‘ಅಂತರ್ಜಾಲದಲ್ಲಿ ಹುಡುಕಾಟ' ಎಂಬ ಚಟ !
ಅಂತರ್ಜಾಲ ಅಥವಾ ಇಂಟರ್ನೆಟ್ ಬಗ್ಗೆ ತಿಳಿಯದ ವ್ಯಕ್ತಿಗಳು ಈಗ ಬಹಳ ವಿರಳ. ದೇಶದ ಮೂಲೆ ಮೂಲೆಗಳಲ್ಲಿ ಅಂತರ್ಜಾಲ ಸಂಪರ್ಕವು ಹಾಸುಹೊಕ್ಕಾಗಿದೆ. ಮೊಬೈಲ್ ಸಂಪರ್ಕ ಜಾಲವು ಎಲ್ಲಿ ಇದೆಯೋ ಅಲ್ಲಿ ನಿಮಗೆ ಇಂಟರ್ನೆಟ್ ಸಿಕ್ಕೇ ಸಿಗುತ್ತದೆ. ನಿಮಗೆ ನಾನು ಎರಡು ದಶಕಗಳ ಹಿಂದಿನ ನನ್ನ ಒಂದು ಅನುಭವವನ್ನು ಹೇಳಿ ಮತ್ತೆ ಈ ಚಟ ಹೇಗೆ ಅಂಟಿಕೊಳ್ಳುತ್ತಾ ಹೋಗುತ್ತದೆ ಎಂಬ ವಿಷಯಕ್ಕೆ ಬರುತ್ತೇನೆ.
ನಾನು ಆಗ ತಾನೆ ಡಿಗ್ರಿ ಮುಗಿಸಿ, ಕಾಲೇಜಿನಿಂದ ಹೊರ ಬಂದಿದ್ದೆ. ಅವುಗಳು ಆಗಷ್ಟೇ ಇಂಟರ್ನೆಟ್ ಬಂದ ಸಮಯ. ಅಲ್ಲಲ್ಲಿ ‘ಸೈಬರ್’ ಶಾಪ್ ಗಳು ಹುಟ್ಟಿಕೊಳ್ಳುತ್ತಿದ್ದೆವು. ನಾನು ಪದವಿಯಲ್ಲಿ ಕಲಿತದ್ದು ಕಂಪ್ಯೂಟರ್ ವಿಜ್ಞಾನದ ವಿಷಯವೇ ಆದರೂ ನಮಗೆ ವಿಶ್ವ ವಿದ್ಯಾನಿಲಯದಿಂದ ಸಿಕ್ಕ ವಿಷಯಗಳು ಬೇಸಿಕ್, ಕೋಬಾಲ್ ಹಾಗೂ ಪಾಸ್ಕಲ್. ಆಗಿನ ಕಾಲಕ್ಕೇ ಇವುಗಳು ‘ಔಟ್ ಡೇಟಡ್ ಸಿಲೆಬಸ್' ಆಗಿದ್ದವು. ನಾವು ಡಿಗ್ರಿ ಮುಗಿಸಿ ಬರುವಾಗ ನಮಗೆ ಕಂಪ್ಯೂಟರ್ ಬಗ್ಗೆ ಏನೇನೂ ತಿಳಿದಿರಲಿಲ್ಲ. ಅಂದರೆ ಆಗ ವಿಂಡೋಸ್ ಸಿಸ್ಟಮ್ ಕಂಪ್ಯೂಟರ್ ಬಂದಿತ್ತು, ಕಂಪ್ಯೂಟರ್ ಗೆ ಸಿಕ್ಕಿಸಲು ಮೌಸ್ ಎಂಬ ಉಪಕರಣವಿತ್ತು. ನಾವು ಕಲಿಯುವಾಗ ಕಪ್ಪು ಬಿಳುಪು ಪರದೆಯಲ್ಲಿ ನೋಡಿದ್ದ ಕಂಪ್ಯೂಟರ್ ಗೂ ಹೊಸ ವ್ಯವಸ್ಥೆಯ ಕಂಪ್ಯೂಟರ್ ಗೂ ಅಜಗಜಾಂತರವಿತ್ತು. ಆ ಕಾರಣದಿಂದಲೇ ನಾನು ಒಂದು ವರ್ಷ ಖಾಸಗಿಯಾಗಿ ಕಂಪ್ಯೂಟರ್ ಡಿಪ್ಲೋಮಾ ಮಾಡಿ ನನ್ನನ್ನು ನಾನು ‘ಅಪ್ ಡೇಟ್’ ಮಾಡಿಕೊಂಡೆ. ನಾನಿಂದು ಏನಾದರೂ ಸ್ವಲ್ಪ ಕಂಪ್ಯೂಟರ್ ಉಪಯೋಗಿಸುತ್ತೇನೆಂದರೆ ಅದಕ್ಕೆ ಕಾರಣ ನನ್ನ ಡಿಪ್ಲೋಮಾವೇ ಹೊರತು ಡಿಗ್ರಿಯಲ್ಲ. ಇರಲಿ, ವಿಷಯಕ್ಕೆ ಬರುವೆ.
ಇಂಟರ್ನೆಟ್ ಬಂದ ಹೊಸತರಲ್ಲಿ ಅದರ ವೇಗ ಬಹಳ ನಿಧಾನವಿತ್ತು. ಒಮ್ಮೆ ನಾನು ಮತ್ತು ನನ್ನ ಗೆಳೆಯ ಇ-ಮೈಲ್ ಐಡಿ ಸೃಷ್ಟಿಸಲು ಒಂದು ಸೈಬರ್ ಹೊಕ್ಕೆವು. ಆಗ ಗಂಟೆಗೆ ೬೦ -೮೦ ರೂ. ಎಂದು ದರವಿತ್ತು ಎಂಬ ನೆನಪು. ಆಗ ನೆಟ್ ಎಷ್ಟು ನಿಧಾನವಿತ್ತು ಎಂದರೆ ನನಗೆ ನನ್ನ ಮೈಲ್ ಐಡಿ ಮಾಡಲು ಮುಕ್ಕಾಲು ಗಂಟೆ ಹಿಡಿಯಿತು. ಹಾಗೂ ಹೀಗೂ ನನ್ನ ಮೈಲ್ ಐಡಿ ಸೃಷ್ಟಿಯಾಯಿತು. ಆಗಂತೂ ಅದಕ್ಕೆ ‘ಅಟಾಚ್ ಮೆಂಟ್’ ಮಾಡಲು ಬಹಳ ಸಮಯ ಹಿಡಿಯುತ್ತಿತ್ತು. ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯು ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ‘ಪ್ರಕಾಶಕ್' ಎಂಬ ಸಾಫ್ಟ್ ವೇರ್ ಬಳಸಿ ಪತ್ರಿಕೆಯ ಕೆಲಸವೆಲ್ಲಾ ನಡೆಯುತ್ತಿತ್ತು. ಕ್ರಮೇಣ ಬರಹ, ನುಡಿ ತಂತ್ರಾಂಶಗಳು ಬಂದು ಸಾಮಾನ್ಯರೂ ಕನ್ನಡಭಾಷೆಯನ್ನು ಕಂಪ್ಯೂಟರ್ ನಲ್ಲಿ ಬಳಸುವಂತಾದರು. ಈಗ ಮೊಬೈಲ್ ನಲ್ಲೂ ಕನ್ನಡದ ಬಳಕೆ ಸರಾಗವಾಗಿದೆ. ಎರಡು ದಶಕಗಳಲ್ಲಿ ಕಂಪ್ಯೂಟರ್, ಮೊಬೈಲ್ ಹಾಗೂ ಇಂಟರ್ನೆಟ್ ವಿಭಾಗಗಳಲ್ಲಿ ಎಷ್ಟೊಂದು ಬದಲಾವಣೆಗಳಾದುವೆಂದರೆ ನಾವು ಯೋಚಿಸಲಾಗದಷ್ಟು. ಈಗ ಬಹುವೇಗದ ಇಂಟರ್ನೆಟ್ ನಮ್ಮ ಅಂಗೈಯಲ್ಲಿರುವ ಮೊಬೈಲ್ ನಲ್ಲೇ ಲಭ್ಯವಾಗುತ್ತಿದೆ. 3G ಯಿಂದ 4G ಈಗ 5Gಯತ್ತ ಗಮನ ಹರಿಸುತ್ತಿದ್ದೇವೆ. ಇದೇ ಬದಲಾವಣೆಗಳು ಜನ ಸಾಮಾನ್ಯನ ಜೀವನದಲ್ಲಿ ಆಗುತ್ತಿದ್ದಿದ್ದರೆ ಅವನು ಆಗ ಸ್ವಲ್ಪವಾದರೂ ಉತ್ತಮ ಮಟ್ಟದ ಜೀವನ ಮಾಡುತ್ತಿದ್ದನೋ ಏನೋ?
ಇಂಟರ್ನೆಟ್ ಮೊಬೈಲ್ ಗಳಲ್ಲಿ ಬಂದ ಬಳಿಕ ಅಡ್ದ ಕಸುಬಿ ಕಳ್ಳರ ಸಂಖ್ಯೆ ಹೆಚ್ಚಾಯಿತು. ಅದಕ್ಕಾಗಿಯೇ ಪೋಲೀಸ್ ಇಲಾಖೆಗಳಲ್ಲಿ ‘ಸೈಬರ್ ಕ್ರೈಂ’ ವಿಭಾಗ ಪ್ರಾರಂಭಿಸಲಾಯಿತು. ವ್ಯಕ್ತಿಯೋರ್ವನ ಬ್ಯಾಂಕಿನ ಖಾತೆಗೆ ಇಂಟರ್ನೆಟ್ ಮೂಲಕ ಕನ್ನ ಹಾಕಿ ಹಣ ಲಪಟಾಯಿಸುವುದು ಮಾಮೂಲು ಸಂಗತಿಯಾಯಿತು. ಯಾವುದೇ ಕೋಡ್, ರಹಸ್ಯ ಪಾಸ್ ವರ್ಡ್ ಇದ್ದರೂ ಅದನ್ನು 'ಹ್ಯಾಕ್’ ಮಾಡಿ ಮಾಹಿತಿ ಕದಿಯುವುದು, ಹಣ ವರ್ಗಾಯಿಸುವುದು ಎಲ್ಲವೂ ಮಾಡಲಾಗುತ್ತಿದೆ. ಮುಂದೊಂದು ದಿನ ನಮ್ಮ ಬ್ಯಾಂಕಿನ ಖಾತೆಯಲ್ಲಿರುವ ಹಣ, ಕಂಪ್ಯೂಟರ್ ನಲ್ಲಿರುವ ಅಗತ್ಯದ ಅಮೂಲ್ಯ ದಾಖಲೆಗಳನ್ನು ಸಂರಕ್ಷಿಸಿ ಇಡುವುದೇ ಬಹು ದೊಡ್ಡ ಸಂಗತಿಯಾಗಬಹುದೇನೋ?
ವೈರಸ್ ಗಳೆಂಬ ತಂತ್ರಾಂಶವನ್ನು ಕೆಲವರು ಅಭಿವೃದ್ಧಿ ಪಡಿಸಿ, ಅದನ್ನು ಮೈಲ್ ಮೂಲಕವೋ, ಪೆನ್ ಡ್ರೈವ್ ಮೂಲಕವೋ ನಮ್ಮ ಕಂಪ್ಯೂಟರ್ ಗೆ ಕಳುಹಿಸಿ ಅದರ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಾರಂಭವಾಯಿತು. ಅದಕ್ಕಾಗಿ ಅದನ್ನು ರಕ್ಷಿಸಲು ‘ಆಂಟಿ ವೈರಸ್' ಎಂಬ ತಂತ್ರಾಂಶ ಬಂತು. ಇದು ಹೇಗಿದೆ ಎಂದರೆ ಗುಟ್ಕಾ ತಯಾರಿಸಿ ಮಾರಿದವನೇ, ಆಸ್ಪತ್ರೆ ಕಟ್ಟಿಸಿದ ಹಾಗೆ. ಗುಟ್ಕಾ ತಿಂದವರಿಗೆ ಅನಾರೋಗ್ಯ ಕಾಡುವುದು ಖಚಿತ. ಅದಕ್ಕಾಗಿ ಅವನೇ ಆಸ್ಪತ್ರೆ ಕಟ್ಟಿಸಿದರೆ ಅವರೆಲ್ಲಾ ಅಲ್ಲಿಗೇ ಬರುತ್ತರಲ್ಲಾ ಹಾಗೆ. ವೈರಸ್ ಸೃಷ್ಟಿ ಮಾಡಿದವರೇ ಆಂಟಿ ವೈರಸ್ ತಂತ್ರಾಂಶವನ್ನು ಅಬಿವೃದ್ಧಿ ಪಡಿಸಿದ್ದಾರೆಂಬ ಸಂಗತಿಯೂ ಇದೆ.
ಆದರೀಗ ಪ್ರಮುಖ ಸಂಗತಿಯೆಂದರೆ ‘ನೆಟ್ ಅಡಿಕ್ಷನ್' ಅಂದರೆ ಅಂತರ್ಜಾಲದ ಗೀಳು ಅಥವಾ ಚಟ. ಕಂಪ್ಯೂಟರ್ ನಲ್ಲಿ ಮಾತ್ರ ಅಂತರ್ಜಾಲ ಸಿಗುತ್ತಿದ್ದ ಸಮಯದಲ್ಲಿ ಈ ಚಟ ಸ್ವಲ್ಪ ಕಮ್ಮಿ ಇತ್ತು. ಏಕೆಂದರೆ ಆಗ ಪ್ರತೀ ಮನೆಯಲ್ಲಿ ಕಂಪ್ಯೂಟರ್ ಇರಲಿಲ್ಲ. ಯಾವಾಗ ಸ್ಮಾರ್ಟ್ ಫೋನ್ ಗಳು ಬಂದವೋ, ಆಗ ಇವುಗಳ ಚಟ ಅಧಿಕವಾಗತೊಡಗಿದವು. ಈಗಂತೂ ಎಲ್ಲರ ಬಳಿ ಸ್ಮಾರ್ಟ್ ಫೋನ್ ಇದೆ. ಅನ್ ಲಿಮಿಟೆಡ್ ನೆಟ್ ಸಂಪರ್ಕ ಇದೆ. ಇಡೀ ದಿನ ನೋಡಲು ಬೇಕಾದಷ್ಟು ಸರಕು, ಮಾಹಿತಿ ಇಂಟರ್ನೆಟ್ ನಲ್ಲಿದೆ. ಮತ್ತೆ ಚಟವಾಗಲು ಎಷ್ಟು ಸಮಯ ಬೇಕು? ಅಬಾಲವೃದ್ಧರಾಗಿ ಎಲ್ಲರೂ ಇದರ ಹಿಂದೆ ಬಿದ್ದಿದ್ದಾರೆ. ನಿಜಕ್ಕೂ ಅಂತರ್ಜಾಲ ಎಂಬ ತಾಣ ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಉಪಯೋಗಿಸಿದರೆ ಬಹಳ ಉಪಯುಕ್ತ. ಮೊದಲು ಒಂದು ಮಾಹಿತಿಯನ್ನು ವಿದೇಶಕ್ಕೆ ಕಳಿಸಬೇಕಾದರೆ ವಾರಗಟ್ಟಲೆ ಸಮಯ ಹಿಡಿಯುತ್ತಿತ್ತು ಆದರೆ ಈಗ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಕಳುಹಿಸಬಹುದು.
ಅಂತರ್ಜಾಲದ ಗುಲಾಮರಾಗುವ ಮುನ್ನ ಎಚ್ಚೆತ್ತುಕೊಂಡು ಬಿಡಿ. ಏಕೆಂದರೆ ಈ ಇಂಟರ್ನೆಟ್ ತಾಣಗಳಿಗೆ ಅಧಿಕಾಂಶ ಬಲಿಯಾಗುತ್ತಿರುವವರು ಮಕ್ಕಳು. ಕೋವಿಡ್ ಗಿಂತ ಮೊದಲು ಮಕ್ಕಳಲ್ಲಿ ಮೊಬೈಲ್ ಬಳಕೆ ಸ್ವಲ್ಪವಾದರೂ ನಿಯಂತ್ರಣದಲ್ಲಿತ್ತು. ಆದರೆ ಈಗ ಆನ್ಲೈನ್ ತರಗತಿಗಳು ಎಂಬ ನೆಪದಲ್ಲಿ ಇಡೀ ದಿನ ಮೊಬೈಲ್ ಮಕ್ಕಳ ಕೈಯಲ್ಲಿರುತ್ತದೆ. ಉದ್ಯೋಗಸ್ಥ ದಂಪತಿಗಳು ಮನೆ ಬಿಟ್ಟು ಕೆಲಸಕ್ಕೆ ಹೋದಾಗ ಮನೆಯಲ್ಲಿರುವ ಮಕ್ಕಳು ಮೊಬೈಲ್ ನಲ್ಲಿ ಏನೆಲ್ಲಾ ಮಾಡುತ್ತಾರೆ, ನೋಡುತ್ತಾರೆ ಎಂಬ ವಿಷಯ ಅವರಿಗೆ ತಿಳಿಯುವುದೇ ಇಲ್ಲ. ತಿಳಿಯುವಾಗ ತುಂಬಾನೇ ತಡವಾಗಿರುತ್ತದೆ. ಮೊದಲು ಜೀವ ತೆಗೆಯುವ ಹಲವಾರು ‘ಗೇಮ್' ಗಳು ಇದ್ದುವು. ಈಗ ಅದರ ಮೇಲೆ ಸ್ವಲ್ಪ ಕಡಿವಾಣ ಬಿದ್ದಿದೆ. ಮಕ್ಕಳು ತಮ್ಮ ಹೆತ್ತವರ ಕ್ರೆಡಿಟ್, ಡೆಬಿಟ್ ಕಾರ್ಡ್ ಪಿನ್ ಸಂಪಾದಿಸಿಕೊಂಡು ಇಂಟರ್ನೆಟ್ ನಲ್ಲಿ ಹಲವಾರು ಬಗೆಯ ಗೋಲ್ ಮಾಲ್ ಮಾಡುವ ಸಂಭವವಿದೆ. ಈ ಬಗ್ಗೆ ಹೆತ್ತವರು ಎಚ್ಚರವಿರಬೇಕಾಗಿರುವುದು ಅಗತ್ಯ. ಸರಕಾರಗಳು ಜೀವ ತೆಗೆಯುವ ಗೇಮ್ ಗಳ ಮೇಲೆ, ಕೆಲವು ವೆಬ್ ಸೈಟ್ ಮೇಲೆ ಎಷ್ಟೇ ಕಡಿವಾಣ ಹಾಕಿದರೂ ಅವುಗಳು ಸ್ವಲ್ಪವೇ ದಿನಗಳಲ್ಲಿ ಬೇರೆನೇ ರೂಪದಲ್ಲಿ ಮತ್ತೆ ಮರಳಿ ಬರುತ್ತಿವೆ.
ವಿಜ್ಞಾನಿಗಳು ಹಾಗೂ ವೈದ್ಯರು ‘ನೆಟ್ ಅಡಿಕ್ಷನ್' ಒಂದು ಮಾನಸಿಕ ವ್ಯಾಧಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ಮೊದಲಿಗೆ ‘ಟೈಂಪಾಸ್' ಎಂದು ಬಳಕೆಯಾಗುತ್ತಿದ್ದ ಅಂತರ್ಜಾಲ ಕ್ರಮೇಣ ಅದೊಂದು ಚಟದಂತೆ ಅಂಟಿಕೊಳ್ಳುತ್ತದೆ. ಮಕ್ಕಳಂತೂ ಮೊಬೈಲ್ ನೋಡದೇ ಊಟ, ತಿಂಡಿಯನ್ನೂ ಮಾಡುವುದಿಲ್ಲ. ಕಲಿಕೆಯತ್ತ ಗಮನ ಕಡಿಮೆಯಾಗುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಕಣ್ಣಿನ ದೃಷ್ಟಿಯ ದೋಷ ಕಂಡು ಬರುತ್ತಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಹದಿಹರೆಯಕ್ಕೆ ಬಂದ ಮಕ್ಕಳು ನೆಟ್ ಮೂಲಕ ಯಾರ್ಯಾರನ್ನೋ ಗೆಳೆಯರನ್ನಾಗಿಸಿಕೊಂಡು ಅವರ ಮೂಲಕ ಕೆಟ್ಟ ಸಂಗತಿಗಳನ್ನು ಕಲಿಯುವ ಸಾಧ್ಯತೆ ಇದೆ. ಲೈಂಗಿಕವಾಗಿ ದುರುಪಯೋಗ ಪಡಿಸಿಕೊಳ್ಳುವುದು, ಮಾದಕ ದ್ರವ್ಯದ ವ್ಯಸನವನ್ನು ಅಂಟಿಸಿಕೊಳ್ಳುವುದು, ಹಣದ ಕದಿಯುವುದು ಹೀಗೆ ಹತ್ತು ಹಲವು ಕೆಟ್ಟ ಸಂಗತಿಗಳಿಗೆ ಗುರಿಯಾಗುವ ಸಾಧ್ಯತೆ ಇದೆ.
ಮೇಲೆ ತಿಳಿಸಿದವುಗಳು ಕೆಲವೇ ಕೆಲವು ಕಾರಣಗಳು. ಪ್ರತೀ ದಿನ ಸೈಬರ್ ಕ್ರೈಂ ವಿಭಾಗದಲ್ಲಿ ವಿನೂತನ ಪ್ರಸಂಗಗಳು ಹುಟ್ಟಿಕೊಳ್ಳುತ್ತಲೇ ಇವೆ. ಮೊದಲೆಲ್ಲಾ ಮಾನವನಿಗೆ ಕಾಫಿ-ಟೀ ಸೇವನೆ, ಬೀಡಿ-ಸಿಗರೇಟು ಸೇವನೆ, ಮಾದಕ ಪೇಯಗಳ ಸೇವನೆ, ಮಕ್ಕಳಿಗೆ ಚಾಕಲೇಟು, ಐಸ್ ಕ್ರೀಂ ಮೊದಲಾದ ಚಟಗಳಿದ್ದವು. ಆದರೀಗ ಅಂತರ್ಜಾಲದ ಹುಡುಕಾಟ, ವೀಕ್ಷಣೆಯ ಚಟದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಹಣ, ಆಸ್ತಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಬಹುದು. ಆದುದರಿಂದ ಮುಖ್ಯವಾಗಿ ಮಕ್ಕಳನ್ನು ಈ ‘ಇಂಟರ್ ನೆಟ್' ನ ಬಲೆಯಿಂದ ಸಾಧ್ಯವಾದಷ್ಟು ನಿಯಂತ್ರಣದಲ್ಲಿಡುವಂತೆ ನೋಡಿ. ತಂತ್ರಜ್ಞಾನವನ್ನು ನಮ್ಮ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟೇ ಬಳಸಿದರೆ ಸರ್ವರಿಗೂ ಉತ್ತಮ.
ಚಿತ್ರ ಕೃಪೆ: ಅಂತರ್ಜಾಲ ತಾಣ