೪೭ರ ಸ್ವಾತಂತ್ರ್ಯ ಯಾರಿಗೆ ಬಂತು ?!
ದೊಡ್ಡವರ ಕೈಯಿಗೆ ಬೆಣ್ಣೆ ಕೊಡ್ತಾರೆ
ಬಡವರ ಮೂತಿಗೆ ಕೈಲಿ ವರಸ್ತಾರೆ !
ದೊಡ್ಡವರ ಕೈಯಿಗೆ ದೇಶ ಕೊಡ್ತಾರೆ
ಬಡವರ ಮನೆಗೆ ಬಂದು ಓಟು ಕೇಳ್ತಾರೆ !
ದೊಡ್ಡವರ ಕೈಯಿಗೆ ಜಾಗ ಕೊಡ್ತಾರೆ
ಬಡವರ ಜೋಪಡಿಯ ನಾಶ ಮಾಡ್ತಾರೆ !
ದೊಡ್ಡವರ ಸಾಲವನ್ನು ಮನ್ನಾ ಮಾಡ್ತಾರೆ
ಬಡವರು ಕಟ್ಟದಿದ್ರೆ ಜೈಲಿಗೆ ಹಾಕ್ತಾರೆ !
ದೊಡ್ಡವರ ಮಾತಿಗೆ ಶರಣು ಎನ್ತಾರೆ
ಬಡವರ ಮಾತಿಗೆ ಬೆತ್ತದೇಟು ಕೊಡ್ತಾರೆ !
ದೊಡ್ಡವರ ಮಠಕ್ಕೆ ಕೋಟಿ ಸಿಗ್ತದೆ
ಬಡವರ ಮಠಕ್ಕೆ ಭಿಕ್ಷೆಯ ನೀಡ್ತಾರೆ !
ದೊಡ್ಡವರ ಸಭೆಗೆ ಪೋಲಿಸ್ ಕೊಡ್ತಾರೆ
ಬಡವರ ಸಭೆಗಳಿಗೆ ಲಾಠಿ ಬೀಸ್ತಾರೆ !
ದೊಡವರು ಆಸ್ಪತ್ರೆಗೆ ಹೋದ್ರೆ ವಾಪಸ್ ಬರ್ತಾರೆ
ಬಡವರು ಆಸ್ಪತ್ರೆಗೆ ಹೋದ್ರೆ ಹೆಣವಾಗಿ ಸಿಗ್ತಾರೆ !
ದೊಡ್ಡವರು ಜಾಮೀನಿನಲ್ಲಿ ಹೊರಗೆ ಬರ್ತಾರೆ
ಬಡವರು ಜೈಲು ಸೇರಿದ್ರೆ ಕೊಳಿತಾ ಇರ್ತಾರೆ !
ದೊಡ್ಡವರ ಬಿ ಪಿ ಎಲ್ ಕಾರ್ಡ್ ಹತ್ತಿರ ಇರ್ತದೆ
ಬಡವರ ಬಿ ಪಿ ಎಲ್ ಕಾರ್ಡುಗಳು ಮಾಯ ಆಗ್ತದೆ !
ದೊಡ್ಡವರ ಮನೆಯ ನಳ್ಳಿ ನೀರು ಚರಂಡಿ ಸೇರ್ತದೆ
ಬಡವರ ನಳ್ಳಿಲಿ ದಿನವೂ ಗಾಳಿ ಬರ್ತದೆ !
ದೊಡ್ಡವರ ಬಾಳಲಿಯಿಂದು ಬೆಳಕು ಬರ್ತದೆ
ಬಡವರ ಬದುಕಲಿಯೆಂದು ಕತ್ತಲು ತುಂಬಿದೆ !
ದೊಡ್ಡವರ ಮನೆಯಲೆಂದು ವಿದ್ಯುತ್ ಇರುತ್ತೆ
ಬಡವರ ಮನೆಯಲೆಂದು ಚಿಮಿಣಿ ದೀಪ ಕಾಣುತ್ತೆ!
ದೊಡ್ಡವರ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕುತ್ತೆ
ಬಡವರ ಮಕ್ಕಳಿಗೆ ಗ್ಯಾರೇಜ್ ಕೆಲಸ ಸಿಗುತ್ತೆ !
ದೇಶದ ಒಳಗಿನ ದೊಡ್ಡ ಕುಳಗಳಿಗೆ ಸ್ವಾತಂತ್ರ್ಯ ಬಂತು
ಬಡವರ ಪಾಲಿಗೆಯೆಂದೆಂದಿಗೂ ಜೀತವನೇ ತಂತು !
-ಹಾ ಮ ಸತೀಶ
ಚಿತ್ರ ಕೃಪೆ: ಇಂಟರ್ನೆಟ್
