೭೭ ರ ಹರೆಯದ ಕೂಲಿಕಾರ ಚೆನ್ನಪ್ಪನ ಸ್ವಗತ...

ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ ೭೦ ವರ್ಷವಾಯಿತು. ೭ ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ ೭೭ ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ. ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ ಹೊರುವುದು. ಲಾರಿಗಳಿಗೆ ಮೂಟೆ ತುಂಬುವುದು ಮತ್ತು ಇಳಿಸುವುದು. ಈಗಿನ ಯುವ ಜನಾಂಗಕ್ಕೆ ತುಂಬಾ ಆಶ್ಚರ್ಯವಾಗಬಹುದು ಅಥವಾ ಕೆಲವರು ನಂಬದೇ ಇರಬಹುದು.
ಇಲ್ಲಿಯವರೆಗೂ ನಾನು ಒಮ್ಮೆಯೂ ಯಾವುದೇ ಗಾಯ ಅಥವಾ ಖಾಯಿಲೆಯಿಂದ ಆಸ್ಪತ್ರೆಗೆ ಹೋಗಿಲ್ಲ. ೬೫ ನೆಯ ವಯಸ್ಸಿನಲ್ಲಿ ಒಮ್ಮೆ ಹೊಟ್ಟೆ ನೋವು ಮತ್ತು ೭೩ ನೆಯ ವಯಸ್ಸಿನಲ್ಲಿ ಹಲ್ಲು ನೋವು ಬಂದಾಗ ಔಷಧಿ ಅಂಗಡಿಯಿಂದ ಎರಡೆರಡು ಮಾತ್ರೆ ತೆಗೆದುಕೊಂಡಿದ್ದು ಬಿಟ್ಟರೆ ಆಕಡೆ ತಲೆಯೇ ಹಾಕಿಲ್ಲ. ನನಗೆ ೬ ಜನ ಮಕ್ಕಳು. ೪ ಗಂಡು ೨ ಹೆಣ್ಣು. ಎಲ್ಲಾ ಹೆರಿಗೆಗಳು ಸಹಜವಾಗಿ ಮತ್ತು ಮನೆಯಲ್ಲಿಯೇ ಆಗಿದೆ. ಎರಡು ದಿನಕ್ಕೆ ಒಮ್ಮೆ ಹಲ್ಲುಜ್ಜುವ ನನ್ನ ಎಲ್ಲಾ ಹಲ್ಲುಗಳು ಈಗಲೂ ಕಬ್ಬನ್ನು ಕಚ್ಚಿ ತಿನ್ನುವಷ್ಟು ಗಟ್ಟಿಯಾಗಿಯೇ ಇದೆ. ಈಗಲೂ ತಲೆಯಲ್ಲಿ ದಟ್ಟ ಕೂದಲಿದೆ. ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಿದರೂ ಕೂದಲು ಸೊಂಪಾಗಿ ಬೆಳೆಯುತ್ತದೆ. ನಾನು ವಾರಕ್ಕೆ ಒಮ್ಮೆ ಮಾತ್ರ ತಲೆಗೆ ಸ್ನಾನ ಮಾಡುವುದು.
ಕಣ್ಣುಗಳು ಸಹ ಇರುವಂತೆಯೇ ಇದೆ. ಸಮಯವಾದಾಗ ಬರಿಗಣ್ಣಿನಿಂದ ಕನ್ನಡ ಪತ್ರಿಕೆ ಓದುತ್ತೇನೆ. ದೂರದ ವಸ್ತುಗಳೂ ಸ್ಪಷ್ಟವಾಗಿ ಕಾಣುತ್ತದೆ. ಊಟದಲ್ಲಿ ಪಥ್ಯ ಎಂಬುದೇ ಗೊತ್ತಿಲ್ಲ. ಮನೆ ಊಟದ ಜೊತೆಗೆ ಹೊರಗಡೆ ಯಾರು ಏನೇ ಕೊಟ್ಟರೂ ಅಥವಾ ಕೊಡಿಸಿದರು ತಿನ್ನುತ್ತೇನೆ. ಯಾವುದೇ ಸಮಯದಲ್ಲೂ ದಿಂಬಿನ ಮೇಲೆ ತಲೆ ಇಟ್ಟರೆ ಸಾಕು ಮೈ ಮರೆಯುವಷ್ಟು ನಿದ್ದೆ ಮಾಡುತ್ತೇನೆ.
ಸಿಗರೇಟು ಮದ್ಯದ ದುರಭ್ಯಾಸ ಮಾತ್ರ ಇಲ್ಲ. ಮೂಟೆ ಕೂಲಿಯ ಕೆಲಸದ ನನಗೆ ಸುಳ್ಳು ಹೇಳುವ ಅವಕಾಶವೇ ಬರಲಿಲ್ಲ. ಆಸೆ ಪಡುವಷ್ಟು ಆಯ್ಕೆಗಳೂ ನನಗಿರಲಿಲ್ಲ. ಪ್ರವಾಸ ತೀರ್ಥಯಾತ್ರೆ ಒಮ್ಮೆಯೂ ಹೋಗಿಲ್ಲ. ಎಲ್ಲಾ ೬ ಮಕ್ಕಳಿಗೂ ಮದುವೆಯಾಗಿದೆ. ನನ್ನ ಹೆಂಡತಿಯ ಸಂಬಂಧಿಕರಲ್ಲೇ ಋಣಾನುಬಂಧ ಕೂಡಿ ದೇವಸ್ಥಾನದಲ್ಲಿ ಮದುವೆ ಮಾಡಿ ಕೊಟ್ಟೆವು. ಮದುವೆ ದಿನ ಕೂಡ ನಾನು ಅರ್ಧ ದಿನ ಕೂಲಿ ಮಾಡಿದೆ. ನನ್ನ ಯಾವ ಮಕ್ಕಳೂ ಶಾಲೆಗೆ ಹೋಗಿಲ್ಲ. ಅವರೂ ಕೂಲಿ ಮಾಡುತ್ತಲೇ ಬದುಕು ಕಟ್ಟಿಕೊಂಡವರು.
ಮನೆಯೇ ಇಲ್ಲದೆ ಬೀದಿಯಿಂದ ಪ್ರಾರಂಭವಾದ ಬದುಕು ಮೊದಲು ಗುಡಿಸಲು, ನಂತರ ಧರ್ಮ ಛತ್ರ, ಆಮೇಲೆ ಕೊಳಗೇರಿ, ಅನಂತರ ಈಗ ಸರ್ಕಾರ ಉಚಿತವಾಗಿ ಕೊಟ್ಟಿರುವ ಮನೆಯಲ್ಲಿ ಜೀವನ ನಡೆಸುತ್ತಿದ್ದೇನೆ. ಯಾವುದೇ ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿಯೂ ಬಿಪಿ ಶುಗರ್ ಅಥವಾ ಇನ್ಯಾವುದೂ ಚೆಕ್ ಮಾಡಿಸಿಲ್ಲ. ಈಗಾಗಲೇ ೭೭ ರಲ್ಲಿರುವ ನಾನು ಶಿವ ಕರೆದಾಗ ಹೋಗಲು ಸಿದ್ದನಾಗಿದ್ದೇನೆ. ಅದ್ಯಾರೋ ಬಸವಣ್ಣ ಅಂತ ಒಬ್ಬರು ಬಹಳ ಹಿಂದೆಯೇ ಹೇಳಿದ್ದರಂತೆ " ಕಾಯಕವೇ ಕೈಲಾಸ " ಅಂತ. ಅದು ನಿಜವಿರಬೇಕು ಅನಿಸುತ್ತಿದೆ !
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ