‘ಅಮರಶಿಲ್ಪಿ ಜಕಣಾಚಾರಿ' ಎಂಬ ವರ್ಣಮಯ ಚಿತ್ರ

‘ಅಮರಶಿಲ್ಪಿ ಜಕಣಾಚಾರಿ' ಎಂಬ ವರ್ಣಮಯ ಚಿತ್ರ

೬೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ ತೆರೆಕಾಣುತ್ತಿದ್ದ ಚಿತ್ರಗಳು ಬೆರಳೆಣಿಕೆಯಷ್ಟು. ಆಗಂತೂ ಎಲ್ಲಾ ಚಿತ್ರಗಳು ಕಪ್ಪು ಬಿಳುಪು. ನಾಯಕ-ನಾಯಕಿ ಯಾವುದೇ ಬಣ್ಣದ ಸೊಗಸಾದ ಬಟ್ಟೆಗಳನ್ನು ಧರಿಸಿದ್ದರೂ ಚಲನಚಿತ್ರಗಳಲ್ಲಿ ಅವು ಕಾಣುತ್ತಿದ್ದುದು ಕೇವಲ ಕಪ್ಪು ಬಿಳುಪು ಬಣ್ಣದಲ್ಲಿ ಮಾತ್ರ. ಎಷ್ಟೇ ಸುಂದರ ಸೆಟ್ ಹಾಕಿದ್ದರೂ ನಿಮ್ಮ ಕಣ್ಣಿಗೆ ಅದು ಬರೇ ಕಪ್ಪು ಬಿಳುಪು. ವೀಕ್ಷಕರೇ ತಮ್ಮ ಮನಸ್ಸಿನಲ್ಲೇ ಬಣ್ಣದ ಬಗ್ಗೆ ಅಂದಾಜು ಮಾಡಿಕೊಳ್ಳಬೇಕಿತ್ತು. ಆ ಸಮಯದ ತಂತ್ರಜ್ಞಾನ ಹಾಗಿತ್ತು. ಆ ಸಮಯದಲ್ಲಿ ಚಿತ್ರವೊಂದನ್ನು ಬಣ್ಣದಲ್ಲಿ ಹೊರತರಬೇಕೆಂದು ಮನಸ್ಸು ಮಾಡಿ ಲಭ್ಯವಿದ್ದ ಕನಿಷ್ಟ ತಂತ್ರಜ್ಞಾನವನ್ನೇ ಬಳಸಿ ತಯಾರಿಸಿದ ಚಿತ್ರವೇ ‘ಅಮರಶಿಲ್ಪಿ ಜಕಣಾಚಾರಿ'. ಬೇಲೂರಿನ ಸುಂದರ ಶಿಲ್ಪಕಲಾ ವೈಭವನ್ನು ಕೆತ್ತಿದ ಅಮರಶಿಲ್ಪಿ ಜಕಣಾಚಾರಿಯ ಬದುಕಿನ ವರ್ಣರಂಜಿತ ಕತೆಯಿದು. 

ಸುಮಾರು ೬೦ ವರ್ಷಗಳ ಹಿಂದೆ ಬಣ್ಣದ ಚಿತ್ರವನ್ನು ತಯಾರಿಸಲು ಹೊರಟ ಸಾಹಸಿ ಯಾರು ಗೊತ್ತೇ? ಅವರೇ ನಿರ್ದೇಶಕ-ನಿರ್ಮಾಪಕ ಬಿ ಎಸ್ ರಂಗಾ ಅವರು. ರಂಗಾ ಅವರು ಆ ಸಮಯ ಮದರಾಸಿನಲ್ಲಿ (ಈಗಿನ ಚೆನ್ನೈ) ನೆಲೆ ನಿಂತಿದ್ದರು. ಅವರಿಗೆ ವರ್ಣ ಚಿತ್ರಗಳ ವ್ಯಾಮೋಹ. ಮದರಾಸಿನಲ್ಲಿ ರಂಗಾ ಅವರದ್ದೇ ಆದ ವಿಕ್ರಂ ಸ್ಟುಡಿಯೋ ಇತ್ತು. ರಂಗಾ ಅವರು ನಿಪುಣ ಛಾಯಾಗ್ರಾಹಕರೂ ಆಗಿದ್ದುದರಿಂದ ಅವರಿಗೆ ಸಹಜವಾಗಿಯೇ ವರ್ಣರಂಜಿತ ಚಿತ್ರವನ್ನು ತೆರೆಯ ಮೇಲೆ ತರಬೇಕೆಂಬ ಆಸೆ ಇತ್ತು. ಈ ಕಾರಣಕ್ಕಾಗಿಯೇ ಅವರು ಅಂದಿನ ಖ್ಯಾತ ಚಿತ್ರ ಸಂಭಾಷಣೆ, ಕಥೆಗಾರ ಚಿ.ಸದಾಶಿವಯ್ಯ ಅವರನ್ನು ಸಂಪರ್ಕಿಸಿದರು. ಈ ಚಿ. ಸದಾಶಿವಯ್ಯ ಬೇರಾರೂ ಅಲ್ಲ ಖ್ಯಾತ ಸಂಭಾಷಣೆಗಾರ ಚಿ. ಉದಯಶಂಕರ್ ಅವರ ತಂದೆ. ಅಪ್ಪನ ಪ್ರತಿಭೆಯೇ ಮಗನಿಗೆ ಬಳುವಳಿಯಾಗಿ ಬಂದಿರಬೇಕು. ಕಪ್ಪು ಬಿಳುಪು ಚಿತ್ರದ ಸಮಯದಲ್ಲಿ ರಂಗಾ ಅವರು ವರ್ಣರಂಜಿತ ಚಿತ್ರವನ್ನು ತೆರೆಗೆ ತರುವ ಸಾಹಸವನ್ನು ಅವರ ಬಾಯಿಯಲ್ಲೇ ಕೇಳಿ, ಸಂತೋಷದಿಂದ ಚಿತ್ರಕ್ಕೆ ಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆಯಲು ಒಪ್ಪಿಕೊಂಡರು. ಅಮರಶಿಲ್ಪಿ ಜಕಣಾಚಾರಿಯನ್ನು ಪೂರ್ಣವಾಗಿ ವರ್ಣದಲ್ಲೇ ತಯಾರಿಸಬೇಕೆಂದು ರಂಗಾ ಅವರು ಮನಸ್ಸು ಮಾಡಿದ್ದರು. 

ಜಕಣಾಚಾರಿಯ ಪಾತ್ರಕ್ಕೆ ರಂಗಾ ಅವರು ಆಯ್ಕೆ ಮಾಡಿಕೊಂಡಿದ್ದು ಅಂದಿನ ಖ್ಯಾತ ನಾಯಕ ನಟ ಕಲ್ಯಾಣ್ ಕುಮಾರ್ ಅವರನ್ನು. ಕಲ್ಯಾಣ್ ಕುಮಾರ್ ಅವರಿಗೆ ತಮಿಳು ಚಿತ್ರರಂಗದಲ್ಲೂ ಒಳ್ಳೆಯ ಹೆಸರಿತ್ತು. ಆ ಕಾರಣದಿಂದ ಮೊದಲು ಕನ್ನಡದಲ್ಲಿ ಚಿತ್ರವನ್ನು ತೆರೆಗೆ ತಂದು ನಂತರ ಅದನ್ನು ತಮಿಳು ಭಾಷೆಗೆ ಡಬ್ ಮಾಡುವ ದೂರಾಲೋಚನೆಯನ್ನು ರಂಗಾ ಅವರು ಹೊಂದಿದ್ದರು. ಈ ಮೂಲಕ ಕಲ್ಯಾಣ್ ಕುಮಾರ್ ಅವರ ಜನಪ್ರಿಯತೆಯ ಲಾಭ ಪಡೆದುಕೊಳ್ಳುವ ಉದ್ದೇಶ ರಂಗಾ ಅವರದ್ದಾಗಿತ್ತು. ಈ ಕಾರಣದಿಂದಲೇ ರಂಗಾ ಅವರು ಜಕಣಾಚಾರಿ ಚಿತ್ರದ ಪಾತ್ರ ವರ್ಗಕ್ಕೆ ತಮಿಳು ಚಿತ್ರರಂಗದಲ್ಲಿ ಒಂದಿಷ್ಟು ಹೆಸರು ಮಾಡಿದ್ದ ಕೆಲವರನ್ನು ಆಯ್ಕೆ ಮಾಡಿಕೊಂಡರು. ಕಲ್ಯಾಣ್ ಕುಮಾರ್ ಅವರಿಗೆ ನಾಯಕಿಯಾಗಿ ಬಿ ಸರೋಜಾ ದೇವಿ ಇನ್ನುಳಿದ ಪಾತ್ರಗಳಿಗೆ ಉದಯ್ ಕುಮಾರ್, ಚಿತ್ತೂರು ವಿ ರಾಜಯ್ಯ, ನರಸಿಂಹ ರಾಜು, ಜಯಶ್ರೀ, ರಮಾದೇವಿ ಮೊದಲಾದವರು ಆಯ್ಕೆಯಾದರು. ಈ ಚಿತ್ರದ ಕಥಾ ಹಂದರವನ್ನು ಗಮನಿಸಿದ ಕಲ್ಯಾಣ್ ಕುಮಾರ್ ಮತ್ತು ಸರೋಜಾದೇವಿಯವರು ಬಹಳ ತನ್ಮಯತೆಯಿಂದ ಈ ಚಿತ್ರದಲ್ಲಿ ನಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾಗಿದ್ದ ಎಸ್ ನಾಗೇಶ್ವರರಾವ್ ಅವರನ್ನು ರಂಗಾ ಅವರು ಆಯ್ಕೆ ಮಾಡಿಕೊಂಡದ್ದು ಅವರಿಗೆ ವರವೇ ಆಗಿತ್ತು. ಏಕೆಂದರೆ ನಾಗೇಶ್ವರ ರಾವ್ ಅವರು ಬರೆದ ೧೨ ಹಾಡುಗಳು ಒಂದಕ್ಕಿಂತ ಒಂದು ಇಂಪಾಗಿತ್ತು. ‘ಚೆಲುವಾಂತ ಚೆನ್ನಿಗನೇ..' ಹಾಡು ಈಗಲೂ ಸರ್ವಕಾಲಿಕ ಹಿಟ್ ಹಾಡುಗಳಲ್ಲಿ ಒಂದಾಗಿದೆ. 

ಬೇಲೂರಿನ ಶಿಲಾಬಾಲಿಕೆಯರನ್ನು ನೈಜವಾಗಿ ಚಿತ್ರಿಸಬೇಕೆಂಬ ಮಹದಾಸೆ ಹೊಂದಿದ್ದ ರಂಗಾ ಅವರು ಅದಕ್ಕಾಗಿ ಅನುಮತಿಯನ್ನು ಕೇಳಿಕೊಂಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಅನುಮತಿಯನ್ನು ನಿರಾಕರಿಸಲಾಯಿತು. ಒಮ್ಮೆ ಈ ನಿರಾಕರಣೆಯಿಂದ ರಂಗಾ ಅವರಿಗೆ ಆಘಾತವಾದರೂ ಅವರು ಎದೆಗುಂದದೇ ಆ ಹೊರಾಂಗಣ ದೃಶ್ಯಗಳನ್ನು ತಮ್ಮ ವಿಕ್ರಂ ಸ್ಟುಡಿಯೋದ ಒಳಗಡೆ ಸೆಟ್ ಹಾಕಿ ಚಿತ್ರೀಕರಿಸಲು ನಿರ್ಧಾರ ಮಾಡಿದರು. ಅದಕ್ಕಾಗಿ ಅದ್ದೂರಿಯ ಬೇಲೂರಿನ ಶಿಲ್ಪಕಲೆಗಳ ಸೆಟ್ ಒಂದನ್ನು ತಯಾರು ಮಾಡಲಾಯಿತು. ಚಿತ್ರವನ್ನು ನೋಡಿದರೆ ಅದು ಸಾಕ್ಷಾತ್ ಬೇಲೂರಿನಲ್ಲೇ ಚಿತ್ರೀಕರಿಸಿದಂತೆ ಭಾಸವಾಗುತ್ತದೆ. ಇದರ ಹಿಂದೆ ಬಾಲಿವುಡ್ ಛಾಯಾಗ್ರಾಹಕರಾದ ನಿಮಾಯ್ ಘೋಷ್ ಅವರ ಕೈಚಳಕವಿದೆ. ತಾವೇ ಸ್ವತಃ ಛಾಯಾಗ್ರಾಹಕರಾಗಿದ್ದರೂ ರಂಗಾರವರು ನಿಮಾಯ್ ಘೋಷ್ ಅವರ ಸಹಕಾರವನ್ನು ಕೇಳಿಕೊಂಡರು. ಏಕೆಂದರೆ ಬಣ್ಣದಲ್ಲಿ ಚಿತ್ರವನ್ನು ತೋರಿಸಬೇಕಾದುದರಿಂದ ಚಿತ್ರೀಕರಣ ಸಮಯದಲ್ಲಿ ಎಲ್ಲವೂ ಅಂದರೆ ಉಡುಗೆ ತೊಡುಗೆ, ಅಲಂಕಾರಗಳು, ಮೇಕಪ್ ಮುಂತಾದುವುಗಳ ಬಗ್ಗೆ ಜಾಗೃತೆ ವಹಿಸಿಕೊಳ್ಳಬೇಕಾಗಿತ್ತು. ಗಾಢವಾದ ಕಣ್ಣಿಗೆ ರಾಚುವಂತಹ ಬಣ್ಣದಲ್ಲಿ ಚಿತ್ರವು ತೆರೆಗೆ ಬಂದರೆ ಅದನ್ನು ಪ್ರೇಕ್ಷಕ ಸ್ವೀಕರಿಸಲಾರ ಎನ್ನುವ ಮುಂದಾಲೋಚನೆ ರಂಗಾ ಅವರಿಗಿತ್ತು. ಅದೇ ಕಾರಣದಿಂದ ಈ ವಿಷಯದಲ್ಲಿ ನಿಪುಣರಾಗಿದ್ದ ನಿಮಾಯ್ ಘೋಷ್ ಅವರನ್ನು ಇದರ ಛಾಯಾಗ್ರಹಣಕ್ಕೆ ಬಳಸಿಕೊಂಡರು. ರಂಗಾ ಅವರನ್ನು ನಿರಾಶೆ ಮಾಡದ ನಿಮಾಯ್ ಘೋಷ್ ಸಹಜ ಬಣ್ಣಗಳು ಕಾಣುವಂತೆ ಫಿಲ್ಟರ್ ಗಳನ್ನು ಬಳಸಿಕೊಂಡರು. ಈ ಕಾರಣದಿಂದ ಜಕಣಾಚಾರಿ ಚಿತ್ರದಲ್ಲಿ ವರ್ಣಗಳು ಸಹಜವಾಗಿವೆ. ನೆರಳು-ಬೆಳಕಿನ ಸಂಯೋಜನೆಗಳು ಅದ್ಭುತವಾಗಿ ಮೂಡಿಬಂದಿವೆ. 

ಅಮರಶಿಲ್ಪಿ ಜಕಣಾಚಾರಿ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆದ ಬಳಿಕ ಅದನ್ನು ತಮಿಳು ಮತ್ತು ತೆಲುಗು ಭಾಷೆಗೂ ಡಬ್ ಮಾಡಲಾಯಿತು. ಅಲ್ಲೂ ಈ ಚಿತ್ರ ಉತ್ತಮ ಗಳಿಕೆಯನ್ನು ಕಂಡಿತು. ಕನಿಷ್ಟ ತಂತ್ರಜ್ಞಾನದ ವ್ಯವಸ್ಥೆ ಇದ್ದ ಸಮಯದಲ್ಲೂ ಎದೆಗುಂದದೇ ಕನ್ನಡದಲ್ಲಿ ಮೊದಲಬಾರಿಗೆ ವರ್ಣರಂಜಿತ ಚಿತ್ರವನ್ನು ಹೊರ ತರುವ ಅದ್ಭುತ ಸಾಧನೆ ಮಾಡಿದ ರಂಗಾ (ಚಿತ್ರ ೨) ಅವರನ್ನು ಅಭಿನಂದಿಸಲೇಬೇಕು. ಅಲ್ಲವೇ?

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ