೭೫ ವಸಂತಗಳ ಸಫಲ,-ಜೀವನ-ಸಂಭ್ರಮದ " ಮುಂಬೈನ ಕರ್ನಾಟಕ ಸಂಘ " !

೭೫ ವಸಂತಗಳ ಸಫಲ,-ಜೀವನ-ಸಂಭ್ರಮದ " ಮುಂಬೈನ ಕರ್ನಾಟಕ ಸಂಘ " !

ಬರಹ

ಒಂದು ಸಂಸ್ಥೆಯಾಗಲೀ ಅಥವಾ ಒಬ್ಬ ವ್ಯಕ್ತಿಯಾಗಲೀ ೭೫ ವರ್ಷಗಳನ್ನು ತನ್ನ ಜೀವಿತದಲ್ಲಿ ಸಮರ್ಥವಾಗಿ, ಅರ್ಥಪೂರ್ಣವಾಗಿ, ಕಳೆದನೆಂದರೆ, ಅದರಿಂದ ಸಿಕ್ಕುವ ಆನಂದಕ್ಕೆ ಎಣೆಯೆಲ್ಲಿದೆ ? ಈಗ ಅಂತಹದೇ ಒಂದು ಸುಂದರ ಸನ್ನಿವೇಷವನ್ನು ನಾವು ಮುಂಬೈನ ಒಂದು ಕನ್ನಡ ಸಂಘದ ಇತಿಹಾಸದಲ್ಲಿ ಕಾಣುತ್ತಿದ್ದೇವೆ. ಅದೇ, ಮುಂಬೈ ಮಹಾನಗರದ ಮಾಹಿಮ್ ಭಾಗದಲ್ಲಿ ತನ್ನ ಭವ್ಯ ಸ್ವಂತ ಕಟ್ಟಡವನ್ನು ಹೊಂದಿ, ಕನ್ನಡ ಸಾಹಿತ್ಯಲೋಕದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಿ ಗಮನಾರ್ಹ ಸೇವೆಯನ್ನು ಮಾಡಿದ ಕನ್ನಡಿಗರಿಗೆ ಪ್ರೋತ್ಸಾಹನೀಡಿ, ಕಲೆ, ಸಾಹಿತ್ಯ, ನಾಟಕ, ನೃತ್ಯ, ಮತ್ತು ಸಾಹಿತ್ಯರಚನೆ, ಕನ್ನಡ ಮರಾಠಿಜನರ ಮಧ್ಯೆ ಒಂದು ಮಧುರ ಕೊಂಡಿಯಾಗಿ, ಮುಂಬೈ ನಲ್ಲಿರುವ ಅನೇಕ ಕನ್ನಡ ಸಂಸ್ಥೆಗಳ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಒಂದು ಮಾದರಿ ಸಂಸ್ಥೆಯಾಗಿ ಬೆಳೆದು, ಭವಿಷ್ಯದಲ್ಲಿ ಇನ್ನೂ ಹಲವಾರು ಆಧುನಿಕ ಜಗತ್ತಿಗೆ ಸಂಬಂಧಿಸಿದ ಕೊಡುಗೆಗಳನ್ನು ಪ್ರದಾನಮಾಡುವ ಆಸೆಯಿಂದ ಎದುರುನೋಡುತ್ತಾ ದಾಪುಗಾಲು ಹಾಕುತ್ತಾ, ಶರವೇಗದಿಂದ, ಮುಂದೆಹೋಗುತ್ತಿರುವ ಹಿರಿಯಸಂಸ್ಥೆ-ಕರ್ನಾಟಕ ಸಂಘ !

೨೦೦೮-೦೯ ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಕರ್ನಾಟಕ ಸಂಘ ಹಮ್ಮಿಕೊಂಡಿತ್ತು. ಜೂನ್ ತಿಂಗಳ, ಮೊದಲನೆಯ ವಾರವೆಲ್ಲಾ ( ಜೂನ್ ೩ ರಿಂದ ಜೂನ್ ೭ ರವರೆಗೆ ) ’ಸಂಘದ ಅಮೃತೋತ್ಸವದ ಸಮಾರೋಪ ಸಮಾರಂಭ, ’ ವನ್ನು ಅತ್ಯಂತ ಅರ್ಥಪೂರ್ಣವಾಗಿ ನೆರೆವೇರಿಸಿದ್ದು. ಜೂನ್ ೭ ನೇ ತಾರೀಖಿನ ಸಂಜೆನಡೆದ ಕಾರ್ಯಕ್ರಮ, " ಈ ಸರಣಿಯ ಅಂತಿಮ ಹಾಗೂ ಅವಿಸ್ಮರಣೀಯ ರಂಗ ಕಾರ್ಯಕ್ರಮ, " ಸಂಭ್ರಮ, ಹಾಗೂ ಸಂತಸವನ್ನು ತಂದಿತ್ತು. ಮೊಟ್ಟಮೊದಲಿಗೆ, ’ಭಾವಸಂಗಮ, ’ (’ ಕಲಾಭಾರತಿಯಡಿಯಲ್ಲಿ) ಕಾರ್ಯಕ್ರಮವನ್ನು ಪ್ರಖ್ಯಾತ ಗಾಯಕಿ, ’ ಸಂಗೀತ ಬಾಲಚಂದ್ರ ಉಡುಪಿ, ’ ಹಾಗೂ ಅವರ ಬಳಗದಿಂದ ಶುರುವಾಯಿತು. ’ಸಂಗೀತ ’ ರವರು ತಮ್ಮ ಗಾಯನವನ್ನು ಜೂನ್, ೬ ನೆಯ ತಾರೀಖಿನಂದೂ ಕೊಟ್ಟಿದ್ದರು. ಇಂದು ನಮ್ಮ ಮುಂಬೈ ನ ಗಾಯಕ, ಗಣೇಶ್. ಡಿ. ಕೆ. ರಾವ್ ರವರೂ ಸಂಗೀತರವರ ಜೊತೆಯಲ್ಲಿ ಹಾಡಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದರು.

'ಗಜಾನನಂ ಭೂತ ಗಣಾದಿ ಸೇವಿತಾಂ, ದೇವತಾ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ, ಸುಮಾರು, ೩೫ ನಿಮಿಷಗಳವರೆಗೆ ನಡೆಯಿತು. 'ಪುರುಂದರದಾಸರ ಕೀರ್ತನೆ,' 'ಶರಣುಸಿದ್ಧಿವಿನಾಯಕ, ಶರಣುವಿದ್ಯಾಪ್ರದಾಯಕ.'. ಅತ್ಯಂತ ಸುಂದರವಾಗಿ ಹೊರಹೊಮ್ಮಿಬಂತು. ಸಂಗೀತಾರವರು, ಮೊದಲು, ಕೆ. ಎಸ್. ಎನ್ ರವರ, ’ ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನು’ ಎಂಬ ಸುಂದರ ಗೀತೆಯನ್ನು ಹಾಡಿದರು. (ಸಂತ ಸೂರ್ದಾಜಿಯವರು ರಚಿಸಿದ ಗೀತೆ, ’ ಮೈ ನಹಿ ಮಾಖನ್ ಖಾಯೋ ’ ಅತ್ಯಂತ ಜನಪ್ರಿಯ ಗೀತೆ ! ಇದನ್ನು ’ಅನೂಪ್ ಜಲೋಟರು ಅತ್ಯಂತ ಸುಂದರವಾಗಿ ಹಾಡಿ, ಅದನ್ನು ಅಮರಗೊಳಿಸಿದ್ದಾರೆ. ಅದೇ ಗೀತೆಯನ್ನು ಕನ್ನಡದಲ್ಲಿ ಎಚ್.ಎಸ್. ವಿ ರವರು ಬರೆದಿದ್ದಾರೆ)

ನಂತರ, ಡಾ. ಎಚ್. ಎಸ್. ವಿ ರವರ ರಚನೆ, ’ ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಗೀತೆ, ನಂತರ, ಮತ್ತೊಂದು ಎಚ್. ಎಸ್. ವಿ ರವರ ಗೀತೆ, ’ ಎಲ್ಲಿಗೆ ಹೋದರೂ ನಿಲ್ಲದೆ ಮಾಧವ ಎಲ್ಲರ ನಲ್ಲ, ಶ್ರೀ ಗೋಪಾಲ ’ ನೆಂಬ ಗೀತೆಯನ್ನು ಚೆನ್ನಾಗಿ ಹಾಡಿದರು. 'ತೆರೆದಿದೆ ಮನೆ, ಓ ಬಾ ಅತಿಥಿ ಹೊಸ ಬೆಳಕಿನ ಹೊಸಗಾಳಿಯ..ಹೊಸಬಾಳನು ತಾ ಅತಿಥಿ', ಗೀತೆ, ರಸಿಕರಿಗೆ ಮುದತಂದ ಮತ್ತೊಂದು ರಚನೆ. ಗಣೇಶ್ ರವರು, : ಶಿಶುನಾಳ ಶರೀಫರ, ’ ಗುಡಿಯನೋಡಿರಣ್ಣ ’ ಎಂಬ ಗೀತೆಯನ್ನು ಹಾಡಿದರು. ಸಂಗೀತಾ, ಮುಂದೆ, ಬೇಂದ್ರೆಯವರ ಗೀತೆಯಾದ, 'ತುಳ್ಕ್ಯಾಡುತಾ ತೂಕಡಿಕಿ, ಕನಸು ತೇಲಿ ಬರತಾವ ಈಗ ಹುಡುಕಿ,' ಎನ್ನುವ ಸೊಗಸಾದ ಗೀತೆಯ ಗಾಯನ ಹಾಡಿದರು.

ಗಣೇಶ್, ’ ಘಮಘಾಮ ಮಾಡಸ್ತಾವ ಮಲ್ಲಿಗಿ,’ ನೀ ಹೊರಟಿದ್ದೀ ಈಗೆಲ್ಲಿಗಿ'. ಮತ್ತು ಗಂಧದ ಗುಡಿಚಿತ್ರದ ಹಾಡು, ’ ನಾವಾಡುವ ನುಡಿಯೇ ಕನ್ನಡ ನುಡಿ, ಹಾಡನ್ನು ಹೇಳಿದರು. 'ಬಾರೆ ನಮ್ಮನೆತನಕ, ಅಮ್ಮ ಭಾಗ್ಯದ ದೇವಿ,' ಸಂಗೀತಾ ಬಾಲಚಂದ್ರರ ಇನ್ನೊಂದು ಪಾಪ್ಯುಲರ್ ನಂಬರ್ ಗೀತೆಯಾಗಿತ್ತು ! ಹೀಗೆ ದಣಿವರಿಯದ ಸಂಗೀತ ಬಾಲಚಂದ್ರ, ಮತ್ತು ಗಣೇಶ್ ಒಬ್ಬರಾದ ಮೇಲೆ ಒಬ್ಬರಂತೆ, ಹಲವಾರು ಕನ್ನಡ ಗೀತೆಗಳನ್ನು ಹಾಡಿ, ಸಂಜೆಯ ಕಾರ್ಯಕ್ರಮಕ್ಕೆ ’ಕಾಮನಬಿಲ್ಲಿನ” ಸೊಗಸನ್ನು ತಂದುಕೊಟ್ಟರು ! ’ ಕಲಾಭಾರತಿ ಕಾರ್ಯಕ್ರಮ ’ ವನ್ನು ನಡೆಸಿಕೊಟ್ಟವರು, ಶ್ರೀ. ಪದ್ಮನಾಭ ಸಸಿಹಿತ್ಲುರವರು. ಇವರು ಹಾಡುಗಾರರು ಸಹಿತ. ಕೊನೆಯಲ್ಲಿ, ಸಂಧ್ಯಾರಾಗ ಚಿತ್ರದ, ’ಕಂಗಳ ತೊಳೆ ಈ ಕೆಂಪಿನಲಿ, ಸುಂದರ ಸಂಧ್ಯಾರಾಗದಲಿ ’ ಎಂಬ ಸುಂದರಗೀತೆಯನ್ನು ಅವರೇ ಹಾಡಿದರು. ಚಿತ್ರದಲ್ಲಿ, ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸಂಘದ ಅಧ್ಯಕ್ಷ, ಶ್ರೀ ಮನೋಹರ್ ಕೋರಿ, ಯವರು, ಪ್ರಸಿದ್ಧ ಸಾಹಿತಿ, ಕವಿ, ಡಾ. ಬಿ. ಎ. ಸನದಿಯವರಿಗೆ, ಪುಷ್ಪಗುಚ್ಛವನ್ನು ಮತ್ತು ಸ್ಮೃತಿಚಿನ್ಹೆಯನ್ನು ನೀಡಿ, ಗೌರವಿಸಿದರು.

ಇದರಲ್ಲಿ ಪಾಲ್ಗೊಂಡವರು, ಶ್ರೀ. ನಾಯಕ್, ಶ್ರೀ. ಗಿರೀಶ್ ಕಾಸರವಳ್ಳಿ, (ಪ್ರಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕರು) ಶ್ರೀ. ಕೆ. ಎಮ್. ಮಲ್ಲಿಕಾರ್ಜುನ ಪ್ರಸನ್ನ, (ಐ. ಪಿ. ಎಸ್,ಡೆಪ್ಯುಟಿ ಕಮೀಶನರ್ ಆಫ್ ಪೋಲಿಸ್, ಮುಂಬೈ), ಶ್ರೀ. ಶ್ರೀನಿವಾಸ ಜಿ. ಕಪ್ಪಣ್ಣ, (ಪ್ರಖ್ಯಾತ ಸಂಘಟಕರು, ಮಾಜೀ ಅಧ್ಯಕ್ಷರು, ಕರ್ನಾಟಕ ನಾಟಕ ಅಕ್ಯಾಡಮಿ, ಬೆಂಗಳೂರು ) ಶ್ರೀ. ವಿಜಯಕುಮಾರ್ ಶೆಟ್ಟಿ ಕೆಮ್ಮಣ್ಣು, ( ನಟ, ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತರು) ಮತ್ತು ಗೌ. ಕಾರ್ಯದರ್ಶಿ, ಶ್ರೀ. ಓಂದಾಸ ಕಣ್ಣಂಗಾರ್. ಸರಿಯಾಗಿ, ೪-೩೫ ಕ್ಕೆ ಅತಿಥಿಗಳಿಗೆ ’ಗೌರವ ಪ್ರದಾನ ಕಾರ್ಯಕ್ರಮ,’ ಶುರುವಾಯಿತು. ಪ್ರಮುಖ ಅತಿಥಿಗಳು, ಡಾ. ಬಿ. ಎ, ಸನದಿ, ಶ್ರೀನಿವಾಸ ಕಪ್ಪಣ್ಣ, ಶ್ರೀ. ಗಿರೀಶ್ ಕಾಸರವಳ್ಳಿ, ಶ್ರೀ. ಕೆ. ಎಮ್. ಮಲ್ಲಿಕಾರ್ಜುನ ಪ್ರಸನ್ನ, ಶ್ರೀ. ವಿಜಯಕುಮಾರ್ ಶೆಟ್ಟಿ ಕೆಮ್ಮಣ್ಣು, ಮುಂತಾದವರು. ಕರ್ನಾಟಕ ಸಂಘದ ಉಪಾಧ್ಯಕ್ಷ, ಶ್ರೀ. ಭರತ್ ಕುಮಾರ್ ಪೊಲಿಪುರವರು, ಸಂಘ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳಬಗ್ಗೆ ಮತ್ತು ಮತ್ತಿತರ ವಿಶಯಗಳನ್ನು ಎಲ್ಲರಿಗೂ ಸವಿಸ್ತಾರವಾಗಿ ತಿಳಿಸಿದರು.

ಮೊದಲು ಡಾ. ಬಿ. ಎ. ಸನದಿಯವರನ್ನು ಗೌರವಿಸಲಾಯಿತು. ನಂತರ, ಗೌರವ ಅತಿಥಿ, ಕನ್ನಡ ಚಲನ ಚಿತ್ರ ನಿರ್ದೇಶಕ, ಶ್ರೀ. ಗಿರೀಶ್ ಕಾಸರವಳ್ಳಿಯವರನ್ನು, ನಂತರ, ಗೌರವ ಅತಿಥಿ, ಶ್ರೀ. ಕೆ. ಎಮ್. ಮಲ್ಲಿಕಾರ್ಜುನ ಪ್ರಸನ್ನರನ್ನೂ ನಂತರ, ಗೌರವ ಅತಿಥಿ, ಶ್ರೀನಿವಾಸ ಜಿ. ಕಪ್ಪಣ್ಣ, ಹಾಗೂ ಗೌರವ ಅತಿಥಿ, ಶ್ರೀ. ವಿಜಯಕುಮಾರ್ ಶೆಟ್ಟಿ ಕೆಮ್ಮಣ್ಣು, ರವರನ್ನು ಪುರಸ್ಕರಿಸಲಾಯಿತು.

ಉಪಾಧ್ಯಕ್ಷ ಪೊಲಿಪು ಕಾರ್ಯಕ್ರಮ ನಿರೂಪಣೆಯನ್ನು ನಿರ್ವಹಿಸಿದರು. ಅಧ್ಯಕ್ಷ ಕೋರಿಯವರು, ಸಭಾಂಗಣದಲ್ಲಿದ್ದ ಗಣ್ಯರನ್ನೂ ಹಾಗೂ ಅತಿಥಿಗಳನ್ನೂ ಸ್ವಾಗತಿಸಿದರು. ಕೋಶಾಧಿಕಾರಿ, ಶ್ರೀ ಬಿ. ಜಿ. ನಾಯಕ್ ವೇದಿಕೆಯಮೇಲಿದ್ದ ಕೆಲವು ಅಥಿಗಳಿಗೆ ಗೌರವ ಸೂಚಿಸಲು ಸಹಕರಿಸಿದರು. ಇತರೆ ಪದಾಧಿಕಾರಿಗಳಾದ, ಗೌ. ಕಾರ್ಯದರ್ಶಿ, ಓಂದಾಸ ಕಣ್ಣಂಗಾರ್, ಜಂಟಿ ಕಾರ್ಯದರ್ಶಿ, ಶ್ರೀನಿವಾಸ ಜೋಕಟ್ಟೆ, ಸಾಂಸ್ಕೃತಿಕ ವಿಭಾಗದ ಸದಸ್ಯ, ಅವಿನಾಶ್ ಕಾಮತ್, ಅತಿಥಿಗಳನ್ನು ಪರಿಚಯಿಸುವ ಕಾರ್ಯದಲ್ಲಿ ಸಹಕರಿಸಿದರು. ಅತಿಧಿಗಳಲ್ಲಿ ಪ್ರಥಮರು ಹಾಗೂ ಹಿರಿಯರಾಗಿದ್ದ, ಕವಿ, ನಾಡೋಜ, ಡಾ. ಬಿ. ಎ. ಸನದಿಯವರು, ಮಾತನಾಡಿ, ನಮ್ಮ ಕನ್ನಡಿಗರು, ಇರುವುದು ಮುಂಬೈ ನಂತಹ ವೈವಿಧ್ಯಮಯ ಭಾಷೆ, ಸಂಸ್ಕೃತಿಯಪರಿಸರದಲ್ಲಿ. ಆದ್ದರಿಂದ, ಇಲ್ಲಿನ ಪ್ರಮುಖವಾಹಿನಿಯಲ್ಲಿ ನಮ್ಮ ತನವನ್ನು ಉಳಿಸಿಕೊಂಡು ನಮ್ಮಜೊತೆಯಲ್ಲಿರುವ ಎಲ್ಲ ಸಮುದಾಯಗಳ ಜೊತೆ ಮೈತ್ರಿ, ಬಾಂಧವ್ಯ ಹಾಗೂ ಗೆಳೆತನವನ್ನು ಬೆಳೆಸಿಕೊಳ್ಳುವುದು ಮುಖ್ಯ. ನಮ್ಮ ಅರಿವು ಹೆಚ್ಚಾದಂತೆ ವಿಶಾಲಮನೋಭವ ನಮ್ಮನ್ನು ಆವರಿಸಬೇಕೆಂದರು.

ಬೇರೆ ಕನ್ನಡ ಸಂಘಸಂಸ್ಥೆ ಗಳ ಜೊತೆಗೆ ಸ್ನೇಹ ಬೆಳೆಸಿ, ಒಟ್ಟಾಗಿ ಕನ್ನಡಿರೆಲ್ಲಾ ತಮ್ಮ ಒಳಿತಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಂಘವು,ಆಧ್ಯಕ್ಷ ಕೋರಿಯವರ ನಾಯಕತ್ವದಲ್ಲಿ ಮಂಚೂಣಿಯಲ್ಲಿದೆ, ಎಂದರು. ತಾವು ಕುಮುಟಾದ ಮೂಲೆಯಲ್ಲಿದ್ದರೂ ಅವರ ಹೃದಯದ ಬಡಿತದ ಭಾಗ , ಮುಂಬೈನ ಕನ್ನಡ ಸಾಂಸ್ಕೃತ ಲೋಕದ ಹಿತಾಸಕ್ತಿಗಳ-ವಾರ್ತೆಗೆ, ಮೀಸಲೆಂದು ಹೇಳಿದರು. ಆಗ, ತಮ್ಮ ಜೊತೆಗಾರರಾಗಿದ್ದ, ಶ್ರೀ. ವರದರಾಜಆದ್ಯ, ಶ್ರೀ. ಎ. ಎಸ್. ಕೆ. ರಾವ್, ಶ್ರೀಪತಿಬಲ್ಲಾಳ, ಶ್ರೀ. ವ್ಯಾಸರಾವ್ ಬಲ್ಲಾಳ, ಶೀ. ಸದಾನಂದ ಶೆಟ್ಟಿ, ಮುಂತಾದ ಹಿರಿಯ ಚೇತನಗಳನ್ನು ಸ್ಮರಿಸಿಕೊಂಡರು.

ಗಿರೀಶ್ ಕಾಸರವಳ್ಳಿಯವರು, ಇತ್ತೀಚೆಗೆ ಅಮೃತೋತ್ಸವವನ್ನು ಆಚರಿಸಿಕೊಂಡ, ಕನ್ನಡ ಸಿನಿಮಾರಂಗದ ಇತಿಹಾಸವೂ, ಸುಮಾರು ೭೫ ವರ್ಷಗಳಷ್ಟು ಹಳೆಯದು. ಕರ್ನಾಟಕ ಸಂಘ, ಇಂದು ಆಚರಿಸಿಕೊಳ್ಳುತ್ತಿರುವ ಈ ಸಂಭ್ರಮದ ಉತ್ಸವ, ನಿಜಕ್ಕೂ ಅರ್ಥಗರ್ಭಿತವಾಗಿದೆ. ಸಂಘವನ್ನುಕಟ್ಟಿ ಬೆಳೆಸಿದ ಹಿರಿಯ-ಚೇತನಗಳನ್ನು ಸ್ಮರಿಸಿ, ಅವರ ಆದರ್ಶಗಳನ್ನು ಕಾರ್ಯರೂಪಕ್ಕೆತರಲು ಪ್ರೇರೇಪಣೆ ಇಂದು ಮತ್ತೆ ನಮಗೆ ದೊರೆಯುತ್ತಿದೆ, ಎಂದರು. ಕೇವಲ ಭಯ, ಹಾಗೂ ಅದಕ್ಕಾಗಿ, ನಮ್ಮಜನರಜೊತೆಯ ಒಡನಾಟದಿಂದ ಬಲಬರುತ್ತದೆ, ಎಂದು ಸಂಘಟಿಸದೆ, ನಮ್ಮ ನಾಡು, ನುಡಿಗೆ ಏನಾದರೂ ನಮ್ಮಕೊಡುಗೆಯನ್ನು ಕೊಡುವ ಉದ್ದೇಶ್ಯದಿಂದ ನಾವುಕಾರ್ಯರಥರಾಗಬೇಕು. ಎಂದು ನುಡಿದರು.

ಶ್ರೀ. ಶ್ರೀನಿವಾಸ ಜಿ. ಕಪ್ಪಣ್ಣನವರು, " ಕಪ್ಪಾಗಿರುವ ತಮಗೆ, ಕೆಂಪುಶಾಲನ್ನು ಹೊದಿಸಿಮಾಡಿದ ಸನ್ಮಾನ ಖುಷಿತಂದಿದೆ. ಈ ವಿಶಯ ತಿಳಿದಿದ್ದರೆ, ನನ್ನ ಶ್ರೀಮತಿಯವರನ್ನೂ ಕರೆತರುತ್ತಿದ್ದೆ, " ಎಂದು ನಗಾಡಿದರು. ಯಾವಾಗಲೂ ಇಂತಹ ಸಮಾರಂಭಗಳಲ್ಲಿ ರಾಜಕಾರಣಿಗಳನ್ನು ಕರೆಸಿ, ಅದ್ಧೂರಿಯಾಗಿ ಆಚರಿಸುವುದು ವಾಡಿಕೆ ; ಆದರೆ, ಕರ್ನಾಟಕ ಸಂಘ, ಹಮ್ಮಿಕೊಂಡ ಕಾರ್ಯವೈಖರಿ, ನಜಕ್ಕೂ ಅನುಕರಣೀಯವೆಂದು ಕೊಂಡಾಡಿದರು.

’ ಹೊರನಾಡ ಸಾಂಕೃತಿಕ ರಾಯಭಾರಿ, ’ ಯೆಂಬ ಬಿರುದನ್ನು ಕಪ್ಪಣ್ಣನವರಿಗಿತ್ತು ಸಂಘ, ತನ್ನ ಪ್ರೀತಿ-ಗೌರವಾದರಗಳನ್ನು ಪ್ರದರ್ಶಿಸಿತು. ಶ್ರೀ. ವಿಜಯಕುಮಾರ್ ಶೆಟ್ಟಿ ಕೆಮ್ಮಣ್ಣು, ಮಾತನಾಡಿ, ವೇದಿಕೆಯಮೇಲೆ ಉಪಸ್ತಿತರಿರುವ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಅವರಿಗೆ ಸಿಕ್ಕ ಸನ್ಮಾನ , ನಿಜಕ್ಕೂ ಆನಂದವನ್ನುಂಟುಮಾಡಿದೆಯೆಂದರು. ಕೇವಲ ಒಬ್ಬ ವ್ಯಕ್ತಿಗೆ ಈ ಗೌರವ ಸಲ್ಲದು. ತಾವು ಹಿಂದೆ ಸ್ಥಾಪಿಸಿದ, ’ಕಲಾಜಗತ್ತು ಬಳಗ,’ ಕ್ಕೆ ಎಲ್ಲ ಶ್ರೇಯಸ್ಸು ಸೇರಬೇಕೆಂದು, ಮನವಿಮಾಡಿಕೊಂಡರು. ಕನ್ನಡಿಗರೇ ಆದರ್, ಶ್ರೀ. ಕೆ. ಎಮ್. ಮಲ್ಲಿಕಾರ್ಜುನ ಪ್ರಸನ್ನ, ಮುಂಬೈನಗರದ ಡೆಪ್ಯುಟಿ ಕಮೀಶನರ್ ಆಫ್ ಪೋಲೀಸ್, ಆಗಿ ಸೇವೆಸಲ್ಲಿಸುತ್ತಿದ್ದಾರೆ. ಶುದ್ಧ, ಹಾಗೂ ಅತ್ಯುತ್ತಮ ಕನ್ನಡವನ್ನು ಮಾತಾಡಿದ ಅವರು, ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಜನರ ಮನಗಳನ್ನು ಬೆಸೆಯುವ ಕಾರ್ಯವನ್ನು ಸಂಘಮಾಡುತ್ತಾಬಂದಿರುವುದನ್ನುಶ್ಲಾಘಿಸಿದ ಅವರು, ಮುಂದೆಯೂ ಸಂಘಕ್ಕೆ ಯಶಸನ್ನುಕೋರಿದರು.

ಕಾರ್ಯಕ್ರಮದ ಕೊನೆಯಲ್ಲಿ, ರಾಷ್ಟ್ರಪ್ರಶಸ್ತಿ ವಿಜೇತ, ವೈದೇಹಿಯವರ ಕಥೆಯ ಮೇಲೆ ಆಧಾರಿತವಾದ, " ಗುಲಾಬಿ ಟಾಕೀಸು, " ಕನ್ನಡ ಚಲನಚಿತ್ರಪ್ರದರ್ಶನವಾಯಿತು. ಈ ಚಿತ್ರದ ನಿರ್ದೇಶಕರು, ಶ್ರೀ. ಗಿರೀಶ್ ಕಾಸರವಳ್ಳಿ.

-ಚಿತ್ರ-ವೆಂ.