೩ ಹೊಸ ರಾಷ್ಟ್ರೀಯ ಸಹಕಾರ ಸಂಸ್ಥೆ : ದೂರದೃಷ್ಟಿಯ ಯೋಜನೆ

೩ ಹೊಸ ರಾಷ್ಟ್ರೀಯ ಸಹಕಾರ ಸಂಸ್ಥೆ : ದೂರದೃಷ್ಟಿಯ ಯೋಜನೆ

ದೇಶದಲ್ಲಿ ಸಹಕಾರ ಆಂದೋಲನಕ್ಕೆ ಶತಮಾನದ ಇತಿಹಾಸವಿದೆ. ಭಾರತದ ಮೊದಲ ಸಹಕಾರಿ ಸಂಸ್ಥೆ ನೋಂದಣಿಯಾದದ್ದು ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ. ದೇಶದ ಉದ್ದಗಲಕ್ಕೂ ಸಹಕಾರ ಸಂಸ್ಥೆಗಳು ಆರಂಭವಾಗಿವೆ, ಹಲವೆಡೆ ಕ್ರಾಂತಿಯನ್ನೂ ಸೃಷ್ಟಿಸಿವೆ. ಕೋಟ್ಯಾಂತರ ಜನರು ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗಳು ರೈತರು, ಹಳ್ಳಿಗಾಡಿನ ಜನರಿಗೆ ಸಹಕಾರಿಯಾಗಿರುವುದಲ್ಲದೆ, ನಗರ ಪ್ರದೇಶಗಳಲ್ಲೂ ಕೋಟಿಗಟ್ಟಲೆ ವ್ಯವಹಾರ ನಡೆಸುವ ಮೂಲಕ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತಿವೆ. ಕ್ಷೀರ ಕ್ರಾಂತಿಗೆ ಕೊಡುಗೆ ನೀಡಿರುವ ಅಮುಲ್ ಅಥವಾ ಕೆಎಂಎಫ್ ಗಳು ಕೂಡ ಸಹಕಾರ ವಲಯದ ಸಂಸ್ಥೆಗಳೇ. ಸಹಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅಕ್ರಮ, ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ ಆ ವಲಯದಲ್ಲಿ ಒಂದಷ್ಟು ಶಿಸ್ತು ಮೂಡಿಸಿ, ಆ ವಲಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಕಳೆದ ಒಂದುವರೆ ವರ್ಷದ ಹಿಂದೆ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನೇ ಕೇಂದ್ರ ಸರಕಾರ ಆರಂಭಿಸಿತ್ತು. ಹಲವು ಕ್ರಮಗಳನ್ನು ಕೈಗೊಂಡಿರುವ ಈ ಸಚಿವಾಲಯಕ್ಕೆ ಇದೀಗ ರಾಷ್ಟ್ರಮಟ್ಟದ ಮೂರು ಹೊಸ ಸಹಕಾರ ಸಂಸ್ಥೆಗಳನ್ನು ಹುಟ್ಟು ಹಾಕಲು ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಈ ಸಂಸ್ಥೆಗಳ ಉದ್ದೇಶ ಸದ್ಯಕ್ಕೆ ಸರಿಯಾಗಿ ಅರ್ಥವಾಗುತ್ತಿಲ್ಲದಿರಬಹುದು. ಆದರೆ ಸಂಸ್ಥೆಗಳು ಅಪಾರ ದೂರ ದೃಷ್ಟಿ ಹೊಂದಿದವುಗಳಾಗಿವೆ ಎಂಬುದು ನಿಸ್ಸಂಶಯ.

ಸಾವಯವ ಕೃಷಿ, ಸಾವಯವ ಆಹಾರಕ್ಕೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರಕಾರ ಸಾವಯವ ಉತ್ಪನ್ನ ಸಹಕಾರ ಸಂಸ್ಥೆ ಸ್ಥಾಪನೆ ಪ್ರಕಟಿಸಿದೆ. ಇದರ ಜೊತೆಗೆ ದೇಶಿ ಬೀಜ ಉತ್ಪಾದನೆ ರಕ್ಷಿಸಿ, ಉತ್ಪಾದನೆಗೆ ಹೆಚ್ಚು ಹೊತ್ತು ನೀಡಲು ಬಹುರಾಜ್ಯ ಬೀಜ ಸಹಕಾರ ಸೊಸೈಟಿ ಸ್ಥಾಪನೆಗೆ ನಿರ್ಧರಿಸಿದೆ. ರಾಷ್ಟ್ರೀಯ ರಫ್ತು ಸೊಸೈಟಿ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲು ಸರ್ಕಾರ ನಿರ್ಧರಿಸಿದೆ. ಈ ಮೂರೂ ಸಂಸ್ಥೆಗಳ ನೇರ ಫಲಾನುಭವಿಗಳು ರೈತರು. ಅವರಿಗೆ ಇವುಗಳಿಂದ ಲಾಭವಾಗುವುದರ ಜೊತೆಗೆ ದೇಶಕ್ಕೂ ಒಳ್ಳೆಯ ಮಾರುಕಟ್ಟೆ ಸಿಗುತ್ತದೆ. ದೇಶವು ಅಭಿವೃದ್ಧಿ ಹೊಂದುತ್ತದೆ. ಈಗಾಗಲೇ ಸಹಕಾರ ವಲಯದಲ್ಲಿ ಆಗಿರುವ ಕ್ರಾಂತಿ ಈ ಸಂಸ್ಥೆಗಳಿಂದಲೂ ಆದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಆದರೆ ಹಲವು ಸಂಸ್ಥೆಗಳನ್ನು ಬಾಧಿಸುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕುವಂತಹ ನಿಯಮ ರೂಪಿಸಿ ಈ ಸಂಸ್ಥೆಗಳು ರಚಿಸಿ ಬಲ ತುಂಬಬೇಕಾಗಿದೆ. ಹಾಗೆ ನಿಯಮಗಳು ಸರಳವಾಗಿದ್ದು ಹೆಚ್ಚು ಹೆಚ್ಚು ರೈತರು ಫಲಾನುಭವಿಗಳಾಗುವಂತೆ ನೋಡಿಕೊಳ್ಳಬೇಕಾಗಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೩-೦೧-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ