‘ಆರ್ಟ್ ಮಾಸ್ಟರ್' ಬಿ.ಜಿ.ಮಹಮ್ಮದ್ ಜನ್ಮ ಶತಮಾನೋತ್ಸವ

‘ಆರ್ಟ್ ಮಾಸ್ಟರ್' ಬಿ.ಜಿ.ಮಹಮ್ಮದ್ ಜನ್ಮ ಶತಮಾನೋತ್ಸವ

ಕಳೆದ ಶುಕ್ರವಾರ ಅಕ್ಟೋಬರ್ ೨೮ರಂದು ಮಂಗಳೂರಿಗೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಬರುತ್ತಿದ್ದಾರೆ ಎಂದು ವಿಷಯ ತಿಳಿಯಿತು. ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಎಂದು ಪರಿಚಯದ ಪತ್ರಕರ್ತ ಮಿತ್ರರಲ್ಲಿ ವಿಚಾರಿಸಿದಾಗ ಯಾರೋ ಚಿತ್ರಕಲಾವಿದರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ ಉದ್ಘಾಟನೆಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂತು. ಯಾರೋ ಚಿತ್ರಕಾರರು ಎಂದರೆ ಯಾರು ಎಂದು ಹುಡುಕಲು ಹೋದಾಗ ದೊರೆತ ಮಾಹಿತಿ ಅವರು ಯಾರೋ ಅಲ್ಲವೇ ಅಲ್ಲ, ನಮ್ಮವರೇ ಆದ ಖ್ಯಾತ ‘ಆರ್ಟ್ ಮಾಸ್ಟರ್' ಬೋಳಾರ ಗುಲಾಂ ಮಹಮ್ಮದ್ (ಬಿ ಜಿ ಮಹಮ್ಮದ್). ಈಗಿನ ಕೆಲವು ಪತ್ರಕರ್ತರ ಸಾಮಾನ್ಯ ಜ್ಞಾನದ ಕೊರತೆಯನ್ನು ಕಂಡು ಬಲು ಬೇಸರವಾಯಿತು.

ಕಳೆದ ವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೂರು ದಿನಗಳ ಕಾಲ (ಅ.೨೮-೩೦) ಬಿ.ಜಿ.ಮಹಮ್ಮದ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳು ಜರುಗಿದವು. ಬಿ ಜಿ ಮಹಮ್ಮದ್ ಅವರು ಅಪರೂಪದ ಕಲಾವಿದರಾಗಿದ್ದರು. ಅವರು ಪೆನ್ಸಿಲ್, ಚಾರ್ಕೋಲ್, ಜಲವರ್ಣ, ತೈಲವರ್ಣ, ಅಕ್ರೆಲಿಕ್ ಮೊದಲಾದ ಎಲ್ಲಾ ಮಾಧ್ಯಮಗಳನ್ನು ಬಳಸಿ ಚಿತ್ರವನ್ನು ಮೂಡಿಸುತ್ತಿದ್ದರು.

ಬಿ ಜಿ ಮಹಮ್ಮದ್ ಅವರು ಹುಟ್ಟಿದ್ದು ಅಕ್ಟೋಬರ್ ೧೧, ೧೯೨೦ರಂದು ಮಂಗಳೂರಿನಲ್ಲಿ. ಇವರ ತಂದೆ ಡಾ.ಮಹಮ್ಮದ್ ಅಲಿ ಹಾಗೂ ತಾಯಿ ರಹೀಮಾ ಬಿ ಐ. ಇವರ ತಂದೆ ಸರಕಾರೀ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು ಹಾಗೂ ಉತ್ತಮ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಬಿ ಜಿ ಮಹಮ್ಮದ್ ಅವರು ತಮ್ಮ ತಂದೆಯ ಗುಣಗಳನ್ನು ಹಾಗೂ ಉತ್ತಮ ಮಾತುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು. ಇವರೂ ಬಹಳ ಸರಳ ಹಾಗೂ ಉದಾತ್ತ ಮನಸ್ಸಿನ ವ್ಯಕ್ತಿಯಾಗಿದ್ದರು. ಶೈಕ್ಷಣಿಕವಾಗಿ ತಮ್ಮ ತಂದೆಯಷ್ಟು ಮೇಲಕ್ಕೇರದಿದ್ದರೂ ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ತಮ್ಮ ತಂದೆಯವರನ್ನೂ ಮೀರಿಸಿದರು. ಇವರು ಎಸ್ ಎಸ್ ಎಲ್ ಸಿ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದರು. ನಂತರ ಇವರು ತಮ್ಮ ಆಸಕ್ತಿಯ ಕ್ಷೇತ್ರವಾದ ಕಲಾರಂಗದತ್ತ ಮನಸ್ಸನ್ನು ಹೊರಳಿಸಿದರು. ಉಡುಪಿಯ ಕಲಾವಿದ ಮಂಗೇಶ್ ಶಿರಾಲಿ ಇವರ ಶಿಷ್ಯರಾಗಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದರು. 

೧೯೫೩ರಲ್ಲಿ ಮಂಗಳೂರಿನಲ್ಲಿ ಕಲಾ ಶಾಲೆಯೊಂದನ್ನು ಆರಂಭಿಸಿದಾಗ ಇಲ್ಲಿಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ವೈದ್ಯರು, ಇಂಜಿನಿಯರ್ ಗಳು, ನ್ಯಾಯವಾದಿಗಳು, ಮನೆಯಲ್ಲೇ ಇರುವ ಗೃಹಿಣಿಯರು ಇವರ ಬಳಿ ಚಿತ್ರ ಕಲಿಯಲು ಬರಲಾರಂಭಿಸಿದರು. ಆಯಾ ವಯೋಮಾನದವರಿಗೆ ಸೂಕ್ತವಾದ ಚಿತ್ರ ತಯಾರಿಕೆಯ ತರಭೇತಿಯನ್ನು ಮಹಮ್ಮದ್ ಅವರು ನೀಡುತ್ತಿದ್ದರು. ಇವರ ಮಾರ್ಗದರ್ಶನದಲ್ಲಿ ಹಲವಾರು ಮಂದಿ ಉತ್ತಮ ಕಲಾವಿದರಾಗಿ ತಯಾರಾದರು. ಇವರನ್ನು ‘ಆರ್ಟ್ ಮಾಸ್ಟರ್' ಎಂದು ಎಲ್ಲರೂ ಕರೆಯಲಾರಂಭಿಸಿದರು.

ಬಿ ಜಿ ಮಹಮ್ಮದ್ ಅವರು ತಮ್ಮದೇ ಹೆಸರಿನ ಬಿ.ಜಿ.ಎಂ. ಕಲಾಶಾಲೆಯನ್ನು ಮಂಗಳೂರಿನ ಚಿಲಿಂಬಿ ಬಳಿ ತೆರೆದು ಆ ಮೂಲಕ ವಿವಿಧ ಮಾಧ್ಯಮಗಳಲ್ಲಿ ಕಲೆಯನ್ನು ಅಭ್ಯಾಸ ಮಾಡಿದರು. ಆಸಕ್ತ ಕಲಾವಿದರಿಗೆ ತಮ್ಮಿಂದ ಸಾಧ್ಯವಾದಷ್ಟು ಬೆಂಬಲ ನೀಡಿದರು. ಇವರು ತಮ್ಮ ಚಿತ್ರಗಳಲ್ಲಿ ಮೂಡಿಸುತ್ತಿದ್ದ ಪರಿಸರದ ನೋಟಗಳು, ಬಳಸುತ್ತಿದ್ದ ಬಣ್ಣಗಳು, ಆ ಚಿತ್ರಗಳನ್ನು ಮೂಡಿಸಲು ತೆಗೆದುಕೊಳ್ಳುತ್ತಿದ್ದ ಸಮಯ, ತಾಳ್ಮೆ ಇವುಗಳೆಲ್ಲಾ ಗಮನಾರ್ಹ. ಇಂದಿನ ಕಲಾವಿದ್ಯಾರ್ಥಿಗಳು ಇವರ ಜೀವನ ಹಾಗೂ ಚಿತ್ರಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಚಿತ್ರ ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಕಾರವನ್ನು ನೀಡಿ ಹುರಿದುಂಬಿಸುತ್ತಿದ್ದರು. 

ಬಿ ಜಿ ಮಹಮ್ಮದ್ ಅವರು ಕೇವಲ ಚಿತ್ರಕಲಾವಿದರು ಮಾತ್ರವಲ್ಲ ಉತ್ತಮ ಛಾಯಾಗ್ರಾಹಕರೂ ಆಗಿದ್ದರು. ಉತ್ತಮ ಛಾಯಾಚಿತ್ರಗಳನ್ನು ತಮ್ಮ ಕ್ಯಾಮಾರಾ ಕಣ್ಣಿನಲ್ಲಿ ಮೂಡಿಸುತ್ತಿದ್ದರು. ಇದರ ಜೊತೆಗೆ ಸುಮಧುರವಾಗಿ ಕೊಳಲನ್ನು ನುಡಿಸುತ್ತಿದ್ದರು. ಹೀಗೆ ಬಿ ಜಿ ಮಹಮ್ಮದ್ ಅವರನ್ನು ಸಕಲ ಕಲಾ ವಲ್ಲಭ ಎಂದು ಕರೆಯಬಹುದಾಗಿದೆ. ಮಹಮ್ಮದ್ ಅವರು ಚಿತ್ರ ಬಿಡಿಸುವ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಆಸಕ್ತರಿಗೆ ಮನಮುಟ್ಟುವ ರೀತಿಯಲ್ಲಿ ನೀಡುತ್ತಿದ್ದರು. ಹಲವಾರು ಚಿತ್ರ ಪ್ರದರ್ಶನಗಳನ್ನೂ ಏರ್ಪಡಿಸಿದ್ದಾರೆ. ಕರ್ನಾಟಕದ ವಿಧಾನ ಪರಿಷತ್ ಸದಸ್ಯೆಯಾಗಿರುವ ಭಾರತಿ ಶೆಟ್ಟಿ ಇವರು ಮಹಮ್ಮದ್ ಅವರ ಶಿಷ್ಯೆ. ತಮ್ಮ ಗುರುಗಳ ಚಿತ್ರಗಳಲ್ಲಿನ ವರ್ಣಗಳ ಮಹಿಮೆಯನ್ನು ಅವರು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಮಂಗಳೂರಿನ ಖ್ಯಾತ ಛಾಯಾಗ್ರಹಕ ಯಜ್ಞ ಇವರೂ ಮಹಮ್ಮದ್ ಅವರ ಚಿತ್ರಗಳನ್ನು ಅತೀ ಸಮೀಪದಿಂದ ಕಂಡು ಮೆಚ್ಚಿಕೊಂಡವರು. ಮಹಮ್ಮದ್ ಅವರ ಚಿತ್ರಗಳ ‘ಸ್ಪರ್ಶ' ಮೆಚ್ಚತಕ್ಕದ್ದು ಎನ್ನುತ್ತಾರೆ ಇವರು. 

ಮಹಮ್ಮದ್ ಅವರು ವರಿಸಿದ್ದು ಮೈಸೂರಿನ ಅಖ್ತರ್ ಬೇಗಂ ಅವರನ್ನು. ಇವರಿಗೆ ಮೂರು ಮಂದಿ ಗಂಡು ಮಕ್ಕಳು. ಶಬ್ಬೀರ್ ಅಲಿ, ಕಬೀರ್ ಅಲಿ ಮತ್ತು ಶಮೀರ್ ಅಲಿ. ಮೂರು ಮಂದಿ ಮಕ್ಕಳೂ ಚಿತ್ರ ಕಲಾವಿದರೇ. ಇವರಲ್ಲಿ ಶಬ್ಬೀರ್ ಅಲಿ ಚಿಲಿಂಬಿಯಲ್ಲಿ ಹಾಗೂ ಶಮೀರ್ ಅಲಿ ಕದ್ರಿಯಲ್ಲಿ ಚಿತ್ರಕಲಾ ಶಾಲೆಯನ್ನು ನಡೆಸುತ್ತಿದ್ದಾರೆ. ಕಬೀರ್ ಅಲಿ ಉತ್ತಮ ವಾಸ್ತುಶಿಲ್ಪಿಯಾಗಿದ್ದು ಮಂಗಳೂರಿನಲ್ಲಿ ಹಲವಾರು ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. 

ಬಿ ಜಿ ಮಹಮ್ಮದ್ ಅವರು ತಮ್ಮ ೯೦ ನೇ ವಯಸ್ಸಿನಲ್ಲಿ ಜನವರಿ ೨೬, ೨೦೧೦ರಲ್ಲಿ ನಿಧನ ಹೊಂದಿದರು. ಇವರು ತಮ್ಮ ಇಳಿವಯಸ್ಸಿನಲ್ಲೂ ಚಿತ್ರಕಲೆಯನ್ನು ಉಳಿಸಿ ಬೆಳೆಸುವ ಬಗ್ಗೆ ಕಾಳಜಿಯನ್ನು ಹೊಂದಿದ್ದರು. ಇವರ ಶಿಷ್ಯಂದಿರು ಸೇರಿ ಬಿ ಜಿ ಮಹಮ್ಮದ್ ಅವರ ಜನ್ಮ ಶತಮಾನೋತ್ಸವವನ್ನು ಆಚರಣೆ ಮಾಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ಯಾರನ್ನೂ ಮೆಚ್ಚಿಸಲು ಹೋಗದೆ ಆಸಕ್ತರಿಗೆ ಚಿತ್ರ ಕಲೆಯನ್ನು ಪರಿಚಯಿಸಿದ ಕಲಾವಿದ ಬಿ ಜಿ ಮಹಮ್ಮದ್. ಇವರನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕರ್ತವ್ಯ ನಮ್ಮದು.

ಚಿತ್ರ ಕೃಪೆ: ಅಂತರ್ಜಾಲ ತಾಣ