‘ಐ ಲವ್ ಯೂ ರಸ್ನಾ’ದ ಸಂಸ್ಥಾಪಕ - ಅರೀಜ್ ಫಿರೋಜ್ ಶಾ

‘ಐ ಲವ್ ಯೂ ರಸ್ನಾ’ದ ಸಂಸ್ಥಾಪಕ - ಅರೀಜ್ ಫಿರೋಜ್ ಶಾ

ನಿಮಗೆ ಖಂಡಿತವಾಗಿಯೂ ನೆನಪಿರುತ್ತೆ, ೮೦-೯೦ರ ದಶಕದಲ್ಲಿ ದೂರದರ್ಶನದಲ್ಲಿ ಹಾಗೂ ವಾರ್ತಾ ಪತ್ರಿಕೆಗಳಲ್ಲಿ ಲಘು ಪಾನೀಯವೊಂದರ ಜಾಹೀರಾತು ಬರುತ್ತಿತ್ತು. ಕಾರ್ಬೋನೇಟೆಡ್ ಸೋಡಾ ಹೊಂದಿದ್ದ ಕೋಕೋ ಕೋಲಾ, ಪೆಪ್ಸಿ, ಥಮ್ಸ್ ಅಪ್, ಲಿಮ್ಕಾ ಮೊದಲಾದ ಪಾನೀಯಗಳ ನಡುವೆ ಈ ಹೊಸದಾದ ಸೋಡಾ ರಹಿತ ನೀವೇ ಮನೆಯಲ್ಲಿ ತಯಾರಿಸಬಹುದಾದ ಪಾನೀಯ ವಿಶಿಷ್ಟವಾಗಿತ್ತು. ಅದರ ಹೆಸರು ‘ರಸ್ನಾ’. ಈ ರಸ್ನಾ ಎಂಬ ಪಾನೀಯವನ್ನು ಮಾರುಕಟ್ಟೆಗೆ ತಂದವರು ಅರೀಜ್ ಫಿರೋಜ್ ಶಾ ಖಂಬಟ್ಟಾ. ಇವರು ಪ್ರಾರಂಭಿಸಿದ ಈ ಲಘು ಪಾನೀಯ ಭಾರತದಾದ್ಯಂತ ಒಂದು ಬ್ರ್ಯಾಂಡ್ ತರಹ ಬೆಳೆದು ನಿಂತದ್ದು ಈಗ ಇತಿಹಾಸವಾಗಿದೆ. 

೮೦-೯೦ರ ದಶಕದಲ್ಲಿ ನಿಮ್ಮ ಮನೆಗೆ ಅತಿಥಿಗಳು ಬಂದಾಗ ಚಹಾ-ಕಾಫಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದ್ದದ್ದು ರಸ್ನಾ ಎಂಬ ಪಾನೀಯ. ಆ ಸಮಯದಲ್ಲಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದಾದ ಪಾನೀಯವಾಗಿತ್ತು. ಕೇವಲ ಐದು ರೂಪಾಯಿಗೆ ೩೨ ಗ್ಲಾಸುಗಳಷ್ಟು ಪಾನೀಯ ತಯಾರಾಗುತ್ತಿತ್ತು. ಅಂದರೆ ಒಂದು ಗ್ಲಾಸ್ ಗೆ ಕೇವಲ ೧೫ ಪೈಸೆ ವೆಚ್ಚವಾಗುತ್ತಿತ್ತು. ಮಕ್ಕಳಿಗೂ ಬಹಳ ಇಷ್ಟವಾದ ಪಾನೀಯವಾಗಿತ್ತು. ಮೊದಲಿಗೆ ಆರೆಂಜ್ ಸ್ವಾದದಲ್ಲಿ ಮಾತ್ರ ಸಿಗುತ್ತಿದ್ದ ಈ ಪಾನೀಯವು ನಂತರ ಲಿಂಬೆ, ಮಾವು, ಕಾಲಾಕಟ್ಟಾ ಮೊದಲಾದ ಸ್ವಾದಗಳಲ್ಲಿ ಸಿಗಲು ಪ್ರಾರಂಭವಾಯಿತು.

ಈ ಪಾನೀಯದ ತಯಾರಿಕೆಯೂ ಬಹಳ ಸುಲಭ. ಆಗ ರಸ್ನಾದ ಪೊಟ್ಟಣವನ್ನು ತೆರೆದಾಗ ನಿಮಗೆ ಒಂದು ಪುಟ್ಟ ಗಾಜಿನ ಬಾಟಲಿಯಲ್ಲಿ ದ್ರವ ರೂಪದ ಸಾಮಗ್ರಿಯೂ ಮತ್ತೊಂದು ಪ್ಯಾಕೆಟ್ ನಲ್ಲಿ ಹುಡಿ ರೂಪದ ಸಾಮಗ್ರಿಯೂ ಇರುತ್ತಿತ್ತು. ಇವೆರಡನ್ನೂ ನಿಗದಿತ ಪ್ರಮಾಣದ ಸಕ್ಕರೆ ಮಿಶ್ರಿತ ನೀರಿನಲ್ಲಿ ಬೆರೆಸಬೇಕಿತ್ತು. ಇವೆರಡನ್ಣೂ ಬೆರೆಸಿದಾಗ ನಿಮಗೊಂದು ಹಣ್ಣಿನ ಸ್ವಾದವಿರುವ ಸಾಂದ್ರೀಕೃತ (Concentrate) ದ್ರವ ಸಿಗುತ್ತಿತ್ತು. ಇದಕ್ಕೆ ನಿಗದಿತ ಪ್ರಮಾಣದಲ್ಲಿ ನೀರನ್ನು ಅಥವಾ ಸೋಡಾವನ್ನು ಮಿಶ್ರ ಮಾಡಿದಾಗ ನಿಮಗೆ ಸ್ವಾದಿಷ್ಟ ಪಾನೀಯವು ಸಿಗುತ್ತಿತ್ತು. ಎಷ್ಟೊಂದು ಅದ್ಭುತ ಉಪಾಯ ಅಲ್ಲವೇ? ಆರೆಂಜ್ ದ್ರಾವಣವನ್ನು ಬಳಸಿ ತಯಾರಿಸಿದ ಪಾನೀಯವು ನಿಜಕ್ಕೂ ಆರೆಂಜ್ ರಸವನ್ನು ಕುಡಿದ ಅನುಭವ ನೀಡುತ್ತಿತ್ತು. ಐಸ್ ಬೆರೆಸಿ ಅಥವಾ ಶೀತಲೀಕರಿಸಿ ಕುಡಿದಾಗ ಇನ್ನಷ್ಟು ಸ್ವಾದಿಷ್ಟವೆನಿಸುತ್ತಿತ್ತು. ಈ ಪಾನೀಯವು ಎಷ್ಟೊಂದು ಖ್ಯಾತಿಯನ್ನು ಪಡೆಯಿತು ಎಂದರೆ ನಂತರದ ದಿನಗಳಲ್ಲಿ ಅಂಗಡಿಗಳಲ್ಲಿ ಸಿಗುತ್ತಿದ್ದ ಯಾವುದೇ ಆರೆಂಜ್ ಬಣ್ಣದ ಪಾನೀಯವನ್ನು ‘ರಸ್ನಾ’ ಎಂದೇ ಕರೆಯಲಾಗುತ್ತಿತ್ತು. ಒಂದು ರೀತಿಯಲ್ಲಿ ನಾವು ಕಪಾಟನ್ನು ‘ಗೋದ್ರೆಜ್', ಪೇಸ್ಟ್ ಅನ್ನು ‘ಕಾಲ್ಗೇಟ್' ನೆರಳು ಪ್ರತಿಯನ್ನು ‘ಝೆರಾಕ್ಸ್' ಎನ್ನುತ್ತೇವಲ್ಲ ಹಾಗೆ. ರಸ್ನಾ ಒಂದು ಬ್ರ್ಯಾಂಡ್ ರೀತಿಯಲ್ಲಿ ಬೆಳೆದು ನಿಂತ ಪರಿ ಅಮೋಘ. ಇದರ ಹಿಂದಿನ ಶ್ರಮ ಅರೀಜ್ ಫಿರೋಜ್ ಶಾ ಅವರದ್ದು ಎಂಬುದನ್ನು ನಾವು ಮರೆಯುವಂತಿಲ್ಲ. 

ಅರೀಜ್ ಅವರ ತಂದೆ ಫಿರೋಜಾ ಖಂಬಟ್ಟಾ ಮೂಲತಃ ಬಟ್ಟೆಯ ವ್ಯಾಪಾರಿ. ಅವರು ಸಣ್ಣದಾಗಿ ಪ್ರಾರಂಭಿಸಿದ ಉದ್ದಿಮೆಯನ್ನು ಅರೀಜ್ ಅವರು ಉನ್ನತೀಕರಿಸಿದರು. ಮಾರುಕಟ್ಟೆಯಲ್ಲಿ ಸೋಡಾ ಮಿಶ್ರಿತ ಪಾನೀಯಗಳದ್ದೇ ದರ್ಬಾರು ಇದ್ದ ಸಮಯದಲ್ಲಿ ಅರೀಜ್ ಅವರು ‘ರಸ್ನಾ’ ಎಂಬ ಪಾನೀಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದನ್ನು ಮಕ್ಕಳಲ್ಲಿ ಜನಪ್ರಿಯವನ್ನಾಗಿಸಲು ‘ ಐ ಲವ್ ಯೂ ರಸ್ನಾ’ ಎಂಬ ಫೋಷ ವಾಕ್ಯವನ್ನು ನೀಡಿದರು. ಈ ಪಾನೀಯದ ಜಾಹೀರಾತಿನಲ್ಲಿ ನಟಿಸಿದ ಪುಟ್ಟ ಹುಡುಗಿಯ ನೆನಪು ನಿಮಗೆ ಖಂಡಿತಾ ಇರುತ್ತದೆ. ಅವಳೇ ಅಂಕಿತಾ ಝವೇರಿ. ಇವಳ ಮುದ್ದುಮುಖ ಹಾಗೂ ಆಕೆ ಜಾಹೀರಾತಿನ ಕೊನೆಯಲ್ಲಿ ಹೇಳುತ್ತಿದ್ದ ‘ಐ ಲವ್ ಯೂ ರಸ್ನಾ’ ಮಕ್ಕಳೆಲ್ಲರ ಮನಗೆದ್ದಿತು. ರಸ್ನಾವು ಭಾರತ ಮಾತ್ರವಲ್ಲ ವಿದೇಶಗಳ ಮಾರುಕಟ್ಟೆಗೂ ಲಗ್ಗೆ ಇಟ್ಟಿತು. 

ರಸ್ನಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅದರ ವಿತರಣೆಯ ಹೊಣೆಹೊತ್ತವರು ‘ವೋಲ್ಟಾಸ್’ ಎಂಬ ಕಂಪೆನಿ. ಆದರೆ ಎರಡು ವರ್ಷವಾದರೂ ಮಾರುಕಟ್ಟೆಯಲ್ಲಿ ಸುಧಾರಣೆ ಕಾಣದಿದ್ದಾಗ ಅರೀಜ್ ಅವರು ಇದರ ವಿತರಣೆಯನ್ನು ‘ರಾಲೀಸ್ ಆಂಡ್ ಕಾರ್ನ್ ಪ್ರೊಡಕ್ಸ್ಟ್' ಕಂಪೆನಿಗೆ (ಈಗ ಇದು ‘ಬೆಸ್ಟ್ ಫುಡ್' ಎಂದು ಯೂನಿಲಿವರ್ ಕಂಪೆನಿಯಡಿಯಲ್ಲಿ ಕಾರ್ಯನಿರತವಾಗಿದೆ) ನೀಡಿದರು. ಆದರೂ ಏನೂ ಸುಧಾರಣೆ ಕಾಣದಿದ್ದಾಗ ಅವರು ತಮ್ಮದೇ ಆದ 'ಪಾಯೋಮಾ ಇಂಡಸ್ಟ್ರೀಸ್' ಎಂಬ ವಿತರಣಾ ಕಂಪೆನಿಯನ್ನು ಹುಟ್ಟು ಹಾಕಿದರು. ಅಂದಿನಿಂದ ಇಂದಿನವರೆಗೆ ರಸ್ನಾವನ್ನು ಇದೇ ಕಂಪೆನಿ ಮಾರುಕಟ್ಟೆಗೆ ವಿತರಣೆ ಮಾಡುತ್ತಿದೆ. ಖ್ಯಾತ ನಾಮರಾದ ಕರಿಷ್ಮಾ ಕಪೂರ್, ಹೃತಿಕ್ ರೋಷನ್, ಅನುಪಮ್ ಖೇರ್, ಪರೇಶ್ ರಾವಲ್, ಕಪಿಲ್ ದೇವ್, ವೀರೇಂದ್ರ ಸೆಹವಾಗ್ ಇವರೆಲ್ಲಾ ರಸ್ನಾದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಸ್ನಾದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. 

ಮೊದಲು ಎರಡು ವಸ್ತುಗಳನ್ನು ಮಿಶ್ರ ಮಾಡಿ ಸಾಂದ್ರೀಕೃತ ದ್ರವವನ್ನು ತಯಾರಿಸಬೇಕಾಗಿತ್ತು. ಆದರೆ ನಂತರದ ದಿನಗಳಲ್ಲಿ ರಸ್ನಾದ ಹಣ್ಣಿನ ಹುಡಿ ಮಾರುಕಟ್ಟೆಗೆ ಬಿಡುಗಡೆಯಾಯಿತು. ಇದರಲ್ಲಿ ನೈಜ ಹಣ್ಣಿನ ರಸ ಇದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಹುಡಿಯನ್ನು ನೇರವಾಗಿ ನೀರಿಗೆ ಸೇರಿಸಿ ಕುಡಿಯ ಬಹುದು. ಇದರ ಜೊತೆಗೆ ರಸ್ನಾದ ಸ್ಕ್ವಾಷ್ ಸಹಾ ಹೊರತಂದಿದ್ದಾರೆ. ಈಗ ರಸ್ನಾ ಸುಮಾರು ೧೧ ವಿವಿಧ ಸ್ವಾದಗಳಲ್ಲಿ ಸಿಗುತ್ತದೆ. ರಸ್ನಾವು ಪಾನೀಯದ ಜೊತೆಗೆ ಉಪ್ಪಿನಕಾಯಿ, ಜಾಮ್, ಚಟ್ನಿಗಳನ್ನೂ ತಯಾರಿಸುತ್ತಿದ್ದರೂ ಭಾರತದಲ್ಲಿ ಇವುಗಳು ಅಷ್ಟಾಗಿ ಪ್ರಸಿದ್ಧಿಯನ್ನು ಪಡೆದಿಲ್ಲ. ಈ ಉತ್ಪನ್ನಗಳಲ್ಲಿ ಬಹುಪಾಲು ವಿದೇಶಕ್ಕೆ ರಫ್ತಾಗುತ್ತದೆ. ರಸ್ನಾವನ್ನು ಗುಜರಾತ್ ಹಾಗೂ ರಾಜಸ್ಥಾನದಲ್ಲಿ ತಯಾರಿಸಲಾಗುತ್ತಿದೆ. 

ಮಾರುಕಟ್ಟೆಯಲ್ಲಿ ಈಗ ನೂರಾರು ಬಗೆಯ ಲಘು ಪಾನೀಯ (ಸಾಫ್ಟ್ ಡ್ರಿಂಕ್ಸ್) ಗಳು ಲಭ್ಯವಿದ್ದರೂ ‘ರಸ್ನಾ’ ಇನ್ನೂ ಉತ್ತಮ ಮಾರುಕಟ್ಟೆ ಇದೆ. ರಸ್ನಾಗೆ ಹಲವಾರು ಪ್ರಶಸ್ತಿಗಳೂ ಲಭಿಸಿದೆ. ಈ ರಸ್ನಾದ ಸಂಸ್ಥಾಪಕ ಅಧ್ಯಕ್ಷರಾದ ಅರೀಜ್ ಫಿರೋಜ್ ಶಾ ಖಂಬಟ್ಟಾ ಇವರು ನವೆಂಬರ್ ೧೯, ೨೦೨೨ರಂದು ಅಹಮದಾಬಾದ್ ನಲ್ಲಿ ನಿಧನಹೊಂದಿದ್ದಾರೆ. ಇವರ ದೂರದರ್ಶಿ ವ್ಯಕ್ತಿತ್ವವು ಪಾಯೋಮಾ ಇಂಡಸ್ಟ್ರೀಸ್ ಸಂಸ್ಥೆಯನ್ನು ವಿಶ್ವ ಪ್ರಸಿದ್ಧಿಯನ್ನಾಗಿಸಿದೆ ಎಂದರೆ ತಪ್ಪಲ್ಲ. 

ಚಿತ್ರ : ಅಂತರ್ಜಾಲ ತಾಣ ಕೃಪೆ