ಪಡೆದು, ಒಬ್ಬ ಶ್ರೇಷ್ಠನೃತ್ಯ ಸಂಯೋಜಕರಾಗಿದ್ದಾರೆ. ರಂಗಭೂಮಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಸಾಧನೆಯನ್ನು ಮಾಡುತ್ತಾ ಬಂದ ಒಬ್ಬ ಸೃಜನಶೀಲ ವ್ಯಕ್ತಿ, ರಮೇಶ್ !

-’ ಕರ್ನಾಟಕಮಲ್ಲ ವೃತ್ತಪತ್ರಿಕೆ, ” ಮುಂಬೈ.

-ವೆಂ.