೨೦೨೩ ಕಳೆದೇ ಹೋಯಿತೇ?
ಬಂಧುಗಳೇ, ೦೧-೦೧-೨೦೨೪ ಬಂದೇ ಬಿಟ್ಟಿತು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ವರ್ಷವೇ ಮುಗಿದು ಹೋಯಿತೇನೋ ಎಂದು ಅನ್ನಿಸಿತು ಎನಗಿಂದು. ದಿನಗಳು ಬೇಗ ಬೇಗ ಸಾಗುತ್ತಿದೆ, ಜೊತೆಗೆ ಆಯುಷ್ಯದಲ್ಲಿ ಒಂದೊಂದು ದಿನ ಹೆಚ್ಚಾಗಿ ಭೂಮಿಯ ಮೇಲೆ ಮನುಜ ಜನ್ಮದ ವಾಸ ಕಡಿಮೆಯಾಗುತ್ತಿದೆಯೆಂಬ ಪ್ರಜ್ಞೆ ನಮ್ಮಲ್ಲಿರಬೇಕು. ೨೩ರತ್ತ ಕಣ್ಣೋಟ ಹಾಯಿಸಿದರೆ ಕೊರೋನಾದ ಕಾಟ ಅಷ್ಟಾಗಿ ಇಲ್ಲದಿದ್ದರೂ, ಅದರ ಪರಿಣಾಮದ ವಾಸನೆ ಇದೆಯೆಂಬ ವದಂತಿ ಹರಿದಾಡುತ್ತಿತ್ತು.
'ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿಯೊಳು' ಎಂಬಂತಾಗಿದೆ ವರುಷದ ಕೊನೆಗೆ. ಪುನಃ ಕೊರೊನಾದ ಅಲೆ ಹರಿದಾಡುತ್ತಿದೆ. ನಮ್ಮ ಎಚ್ಚರದಲ್ಲಿ ನಾವಿರಬೇಕು. ಮೈಮರೆಯುವ ಹಾಗಿಲ್ಲ. ನಮ್ಮ ಮನೆಯ ಸದಸ್ಯರೊಂದಿಗೆ, ಪರಿಸರದವರ ಕಾಳಜಿಯೂ ಬೇಕು. ಬಂಧು ಬಳಗದವರಲ್ಲಿ, ಮಾಧ್ಯಮಗಳಲ್ಲಿ, ಅಂತರ್ಜಾಲಗಳಲ್ಲಿ ನಾವು ಓದುವ, ನೋಡುವ ವಾರ್ತೆಗಳಲ್ಲಿ ವ್ಯಕ್ತಿಯೊಬ್ಬ ತಕ್ಷಣ ಕೆಳಗುರುಳಿ ಅಸು ನೀಗುವುದು, ಕೈಕಾಲು ನಡುಕ, ದೇಹ ಸ್ಥಿಮಿತ ಕಳೆದುಕೊಳ್ಳುವುದು ಇತ್ಯಾದಿಗಳು, ಕೊರೊನಾ ಪ್ರಭಾವವೆಂಬ ಧ್ವನಿಯೂ ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯವೋ ನಮಗರಿಯದು.
ನಮ್ಮ ಸುತ್ತಮುತ್ತ ಹಲವಾರು ಗಣ್ಯರನ್ನು, ಮನೆಯ ಹಿರಿಯ-ಕಿರಿಯ ಸದಸ್ಯರನ್ನು, ಯಕ್ಷಗಾನ, ಚಲನಚಿತ್ರ ರಂಗದ ಅಪ್ರತಿಮ ಕಲಾವಿದರನ್ನು ಕಳಕೊಂಡಿದ್ದೇವೆ. ‘ಕಾಲಾಯ ತಸ್ಮೈ ನಮಃ’ ಅಲ್ಲವೇ? ಎಲ್ಲವನ್ನು ಎದುರಿಸಿ ಮುಂದೆ ಹೋಗುವ ಶಕ್ತಿ,ಧೈರ್ಯ ಕೊಡೆಂದು ಆ ದಯಾಮಯ ಜಗದ ತಂದೆ ಈಶ್ವರನಲ್ಲಿ ಬೇಡುವುದು ಬಿಟ್ಟರೆ ಬೇರೇನು ನಮ್ಮಿಂದ ಸಾಧ್ಯ ಹೇಳಿ? ಒಂದಷ್ಟು ಅಹಿತಕರ ಘಟನೆಗಳೂ ಅಲ್ಲಲ್ಲಿ ನಡೆಯಿತು. ಮುಂದೆ ಆಗದಂತೆ ಎಚ್ಚರಿಕೆ ವಹಿಸೋಣ.
ಜನಸಂಖ್ಯೆ ಹೆಚ್ಚಿದಂತೆ ಉದ್ಯಮಗಳು ತಲೆಯೆತ್ತುವುದು ಸಹಜ. ಕೆಲಸವಿದ್ದಾಗಲೇ ಮಾನವನ ಬದುಕಿಗೊಂದು ನೆಲೆ-ಬೆಲೆ ಅಲ್ಲವೇ? ಕರ್ನಾಟಕ ರಾಜ್ಯೋತ್ಸವದಂಗವಾಗಿ ಹಮ್ಮಿಕೊಳ್ಳಲಾದ ಕೋಟಿಕಂಠ ಗಾಯನ ವಿಶೇಷವೆನಿಸಿ ರಾರಾಜಿಸಿತು, ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ.ಹಾಗೆಯೇ ಕ್ರೀಡಾಕ್ಷೇತ್ರದಲ್ಲಿ ನಮ್ಮ ಆಟಗಾರರು ಹಿಂದೆ ಬಿದ್ದಿಲ್ಲ. ರಾಜಕೀಯ ವಲಯ, ಕಾನೂನು ಕಟ್ಟಳೆಗಳಲ್ಲಿ, ಆರ್ಥಿಕ ವಲಯ, ಮೌಲ್ಯವರ್ಧಿತ ಉತ್ಪಾದನಾ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳನ್ನು ಕಾಣಬಹುದು. ಶಿಕ್ಷಣದಲ್ಲಿ ಕೊರೊನಾದ ಬಿಸಿ ಆರಂಭದಲ್ಲಿ ತೊಡಕಾದರೂ ಅನಂತರ ಎಂದಿನಂತೆ ಕಾರ್ಯಾಚರಿಸಿತು. ಆನ್ಲೈನ್ ಪಠ್ಯ ಚಟುವಟಿಕೆಗಳು ಎಳೆಯ, ಹದಿಹರೆಯದ ಮಕ್ಕಳ ಕಣ್ಣಿನ ದೃಷ್ಟಿಗೆ ಸ್ವಲ್ಪ ಕಿರಿಕಿರಿ ಉಂಟು ಮಾಡಿದರೂ, ಅನಂತರ ಚೇತರಿಕೆ ಕಂಡು ಬಂತು. ಜೊತೆಗೆ ಅಧ್ಯಾಪಕ ವೃಂದದವರೂ ಸಹ ಸಾಕಷ್ಟು ಶ್ರಮ ವಹಿಸಿದ್ದರು. ಗಾಳಿ, ನೀರು, ಹಸಿರು ಪರಿಸರ ದೇವನ ಕೊಡುಗೆ. ಹಾಳುಗೆಡಹದೆ ಮುಂದಿನ ಪೀಳಿಗೆಗೆ ಉಳಿಸೋಣ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಅಲ್ಲವೇ? ಕಳೆದು ಹೋದುದನ್ನು ಚಿಂತಿಸದಿರೋಣ. ಚಕ್ರ ಮುಂದೆ ಮುಂದೆ ಉರುಳುವಂತೆ, ನಾವೂ ಸಹ ಮುಂದಿನ ಬದುಕು ಹೇಗಿರಬೇಕೆಂದು ಚಿಂತನ-ಮಂಥನ ಮಾಡೋಣ. ಎಲ್ಲರಿಗೂ ೨೦೨೪ ಸುಖ-ನೆಮ್ಮದಿ-ಶಾಂತಿಯೊಂದಿಗೆ ಆರೋಗ್ಯ ಭಾಗ್ಯವೂ ಲಭಿಸಲೆಂಬ ಆಶಯ. ಭಗವಂತನ ಕೃಪಾಕಟಾಕ್ಷ ಸಕಲ ಜೀವಿಗಳ ಮೇಲಿರಲಿ. ಎಲ್ಲರಿಗೂ ಶುಭವಾಗಲಿ.
-ರತ್ನಾ ಕೆ .ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ