೨೦೨೦ರ ಸಾಲಿನ ‘ಸಂಪದ’ ಟಾಪ್ ೧೦
‘ಸಂಪದ’ ಜಾಲತಾಣಕ್ಕೆ ಹಲವಾರು ಮಂದಿ ತಮ್ಮ ಲೇಖನ, ಕಥೆ, ಕವನಗಳನ್ನೆಲ್ಲಾ ಬರೆಯುತ್ತಾರೆ. ಇದರಿಂದ ೨೦೨೦ರ ವರ್ಷದಲ್ಲಿ ನನಗೆ ಉತ್ತಮವೆನಿಸಿದ ಟಾಪ್ ೧೦ ಬರಹಗಳನ್ನು ಆಯ್ದು ನಾನು ಪಟ್ಟಿ ಮಾಡಿರುವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಓದುಗರಾದ ನೀವೂ ನಿಮ್ಮ ಟಾಪ್ ೧೦ ಬರಹಗಳನ್ನು ಆಯ್ಕೆ ಮಾಡಬಹುದು. ಸಂಪದದಲ್ಲಿರುವ ಹಲವಾರು ವಿಭಾಗಗಳಿಗೆ ನ್ಯಾಯ ದೊರೆಯುವಂತೆ ಮಾಡಲು ನಾನು ಲೇಖನಗಳ ಜೊತೆ ಒಂದು ಕಥೆ, ಒಂದು ಪುಸ್ತಕ ಪರಿಚಯ ಮತ್ತು ಒಂದು ಹೊಸ ರುಚಿಗೂ ಸ್ಥಾನ ಕಲ್ಪಿಸಿರುವೆ. ಕವನಗಳ ಬಗ್ಗೆ ನನ್ನ ಜ್ಞಾನ ಕಮ್ಮಿ. ಆ ಕಾರಣದಿಂದ ನಾನು ಯಾವುದೇ ಕವನಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಕವಿಗಳು ಬೇಸರ ಮಾಡಿಕೊಳ್ಳುವುದು ಬೇಡ. ಗೊತ್ತಿಲ್ಲದ ವಿಷಯದ ಬಗ್ಗೆ ವೃಥಾ ಗೊಂದಲ ಸೃಷ್ಟಿಸಲು ನನಗೆ ಆಸಕ್ತಿ ಇಲ್ಲ.
ನನ್ನ ಆಯ್ಕೆಯ ಟಾಪ್ ೧೦ ಬರಹಗಳು ಈ ರೀತಿಯಾಗಿವೆ.
೧. ಮನುಷ್ಯನ ಕೌರ್ಯವನ್ನು ತೆರೆದಿಡುವ ಕಾಂಬೋಡಿಯಾದ ‘ಜಿನೋಸೈಡ್' ಮ್ಯೂಜಿಯಂ- ಲೇ: ಟಿ.ಆರ್. ಭಟ್ - ಪ್ರಕಟಿತ ಮಾಸ: ಜೂನ್ ೨೦೨೦
ಕಾಂಬೋಡಿಯಾಗೆ ಪ್ರವಾಸ ಹೋದ ಲೇಖಕರು ಬಹುತೇಕರಿಗೆ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮನುಷ್ಯ ಕ್ರೂರನಾದರೆ ಏನೆಲ್ಲಾ ಮಾಡಬಹುದು ಎಂಬುದನ್ನು ಈ ಲೇಖನ ಓದಿದಾಗ ತಿಳಿಯುತ್ತದೆ.
೨. ಮಾನಸಿಕ ಒತ್ತಡ ನಿರ್ವಹಣೆ ಮತ್ತು ಮನಸ್ಸಿನ ಮ್ಯಾಜಿಕ್ - ಅಡ್ದೂರು ಕೃಷ್ಣ ರಾವ್ - ನವೆಂಬರ್ ೨೦೨೦
ಈಗಿನ ಯಾಂತ್ರಿಕ ಜೀವನದಲ್ಲಿ ಎಲ್ಲರಿಗೂ ಒತ್ತಡದ ಬದುಕು. ಕೆಲಸ ಮಾಡುವವರಿಗೆಲ್ಲಾ ಕ್ಲಪ್ತ ಕಾಲದಲ್ಲಿ ಕೆಲಸ ಮುಗಿಸುವ ಒತ್ತಡ. ಹೀಗೆ ಹತ್ತು ಹಲವಾರು ವಿಷಯಗಳಿಂದ ನಮ್ಮ ಮನಸ್ಸು ತುಂಬಾ ಒತ್ತಡಕ್ಕೊಳಗಾಗುತ್ತದೆ. ಇದರಿಂದ ನಮ್ಮ ಆರೋಗ್ಯವೂ ಕೆಡುತ್ತದೆ. ಈ ವಿಷಯದ ಕುರಿತಾದ ಸೊಗಸಾದ ಪುಸ್ತಕ ಬರೆದಿದ್ದಾರೆ ಅಡ್ಡೂರು ಕೃಷ್ಣ ರಾವ್ ಇವರು. ಅವರ ಪುಸ್ತಕದ ಬಗ್ಗೆ ಹಾಗೂ ಅವರ ಕೆಲವು ಅನುಭವಗಳ ಬಗ್ಗೆ ಅವರು ಬರೆದ ಲೇಖನವನ್ನು ಓದಿಯೇ ಆನಂದಿಸಬೇಕು.
೩. ನೀವು ಇಲ್ಲಿ ಟೀ ಕುಡಿದ ನಂತರ ಟೀಕಪ್ ತಿನ್ನಬಹುದು! - ಅಶ್ವಿನ್ ರಾವ್ - ಜುಲೈ ೨೦೨೦
ಮಧುರೈನ ಈ ಚಹಾ ಅಂಗಡಿಯಲ್ಲಿ ನೀವು ವಿಶೇಷ ರೀತಿಯ ಟೀಕಪ್ ಗಮನಿಸಬಹುದು. ಇದು ಬಿಸ್ಕಿಟ್ ಟೀ ಕಪ್. ನೀವು ಇಲ್ಲಿ ಚಹಾ ಕುಡಿದ ಬಳಿಕ ಆ ಕಪ್ ಅನ್ನು ತಿನ್ನಲೂ ಬಹುದು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಕಪ್ ಅನ್ನು ಬಳಸದೇ ಇರಲು ಈ ಯೋಜನೆ. ಇದು ಯಾರಿಗೆ ಹೊಳೆದದ್ದು, ಅವರು ಏನೆಲ್ಲಾ ಯೋಜನೆಗಳನ್ನು ಮಾಡಿದರು ಎಂದು ತಿಳಿಯಲು ಈ ಲೇಖನ ಓದಲೇ ಬೇಕು
೪. ಸೋದರರ ಸಾವಯವ ಕೃಷಿ ವಹಿವಾಟು ವರುಷಕ್ಕೆ ಮೂರು ಕೋಟಿ ರೂಪಾಯಿ - ಅಡ್ಡೂರು ಕೃಷ್ಣ ರಾವ್ - ಜುಲೈ ೨೦೨೦
ಸಾವಯವ ಕೃಷಿ ಲಾಭದಾಯಕವಲ್ಲ ಎಂದು ಹೇಳುವವರಿಗಾಗಿಯೇ ಲೇಖಕರು ಈ ಲೇಖನವನ್ನು ಬರೆದಿರುವಂತಿದೆ. ಯಾರು ಈ ಸಹೋದರರು? ಏನು ಕೃಷಿ ಮಾಡುತ್ತಾರೆ? ಹೇಗೆ ಲಾಭ ದೊರೆಯಿತು? ಎಂದೆಲ್ಲಾ ತಿಳಿಯಲು ಈ ಲೇಖನ ಓದಿ.
೫. ‘ಡೆವಿಲ್ಸ್ ಕೆಟಲ್' ಎಂಬ ನಿಗೂಢ ಜಲಪಾತ ಗುಂಡಿಯ ಸುತ್ತ... - ಅಶ್ವಿನ್ ರಾವ್- ಆಗಸ್ಟ್ ೨೦೨೦
ಹರಿಯುವ ನದಿ, ಜಲಪಾತ ರೂಪ ತಾಳುವ ಸಂದರ್ಭದಲ್ಲಿ ಎರಡು ಕವಲಾಗುತ್ತದೆ. ಒಂದು ಕವಲಿನಲ್ಲಿ ಜಲಪಾತ ಸೃಷ್ಟಿಯಾದರೆ ಮತ್ತೊಂದು ಕವಲಿನಲ್ಲಿ ಹರಿವ ನೀರು ಒಂದು ನಿಗೂಢ ಗುಂಡಿಗೆ ಬೀಳುತ್ತದೆ. ಆ ನೀರು ಎಲ್ಲಿ ಹೋಗುತ್ತದೆ? ಎಂಬುದನ್ನು ಅರಿಯಲು ನೀವು ಈ ಲೇಖನ ಓದಲೇ ಬೇಕು
೬. ಬರಪೀಡಿತ ಜಿಲ್ಲೆ ಹಸುರಾಗಿಸಲು ಮಳೆಕೊಯ್ಲು - ಜಲ ಸಂರಕ್ಷಣೆ - ಅಡ್ದೂರು ಕೃಷ್ಣ ರಾವ್ - ಫೆಬ್ರವರಿ ೨೦೨೦
ಜಲಸಂರಕ್ಷಣೆಯ ಬಗ್ಗೆ ಮಾಹಿತಿಗಾಗಿ ಈ ಲೇಖನ.
೭. ಪುಸ್ತಕ ಪರಿಚಯ - ವಿಷ್ಣು ಭಟ್ ಗೋಡ್ಸೆಯ ‘ನನ್ನ ಪ್ರವಾಸ' - ಶ್ರೀರಾಮ ದಿವಾಣ - ನವೆಂಬರ್ ೨೦೨೦
ಇದೊಂದು ಪುಸ್ತಕ ಪರಿಚಯವಾದರೂ ವಿಷ್ಣು ಭಟ್ ಗೋಡ್ಸೆಯ ‘ನನ್ನ ಪ್ರವಾಸ' ದ ಬಗ್ಗೆ ಪ್ರತಿಯೊಂದೂ ಸಣ್ಣ ಸಣ್ಣ ಮಾಹಿತಿಯನ್ನು ಲೇಖಕರು ಸೊಗಸಾಗಿ ಪರಿಚಯ ಮಾಡಿದ್ದಾರೆ. ಇದನ್ನು ಓದಿದ ಬಳಿಕ ನಿಮಗೆ ಖಂಡಿತವಾಗಿಯೂ ಆ ಪುಸ್ತಕ ಓದುವ ಮನಸ್ಸು ಆಗಿಯೇ ಆಗುತ್ತದೆ.
೮. ಕಥಾಲೋಕ - ಮತ್ತೆ ನೆನಪಾದಳು ಕಪ್ಪು ಹುಡುಗಿ! - ಅಶ್ವಿನ್ ರಾವ್ - ಆಗಸ್ಟ್ ೨೦೨೦
ಇದೊಂದು ಕಥೆ. ಟೈಂಪಾಸ್ ಗೆ ಎಂದು ಓದಿದರೂ ಉತ್ತಮ ಸಂದೇಶವನ್ನು ಹೊಂದಿದೆ
೯. ಕೊಡಗಿನ ಕಾವೇರಿ ಜೀವನದಿಯಾಗಿ ಉಳಿದೀತೇ? - ಅಡ್ಡೂರು ಕೃಷ್ಣ ರಾವ್ - ಎಪ್ರಿಲ್ ೨೦೨೦
ಕಳೆದ ಕೆಲವು ವರ್ಷಗಳಲ್ಲಿ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದೆ. ಈ ಕುರಿತಾದ ಮಾಹಿತಿಪೂರ್ಣ ಬರಹವನ್ನು ಓದಬಹುದು
೧೦. ಹೊಸ ರುಚಿ- ಮಖಾನಾ (ತಾವರೆ) ಬೀಜದ ಮಸಾಲಾ - ಶಾರದಾ ಎನ್- ಅಕ್ಟೋಬರ್ ೨೦೨೦
ತಾವರೆ ಬೀಜ ಅಥವಾ ಮಖಾನಾ ಸೀಡ್ಸ್ ಬಗ್ಗೆ ಈಗೀಗ ತುಂಬಾನೇ ಮಾತುಗಳು ಕೇಳಿ ಬರುತ್ತಿವೆ. ಅದರ ಆರೋಗ್ಯಕರ ಗುಣಗಳು, ವಿವಿಧ ಬಗೆಯ ಖಾದ್ಯಗಳು ಎಲ್ಲವೂ ಬೆಳಕಿಗೆ ಬರುತ್ತಿವೆ. ಆ ಕಾರಣಕ್ಕಾಗಿಯೇ ಈ ಹೊಸ ರುಚಿಯನ್ನು ನಾನು ಟಾಪ್ ೧೦ರ ಪಟ್ಟಿಗೆ ಆಯ್ಕೆ ಮಾಡಿದ್ದೇನೆ.
ಎಲ್ಲಾ ಲೇಖನಗಳನ್ನು ಒಮ್ಮೆ ಓದಿ ನೋಡಿ. ನಿಮ್ಮಲ್ಲೂ ಟಾಪ್ ೧೦ ಬರೆಯುವ ಹುಮ್ಮಸ್ಸು ಇದ್ದರೆ ಖಂಡಿತಾ ಬರೆಯಿರಿ. ಇನ್ನಷ್ಟು ಮಂದಿಗೆ ಇದರ ಪ್ರಯೋಜನವಾಗಲಿದೆ. ಈ ಎಲ್ಲಾ ಬರಹಗಳು ಸಂಪದ.ನೆಟ್ ನ ‘ಸಂಪದ ಆರ್ಕೈವ್' ವಿಭಾಗದ ಅಡಿಯಲ್ಲಿ ಕಂಡು ಬರುತ್ತದೆ. ಆಯಾ ತಿಂಗಳನ್ನು ಆಯ್ಕೆ ಮಾಡುವುದರ ಮೂಲಕ ಬರಹಗಳನ್ನು ಓದಬಹುದು.