‘ಕಥಾ ಸಂಕಲನ ಪುಟ್ಟದಾದರೂ ನೀಡಿರುವ ಸಂದೇಶ ಮಾತ್ರ ದೊಡ್ಡದು'’

‘ಕಥಾ ಸಂಕಲನ ಪುಟ್ಟದಾದರೂ ನೀಡಿರುವ ಸಂದೇಶ ಮಾತ್ರ ದೊಡ್ಡದು'’

ಬೇವು ಬೆಲ್ಲ’ ಬರೀ ಕಥೆಗಷ್ಟೇ ಸೀಮಿತವಾಗಿರದೆ, ಸಾಮಾನ್ಯ ಜನರ ಜೀವನದ ಹತ್ತಾರು ಸಮಸ್ಯೆಗಳನ್ನು, ಆಚರಣೆಗಳನ್ನು ಅನಾವರಣಗೊಳಿಸಿದೆ ಎನ್ನುತ್ತಾರೆ ಗೀತಾ ದೇವಿ . ಅವರು ಶೋಭಾ ಹರಿಪ್ರಸಾದ್ ಅವರ ‘ಬೇವು ಬೆಲ್ಲ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಹಾಡು ಕಿವಿಗೆ ಇಂಪಾದಂತೆ ಕಥೆ ಮನಸ್ಸಿಗೆ ಹೃದಯಕ್ಕೆ ಸಂತಸ ನೀಡುತ್ತದೆ. ಆ ಬಾಲವೃದ್ಧರಾದಿಯಾಗಿ ಎಲ್ಲರಿಗೂ ಕಥೆ ಅತ್ಯಂತ ಪ್ರಿಯವಾದ ಪ್ರಕಾರ, ಬೇವು-ಬೆಲ್ಲ' ಕಥಾ ಸಂಕಲನದ ಕಥೆಗಳು ಸರ್ವರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಆತ್ಮೀಯ ಗೆಳತಿ ಶೋಭಾ ಹರಿಪ್ರಸಾದ್, ಕರಾವಳಿಯ ಭರವಸೆಯ ಲೇಖಕಿ. ಈಗಾಗಲೇ ತಮ್ಮ ಸಹಜ ಸುಂದರ ಬರವಣಿಗೆಯಿಂದ ಎಲ್ಲರಿಗೂ ಚಿರಪರಿಚಿತರು. ಕಥೆ, ಕವನ, ಗಝಲ್, ಶಿಶುಗೀತೆ, ಮುಕ್ತಕಗಳು, ಷಟ್ಪದಿಗಳು, ಅಬಾಬಿ, ರುಬಾಯಿ, ಹನಿಗವನ, ಲೇಖನ - ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಇವರ 'ಬೇವು ಬೆಲ್ಲ' ಕಥಾಗುಚ್ಛಕ್ಕೆ ಮುನ್ನುಡಿ ಬರೆಯುವ ಅವಕಾಶ ಒದಗಿ ಬಂದಿರುವುದು ಸಂತಸ ತಂದಿದೆ.

ಇವರ ಕಥೆಯ ಕೇಂದ್ರ ಸಾಲಿಕೇರಿ. ತನ್ನೂರಿನ ಸುತ್ತಮುತ್ತ ನಡೆದ ಘಟನೆಗಳನ್ನು ಅತ್ಯಂತ ಸರಳವಾಗಿ ವ್ಯಕ್ತಪಡಿಸಿರುವುದು ಮೆಚ್ಚುಗೆಯಾಗಿದೆ. ಜನಸಾಮಾನ್ಯರ ಜೀವನದ ಏರಿಳಿತಗಳನ್ನು, ಅವರ ಆಚರಣೆಗಳನ್ನು ಯಥಾವತ್ತಾಗಿ ಬಿಂಬಿಸಿದ್ದಾರೆ. ಕುತೂಹಲದಿಂದ ಓದಿಸಿಕೊಳ್ಳುವ, ಕೆಲವೇ ಪುಟಗಳಲ್ಲಿ ಮುಗಿಯುವ ಐದು ನೀಳ ಕಥೆಗಳ ಸಂಕಲನವೇ ಈ 'ಬೇವು-ಬೆಲ್ಲ'. ಇಲ್ಲಿ ಸಿಹಿ-ಕಹಿ ಎರಡೂ ಇದೆ. ಒಂದು ಕಥೆ ದುರಂತದಲ್ಲಿ ಮುಗಿದರೆ ಉಳಿದ ನಾಲ್ಕು ಕಥೆಗಳು ಸುಖಾಂತ್ಯಗೊಂಡಿವೆ.

ಮೊದಲ ಕಥೆ 'ನಾನು ಗುಲಾಬಿ', ಈ ಕಥೆಯಲ್ಲಿ ಬಾಲ್ಯ ವಿವಾಹವಾದ ಹುಡುಗಿಯೊಬ್ಬಳು ಅನುಭವಿಸಿದ ಬವಣೆ ಸೊಗಸಾಗಿ ಬಂದಿದೆ. ಗಂಡನ ಮನೆ ಪರಿಸರ, ಅರ್ಥವಾದರೂ ಆಡಲು ಬರದ ಕುಂದಗನ್ನಡದ ಮಾತು, ಮನೆಯ ಜವಾಬ್ದಾರಿ ಎಲ್ಲವನ್ನೂ ಆಕೆ ನಿಭಾಯಿಸಿಕೊಂಡು ಬಂದ ಬಗೆಯನ್ನು ಲೇಖಕಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.

ಇನ್ನು 'ನನ್ನ ಸಂಸಾರ' ಕಥೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದಳೆಂದು ಗಂಡನ ತಾಯಿಯಿಂದ ಮತ್ತು ಗಂಡನಿಂದ ತಿರಸ್ಕೃತಳಾದ ಗುಬ್ಬಿ ಮಾಮಿ, ಮಕ್ಕಳಿಲ್ಲದೆ ಕೊರಗುವ ಜಮುನಾ, ಬೇರೆ ಜಾತಿಯ ಹುಡುಗನನ್ನು ಮದುವೆಯಾದ ಭಾಮಿ, ಸೇನೆಗೆ ಸೇರಿದ ಲಕ್ಷ್ಮಿ, ರೈತನಾದ ರಘು ಈ ಪಾತ್ರಗಳು ನಮ್ಮ ಸುತ್ತಮುತ್ತಲಿನದೇ ಆಗಿದ್ದು, ನಮ್ಮದೇ ಕತೆ ಎನ್ನುವಷ್ಟು ಜೀವನಕ್ಕೆ ಹತ್ತಿರವಾಗಿದೆ. ಜೊತೆಗೆ ನೇಕಾರಿಕೆ ಉಳಿಸಿಕೊಳ್ಳಬೇಕು ಎಂಬ ಅಜ್ಜನ ಬಯಕೆ, ಕುಲಕಸುಬಿನ ಮೇಲಿನ ಗೌರವವನ್ನು ಹೆಚ್ಚಿಸಿದೆ.

ಸೋಮಣ್ಣ ಮಾಮನ ಕಥೆ ಮೇಲಿನ ಕಥೆಗಳಿಗಿಂತ ಸ್ವಲ್ಪ ಭಿನ್ನ, ಮಾವನ ಬುದ್ದಿ, ಇರುಳುಗಣ್ಣಿನ ಹಿಂದಿರುವ ತಮಾಷೆ, ಸರಿತಾಳ ಮದುವೆ, ಸೋಮಣ್ಣನ ಜಕಣಿಗಾಗಿ ಸೋಮಣ್ಣ ನಡೆಸುವ ತಯಾರಿ ಇವುಗಳ ಸುತ್ತ ಮುತ್ತ ಒಂದೇ ನಡೆದ ಕೌಟುಂಬಿಕ ಸಂಭಾಷಣೆ ಈ ಕಥೆಯಲ್ಲಿದೆ.

ನೀಳ ಕಥೆ ನಾಲ್ಕರಲ್ಲಿ ಕಥಾನಾಯಕ ರಾಮಣ್ಣನ ಬದುಕಿನ ದುರಂತವಿದೆ. ತನ್ನವರಿಗಾಗಿ ದುಡಿಯಲು ವಿದೇಶಕ್ಕೆ ಹೋಗಿ ತನ್ನವರಿಂದಲೇ ಅವಗಣನೆಗೆ ಗುರಿಯಾದ ತ್ಯಾಗಜೀವಿ ರಾಮಣ್ಣ. ಮನೆಯವರಿಗೆ ಆತ ಬರೀ ಎಟಿಎಂ ಕಾರ್ಡ್ ಅಷ್ಟೇ, ಹಣದ ಮುಂದೆ ಸಂಬಂಧಗಳೆಲ್ಲವೂ ಗೌಣ ಎನ್ನುವ ಸತ್ಯವನ್ನು ಈ ಸತ್ಯಕಥೆ ತಿಳಿಸುತ್ತದೆ.

'ಹಸಿರು ಸೀರೆ' ಈ ಕಥೆ ಬಡತನದಲ್ಲಿದ್ದ ರಾಜಣ್ಣನ ಮದುವೆಗೆ ಸಂಬಂಧಿಸಿದೆ. ಬ್ರಹ್ಮಾವರದ ಸಂತೆಯಲ್ಲಿ ಅವಲಕ್ಕಿ ಮಾರುವ ರಾಜಣ್ಣನಿಗೆ ಹಸಿರು ಸೀರೆ ಹುಡುಗಿಯೊಂದಿಗೆ ವಿವಾಹವಾಗುವ ಮಾತುಕತೆ ಇಲ್ಲಿನ ಕಥಾವಸ್ತು. ಈ ಕಥೆಗಳಲ್ಲಿ ಯಾವ ಹಮು-ಬಿಮ್ಮುಗಳಿಲ್ಲದೇ, ಲೇಖಕಿ ಸಾಮಾನ್ಯ ಜನರ ಬದುಕಿನ ಒಳನೋಟವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಬೇವು ಬೆಲ್ಲ ಕಥಾ ಸಂಕಲನದ ಕಥೆಗಳು ಎಲ್ಲೋ ಘಟಿಸಿದ್ದಲ್ಲ. ನಮ್ಮ ನಡುವೆ ನಡೆಯುವ ಘಟನೆಗಳೆ ಆಗಿವೆ. ತನ್ನೂರು ಸಾಲಿಕೇರಿಯ ನೇಕಾರ ಕುಟುಂಬವನ್ನು ಕಥಾ ವಸ್ತುವನ್ನಾಗಿಸಿಕೊಂಡು ಬರೆದ ಕಥೆಗಳು ಸರಳವಾಗಿದ್ದು ಜೀವನ ಮೌಲ್ಯವನ್ನು ಅಭಿವ್ಯಕ್ತಪಡಿಸಿವೆ. ಆಧುನಿಕತೆಯ ಗಾಳಿಯಲ್ಲಿ ನೇಕಾರಿಕೆ ನೇಪಥ್ಯಕ್ಕೆ ಸರಿದ ನೋವು ಕಥೆಗಳಲ್ಲಿ ಕಾಣಬರುವ ಅಂಶವಾಗಿದೆ.

ಇದು ಬರೀ ಕಥೆಗಷ್ಟೆ ಸೀಮಿತವಾಗಿರದೆ ಸಾಮಾನ್ಯ ಜನರ ಜೀವನದ ಹತ್ತಾರು ಸಮಸ್ಯೆಗಳನ್ನು, ಆಚರಣೆಗಳನ್ನು ಅನಾವರಣಗೊಳಿಸಿದೆ. ಶೋಭಾರವರು ಕುಂದಗನ್ನಡವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಸರಳ ನಿರೂಪಣೆಯಿಂದ ಹಳ್ಳಿ ಬದುಕಿನ ಸೊಗಡನ್ನು ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕರಾವಳಿ ಭಾಗದ ಜನರ ಬದುಕಿನ ಸುತ್ತ ಹೆಣೆದಿರುವ ಕಥೆ ಓದುಗರನ್ನು ತನ್ನತ್ತ ಸೆಳೆದು ಕೊಳ್ಳುವುದರಲ್ಲಿ ಸಂಶಯವಿಲ್ಲ.

'ಬೇವು ಬೆಲ್ಲ' ಕಥಾ ಸಂಕಲನ ಪುಟ್ಟದಾದರೂ ನೀಡಿರುವ ಸಂದೇಶ ದೊಡ್ಡದು. ಹೀಗೆ ಕನ್ನಡ ಸಾಹಿತ್ಯ ರಚನೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು, ಭರವಸೆಯ ಬೆಳಕು ಮೂಡಿಸಿ, ದಿಟ್ಟ ಹೆಜ್ಜೆಯೊಂದಿಗೆ ಸಾಗುತ್ತಿರುವ ಶೋಭಾರವರ ಲೇಖನಿಯಿಂದ ಇನ್ನಷ್ಟು ಉತ್ತಮ ಕೃತಿಗಳು ರಚನೆಯಾಗಲಿ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಶೋಭಾರವರಿಗೆ ಇನ್ನಷ್ಟು ಯಶಸ್ಸು ಲಭಿಸಿ, ಅವರ ಕೃತಿಗಳು ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ.

- ಗೀತಾ ದೇವಿ, ಕನ್ನಡ ಅಧ್ಯಾಪಕಿ, ಕಿರಿಮಂಜೇಶ್ವರ

 ಸಂಗ್ರಹ- ಬಸಯ್ಯ ಗ. ಮಳಿಮಠ, ಧಾರವಾಡ

Comments

Submitted by addoor Fri, 11/11/2022 - 14:48

"ಬೇವು ಬೆಲ್ಲ" ಕಥಾಸಂಕಲನವನ್ನು ಸಂಪದದಲ್ಲಿ ಪ್ರರಿಚಯಿಸಿದ್ದು ಸಂತೋಷ. ಆದರೆ, ಇದನ್ನು "ಲೇಖನಗಳು" ವಿಭಾಗದಲ್ಲಿ ಪ್ರಕಟಿಸುವ ಬದಲಾಗಿ "ಪುಸ್ತಕ ವಿಮರ್ಶೆ" ವಿಭಾಗದಲ್ಲಿ ಪ್ರಕಟಿಸಬೇಕಾಗಿತ್ತು, ಅಲ್ಲವೇ?

ಸಂಪದದಲ್ಲಿ ಪ್ರಕಟಿಸುವ ಗಡಿಬಿಡಿಯಲ್ಲಿ ಇಂತಹ ಸಣ್ಣಪುಟ್ಟ ಸಂಗತಿಗಳಿಗೆ ಗಮನ ಹರಿಸಬೇಕಾಗಿ ಒತ್ತಾಯ.

Submitted by ಬರಹಗಾರರ ಬಳಗ Sat, 11/12/2022 - 12:55

ಮುಂದೆ ಬರಹಗಳನ್ನು ಪ್ರಕಟಿಸುವಾಗ ಗಮನಿಸುವೆ

ಪುಸ್ತಕ ಪರಿಚಯ ಮಾಡುವ ಬದಲು ಗಡಿಬಿಡಿಯಲ್ಲಿ ಲೇಖನದ ಅಡಿಯಲ್ಲಿ ಪ್ರಕಟಿಸಿದ್ದು ನನ್ನಿಂದ ಆದ ತಪ್ಪು. ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸುವೆ. ತಿಳಿಸಿದ್ದಕ್ಕೆ ಧನ್ಯವಾದಗಳು ಸರ್. 

-ಬಸಯ್ಯ