೭೦ರ ದಶಕದಲ್ಲಿ ಸಿನೆಮಾ ತಾರೆಯರ ಸಂಭಾವನೆ ಎಷ್ಟಿತ್ತು?
ಇಂದು ಕಲಾವಿದರ ಸಂಭಾವನೆ ದುಪ್ಪಟ್ಟಾಗಿದೆ. ಬಾಲಿವುಡ್, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕಲಾವಿದರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಉಳಿದ ಭಾಷೆಯ ಕಲಾವಿದರು ಏನು ಹಿಂದೆ ಬಿದ್ದಿಲ್ಲ. ನಟಿಯರು ಕೂಡ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ ನಟರಿಗಿಂತ ಕಡಿಮೆ ಸಂಭಾವನೆ ಎನ್ನುವ ಅಸಮಾಧಾನ ಆಗಾಗ ಹೊರಹಾಕುತ್ತಿರುತ್ತಾರೆ.
ಕೆಲವು ಸ್ಟಾರ್ ಕಲಾವಿದರ ಸಂಭಾವನೆ ಸುಮಾರು ೧೦೦ ಕೋಟಿ ಸಮೀಪಿಸಿದೆ. ಅಕ್ಷಯ್ ಕುಮಾರ್, ರಜನಿಕಾಂತ್, ದಳಪತಿ ವಿಜಯ್, ಸೂರ್ಯ ಹೀಗೆ ಅನೇಕ ಸ್ಟಾರ್ ಕಲಾವಿದರು ಕೋಟಿ ಕೋಟಿ ಜೇಬಿಗಿಳಿಸುತ್ತಿದ್ದಾರೆ. ಇನ್ನು ನಟಿಯರಾದ ದೀಪಿಕಾ ಪಡುಕೋಣೆ, ಕಂಗನಾ, ಅಲಿಯಾ ಭಟ್, ನಯನತಾರಾ, ಸಮಂತಾ ಅವರ ಸಂಭಾವನೆ ೫ ಕೋಟಿ ರೂಪಾಯಿ ಮೇಲಿದೆ. ಆದರೆ ನಟರಿಗೆ ಸಮಾನಾವಾದ ಸಂಭಾವನೆ ನೀಡುತ್ತಿಲ್ಲ ಎಂದು ಅನೇಕ ನಟಿಮಣಿಯರು ಆಗಾಗ ಬೇಸರ ಹೊರಹಾಕುತ್ತಿರುತ್ತಾರೆ.
ಇಂದಿನ ಕಲಾವಿದರ ಸಂಭಾವನೆ ಚರ್ಚೆ ನಡುವೆ ಅಂದು ಸ್ಯಾಂಡಲ್‌ವುಡ್ ಮಂದಿ ಪಡೆಯುತ್ತಿದ್ದ ಸಂಭಾವನೆ ವಿಚಾರ ಬಹಿರಂಗವಾಗಿದೆ. ವಿಶೇಷ ಎಂದರೆ ೬೦-೭೦ ದಶಕದ ಸ್ಟಾರ್ ನಟಿ ಕಲ್ಪನಾ ಅಂದಿನ ಇತರೆ ಕಲಾವಿದರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು. ಹೌದು ಕಲ್ಪನಾ ಅಂದು ಪಡೆಯುತ್ತಿದ್ದ ಸಂಭಾವನೆ ವಿಚಾರನ್ನು ಚಿತ್ರರಂಗದಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಅಶ್ವಥ್ ನಾರಾಯಣ್ ಅವರು ಬಹಿರಂಗ ಪಡಿಸಿದ್ದಾರೆ. ನಟಿ ಕಲ್ಪನಾ ಮತ್ತು ಇತರ ಕಲಾವಿದರ ಕರಾರು ಪತ್ರವನ್ನು ಶೇರ್ ಮಾಡುವ ಮೂಲಕ ಅಂದಿನ ಸೂಪರ್ ಸ್ಟಾರ್‌ಗಳ ಸಂಭಾವನೆ ವಿಚಾರ ಬಿಚ್ಚಿಟ್ಟಿದ್ದಾರೆ.
ಅಂದಹಾಗೆ ಮಿನುಗು ತಾರೆ ಕಲ್ಪನಾ ಅಂದು ಒಂದು ಸಿನಿಮಾಗೆ ೪ ಸಾವಿರ ರೂಪಾಯಿ ಪಡೆಯುತ್ತಿದ್ದರು. ಅದೇ ಅಂದಿಗೆ ಅತೀ ಹೆಚ್ಚು ಸಂಭಾವನೆಯಾಗಿತ್ತು. ಖ್ಯಾತ ಪೋಷಕ ನಟ ಬಾಲಕೃಷ್ಣ ಅವರ ಸಂಭಾವನೆ ೧೭೫೦ ರೂಪಾಯಿ ಮತ್ತು ನಟ ಶ್ರೀನಾಥ್ ಅವರು ೧೦೦೪ ರೂ. ಸಂಭಾವನೆ ಪಡೆಯುತ್ತಿದ್ದರು. ಅಂದಹಾಗೆ ೧೯೭೦ರಲ್ಲಿ ಬಂದ “ಅನಿರೀಕ್ಷಿತ” ಎಂಬ ಸಿನಿಮಾದ ಕರಾರು ಪತ್ರ ಇದಾಗಿದ್ದು ಆ ಸಿನಿಮಾಗೆ ಕಲ್ಪನಾ ಮತ್ತು ಶ್ರೀನಾಥ್ ಪಡೆದ ಸಂಭಾವನೆ ಇದಾಗಿದೆ. ಇಂದು ಈ ಸಂಖ್ಯೆಗಳನ್ನು ನೋಡಿದರೆ ತುಂಬಾ ಕಡಿಮೆ ಎನಿಸಬಹುದು. ಆದರೆ ಆ ಕಾಲಕ್ಕೆ ಇದು ಅತೀ ದೊಡ್ಡ ಸಂಭಾವನೆಯಾಗಿತ್ತು. ನಟರನ್ನು ಹಿಂದಿಕ್ಕಿ ನಟಿ ಕಲ್ಪನಾ ಹೆಚ್ಚು ಸಂಭಾವನೆ ಪಡೆದಿರುವುದು ಮಾದರಿಯಾಗಿದೆ.
ಈ ಅಶ್ವಥ್ ನಾರಾಯಣ್ ಶೇರ್ ಮಾಡಿರುವ ಮಾಹಿತಿಯಲ್ಲಿ, '೬೦-೭೦ ರ ದಶಕದಲ್ಲಿ ಕನ್ನಡದ ನಂಬರ್ ೧ ನಟಿ ಕಲ್ಪನಾ ರ ಸಂಭಾವನೆ ಒಂದು ಚಿತ್ರಕ್ಕೆ ೪ ಸಾವಿರ ರೂಪಾಯಿ ಮಾತ್ರ ಆಗಿತ್ತು. ಮತ್ತೊಬ್ಬ ಮೇರು ನಟ ಬಾಲಕೃಷ್ಣ ರವರ ಸಂಭಾವನೆ ೧೭೫೦ರೂಪಾಯಿ ಆಗಿತ್ತು. ಕೆಳಗಿನ ಕರಾರು ಪತ್ರವನ್ನು ಗಮನಿಸಿ ಇವು ನನ್ನ ಅಣ್ಣ ನಾಗೇಶ ಬಾಬುರವರು ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ "ಅನಿರೀಕ್ಷಿತ" ಚಿತ್ರದ ಕರಾರು ಪತ್ರಗಳು. ಶ್ರೀನಾಥ್ ನಾಯಕ ನಟರಾಗಿ ನಟಿಸಿದ ಎರಡನೆಯ ಚಿತ್ರ ಅವರ ಸಂಭಾವನೆ ೧೦೦೪ರೂ ಆಗಿತ್ತು. ಈ ಚಿತ್ರ ೧೯೭೦ರಲ್ಲಿ ಬಿಡುಗಡೆ ಆಯಿತು. ಆ ಸಮಯದಲ್ಲಿ ಅದೇ ದೊಡ್ಡ ಮೊತ್ತ ವಾಗಿತ್ತು' ಎಂದು ಹೇಳಿದ್ದಾರೆ.
“ಅನಿರೀಕ್ಷಿತ” ಸಿನಿಮಾ ಬಗ್ಗೆ ಹೇಳುವುದಾದರೆ ಈ ಸಿನಿಮಾ ೧೯೭೦ರಲ್ಲಿ ಬಿಡುಗಡೆಯಾಯಿತು. ನಾಯಕಿಯಾಗಿ ಕಲ್ಪನಾ ನಟಿಸಿದ್ದರು. ನಾಯಕನಾಗಿ ಶ್ರೀನಾಥ್ ಕಾಣಿಸಿಕೊಂಡಿದ್ದರು. ಇನ್ನೂ ಉಳಿದಂತೆ ಬಾಲಕೃಷ್ಣ, ಕೆ.ಎಸ್ ಅಶ್ವಥ್ ಮತ್ತು ಶಿವರಾಮ್ ಸೇರಿದಂತೆ ಅನೇಕರ ನಟಿಸಿದ್ದರು. ಬಿ ನಾಗೇಶ್ ಬಾಬು ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿದ್ದರು.
ಮಿನುಗುತಾರೆ ಕಲ್ಪನಾ ಬೆಳ್ಳಿ ತೆರೆಯಲ್ಲಿ ಯಶಸ್ವೀ ನಟಿಯಾದರೂ ನಿಜ ಜೀವನದಲ್ಲಿ ದುರಂತ ನಾಯಕಿಯಾದರು. ಅವರು ಪ್ರೀತಿಸಿದ ವ್ಯಕ್ತಿ ಯಾರೆಂದು ಇಂದಿಗೂ ನಿಗೂಢವಾಗಿಯೇ ಇದೆ. ಪ್ರೀತಿ ವೈಫಲ್ಯವೋ ಅಲ್ಲ ಜೀವನದಲ್ಲಿ ವೈರಾಗ್ಯವೋ ಗೊತ್ತಿಲ್ಲ ಅವರು ಅವರ ಬೆರಳಿನ ಉಂಗುರದಲ್ಲಿದ್ದ ವಜ್ರವನ್ನು ಅರೆದು ಕುಡಿದು ಆತ್ಮಹತ್ಯೆ ಮಾಡುವುದರೊಂದಿಗೆ ಅವರು ದುರಂತ ಕಂಡುಕೊಂಡರು.
-’ಮನು' ಶಕ್ತಿನಗರ
ಚಿತ್ರ ಕೃಪೆ: ಇಂಟರ್ನೆಟ್ ತಾಣ