೨ ಗಜಲ್ ಗಳು

೨ ಗಜಲ್ ಗಳು

ಬರಹ

ಗಜಲ್ - ೧
ಮಾತುಗಳಿಗೆ ಅರ್ಥವೇ ಇಲ್ಲದಾಗ ಏನೆಂದು ತಿಳಿಯಬೇಕು
ಮೌನಕ್ಕೆ ಶಕ್ತಿಯೇ ಇಲ್ಲದಾಗ ಏನೆಂದು ತಿಳಿಯಬೇಕು

ಬಂಧುತ್ವಕ್ಕೆ ಒಲವೇ ಇಲ್ಲದಾಗ ಏನೆಂದು ತಿಳಿಯಬೇಕು
ಪ್ರೇಮಕ್ಕೆ ಹೃದಯವೇ ಇಲ್ಲದಾಗ ಏನೆಂದು ತಿಳಿಯಬೇಕು

ದ್ವೇಷಕ್ಕೆ ಕಿಚ್ಚೇ ಇಲ್ಲದಾಗ ಏನೆಂದು ತಿಳಿಯಬೇಕು
ರೋಶಕ್ಕೆ ಶೌರ್ಯವೇ ಇಲ್ಲದಾಗ ಏನೆಂದು ತಿಳಿಯಬೇಕು

ಬದುಕಿಗೆ ಬವಣೆಯೇ ಇಲ್ಲದಾಗ ಏನೆಂದು ತಿಳಿಯಬೇಕು
ಹಿರಿತನಕೆ ಅನುಭವವೇ ಇಲ್ಲದಾಗ ಏನೆಂದು ತಿಳಿಯಬೇಕು

ನೋವೆಂಬುದಕೆ ಕೊನೆಯೇ ಇಲ್ಲದಾಗ ಏನೆಂದು ತಿಳಿಯಬೇಕು
ಸಾವೆಂಬುದಕೆ ಜೀವಗಳೇ ಇಲ್ಲದಾಗ ಏನೆಂದು ತಿಳಿಯಬೇಕು

ಗಜಲ್ - ೨
ಕಣ್ಮುಚ್ಚಿದರೆ ಮರೆಯಬಹುದೆಂದೆ ಮನಸು ತೆರೆದಿದೆಯಲ್ಲ
ಮನಸೆ ಮರೆತು ಹಾಯಾಗಿರಬೇಕೆಂದೆ ನನಸು ತೆರೆದಿದೆಯಲ್ಲ

ನಾವು ನಡೆದ ಹಳೆಯ ಹಾದಿಯನ್ನೆಲ್ಲ ಸುರುಳಿ ಸುತ್ತಿ
ಮೂಲೆಯಲೆಸೆಯಬೇಕೆಂದೆ ಕನಸು ತೆರೆದಿದೆಯಲ್ಲ

ನಾವಾಡಿದ ಹಾಡು ಪಿಸುಮಾತು ನಗುವ ಗಂಟುಕಟ್ಟಿ
ಭೂತದ ಬಾವಿಯೊಳಗೆಸೆಯಬೇಕೆಂದೆ ಒಲವು ತೆರೆದಿದೆಯಲ್ಲ

ಬೇಡಬಿಡು ಒಣಮಾತು ಆಡಂಬರ ಮಾತುಗಳ ಚೆಲ್ಲಾಟ
ಎಲ್ಲ ಕುಟ್ಟಿ ಪುಡಿ ಮಾಡಬೇಕೆಂದೆ ಗಜಲು ತೆರೆದಿದೆಯಲ್ಲ

ಎಷ್ಟೋ ಮುಚ್ಚಿದ ಎದೆಯ ಬಾಗಿಲುಗಳ ತಟ್ಟಿ ನನ್ನೊಳಗಿನ
ಕಿಚ್ಚು ತಣಿಸಬೇಕೆಂದೆ ನಿನ್ನೆದೆ ಬಾಗಿಲಿನಿಸು ತೆರೆದಿದೆಯಲ್ಲ
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ.