೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್

೨೦೦ ಎಕ್ರೆ ಸಾವಯವ ತೋಟ: ತಿರುನೆಲ್‍ವೇಲಿಯ ಜೆ.ಸಿ. ಫಾರ್ಮ್

ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷಿಯಲ್ಲಿ ತೊಡಗಿದರು. ಕಳೆದ ೧೧ ವರುಷಗಳ ಅವರ ಕಾಯಕದ ಫಲ: ಸಾವಯವ ಕೃಷಿ ಲಾಭದಾಯಕವೆಂದು ಸಾಬೀತು ಮಾಡಿರುವುದು.
ಹಸುರು ಕ್ರಾಂತಿಯ ಅವಧಿಯಲ್ಲಿ ಲಕ್ಷಗಟ್ಟಲೆ ಕೃಷಿಕರು ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೀಡೆನಾಶಕಗಳನ್ನು ತಮ್ಮ ಹೊಲಗಳಿಗೆ ಸುರಿದು ಫಸಲಿನ ಪ್ರಮಾಣ ಹೆಚ್ಚಿಸಿದ್ದನ್ನು ಅವರು ಕಂಡಿದ್ದರು. ಕೆಲವೇ ವರುಷಗಳ ರಾಸಾಯನಿಕ ಕೃಷಿಯಿಂದಾಗಿ ಮಣ್ಣಿನ ಆರೋಗ್ಯ ಹದಗೆಟ್ಟು ಸಾವಿರಾರು ಎಕ್ರೆ ಕೃಷಿಜಮೀನು ಕೃಷಿಗೆ ನಿರುಪಯುಕ್ತ ಆದದ್ದನ್ನೂ ಕಂಡಿದ್ದರು.
ಆದ್ದರಿಂದಲೇ, ತಮಿಳ್ನಾಡಿನ ತಿರುನೆಲ್‍ವೇಲಿ ಜಿಲ್ಲೆಯ ಅಲನ್ಕುಲಮ್ ತಾಲೂಕಿನ ಉದಯಾಮ್-ಪುಲಿ ಗ್ರಾಮದ ಜೆ.ಸಿ.ಅಗ್ರೋ ಫಾರ್ಮಿನಲ್ಲಿ ರಾಸಾಯನಿಕರಹಿತ ಸಾವಯವ ಕೃಷಿ ಕೈಗೊಂಡರು. ಬಹುಬೆಳೆಗಳ ಕೃಷಿಯಲ್ಲಿ ತೊಡಗಿದರು. ಅವರ ಫಾರ್ಮಿನಲ್ಲೀಗ ೫೧,೦೦೦ ಮರಗಳು ಬೆಳೆದು ನಿಂತಿವೆ. ಸುಸ್ಥಿರ ಕೃಷಿಗಾಗಿ ಪಾರಂಪರಿಕ ಕೃಷಿವಿಧಾನಗಳ ಜೊತೆ ಜೀವಚೈತನ್ಯ ಕೃಷಿವಿಧಾನಗಳು ಹಾಗೂ ನೂತನ ತಂತ್ರಜ್ನಾನ ಅಳವಡಿಸಿಕೊಂಡಿದ್ದಾರೆ.
ಜೆ.ಸಿ. ಅಗ್ರೋ ಫಾರ್ಮನ್ನು “ಸಾವಯವ ಕೃಷಿ ಫಾರ್ಮ್” ಎಂದು ಪ್ರಮಾಣೀಕರಿಸಿದೆ, ಸಾವಯವ ಕೃಷಿ ಪ್ರಮಾಣೀಕರಣ ಸಂಸ್ಥೆ ಡೆಮಿಟರ್. ತಮಿಳ್ನಾಡು ಸರಕಾರವು ಸಾವಯವ ಕೃಷಿ ಮತ್ತು ಜೀವಚೈತನ್ಯ ಕೃಷಿಯ ತರಬೇತಿಗಾಗಿ ಜಯಚಂದ್ರನರನ್ನು ಸಂಪನ್ಮೂಲ ವ್ಯಕ್ತಿ ಎಂದು ನೇಮಿಸಿರುವುದು ಅವರ ಸಾಧನೆಗೆ ಸಂದ ಗೌರವ.
ಜೀವಚೈತನ್ಯ ಕೃಷಿ ಎಂಬುದು ಸಾವಯವ ಕೃಷಿಯ ಒಂದು ಶಾಖೆ. ಇದರಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಇಲ್ಲವೇ ಇಲ್ಲ. ರುಡಾಲ್ಫ್ ಸ್ಟೀನರ್ ಎಂಬವರು ಶುರು ಮಾಡಿದ ಇದು ಖಗೋಲ ಶಾಸ್ತ್ರದ ಆಧಾರದಿಂದ ಕೃಷಿ ಮಾಡುವ ವಿಧಾನ. ಇದರಲ್ಲಿ ಮಣ್ಣಿನ ಆರೋಗ್ಯಕ್ಕೆ ಪ್ರಾಮುಖ್ಯತೆ. ಮಣ್ಣಿನ ಫಲವತ್ತತೆ, ಸಸ್ಯಗಳ ಬೆಳವಣಿಗೆ ಮತ್ತು ಪಶುಸಂಗೋಪನೆ – ಇವು ಪರಿಸರದಲ್ಲಿ ಪರಸ್ಪರ ಪೂರಕ ಚಟುವಟಿಕೆಗಳು ಎಂಬುದು ಇದರ ಪ್ರಧಾನ ಸೂತ್ರ.
ಭತ್ತ, ತೆಂಗು, ಬಾಳೆ, ಕಿತ್ತಳೆ, ಮಾವು, ಚಿಕ್ಕು, ನೆಲ್ಲಿ, ನುಗ್ಗೆ, ತರಕಾರಿಗಳು, ವಿದೇಶೀ ಮೂಲದ ಹಣ್ಣುಗಳು, ೧೮ ವಿಧದ ಔಷಧೀಯ ಸಸ್ಯಗಳು –ಇವು ಜೆ.ಸಿ. ಫಾರ್ಮಿನ ಪ್ರಧಾನ ಬೆಳೆಗಳು. ಜೊತೆಗೆ ತೇಗ ಮತ್ತು ಬೇವಿನ ಮರಗಳನ್ನೂ ಬೆಳೆಯಲಾಗಿದೆ.
ಅಲ್ಲಿನ ಡೈರಿಯಲ್ಲಿರುವ ದೇಸಿ ದನಗಳ ಸಂಖ್ಯೆ ೫೨. ಹಾಲು, ಮೊಸರು ಮತ್ತು ತುಪ್ಪ ಡೈರಿಯ ಉತ್ಪನ್ನಗಳು. ಡೈರಿಯಿಂದ ಸಿಗುವ ಸೆಗಣಿ ಮತ್ತು ಮೂತ್ರ ಬಳಸಿ ಉತ್ತಮ ಗುಣಮಟ್ಟದ ಸಾವಯವ ಮತ್ತು ಜೀವಚೈತನ್ಯ ಗೊಬ್ಬರ ತಯಾರಿಸಲಾಗುತ್ತಿದೆ. ಪಂಚಗವ್ಯ, ಅಮೃತಕರೈಸಾಲ್, ಜೀವಾಮೃತ; ಪರಿಣಾಮಕಾರಿ ಸೂಕ್ಷ್ಮಜೀವಿಗಳು (ಇಎಂಓ), ಜೈವಿಕ ಎನ್‍ಪಿಕೆ, ಎರೆಹುಳಗೊಬ್ಬರ, ಮೀನು ಪ್ರೊಟೀನ್,– ಇವು ಜೆ.ಸಿ. ಫಾರ್ಮ್ ಉತ್ಪಾದಿಸುತ್ತಿರುವ ಜೈವಿಕ ಗೊಬ್ಬರಗಳು. ಇವನ್ನು ಸಸ್ಯಗಳಿಗೆ ಒದಗಿಸುತ್ತಿರುವ ಕಾರಣ ಅಲ್ಲಿ ಸಮೃದ್ಧ ಫಸಲು.
ಮಳೆನೀರು ಕೊಯ್ಲಿನ ರಚನೆಗಳಿಗಾಗಿ ಜೆ.ಸಿ. ಫಾರ್ಮಿನಲ್ಲಿ ಮಾಡಿರುವ ವೆಚ್ಚ ಒಂದು ಕೋಟಿ ರೂಪಾಯಿ. ಅಲ್ಲಿನ ಆರು ಇಂಗುಗುಂಡಿಗಳು ಸಾವಿರಗಟ್ಟಲೆ ಲೀಟರ್ ಮಳೆನೀರನ್ನು ಮಣ್ಣಿನಾಳಕ್ಕೆ ಇಂಗಿಸುತ್ತಿವೆ. ಫಾರ್ಮಿನ ಉದ್ದಗಲದಲ್ಲಿ ಅಗೆದಿರುವ ಕಾಲುವೆಗಳಲ್ಲಿ ಅಲ್ಲಲ್ಲಿ ನಿರ್ಮಿಸಿರುವ ತಡೆಗಟ್ಟಗಳು ಹರಿದು ಹೋಗುವ ಮಳೆನೀರನ್ನು ಜಮೀನಿನಲ್ಲಿ ಇಂಗಿಸಲು ಸಹಕಾರಿ. ಈ ಎಲ್ಲ ರಚನೆಗಳಿಂದಾಗಿ ಜೆ.ಸಿ. ಫಾರ್ಮಿನಲ್ಲಿ ಕೊಯ್ಲಾಗುತ್ತಿರುವ ಮಳೆನೀರಿನ ವಾರ್ಷಿಕ ಪ್ರಮಾಣ ಎರಡು ಕೋಟಿ ಲೀಟರ್! ಫಾರ್ಮಿನಲ್ಲಿ ಕೊರೆದಿರುವ ೨೬ ಕೊಳವೆಬಾವಿಗಳ ನೀರನ್ನು ಹನಿನೀರಾವರಿ ಮೂಲಕ ಗಿಡಗಳಿಗೆ ಒದಗಿಸಲಾಗುತ್ತಿದೆ.
“ಕೃಷಿಯನ್ನು ಬೆಳೆಬೆಳೆಸುವುದು ಮತ್ತು ಫಸಲು ಮಾರುವುದಕ್ಕೆ ಸೀಮಿತಗೊಳಿಸಬಾರದು. ಮೌಲ್ಯವರ್ಧನೆಯಿಂದ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯ. ಉದಾಹರಣೆಗೆ, ಒಬ್ಬ ಟೊಮೆಟೊ ಬೆಳೆಗಾರ ಟೊಮೆಟೊಗಳನ್ನೇ ಮಾರಬಹುದು. ಇಲ್ಲವಾದರೆ ಟೊಮೆಟೊ ಜ್ಯೂಸ್, ಜಾಮ್ ಅಥವಾ ಸಾಸ್ ತಯಾರಿಸಿ ಮಾರಬಹುದು. ಹೀಗೆ ಮಾರಿದಾಗಲೇ ಹೆಚ್ಚು ಲಾಭ” ಎನ್ನುತ್ತಾರೆ ಜಯಚಂದ್ರನ್. ಈ ಸೂತ್ರ ಅನುಸರಿಸುವ ಜೆ.ಸಿ. ಫಾರ್ಮಿನಲ್ಲಿ ಹಣ್ಣು, ತರಕಾರಿ, ಎಣ್ಣೆಬೀಜಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ, ಉತ್ಪನ್ನಗಳನ್ನು ಮಾರಲಾಗುತ್ತಿದೆ.
ಜೆ.ಸಿ. ಫಾರ್ಮಿನಲ್ಲಿ ಸೌರಶಕ್ತಿಯಿಂದ ಚಾಲನೆಯಾಗುವ ಒಣಗಿಸುವ ಮತ್ತು ಹುಡಿಮಾಡುವ ಯಂತ್ರವಿದೆ. ಇದನ್ನು ಬಳಸಿ, ನುಗ್ಗೆ ಎಲೆ ಹುಡಿ, ನುಗ್ಗೆ-ಚಹಾಹುಡಿ, ನುಗ್ಗೆ ಸೂಪ್ ಹುಡಿ, ಕರಿಬೇವಿನ ಎಲೆಹುಡಿ, ಹರಿವೆ ಸೂಪ್ ಹುಡಿ, ವಿವಿಧ ಹರ್ಬಲ್ ಚಹಾಹುಡಿ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಸಾಸಿವೆ, ನೆಲಗಡಲೆ ಮತ್ತು ತೆಂಗಿನೆಣ್ಣೆ ಉತ್ಪಾದಿಸಲಿಕ್ಕಾಗಿ ಫಾರ್ಮಿನಲ್ಲಿ ಮರದ ಕೋಲ್ಡ್-ಪ್ರೆಸ್ಡ್ ಘಟಕವೂ ಇದೆ. ಈ ಯಂತ್ರೋಪಕರಣಗಳ ಸೇವೆಯನ್ನು ಸುತ್ತಮುತ್ತಲಿನ ಸಣ್ಣ ಮತ್ತು ಅತಿಸಣ್ಣ ರೈತರಿಗೂ ಒದಗಿಸಲಿಕ್ಕಾಗಿ ಜೆ.ಸಿ. ಫಾರ್ಮ್ ಯೋಜನೆಯೊಂದನ್ನು ರೂಪಿಸಿದೆ. ಜೆ.ಸಿ. ಫಾರ್ಮಿನ ಹೊಲಗಳು, ಜೈವಿಕ ಗೊಬ್ಬರ ಉತ್ಪಾದನಾ ಮತ್ತು ಸಂಸ್ಕರಣಾ ಘಟಕಗಳು ಮತ್ತು ಸೂಕ್ಷ್ಮಜೀವಿ ಪ್ರಯೋಗಾಲಯದಲ್ಲಿ ದುಡಿಯುತ್ತಿರುವ ೫೫ ಕೆಲಸಗಾರರಲ್ಲಿ ೩೬ ಮಹಿಳೆಯರು ಎಂಬುದು ಗಮನಾರ್ಹ.
“ಇದೆಲ್ಲ ಸುಲಭವಾಗಿ ಆಗಲಿಲ್ಲ. ಮೊದಲ ಮೂರು ವರುಷ ನಮಗೆ ನಷ್ಟವೇ ಆಯಿತು. ಅನಂತರ ನಮ್ಮ ಫಾರ್ಮ್ ಲಾಭ ಗಳಿಸಲು ಸಾಧ್ಯವಾಯಿತು. ಅದೇನಿದ್ದರೂ, ಸಾವಯವ ಕೃಷಿ ನಷ್ಟದ ಚಟುವಟಿಕೆ ಎಂಬ ತಪ್ಪು ತಿಳಿವಳಿಕೆ ಬದಲಾಗಬೇಕು. ಸ್ವಲ್ಪ ಸಮಯ ಕಷ್ಟ ಪಡಬೇಕಾಗುತ್ತದೆ, ನಿಜ. ಕ್ರಮೇಣ ಕೃಷಿಯ ವೆಚ್ಚ ಕಡಿಮೆಯಾಗಿ, ಸಾವಯವ ಕೃಷಿಯಿಂದ ಸಿಗುವ ಲಾಭ ಹೆಚ್ಚಾಗುತ್ತದೆ. ಇದನ್ನು ತಿಳಿಯಲಿಕ್ಕಾಗಿ, ಆಯವ್ಯಯದ ದಾಖಲೆ ಇಟ್ಟುಕೊಳ್ಳುವುದು ಅಗತ್ಯ. ಅಂತಿಮವಾಗಿ, ಕೃಷಿಯಲ್ಲಿ ಕೇವಲ ಆಸಕ್ತಿಯಿದ್ದರೆ ಸಾಲದು. ಕೃಷಿಯ ಪ್ರತಿಯೊಂದು ಹಂತದಲ್ಲಿಯೂ ಪೂರ್ಣವಾಗಿ ತೊಡಗಿಸಿಕೊಂಡರೆ, ಸಾವಯವ ಕೃಷಿಯಿಂದ ಯಶಸ್ಸು ಖಂಡಿತ” ಎಂದು ತಮ್ಮ ಹನ್ನೊಂದು ವರುಷಗಳ ಅನುಭವದ ಬಲದಿಂದ ತಿಳಿಸುತ್ತಾರೆ, ೭೩ ವರುಷ ವಯಸ್ಸಿನ ಜಯಚಂದ್ರನ್.
ಈಗಾಗಲೇ  ವಿವಿಧ ರಾಜ್ಯಗಳ ೧,೫೦೦ ಕೃಷಿಕರಿಗೂ ವಿದ್ಯಾರ್ಥಿಗಳಿಗೂ ತಮ್ಮ ಫಾರ್ಮಿನಲ್ಲಿ ಧರ್ಮಾರ್ಥವಾಗಿ ಸಾವಯವ ಕೃಷಿಯ ತರಬೇತಿ ನೀಡಿದ್ದಾರೆ ಜಯಚಂದ್ರನ್. “ಕೃಷಿ ಬಗ್ಗೆ ಕಲಿಯಲು ಆಸಕ್ತಿಯಿರುವ ಎಲ್ಲರಿಗೂ ತಮ್ಮ ಫಾರ್ಮಿಗೆ ಸ್ವಾಗತ” ಎಂಬುದು ಅವರ ಮುಕ್ತ ಆಹ್ವಾನ.