೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ

೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು ಮೊತ್ತಮೊದಲು ಗಮನಿಸುವುದು ಅವರಿಗೆ ವಯಸ್ಸು ಎಷ್ತಾಗಿತ್ತೆಂದು.

ಹಾಗೆ ಗಮನಿಸಿದಾಗ ಪ್ರತಿ ಬಾರಿಯೂ ನಾನು ಕಂಡುಕೊಳ್ಳುವುದು ಏನೆಂದರೆ ಅವರು ವಯಸ್ಸಿನಲ್ಲಿ ನನಗಿಂತ ಕಿರಿಯರು ಎಂಬುದನ್ನು. ಹಾಗಿರುವಾಗ ತೊಂಬತ್ತರ ಹತ್ತಿರ ಬಂದಿರುವ ನಾನು ಇನ್ನೂ ಅದೇನು ಮಾಡುತ್ತಿದ್ದೇನೆ ಈ ಜಗತ್ತಿನಲ್ಲಿ?

ಈಗಲೇ ಈ ಜಗತ್ತಿಗೆ ವಿದಾಯ ಹೇಳಬೇಕೆಂದಿಲ್ಲ ನನಗೆ. ಜಿ. ಪಿ. ರಾಜರತ್ನಂ ಅವರ "ಜವರಾಯ"ನ ಬಗೆಗಿನ ಕವನದಲ್ಲಿ ಹೇಳಿದಂತೆ, ನಾನು ವಿದಾಯ ಹೇಳುವ ಮುನ್ನ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ ಅನಿಸುತ್ತದೆ.

ಮೊದಲನೆಯದಾಗಿ, ಯಾರೊಬ್ಬನ ಸ್ವಾರ್ಥ ಏನೇ ಇರಲಿ, ಪ್ರತಿಯೊಬ್ಬರಿಗೂ ಬದುಕುವುದಕ್ಕಾಗಿ ಒಂದು ಒಳ್ಳೆಯ ಮತ್ತು ಉದಾತ್ತ ಉದ್ದೇಶ ಇರಬೇಕು. ಹಾಗೂ ಅದನ್ನು ಸಾಧಿಸಲಿಕಾಗಿ ಆತನು ತನ್ನಿಂದಾಗುವ ಪ್ರಯತ್ನ ಮಾಡುತ್ತಲೇ ಇರಬೇಕು.

ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಆದರ್ಶ ಸಮಾಜವೊಂದರ ಸ್ಥಾಪನೆಗಾಗಿ ನಾನು ದೊಡ್ಡ ಕೆಲಸ ಮಾಡುತ್ತಿದ್ದೇನೆಂದು ಭಾವಿಸಿದ್ದೆ. ನನ್ನ ಜೀವನದ ಹಲವು ವರುಷಗಳನ್ನು ಆ ಚಿಂತನೆ ಸಾಕಾರಗೊಳಿಸಲಿಕ್ಕಾಗಿ ಮತ್ತು ಪಸರಿಸಲಿಕ್ಕಾಗಿ ವ್ಯಯಿಸಿದೆ. ಅನಂತರ ನನಗೆ ಅರಿವಾಯಿತು: ಅದು ನನ್ನಿಂದಾಗುವ ಕೆಲಸವಲ್ಲ.

ಬಳಿಕ ನಾನು ನಿರ್ಧರಿಸಿದೆ: ಬಹುಜನರಿಗೆ ಸಹಾಯವಾಗಬಲ್ಲ ವಿಷಯವೊಂದನ್ನು ಪ್ರಚಾರ ಮಾಡಬೇಕೆಂದು. ಅದೇನೆಂದರೆ, ಕೃಷಿಯನ್ನು ಸುಧಾರಿಸಲಿಕ್ಕಾಗಿ ವೈಜ್ನಾನಿಕ ಕೃಷಿ ವಿಧಾನಗಳನ್ನು ಜನಪ್ರಿಯಗೊಳಿಸುವುದು. ಈ ಉದ್ದೇಶ ಸಾಧನೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದೆ. ಆದರೆ ಇದರಲ್ಲಿಯೂ ನಾನು ಸಾಧಿಸಬೇಕಾದ್ದು ಬಹಳಷ್ಟಿದೆ.

ಅನಂತರ ನಾನು ದುಡಿದದ್ದು ನಮ್ಮ ಅಡ್ಡೂರು ಕುಟುಂಬದ ಮನೆ ಮತ್ತು ಜಮೀನನ್ನು ಉಳಿಸಿ ಅಭಿವೃದ್ಧಿ ಪಡಿಸಲಿಕ್ಕಾಗಿ.

ಕೊನೆಯದಾಗಿ ನಾನು ನನ್ನೆಲ್ಲ ಸಾಮರ್ಥ್ಯ ಮತ್ತು ಸಮಯ ಮೀಸಲಾಗಿಟ್ಟದ್ದು ನನ್ನ ತೋಟವನ್ನು ಮಾದರಿ ಸಾವಯವ ತೋಟವಾಗಿ ರೂಪಿಸಲಿಕ್ಕಾಗಿ. ಈಗ ಬದುಕಿನ ಕೊನೆಯ ಹಂತದಲ್ಲಿ ಅದನ್ನು ಸಾಧಿಸುತ್ತೇನೆಂಬ ನಂಬಿಕೆ ನನಗಿಲ್ಲ.  

ಅಂತಿಮವಾಗಿ ನನಗಿರುವ ಒಂದು ಆಶೆ: ಓದುತ್ತಾ ಓದುತ್ತಾ ಉಪಯುಕ್ತ ಜ್ನಾನವನ್ನೆಲ್ಲ ತಿಳಕೊಂಡು, ಅದನ್ನು ಜನರಲ್ಲಿ ಪಸರಿಸುವುದು. ಇದೊಂದು ಕೆಲಸವನ್ನು ಯೌವನದ ಕಾಲದಿಂದಲೂ ಮಾಡುತ್ತಿದ್ದೇನೆ ಮತ್ತು ಭವಿಷ್ಯದ ಕಾಲದಲ್ಲಿಯೂ ಮಾಡಲಿದ್ದೇನೆ.

ಇದರಲ್ಲಿಯೂ ನನಗೊಂದು ತೊಂದರೆಯಿದೆ. ಇತರು ಹೇಳಿದ್ದನ್ನು ಕೇಳಲು ಮತ್ತು ಅಭಿಪ್ರಾಯ ವಿನಿಮಯ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ನನಗೀಗ ಕಿವಿ ಕೇಳಿಸುತ್ತಿಲ್ಲ. ನಾನು ಮಾತನಾಡಬಲ್ಲೆ. ಆದರೆ ನಾನು ಹೇಳುವುದನ್ನು ಕೇಳಲು ಇತರರಿಗೆ ಆಸಕ್ತಿಯಿದೆ ಎಂಬ ವಿಶ್ವಾಸ ನನಗಿಲ್ಲ.

ಅದೇನಿದ್ದರೂ, ನನ್ನ ಜೀವಮಾನದಲ್ಲಿ ನಾನು ಗಳಿಸಿದ ಜ್ನಾನವನ್ನು ಆಧರಿಸಿದ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ತಯಾರಾಗಿದ್ದೇನೆ. ಯಾವತ್ತಾದರೂ ಯಾರಾದರೊಬ್ಬರಿಗೆ ಅದರಿಂದ ಸಹಾಯವಾದೀತು. ನನ್ನ ಕೊನೆಯ ಉಸಿರಿನ ವರೆಗೆ ಈ ಕೆಲಸ ಮಾಡಲು ಆಶಿಸುತ್ತೇನೆ.

ಜ್ನಾನಪ್ರಸಾರದ ಕಾಯಕ ಮಾಡುತ್ತಲೇ ನಾನು ಪ್ರಪಂಚ ತೊರೆದರೆ ಅದೇ ಒಳಿತು. ಯಾಕೆಂದರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರಿಗೂ ಸಾವು ಬರುತ್ತದೆ. ಹಾಗಿರುವಾಗ, ಎಲ್ಲರ ಒಳಿತಿಗಾಗಿ ಕಿಂಚಿತ್ ಕೆಲಸ ಮಾಡಿದ್ದೇನೆಂಬ ಭಾವದಲ್ಲಿ ಸಂತೋಷದಿಂದ ಸಾಯುವುದಿದೆಯಲ್ಲ, ಅದುವೇ ಒಳ್ಳೆಯ ಸಾವು.
                   
 

Comments