ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ..
ಉದಯವಾಣೆಯ 'ಅವಳು' ವಿಭಾಗದಲ್ಲಿ (ಜೂನ್ ೧೦, ೨೦೧೫) ಪ್ರಕಟಗೊಂಡ ನನ್ನ ಲೇಖನ 'ನಾನು ನನ್ನ ತಿನಿಸು':
'ಅಮ್ಮ, ಜ್ಯೂಸ್ ಬೇಕಾ, ಜ್ಯೂಸ್... ನಿಂಬೆ ಹಣ್ಣು ಜ್ಯೂಸ್...' ಅಂತ ನಮ್ಮ ಒಂದು ವರ್ಷ ಆರು ತಿಂಗಳ ಮಗಳು (ಈಗ ಒಂದು ವರ್ಷ ಎಂಟು ತಿಂಗಳ ಹೊಸ್ತಿಲಲ್ಲಿ) ಮನೆ ತುಂಬ ಓಡಾಡುತ್ತ ಕೂಗಿ ಕೇಳಿದರೆ, ನಿಂಬೆ, ಸಕ್ಕರೆ ಸೇರಿಸಿದ ಪಾನಕ ರೆಡಿ. 'ಅಮ್ಮ, ಮಂಡಕ್ಕಿ, ಮಂಡಕ್ಕಿ ಕೊಡೂ...ಇನ್ನೂ ಚೂರು...ಇನ್ನೂ ಚೂರು...' ಅಂತ ಕೇಳಿದ್ರೆ, ಖಾರ ಹಚ್ಚಿದ ಮಂಡಕ್ಕಿ ಪುಟ್ಟ ತಟ್ಟೆಯಲ್ಲಿ ಹಾಕಿಟ್ಟರೆ ಅವಳೇ ಒಂದೊಂದೇ ಆರಿಸಿ ತಿನ್ನುವಳು.
ಇದು ಇತ್ತೀಚೆಗಿನ ಸಂಗತಿ. ಇನ್ನು ಮೂರು ವರುಷ ಸುಮಾರು ಹಳೆಯ ಮಾತು. ಮನೆಯವರಿಗೆ ವಿಪರೀತ pollen, parthenium, ಧೂಳು allergy ಆಗಿ ಸುಮಾರು ದಿನ ಉಸಿರಾಡಲು ಕಷ್ಟವಾಗಿತ್ತು. ಬೆಂಗಳೂರಿನಲ್ಲಿ ಇದ್ದ ಮೇಲೆ ಈ ಧೂಳಿನಿಂದ ದೂರ ಹೋಗುವುದು ಕಷ್ಟ. Multispeciality ಆಸ್ಪತ್ರೆಗೆ ಹೋಗಿ ಡಾಕ್ಟರರನ್ನು ಸಲಹೆ ಮಾಡಿದರೆ, ನಿಮಗೆ ಇದು ವಾಸಿಯಾಗುವುದು ಕಷ್ಟ. ಜೀವನ ಪರ್ಯಂತ ಈ spray ಉಪಯೋಗಿಸಿ ಎಂದು ಅದೆಂಥದೋ ಬರೆದು ಕೊಟ್ಟರು. ಇದು ನಮ್ಮಿಂದಾಗದು ಎಂದು ನಂಬಿ, ಮುಂದೆ ಸಲಹೆ ಪಡೆದುದು ಆಯುರ್ವೇದ ಡಾಕ್ಟರರಾದ ಡಾ. ಭಾರತಿ ಯವರದು. ನಮ್ಮಲ್ಲೇ immunity ಬೆಳೆಸಿಕೊಳ್ಳ ಬೇಕು ಎಂದು ಸಲಹೆ ಇತ್ತು, ತಕ್ಷಣ ವಾಸಿಯಾಗಲು ಸ್ವಲ್ಪ ಔಷಧಿ ಬರೆದುಕೊಟ್ಟು; ಯೋಗ, ಪ್ರಾಣಾಯಾಮ ಜೊತೆಗೆ ಬಿಸಿ ಬಿಸಿ ಅಡುಗೆ ಮಾಡಿ ಊಟ ಮಾಡಿ, for a long term good health ಎಂದರು. ಜಂಕ್ ಫುಡ್ ಬಿಟ್ಟುಬಿಡಿ ಎಂದರು. ಮೂರು ಹೊತ್ತು ಬಿಸಿ ಬಿಸಿ ಅಡುಗೆ ಸ್ವಲ್ಪ ಕಷ್ಟ ಅಲ್ವ, ಡಾಕ್ಟರರೆ? ನಾನು ಆಫೀಸಿಗೆ ಹೋಗಬೇಕು. ಸ್ವಂತ ಉದ್ಯೋಗ. ಮನೆಗೆ ಬಂದು ಬಟ್ಟೆ, ಪಾತ್ರೆ, ಮನೆ ಕೆಲಸ ಇದ್ದದ್ದೆ! ಹೇಗೆ ಮಾಡಲಿ? ಎಂದೆ. ಸರಿ, ಅದು ಸರಿ ಹೋಗದು ಎಂದೆನಿಸಿದರೆ, ಮಧ್ಯಾಹ್ನ ತಯಾರಿಸಿದ ಹುಳಿ/ಸಾರಿಗೆ, ರಾತ್ರಿ ಸ್ವಲ್ಪ ಬಿಸಿ ಅನ್ನ ಆದರೂ ಮಾಡಿ ತಿನ್ನಬಹುದು ಎಂದರು. ಹುಂ... ಎಂದು ತಲೆ ಅಲ್ಲಾಡಿಸಿ ಬಂದೆ.
ಮನೆಯವರಿಗೆ ಮೊದಲಿಂದಲು ಚಪಾತಿ ಅಂದರೆ ತುಂಬಾ ಇಷ್ಟ. ಅದರೊಂದಿಗೆ ಪಲ್ಯ, ಹುಳಿ, ಅನ್ನ ಇದ್ದರೆ ಮೃಷ್ಟಾನ್ನ ಭೋಜನ! ಆರೋಗ್ಯದ ದೃಷ್ಟಿಯಿಂದ ಮನೆಯನ್ನು ಆಫೀಸಿಗೆ ಹತ್ತಿರದಲ್ಲೆ ಮಾಡಿದೆವು. ಬೆಳಗೆ ತಿಂಡಿ ಮಾಡಿ ಆಫೀಸಿಗೆ ಹೋಗಿ, ಮಧಾಹ್ನ ಬಂದು ಅಡುಗೆ ಮಾಡಿ, ಊಟ ಮಾಡಿ ವಾಪಾಸು. ಸಾಯಂಕಾಲ ಆಫೀಸಿನಿಂದ ಬಂದು, ಮನೆ ಕೆಲಸದ ಮಧ್ಯೆ, ಭಾರತಿ ಅವರ ಸಲಹೆ ಅಂತೆ ನಡೆದೆ. ಹೀಗೆ ಮುಂದುವರೆಯಿತು ನನ್ನ ದಿನಚರಿ.
ಹೀಗೊಂದು ದಿನ ಈ ಅಡುಗೆ ವಿಷಯವಾಗಿ ಜಗಳ (!), ಮಾತುಕತೆ ಆಗುತ್ತಿದ್ದಾಗ, ಸಾವಯವ ದಿನಸಿ ಯಾಕೆ ಬಳಸಬಾರದು ಎಂದಾಯಿತು. www.bigbasket.com ಗೆ ಹೋಗಿ ಸಾವಯವ ದಿನಸಿ ಆರ್ಡರ್ ಮಾಡಿದೆ. ಬೇಳೆ, ಅಕ್ಕಿ, ಬೆಲ್ಲ, ಸಕ್ಕರೆ, ಜೊತೆಗೆ ತರಕಾರಿ ಕೂಡ....ಹೀಗೆ ಹಿಡಿದ ಸಾವಯವದ ಹುಚ್ಚು ನಮ್ಮನ್ನು ಸಾವಯವ ಸಂತೆಗೆ ಕರೆದೊಯ್ಯಿತು. ಅಲ್ಲಿ ನಮಗೆ ತಿಳಿದು ಬಂದುದು ಸಿರಿಧಾನ್ಯಗಳ ಬಗ್ಗೆ. ಸಾಮೆ, ನವಣೆ, ಬರಗು... ಇದನ್ನು ನಾವು ಯಾಕೆ ಅಡುಗೆಗೆ ಬಳಸಬಾರದು? Experiment ಮಾಡೋಣವ? ಎಂದಾಗಿ ಮನೆಗೆ ತಂದ ಸಿರಿ ಧಾನ್ಯಗಳು, ದೋಸೆ, ಇಡ್ಲಿಗೂ ಸೇರಿತು. ರಾತ್ರಿ ಮಾಮೂಲಾಗಿ ತಿನ್ನುತ್ತಿದ್ದ ಬಿಳಿ ಅಕ್ಕಿ (ಬೆಳ್ತಿಗೆ) ಅನ್ನದ ಬದಲು, ಸಾಮೆ ಅಕ್ಕಿ ಅನ್ನ ಬಂತು.
ಬೆಂಗಳೂರು ಎಂದ ಮೇಲೆ ಹೊರಗೆ meeting, ಅದು, ಇದು ಅಂತ ಹೊಗದೆ ತಪ್ಪಿಸಲು ಸಾಧ್ಯವಿಲ್ಲ. ಹಾಗೆ ಹೋದರೆ ಊಟಕ್ಕೆ ಒಳ್ಳೆಯ (ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡುವ) ಹೊಟೆಲ್ ಹುಡುಕುತ್ತೇವೆ. ಸ್ವಲ್ಪ costly ಎನಿಸಿದರು, ಅದು ಆರೋಗ್ಯಕ್ಕೆ ಸರಿ ಸಾಟಿಯೆನಲ್ಲ. ಹೊರಗೆ ತಿನ್ನುವುದು ಸಾಧ್ಯವಾದಷ್ಟು avoid ಮಾಡುತ್ತೇವೆ. ಮನೆ ಅಡುಗೆಯ ರುಚಿ ಹಿಡಿಸಿದ ಮೇಲೆ ಹೊರಗೆ ಹೋಟೆಲ್ ನಲ್ಲಿ ತಿನ್ನಲು ಮಸ್ಸು ಒಪ್ಪಲ್ಲ. ಹೊಟೆಲ್ ನಲ್ಲಿ ಶುಚಿತ್ವ, ಅವರು ಬಳಸುವ ಸಾಮಾನು ಹೇಗಿರುತ್ತದೊ ಎಂಬ ಭಯ ಕಾಡುತ್ತಿರುತ್ತೆ. ಹೀಗಾಗಿ ಮನೆಯಿಂದ ಊಟ ಕಟ್ಟಿಕೊಂಡು ಹೋಗುವುದೂ ಉಂಟು.
ತದ ನಂತರ ತಾಯಿಯಾದಾಗ, ಡಾಕ್ಟರ್ ಸಲಹೆ ನೀಡಿದ್ದೇನೆಂದರೆ - ತಾಯಿ, ಮಗು ಇಬ್ಬರು ಮನೆ ಆಹಾರವೇ ಸೇವಿಸಿ. ಮಗುವಿಗೆ ರಾಗಿ ಸಿರಿ ತಯಾರಿಸಿ ಕೊಡಿ, ಯಾವುದೆ artificial food (cerelac ಅಂಥವು) ಕೊಡಬೇಡಿ. Biscuit, chocolate ಗೂ ಉಹೂ.. ಭೇಲ್, ಪಾನಿ ಪುರಿ ಎಲ್ಲಾವೂ ಮಗುವುಗೆ (ವಯಸ್ಸಿಗೆ ಬಂದ ಮೇಲೆ) ತಿನ್ನಿಸಿ, ಆದರೆ ಮನೆಯಲ್ಲಿಯೆ ಮಾಡಿ ಎಂದರು.
ಮಗಳು ಸಮನಳಿಗೆ ಒಳ್ಳೆಯ ಆರೋಗ್ಯವಂತ ಆಹಾರ ಉಣಿಸ ಬೇಕು ಎಂಬ ನಿರ್ಧಾರ ನಮ್ಮನ್ನು ಮತ್ತಷ್ಟು ಸಾವಯವ, ಮನೆ ಅಡುಗೆಯತ್ತ ಸೆಳೆಯಿತು. ತಾಯಿಯಾದ ಹೊಸತರಲ್ಲಿ ದಿನವೂ ಮೂರು ಹೊತ್ತು ಅಡುಗೆ ಮಾಡಿ, ಆಫೀಸು-ಮನೆ ಕೆಲಸ ನಿರ್ವಹಿಸುವಷ್ಟರಲ್ಲಿ ಸಾಕಪ್ಪ ಸಾಕು ಅಂತ ಅನಿಸುತ್ತಿತ್ತು. ಸಮಯ ಕಳೆದಂತೆ, ಸಮನ ದೊಡ್ಡವಳಾಗುತ್ತ ನಾನು ಮಾಡಿದ ಅಡುಗೆ ಇಷ್ಟಪಟ್ಟು ತಿನ್ನುವಾಗ, ನಾನು ಪಡುತ್ತಿದ್ದ ಶ್ರಮ ಸಾರ್ಥಕವೆನಿಸಿತು. ಮನೆಯವರಿಗೂ ಅಡುಗೆ ಮಾಡುವುದೆಂದರೆ stress buster. ಸಮಯವಾದಾಗಲೆಲ್ಲ ನಾವು ಜೊತೆ ಸೇರಿ ಆರೇಳು ತರಹ ಪುಲಾವ್, ಉಪ್ಪಿಟ್ಟು (ಶಾವಿಗೆ, ಸಿರಿ ಧಾನ್ಯ ಬಳಸಿ), ಅವಲಕ್ಕಿ, ಪಕೊಡಾ, ಪೋಡಿ(ಬಜ್ಜಿ), ಮಂಡಕ್ಕಿ ಖಾರ ಹಚ್ಚುವುದು, ರೈಸ್ ಬಾತ್, coconut ರೈಸ್, ಪೊಂಗಲ್, ಸೊಪ್ಪು ಹಾಕಿ ಕಿಚ್ಡಿ ಮಾಡುತ್ತಿರುತ್ತೇವೆ. ಮನೆಯರು ಸಾಥ್ ನೀಡಿದರೆ ಅಡುಗೆಯ ರುಚಿ ಇಮ್ಮಡಿ!
Comments
ಉ: ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ..
ಉತ್ತಮ ಬರಹ ಸುಮ ಅವರೆ. ಇಲ್ಲಿನವರಿಗೆ ಹೆಸರುವಾಸಿ ಸ್ಕೂಲಲ್ಲಿ ಮಕ್ಕಳನ್ನು ಸೇರಿಸಿದರೆ ಮಾತ್ರ ಅವರ ಭವಿಷ್ಯ ಉತ್ತಮವಾಗುವುದು ಎಂಬ ನಂಬಿಕೆ. ನನಗೆ ಅನೇಕರು ಸಲಹೆ ನೀಡಿದರೂ ಕೇಳದೇ ನನ್ನ ಮಗಳನ್ನು ನಮ್ಮ ಮನೆಯ ಹತ್ತಿರದ ಸ್ಕೂಲ್ಗೇ ಓದಲು ಸೇರಿಸಿದ್ದೆ. ಮೂರೂ ಹೊತ್ತು ಬಿಸಿ ಬಿಸಿ ಮನೆ ಊಟ. ನೀವಂದಂತೆ ನಮ್ಮ ಆಹಾರದಲ್ಲಿ ಎಷ್ಟೊಂದು ವಿಧವಿದೆ..ಅದನ್ನು ಬಿಟ್ಟು ಬರೀ ಮ್ಯಾಗಿ/ಬ್ರೆಡ್/ಬರ್ಗರ್/ಬಿಸ್ಕಿಟ್ ತಿನ್ನೋ ರೂಢಿ ಮಕ್ಕಳಿಗೆ ಮಾಡಿಸುವ ತಾಯಂದಿರ ಬಗ್ಗೆ ಬೇಸರವಾಗುತ್ತದೆ.
ಮಕ್ಕಳ ಆರೋಗ್ಯ ಮುಖ್ಯ. ಉತ್ತಮ ಆರೋಗ್ಯವಿದ್ದಾಗ ವಿದ್ಯೆ ತಂತಾನೆ ಒಲಿಯುವುದು.
ಈ ಸಿರಿ ಧಾನ್ಯಗಳ ಬಗ್ಗೆ ಹಿಂದೊಮ್ಮೆ ಹೇಳಿದ್ದೆ..ಸಾಮೆ ಅಕ್ಕಿ ತಿಂದ ಲವ್ ಬರ್ಡ್ಸ್ಗಳು ಏನು ಚುರುಕು..ವಟವಟ ಮಾತಾಡಿಕೊಂಡೆ,ಹಾರಾಡಿಕೊಂಡೇ ಇರುವವು...
ಕರ್ನಾಟಕದ ಮಣ್ಣಿಗೆ ಇಲ್ಲಿನ ಜನರ ಆರೋಗ್ಯಕ್ಕೆ ರಾಗಿ ಇತ್ಯಾದಿ ಸಿರಿಧಾನ್ಯ ಬಹಳ ಒಳ್ಳೆಯದು..ರೂಢಿ (ಅಡುಗೆ ಮಾಡುವ/ತಿನ್ನುವ) ಮಾಡಬೇಕಷ್ಟೆ.
In reply to ಉ: ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ.. by ಗಣೇಶ
ಉ: ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ..
ಅಮ್ಮನ ಅಡುಗೆ ಪ್ರೇಮ ವಾತ್ಸಲ್ಯದ ಸವಿ ಸೇರಿರುವುದು ವಿಶೇಷವಾಗಿ
ಉ: ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ..
ಚೆನ್ನಾಗಿದೆ, ಸುಮಾರವರೇ. ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಸಮೀಪದ ವಂದೇ ಮಾತರಮ್ ಹೋಟೆಲಿನಲ್ಲಿ ಸಿರಿಧಾನ್ಯಗಳು ಮತ್ತು ಸಿರಿಧಾನ್ಯಗಳಿಂದ ಮಾಡಿದ ತಿಂಡಿಗಳು ಸಿಗುತ್ತದೆಂದು ಕೇಳಿರುವೆ.