‘ಅಂತ' ಚಿತ್ರದ ಅನಂತ ರಹಸ್ಯ !
೧೯೮೧ರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿಸಿದ ವಿಭಿನ್ನ ಚಿತ್ರ ‘ಅಂತ' ಹಲವಾರು ವಿವಾದಗಳ ನಡುವೆ, ತೆರೆಕಂಡು ನಂತರ ಮತ್ತೆ ನಿಷೇಧಕ್ಕೆ ಒಳಪಟ್ಟು, ನಂತರ ಮತ್ತೆ ಬಿಡುಗಡೆಯಾಗಿ ಜನಮೆಚ್ಚುಗೆ ಗಳಿಸಿದ ವಿಭಿನ್ನ ಚಿತ್ರ. ಇದೊಂದು ಕಾದಂಬರಿ ಆಧಾರಿತ ಚಿತ್ರ. ಕಾದಂಬರಿಯಾಗಿ ರೂಪುಗೊಳ್ಳುವ ಮೊದಲು ಇದು ವಾರ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಮೂಡಿಬರುತ್ತಿತ್ತು. ಪ್ರತೀವಾರ ಈ ಧಾರಾವಾಹಿ ವಿಕ್ಷಿಪ್ತ ತಿರುವುಗಳನ್ನು ತೆಗೆದುಕೊಳ್ಳುತ್ತಾ ಓದುಗರನ್ನು ಕಟ್ಟಿಹಾಕಿತ್ತು. ಈ ಕಥಾನಕವನ್ನು ಬರೆಯುತ್ತಿದ್ದವರು ಖ್ಯಾತ ಕಾದಂಬರಿಕಾರರಾದ ಹೆಚ್ ಕೆ ಅನಂತರಾಮ್.
ಹೆಚ್ ಕೆ ಅನಂತರಾಮ್ ಅವರು 'ಅಂತ' ಕಾದಂಬರಿಯನ್ನು ಬರೆಯುವ ಮೊದಲು ಬಹಳಷ್ಟು ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡಿದ್ದರಂತೆ. ಭ್ರಷ್ಟಾಚಾರ ತಾಂಡವಾಡುತ್ತಿದ್ದ ಆ ಕಾಲದ ಘಟನೆಗಳನ್ನು ಕಾದಂಬರಿ ರೂಪಕ್ಕೆ ಇಳಿಸುವ ಸಮಯದಲ್ಲಿ ಅನಂತರಾಮ್ ಅವರು ತಮ್ಮನ್ನು ತಾವೇ ಈ ಕಥೆಯ ನಾಯಕನಂತೆ ಕಲ್ಪಿಸಿಕೊಂಡಿದ್ದರಂತೆ. ನಾಯಕನನ್ನು ತಮ್ಮೊಳಗೆ ಅವಾಹನೆ ಮಾಡಿಕೊಂಡ ಬಳಿಕ ಅನಂತರಾಮ್ ಅವರಿಗೆ ಈ ಕಾದಂಬರಿಯನ್ನು ಬರೆಯಲು ಸುಲಭವಾಯಿತೆಂದು ಪತ್ರಕರ್ತ ಶ್ರೀ ಗಣೇಶ್ ಕಾಸರಗೋಡು ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ.
ಕಾದಂಬರಿಯು ಬರೆದು ಮುಗಿಸುವ ಮುನ್ನವೇ ವಾರಪತ್ರಿಕೆಯೊಂದು ಅದನ್ನು ಧಾರಾವಾಹಿ ರೂಪದಲ್ಲಿ ಪ್ರಕಟಿಸಲು ಮನಸ್ಸು ಮಾಡಿತು. ಒಂದೆಡೆ ಧಾರಾವಾಹಿ ಪ್ರಕಟಣೆ ಪ್ರಾರಂಭವಾದಂತೆ ಅನಂತರಾಮ್ ಅವರ ಬರವಣಿಗೆಯ ವೇಗವೂ ರಾಕೆಟ್ ನಂತೆ ಹೆಚ್ಚಿತು. ಅನಂತರಾಮ್ ಅವರ ಮನಸ್ಸಿನಲ್ಲಿ ತಾವೇ ಈ ಕಥೆಯ ‘ಹೀರೋ’ ಎಂಬ ಕಲ್ಪನೆ ಇತ್ತು. ಅವರೆಂದೂ ಅಂಬರೀಶ್ ಈ ಚಿತ್ರದ ನಾಯಕನಾಗುತ್ತಾರೆ ಮತ್ತು ಈ ಕಥೆ ಚಲನಚಿತ್ರವಾಗುತ್ತದೆ ಎಂದು ಕನಸುಮನಸಿನಲ್ಲೂ ಎಣಿಸಿದವರಲ್ಲ.
ಇವರು ಧಾರಾವಾಹಿಯನ್ನು ಬರೆಯುತ್ತಿದ್ದ ಸಮಯದಲ್ಲಿ ಚಲನ ಚಿತ್ರ ನಿರ್ದೇಶಕರಾದ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರು ಉತ್ತಮವಾದ ಕಾದಂಬರಿಯ ಹುಡುಕಾಟ ಮಾಡುತ್ತಿದ್ದರು. ಕಾದಂಬರಿ ಆಧಾರಿತ ಚಲನ ಚಿತ್ರಗಳಿಗೆ ಆ ಸಮಯದಲ್ಲಿ ಬಹು ಬೇಡಿಕೆ ಇತ್ತು. ಈ ಹುಡುಕಾಟದಲ್ಲಿ ಗುಡ್ಡೆಯಷ್ಟು ದೊಡ್ಡ ಕಾದಂಬರಿಗಳ ರಾಶಿಯನ್ನು ಪೇರಿಸಿದರೂ ಬಾಬು ಅವರಿಗೆ ಯಾವ ಕಥೆಯೂ ಇಷ್ಟವಾಗಲಿಲ್ಲ. ಅದೇ ಸಮಯ ಬಾಬು ಅವರಿಗೆ ಅನಂತರಾಮ್ ಅವರ ಕಾದಂಬರಿಯೊಂದು ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿರುವ ಸಂಗತಿ ತಿಳಿಯಿತು. ಅದನ್ನು ಓದಿದಾಗ ಅವರಿಗೆ ‘ಬಯಸಿದ ಬಳ್ಳಿ ಕಾಲಿಗೇ ಸಿಕ್ಕಿದಂತೆ' ಆಯಿತು. ಅವರಿಗೆ ತಮ್ಮ ಬಾಲ್ಯದ ಗೆಳೆಯ ಅಂಬರೀಶ್ ಗೆ ದೊಡ್ಡದಾದ ಬ್ರೇಕ್ ನೀಡುವ ಚಿತ್ರ ತಯಾರಿಸುವ ಮನಸ್ಸಿತ್ತು. ಕೂಡಲೇ ಅನಂತರಾಮ್ ಅವರನ್ನು ಸಂಪರ್ಕಿಸಿ ಅವರಿಂದ ‘ಅಂತ' ಕಾದಂಬರಿಯ ಹಕ್ಕುಗಳನ್ನು ಖರೀದಿಸಿಯೇ ಬಿಟ್ಟರು.
ಚಿತ್ರೀಕರಣದ ಸಮಯದಲ್ಲೇ ಹಲವಾರು ಅಡೆತಡೆಗಳನ್ನು ಅನುಭವಿಸಿದ ಚಿತ್ರ ಕಡೆಗೂ ಸೆನ್ಸಾರ್ ಮಂಡಳಿಗೆ ಅನುಮೋದನೆಗೆ ಹೋದಾಗ ಅವರು ಇದರಲ್ಲಿನ ಕೆಲವೊಂದು ಹಿಂಸಾತ್ಮಕ ದೃಶ್ಯಗಳನ್ನು ನೋಡಿ ಹೌಹಾರಿದರು. ಬಹಳಷ್ಟು ಕಡೆ ಕತ್ತರಿ ಹಾಕಬೇಕೆನ್ನುವ ಷರತ್ತಿನೊಂದಿಗೆ ಅನುಮತಿ ನೀಡಲಾಯಿತು. ಆದರೆ ಸೆನ್ಸಾರ್ ಮಂಡಳಿಯ ಷರತ್ತನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸದೇ ಚಿತ್ರವನ್ನು ಬಿಡುಗಡೆ ಮಾಡಿದ ರಾಜೇಂದ್ರ ಸಿಂಗ್ ಬಾಬು ಅವರು ಕಾನೂನಿನ ಕತ್ತರಿಯಲ್ಲಿ ಸಿಕ್ಕಿ ಬಿದ್ದರು.
ಕತ್ತರಿಸಿದ ದೃಶ್ಯಗಳನ್ನು ಮತ್ತೆ ಸೇರಿಸಿ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂಬ ಆರೋಪದಡಿ ನಿಷೇಧಕ್ಕೆ ಒಳಗಾದ ಪ್ರಥಮ ಕನ್ನಡ ಚಿತ್ರ ಎಂಬ ಕುಖ್ಯಾತಿಗೆ ‘ಅಂತ' ಒಳಗಾಯಿತು. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಚಿತ್ರ ಮಂದಿರಕ್ಕೆ ತೆರಳಿ ಪ್ರದರ್ಶನವನ್ನು ನಿಲ್ಲಿಸಿ, ಚಿತ್ರದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡರು. ಚಿತ್ರದಲ್ಲಿ ಬಹಳಷ್ಟು ವಿಕೃತ ಹಿಂಸೆ, ಅತ್ಯಾಚಾರ ಮೊದಲಾದ ದೃಶ್ಯಗಳಿವೆ ಎಂದು ವಿವಾದಗಳಾದವು. ಈ ಕಾರಣದಿಂದಾಗಿ ಪುಕ್ಕಟೆ ಪ್ರಚಾರವನ್ನು ಪಡೆದ ಚಿತ್ರ ಮತ್ತೆ ಬಿಡುಗಡೆಯಾದಾಗ ಅಭೂತಪೂರ್ವ ಯಶಸ್ಸನ್ನು ಕಂಡಿತು. ಅಂಬರೀಶ್ ತಮ್ಮ ಸ್ಟಾರ್ ಮೌಲ್ಯವನ್ನು ಹೆಚ್ಚಿಸಿಕೊಂಡರೆ, ರಾಜೇಂದ್ರ ಬಾಬು ಅವರಿಗೆ ಬಹಳಷ್ಟು ಜನಪ್ರಿಯತೆ ಲಭಿಸಿತು. ಕಾದಂಬರಿಕಾರ ಹೆಚ್ ಕೆ ಅನಂತರಾಮ್ ಅವರ ಕಥೆಗಳಿಗೆ ಬಹಳಷ್ಟು ಬೇಡಿಕೆಗಳು ಬಂದವು. ಈ ಚಿತ್ರಕ್ಕೆ ಮಾರುತಿ ಮತ್ತು ವೇಣುಗೋಪಾಲ್ ಎಂಬ ಇಬ್ಬರು ನಿರ್ಮಾಪಕರು ಹಣ ಹೂಡಿ ನಿರ್ಮಿಸಿದ್ದರು.
‘ಅಂತ’ ಚಿತ್ರದ ಅಭಿನಯಕ್ಕಾಗಿ ಅಂಬರೀಶ್ ಅವರಿಗೆ ರಾಜ್ಯ ಸರಕಾರದ ವಿಶೇಷ ಪ್ರಶಸ್ತಿ ಲಭಿಸಿತು. ಬಾಬು ಅವರಿಗೆ ಅತ್ಯುತ್ತಮ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿ ಸಿಕ್ಕರೆ ಮತ್ತು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಿ.ಎಸ್. ಪ್ರಕಾಶ್ ಅವರಿಗೆ ಲಭಿಸಿತು. ಈ ಚಿತ್ರದ ನಾಯಕಿಯಾಗಿ ಲಕ್ಷ್ಮಿ ನಟಿಸಿದ್ದರು. ಉಳಿದ ತಾರಾಗಣದಲ್ಲಿ ಪ್ರಭಾಕರ್, ವಜ್ರಮುನಿ, ಶಕ್ತಿಪ್ರಸಾದ್, ಸುಂದರಕೃಷ್ಣ ಅರಸ್ ಮೊದಲಾದವರು ನಟಿಸಿದ್ದರು. ಚಿ. ಉದಯಶಂಕರ್, ಗೀತಪ್ರಿಯ, ಆರ್ ಎನ್ ಜಯಗೋಪಾಲ್ ಅವರು ಗೀತೆಗಳನ್ನು ಬರೆದಿದ್ದರು. ಹಲವಾರು ಅಡಚಣೆಗಳ ನಂತರ ಚಿತ್ರ ಹಿಟ್ ಆದ ಹಲವಾರು ವರ್ಷಗಳ ಬಳಿಕ ೧೯೯೫ರಲ್ಲಿ ‘ಅಂತ' ಚಿತ್ರದ ಎರಡನೇ ಭಾಗ ‘ಆಪರೇಷನ್ ಅಂತ'ವನ್ನು ತೆರೆಗೆ ತಂದರೂ ಮೊದಲಿನ ಭಾಗದಷ್ಟು ಜನಪ್ರಿಯವಾಗಲಿಲ್ಲ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ