೧೯೫೪ರಲ್ಲಿ ಮ್ಯಾಜಿಸ್ಟ್ರೇಟುಗಳಿಗೆ ತರಬೇತಿ
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು ಕಾರ್ಯದರ್ಶಿಯಾಗಿ ನಿವೃತ್ತರಾದ ನಂತರ, ಮೈಸೂರಿನಲ್ಲಿ ನೆಲೆಸಿದ ದಿ. ಎ. ವೆಂಕಟ ರಾವ್ ಪ್ರಾಮಾಣಿಕ, ಸಜ್ಜನ, ಧೀಮಂತ ವ್ಯಕ್ತಿ. ಅವರು ಬಾಳಿನಲ್ಲಿ ನುಡಿದಂತೆ ನಡೆದವರು. ಈ ಅನುಭವಗಳನ್ನು ಮೊದಲು ಮೈಸೂರಿನ ಸಂಜೆ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಅಂಕಣವಾಗಿ ಬರೆದರು. ಅವುಗಳ ಸಂಕಲನ ೨೦೦೬ರಲ್ಲಿ ಪ್ರಕಟವಾದ “ಮೆಮೊಯರ್ಸ್ ಆಫ್ ಎ ಜಡ್ಜ್”. ಅದರ ಕನ್ನಡಾನುವಾದವೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ೨೦೦೯ರಲ್ಲಿ ಪ್ರಕಟಿಸಿದ ಈ ಪುಸ್ತಕ.
ಇದರ ಮುನ್ನುಡಿಯಲ್ಲಿ ಎ. ವೆಂಕಟ ರಾವ್ ಬರೆದಿರುವ ಈ ಮಾತುಗಳು ಗಮನಾರ್ಹ: "ಸತ್ಯಂ ವದ ಧರ್ಮಂ ಚರ”, "ದಯೆಯೇ ಧರ್ಮದ ಮೂಲವಯ್ಯಾ” ….. ಎಂಬ ಸೂಕ್ತಿಗಳನ್ನು ನಾವು ಹೇಳುತ್ತಲೇ ಇರುತ್ತೇವೆ. ಆದರೆ ವಾಸ್ತವ ನ್ಯಾಯದಾನದಲ್ಲಿ - ಆತ ಎಷ್ಟೇ ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ - ಅನಿರೀಕ್ಷಿತ ಮತ್ತು ಪರಿಹಾರವಾಗಿರದ ನೂತನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. …. ಅಂಥ ಪ್ರತಿಯೊಂದು ಪ್ರಸಂಗದಲ್ಲಿಯೂ ಧರ್ಮಮಾರ್ಗದಿಂದ ನಾನು ವಿಚಲಿತನಾಗಿಲ್ಲ ಎಂಬ ತೃಪ್ತಿ ಸಮಾಧಾನಗಳು ನನಗಿವೆ”
ಇಡೀ ದೇಶದಲ್ಲಿ ಕಳೆದ ಏಳು ವರುಷಗಳ ಕಾಲ ಸಂಚಲನ ಮೂಡಿಸಿದ್ದ “ನಿರ್ಭಯಾ ಪ್ರಕರಣ”ದಲ್ಲಿ ೨೦ ಮಾರ್ಚ್ ೨೦೨೦ರಂದು ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜ್ಯಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಧೀಶರು “ಧರ್ಮಮಾರ್ಗ"ದಲ್ಲಿ ಹೇಗೆ ನಡೆಯಬೇಕೆಂದು ಬೆಳಕು ಚೆಲ್ಲುವ ಕೆಲವು ಆಯ್ದ ಅನುಭವಗಳನ್ನು ದಿ. ಎ. ವೆಂಕಟ ರಾವ್ ಅವರ ಪುಸ್ತಕದಿಂದ ಪ್ರಸ್ತುತ ಪಡಿಸುತ್ತಿದ್ದೇವೆ.)
ಬ್ರಿಟಿಷ್ ಆಡಳಿತ ಕಾಲದಲ್ಲಿ ದೇಶದಲ್ಲಿನ ಸಿವಿಲ್ ನ್ಯಾಯಾಲಯಗಳು ಕಾರ್ಯಾಂಗದ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕಾರ್ಯಾಂಗವು ನ್ಯಾಯಾಂಗದ ಕ್ರಿಮಿನಲ್ ಅಡ್ಮಿನಿಸ್ಟ್ರೇಷನ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಿತು. ರೆವಿನ್ಯೂ ಅಧಿಕಾರಿಗಳನ್ನು ಮಾತ್ರವೇ ಮ್ಯಾಜಿಸ್ಟ್ರೇಟರನ್ನಾಗಿ ನೇಮಿಸುತ್ತಿದ್ದರು. ಮುಖ್ಯವಾದ / ತೀವ್ರಾಸಕ್ತಿಯ ಪ್ರಕರಣವು ಖುಲಾಸೆಯಾಗಿ ಬಿಟ್ಟರೆ ಆಗ ಮ್ಯಾಜಿಸ್ಟ್ರೇಟರು ಮತ್ತು ಪೊಲೀಸ್ ಪ್ರಾಸಿಕ್ಯೂಟರ್ ಸದರಿ ಖುಲಾಸೆಯ ವಿಷಯದಲ್ಲಿ ಪರಸ್ಪರ ನಿಂದನೆಗೆ ತೊಡಗುತ್ತಿದ್ದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನ್ಯಾಯಾಂಗವು ಕಾರ್ಯಾಂಗದಿಂದ ಪ್ರತ್ಯೇಕಗೊಂಡಿತು. ಅಡ್ವೊಕೇಟ್ಗಳನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರುಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು - ತಮ್ಮತಮ್ಮ ಅಧಿಕಾರವ್ಯಾಪ್ತಿಯ ಅಪರಾಧಿಗಳ ವಿಚಾರಣೆ ನಡೆಸಿ ದಂಡಿಸಲಿಕ್ಕಾಗಿ. ನ್ಯಾಯಾಂಗವು ಕಾರ್ಯಾಂಗದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಲ್ಲಿ ಇದೊಂದು ಸ್ತುತ್ಯರ್ಹವಾದ ಕ್ರಮವಾಗಿದ್ದರೂ ವಾಸ್ತವದಲ್ಲಿ, ಖುಲಾಸೆಯಲ್ಲಿ ಅಂತ್ಯಗೊಳ್ಳುತ್ತಿದ್ದ ಪ್ರಕರಣಗಳಲ್ಲಿ ನ್ಯಾಯಾಂಗವಾಗಲಿ ಪೊಲೀಸಿನವರಾಗಲೀ ಉತ್ತರದಾಯಿಯಾಗಲಿಲ್ಲ.
೧೯೫೪ರಲ್ಲಿ ಹಳೆಯ ಮದ್ರಾಸು ಪ್ರಾಂತ್ಯದ ದಕ್ಷಿಣಕನ್ನಡ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಕಾರ್ಯಾಂಗದಿಂದ ನ್ಯಾಯಾಂಗದ ಪ್ರತ್ಯೇಕೀಕರಣವನ್ನು ಜಾರಿಗೊಳಿಸಿದಾಗ, ಆ ರೀತಿ ಆಯ್ಕೆಯಾದ ಅಡ್ವೋಕೇಟರ ಪೈಕಿ ನಾನೂ ಒಬ್ಬನಾಗಿದ್ದೆ. ಆದರೆ ನಮ್ಮನ್ನು ಮ್ಯಾಜಿಸ್ಟ್ರೇಟರಾಗಿ ನೇಮಕ ಮಾಡುವ ಮೊದಲು ನಾವು ಮೂರು ತಿಂಗಳ ತರಬೇತಿ ಪಡೆಯಬೇಕಾಗಿತ್ತು. ಆ ಅವಧಿಯಲ್ಲಿ ಎರಡು ವಾರಗಳ ಕಾಲ ನಮ್ಮನ್ನು ಪೊಲೀಸ್ ಸೂಪರಿಂಟೆಂಡರ ಕಛೇರಿಗೆ ಕಳುಹಿಸಲಾಗುತ್ತಿತ್ತು. ಆ ಸಮಯದಲ್ಲಿ ಕೃಷ್ಣಸ್ವಾಮಿ ಎಂಬುವವರು ದಕ್ಷಿಣ ಕನ್ನಡದ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದರು. ತಮ್ಮ ಅಧೀನದಲ್ಲಿ ಮೂವರು ತರಬೇತಿ-ಮ್ಯಾಜಿಸ್ಟ್ರೇಟರು ಇರುವುದು ಅವರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.
ಪ್ರತಿದಿನ ಬೆಳಿಗ್ಗೆ ೮ ಘಂಟೆಗೆ ತರಬೇತಿಗೆ ಹಾಜರಾಗಬೇಕೆಂದು ತಿಳಿಸಿದರು; ರಾತ್ರಿ ೮ ಘಂಟೆಗೆ ನಮ್ಮನ್ನು ವಾಪಾಸು ಕಳುಹಿಸುತ್ತಿದ್ದರು. ಬೆಳಗ್ಗೆ ೮ ಘಂಟೆಯಿಂದ ರಾತ್ರಿ ೮ರವರೆಗೆ, ದೇವಸ್ಥಾನಕ್ಕೆ ಹೋಗುವುದೂ ಸೇರಿದಂತೆ ಅವರು ಹೋದ ಕಡೆಯಲ್ಲೆಲ್ಲ ಅವರ ಜೊತೆಯಲ್ಲಿ ನಾವೂ ಹೋಗಬೇಕಾಗಿತ್ತಿತ್ತು. ಪ್ರತಿಯೊಂದು ಸ್ಥಳದಲ್ಲಿಯೂ ಆತ ನಮ್ಮನ್ನು ತಮ್ಮ ಮೇಲ್ವಿಚಾರಣೆಯಲ್ಲಿರುವ ಮೂವರು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರು ಎಂದು ಪರಿಚಯಿಸಿಕೊಡುತ್ತಿದ್ದರು. ಅಷ್ಟಾಗಿಯೂ ಎಲ್ಲ ಕಡೆಯೂ ನಮ್ಮನ್ನು ಗೌರವದಿಂದ ನೋಡಿಕೊಳ್ಳುವಂತೆ ನಿಗಾವಹಿಸುತ್ತಿದ್ದರು.
ಒಂದು ದಿನ ಅವರು ನಮ್ಮ ಜೊತೆ ಒಂದು ಪೊಲೀಸ್ ಠಾಣೆ ಪರೀಶೀಲಿಸಿದರು. ಅಲ್ಲಿ ಒಬ್ಬ ವ್ಯಕ್ತಿಯ ಕೈಕಾಲುಗಳನ್ನು ಕುರ್ಚಿಗೆ ಕಟ್ಟಿಹಾಕಲಾಗಿತ್ತು ಮತ್ತು ಒಂದು ಮಣ್ಣಿನ ಮಡಕೆ ಅವನ ತಲೆಯ ಮೇಲೆ ನೇತಾಡುತ್ತಿದ್ದು, ಅದರಿಂದ ಆ ವ್ಯಕ್ತಿಯ ತಲೆಯಮೇಲೆ ನೀರು ತೊಟ್ಟಿಕ್ಕುತ್ತಿತ್ತು. ಈ ರೀತಿ ಕಟ್ಟಿಹಾಕಲಾಗಿರುವ ವ್ಯಕ್ತಿ ತಲೆತಪ್ಪಿಸಿಕೊಂಡಿರುವನೆಂದೂ ಭಾವಿಸಲಾಗಿದೆ; ಅವನಿಗೆ ಊಟ ತಿಂಡಿ ಚೆನ್ನಾಗಿ ಕೊಡಲಾಗುತ್ತಿದೆಯಾದರೂ, ಅವನು ನಿಜ ಹೇಳುವಂತೆ ಮಾಡಲು ಅವನನ್ನು ನಿದ್ದೆ ಮಾಡಲು ಬಿಡುತ್ತಿಲ್ಲವೆಂದು ತಿಳಿಸಿದರು. ಮ್ಯಾಜಿಸ್ಟ್ರೇಟರುಗಳು ಜೀವನದ ವಾಸ್ತವತೆಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿದರು. ನುರಿತ ಅಪರಾಧಿಗಳ ಬಾಯಿಬಿಡಿಸುವುದು ಕಷ್ಟ; ಹಾಗಾಗಿ ಅವರು ನಿಜ ಹೇಳುವಂತೆ ಮಾಡಬೇಕಾದರೆ ಸ್ವಲ್ಪಮಟ್ಟಿಗೆ ತೃತೀಯ ದರ್ಜೆ ಕ್ರಮಗಳನ್ನು ಅನುಸರಿಸಬೇಕಾಗುವುದು ಎಂದು ಹೇಳಿದರು. ಆದರೂ ಅಂಥ ವಿಧಾನಗಳು ಅಮಾನವೀಯವಾಗಿರಬಾರದು.
ಆಪಾದಿತನು "ವಾಸ್ತವವಾಗಿ ತಾನು ಪರಾರಿಯಾಗಿರಲಿಲ್ಲ, ಬದಲಿಗೆ ತನ್ನನ್ನು ವಾಸ್ತವವಾಗಿ ಪೊಲೀಸ್ ಠಾಣೆಯಲ್ಲಿಯೇ ಬಂಧಿಸಲಾಗಿತ್ತು" ಎಂಬುದನ್ನು ವಿಚಾರಣೆಯ ಸಮಯದಲ್ಲಿ ಸಾಬೀತು ಪಡಿಸಲು ನಮ್ಮನ್ನು ಸಾಕ್ಷಿಗಳನ್ನಾಗಿ ಹೆಸರಿಸಬಹುದಾದ ಸಂಭವನೀಯತೆಯ ಭೀತಿ ನಮಗೆ ಇದ್ದೇ ಇತ್ತು. ಅದೃಷ್ಟವಶಾತ್ ಅವನು ಆ ರೀತಿ ಮಾಡಲಿಲ್ಲ ಮತ್ತು ಸಾಕ್ಷಿ ನುಡಿಯುವಂತೆ ನಮ್ಮನ್ನು ನ್ಯಾಯಾಲಯಕ್ಕೆ ಕರೆಯಲೂ ಇಲ್ಲ.
ಇನ್ನೊಂದು ಸಲ ಪೊಲೀಸ್ ಸೂಪರಿಂಟೆಂಡೆಂಟರು ನಮ್ಮನ್ನು ಮಂಗಳೂರಿನ ಸಮೀಪದ ಮೂಡಶೆಡ್ಡೆ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮನ್ನು -ಮೂವರು ಮ್ಯಾಜಿಸ್ಟ್ರೇಟರನ್ನು- ಅಣಕು ಅಪಹರಣ ಮಾಡುವಂತೆ ಇಪ್ಪತ್ತು ಪೊಲೀಸ್ ಕಾನ್ಸ್ಟೇಬಲುಗಳು ಗಲಭೆಯ ಗುಂಪಾಗುವಂತೆ ಹೇಳಿದ್ದರು. ನಮ್ಮನ್ನು ರಕ್ಷಿಸಲು ಇತರ ಇಪ್ಪತ್ತು ಕಾನ್ಸ್ಟೇಬಲುಗಳ ದಳ ನಿಯೋಜಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ರಕ್ಷಕರು ಟಿಯರ್ಗ್ಯಾಸ್ (ಅಶ್ರುವಾಯು) ಷೆಲ್ಗಳನ್ನು ಕೂಡ ಬಳಸಿದರು. ಅದು ನಮ್ಮ ಅನುಕೂಲಕ್ಕಾಗಿ ನಡೆಸಿದ ನಿಜವಾದ ಪ್ರದರ್ಶನವಾಗಿತ್ತು.
ತರಬೇತಿಯ ಇನ್ನುಳಿದ ಭಾಗ ಮಹತ್ತ್ವದ ಸಂಗತಿಗಳಿಲ್ಲದೆ, ಮಾಮೂಲಿಯಾಗಿತ್ತು.