೩೪೪ ಆತಂಕಕಾರಿ ಔಷಧಿಗಳ ನಿಷೇಧ

೩೪೪ ಆತಂಕಕಾರಿ ಔಷಧಿಗಳ ನಿಷೇಧ

ವರ್ಷಾನುಗಟ್ಟಲೆ ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ, ಟಿವಿಯಲ್ಲಿ ರಾಜಾರೋಷವಾಗಿ ಪ್ರಕಟವಾಗುತ್ತಿದ್ದ ಕೆಲವು ಔಷಧಿಗಳ ಜಾಹೀರಾತುಗಳನ್ನು ನೆನಪು ಮಾಡಿಕೊಳ್ಳಿ: (i) ವಿಕ್ಸ್-ಆಕ್ಷನ್ ೫೦೦-ಎಕ್ಸ್ ಟ್ರಾ, ಕ್ರೋಸಿನ್ –ಕೋಲ್ಡ್ ಆಂಡ್ ಫ್ಲೂ - ಇವು ಶೀತ ಮತ್ತು ಫ್ಲೂ (ಜ್ವರ) ಗುಣ ಪಡಿಸಲು ಪರಿಣಾಮಕಾರಿ (ii) ಸಾರಿಡಾನ್ – ತಲೆನೋವಿಗೆ ಪರಿಹಾರ (iii) ಗ್ಲೈಕೊಡಿನ್, ಕೊರೆಕ್ಸ್, ಅಲೆಕ್ಸ್, ಬೆನಡ್ರಿಲ್, ಫೆನ್ಸೆಡೈಲ್ – ಈ ಕಾಫ್ ಸಿರಪುಗಳು ಕೆಮ್ಮಿಗೆ ರಾಮಬಾಣ.
ಇನ್ನು ಈ ಜಾಹೀರಾತುಗಳೆಲ್ಲ ಬಂದ್! ಯಾಕೆಂದರೆ, ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯ ಇವನ್ನೆಲ್ಲ ನಿಷೇಧಿಸಿದೆ. ಇಂತಹ ೩೪೪ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿ ಸಿ) ಔಷಧಿಗಳ ಮೇಲೆ ನಿಷೇಧ ಹೇರಲಾಗಿದೆ
ಎಫ್ ಡಿ ಸಿ ಎಂದರೆ ಎರಡು ಅಥವಾ ಜಾಸ್ತಿ ಔಷಧಿಗಳು ನಿಶ್ಚಿತ ಅನುಪಾತದಲ್ಲಿರುವ ಸಂಯುಕ್ತ ಔಷಧಿ. ಉದಾಹರಣೆಗೆ ಪಿರಾಮಲ್ ಹೆಲ್ತ್ ಕೇರ್ ಕಂಪೆನಿಯ “ಸಾರಿಡಾನ್” ಎಂಬುದು ಪಾರಸಿಟಮೋಲ್, ಕೆಫೇನ್ ಮತ್ತು ಪ್ರೊಪಿಫಿನಜೋನ್ – ಈ ಮೂರು ಸೇರಿರುವ ಸಂಯುಕ್ತ ಔಷಧಿ. ಇಂತಹ ಎಫ್ ಡಿ ಸಿಗಳನ್ನು ತಮ್ಮ ಅನಾರೋಗ್ಯ ಗುಣಪಡಿಸಿಕೊಳ್ಳಲಿಕ್ಕಾಗಿ ಸೇವಿಸುತ್ತಿದ್ದವರು ಲಕ್ಷಗಟ್ಟಲೆ ಜನರು. ಅವರೆಲ್ಲರೂ ಈಗ ಬೆಚ್ಚಿ ಬಿದ್ದಿದ್ದಾರೆ.
ಹಾಗೆಯೇ ಕಾಫ್ ಸಿರಪುಗಳನ್ನು ನುಂಗುತ್ತಿದ್ದವರು ಸಾವಿರಾರು ಜನರು. ಅವರೆಲ್ಲರಿಗೂ ಕಾಫ್ ಸಿರಪ್ ಕುಡಿದ ನಂತರ ಅಮಲು ಅನಿಸುತ್ತಿತ್ತು. ಆದರೂ, ಗಂಟಲಿಗೆ ಸೋಂಕು ತಗಲಿದಾಗೆಲ್ಲ ಕಾಫ್ ಸಿರಪ್ ಸೇವಿಸುತ್ತಿದ್ದರು. ಈಗ ಇಂತವರು ಕೇಳುವ ಪ್ರಶ್ನೆ, “ಈ ಔಷಧಿಗಳು ಸುರಕ್ಷಿತವಲ್ಲ ಎಂದಾದರೆ ಅವನ್ನು ಮಾರಾಟ ಮಾಡಲು ಸರಕಾರ ಪರವಾನಗಿ ಕೊಟ್ಟದ್ದು ಯಾಕೆ?”
ಕೇಂದ್ರ ಸರಕಾರದ ಆರೋಗ್ಯ ಮಂತ್ರಾಲಯವು ಔಷಧಿಗಳಿಗೆ ಪರವಾನಗಿ ಕೊಡುವ ಪ್ರಕ್ರಿಯೆ, ಹಲವು ಹಂತಗಳ ಕ್ಲಿನಿಕಲ್ ಟ್ರಯಲು (ಪರೀಕ್ಷೆ)ಗಳಿರುವ ಕಠಿಣ ಪ್ರಕ್ರಿಯೆ. ಆದರೆ, ಕೆಲವು ಔಷಧಿ ಉತ್ಪಾದಕರು, ರಾಜ್ಯ ಸರಕಾರದ ಔಷಧಿ ನಿಯಂತ್ರಣ ಅಧಿಕಾರಿಗಳಿಂದ ಪರವಾನಗಿ ಪಡೆಯುವ ಮೂಲಕ, ಆ ಕಠಿಣ ಪ್ರಕ್ರಿಯೆಗಳಿಂದ ನುಣುಚಿಕೊಳ್ಳುತ್ತಿದ್ದಾರೆ.
ಇಷ್ಟು ವರುಷ ಇವೆಲ್ಲ ಪ್ರಮಾದಗಳನ್ನು ನಿರ್ಲಕ್ಷಿಸಿದ ಕೇಂದ್ರ ಸರಕಾರ ಈಗ ಹೀಗೆನ್ನುತ್ತಿದೆ: “ಎಫ್ ಡಿ ಸಿ ಔಷಧಿಗಳಿಂದ ಬಳಕೆದಾರರಿಗೆ ರಿಸ್ಕ್ (ಅಪಾಯ ಸಂಭವ) ಇದೆ. ಅದಲ್ಲದೆ, ಇವುಗಳಿಗೆ ಬದಲಿಯಾಗಿ ಸುರಕ್ಷಿತ ಔಷಧಿಗಳಿವೆ.”
ಫೈಜರ್ ಕಂಪೆನಿಯ ಕೊರೆಕ್ಸ್ ಕಾಫ್ ಸಿರಪ್, ಪ್ರಾಕ್ಟರ್ ಆಂಡ್ ಗ್ಯಾಂಬಲ್ ಕಂಪೆನಿಯ ವಿಕ್ಸ್-ಆಕ್ಸನ್-೫೦೦-ಎಕ್ಸ್ ಟ್ರಾ, ಗ್ಲಾಕ್ಸೋ ಕಂಪೆನಿಯ ಪಿರಿಟೊನ್ ಎಕ್ಸ್ ಪೆಕ್ಟೊರೆಂಟ್, ರೆಕಿಟ್ ಕಂಪೆನಿಯ ಡಿ’ಕೋಲ್ಡ್, ಗ್ಲೆನ್ ಮಾರ್ಕ್ ಕಂಪೆನಿಯ ಅಸ್ಕೊರಿಲ್ ಮತ್ತು ಅಲೆಕ್ಸ್ ಕಾಫ್ ಸಿರಪ್, ಅಬ್ಬೊಟ್ ಕಂಪೆನಿಯ ಪೆನ್-ಸೆಡೈಲ್ ಕಾಫ್ ಸಿರಪ್ ಮತ್ತು ಅಲೆಂಬಿಕ್ ಕಂಪೆನಿಯ ಗ್ಲೈಕೊಡಿನ್ ಕಾಫ್ ಸಿರಪ್ – ಇವು ಈಗ ನಿಷೇಧಿಸಲ್ಪಟ್ಟ ಜನಪ್ರಿಯ ಎಫ್ ಡಿ ಸಿಗಳು.
ಇದೆಲ್ಲ ಶುರುವಾದದ್ದು ೨೦೧೨ರಲ್ಲಿ. ಸಂಸತ್ತಿನ ಸಮಿತಿಯೊಂದರ ವರದಿ, ಸರಿಯಾದ ಕ್ಲಿನಿಕಲ್ ಟ್ರಯಲು (ಪರೀಕ್ಷೆ)ಗಳನ್ನು ನಡೆಸದೆ ಅನೇಕ ಔಷಧಿಗಳಿಗೆ ಪರವಾನಗಿ ನೀಡಲಾಗುತ್ತಿದೆ ಎಂಬುದನ್ನು ಬೊಟ್ಟು ಮಾಡಿ ತೋರಿಸಿತು. ಅನಂತರ, ಪ್ರೊ. ರಣಜಿತ್ ರಾಯ್ ಚೌಧರಿ ಅವರು ಮುಖ್ಯಸ್ಥರಾಗಿದ್ದ ಪರಿಣತರ ಸಮಿತಿಯೊಂದನ್ನು ಮಹಾ ಔಷಧಿ ನಿಯಂತ್ರಕರು ನೇಮಿಸಿದರು – ಔಷಧಿಗಳ ನಿಯಂತ್ರಣಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಸೂಚಿಸಲಿಕ್ಕಾಗಿ. ಆ ಸಮಿತಿಯು ೨೦೧೩ರಲ್ಲಿ ೧೦೦ ಪುಟಗಳ ವರದಿ ಸಲ್ಲಿಸಿತು. ಸುಮಾರು ೮೫,೦೦೦ ಔಷಧಿಗಳ ಮರುಮೌಲ್ಯಮಾಪನ ಅಗತ್ಯವೆಂದು ಆ ವರದಿ ಸೂಚಿಸಿತು. ಸಮುದಾಯ ಅಭಿವೃದ್ಧಿ ವೈದ್ಯಕೀಯ ಘಟಕ ಮತ್ತು ಹೆಲ್ತ್ ಆಕ್ಷನ್ ಇಂಟರ್ ನ್ಯಾಷನಲ್ ಎಂಬ ಸರಕಾರೇತರ ಸಂಸ್ಥೆಯ ೨೦೧೦ರ ಅಧ್ಯಯನವೂ ಇದೇ ರೀತಿಯ ಸೂಚನೆ ನೀಡಿತ್ತು: ೪,೫೫೯ ಬ್ರಾಂಡ್ ಹೆಸರುಗಳಲ್ಲಿ ೧,೩೫೬ ಅತಾರ್ಕಿಕ ಎಫ್ ಡಿ ಸಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿರುವುದು ಆತಂಕಕಾರಿ ಸಂಗತಿ.
ಎಂತಹ “ವಿಪರೀತ ಔಷಧಿ”ಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಪರವಾನಗಿ ನೀಡಲಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ: ಇದು ಢೆಲ್ಲಿಯ ಬಿಎಲ್ಕೆ ಆಸ್ಪತ್ರೆಯ ಆಂತರಿಕ ಔಷಧಿ ವಿಭಾಗದ ಚೇರ್ಮನ್ ಡಾ.ಆರ್.ಕೆ. ಸಿಂಘಾಲ್ ನೀಡಿದ ಉದಾಹರಣೆ: ನಿಮೆಸುಲೈಡ್ (ಒಂದು ಅನಾಲ್ ಜೆಸಿಕ್) ಮತ್ತು ಸೆರ್ರಾಟಿಯೊ ಪೆಪ್ಟಿಡೇಸ್ (ಒಂದು ಕಿಣ್ವ) ಇವುಗಳ ಸಂಯುಕ್ತ ಔಷಧಿ ಅಸಂಬದ್ಧ. ಯಾಕೆಂದರೆ ಆ ಕಿಣ್ವವನ್ನು ಆಹಾರ ಸೇವಿಸುವ ೩೦ ನಿಮಿಷಗಳ ಮುಂಚೆ ಮತ್ತು ಅನಾಲ್ ಜೆಸಿಕನ್ನು ಆಹಾರ ಸೇವಿಸಿದ ೩೦ ನಿಮಿಷಗಳ ನಂತರ ಸೇವಿಸತಕ್ಕದ್ದು. ಇವೆರಡನ್ನೂ ಒಟ್ಟಾಗಿ ಸೇವಿಸುವುದಕ್ಕೆ ಅರ್ಥವಿದೆಯೇ?
ಬಹುಪಾಲು ವೈದ್ಯರು ಈ ನಿಷೇಧವನ್ನು ಸ್ವಾಗತಿಸಿದ್ದಾರೆ. ಯಾಕೆಂದರೆ, ಒಂದೇ ಔಷಧಿಯಲ್ಲಿ ಎರಡು ರಾಸಾಯನಿಕಗಳಿದ್ದಾಗ, ಒಂದರ ಪರಿಣಾಮದಲ್ಲಿ ಇನ್ನೊಂದು ಮಧ್ಯಪ್ರವೇಶ ಮಾಡಬಹುದು. ಇದರಿಂದಾಗಿ ದೇಹದಲ್ಲಿ ವಿಷವಸ್ತುಗಳು ಉಂಟಾಗಬಹುದು. ಅಥವಾ, ಒಂದು ರಾಸಾಯನಿಕ ಸಕ್ರಿಯವಾಗದಂತೆ ಇನ್ನೊಂದು ರಾಸಾಯನಿಕ ಅಡ್ಡಿಯಾದೀತು. ಎಫ್ ಡಿ ಸಿಗಳಿಂದ ಇತರ ತೊಂದರೆಗಳೂ ಉಂಟಾಗಲು ಸಾಧ್ಯ. ಉದಾಹರಣೆಗೆ, ಆಂಟಿಬಯಾಟಿಕ್ಗಳನ್ನು ಅಸಮರ್ಪಕವಾಗಿ ಮಿಶ್ರ ಮಾಡಿದರೆ, ರೋಗಿಗಳಲ್ಲಿ ಆಂಟಿಬಯಾಟಿಕ್ ಪ್ರತಿರೋಧ ಮೂಡಿ ಬಂದೀತು. ಹಾಗೆಯೇ, ಒಂದು ಎಫ್ ಡಿ ಸಿಯಲ್ಲಿರುವ ಔಷಧಿಗಳಲ್ಲಿ ಪ್ರತಿಯೊಂದರ ಅಡ್ಡ-ಪರಿಣಾಮಗಳನ್ನು ಗುರುತಿಸುವುದು ವೈದ್ಯರಿಗೆ ಕಷ್ಟಸಾಧ್ಯ. ಒಂದು ವಿಷಯವಂತೂ ಸ್ಪಷ್ಟ: ಮಾರಾಟ- ವಾಗುವ ಪ್ರತಿಯೊಂದು ಎಫ್ ಡಿ ಸಿಯನ್ನು ಪರೀಕ್ಷಿಸುವುದು ವೈದ್ಯರ ಕೆಲಸವಲ್ಲ. ಅದು ಔಷಧಿ ನಿಯಂತ್ರಣ ಇಲಾಖೆಯ ಕರ್ತವ್ಯ.
ಔಷಧಿ ಉತ್ಪಾದಕ ಕಂಪೆನಿಗಳಿಗೆ ಈ ಅನಿರೀಕ್ಷಿತ ನಿಷೇಧದಿಂದಾಗಿ ತಮ್ಮ ಲಾಭ ಕಡಿಮೆಯಾಗುವುದೆಂಬ ಚಿಂತೆ. ಯಾಕೆಂದರೆ, ಈಗ ನಿಷೇಧಿಸಲ್ಪಟ್ಟ (೨,೫೦೦ ಬ್ರಾಂಡ್ ಹೆಸರಿನ) ೩೪೪ ಎಫ್ ಡಿ ಸಿಗಳ ಉತ್ಪಾದನೆ ಮತ್ತು ಮಾರಾಟ ಮೌಲ್ಯ ಸುಮಾರು ರೂ.೫,೦೦೦ ಕೋಟಿ.
ಇವೆಲ್ಲದರ ನಡುವೆ ಗ್ರಾಹಕರಿಗೆ ಸಮಾಧಾನ ತರಬಲ್ಲ ಇನ್ನೊಂದು ಸುದ್ದಿ: ಕೇಂದ್ರ ಪರಿಣತರ ಸಮಿತಿಯು ಇನ್ನೂ ೫೦೦ ಎಫ್ ಡಿ ಸಿಗಳನ್ನು ಪರಿಶೀಲಿಸುತ್ತಿದೆ. ಆದ್ದರಿಂದ ಇನ್ನಷ್ಟು ಸಂಖ್ಯೆಯ ಅಪಾಯಕಾರಿ ಔಷಧಿಗಳ ನಿಷೇಧ ನಿರೀಕ್ಷಿಸೋಣ.