೨೦೨೩ರ ಹೊಸ್ತಿಲಲ್ಲಿ ಬೇಂದ್ರೆ ಅಜ್ಜನ ಮಾತು ನೆನಪಿಸಿಕೊಳ್ಳುತ್ತಾ...
ಮತ್ತೊಂದು ವರ್ಷ ಕಳೆದಿದೆ, ಹೊಸ ವರ್ಷ ಬಂದಿದೆ. ಕ್ಯಾಲೆಂಡರ್ ಮಾತ್ರ ಚೇಂಜ್ ಎನ್ನಿ, ನಮಗೆ ಹೊಸ ವರ್ಷ ಯುಗಾದಿ ಎನ್ನಿ. ಏನೇ ಅಂದರೂ ವರ್ಷ ಬದಲಾಗಿದೆ. ಕಳೆದ ವರ್ಷದ ಪ್ರಾರಂಭದಲ್ಲಿ ಒಂದಿಷ್ಟು ಕೊರೋನಾ ಉಪಟಳ ಇದ್ದದ್ದು ಹೌದು. ನಂತರದ ದಿನಗಳಲ್ಲಿ ಅದು ಕರಗಿ ಜನಜೀವನ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳಲಾರಂಬಿಸಿತು. ಬಹಳಷ್ಟು ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯತ್ತ ಮುಖ ಮಾಡಿತು. ಜನರೂ ತಮ್ಮ ಸಹಜ ಜೀವನದತ್ತ ವಾಲಿದರು. ಸಭೆ ಸಮಾರಂಭ, ಹಬ್ಬಗಳು ತಮ್ಮ ಮೊದಲಿನ ರೂಪವನ್ನು ಪಡೆದುಕೊಳ್ಳಲಾರಂಭಿದವು. ಆದರೆ ೨೦೨೨ರ ವರ್ಷಾಂತ್ಯಕ್ಕೆ ಮತ್ತೆ ಕೊರೋನಾ ಗುಮ್ಮ ಕಾಡಲಾರಂಭಿಸಿದೆ. ನಿಧಾನವಾಗಿ ಕೊರೋನಾ ಕರಿನೆರಳು ಭಾರತದ ಮೇಲೆ ಬೀಳುವ ನಿರೀಕ್ಷೆ ಇದೆ. ಏಕೆಂದರೆ ಚೀನಾದಲ್ಲಿ ಕೊರೋನಾ ಸ್ಫೋಟವಾಗಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ. (ಚೀನಾದಂತಹ ದೇಶಗಳಲ್ಲಾಗುವ ಬೆಳವಣಿಗೆ, ಘಟನಾವಳಿಗಳು ಹೊರ ಜಗತ್ತಿಗೆ ಸುಲಭದಲ್ಲಿ ತಿಳಿದು ಬರುವುದಿಲ್ಲ. ನೂರು ಮಂದಿ ಸತ್ತರೆ ಮೂರು ಮಂದಿ ಸತ್ತರು ಎಂದು ಮಾಹಿತಿ ನೀಡುತ್ತಾರೆ. ಅಲ್ಲಿಯ ಪತ್ರಿಕೆಗಳು, ಟಿವಿಗಳು ಅದೇ ಸರಕಾರ ನೀಡಿದ ಸುದ್ದಿಗಳನ್ನು ಬಿತ್ತರಿಸುತ್ತಾರೆ). ಆದರೂ ಕೊರೋನಾ ಸಾಂಕ್ರಾಮಿಕದ ಉಪಟಳವನ್ನು ಅಲ್ಲಗಳೆಯುವಂತಿಲ್ಲ.
ಹಳೆಯ ವರ್ಷ ಹಲವಾರು ಮಂದಿಗೆ ಗೆಲುವು ತಂದುಕೊಟ್ಟರೂ, ಹಲವಾರು ಮಂದಿ ಸೋಲಿನ ರುಚಿ ಕಂಡಿರುವುದು ನಿಜ. ಈ ಸಂದರ್ಭದಲ್ಲಿ ನನಗೆ ಬೇಂದ್ರೆ ಅಜ್ಜನ (ವರಕವಿ ದ ರಾ ಬೇಂದ್ರೆ) ಮಾತೊಂದು ನೆನಪಾಗುತ್ತದೆ. “ಸೋತವನಿಗೆ ಮಾತ್ರ ಗೆಲ್ಲಲು ಮತ್ತೊಂದು ಅವಕಾಶ ಇರುತ್ತದೆ.” ಎಷ್ಟು ಸತ್ಯವಾದ ಮಾತಲ್ಲವೇ? ಸೋಲು ಕಂಡವನು ಮಾತ್ರ ಗೆಲುವಿನ ಸ್ವಾದವನ್ನು ಆಸ್ವಾದಿಸಬಲ್ಲ. ಏಕೆಂದರೆ ಆತನಿಗೆ ಸೋಲಿನ ಕಹಿ ಗೊತ್ತಿದೆ. ಸೋಲೇ ಕಾಣದವನು ಗೆಲುವಿನ ಹೆಜ್ಜೆಗಳ ಬಗ್ಗೆ ಮಾತನಾಡಲಾರ, ಬರೆಯಲಾರ, ಹೇಳಲಾರ. ಏಕೆಂದರೆ ಸೋಲು ಮಾತ್ರ ಗೆಲ್ಲುವಿನ ರುಚಿಯನ್ನು ತಿಳಿಸಿಕೊಡುತ್ತದೆ. ನೀವು ಸಾಗುವ ದಾರಿಯಲ್ಲಿ ಇದ್ದ ಕಲ್ಲು ಮುಳ್ಳುಗಳೇ ನಿಮಗೆ ಸಂಕಷ್ಟವನ್ನು ಎದುರಿಸುವ ಮಾರ್ಗವನ್ನು ಹೇಳಿಕೊಡುತ್ತದೆ. ನೀವು ಕ್ರಮೇಣ ಗೆಲುವಿನ ದಾರಿಯಲ್ಲಿ ಸಾಗುತ್ತೀರಿ.
“ಒಳ್ಳೆಯ ರಸ್ತೆಗಳು ಉತ್ತಮ ಚಾಲಕನನ್ನು ಸೃಷ್ಟಿಸಲಾರವು' ಎಂಬ ಒಂದು ಆಂಗ್ಲ ಮಾತಿದೆ. ಅದರಂತೆ ನೀವು ಒಳ್ಳೆಯ ವಾಹನ ಚಾಲಕರಾಗಬೇಕಾದರೆ, ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಮುನ್ನುಗ್ಗಬೇಕಾದರೆ ನೀವು ನೇರವಾದ ರಸ್ತೆಗಳಲ್ಲಿ ನಿಮ್ಮ ಪ್ರಯಾಣವನ್ನು ಆರಂಭಿಸಬಾರದು. ನಿಮ್ಮ ದಾರಿಗಳು ಅಂಕುಡೊಂಕಾಗಿದ್ದರೆ (ಕಷ್ಟಭರಿತ) ನಿಮಗೆ ಪ್ರಾರಂಭದಲ್ಲಿ ಸ್ವಲ್ಪ ಕಷ್ಟದ ಅನುಭವವಾದರೂ, ನಂತರ ನೀವು ಆ ದಾರಿಯಲ್ಲಿ ನಿಮ್ಮ ಯಶಸ್ಸನ್ನು ಕಂಡುಕೊಳ್ಳುತ್ತೀರಿ. ಇದು ಸತ್ಯ ಮಾತು.
ಯಾವುದೇ ವಿಭಾಗದಲ್ಲಿ ಗಮನಿಸಿ, ಸೋಲುವುದನ್ನು ನೋಡಿದವನೇ ನಂತರದ ದಿನಗಳಲ್ಲಿ ಗೆದ್ದು ಬರುವುದನ್ನು ಕಲಿಯುತ್ತಾನೆ. ಭಾರತ ಕ್ರಿಕೆಟ್ ತಂಡ ಕಂಡ ‘ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ ಮಾತು ಏನು ಗೊತ್ತೇ? “ನಾನು ನನ್ನ ಕ್ರಿಕೆಟ್ ಜೀವನದ ಪ್ರಾರಂಭಿಕ ದಿನಗಳಲ್ಲಿ ಬಹಳಷ್ಟು ಸೋಲುಗಳನ್ನು ಕಂಡೆ. ಆದರೆ ಆ ಸೋಲಿನಿಂದ ನಾನು ಧೈರ್ಯಗೆಡಲಿಲ್ಲ. ನಿಧಾನವಾಗಿ ಯಶಸ್ಸು ನನ್ನನ್ನು ಹಿಂಬಾಲಿಸತೊಡಗಿತು" ಹೌದು, ತಮ್ಮ ಆಟದ ಪ್ರಾರಂಭದ ದಿನಗಳಲ್ಲಿ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ಶೈಲಿಯನ್ನು ಟೀಕಿಸಿದವರೇ ಹೆಚ್ಚು ಮಂದಿ. ಆದರೆ ಯಾವಾಗ ಅವರು ಟೆಸ್ಟ್ ನಲ್ಲಿ ತಂಡದ ರಕ್ಷಕರಾದರೋ ಅವರ ಯಶಸ್ಸಿನ ಗ್ರಾಫ್ ನಿಧಾನವಾಗಿ ಏರಲಾರಂಭಿಸಿತು. ದ್ರಾವಿಡ್ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಲ್ಲಿ ತಲಾ ಹತ್ತು ಸಾವಿರ ರನ್ ಮಾಡಿದ ಅಪರೂಪದ ಕ್ರಿಕೆಟಿಗ. ವಿಕೆಟ್ ಕೀಪರ್, ಬೌಲರ್, ಉತ್ತಮ ಕ್ಷೇತ್ರ ರಕ್ಷಕ ಹೀಗೆ ಎಲ್ಲಾ ವಿಭಾಗದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಕ್ರೀಡಾ ಜೀವನದ ಪ್ರಾರಂಭದಲ್ಲಿ ಕಂಡ ಸೋಲುಗಳು. ಈ ಸೋಲುಗಳನ್ನು ಅವರು ನಿಧಾನವಾಗಿ ಗೆಲುವಿನ ಮೆಟ್ಟಲುಗಳನ್ನಾಗಿ ಮಾಡಿಕೊಂಡರು.
ಕ್ರೀಡಾ ವಿಭಾಗವಾಗಿರಲಿ, ರಾಜಕೀಯವಾಗಿರಲಿ, ಪತ್ರಿಕೋದ್ಯಮ, ವಿಜ್ಞಾನ, ಗಣಿತ, ಸಿನೆಮಾ ಇನ್ಯಾವುದೇ ರಂಗವಾಗಿದ್ದರೂ ಸೋಲು ಕಂಡವರು ಮತ್ತೆ ಮರಳಿ ಎದ್ದು ನಿಂತು ಗೆಲುವು ಕಂಡವರ ಸಂಖ್ಯೆ ಸಾಕಷ್ಟಿದೆ. ಅದಕ್ಕಾಗಿಯೇ ನೀವು ಕಳೆದ ವರ್ಷ ಸೋಲು ಕಂಡಿರಬಹುದು. ನೀವು ಕಟ್ಟಿದ ಸಂಸ್ಥೆಯು ನಷ್ಟದಲ್ಲಿ ಸಾಗುತ್ತಿರಬಹುದು. ಆದರೆ ಆ ನಷ್ಟದ ಹಿಂದೆಯೇ ಲಾಭದ ಹಾದಿ ಅಡಗಿರುತ್ತದೆ. ನೀವು ಸಾಗುತ್ತಿರುವ ಒಂದು ದಾರಿ ಮುಚ್ಚಿಹೋದರೆ ಗೆಲುವಿನ ಮೂರು ದಾರಿಗಳು ಹುಟ್ಟಿಕೊಳ್ಳುತ್ತವೆ ಎಂಬುವುದನ್ನು ಮರೆಯಬೇಡಿ. ಸೋಲನ್ನೇ ಕಾಣದವನಿಗೆ ಗೆಲ್ಲುವುದನ್ನು ಆಸ್ವಾದಿಸುವ ಅವಕಾಶ ಎಲ್ಲಿದೆ?
ಅದಕ್ಕಾಗಿಯೇ ಗೆಳೆಯರೇ, ಕಳೆದ ವರ್ಷ ನಿಮ್ಮ ಬಾಳಿನಲ್ಲಾದ ದುಃಖದ, ಈಡೇರದ ಸಂಗತಿಗಳನ್ನು ಮರೆತು ಬಿಡಿ. ಆ ವರ್ಷದ ಅನುಭವಗಳು ಈ ಹೊಸ ವರ್ಷದಲ್ಲಿ ನಿಮ್ಮನ್ನು ಕೈ ಹಿಡಿಯುತ್ತದೆ ಎಂಬ ನಂಬಿಕೆ ಇರಲಿ. ಜೀವನದ ಅಥವಾ ವ್ಯಾಪಾರದ ಪ್ರತೀ ಹಂತದಲ್ಲಿ ಸೋತು ಸುಣ್ಣಗಾಗಿ ಹೋದ ವ್ಯಕ್ತಿ, ಇನ್ನು ಕಳೆದುಕೊಳ್ಳಲು ಏನೂ ಇಲ್ಲ ಇಲ್ಲ ಎಂಬ ಸಂದರ್ಭ ಬಂದಾಗ ಎದ್ದು ನಿಲ್ಲುತ್ತಾನೆ. ಏಕೆಂದರೆ ಕಳೆದು ಕೊಳ್ಳಬೇಕಾದುದನ್ನೆಲ್ಲಾ ಕಳೆದುಕೊಂಡಾಗಿದೆಯಲ್ಲಾ, ಇನ್ನೇನಿದ್ದರೂ ಗಳಿಸುವುದು ಮಾತ್ರ. ತನ್ನ ಬಳಿ ಏನೂ ಇಲ್ಲ ಎಂಬವನಿಗೆ ಇನ್ನೇನೂ ಕಳೆದುಕೊಳ್ಳುವ ಭಯ ಇರುವುದಿಲ್ಲ. ಭಯ ಬಿಟ್ಟ ವ್ಯಕ್ತಿ ಖಂಡಿತವಾಗಿಯೂ ಜಯಶಾಲಿಯಾಗುತ್ತಾನೆ. ಹೊಸ ವರ್ಷ ನಿಮಗೆ ಹರುಷ ತರಲಿ, ನೀವಂದುಕೊಂಡ ಕಾರ್ಯ ಸುಗಮವಾಗಿ ನಡೆಯಲಿ. ಯಶಸ್ಸು ನಿಮ್ಮದಾಗಲಿ…
ಚಿತ್ರ ಕೃಪೆ: ಅಂತರ್ಜಾಲ ತಾಣ