‘ಅಡಿದಾಸ್' ಸಂಸ್ಥೆ ಹುಟ್ಟಿದ್ದು ಹೇಗೆ ಗೊತ್ತೇ?

‘ಅಡಿದಾಸ್' ಸಂಸ್ಥೆ ಹುಟ್ಟಿದ್ದು ಹೇಗೆ ಗೊತ್ತೇ?

ನೀವು ಕ್ರೀಡೆಗಳಲ್ಲಿ ಆಸಕ್ತರಾಗಿದ್ದರೆ ನಿಮಗೆ ಅಡಿದಾಸ್ (ಅಡಿಡಾಸ್), ನೈಕಿ, ರೀಬೋಕ್ ಮೊದಲಾದ ಸಂಸ್ಥೆಗಳು ಗೊತ್ತೇ ಇರುತ್ತವೆ. ಆ ಸಂಸ್ಥೆಗಳ ಲೋಗೋ ನೋಡಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಆ ಸಂಸ್ಥೆಯ ಹೆಸರು ಅಚ್ಚೊತ್ತಿದಂತೆ ಮೂಡಿಬರುವುದರಲ್ಲಿ ಸಂಶಯವಿಲ್ಲ. ಶೂ ಕಂಪೆನಿಯೊಂದು ವಿಶ್ವ ದರ್ಜೆಯ ಕ್ರೀಡಾ ಸಾಮಾಗ್ರಿಗಳನ್ನು ತಯಾರಿಸುವ ಕಂಪೆನಿಯೂ ಆಗಿ, ಹಲವಾರು ಕ್ರೀಡೆಗಳನ್ನು ಪ್ರಾಯೋಜಿಸುವತ್ತಲೂ ಹೆಜ್ಜೆ ಹಾಕುತ್ತಿರುವ ಅದ್ವೀತೀಯ ಕಂಪೆನಿಯಾಗಿ ಅಡಿದಾಸ್ ಬೆಳೆದದ್ದು ಹೇಗೆ ಗೊತ್ತೇ?

ರಸ್ತೆ ಬದಿಯಲ್ಲಿ ಕೂತು ಗ್ರಾಹಕರ ಹರಿದ ಚಪ್ಪಲಿ ಹೊಲಿಯುತ್ತಿದ್ದ ಅಡಾಲ್ಫ್ ಡಾಸ್ಲರ್ (Adolf Dassler) ಎಂಬ ಜರ್ಮನ್ ವ್ಯಕ್ತಿಗೆ ತಾನೂ ಸೊಗಸಾದ ಚಪ್ಪಲಿ, ಶೂ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು ಎನ್ನುವ ಯೋಚನೆ ಬಂತು. ಆದರೆ ಆತ ತನ್ನ ಈ ಯೋಚನೆ ಮುಂದೊಂದು ದಿನ ತನ್ನದೇ ಆದ ಬ್ರಾಂಡ್ ಹೊಂದಿ ಹೊಸದಾದ ಸಾಮ್ರಾಜ್ಯವನ್ನು ಸೃಷ್ಟಿಸುತ್ತೇನೆ ಎಂದು ಕಲ್ಪನೆ ಸಹಾ ಮಾಡಿರಲಿಕ್ಕಿಲ್ಲ. ಆದರೆ ನಂತರ ಭವಿಷ್ಯದ ದಿನಗಳಲ್ಲಿ ಆದದ್ದು ಪವಾಡವೇ... 

ಅಡಾಲ್ಫ್ ಡಾಸ್ಲರ್ ಹುಟ್ಟಿದ್ದು ೧೯೦೦ರಲ್ಲಿ ಜರ್ಮನಿಯ ಅತ್ಯಂತ ಕಡು ಬಡತನವಿದ್ದ ಕುಟುಂಬವೊಂದರಲ್ಲಿ. ಆದರೆ ಅವರ ಕನಸುಗಳಿಗೆ ಬಡತನವೂ ಇರಲಿಲ್ಲ, ಅದಕ್ಕೆ ಯಾವ ಎಲ್ಲೆಯೂ ಇರಲಿಲ್ಲ. ಇವರ ತಂದೆಯ ಕಸುಬು ಚಪ್ಪಲಿ ಹೊಲಿಯುವುದೇ ಆಗಿದ್ದುದರಿಂದ ಅಡಾಲ್ಫ್ ಅವರೂ ಚಪ್ಪಲಿ ಹೊಲಿಯುವುದನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಅಡಾಲ್ಫ್ ಅವರ ತಾಯಿ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ತಂದೆಯ ಜೊತೆ ಚಪ್ಪಲಿ, ಶೂ ರಿಪೇರಿ ಮಾಡಲು ಪ್ರಾರಂಭಿಸಿದ ಅಡಾಲ್ಫ್ ಬಹುಬೇಗನೇ ಆ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದುಕೊಂಡರು. ಆದರೆ ಅದು ಮಹಾಯುದ್ಧದ ಸಮಯವಾಗಿದ್ದುದರಿಂದ ಜರ್ಮನಿಯಲ್ಲಿ ವಿದ್ಯುತ್ ಅಭಾವವಿತ್ತು. ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ಮನೆಯಲ್ಲಿನ ಬಡತನ ಅಡಾಲ್ಫ್ ಅವರನ್ನು ಕ್ರೀಡೆಯಲ್ಲಿ ಸಕ್ರಿಯರಾಗಲು ಬಿಡಲಿಲ್ಲ. 

ಜರ್ಮನಿಯ ರಸ್ತೆ ಬದಿಯಲ್ಲಿ ಕೂತು ಶೂ ಮತ್ತು ಚಪ್ಪಲಿ ರಿಪೇರಿ ಮಾಡುತ್ತಿದ್ದ ಅಡಾಲ್ಫ್ ಗೆ ಪುಟ್ ಬಾಲ್ ಎಂದರೆ ಪಂಚಪ್ರಾಣ. ಎಲ್ಲರೂ ಫುಟ್ ಬಾಲ್ ಆಟಗಾರರ ಕಾಲ್ಚಳಕವನ್ನು ನೋಡುತ್ತಿದ್ದರೆ ಅಡಾಲ್ಫ್ ನೋಡುತ್ತಿದ್ದುದು ಅವರ ಕಾಲಿನ ಶೂಗಳನ್ನು. ಕ್ರೀಡಾಳುಗಳಿಗೆ ಕಾಲಿಗೆ ಹಿತಕರವಾಗುವಂತಹ ಶೂಗಳನ್ನು ತಯಾರಿಸಬೇಕು ಎನ್ನುವುದು ಅಡಾಲ್ಫ್ ರ ಬಹುದೊಡ್ಡ ಕನಸಾಗಿತ್ತು. ಕಾಲಿಗೆ ಹಿತಕರವೆನಿಸುವ, ಏಟಾಗದಂತಹ ಶೂಗಳನ್ನು ತಯಾರು ಮಾಡಲು ಅವರು ಶುರು ಮಾಡಿದರು. ತಮ್ಮ ತಲೆಯಲ್ಲಿ ಮೂಡುತ್ತಿದ್ದ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದು ಆ ಪ್ರಕಾರ ಶೂಗಳನ್ನು ತಯಾರಿಸಿ ಕ್ರೀಡಾಳುಗಳಿಗೆ ನೀಡಲು ಪ್ರಾರಂಭಿಸಿದರು. ೧೯೨೪ರಲ್ಲಿ ಈ ಕಾರ್ಯಕ್ಕೆ ತಮ್ಮ ಸಹೋದರನಾದ ರುಡಾಲ್ಫ್ ರನ್ನೂ ಸೇರಿಸಿಕೊಂಡರು. ಅಡಾಲ್ಫ್ ಉತ್ತಮ ಶೂ ಮೇಕರ್ ಆಗಿದ್ದರೆ, ರುಡಾಲ್ಫ್ ಅತ್ಯುತ್ತಮ ಮಾರ್ಕೆಟಿಂಗ್ ತಂತ್ರಗಳನ್ನು ಹೊಂದಿದ್ದ ವ್ಯಕ್ತಿ. ಇವರಿಬ್ಬರ ತಂತ್ರಗಾರಿಕಾ ಜುಗಲ್ ಬಂದಿಯು ಶೂ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿತು. 

ಪ್ರಾರಂಭದಲ್ಲಿ ತಮ್ಮ ಕೈಗಳಿಂದಲೇ ಶೂ ತಯಾರಿಸುತ್ತಿದ್ದ ಅಡಾಲ್ಫ್ ದಿನವೊಂದಕ್ಕೆ ಎರಡರಿಂದ ಮೂರು ಶೂ ಮಾತ್ರ ತಯಾರಿಸಬಲ್ಲವರಾಗಿದ್ದರು. ನಂತರ ನಿಧಾನವಾಗಿ ಒಂದೆರದು ವರ್ಷ ಕಳೆಯುವಷ್ಟರಲ್ಲಿ ಈ ಸಂಖ್ಯೆ ನೂರಕ್ಕೆ (ದಿನವೊಂದಕ್ಕೆ) ತಲುಪಿತು. ಹೊಸ ಹೊಸ ಯಂತ್ರಗಳು, ಕೆಲಸಗಾರರ ಸಹಕಾರವೇ ಇದಕ್ಕೆ ಕಾರಣವಾಗಿತ್ತು. 

ಅಡಾಲ್ಫ್ ಅವರ ಸಾಮರ್ಥ್ಯ ಹೊರಜಗತ್ತಿಗೆ ಅರಿವಾದದ್ದು ೧೯೩೮ರಲ್ಲಿ. ಆ ಸಮಯ ಜರ್ಮನಿಯಲ್ಲಿ ಒಲಂಪಿಕ್ಸ್ ಕೂಟಗಳು ನಡೆಯುತ್ತಿದ್ದವು. ಅಡಾಲ್ಫ್ ತಮ್ಮ ದೇಶದ ಪ್ರತಿಯೊಬ್ಬ ಫುಟ್ ಬಾಲ್ ಆಟಗಾರರಿಗೆ ಅವರಿಗೆ ಬೇಕಾದ ರೀತಿಯ (ಕಸ್ಟಮೈಸ್ಡ್) ಶೂಗಳನ್ನು ನಿರ್ಮಿಸಿಕೊಟ್ಟರು. ಈ ವಿಚಾರ ಬಹುಬೇಗನೇ ಪ್ರಚಾರವಾಗಿ ಅಡಾಲ್ಫ್ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಈ ಘಟನೆಯ ಬಳಿಕ ಅವರೆಂದೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಆಗ ಅವರು ಸ್ಥಾಪಿಸಿದ ಕಂಪೆನಿ ‘ಅಡಿದಾಸ್'. ನಿಮಗೆ ಗೊತ್ತೇ ಇದೆ, ಅಡಿದಾಸ್ ಇಲ್ಲದೇ ಕ್ರೀಡೆ ಇಲ್ಲ. ಅಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಈ ಸಂಸ್ಥೆಯ ಬದ್ಧತೆ, ಗುಣಮಟ್ಟ ಎಲ್ಲವೂ ಈಗಲೂ ಅತ್ಯುನ್ನತ ಮಟ್ಟದಲ್ಲಿದೆ. ಬಡತನದ ಬೇಗೆಯಲ್ಲಿ ಬೆಂದ ಅಡಾಲ್ಫ್ ಕನಸು ಕಾಣುವುದನ್ನು ಎಂದಿಗೂ ಬಿಡಲಿಲ್ಲ. ಅದರ ಫಲವೇ ಅಂದು ಆತ ಬಹಳ ಕಷ್ಟಪಟ್ಟು ಕೈಯಿಂದ ತಯಾರಿಸಿದ ಶೂ ಇಂದು ಬಹುತೇಕ ಕ್ರೀಡಾ ಪ್ರೇಮಿಗಳ ಕಾಲಿನಲ್ಲಿ ರಾರಾಜಿಸುತ್ತಿದೆ. ಅಡಿದಾಸ್ ಎಂಬ ಲೋಗೋ ಈ ರೀತಿಯ ಬಹಳಷ್ಟು ಕಥೆಯನ್ನು ಹೇಳುತ್ತಿದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ